Tag: Palm oil

  • ತಾಳೆ ಎಣ್ಣೆ ರಫ್ತು ನಿಷೇಧ ವಿಸ್ತರಿಸಲು ಇಂಡೋನೇಷ್ಯಾ ಚಿಂತನೆ

    ತಾಳೆ ಎಣ್ಣೆ ರಫ್ತು ನಿಷೇಧ ವಿಸ್ತರಿಸಲು ಇಂಡೋನೇಷ್ಯಾ ಚಿಂತನೆ

    ಜಕಾರ್ತ: ಇಂಡೋನೇಷ್ಯಾ ಅಡುಗೆ ಎಣ್ಣೆಯ ಉತ್ಪಾದನೆಯಲ್ಲಿ ಬಳಸುವ ಉತ್ಪನ್ನಗಳ ಕೊರತೆ ಎದುರಿಸುತ್ತಿದ್ದು, ಇದೀಗ ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧವನ್ನು ವಿಸ್ತರಿಸಲು ಚಿಂತನೆ ನಡೆಸಿದೆ.

    ವಿಶ್ವದ ಅತಿದೊಡ್ಡ ತಾಳೆ ಎಣ್ಣೆ ರಫ್ತು ಮಾಡುವ ಇಂಡೋನೇಷ್ಯಾ ಸಂಸ್ಕರಿಸಿದ, ಬಿಳುಪುಗೊಳಿಸಿದ ಹಾಗೂ ಡಿಯೋಡರೈಸ್ಡ್(ಆರ್‌ಬಿಡಿ) ಪಾಮ್ ಓಲಿನ್‌ನ ಸಾಗಣೆಯನ್ನು ನಿಲ್ಲಿಸಲು ಯೋಜಿಸಿದೆ. ಆದರೂ ಗುರುವಾರದಿಂದ ಪಾಮ್ ಓಲಿನ್ ಅಥವಾ ಇತರ ಉತ್ಪನ್ನಗಳ ರಫ್ತಿಗೆ ಅವಕಾಶ ನೀಡುತ್ತದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಭಾರತದಲ್ಲಿ ಕೋವಿಡ್-‌19 ನಾಲ್ಕನೇ ಅಲೆ ಪ್ರಾಬಲ್ಯ ತುಂಬಾ ಕಡಿಮೆ: ವೈರಾಣು ತಜ್ಞ

    ವಿಶ್ಲೇಷಕರ ಅಂದಾಜಿನ ಪ್ರಕಾರ, ಇಂಡೋನೇಷ್ಯಾದ ತಾಳೆ ಎಣ್ಣೆ ಉತ್ಪನ್ನಗಳ ಒಟ್ಟು ರಫ್ತಿನಲ್ಲಿ ಆರ್‌ಬಿಡಿ ಪಾಮ್ ಓಲಿನ್ ಎಣ್ಣೆ ಸುಮಾರು ಶೇ.40 ರಷ್ಟು ಇದೆ. ಇದರ ರಫ್ತು ನಿಷೇಧದಿಂದ ಇಂಡೋನೇಷ್ಯಾದ ಗಳಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ: ಟ್ವಿಟ್ಟರ್ ಬಗೆಗಿನ ನಂಬಿಕೆ ಬದಲಾಗಿಲ್ಲ: ಮಸ್ಕ್‌ಗೆ ಕೇಂದ್ರ ಪ್ರತಿಕ್ರಿಯೆ

    ಇಂಡೋನೇಷ್ಯಾ ಸಾಮಾನ್ಯವಾಗಿ ತಿಂಗಳಿಗೆ ಸುಮಾರು 2.5 ಶತಕೋಟಿ ಡಾಲರ್(ಸುಮಾರು 19 ಸಾವಿರ ಕೋಟಿ ರೂ.)ನಿಂದ 3 ಶತಕೋಟಿ ಡಾಲರ್(22 ಸಾವಿರ ಕೋಟಿ ರೂ.) ತಾಳೆ ಎಣ್ಣೆ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ದೇಶದಲ್ಲಿ ಸಂಸ್ಕರಿಸಿದ ತಾಳೆ ಎಣ್ಣೆ ಕೊರತೆ ಹೆಚ್ಚಾದಲ್ಲಿ ರಫ್ತನ್ನು ನಿಷೇಧಿಸುವಂತೆ ತಯಾರಿಕಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

  • ಮಲೇಷ್ಯಾ ಪ್ರಧಾನಿ ರಾಜೀನಾಮೆ – ಭಾರತೀಯರ ಸಂಭ್ರಮಾಚರಣೆ

    ಮಲೇಷ್ಯಾ ಪ್ರಧಾನಿ ರಾಜೀನಾಮೆ – ಭಾರತೀಯರ ಸಂಭ್ರಮಾಚರಣೆ

    ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಮಲೇಷ್ಯಾ ಪ್ರಧಾನಿ 94 ವರ್ಷದ ಮಹತಿರ್ ಮೊಹಮ್ಮದ್ ಅವರು ಇಂದು ಮಧ್ಯಾಹ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತ್ತ ಮಹತೀರ್ ರಾಜೀನಾಮೆ ನೀಡುತ್ತಿದ್ದಂತೆ ಇತ್ತ ಭಾರತೀಯರು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

    ತಮ್ಮ ಪ್ರಧಾನಿ ಸ್ಥಾನಕ್ಕೆ ಮಾತ್ರವಲ್ಲದೆ ತಮ್ಮ ಪಕ್ಷಕ್ಕೂ ಕೂಡ ಮಹತಿರ್ ಅವರು ರಾಜೀನಾಮೆ ನೀಡಿದ್ದಾರೆ. ಮಧ್ಯಾಹ್ನ ಮಲೇಷ್ಯಾದ ರಾಜರಿಗೆ ಮಹತಿರ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜೀನಾಮೆ ನೀಡಿದರೂ ಪ್ರಧಾನಿ ಆಯ್ಕೆ ಆಗುವವರೆಗೆ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

    ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಹೊತ್ತುಕೊಂಡಿದ್ದ ನಜೀಬ್ ರಝಾಕ್ ಚುನಾವಣೆಯಲ್ಲಿ ಸೋತು 2018ರಲ್ಲಿ ಮಹತಿರ್ ಪ್ರಧಾನಿ ಪಟ್ಟ ಏರಿದ್ದರು. ಸರ್ಕಾರ ರಚಿಸಲು ಮಹತಿರ್ ಅವರಿಗೆ ‘ಪಕಟನ್ ಹರಪನ್’ ಪಕ್ಷದ ಮುಖ್ಯಸ್ಥ ಅನ್ವರ್ ಇಬ್ರಾಹಿಂ ಸಹಾಯ ಮಾಡಿದ್ದರು. ಈಗ ಮೈತ್ರಿ ಹಳಸಿದ್ದು ರಾಜೀನಾಮೆ ನೀಡಿದ್ದಾರೆ.

    ಈ ಮಹತಿರ್, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂತೆಗೆದುಕೊಂಡ ನಂತರ ವಿಶ್ವಸಂಸ್ಥೆಯಲ್ಲಿ ಭಾರತದ ನಡೆಯನ್ನು ಟೀಕಿಸಿದ್ದರು. ಪೌರತ್ವ ತಿದ್ದುಪಡಿ ಕಾಯಿದೆಯನ್ನೂ ಅವರು ಟೀಕಿಸಿದ್ದರು. 70 ವರ್ಷಗಳಿಂದ ಜನರು ಯಾವುದೇ ಸಮಸ್ಯೆಯಿಲ್ಲದ ಪ್ರಜೆಗಳಾಗಿ ಒಟ್ಟಾಗಿ ವಾಸಿಸುತ್ತಿರುವಾಗ ಇದನ್ನು ತರುವ ಅವಶ್ಯಕತೆ ಏನಿತ್ತು? ಈ ಕಾನೂನಿನಿಂದ ಜನ ಸಾಯುತ್ತಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು.

    https://twitter.com/AbhishekSR24/status/1231855395712335872

    ವಿಶ್ವಸಂಸ್ಥೆಯ ನಿರ್ಣಯದ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ವಶ ಪಡಿಸಿಕೊಂಡಿದೆ ಎಂದು ಮಹತಿರ್ ದೂರಿದ್ದರು. ಭಾರತ ಪಾಕಿಸ್ತಾನ ಭಯೋತ್ಪಾದಕ ದೇಶ ಎಂದು ಕರೆಯುತ್ತಿದ್ದರೆ ಮಲೇಷ್ಯಾ ಪಾಕಿಸ್ತಾನದ ಆಪ್ತ ಸ್ನೇಹಿತನಾಗಿತ್ತು.

    ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ ಸಿಟ್ಟಾದ ಭಾರತ ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ಆಮದು ನಿಲ್ಲಿಸಿದ್ದು ಮಲೇಷ್ಯಾಕ್ಕೆ ಭಾರೀ ಹೊಡೆತ ನೀಡಿತ್ತು. ವ್ಯಾಪಾರ ನಿಲ್ಲಿಸುವುದು ಯುದ್ಧಕ್ಕೆ ಸಮ. ಭಾರತದ ನಡೆ ಸರಿಯಲ್ಲ ಎಂದು ಮಹತಿರ್ ಟೀಕಿಸಿದ್ದರು.

