Tag: pakisthan

  • ಎಲ್ಲರಿಗೂ ದೇಶ, ಸೈನಿಕರ ಚಿಂತೆಯಾದರೆ ಬಿಎಸ್‍ವೈಗೆ ಸೀಟಿನ ಚಿಂತೆ: ಯು.ಟಿ ಖಾದರ್

    ಎಲ್ಲರಿಗೂ ದೇಶ, ಸೈನಿಕರ ಚಿಂತೆಯಾದರೆ ಬಿಎಸ್‍ವೈಗೆ ಸೀಟಿನ ಚಿಂತೆ: ಯು.ಟಿ ಖಾದರ್

    ಬೆಳಗಾವಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಈ ವೇಳೆ ಎಲ್ಲರಿಗೂ ದೇಶ ಹಾಗೂ ಸೈನಿಕರ ಚಿಂತೆಯಾದರೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಟೀಕಿಸಿದ್ದಾರೆ.

    ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿಯ ಟಿಳಕವಾಡಿಯಲ್ಲಿ ನಾಥ ಪೈ ಉದ್ಯಾನವನ ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶ ಹಾಗೂ ಸೈನಿಕರ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿರಬೇಕು. ಇಂಥ ವಿಷಯಗಳಲ್ಲಿ ರಾಜಕೀಯ ಮಾಡದೇ ವಿಶ್ವಕ್ಕೆ ಏಕತೆ ಸಂದೇಶ ಸಾರಬೇಕು ಎಂದರು.

    ಏರ್ ಸ್ಟ್ರೈಕ್‍ನಿಂದ 22 ಎಂಪಿ ಸೀಟು ಗೆಲ್ಲುವ ಬಿಎಸ್‍ವೈ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ದೇಶದ ಸೈನ್ಯ ಮತ್ತು ಭದ್ರತೆ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕೆಲವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಈ ರೀತಿ ಮಾಡುವುದು ಎಲ್ಲರಿಗೂ ಕೂಡ ಕಪ್ಪು ಚುಕ್ಕೆ. ಎಲ್ಲರಿಗೂ ಕೂಡ ದೇಶದ ಮತ್ತು ಸೈನಿಕರ ಚಿಂತೆಯಾದರೆ ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಮುಂಬೈ ಸ್ಫೋಟದ ವೇಳೆ ಚಿತ್ರೀಕರಣ ನೋಡಲು ಅಲ್ಲಿನ ಮುಖ್ಯಮಂತ್ರಿಯ ಮಗ ಮತ್ತು ನಿರ್ದೇಶಕ ಹೋಗಿದ್ದಕ್ಕೆ ಅಂದು ಮುಖ್ಯಮಂತ್ರಿ ಅವರನ್ನು ಬದಲಿಸಲಾಗಿತ್ತು. ಬಹಿರಂಗವಾಗಿ ಹೇಳಿಕೆ ನೀಡಿರುವ ಬಿಎಸ್‍ವೈ ವಿರುದ್ಧ ಬಿಜೆಪಿ ಹೈಕಮಾಂಡ್ ಯಾವ ಕ್ರಮ ಜರುಗಿಸಲಿದೆ ಎನ್ನುವದನ್ನು ದೇಶಕ್ಕೆ ತೋರಿಸಲಿ ಎಂದು ಸವಾಲು ಹಾಕಿದರು.

    ಶಾಸಕ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಫೈಟ್ ವಿಡಿಯೋ ವಿಚಾರ ಮಾತನಾಡಿ, ಅವರಿಬ್ಬರ ನಡುವೆ ಹೆಣ್ಣುಮಗಳ ವಿಚಾರವಾಗಿ ಜಗಳವಾಗಿರುವುದು ನಂಬಲು ಸಾಧ್ಯವಿಲ್ಲ. ವೈಯುಕ್ತಿಕ ವಿಚಾರಕ್ಕಾಗಿ ಜಗಳ ನಡೆದಿದೆ. ಹೆಣ್ಣುಮಗಳ ವಿಷಯವಾಗಿ ಅವರಿಬ್ಬರ ಮಧ್ಯೆ ಜಗಳವಾಗಿದ್ದು ನನಗೆ ಗೊತ್ತಿಲ್ಲ. ಇದನ್ನು ನಾನು ನೋಡಿಯೂ ಇಲ್ಲ ಕೇಳಿಯೂ ಇಲ್ಲ. ಅವರಿಬ್ಬರು ಸಹೋದರರಂತೆ ಇದ್ದಾರೆ. ಜಗಳ ಕೆಟ್ಟಗಳಿಗೆಯಲ್ಲಿ ಆಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗುತ್ತದೆ. ಮುಂದೆ ಎಲ್ಲವೂ ಸರಿ ಹೋಗಲಿದೆ ಎನ್ನುವ ವಿಶ್ವಾಸವಿದೆ ಎಂದು ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರದ ವೈಫಲ್ಯ ಮರೆಮಾಚಲು ಮೋದಿಯಿಂದ ಉಗ್ರರ ದಾಳಿ ಬಳಕೆ: ಮಾಯಾವತಿ

    ಸರ್ಕಾರದ ವೈಫಲ್ಯ ಮರೆಮಾಚಲು ಮೋದಿಯಿಂದ ಉಗ್ರರ ದಾಳಿ ಬಳಕೆ: ಮಾಯಾವತಿ

    ಲಕ್ನೋ: ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ಸದ್ಯದ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಎಸ್‍ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.

