Tag: palace

  • ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ – ಸಿಬಿಐ ಕೋರ್ಟ್‍ಗೆ ಇಕ್ಬಾಲ್ ಅನ್ಸಾರಿ ಮನವಿ

    ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ – ಸಿಬಿಐ ಕೋರ್ಟ್‍ಗೆ ಇಕ್ಬಾಲ್ ಅನ್ಸಾರಿ ಮನವಿ

    – ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ
    – ಇನ್ನು ಮುಂದೆಯಾದರೂ ಹಿಂದೂ, ಮುಸ್ಲಿಮರು ಚೆನ್ನಾಗಿರೋಣ

    ಲಕ್ನೋ: ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲು ಇನ್ನೆರಡು ವಾರ ಬಾಕಿ ಇರುವಾಗಲೇ ಅಯೋಧ್ಯೆ ಭೂಮಿ ವಿವಾದ ಸಂಬಂಧ ದಾವೆ ದಾವೆ ಹೂಡಿದ್ದ ಇಕ್ಬಾಲ್ ಅನ್ಸಾರಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸುವಂತೆ ಮನವಿ ಮಾಡಿದ್ದಾರೆ.

    ಸಿಬಿಐ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 30ರಂದು ತೀರ್ಪು ಪ್ರಕಟಿಸಲು ನಿರ್ಧರಿಸಿದೆ. ಆರೋಪಿಗಳ ಪೈಕಿ ಬಿಜೆಪಿಯ ಹಿರಿಯ ನೇತಾರರು ಇದ್ದು, ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ವಿನಯ್ ಕಾಟಿಯಾರ್ ಸೇರಿ ಈ ಪ್ರಕರಣದಲ್ಲಿ 32 ಆರೋಪಿಗಳಾಗಿದ್ದಾರೆ. ತೀರ್ಪು ಪ್ರಕಟಿಸುವ ವೇಳೆ ಎಲ್ಲ ಆರೋಪಿಗಳು ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದೆ.

    ಈ ಕುರಿತು ಇಕ್ಬಾಲ್ ಅನ್ಸಾರಿ ಮಾತನಾಡಿ, ಶತಮಾನಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ಪ್ರಕಟಿಸಿದ್ದು, ದೇವಸ್ಥಾನ ನಿರ್ಮಾಣ ಕಾರ್ಯ ಸಹ ಈಗಾಗಲೇ ಆರಂಭವಾಗಿದೆ ಎಂದು ಅನ್ಸಾರಿ ಹೇಳಿದ್ದಾರೆ.

    ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳು ಸಾವನ್ನಪ್ಪಿದ್ದಾರೆ. ಅಲ್ಲದೇ ಈಗ ಇರುವವರಿಗೆ ಸಹ ತುಂಬಾ ವಯಸ್ಸಾಗಿದೆ. ಹೀಗಾಗಿ ಈ ಪ್ರಕರಣವನ್ನು ರದ್ದುಗೊಳಿಸುವ ಮೂಲಕ ಅಂತ್ಯ ಹಾಡಬೇಕು. ಅಲ್ಲದೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಯಾವುದೇ ವಿವಾದ ಉಳಿಯುವುದಿಲ್ಲ. ಇನ್ನು ಮುಂದೆ ಹಿಂದೂ, ಮುಸ್ಲಿಮರು ಸೌಹಾರ್ದಯುತರಾಗಿರಬೇಕು. ಪರಸ್ಪರ ಇತರರನ್ನು ಬದುಕಲು ಬಿಡಬೇಕು. ಈ ಮೂಲಕ ಸಾಮಾಜಿಕತೆಯನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.

    ಆರೋಪಿಗಳು?
    28 ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು, ಸೆ.30ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಸಿಬಿಐ ವಿಶೇಷ ಕೋರ್ಟ್ ತಿಳಿಸಿದೆ. ತೀರ್ಪು ನೀಡುವ ದಿನ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾ.ಸುರೇಂದ್ರ ಕುಮಾರ್ ಯಾದವ್ ಸೂಚಿಸಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಸೇರಿದಂತೆ 32 ಮಂದಿ ಆರೋಪಿಗಳಿದ್ದಾರೆ. 351 ಸಾಕ್ಷ್ಯ ಹಾಗೂ 600 ದಾಖಲಾತಿ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಸಿಬಿಐ ಹಾಜರುಪಡಿಸಿತ್ತು. ಸೆಪ್ಟೆಂಬರ್ 1ರಂದು ವಾದ ಮತ್ತು ಪ್ರತಿವಾದ ಮುಗಿದಿದ್ದು, ವಿಶೇಷ ನ್ಯಾಯಾಧೀಶರು ತೀರ್ಪು ಬರೆಯುತ್ತಿದ್ದಾರೆ ಎಂದು ಸಿಬಿಐ ಪರ ವಕೀಲ ಲಲಿತ್ ಸಿಂಗ್ ತಿಳಿಸಿದ್ದರು.