    ಒಂದು ಕಡೆ ಕೊರೊನಾ ವೈರಸ್ ನಿಂದಾಗಿ ಚೀನಾ ಆಮದು ಕಡಿಮೆ ಮಾಡಿಕೊಂಡಿದ್ದರೆ ಇತ್ತ ಭಾರತ ವ್ಯಾಪಾರ ಸಮರ ಆರಂಭಿಸಿದ ತಾಳೆ ಎಣ್ಣೆ ದರ ಭಾರೀ ಕುಸಿತ ಕಂಡಿತ್ತು. ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುತ್ತಿರುವ ಬೆನ್ನಲ್ಲೇ ಪ್ರಧಾನಿ ಮಹತಿರ್ ಈಗ ರಾಜೀನಾಮೆ ನೀಡಿದ್ದಾರೆ.

  • ರೇಷನ್ ಅಂಗಡಿಯಲ್ಲಿ ಸಿಗೋ ಅಡುಗೆ ಎಣ್ಣೆ ಬಳಸೋ ಮುನ್ನ ಎಚ್ಚರವಾಗಿರಿ

    ರೇಷನ್ ಅಂಗಡಿಯಲ್ಲಿ ಸಿಗೋ ಅಡುಗೆ ಎಣ್ಣೆ ಬಳಸೋ ಮುನ್ನ ಎಚ್ಚರವಾಗಿರಿ

    ಕಲಬುರಗಿ: ರಾಜ್ಯ ಸರ್ಕಾರ ಪಡಿತರ ಚೀಟಿಯಡಿ ನೀಡುವ ಅಡುಗೆ ಎಣ್ಣೆಯನ್ನ ಸೇವನೆ ಮಾಡೋದಕ್ಕಿಂತ ಮೊದಲು ನೂರು ಸಲ ಯೋಚಿಸಿ. ಕಡಿಮೆ ಬೆಲೆಗೆ ಸಿಗ್ತಿದೆ ಅಂತಾ ಅದ್ರಲ್ಲಿ ಅಡುಗೆ ಮಾಡಿದ್ರೆ ಆಮೇಲೆ ಆಸ್ಪತ್ರೆ ಸೇರಬೇಕಾಗುತ್ತೆ. ಅವಧಿ ಮೀರಿದ ಎಣ್ಣೆ ಪ್ಯಾಕೆಟ್‍ಗಳು ವಿತರಣೆಯಾಗ್ತಿವೆ.

    ಬಿಪಿಎಲ್ ಕಾರ್ಡ್‍ದಾರರಿಗೆ ವಿಟಮಿನ್ ಎ, ವಿಟಮಿನ್ ಡಿ ಅಂಶವುಳ್ಳ ತಾಳೆಯೆಣ್ಣೆಯನ್ನು ವಿತರಿಸುತ್ತಿದೆ. ಆದ್ರೆ ಕಲಬುರಗಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಅವಧಿ ಮುಗಿದ ತಾಳೆ ಎಣ್ಣೆ ಮಾರಾಟ ಆಗ್ತಿರೋದು ಬೆಳಕಿಗೆ ಬಂದಿದೆ. ಸದ್ಯ ಅವಧಿ ಮೀರಿದ 15 ಸಾವಿರಕ್ಕೂ ಅಧಿಕ ಎಣ್ಣೆ ಪ್ಯಾಕೆಟ್‍ಗಳು ಪತ್ತೆಯಾಗಿವೆ.

     

     

    ಅವಧಿ ಮೀರಿದ ಎಣ್ಣೆ ಪ್ಯಾಕೆಟ್‍ಗಳನ್ನು ಮಾರಾಟ ಮಾಡದಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಆದ್ರೆ ಅಧಿಕಾರಿಗಳ ಮಾತು ಕಡೆಗಣಿಸಿ ಆಹಾರ ಇಲಾಖೆ ಅಧಿಕಾರಿಗಳು ಅದೇ ತಾಳೆ ಎಣ್ಣೆಯನ್ನ ಬಡವರಿಗೆ ವಿತರಿಸುವ ಮೂಲಕ ಬಡಜನರ ಆರೋಗ್ಯದ ಜೊತೆ ಚೆಲ್ಲಾಟವಾಡ್ತಿದ್ದಾರೆ.

    ಈ ಬಗ್ಗೆ ಎಚ್ಚೆತ್ತಿಕೊಂಡಿರೋ ಕಲಬುರಗಿ ಜನ ಅವಧಿ ಮೀರಿದ ತಾಳೆ ಎಣ್ಣೆ ಪ್ಯಾಕೆಟ್‍ಗಳನ್ನ ಮೊದಲು ಸೀಜ್ ಮಾಡುವಂತೆ ಆಹಾರ ಇಲಾಖೆಗೆ ಆಗ್ರಹಿಸಿದ್ದಾರೆ.