    ಲಕ್ನೋದಲ್ಲಿ ಇಂದು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ದಾಳಿಯಿಂದ ಪ್ರಜೆಗಳು ಆತಂಕದಲ್ಲಿದ್ದಾರೆ. ಆದ್ರೆ ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಮೋದಿ ಮತ್ತು ಬಿಜೆಪಿ ನಾಯಕರು ಮಾತ್ರ ಜಮ್ಮು-ಕಾಶ್ಮೀರದ ಸ್ಥಿತಿಗತಿಯನ್ನು ಹೇಗೆ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಜನತೆಗೆ ಗೊತ್ತಾಗುತ್ತಿದೆ ಎಂದು ಟೀಕಿಸಿದರು.

    ರಾಜಕೀಯಕೋಸ್ಕರ ದೇಶದ ಭದ್ರತೆ ವಿಚಾರವನ್ನು ಕಡೆಗಣಿಸಲಾಗುತ್ತಿದೆ. ಇಂತಹ ಸ್ಥಿತಿಯನ್ನು ಎದುರಿಸಲು ಭಾರತಕ್ಕೆ ದೃಢ ನಿರ್ಧಾರ ತೆಗೆದುಕೊಂಡು ಸಮಸ್ಯೆಗಳನ್ನು ಪರಿಹರಿಸುವ ನಾಯಕರು ಬೇಕಾಗಿದ್ದಾರೆ. ದೇಶದ ಭದ್ರತೆ, ಸಮಸ್ಯೆ ಬಗ್ಗೆ ಗಮನ ಹರಿಸುವ ಬದಲು ಪ್ರಧಾನಿಯವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ಮೆಗಾ ವಿಡಿಯೋ ಕಾನ್ಫರೆನ್ಸ್ ಮಾಡಿದರು. ಶತ್ರು ದೇಶ ನಮ್ಮ ಮೇಲೆ ಹಗೆ ಸಾಧಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮಾತ್ರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇದು ದೇಶಕ್ಕೆ ಹಾಗೂ ಜನತೆಯ ಭಾವನೆಗಳಿಗೆ ದ್ರೋಹ ಬಗೆಯುವ ಕೆಲಸ. ಒಂದು ರೀತಿ ಹಾಸ್ಯಾಸ್ಪದ ವರ್ತನೆ ಎಂದು ಮಾಯಾವತಿ ಟಾಂಗ್ ನೀಡಿದ್ದಾರೆ.

    ಮಾಯಾವತಿ-ಅಖಿಲೇಶ್ ಯಾದವ್ ಜೊತೆಗೂಡಿ ಲೋಕಸಭೆ ಚುನಾವಣೆಯನ್ನು ಮೈತ್ರಿ ಮೂಲಕ ಎದುರಿಸಲು ಮುಂದಾಗಿದ್ದಾರೆ. ಆದರಿಂದ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ಮೂರು ರಾಜ್ಯಗಳಲ್ಲಿ ಈ ಮೈತ್ರಿ ಅಖಾಡಕ್ಕೆ ಇಳಿಯಲು ತಿರ್ಮಾನಿಸಿದ್ದು, ಲೋಕಸಭೆಯಲ್ಲಿ ಒಟ್ಟು 110 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿಯಿದ್ದು, ಎಲ್ಲಾ ರಾಜಕೀಯ ಪಕ್ಷದ ನಾಯಕರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿನಂದನ್ ಪೈಲಟ್ ಆಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ – ಸಲ್ಮಾನ್ ಖುರ್ಷಿದ್

    ಅಭಿನಂದನ್ ಪೈಲಟ್ ಆಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ – ಸಲ್ಮಾನ್ ಖುರ್ಷಿದ್

    ನವದೆಹಲಿ: ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಿಂದ ಭಾರತಕ್ಕೆ ಮರಳಿ ಹೆಮ್ಮೆ ತಂದಿದ್ದಾರೆ. ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅಭಿನಂದನ್ ಅವರು ಪೈಲಟ್ ಆಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ ಎಂದು ಹೇಳಿದ್ದಾರೆ.

    “ಶತ್ರುಗಳ ಆಕ್ರಮಣವನ್ನು ತಡೆದ ಭಾರತದ ಅಭಿನಂದನ್ ವರ್ಧಮಾನ್‍ಗೆ ಧನ್ಯವಾದಗಳು. ನಿಮ್ಮನ್ನು ಬರ ಮಾಡಿಕೊಳ್ಳಲು ಹೆಮ್ಮೆಯಾಗುತ್ತದೆ. ಅಭಿನಂದನ್ ಅವರು 2004ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಯುದ್ಧ ವಿಮಾನಗಳನ್ನು ಚಲಾಯಿಸುವ ಫೈಟರ್ ಪೈಲಟ್ ಆಗಿ ಸೇವೆಗೆ ಸೇರಿದ್ದರು” ಎಂದು ಟ್ವೀಟ್ ಮಾಡಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರತ ಪಾಕಿಸ್ತಾನ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಈ ಮಧ್ಯೆ ಖುರ್ಷಿದ್ ಅವರು ಈ ರೀತಿಯಾಗಿ ಟ್ವೀಟ್ ಮಾಡಿ ನೆಟ್ಟಿಗರಿಗೆ ಆಹಾರವಾಗಿದ್ದಾರೆ.

    ಈ ಟ್ವೀಟ್‍ಗೆ ಸದ್ಯ ಜನರು ಸಲ್ಮಾನ್ ಖುರ್ಷಿದ್ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಯುಪಿಎ ಅವಧಿಯಲ್ಲಿ ಆಗಿರುವ ಹಗರಣಗಳ ಕುರಿತು ಪ್ರಶ್ನಿಸಿದ್ದಾರೆ. ಒಂದೆಡೆ ಹಳೆಯ ಕಾಲದ ಮಿಗ್ 21 ವಿಮಾನವನ್ನು ಇಟ್ಟುಕೊಂಡಿದ್ದಕ್ಕೂ ಯುಪಿಎ ಕ್ರೆಡಿಟ್ ತೆಗೆದುಕೊಳ್ಳಬೇಕು ಎಂದು ಹಲವರು ಟ್ವೀಟ್ ಮಾಡಿದರೆ, ಇನ್ನೊದೆಡೆ ಇದು 2019ರ ಅತಿ ಕೆಟ್ಟ ಟ್ವೀಟ್ ಇದು ಎಂದು ಎಂದು ಹೇಳಿದ್ದಾರೆ.

    ಅಭಿನಂದನ್ ಹುಟ್ಟಿದಾಗಲೂ ಯುಪಿಎ ಸರ್ಕಾರವಿತ್ತು ಹಾಗಂತ ಎಲ್ಲ ಕ್ರೆಡಿಟ್ ಇಂದಿರಾ ಗಾಂಧಿಗೆ ಹೋಗುತ್ತಾ ಅಂತ ರೀ-ಟ್ವೀಟ್ ಮಾಡಿ ಟಾಂಗ್ ಕೊಟ್ಟು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶ ದ್ರೋಹಿಗಳ ಹಿತ ಕಾಯುವ ಪೊಲೀಸ್ ಅಧಿಕಾರಿಗಳು ಪಾಕಿಸ್ತಾನಕ್ಕೆ ಹೋಗಲಿ: ಸುರೇಶ್ ಅಂಗಡಿ

    ದೇಶ ದ್ರೋಹಿಗಳ ಹಿತ ಕಾಯುವ ಪೊಲೀಸ್ ಅಧಿಕಾರಿಗಳು ಪಾಕಿಸ್ತಾನಕ್ಕೆ ಹೋಗಲಿ: ಸುರೇಶ್ ಅಂಗಡಿ

    ಬೆಳಗಾವಿ: ಪಾಕಿಸ್ತಾನ ಜಿಂದಾಬಾದ್ ಅನ್ನುವರನ್ನ ಗುಂಡಿಕ್ಕಿ ಕೊಲ್ಲಬೇಕು. ಗುಂಡಿಕ್ಕಿ ಕೊಲ್ಲಲು ಆಗದ ಪೊಲೀಸ್ ಅಧಿಕಾರಿಗಳು ಇಲ್ಲಿ ಇರೋದು ಬೇಡ. ದೇಶ ವಿರೋಧಿಗಳ ಹಿತ ಕಾಯುವ ಪೊಲೀಸ್ ಅಧಿಕಾರಿಗಳು ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮದುರ್ಗ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಆಪ್ತ ಶಫಿ ಬೆಣ್ಣಿ ದೇಶ ವಿರೋಧಿ ಪೋಸ್ಟ್ ವಿಚಾರ ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ. ಒಂದು ಗಂಟೆಯಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದವರನ್ನ ಪೊಲೀಸರು ಬಂಧಿಸಬೇಕು. ಇಲ್ಲವಾದಲ್ಲಿ ಬೆಳಗಾವಿ ಎಸ್ ಪಿ ವರ್ಗಾವಣೆ ಮಾಡಿಕ್ಕೊಂಡು ಹೋಗಬೇಕು. ಪೊಲೀಸರು ಕಾಂಗ್ರೆಸ್ ಕೈ ಗೊಂಬೆಯಾಗಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಮಾಜಿ ಶಾಸಕನ ಬಲಗೈ ಬಂಟನಿಂದ ದೇಶದ್ರೋಹಿ ಪೋಸ್ಟ್

    ಬಿಜೆಪಿ ಕಾರ್ಯಕರ್ತರು ಖಡ್ಗದಿಂದ ಕೇಕ್ ಕಟ್ ಮಾಡಿದರೆ ಸಾಕು ಅರೆಸ್ಟ್ ಮಾಡ್ತೀರಿ. ಕಾಂಗ್ರೆಸ್ ಮಾಜಿ ಶಾಸಕನ ಆಪ್ತ ಪಾಕಿಸ್ತಾನ ಜಿಂದಾಬಾದ್ ಅಂದರೂ ಅರೆಸ್ಟ್ ಮಾಡುತ್ತಿಲ್ಲ. ದೇಶ ದ್ರೋಹಿಗಳಿಗೆ ಬೆಂಬಲಿಸುವ ಪೊಲೀಸ್ ಅಧಿಕಾರಿಗಳು ಪಾಕಿಸ್ಥಾನಕ್ಕೆ ಹೋಗಲಿ, ಭಾರತದಲ್ಲಿ ಇರೋದು ಬೇಡ ಎಂದು ಬೆಳಗಾವಿ ಪೊಲೀಸ್ ವರಿಷ್ಠರ ಬಗ್ಗೆ ಸಂಸದ ಅಂಗಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?

    ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?

    ನವದೆಹಲಿ: “ಪಾಕಿಸ್ತಾನದ ಎಫ್ 16 ಲಾಕ್ ಆಗಿದೆ. ಆರ್-73 ಸೆಲೆಕ್ಟ್ ಮಾಡಿದ್ದೇನೆ”. ಪಾಕಿಸ್ತಾನ ಎಫ್ 16 ವಿಮಾನವನ್ನು ಹೊಡೆಯುವ ಮುನ್ನಾ ಮಿಗ್ ವಿಮಾನವನ್ನು ಹಾರಿಸುತ್ತಿದ್ದ ವಿಂಗ್ ಕಮಾಂಡರ್ ಅಭಿನಂದನ್ ಕೊನೆಯದಾಗಿ ಕಳುಹಿಸಿದ ರೆಡಿಯೋ ಮೆಸೇಜ್.

    ಹೌದು. ಈ ರೇಡಿಯೋ ಮಸೇಜ್ ಕಳಹಿಸಿದ ನಂತರ ಅಭಿನಂದನ್ ಎಫ್ 16 ವಿಮಾನವನ್ನು ಹೊಡೆದು ಉರುಳಿಸಿದರು ಎಂದು ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿವೆ.

    ಫೆ.27 ರಂದು ಏನಾಯ್ತು?
    ಬೆಳಗ್ಗೆ 9:52ರ ವೇಳೆಗೆ ಮೂರು ವಾಯುನೆಲೆಯಿಂದ ಪಾಕಿಸ್ತಾನದ ಎಫ್ 16 ಎಸ್, ಜೆಎಫ್ 17, ಮಿರಾಜ್ ಸೇರಿ ಒಟ್ಟು 10 ವಿಮಾನಗಳು ಮೂರು ಗುಂಪುಗಳಾಗಿ ಭಾರತದತ್ತ ಬರುತ್ತಿದೆ ಎನ್ನುವುದನ್ನು ನೇತ್ರಾ (ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಸಿಸ್ಟಂ) ಮತ್ತು ಉತ್ತರ ಕಮಾಂಡ್ ಪತ್ತೆ ಹಚ್ಚಿತು.

    ಈ ವಿಚಾರ ಗೊತ್ತಾಗುತ್ತಿದ್ದಂತೆ 6 ಮಿಗ್ 21 ವಿಮಾನ, ಸುಖೋಯ್, ಮಿರಾಜ್, ಮಿಗ್ 29 ವಿಮಾನಗಳು ಆಕಾಶಕ್ಕೆ ಹಾರಿತು. ಈ ಸಂದರ್ಭದಲ್ಲಿ ಭಾರತ ಪಾಕಿಸ್ತಾನಕ್ಕೆ ನೀವು ಭಾರತದ ವಾಯುನೆಲೆಯನ್ನು ಬಳಸಿಕೊಂಡಿದ್ದೀರಿ. ಹಿಂದಕ್ಕೆ ಹೋಗಿ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿತ್ತು. ಈ ಎಚ್ಚರಿಕೆಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಾಯುಸೇನೆಗೆ ಎರಡನೇ ಬಾರಿ ಭಾರತ ಎಚ್ಚರಿಕೆ ನೀಡಿತು.

    ಈ ಎಚ್ಚರಿಕೆ ನೀಡಿದರೂ ಮುಂದುವರಿಯುತ್ತಿರುವ ವಿಮಾನಗಳಿಗೆ ಮಿಗ್, ಸುಖೋಯ್, ಮಿರಾಜ್ ಜೊತೆ ನೆಲದಿಂದಲೇ ದಾಳಿ ನಡೆಸಲಾಯಿತು. ಭಾರತದ ದಾಳಿಗೆ ಹೆದರಿ ಸುಮಾರು 1 ಕಿ.ಮೀ ಗಡಿ ದಾಟಿದ್ದ 10ರ ಪೈಕಿ 9 ವಿಮಾನಗಳು ತಮ್ಮ ಪಥವನ್ನು ಬದಲಿಸಿ ಮರಳಿ ಹಿಂದಕ್ಕೆ ಹೋದವು.

    9 ವಿಮಾನಗಳು ಮರಳಿ ಹೋಗಿದ್ದರೂ ಒಂದು ಎಫ್ 16 ವಿಮಾನ ಸುಮಾರು ಮೂರು ಕಿ.ಮೀ ಭಾರತದ ವಾಯುನೆಲೆಯನ್ನು ಕ್ರಮಿಸಿತ್ತು. ಮಿಲಿಟರಿ ತೈಲ ಸಂಗ್ರಹಗಾರವನ್ನು ಧ್ವಂಸ ಮಾಡಲು ಬರುತ್ತಿರುವುದನ್ನು ಗಮನಿಸಿದ ಮಿಗ್ 21 ಬೈಸನ್ ಮತ್ತು ಸುಖೋಯ್ ಎಫ್ 16 ಗೆ ಪ್ರತಿರೋಧ ತೋರಲು ಮುಂದಾಯಿತು.

    ತನ್ನ ಗುರಿಗೆ ಎರಡು ವಿಮಾನಗಳು ಪ್ರತಿರೋಧ ತೋರುತ್ತಿದ್ದು ಮತ್ತೆ ಮುನ್ನುಗ್ಗಿದರೆ ಅಪಾಯ ಎಂದು ಅರಿತ ಎಫ್ 16 ಪೈಲಟ್ ವಿಮಾನವನ್ನು ಪಾಕ್ ಕಡೆಯತ್ತ ತಿರುಗಿಸಿದ್ದ. ಪಾಕ್ ವಿಮಾನ ಹಿಂದಕ್ಕೆ ಹೋದ ಬಳಿಕ ಅಭಿನಂದನ್ ಮರಳಿ ಬರಬಹುದಿತ್ತು. ಆದರೆ ಅಭಿನಂದನ್ ಹಿಂದಕ್ಕೆ ಬಾರದೇ ಎಫ್ 16 ವಿಮಾನವನ್ನು ಹೊಡೆಯಲೇಬೇಕೆಂದು ಜಿದ್ದಿಗೆ ಬಿದ್ದಿದ್ದರು. ಹೀಗಾಗಿ ಮರಳಿ ಹಿಂದಕ್ಕೆ ಹೋಗುತ್ತಿದ್ದ ಎಫ್ 16 ವಿಮಾನವನ್ನು ಪೈಲೆಟ್ ಅಭಿನಂದನ್ ತಮ್ಮ ಮಿಗ್ ವಿಮಾನದಲ್ಲಿ ಚೇಸ್ ಮಾಡಲು ಆರಂಭಿಸಿದರು.

    ಎಫ್ 16 ವಿಮಾನ ಚೇಸಿಂಗ್ ಆರಂಭವಾಗುತ್ತಿದ್ದಂತೆ ಆರ್-73 ಕ್ಷಿಪಣಿಯನ್ನು ಹೊಡೆಯಲು ಸಿದ್ಧಪಡಿಸಿದರು. ಕೂಡಲೇ ತಮ್ಮ ಅಧಿಕಾರಿಗಳಿಗೆ ಆರ್-73 ಸೆಲೆಕ್ಟ್ ಮಾಡಿದ್ದೇನೆ ಎಂದು ರೇಡಿಯೋ ಸಂದೇಶ ಕಳುಹಿಸಿದರು. ಇದಾದ ನಂತರ ಆರ್ 73 ಕ್ಷಿಪಣಿ ಮೂಲಕ ಎಫ್ 16 ವಿಮಾನವನ್ನು ಹೊಡೆದು ಉರುಳಿಸಿದರು.

    ಪಾಕ್ ವಿಮಾನ ಹೊಡೆದ ಬಳಿಕ ತನ್ನ ಮಿಗ್ ವಿಮಾನದ ಮೇಲೂ ದಾಳಿ ಖಂಡಿತ ನಡೆಯಲಿದೆ ಎನ್ನುವುದನ್ನು ಅರಿತ ಅಭಿನಂದನ್ ಬಹಳ ವೇಗವಾಗಿ ಭಾರತದತ್ತ ಬರತೊಡಗಿದರು. ಈ ಸಂದರ್ಭಲ್ಲಿ ವಿಮಾನವನ್ನು ಆಕಾಶದಲ್ಲಿ ತಿರುಗಿಸಬಹುದಾದ ಅಪಾಯಕಾರಿಯಾದ ಸಾಹಸ ಪ್ರದರ್ಶನವನ್ನು ಮಾಡಿ ಕನ್ ಫ್ಯೂಸ್ ಮಾಡಿದ್ದರು. ಈ ವೇಳೆ ಪಾಕಿನ ಭೂಸೇನೆ ಮತ್ತು ವಾಯು ಸೇನೆಗಳು ದಾಳಿ ಮಾಡಿದ ಕಾರಣ ಯಾವುದು ಒಂದು ಅರ್ಟಿಲ್ಲರಿ ಮಿಗ್ ವಿಮಾನವನ್ನು ಹೊಡೆದು ಉರುಳಿಸಿದೆ. ವಿಮಾನ ಪತನಗೊಳ್ಳುತ್ತಿರುವುದನ್ನು ಅರಿತ ಅಭಿ ಪ್ಯಾರಾಚೂಟ್ ಸಹಾಯದಿಂದ ಪಾಕ್ ನೆಲದಲ್ಲಿ ಬಿದ್ದಿದ್ದರು.

    ಭಾರತದ ಅಧಿಕಾರಿಗಳು ಹೇಳೋದು ಏನು?
    ಪಾಕಿಸ್ತಾನ ವಾಯುನೆಲೆಗೆ ನುಗ್ಗಿ ಬಾಲಕೋಟ್ ಮೇಲೆ ದಾಳಿ ನಡೆಸಿದ ಬಳಿಕ ನಮ್ಮ ಮೇಲೂ ಪಾಕ್ ದಾಳಿ ನಡೆಸಬಹುದು ಎಂದು ನಿರೀಕ್ಷೆ ಇತ್ತು. ಆದರೆ ಇಷ್ಟು ಬೇಗ ದಾಳಿ ಮಾಡುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ಮಿಗ್ 21 ಮತ್ತು ಎಫ್ 16 ನಡುವಿನ ಡಾಗ್ ಫೈಟ್ 15 ನಿಮಿಷ ನಡೆಯಿತು.

    1960ರಲ್ಲಿ ತಯಾರಾದ ಮಿಗ್ 21 ಅತ್ಯಾಧುನಿಕ ವಿಮಾನವೆಂದೇ ಖ್ಯಾತಿ ಪಡೆದಿರುವ ಎಫ್ 16 ವಿಮಾನವನ್ನು ಹೊಡೆದು ಉರುಳಿಸಿದೆ ಎನ್ನುವುದೇ ಒಂದು ಅಚ್ಚರಿ. ರಷ್ಯಾದ ಮೂಲದ ವಿಮಾನವೊಂದು ಅಮೆರಿಕದ ವಿಮಾನವನ್ನು ಹೊಡೆದಿರುವುದು ವಿಶ್ವದಲ್ಲೇ ಮೊದಲು ಇರಬೇಕು ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಪಾಕಿಸ್ತಾನ ಎಫ್ 16 ವಿಮಾನವನ್ನು ಬಳಕೆ ಮಾಡಿಲ್ಲ ಎಂದು ಹೇಳಿದರೂ ಆ ವಿಮಾನದಿಂದ ಚಿಮ್ಮಿರುವ ಅಡ್ವಾನ್ಸ್ ಮೀಡಿಯಂ ರೇಜ್ ಏರ್ ಟು ಏರ್ ಮಿಸೈಲ್(ಎಎಂಆರ್‍ಎಎಎಂ) ಅವಶೇಷಗಳು ರಜೌರಿ ಪ್ರದೇಶದಲ್ಲಿ ಪತ್ತೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿನಂದನ್ ವಾಪಾಸ್ ಬರಲು ಸಿಧು ಕಾರಣ ಅಂದ್ರು ಕೇರಳ ಮಾಜಿ ಸಿಎಂ!

    ಅಭಿನಂದನ್ ವಾಪಾಸ್ ಬರಲು ಸಿಧು ಕಾರಣ ಅಂದ್ರು ಕೇರಳ ಮಾಜಿ ಸಿಎಂ!

    ತಿರುವನಂತಪುರಂ: ಪಾಕಿಸ್ತಾನ ಸೇನೆ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಶುಕ್ರವಾರ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಇದಕ್ಕೆ ಕಾಂಗ್ರೆಸ್‍ನ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಾರಣ ಎಂದು ಕೇರಳ ಮಾಜಿ ಸಿಎಂ ಒಮ್ಮನ್ ಚಾಂಡಿ ಟ್ವೀಟ್ ಮಾಡಿದ್ದಾರೆ.

    ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಶ್ರಮಪಟ್ಟು ಪಾಕಿಸ್ತಾನದಿಂದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನ ಭಾರತಕ್ಕೆ ವಾಪಾಸ್ ಕರೆಸಿಕೊಂಡಿದೆ. ಆದರೆ ಕೇರಳ ಸಿಎಂ ಮಾತ್ರ ಅಭಿನಂದನ್ ಬಿಡುಗಡೆಯಾಗಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಕಾಂಗ್ರೆಸ್‍ನ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಾರಣ ಎಂದು ಟ್ವೀಟ್ ಮಾಡಿದ್ದು, ಈ ಟ್ವೀಟ್ ರಾಜಕೀಯ ಪಾಳಯದಲ್ಲಿ ಬಿರುಗಾಳಿ ಎಬ್ಬಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

    https://twitter.com/Oommen_Chandy/status/1101461843170680832

    ಟ್ವೀಟ್‍ನಲ್ಲಿ ಏನಿದೆ?
    #WelcomeHomeAbhinandan, ನವಜೋತ್ ಸಿಂಗ್ ಸಿಧು ಅವರ ಶ್ರಮ ಹಾಗೂ ಇಮ್ರಾನ್ ಖಾನ್ ಅವರ ಬೆಂಬಲಕ್ಕೆ ಧನ್ಯವಾದ. ಈ ನಡೆ ಒಳ್ಳೆಯದು ಇದರಿಂದ ಎರಡು ರಾಷ್ಟ್ರಗಳ ಗಡಿಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಭಾವಿಸಿದ್ದೇನೆ ಎಂದು ಸಿಧು ಹಾಗೂ ಪಾಕ್ ಸಿಎಂ ಅವರನ್ನ ಟ್ಯಾಗ್ ಮಾಡಿ ಒಮ್ಮನ್ ಚಾಂಡಿ ಟ್ವೀಟ್ ಮಾಡಿದ್ದಾರೆ.