    2017ರ ಏಪ್ರಿಲ್ 19 ರಂದು ಪ್ರತಿನಿತ್ಯ ವಿಚಾರಣೆ ನಡೆಸಿ 2 ವರ್ಷದ ಒಳಗಡೆ ತೀರ್ಪು ಪ್ರಕಟಿಸುವಂತೆ ಸಿಬಿಐ ವಿಶೇಷ ಕೋರ್ಟ್‍ಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿತ್ತು. ಲಕ್ನೋ ಸಿಬಿಐ ನ್ಯಾಯಾಲಯದಲ್ಲಿ ಕರಸೇವಕರ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ 8 ವಿಐಪಿಗಳ ವಿರುದ್ಧ ರಾಯಬರೇಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. 2017ರ ಏಪ್ರಿಲ್‍ನಲ್ಲಿ ರಾಯಬರೇಲಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಲಕ್ನೋ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ವರ್ಗಾಯಿಸಿತ್ತು.

    32 ಮಂದಿ ಆರೋಪಿಗಳು ಯಾರು?
    ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಧೀರ್ ಕಕ್ಕರ್, ಸತೀಶ್ ಪ್ರಧಾನ್, ರಾಮ್ ಚಂದ್ರ ಖತ್ರಿ, ಸಂತೋಷ್ ದುಬೆ, ಓಂ ಪ್ರಕಾಶ್ ಪಾಂಡೆ, ಕಲ್ಯಾಣ್ ಸಿಂಗ್, ಉಮಾ ಭಾರತಿ, ರಾಮ್ ವಿಲಾಸ್ ವೇದಾಂತಿ, ವಿನಯ್ ಕಟಿಯಾರ್, ಪ್ರಕಾಶ್ ಶರ್ನಾ, ಗಾಂಧಿ ಸಿಂಗ್ ಕಮಲೇಶ್ ತ್ರಿಪಾಠಿ, ಬ್ರಿಜ್ ಭೂಷಣ್ ಸಿಂಗ್, ರಾಮ್ಜಿ ಗುಪ್ತಾ, ಮಹಂತ್ ನೃತ್ಯ ಗೋಪಾಲ್ ದಾಸ್, ಚಂಪತ್ ರಾಯ್, ಸಾಕ್ಷಿ ಮಹಾರಾಜ್, ವಿನಯ್ ಕುಮಾರ್ ರೈ, ನವೀನ್ ಭಾಯ್ ಶುಕ್ಲಾ, ಧರ್ಮದಾಸ್, ಜೈ ಭಗವಾನ್ ಗೋಯೆಲ್, ಅಮರನಾಥ್ ಗೋಯೆಲ್, ಸಾಧ್ವಿ ರಿತಂಬರ, ಪವನ್ ಪಾಂಡೆ, ವಿಜಯ್ ಬಹದ್ದೂರ್ ಸಿಂಗ್, ಆರ್‍ಎಂ ಶ್ರೀವತ್ಸ, ಧರ್ಮೇಂದ್ರ ಸಿಂಗ್ ಗುಜ್ಜರ್.

  • ರಾಮ ಮಂದಿರ ನಿರ್ಮಾಣ – ಪಾಕ್ ಟೀಕೆಗೆ ಭಾರತದ ಎಚ್ಚರಿಕೆ

    ರಾಮ ಮಂದಿರ ನಿರ್ಮಾಣ – ಪಾಕ್ ಟೀಕೆಗೆ ಭಾರತದ ಎಚ್ಚರಿಕೆ

    ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದು, ಈ ಕುರಿತು ಪಾಕಿಸ್ತಾನದ ಟೀಕೆಗೆ ಭಾರತ ಖಡಕ್ ವಾರ್ನಿಂಗ್ ನೀಡಿದೆ.

    ದೇಶದ ಆಂತರಿಕ ವಿಚಾರದಲ್ಲಿ ನೀವು ತಲೆ ಹಾಕಬೇಡಿ ಎಂದು ಭಾರತ ಎಚ್ಚರಿಸಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಪ್ರತಿಕ್ರಿಯಿಸಿ, ಭಾರತದ ಆಂತರಿಕ ವಿಷಯದ ಬಗ್ಗೆ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ’ದ ಪತ್ರಿಕಾ ಹೇಳಿಕೆ ಗಮನಕ್ಕೆ ಬಂದಿದೆ. ಪಾಕಿಸ್ತಾನವು ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಹಾಗೂ ಕೋಮು ಪ್ರಚೋದನೆ ನೀಡುವ ಕೆಲಸದಿಂದ ದೂರವಿದ್ದರೆ ಒಳ್ಳೆದು ಎಂದು ಎಚ್ಚರಿಸಿದ್ದಾರೆ.

    ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲಿಸುವ, ತನ್ನ ರಾಷ್ಟ್ರದ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸುವ ದೇಶದ ಈ ನಡೆ ಅಚ್ಚರಿಯಲ್ಲ. ಆದರೆ ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಪಾಕ್ ಹೇಳಿಕೆ ನೀಡುವುದು ವಿಷಾದನೀಯ ಎಂದು ಹೇಳಿದ್ದಾರೆ.

