Tag: Palimaru Mutt

  • ಉಡುಪಿಯಲ್ಲಿ ಅದ್ದೂರಿ ರಾಮೋತ್ಸವ ನಡೆದಿಲ್ಲ: ಕಿಡಿಗೇಡಿಗಳ ಅಪಪ್ರಚಾರಕ್ಕೆ ಪಲಿಮಾರು ಮಠ ಖಂಡನೆ

    ಉಡುಪಿಯಲ್ಲಿ ಅದ್ದೂರಿ ರಾಮೋತ್ಸವ ನಡೆದಿಲ್ಲ: ಕಿಡಿಗೇಡಿಗಳ ಅಪಪ್ರಚಾರಕ್ಕೆ ಪಲಿಮಾರು ಮಠ ಖಂಡನೆ

    ಉಡುಪಿ: ನಗರದಲ್ಲಿ ಗುರುವಾರ ಅದ್ದೂರಿ ರಾಮ ನವಮಿ ಉತ್ಸವ ನಡೆದಿಲ್ಲ. ಕೆಲ ಕಿಡಿಗೇಡಿಗಳು ಮಠದ ಹಳೆಯ ಫೋಟೋಗಳನ್ನು ಬಳಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಳೆದ 10 ದಿನಗಳಿಂದ ಉಡುಪಿ ಜಿಲ್ಲೆ ಕಾಪುವಿನ ಕುತ್ಯಾರು ಗ್ರಾಮದಲ್ಲಿ ಸರಳವಾದ ರಾಮೋತ್ಸವ ನಡೆಯುತ್ತಿದೆ. ಪಲಿಮಾರು ಶ್ರೀಗಳ ಶಿಷ್ಯರಾದ ರಾಜಗೋಪಾಲ ಆಚಾರ್ಯ ಎಂಬವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಭಾರತ ಲಾಕ್‍ಡೌನ್ ಆಗಿರುವುದರಿಂದ ಎಲ್ಲಾ ಧಾರ್ಮಿಕ ಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು. ಕೇವಲ ಐದಾರು ಜನ ಅರ್ಚಕರು ಇಬ್ಬರು ಸ್ವಾಮೀಜಿ ಧಾರ್ಮಿಕ ವಿಧಿವಿಧಾನ ನಡೆಸುತ್ತಿದ್ದರು.

    ರಾಮನವಮಿಯ ದಿನವಾದ ಗುರುವಾರ ಪಲಿಮಾರು ಹಿರಿಯ ಕಿರಿಯ ಶ್ರೀಗಳು ಅಭಿಷೇಕ, ಪೂಜೆ ಮಾಡಿದ್ದರು. ಧಾರ್ಮಿಕವಾಗಿ ಅವಶ್ಯವಿದ್ದ ಅರ್ಚಕರು ಈ ಸಂದರ್ಭ ಜೊತೆಗಿದ್ದರು. ಆದರೆ ಕೆಲ ಕಿಡಿಗೇಡಿಗಳು ತಿಂಗಳ ಹಿಂದಿನ ಪೂರ್ವಭಾವಿ ಸಭೆಯ ಫೋಟೋವನ್ನು ಬಳಸಿ ಇದೆಂಥಾ ನ್ಯಾಯ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಹಳೆಯ ಫೋಟೋ ಇಟ್ಟು ಫಾರ್ವರ್ಡ್ ಮಾಡುತ್ತಿದ್ದಾರೆ. ಪೊಲೀಸರು ಮತ್ತು ಮಾಧ್ಯಮದ ಮೇಲೆ ಕಿಡಿ ಕಾರುತ್ತಿದ್ದಾರೆ. ಹಿಂದೂಗಳಿಗೆ ಒಂದು ನ್ಯಾಯ, ಮುಸಲ್ಮಾನರಿಗೆ ಇನ್ನೊಂದು ನ್ಯಾಯನಾ ಅಂತ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

    ಈ ನಡುವೆ ಪಲಿಮಾರು ಮಠದ ಪರವಾಗಿ ರಾಮೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಕುತ್ಯಾರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಅಪಪ್ರಚಾರ. ರಾಮನ ವಿಚಾರದಲ್ಲಿ ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ. ರಾಮೋತ್ಸವದಲ್ಲಿ ಐದಾರು ಜನ ಬಿಟ್ಟರೆ ಸಮಿತಿಯ ಸದಸ್ಯರು ಕೂಡ ಪಾಲ್ಗೊಂಡಿಲ್ಲ. 10 ದಿನದ ಕಾರ್ಯಕ್ರಮಕ್ಕೆ ಮೂರ್ನಾಲ್ಕು ತಿಂಗಳಿಂದ ತಯಾರಿ ಮಾಡಿದ್ದೆವು. ಆದರೆ ಕಾನೂನು ಮೀರಬಾರದೆಂದು ದೇವರ ಕಾರ್ಯಕ್ರಮ ಸರಳವಾಗಿ ನಡೆಸಿದ್ದೇವೆ. ಪೂರ್ವಭಾವಿ ಸಭೆಯ ಸಂದರ್ಭದ ಹಳೆಯ ಫೋಟೋಗಳನ್ನು ಬಳಸಿ ವೈರಲ್ ಮಾಡಿರುವುದು ಖಂಡನೀಯ ಎಂದಿದ್ದಾರೆ. ಪಲಿಮಾರು ಶ್ರೀಗಳಿಗೆ ಇದರಿಂದ ಬೇಸರವಾಗಿದೆ ಎಂದು ಹೇಳಿದರು.

  • ಕೊಡಗಿನ ಒಂದು ಹಳ್ಳಿ ದತ್ತು ಪಡೆಯುತ್ತೇವೆ- ಉಡುಪಿ ಪಲಿಮಾರು ಶ್ರೀ ಘೋಷಣೆ

    ಕೊಡಗಿನ ಒಂದು ಹಳ್ಳಿ ದತ್ತು ಪಡೆಯುತ್ತೇವೆ- ಉಡುಪಿ ಪಲಿಮಾರು ಶ್ರೀ ಘೋಷಣೆ

    ಉಡುಪಿ: ಕೊಡವರ ಕಷ್ಟಕ್ಕೆ ಕರುನಾಡು ಮಿಡಿಯುತ್ತಿದ್ದು ಉಡುಪಿಯ ಪಲಿಮಾರು ಮಠಾಧೀಶರು ಸಹಾಯಕ್ಕೆ ಮುಂದಾಗಿದ್ದಾರೆ.

    ಕೊಡಗಿನ ನೆರೆ ಪೀಡಿತ ಒಂದು ಗ್ರಾಮ ದತ್ತು ಸ್ವೀಕಾರ ಮಾಡುತ್ತೇವೆ ಎಂದು ಉಡುಪಿ ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀ ನಿರ್ಧಾರ ಮಾಡಿದ್ದಾರೆ. ಉಡುಪಿ ಕೃಷ್ಣ ಮಠದ ಪರ್ಯಾಯ ಸ್ವಾಮೀಜಿಯಾಗಿರುವ ವಿದ್ಯಾಧೀಶರು ಈ ಮೂಲಕ ಮಾನವೀಯತೆ ತೀರ್ಮಾನ ಕೈಗೊಂಡಿದ್ದಾರೆ.

    ಕೃಷ್ಣಮಠ, ಪಲಿಮಾರು ಮಠ ಮತ್ತು ಸಾರ್ವಜನಿಕರ ನೆರೆವಿನಿಂದ ಒಂದು ಗ್ರಾಮದ ನಿರ್ಮಾಣ ಮಾಡುತ್ತೇವೆ ಅಂತ ಹೇಳಿಕೊಂಡಿದ್ದಾರೆ. ಮೊದಲು ಯಾವ ಗ್ರಾಮ ಎನ್ನುವುದು ಗೊತ್ತು ಮಾಡಬೇಕು. ಸಂಬಂಧಪಟ್ಟವರ ಬಳಿ ಈ ಬಗ್ಗೆ ಚರ್ಚೆ ಮಾಡಲಾಗುವುದು. ಅಲ್ಲಿಗೆ ಏನು ಅಗತ್ಯ ಎನ್ನುವುದನ್ನು ಪರಿಶೀಲಿಸಿ ಸೂಕ್ತ ಸೂಕ್ತ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮದ ಮೂಲಕ ಕೊಡಗು ಮತ್ತು ಕೇರಳದ ಪರಿಸ್ಥಿತಿ ತಿಳಿದುಕೊಂಡಿದ್ದೇನೆ. ನಾವು ಊಹಿಸಲೂ ಕಷ್ಟವಾಗಿದೆ. ಅಲ್ಲಿನ ಜನರ ಜೀವನ ಪರಿಸ್ಥಿತಿ ಯಾರಿಗೂ ಬಾರದಿರಲಿ. ಭಗವಂತ ಕಷ್ಟದಿಂದ ಹೊರ ಬರುವ ಶಕ್ತಿ ಕೊಡಲಿ. ನಮ್ಮ ಕೈಲಾದ ಸಹಾಯ ಮಾಡೋಣ, ಸಣ್ಣ ಸಹಾಯ ಕಷ್ಟದಲ್ಲಿರುವವರಿಗೆ ದೊಡ್ಡ ಸಹಾಯವಾಗುತ್ತದೆ. ಕೊಡಗನ್ನು ಕರುನಾಡು ಸೇರಿ ಕಟ್ಟುವ ಕೆಲಸವಾಗಬೇಕು ಅಂತ ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಇದನ್ನೂ ಓದಿ: 20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv