Tag: Pallavi Raju

  • ಥ್ರಿಲ್ಲರ್ ಅನುಭವ ನೀಡುವ ರೋಚಕ ರತ್ನಮಂಜರಿ!

    ಥ್ರಿಲ್ಲರ್ ಅನುಭವ ನೀಡುವ ರೋಚಕ ರತ್ನಮಂಜರಿ!

    ಬೆಂಗಳೂರು: ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಅಪ್ಪಟ ಸಿನಿಮಾ ಪ್ರೇಮದಿಂದ ರೂಪಿಸಿರುವ ಚಿತ್ರ ರತ್ನಮಂಜರಿ. ರಾಜ್ ಚರಣ್ ನಾಯಕನಾಗಿ ನಟಿರೋ ಈ ಚಿತ್ರದ ಬಗ್ಗೆ ಆರಂಭದಿಂದಲೂ ಕುತೂಹಲವಿತ್ತು. ಅದಕ್ಕೆ ತಕ್ಕುದಾದ ರೋಚಕ ವಿಚಾರಗಳೇ ಚಿತ್ರತಂಡದ ಕಡೆಯಿಂದ ಹೊರ ಬೀಳುತ್ತಾ ಸಾಗಿ ಬಂದಿತ್ತು. ಇದೀಗ ಈ ಚಿತ್ರ ತೆರೆ ಕಂಡಿದೆ. ವಿಶಿಷ್ಟವಾದ ಕಥೆ, ವಿಭಿನ್ನ ನಿರೂಪಣೆ, ಎದೆ ಝಲ್ಲೆನ್ನಿಸುವಂಥಾ, ಕಣ್ಣಿಗೆ ಹಬ್ಬದಂಥಾ ದೃಷ್ಯ ಶ್ರೀಮಂತಿಕೆಯಿಂದ ಪ್ರೇಕ್ಷಕರ ಮನಸು ತಾಕಿದೆ.

    ಪ್ರಸಿದ್ಧ್ ನಿರ್ದೇಶನದ ಚೊಚ್ಚಲ ಚಿತ್ರವಾದ ರತ್ನಮಂಜರಿಯನ್ನು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಾದ ಸಂದೀಪ್, ನಟರಾಜ್ ಹಳೇಬೀಡು ಮತ್ತು ಸಂದೀಪ್ ಹಳೇಬೀಡು ನಿರ್ಮಾಣ ಮಾಡಿದ್ದಾರೆ. ಪ್ರೇಮಸಲ್ಲಾಪದೊಂದಿಗೇ ವಿದೇಶದಲ್ಲಿ ತೆರೆದುಕೊಂಡು, ಅಲ್ಲಿನ ಕಾರ್ಪೋರೇಟ್ ಕಾರಿಡಾರುಗಳ ತುಂಬಾ ಅಡ್ಡಾಡಿ, ಒಂದು ನಿಗೂಢ ಕೊಲೆಯ ಚುಂಗು ಹಿಡಿದು ಸೀದಾ ಕೊಡಗಿನ ಪಥದತ್ತ ಹೊರಳಿಕೊಳ್ಳೋ ಕಥೆ ಪಕ್ಕಾ ಕಮರ್ಷಿಯಲ್ ಪಟ್ಟುಗಳೊಂದಿಗೆ ಎಲ್ಲರ ಗಮನ ಸೆಳೆಯುವಂತೆ ಮೂಡಿ ಬಂದಿದೆ.

    ರಾಜ್ ಚರಣ್ ನಾಯಕನಾಗಿ ಸಿದ್ಧಾರ್ಥ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿದ್ಧಾರ್ಥ್ ಎಳವೆಯಿಂದಲೂ ಸೂಕ್ಷ್ಮ ಸ್ವಭಾವದ ಹುಡುಗ. ಬೆಳೆದು ದೊಡ್ಡವನಾದ ನಂತರವೂ ಅದೇ ಮನಸ್ಥಿತಿ ಹೊಂದಿರೋ ಆತ ಅಮೆರಿಕಾದಲ್ಲಿ ಸಸ್ಯಶಾಸ್ತ್ರಜ್ಞನಾಗಿ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಅವನ ಮನೆ ಪಕ್ಕದಲ್ಲಿಯೇ ಕೊಡಗು ಮೂಲದ ದಂಪತಿಯೂ ವಾಸವಾಗಿರುತ್ತಾರೆ. ಆದರೆ ಅದೊಂದು ದಿನ ಆ ದಂಪತಿ ಕೊಲೆಯಾಗಿ ಬಿಡುತ್ತಾರೆ. ಸಸ್ಯಶಾಸ್ತ್ರಜ್ಞ ನಾಯಕ ಈ ಕೊಲೆಯ ಬೆಂಬಿದ್ದು ಕೊಡಗಿಗೆ ಬಂದಿಳಿಯೋ ಮೂಲಕ ಅಲ್ಲಿ ಕಥೆಯ ಓಟ ಆರಂಭವಾಗುತ್ತೆ. ಆ ನಂತರದ ಜರ್ನಿಯ ಪ್ರತಿ ತಿರುವುಗಳೂ ಕೂಡಾ ರೋಚಕ ಅನುಭವವನ್ನೇ ನೋಡುಗರಿಗೆ ದಾಟಿಸುತ್ತದೆ.

    ಅಮೆರಿಕದಲ್ಲಿ ಕೊಲೆಯಾದ ನಾಣಯ್ಯ ಒಡೆತನದ ರತ್ನಮಂಜರಿ ಎಂಬ ಎಸ್ಟೇಟಿನ ನಿಗೂಢದ ಸುತ್ತ ಕಥೆ ರೋಚಕವಾಗಿ ಚಲಿಸುತ್ತದೆ. ಆ ವಾತಾವರಣದ ಇಂಚಿಂಚು ಸೌಂದರ್ಯವನ್ನೂ ಪ್ರೀತಂ ತೆಗ್ಗಿನಮನೆ ತಮ್ಮ ಕ್ಯಾಮೆರಾದಲ್ಲಿ ಸೆರೆಯಾಗಿಸಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಅಂಥಾ ಪ್ರಾಕೃತಿಕ ಸೌಂದರ್ಯದ ನಡುವೆಯೂ ಪ್ರೇಕ್ಷಕರು ಬೆಚ್ಚಿ ಬೀಳುವಂಥಾ ಆವೇಗದೊಂದಿಗೆ ದೃಶ್ಯ ಕಟ್ಟಿದ್ದಾರೆ. ಒಟ್ಟಾರೆಯಾಗಿ ಅಮೆರಿಕಾದಲ್ಲಿ ನಾಣಯ್ಯ ದಂಪತಿ ಕೊಲೆಯಾಗಲು ಕಾರಣವೇನು ಅನ್ನೋದರಿಂದ ಮೊದಲ್ಗೊಂಡು ರೋಚಕ ಕಥನವೇ ಈ ಚಿತ್ರದಲ್ಲಿದೆ.