    ಆಗಸ್ಟ್ 5ರಂದು ಇಡೀ ಭಾರತೀಯರು 500 ವರ್ಷದಿಂದ ಕಾಯುತ್ತಿದ್ದ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ. ಆದರೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಬುಧವಾರ ರಾಮಮಂದಿರ ದೇವಾಲಯವನ್ನು ನಿರ್ಮಿಸುವುದನ್ನು ಖಂಡಿಸಿದೆ. ಜೊತೆಗೆ ರಾಮಮಂದಿರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ದೋಷಪೂರಿತವಾಗಿದೆ ಎಂದು ಆರೋಪ ಮಾಡಿತ್ತು.

  • ಮೂರು ದಿನ ಮೈಸೂರು ಅರಮನೆ ಪ್ರವಾಸಿಗರಿಗೆ ಬಂದ್

    ಮೂರು ದಿನ ಮೈಸೂರು ಅರಮನೆ ಪ್ರವಾಸಿಗರಿಗೆ ಬಂದ್

    – ನಾಗರಹೊಳೆ, ಬಂಡಿಪುರ ಸಫಾರಿ ಮತ್ತೆ ಬಂದ್

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಉಲ್ಬಣವಾಗುತ್ತಿದ್ದು, ಮೈಸೂರು ಅರಮನೆಗೂ ಕೊರೊನಾ ಭೀತಿ ಕಾಡುತ್ತಿದೆ. ಮೂರು ದಿನ ಅರಮನೆಯನ್ನು ಪ್ರವಾಸಿಗರಿಗೆ ಬಂದ್ ಮಾಡಲಾಗಿದೆ.

    ಅರಮನೆಯಲ್ಲಿ ಒಂಟೆ ನೋಡಿಕೊಳ್ಳುವ ವ್ಯಕ್ತಿಯ ಮಗನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೂರು ದಿನ ಅರಮನೆಯನ್ನು ಬಂದ್ ಮಾಡಲಾಗಿದೆ. ಇಂದು ಅರಮನೆ ಆವರಣದಲ್ಲಿ ಸ್ಯಾನಿಟೈಸ್ ಮಾಡಲು ಸಿದ್ಧತೆ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ನಿರ್ಬಂಧ ಮಾಡಲಾಗಿದೆ. ಇವತ್ತು ಒಂದು ದಿನ ಅರಮನೆ ಆವರಣ ಸ್ಯಾನಿಟೈಸ್‍ಗಾಗಿ ನಿರ್ಬಂಧ ಮಾಡಲಾಗಿದೆ.

    ಅರಮನೆ ಹಿಂಬದಿ ಆವರಣದಲ್ಲಿ ಒಂಟೆಯನ್ನು ಕಟ್ಟಲಾಗಿದೆ. ಇಲ್ಲಿ ಒಂಟೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಮನೆಯಲ್ಲಿರುವ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಯಾವುದೇ ಆತಂಕ ಪಡುವಾಗಿಲ್ಲ, ಮುಂಜಾಗ್ರತ ಕ್ರಮ ಕೈಗೊಂಡಿದ್ದೇವೆ ಎಂದು ಅರಮನೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

    ಇನ್ನೂ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ನಾಗರಹೊಳೆ, ಬಂಡಿಪುರ ಸಫಾರಿಯನ್ನು ಮತ್ತೆ ಬಂದ್ ಮಾಡಲಾಗಿದೆ. ಸಫಾರಿ ಬಂದ್ ಮಾಡಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. ಗುರುವಾರದಿಂದ ಹೆಚ್.ಡಿ.ಕೋಟೆ ತಾಲೂಕಿನಾದ್ಯಂತ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ಪ್ರವಾಸಿಗರಿಗೆ ಸೌಲಭ್ಯ ನೀಡುವಂತಿಲ್ಲ. ನಾಗರಹೊಳೆ ಹಾಗೂ ಬಂಡಿಪುರದಲ್ಲಿ ಸಫಾರಿಗೂ ಅವಕಾಶ ಇಲ್ಲ. ಸದ್ಯ ಇರುವ ಪ್ರವಾಸಿರನ್ನ ಅವಧಿ ಮುಗಿಸಿ ವಾಪಸ್ ಕಳುಹಿಸಿ. ಮುಂದಿನ ಆದೇಶದವರೆಗೂ ಇಡೀ ತಾಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.

    ಈಗಾಗಲೇ ಮೂರನೇ ಆಷಾಢ ಶುಕ್ರವಾರ ಹಾಗೂ ವಾರಾಂತ್ಯ ಶನಿವಾರ, ಭಾನುವಾರದಂದು ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧವಿದೆ. ಇದರ ಜೊತೆಗೆ ಸೋಮವಾರ ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವವಿರುವ ಕಾರಣ ಹಾಗೂ ಆಷಾಢ ಮಾಸದ ಕಡೆಯ ಮಂಗಳವಾರ ಸೇರಿ ಸತತ ಐದು ದಿನಗಳ ಕಾಲ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಮಾಡಲಾಗಿದೆ.

  • ವಿಶ್ವವಿಖ್ಯಾತ ಮೈಸೂರು ಅರಮನೆ ರೀ ಓಪನ್

    ವಿಶ್ವವಿಖ್ಯಾತ ಮೈಸೂರು ಅರಮನೆ ರೀ ಓಪನ್

    – ಶನಿವಾರ, ಭಾನುವಾರ ಎಂಟ್ರಿ ಇಲ್ಲ

    ಮೈಸೂರು: ಕೊರೊನಾ ಹಿನ್ನೆಲೆಯ ಲಾಕ್‍ಡೌನ್ 5.0 ಸಡಿಲಿಕೆಯಾಗಿದ್ದು, ಸೋಮವಾರದಿಂದ ದೇವಸ್ಥಾನ, ಮಸೀದಿ ಮತ್ತು ಚರ್ಚ್ ತೆರೆಯುತ್ತಿವೆ. ಇದೀಗ ಮೈಸೂರಿನ ಪ್ರಮುಖ ಪ್ರವಾಸಿ ಕೇಂದ್ರವಾದ ಅರಮನೆ ಪುನರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂದರೆ ನಾಳೆಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆ ರೀ ಓಪನ್ ಆಗಲಿದೆ.

    ಸೋಮವಾರದಿಂದ ಪ್ರವಾಸಿಗ ವೀಕ್ಷಣೆಗೆ ಮೈಸೂರು ಅರಮನೆ ಲಭ್ಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಇನ್ನೂ 10 ವರ್ಷದೋಳಗಿನ ಮಕ್ಕಳು ಹಾಗೂ 65 ವರ್ಷದ ಮೇಲ್ಪಟ ವೃದ್ಧರು ಅರಮನೆಗೆ ಬರುವುದನ್ನು ನಿಷೇಧಿಸಲಾಗಿದೆ.

    ಪ್ರವಾಸಿಗರ ಲಗೇಜ್‍ಗೆ ಸ್ಯಾನಿಟೈಸರ್ ಮಾಡಿ ಅರಮನೆಗೆ ಎಂಟ್ರಿ ನೀಡಲಾಗುತ್ತದೆ. ಒಂದು ಗಂಟೆಗೆ ಸುಮಾರು 350 ಮಂದಿಗೆ ಅರಮನೆ ವೀಕ್ಷಣೆಗೆ ಅವಕಾಶವಿದ್ದು, 6 ಅಡಿ ಅಂತರದಲ್ಲಿ ಅರಮನೆ ನೋಡಲು ಅವಕಾಶವಿದೆ. ಪ್ರವಾಸಿಗರು ಅವರೇ ನೀರಿನ ಬಾಟೆಲ್ ತರಬೇಕು. ಅಲ್ಲದೆ ನೋಟ್‍ಗಳನ್ನು ಸಹ ಸ್ಯಾನಿಟೈಸರ್ ಮಾಡಲಾಗುತ್ತದೆ ಈ ಮೂಲಕ ಕೇಂದ್ರದ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

    ಈ ಬಗ್ಗೆ ಮಾತನಾಡಿದ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕರಾದ ಸುಬ್ರಹ್ಮಣ್ಯ ಅವರು, ಒಂದು ದಿನ ಸುಮಾರು 3 ರಿಂದ 4 ಸಾವಿರ ಪ್ರವಾಸಿಗರು ಅರಮನೆ ವೀಕ್ಷಣೆ ಮಾಡಬಹುದು. ಸರ್ಕಾರ ಸೂಚಿಸಿರುವಂತೆ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಸದ್ಯಕ್ಕೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇನ್ನೂ ಶನಿವಾರ ಮತ್ತು ಭಾನುವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಹೀಗಾಗಿ ಸೋಮವಾರದಿಂದ ಶುಕ್ರವಾರದವರೆಗೂ ಮಾತ್ರ ಅರಮನೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಅರಮನೆ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

  • ಪ್ಯಾಲೇಸ್‍ನಲ್ಲಿ ಮಗಳಿಗಾಗಿ ಸ್ವರ್ಗ ಧರೆಗಿಳಿಸಿದ ಸಚಿವ ಶ್ರೀರಾಮುಲು

    ಪ್ಯಾಲೇಸ್‍ನಲ್ಲಿ ಮಗಳಿಗಾಗಿ ಸ್ವರ್ಗ ಧರೆಗಿಳಿಸಿದ ಸಚಿವ ಶ್ರೀರಾಮುಲು

    – ಏನ್ ಕಾಸ್ಟ್ಲಿ ಮ್ಯಾರೇಜ್ ಗುರೂ..

    ಬೆಂಗಳೂರು: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರು 2016ರಲ್ಲಿ ತಮ್ಮ ಮಗಳ ಮದುವೆಯನ್ನು ಎಲ್ಲರ ಹುಬ್ಬೇರಿಸುವಂತೆ ಅದ್ಧೂರಿಯಾಗಿ ನಡೆಸಿದ್ದರು. ಇದೀಗ ಸಚಿವ ಶ್ರೀರಾಮುಲು ತಮ್ಮ ಮಗಳ ಮದುವೆಗಾಗಿ ಕೋಟಿ ಕೋಟಿ ವೆಚ್ಚದಲ್ಲಿ ಬೆಂಗಳೂರು ಪ್ಯಾಲೇಸ್‍ನಲ್ಲಿ ಮದುವೆ ಮಂಟಪ ಸಿದ್ಧ ಮಾಡಿಸುತ್ತಿದ್ದಾರೆ.

    ಒಂಬತ್ತು ದಿನಗಳ ಕಾಲ ರಾಮುಲು ಮಗಳ ಮದುವೆ ನಡೆಯಲಿದ್ದು, ಮಾರ್ಚ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ರಾಮುಲು ಪ್ಯಾಲೇಸ್ ನಲ್ಲಿ ಸ್ವರ್ಗ ಧರೆಗಿಳಿಸಿದ್ದಾರೆ. ಸುಮಾರು 200 ಸಿಬ್ಬಂದಿ ಮದುವೆ ಸಿದ್ಧತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

    ಪ್ಯಾಲೇಸ್‍ನಲ್ಲಿ ಅದ್ಭುತ ಮಂಟಪ ರೆಡಿಯಾಗುತ್ತಿದ್ದು, ಇನ್ನೊಂದು ಐಷಾರಾಮಿ ಮದುವೆಗೆ ವೇದಿಕೆ ರೆಡಿಯಾಗುತ್ತಿದೆ. ಹಂಪಿ ವಿರೂಪಾಕ್ಷ ದೇಗುಲ ಸೇರಿದಂತೆ ಕರ್ನಾಟಕದ ಅನೇಕ ದೇಗುಲದ ಸೆಟ್ ರಾಮುಲು ಮಗಳ ವಿವಾಹದಲ್ಲಿ ಅನಾವರಣಗೊಳ್ಳಲಿದೆ. ಏನಿಲ್ಲ ಅಂದರೂ ಒಂಬತ್ತು ದಿನದ ಮದುವೆಗೆ ಬರೋಬ್ಬರಿ 500 ಕೋಟಿ ಖರ್ಚು ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ ಶ್ರೀರಾಮುಲು ಮಾತ್ರ ಇದು ಸಿಂಪಲ್ ಮ್ಯಾರೇಜ್ ಎಂದು ಹೇಳಿಬಿಟ್ಟಿದ್ದಾರೆ.

  • ಅರಮನೆ ಆವರಣದಲ್ಲಿ ಶಿವರಾತ್ರಿ ಸಂಭ್ರಮ – 11 ಕೆಜಿಯ ಚಿನ್ನದ ಕೊಳಗ ಧರಿಸಿದ ತ್ರಿನೇಶ್ವರ

    ಅರಮನೆ ಆವರಣದಲ್ಲಿ ಶಿವರಾತ್ರಿ ಸಂಭ್ರಮ – 11 ಕೆಜಿಯ ಚಿನ್ನದ ಕೊಳಗ ಧರಿಸಿದ ತ್ರಿನೇಶ್ವರ

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಶಿವರಾತ್ರಿ ಸಂಭ್ರಮ ಜೋರಾಗಿದ್ದು, ಅರಮನೆ ಆವರಣದಲ್ಲೂ ಮಹಾದೇವನ ಪೂಜೆಯನ್ನು ಜೋರಾಗಿಯೇ ನೇರವೇರಿಸಲಾಯಿತು.

    ಅರಮನೆಯ ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿ ತ್ರಿನೇಶ್ವರ ಸ್ವಾಮಿಗೆ ಚಿನ್ನದ ಕೊಳಗ ಹಾಕಿ ಪೂಜೆ ಸಲ್ಲಿಸಲಾಗಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ ದಿನದಂದು ಅರಮನೆಯಿಂದ 11 ಕೆಜಿಯ ಚಿನ್ನದ ಕೊಳಗವನ್ನು ತ್ರಿನೇಶ್ವರ ಸ್ವಾಮಿಗೆ ನೀಡಲಾಗಿದೆ.

    ಮುಂಜಾನೆ 5.30 ನಿಮಿಷಕ್ಕೆ ದೇಗುಲದಲ್ಲಿ ಪೂಜಾ ಕೈಂಕರ್ಯ ಶುರುವಾಗಿತ್ತು. ಪಂಚಾಮೃತ, ಮಹಾನ್ಯಾಸಪೂರ್ವಕ ಏಕವಾಹ, ಹಣ್ಣುಗಳಿಂದ ದೇವರಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕದ ಬಳಿಕ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಯಿತು. ಇತ್ತ ಸರತಿ ಸಾಲಿನಲ್ಲಿ ನಿಂತು ಭಕ್ತರು ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ. ವರ್ಷಕ್ಕೊಂದು ಬಾರಿ ಮಾತ್ರ ಚಿನ್ನದ ಮುಖವಾಡ ಧರಿಸಿ ಇಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.

  • ಅರಮನೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಂದೂಡಿಕೆ

    ಅರಮನೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಂದೂಡಿಕೆ

    ಮೈಸೂರು: ಪೇಜಾವರ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ವರ್ಷಾಂತ್ಯದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮನರಂಜನಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

    ವರ್ಷಾಂತ್ಯ ಹಾಗೂ ಹೊಸ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಡಿಸೆಂಬರ್ 31ರ ಮಧ್ಯರಾತ್ರಿ 12ಕ್ಕೆ ಯೋಜಿಸಿದ್ದ ಶಬ್ದರಹಿತ ಪಟಾಕಿ ಸಿಡಿಸುವ ಕಾರ್ಯಕ್ರಮ ಮುಂದೂಡಲಾಗಿದೆ. ಪಟಾಕಿ ಸಿಡಿಸುವ ಕಾರ್ಯಕ್ರಮವನ್ನು ಜನವರಿ 1ರ ರಾತ್ರಿ 9ಕ್ಕೆ ಮರುನಿಗದಿ ಮಾಡಲಾಗಿದೆ.

    ಪೊಲೀಸ್ ಬ್ಯಾಂಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನವರಿ 1 ಮತ್ತು 2ಕ್ಕೆ ಮುಂದೂಡಲಾಗಿದೆ. ಅಲ್ಲದೆ ಶೋಕಾಚರಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅರಮನೆ ದೀಪಾಲಂಕಾರವು ಇರುವುದಿಲ್ಲ ಎಂದು ಮೈಸೂರು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    ಮಹಾಸಂತ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಭಾನುವಾರ ಕೃಷ್ಣನಲ್ಲಿ ಲೀನರಾಗಿದ್ದಾರೆ. ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರಶ್ರೀಗಳ ಅಂತಿಮ ವಿಧಿವಿಧಾನಗಳು ಮಾಧ್ವ ಪರಂಪರೆಗೆ ಅನುಗುಣವಾಗಿ ಮಾಡಲಾಗಿದೆ.

  • ತಾಯಿಗಾಗಿ ಬೆಂಗ್ಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ ಮಗ

    ತಾಯಿಗಾಗಿ ಬೆಂಗ್ಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ ಮಗ

    ಬೆಂಗಳೂರು: ದಸರಾ ಬಂದರೆ ಕಣ್ಮುಂದೆ ಬರುವುದೇ ಮೈಸೂರು, ಮೈಸೂರು ಅರಮನೆ, ಅಂಬಾರಿ ಜೊತೆಗೆ ದಸರಾ ಹಬ್ಬದ ವಿಶೇಷ ಬೊಂಬೆಗಳು. ಬೊಂಬೆಗಳ ಹಬ್ಬದಲ್ಲಿ ಇಲ್ಲೊಬ್ಬ ಮಗ ತನ್ನ ತಾಯಿಗಾಗಿ ಬೆಂಗಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ್ದಾನೆ.

    ಅನೇಕ ವರ್ಷಗಳಿಂದ ತಾಯಿ ತ್ರಿಪುರ ಸಂಪತ್‍ಗೆ ಮನೆಯಲ್ಲಿ ನೂರಾರು ಬೊಂಬೆಗಳನ್ನು ಕೂರಿಸಿ ಹಬ್ಬವನ್ನು ಮಾಡಿಕೊಂಡು ಬಂದಿದ್ದಾರೆ. ದಸರಾ ಬೊಂಬೆಗಳ ಜೊತೆ ಅರಮನೆಯ ಮಾದರಿಯನ್ನು ತಂದು ಕೂರಿಸೋಣ ಎಂದು ತಾಯಿ ಆಸೆಪಟ್ಟಿದ್ದಾರೆ. ಮಗ ವಸಂತ ಕುಮಾರ್ ಹೊರಗಿನಿಂದ ಯಾಕೆ ತರುವುದು ನಾನೇ ಅರಮನೆ ಮಾಡಿಕೊಡುತ್ತೇನೆ ಎಂದು ಅರಮನೆಯನ್ನು ಮರದಿಂದ ಮಾಡಿದ್ದಾರೆ.

    ತಾಯಿಯ ಆಸೆಯನ್ನು ಪೂರೈಸಲು ನಮ್ಮ ಯಜಮಾನರು ಎಂಟು ತಿಂಗಳು ಶ್ರಮ ಪಟ್ಟಿದ್ದಾರೆ. ರಾತ್ರಿ ಕೆಲಸದಿಂದ ಬಂದ ಮೇಲೆ ಅರಮನೆ ಮಾಡುವ ಕೆಲಸದಲ್ಲಿ ತೊಡಗುತ್ತಿದ್ದರು. ಮೈಸೂರು ಅರಮನೆ ಹೇಗಿದೇಯೋ ಅದೇ ರೀತಿ ಪೈಟಿಂಗ್ ಮಾಡಿ ಲೈಟ್ಸ್ ಹಾಕಿ ಮಾಡಿದರು ಎಂದು ವಸಂತ ಕುಮಾರ್ ಪತ್ನಿ ನಂದಿನಿ ತಿಳಿಸಿದ್ದಾರೆ.

    ದಸರಾ ಹಬ್ಬಕ್ಕಾಗಿ ತಾಯಿಯ ಆಸೆಯನ್ನು ಪೂರೈಸಲು ಅರಮನೆ ಮಾಡಿರುವ ವಸಂತ ಕುಮಾರ್ ಅವರ ಕಲೆಯನ್ನು ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಮೊದಲ ಸ್ಥಾನ ಪಡೆದ 60 ವರ್ಷದ ಅಜ್ಜಿ

    ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಮೊದಲ ಸ್ಥಾನ ಪಡೆದ 60 ವರ್ಷದ ಅಜ್ಜಿ

    -ಅತ್ತೆ-ಸೊಸೆಯರಿಂದ ಅಡುಗೆ, ಬ್ಯಾನರ್ ನೋಡಿ ಗರಂ ಆದ ಸೋಮಣ್ಣ

    ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇಂದು ದಸರಾದ ಎರಡನೇ ದಿನ ಅರಮನೆ ನಗರಿಯಲ್ಲಿ ವಿವಿಧ ಕಾರ್ಯಕ್ರಮಗಳು ಜನರಿಗೆ ಮಸ್ತ್ ಮನರಂಜನೆ ನೀಡಿತು.

    ಭಾನುವಾರ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ವಿದ್ಯುಕ್ತವಾದ ಚಾಲನೆ ಸಿಕ್ಕಿದೆ. ಇಂದು ಎರಡನೇ ದಿನದ ದಸರೆಯನ್ನು ಸ್ತ್ರೀಯರ ಕಲಾನೈಪುಣ್ಯತೆಯಾದ ರಂಗೋಲಿ ಸ್ಪರ್ಧೆಯಿಂದ ಆರಂಭಗೊಳಿಸಲಾಯಿತು. ಅಂಬಾ ವಿಲಾಸ ಅರಮನೆಯ ಮುಂಭಾಗ ಆಯೋಜಿಸಿದ್ದ, ದಸರಾ ರಂಗೋಲಿ ಸ್ಪರ್ಧೆಗೆ ಶಾಸಕ ಆರ್. ರಾಮದಾಸ್ ಚಾಲನೆ ನೀಡಿದರು. ಇಲ್ಲಿ ಮಹಿಳೆಯರು ಚಿತ್ತಾರಗಳನ್ನು ತುಂಬಿದ ರಂಗೋಲಿಗಳನ್ನು ಬಿಡಿಸುವ ಮೂಲಕ ಅರಮನೆಯ ಆವರಣವನ್ನು ವರ್ಣರಂಚಿತಗೊಳಿಸಿದರು.

    ಇನ್ನೊಂದೆಡೆ ಜಗನ್ಮೋಹನ ಅರಮನೆಯಲ್ಲಿ ಮಕ್ಕಳಿಗಾಗಿ ನಡೆಯುತ್ತಿರುವ ಚಿಣ್ಣರ ದಸರಾಗೆ ವಿ.ಸೋಮಣ್ಣ ಚಾಲನೆ ನೀಡಿದರು. ಮಹಿಳಾ ದಸರಾಗೆ ಬಂದರೆ ಅಲ್ಲಿ ಹಾಲಿ ಮಾಜಿ ಎಂದು ಬಿಜೆಪಿಯ ಮಹಿಳೆಯರು ಹಾಗೂ ಸಚಿವರು ಗರಂ ಆಗಿದರು. ಜೆಕೆ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾದ ಬ್ಯಾನರ್ ಅಲ್ಲಿ ಮಾಜಿ ಸಚಿವೆ ಉಮಾಶ್ರೀ ಫೋಟೋ ಇದ್ದ ಕಾರಣ ಸಚಿವ ಸೋಮಣ್ಣ ಮತ್ತು ಬಿಜೆಪಿಯ ಮಹಿಳೆಯರು ಗರಂ ಆಗಿದರು.

    ಒಂದು ಕಡೆ ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಮೂಲಕ ಮನರಂಜನೆ ದೊರೆಯುತ್ತಿದ್ರೆ, ಇನ್ನೊಂದೆಡೆ ಆಹಾರ ಮೇಳದಲ್ಲಿ ನೋಡುಗರ ಬಾಯಲ್ಲಿ ನೀರೂರಿಸುವ ಹಾಗೂ ಬಿದ್ದು ನಕ್ಕು ನಲಿಯುವ ಸ್ಪರ್ಧೆಗಳು ನಡೆದವು. ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಅತ್ತೆ-ಸೊಸೆ ಜೋಡಿ ಅಡುಗೆ ಮಾಡುವ ಸ್ಪರ್ಧೆ ಕಮಾಲ್ ಮಾಡಿತು. ಅತ್ತೆ-ಸೊಸೆಯರಿಬ್ಬರು ಕೂಡಿಗೊಂಡು ಅಕ್ಕಿ ರೊಟ್ಟಿ ಮತ್ತು ಎಣಗಾಯಿ ಪಲ್ಯ ಮಾಡುತ್ತಿದ್ದು, ಎಲ್ಲರ ಬಾಯಲ್ಲಿ ನೀರೂರಿಸುವಂತೆ ಇತ್ತು.

    ಮಹಿಳೆಯರಿಗಾಗಿಯೇ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆ ನೋಡುಗರು ನಕ್ಕು ನಲಿಯುವುದರ ಜೊತೆಗೆ ಬಾಯಿಯ ಮೇಲೆ ಬೆರಳಟ್ಟುಕೊಳ್ಳುವ ಹಾಗೆ ಮಾಡಿತು. ಈ ಸ್ಪರ್ಧೆಯಲ್ಲಿ 60 ವರ್ಷದ ಅಜ್ಜಿ ಸರೋಜಮ್ಮ ಒಂದೇ ನಿಮಿಷದಲ್ಲಿ 6 ಇಡ್ಲಿ ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು.

    ದಸರಾ ಮಹೋತ್ಸವ ಮೈಸೂರಿಗೆ ವಿಶೇಷ ಮೆರಗನ್ನು ನೀಡುತ್ತಿದ್ದು, ಹಗಲಿನ ವೇಳೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುತ್ತಿದ್ರೆ, ರಾತ್ರಿಯ ವೇಳೆ ವಿದ್ಯುತ್ ಅಲಂಕಾರದ ಮೂಲಕ ಕೈಲಾಸವೇ ಧರೆಗಿಳಿದಂತೆ ಬಾಸವಾಗುತ್ತಿದೆ. ಈ ರಂಗು ಇನ್ನೂ ಎಂಟು ದಿನಗಳ ಕಾಲ ಮೈಸೂರನ್ನು ಗತಕಾಲಕ್ಕೆ ಕರೆದೊಯ್ಯಲಿದೆ.

  • ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿದೆ ಸಾಂಸ್ಕೃತಿಕ ನಗರಿ- ಚಾಮುಂಡಿ ಬೆಟ್ಟಕ್ಕೆ ರಾತ್ರಿ ಸಂಚಾರ ನಿಷೇಧ

    ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿದೆ ಸಾಂಸ್ಕೃತಿಕ ನಗರಿ- ಚಾಮುಂಡಿ ಬೆಟ್ಟಕ್ಕೆ ರಾತ್ರಿ ಸಂಚಾರ ನಿಷೇಧ

    ಮೈಸೂರು: ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಇಂದು ಸಂಜೆಯಿಂದಲೇ ಅರಮನೆಯಲ್ಲಿ ಸಾಂಸ್ಕೃತಿಕ ವೈಭವ ಆರಂಭವಾಗಲಿದೆ.

    ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸಲು ಮೈಸೂರು ಸಿಂಗಾರಗೊಂಡಿದೆ. ಇಂದು ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 12 ರವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆ ಆವರಣದಲ್ಲಿ ನಡೆಯಲಿವೆ. 12 ಗಂಟೆಗೆ ಸರಿಯಾಗಿ ಪಟಾಕಿ, ಬಾಣಬಿರುಸುಗಳನ್ನು ಸಿಡಿಸಲು ಎಲ್ಲಾ ತಯಾರಿಯನ್ನು ಕೂಡ ಮಾಡಿಕೊಳ್ಳಲಾಗಿದೆ. ಈ ಸಂತೋಷದ ಮಧ್ಯೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಇಂದು ರಾತ್ರಿ ಚಾಮುಂಡಿ ಬೆಟ್ಟಕ್ಕೆ ಸಂಚಾರ ನಿಷೇಧಿಸಲಾಗಿದೆ.

    ಚಾಮುಂಡಿ ಬೆಟ್ಟಕ್ಕೆ ರಾತ್ರಿ 10ರಿಂದ ಬೆಳಗಿನ ಜಾವ 6ರವರೆಗೆ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಹಾಗೆಯೇ ಹಿನಕಲ್ ಫ್ಲೈಓವರ್‌ನಲ್ಲೂ ಕೂಡ ಹೊಸ ವರ್ಷ ಆಚರಣೆ ಹಿನ್ನೆಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗವಾಗಿ ಇಂದು ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲದೆ ನಗರದ ಹೋಟೆಲ್, ಕ್ಲಬ್, ರೆಸ್ಟೋರೆಂಟ್, ರೆಸಾರ್ಟ್, ಬಾರ್ ಗಳಲ್ಲಿ ಮಧ್ಯರಾತ್ರಿ 1ರವರೆಗೆ ಮದ್ಯ ಸರಬರಾಜು ಮಾಡಬೇಕಾದರೆ ಅಬಕಾರಿ ಇಲಾಖೆ ಅನುಮತಿ ಕಡ್ಡಾಯವಾಗಿ ಪಡೆದಿರಬೇಕು. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv