Tag: palike Officers

  • ಕಟ್ಟಿಗೆಯ ಚಿತೆ ಮೇಲೆ ಶವಗಳನ್ನ ಎಸೆದು ಕೊರೊನಾ ಸೋಂಕಿತರ ಅಂತ್ಯಕ್ರಿಯೆ

    ಕಟ್ಟಿಗೆಯ ಚಿತೆ ಮೇಲೆ ಶವಗಳನ್ನ ಎಸೆದು ಕೊರೊನಾ ಸೋಂಕಿತರ ಅಂತ್ಯಕ್ರಿಯೆ

    ಬೆಳಗಾವಿ: ಈಗಾಗಲೇ ಕೊರೊನಾದಿಂದ ಮೃತಪಟ್ಟವರನ್ನು ಗುಂಡಿಯಲ್ಲಿ ಎಸೆದು, ಜೆಸಿಬಿಯಿಂದ ತಂದು ಅಂತ್ಯಸಂಸ್ಕಾರ ಮಾಡಲಾಗಿದೆ. ಇದೀಗ ಬೆಳಗಾವಿಯಲ್ಲಿ ಚಿತೆ ಮೇಲೆ ಶವವನ್ನು ಎಸೆದು ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.

    ಬೆಳಗಾವಿ ನಗರದಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯನ್ನು ಬೇಕಾಬಿಟ್ಟಿ ಮಾಡಲಾಗಿದೆ. ಮಹಾನಗರ ಪಾಲಿಕೆಯ ಸದಾಶಿವ ನಗರ ಸ್ಮಶಾನದಲ್ಲಿ ಸೋಂಕಿತರ ಅಂತ್ಯಸಂಸ್ಕಾರ ಮಾಡಲಾಗಿದೆ. ಒಂದೇ ಅಂಬುಲೆನ್ಸ್‌ನಲ್ಲಿ ಎರಡು ಮೃತದೇಹವನ್ನು ತಂದಿದ್ದಾರೆ. ನಂತರ ಆ ಶವಗಳನ್ನ ಚಿತೆಯ ಮೇಲೆ ಸಿಬ್ಬಂದಿ ಅಮಾನವೀಯವಾಗಿ ಎಸೆದು ಅಂತ್ಯಕ್ರಿಯೆ ಮಾಡಿದ್ದಾರೆ.

    ಚಿತೆಯ ಮೇಲೆ ಎಸೆದು ಅಂತ್ಯಕ್ರಿಯೆ ಮಾಡುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಸ್ಮಶಾನದ ಅಕ್ಕಪಕ್ಕದಲ್ಲಿ ಮನೆಗಳಿದ್ದರೂ ಹೊರ ಭಾಗದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ. ಅಲ್ಲದೇ ಸ್ಮಶಾನ ಕಾವಲುಗಾರರು ಮತ್ತು ವಾಹನ ಚಾಲಕರ ಬಗ್ಗೆಯೂ ಪಾಲಿಕೆ ನಿರ್ಲಕ್ಷ್ಯವಹಿಸಿದೆ.

    ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದಾಶಿವನಗರ ಸ್ಮಶಾನ ಇದೆ. ಆದರೆ ಪಾಲಿಕೆ ಅಧಿಕಾರಿಗಳು ಕೊರೊನಾ ಸೋಂಕಿತರ ಅಂತ್ಯಕ್ರಿಯೆ ವೇಳೆ ಸ್ಮಶಾನ ಸಿಬ್ಬಂದಿಗೆ ಪಿಪಿಇ ಕಿಟ್ ನೀಡದೆ ಬೇಜವಾಬ್ದಾರಿ ತೋರಿಸಿದ್ದಾರೆ. ಸ್ಮಶಾನ ಸಿಬ್ಬಂದಿಗೆ ಪಿಪಿಇ ಕಿಟ್ ನೀಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೂ ಪಾಲಿಕೆ ಅಧಿಕಾರಿಗಳು ರಾಜ್ಯ ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಸೋಂಕಿತರ ಅಂತ್ಯಕ್ರಿಯೆ ವೇಳೆ ಪಿಪಿಇ ಕಿಟ್ ಧರಿಸದ ಸ್ಮಶಾನ ಸಿಬ್ಬಂದಿಯ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮತ್ತೊಂದೆಡೆ ನಮಗೆ ಸುರಕ್ಷತೆಯೇ ಇಲ್ಲ ಎಂದು ಶವ ಸಾಗಣೆ ವಾಹನದ ಚಾಲಕ ಹೇಳುತ್ತಿದ್ದಾರೆ. 12 ವರ್ಷಗಳಿಂದ ಅಂಬುಲೆನ್ಸ್ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ನಾಲ್ಕು ತಿಂಗಳಲ್ಲಿ ಅನೇಕ ಶವವನ್ನು ಸಾಗಿಸಿದ್ದೇವೆ. ದಿನಕ್ಕೆ ನಾಲ್ಕೈದು ಜನರು ಮೃತಪಟ್ಟ ಬಗ್ಗೆ ಫೋನ್ ಬರುತ್ತದೆ. ಆದರೆ ಶವ ಸಾಗಿಸುವ ವಾಹನದ ಚಾಲಕರಿಗೆ ಸುರಕ್ಷತೆಯೇ ಇಲ್ಲ. ಮಾಸ್ಕ್ ಆಗಲಿ, ಪಿಪಿಇ ಕಿಟ್ ಆಗಲಿ ನಮಗೆ ನೀಡುತ್ತಿಲ್ಲ. ಸರಿಯಾಗಿ ಸಂಬಳವನ್ನು ಕೂಡ ನೀಡುತ್ತಿಲ್ಲ ಎದು ಶವ ಸಾಗಿಸುವ ವಾಹನ ಚಾಲಕ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.