    ನಿರ್ದೇಶಕ ಪ್ರಸಿದ್ಧ್ ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ. ನಾಯಕ ರಾಜ್ ಚರಣ್ ಕೂಡಾ ನಾಯಕನಾಗಿ ನೆಲೆಗೊಳ್ಳೋ ಲಕ್ಷಣಗಳನ್ನು ನಟನೆಯ ಮೂಲಕ ಹೊಮ್ಮಿಸಿದ್ದಾರೆ. ಅಖಿಲಾ ಪ್ರಕಾಶ್ ಮುದ್ದಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಇನ್ನುಳಿದಂತೆ ಈಗಾಗಲೇ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿರುವ ಪಲ್ಲವಿ ರಾಜು ಕೂಡಾ ಚೆಂದಗೆ ನಟಿಸಿದ್ದಾರೆ. ವಿದೇಶದ ಕಾರ್ಪೋರೇಟ್ ಜಗತ್ತಿನಲ್ಲಿ ಸುತ್ತಾಡಿಸಿ ಕೊಡಗಿನ ನಿಗೂಢದಲ್ಲಿ ಕಥೆ ಸಾಗುವ ಈ ಚಿತ್ರ ಪ್ರತಿ ವರ್ಗದ ಪ್ರೇಕ್ಷಕರಿಗೂ ಮಜವಾದ ಅನುಭವ ನೀಡುವಂತೆ ಮೂಡಿ ಬಂದಿದೆ.

    ರೇಟಿಂಗ್: 4/5

  • ರತ್ನ ಮಂಜರಿ ಮೇ 17ಕ್ಕೆ ಬಿಡುಗಡೆ

    ರತ್ನ ಮಂಜರಿ ಮೇ 17ಕ್ಕೆ ಬಿಡುಗಡೆ

    ಎನ್ ಆರ್ ಐ ಕನ್ನಡಿಗರ ಪ್ರಾಮಾಣಿಕ ಪ್ರಯತ್ನದ ಸಿನೆಮಾ `ರತ್ನ ಮಂಜರಿ’ ಇದೇ ಶುಕ್ರವಾರ ಮೇ 17ರಂದು ಬಿಡುಗಡೆಯಾಗುತ್ತಿದೆ. ಶರಾವತಿ ಫಿಲ್ಮ್ಸ್ ಅಡಿಯಲ್ಲಿ ಸಂದೀಪ್ ಕುಮಾರ್, ಡಾ. ನವೀನ್ ಕೃಷ್ಣ ಹಾಗೂ ನಟರಾಜ ಹಳೇಬೀಡು ನಿರ್ಮಾಣದ ಸಿನಿಮಾಕ್ಕೆ ಅಮೆರಿಕದಲ್ಲಿ ನಡೆದ ಘಟನೆಗೆ ಕರ್ನಾಟಕದ ಕನೆಕ್ಷನ್ ಬೆಸೆಯಲಾಗಿದೆ.

    ಅಮೆರಿಕದಲ್ಲಿ ದಶಕಗಳ ಹಿಂದೆ ನಡೆದೊಂದು ಕಥೆಯ ಬೇಸಿನಲ್ಲಿ ರತ್ನಮಂಜರಿ ಚಿತ್ರದ ಕಥೆ ರೂಪುಗೊಂಡಿದೆ. ಅದು ಸಂದೀಪ್ ಸೇರಿದಂತೆ ನಿರ್ಮಾಪಕರೆಲ್ಲರ ಇಷಾರೆಯೊಂದಿಗೇ ರೆಡಿಯಾಗಿರೋ ಕಥೆ. ನಂತರ ಈ ಚಿತ್ರದ ಐವತ್ತರಷ್ಟು ಭಾಗದ ಕಥೆಯನ್ನು ಯುಎಸ್ ನಲ್ಲಿ ಮತ್ತುಳಿದ ಅರ್ಧ ಭಾಗವನ್ನು ಮಡಿಕೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆಯೇ ಇಡೀ ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಾಗಿದೆ.

    ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಹೊಸತನವೇ ತುಂಬಿಕೊಳ್ಳಬೇಕೆಂಬುದು ಸಂದೀಪ್ ಅವರ ಇರಾದೆಯಾಗಿತ್ತು. ತಮ್ಮಂತೆಯೇ ಕಲೆಯ ಗುಂಗು ಹೊಂದಿದ್ದ ಹೊರನಾಡ ಕನ್ನಡಿಗರಿಗೂ ಅವಕಾಶ ಮಾಡಿಕೊಡಬೇಕೆಂಬ ಆಲೋಚನೆಯೂ ಅವರಲ್ಲಿತ್ತು. ಆದ್ದರಿಂದಲೇ ಈ ಚಿತ್ರದ ಪಾತ್ರಕ್ಕಾಗಿ ವಿದೇಶದಲ್ಲಿ ಆಡಿಷನ್ ಕರೆದಾಗ ಸಾವಿರಕ್ಕೂ ಹೆಚ್ಚು ಆಸಕ್ತರು ಮುಂದೆ ಬಂದಿದ್ದರು. ಕಡೆಗೂ ಅವರಲ್ಲಿ ಹತ್ತು ಮಂದಿಯನ್ನು ಆಯ್ಕೆ ಮಾಡಿ ನಟಿಸಲು ಅವಕಾಶ ಮಾಡಿ ಕೊಡಲಾಗಿದೆ. ಅವರೆಲ್ಲರೂ ವಿದೇಶದಲ್ಲಿಯೇ ರಂಗಭೂಮಿಯ ಸಖ್ಯ ಹೊಂದಿದ್ದವರು.

    ನಿರ್ದೇಶಕ ಪ್ರಸಿದ್ದ್ ಡೆನ್ಮಾರ್ಕ್ ನಿವಾಸಿ ಈ ಚಿತ್ರವನ್ನು ಅನೇಕ ಬಾರಿ ಅವಲೋಕನ ಮಾಡಿ ತೆರೆಗೆ ತಂದಿದ್ದಾರೆ. ರಾಜ್ ಚರಣ್, ಅಖಿಲಾ ಪ್ರಕಾಶ್, ಪಲ್ಲವಿ ರಾಜು, ಕನ್ನಿಕಾ ಹಾಗೂ ಶ್ರದ್ಧಾ ಸಾಲಿಯಾನ್ ಪೈಕಿ ಯಾರು ರತ್ನ ಮಂಜರಿ ಎಂಬುದು ಕುತೂಹಲದ ವಿಚಾರ.

    ಅಮೆರಿಕದಲ್ಲಿ ಹಾಗೂ ಕರ್ನಾಟಕದ ಮನೋಹರವಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರೀತಂ ಮತ್ತು ಕಿಟ್ಟಿ ಛಾಯಾಗ್ರಹಣ, ಹರ್ಷವರ್ಧನ ರಾಜ್ ಸಂಗೀತ ಸಂಯೋಜನೆ, ಪವನ್ ರಾಮ್ ಶೆಟ್ಟಿ ಸಂಕಲನ, ವಿಕ್ರಮ್ ಮೋರ್ ಸಾಹಸ ಈ ಸಿನಿಮಾಕ್ಕೆ ಒದಗಿಸಿದ್ದಾರೆ.

  • ರತ್ನಮಂಜರಿಯಲ್ಲಿದೆ ಹಾಲಿವುಡ್ ಮಾದರಿಯ ತಾಂತ್ರಿಕ ಶ್ರೀಮಂತಿಕೆ!

    ರತ್ನಮಂಜರಿಯಲ್ಲಿದೆ ಹಾಲಿವುಡ್ ಮಾದರಿಯ ತಾಂತ್ರಿಕ ಶ್ರೀಮಂತಿಕೆ!

    ಬೆಂಗಳೂರು: ಅಮೆರಿಕದಂಥಾ ವಿದೇಶಗಳಲ್ಲಿ ನೆಲೆಸಿದ್ದರೂ ಕನ್ನಡತನ ಮರೆಯದ, ಬೇರುಗಳಿಗಾಗಿ ತುಡಿಯುವ ಅದೆಷ್ಟೋ ಮನಸುಗಳಿವೆ. ಇಂಥಾ ಮನಸುಗಳಿಂದಲೇ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಒಂದಷ್ಟು ಮೌಲ್ಯಯುತ ಕೊಡುಗೆಗಳೂ ಸಿಕ್ಕಿವೆ. ಇದೇ ರೀತಿಯ ಕನ್ನಡತನದ ಮನಸುಗಳೇ ಸೇರಿ ನಿರ್ಮಾಣ ಮಾಡಿರೋ ಚಿತ್ರ ರತ್ನಮಂಜರಿ. ಈಗಾಗಲೇ ನಾನಾ ದಿಕ್ಕುಗಳಿಂದ ಕುತೂಹಲ ಹುಟ್ಟಿಸುತ್ತಲೇ ಬಹು ನಿರೀಕ್ಷಿತ ಚಿತ್ರವಾಗಿಯೂ ಹೊರ ಹೊಮ್ಮಿದೆ. ರತ್ನಮಂಜರಿ ಇದೇ ತಿಂಗಳ ಹದಿನೇಳರಂದು ಅದ್ಧೂರಿಯಾಗಿ ತೆರೆ ಕಾಣಲಿದೆ.

    ವಿದೇಶ ವಾಸಿಗಳಾಗಿರುವ ನಟರಾಜ್ ಹಳೆಬೀಡು, ಸಂದೀಪ್ ಕುಮಾರ್, ಡಾ. ನವೀನ್ ರತ್ನಮಂಜರಿಯನ್ನು ನಿರ್ಮಾಣ ಮಾಡಿದ್ದಾರೆ. ಪ್ರಸಿದ್ಧ್ ನಿರ್ದೇಶನದ ಈ ಚಿತ್ರದ ಮೂಲಕವೇ ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಖಿಲಾ ಪ್ರಕಾಶ್, ಪಲ್ಲವಿ ರಾಜು ಮತ್ತು ಶ್ರದ್ಧಾ ಸಾಲಿಯಾನ್ ನಾಯಕಿಯರಾಗಿ ನಟಿಸಿದ್ದಾರೆ.

    ಕಥೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರಬೇಕೆಂಬ ಪ್ರತಿಜ್ಞೆಯೊಂದಿಗೇ ರತ್ನಮಂಜರಿ ಶುರುವಾಗಿತ್ತು. ಹೇಳಿ ಕೇಳಿ ಇದು ವಿದೇಶದಲ್ಲಿ ಬೀಡು ಬಿಟ್ಟಿರುವ ಕನ್ನಡಿಗರೇ ಸೇರಿಕೊಂಡು ಮಾಡಿರೋ ಚಿತ್ರ. ಹಾಗಿದ್ದ ಮೇಲೆ ತಾಂತ್ರಿಕವಾಗಿಯೂ ಶ್ರೀಮಂತವಾಗಿರಲಿದೆ ಎಂಬ ನಿರೀಕ್ಷೆ ಎಲ್ಲರಿಗೂ ಇದ್ದೇ ಇರುತ್ತೆ. ಇದನ್ನು ಮನಗಂಡೇ ಕನ್ನಡಕ್ಕೆ ತೀರಾ ಹೊಸತಾದ ತಾಂತ್ರಿಕ ಕೌಶಲ್ಯಗಳೊಂದಿಗೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಹಾಲಿವುಡ್ ಚಿತ್ರಗಳಿಗೆ ಕಾರ್ಯ ನಿರ್ವಹಿಸಿದ ತಂತ್ರಜ್ಞರೂ ರತ್ನಮಂಜರಿಗೆ ಸಾಥ್ ಕೊಟ್ಟಿದ್ದಾರೆ. ಈ ಕಾರಣದಿಂದಲೇ ಈ ಚಿತ್ರ ತಾಂತ್ರಿಕವಾಗಿ ಹಾಲಿವುಡ್ ಫ್ಲೇವರಿನೊಂದಿಗೆ ಮೂಡಿ ಬಂದಿದೆ. ಅದರ ಚಮತ್ಕಾರವೇನನ್ನೋದು ಇನ್ನು ವಾರದೊಪ್ಪತ್ತಿನಲ್ಲಿಯೇ ಗೊತ್ತಾಗಲಿದೆ!

  • ರವಿ ಹಿಸ್ಟರಿ: ಪಲ್ಲವಿ ರಾಜು ಈಗ ಎಸ್.ಐ. ಅನಿತ!

    ರವಿ ಹಿಸ್ಟರಿ: ಪಲ್ಲವಿ ರಾಜು ಈಗ ಎಸ್.ಐ. ಅನಿತ!

    ಬೆಂಗಳೂರು: ಬೇಗನೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾ ಮುಖ್ಯ ನಾಯಕಿಯಾಗಿ ನೆಲೆನಿಲ್ಲಬೇಕೆಂಬ ಆಸೆ ಇದೀಗ ತಾನೇ ಬಣ್ಣ ಹಚ್ಚಿದ ಹೊಸಾ ಹುಡುಗಿಯರಲ್ಲೂ ಇರುತ್ತೆ. ಆದರೆ ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ತೀರಾ ಕಮರ್ಷಿಯಲ್ ಸಿನಿಮಾಗಳಲ್ಲದೇ ಹೋದರೂ ನಟಿಸೋ ಪಾತ್ರದ ಮೂಲಕವೇ ಗುರುತಾಗ ಬೇಕೆಂಬ ಹಂಬಲ ಹೊಂದಿರುವವರು ವಿರಳ. ಅಂಥಾ ವಿರಳ ಮನಸ್ಥಿತಿ ಹೊಂದಿರೋ ಅಪರೂಪದ ನಟಿ ಪಲ್ಲವಿ ರಾಜು. ಅವರೀಗ ಈ ವಾರ ತೆರೆ ಕಾಣಲಿರುವ ರವಿ ಹಿಸ್ಟರಿ ಚಿತ್ರದ ನಾಯಕಿಯಾಗಿ ವಿಶೇಷ ಗೆಟಪ್ಪೊಂದರ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ.

    ಸಿನಿಮಾ ಯಾವ ಜಾನರಿನದ್ದೇ ಆಗಿದ್ದರೂ ತನ್ನ ಪಾತ್ರ ಸವಾಲಿನದ್ದಾಗಿರಬೇಕೆಂಬ ಹಂಬಲ ಹೊಂದಿರುವವರು ಪಲ್ಲವಿ ರಾಜು. ಆ ಕಾರಣದಿಂದಲೇ ಅವರಿಂದು ವಿಶಿಷ್ಟ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಕ’ ಎಂಬ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ಈಗ ಬಿಡುಗಡೆಗೆ ಸಜ್ಜಾಗಿರೋ ರವಿ ಹಿಸ್ಟರಿ ಸಿನಿಮಾದ ನಾಯಕಿ. ಈ ಪಾತ್ರದ ಬಗ್ಗೆ ಅವರಿಗೆ ಈ ಹಿಂದೆಂದಿಗಿಂತಲೂ ಹೆಚ್ಚಿನ ಭರವಸೆ ಇದೆ.

    ಇದುವರೆಗೂ ಪಲ್ಲವಿ ಸವಾಲಿನ ಪಾತ್ರಗಳಿಗೇ ಜೀವ ತುಂಬಿದ್ದಾರೆ. ಈ ಹಿಂದೆ ತೆರೆ ಕಂಡಿದ್ದ ಮಂತ್ರಂ ಚಿತದಲ್ಲಿನ ಇವರ ನಟನೆಯೇ ಪಲ್ಲವಿ ಓರ್ವ ಅಸಾಮಾನ್ಯ ನಟಿ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ. ಅವರೊಳಗಿನ ನಟನಾ ಚಾತುರ್ಯಕ್ಕೆ ಸವಾಲಿನಂಥಾ ಪಾತ್ರವೇ ರವಿ ಹಿಸ್ಟರಿ ಚಿತ್ರದಲ್ಲಿ ಸಿಕ್ಕಿದೆಯಂತೆ. ಅಂದಹಾಗೆ ಇಲ್ಲವರು ಎಸ್‍ಐ ಅನಿತಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

    ಆರಂಭದಲ್ಲಿ ನಿರ್ದೇಶಕ ಮಧು ಚಂದ್ರ ಕಥೆ ಹೇಳಿದ್ದಾಗ ಪಲ್ಲವಿ ರಾಜು ಅವರ ಪಾತ್ರದ ಒಂದು ಪದರವನ್ನಷ್ಟೇ ಬಿಚ್ಚಿಟ್ಟಿದ್ದರಂತೆ. ಆದರೆ ರಿಹರ್ಸಲ್ ಸಂದರ್ಭದಲ್ಲಿ ಇವರ ಪಾತ್ರದ ಎರಡು ಪುಟ ತಿರುವುತ್ತಲೇ ಅಚ್ಚರಿ ಕಾದಿತ್ತಂತೆ. ಅದಕ್ಕೆ ಕಾರಣ ಅವರ ಪಾತ್ರಕ್ಕಿರೋ ಸಮ್ಮೋಹಕವಾದ ತಿರುವು ಮತ್ತು ಶೇಡುಗಳು!

    ರವಿ ಹಿಸ್ಟರಿ ಎಂಬುದೇ ಈಗ ವಿಭಿನ್ನ ಜಾಡಿನ ಚಿತ್ರವಾಗಿ ಪ್ರೇಕ್ಷಕರನ್ನ ಸೆಳೆದುಕೊಂಡಿದೆ. ಅದರಲ್ಲಿ ನಾಯಕಿಯಾಗಿರೋ ಪಲ್ಲವಿ ಎಸ್‍ಐ ಅನಿತ ಆಗಿ ಕಾಣಿಸಿಕೊಂಡಿದ್ದಾರೆ. ಎಸ್‍ಐ ಅಂದಾಕ್ಷಣ ಗಾಗಲ್ಸ್ ಹಾಕಿಕೊಂಡು ಬಿಲ್ಡಪ್ಪು ಕೊಡೋ ಪಾತ್ರದ ಕಲ್ಪನೆ ಬರೋದು ಸಹಜ. ಆದರೆ ಈ ಪಾತ್ರ ವಾಸ್ತವಕ್ಕೆ ಹತ್ತಿರವಾಗಿದೆಯಂತೆ. ಮಧ್ಯಮವರ್ಗದಿಂದ ಬಂದ ಹುಡುಗಿಯಾಗಿ, ಕಷ್ಟಪಟ್ಟು ಎಸ್‍ಐ ಆಗೋ ಶೇಡಿನ ಪಾತ್ರ ಪಲ್ಲವಿ ರಾಜು ವೃತ್ತಿ ಬದುಕಿಗೆ ಹೊಸಾ ದಿಕ್ಕು ತೋರಿಸೋ ಸಾಧ್ಯತೆಗಳೇ ಢಾಳಾಗಿವೆ.

    ಪಲ್ಲವಿ ರಾಜು ಇದುವರೆಗೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವೆಲ್ಲವೂ ಪ್ರಯೋಗಾತ್ಮಕ ಚಿತ್ರಗಳೇ. ಆದರೆ ರವಿ ಹಿಸ್ಟರಿ ಪ್ರಯೋಗಗಳನ್ನ ಹೊಂದಿರೋ ಕಮರ್ಷಿಯಲ್ ಮೂವಿ. ಇದರ ಮೂಲಕವೇ ಎಸ್.ಐ. ಅನಿತಾ ಆಗಿ ಹೊಸ ಕಮಾಲ್ ಸೃಷ್ಟಿಸೋ ಭರವಸೆ ಪಲ್ಲವಿ ರಾಜು ಅವರದ್ದು.