    ಒಮ್ಮನ್ ಚಾಂಡಿ ಅವರು ಮಾಡಿರುವ ಟ್ವೀಟ್ ಅನ್ನು ರೀಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರು ಕೂಡ ಈ ಮಾತನ್ನು ಒಪ್ಪಿದ್ದಾರೆ.

    ಅಲ್ಲದೆ ಒಮ್ಮನ್ ಚಾಂಡಿ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ನವಜೋತ್ ಸಿಂಗ್ ಸಿಧು ಅವರು, ನಿಮ್ಮ ಮಾತುಗಳು ನನಗೆ ಸತ್ಯದ ದಾರಿಯಲ್ಲಿ ನಡೆಯಲು ಶಕ್ತಿ ಮತ್ತು ಧೈರ್ಯವನ್ನು ನೀಡಿವೆ, ನಾನು ನನ್ನ ಆದರ್ಶದೊಂದಿಗೆ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ನೈತಿಕ ಮೌಲ್ಯಗಳನ್ನು ಮರೆಯುವುದಿಲ್ಲ ಎಂದು ರೀ-ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರತಿಪಕ್ಷಗಳ ರಾಜಕಾರಣದಿಂದ ಶತ್ರುಗಳು ಲಾಭ ಪಡೆಯುತ್ತಿದ್ದಾರೆ: ಪ್ರಧಾನಿ ಮೋದಿ

    ಪ್ರತಿಪಕ್ಷಗಳ ರಾಜಕಾರಣದಿಂದ ಶತ್ರುಗಳು ಲಾಭ ಪಡೆಯುತ್ತಿದ್ದಾರೆ: ಪ್ರಧಾನಿ ಮೋದಿ

    ವಿಶಾಖಪಟ್ಟಣಂ: ದೇಶದಲ್ಲಿ ಪ್ರತಿಪಕ್ಷಗಳು ಮಾಡುತ್ತಿರುವ ರಾಜಕಾರಣದ ಆಟಗಳಿಂದ ಶತ್ರು ದೇಶ ಲಾಭ ಪಡೆಯುತ್ತಿದೆ. ಇದರಿಂದ ಭಾರತಕ್ಕೆ ಹಾನಿ ಅನುಭವಿಸುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ಹೊರಹಾಕಿದ್ದಾರೆ.

    ಶುಕ್ರವಾರದಂದು ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮೋದಿ ಅವರು ಬಳಿಕ ಕನ್ಯಾಕುಮಾರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ, ಕೆಲವು ವಿರೋಧ ಪಕ್ಷಗಳು ಮೋದಿ ಮೇಲಿರುವ ದ್ವೇಷಕ್ಕೆ ದೇಶವನ್ನು ಕೂಡ ದ್ವೇಷಿಸಲು ಆರಂಭಿಸಿವೆ. ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವನ್ನು ಇಡೀ ಜಗತ್ತೇ ಬೆಂಬಲಿಸುತ್ತಿದೆ. ಆದ್ರೆ ಭಾರತದಲ್ಲೇ ಇರುವ ಕೆಲವು ಪಕ್ಷಗಳು ಹಾಗೂ ಅದರ ನಾಯಕರು ನಮ್ಮ ಹೋರಾಟವನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಇದರಿಂದ ಶತ್ರು ದೇಶಕ್ಕೆ ಲಾಭವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

    26/11ರಲ್ಲಿ ಮುಂಬಯಿ ದಾಳಿಯಾದಾಗ ಅಂದಿನ ಸರ್ಕಾರ ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಆದ್ರೆ ಉರಿ ದಾಳಿಯಾದಾಗ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರಿಗೆ ಪಾಠ ಕಲಿಸಿತ್ತು. ಬಳಿಕ ಪುಲ್ವಾಮ ದಾಳಿ ನಡೆದಾಗ ಭಾರತೀಯ ವಾಯುಪಡೆ ಏರ್ ಸ್ಟ್ರೈಕ್ ಮಾಡಿರುವುದು ನಿಮ್ಮೆಲ್ಲರಿಗೂ ಗೊತ್ತಿದೆ. ನಾವು ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಉಗ್ರರ ವಿರುದ್ಧ ಹೋರಾಡಲು ಸೇನೆಗೆ ನಮ್ಮ ಸರ್ಕಾರ ಮುಕ್ತ ಅವಕಾಶ ನೀಡಿದೆ. ಉಗ್ರರ ಕೈಯಲ್ಲಿ ಭಾರತ ಅಸಹಾಯಕವಾಗಿ ಸಿಲುಕುವ ಕಾಲ ಮುಗಿದೋಗಿದೆ. ದೇಶ ಸೇವೆಯಲ್ಲಿರುವ ನಮ್ಮ ಯೋಧರಿಗೆ ನನ್ನ ನಮನಗಳು ಎಂದು ಹೇಳಿದರು.

    ಬಳಿಕ ಮಹಾ ಘಟಬಂಧನ ಕುರಿತು ಮಾತನಾಡಿ, ಯಾಕೆ ಪ್ರತಿಪಕ್ಷ ನಾಯಕರು ಭಾರತವನ್ನು ದುರ್ಬಲಗೊಳಿಸಲು ನೋಡುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ಪಕ್ಷಗಳ ರಾಜಕಾರಣಕ್ಕೆ ದೇಶವನ್ನು ದುರ್ಬಲಗೊಳಿಸಿ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ. ಯಾಕೆ ಈ ರೀತಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ? ಮೋದಿ ಮೇಲಿನ ದ್ವೇಷಕ್ಕೆ ದೇಶವನ್ನು ಯಾಕೆ ದ್ವೇಷಿಸಲು ಆರಂಭಿಸಿದ್ದಾರೆ? ಇದರಿಂದ ಪಾಕಿಸ್ತಾನ ಲಾಭ ಪಡೆಯುತ್ತಿದೆ. ಎಂದು ವಿಪಕ್ಷ ನಾಯಕರನ್ನು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಕೊಡಿ: ಮಮತಾ ಬ್ಯಾನರ್ಜಿ

    ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಕೊಡಿ: ಮಮತಾ ಬ್ಯಾನರ್ಜಿ

    ನವದೆಹಲಿ: ಏರ್‌ಸ್ಟ್ರೈಕ್ ನಡೆದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಯನ್ನು ಕರೆದಿಲ್ಲ. ಯಾವ ಪಕ್ಷಕ್ಕೂ ಮಾಹಿತಿ ನೀಡಿಲ್ಲ. ನಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಮಂಗಳವಾರದಂದು ಭಾರತೀಯ ವಾಯುಪಡೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಮಾಹಿತಿ ತಿಳಿಸಿಲ್ಲ. ಏರ್‌ಸ್ಟ್ರೈಕ್ ಬಗ್ಗೆ ನಾವು ಮಾಧ್ಯಮಗಳನ್ನು ನೋಡಿ ಮಾಹಿತಿ ಪಡೆದಿದ್ದೇವೆ. ಯಾವ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ಎಷ್ಟು ಬಾಂಬ್‍ಗಳನ್ನು ಉಗ್ರರ ಮೇಲೆ ಹಾಕಲಾಗಿದೆ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ವಿದೇಶಿ ಮಾಧ್ಯಮಗಳಲ್ಲಿ ಏರ್‌ಸ್ಟ್ರೈಕ್  ನಲ್ಲಿ ಯಾರು ಮೃತಪಟ್ಟಿಲ್ಲ ಎಂದು ವರದಿ ಬರುತ್ತಿದೆ. ಇನ್ನೊಂದೆಡೆ ಕೆಲವು ಮಾಧ್ಯಮಗಳಲ್ಲಿ ಒಬ್ಬ ಮೃತ ಪಟ್ಟಿದ್ದಾನೆ ಎಂದು ಉಲ್ಲೇಖಿಸಲಾಗುತ್ತಿದೆ. ಇದರಲ್ಲಿ ಯಾವುದು ಸತ್ಯವೆಂದು ಕೇಂದ್ರ ಸರ್ಕಾರವೇ ತಿಳಿಸಬೇಕು. ನಮಗೆ ಈಗ ಏರ್‌ಸ್ಟ್ರೈಕ್ ಬಗ್ಗೆ ಮಾಹಿತಿ ಕೊಡಿ ಎಂದು ಮಮತಾ ಬ್ಯಾನರ್ಜಿ ಕೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೇರ ಯುದ್ಧ ಬೇಡ, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಉತ್ತಮ: ಪಲಿಮಾರು ಶ್ರೀ

    ನೇರ ಯುದ್ಧ ಬೇಡ, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಉತ್ತಮ: ಪಲಿಮಾರು ಶ್ರೀ

    ಉಡುಪಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದಿಂದ ಶುಕ್ರವಾರ ಬಿಡುಗಡೆಯಾಗಲಿದ್ದಾರೆ. ಅಭಿನಂದನ್ ಬಿಡುಗಡೆ ಸಂಬಂಧ ರಾಜ್ಯದ ಹಲವು ಕಡೆ ಪೂಜೆ ಪುನಸ್ಕಾರಗಳು ನಡೆದಿತ್ತು.

    ಕೋಲಾರ, ಕೊಪ್ಪಳ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೋಧ ವಾಪಾಸ್ ಭಾರತಕ್ಕೆ ಬರಲಿ ಎಂದು ಪೂಜೆ ಪ್ರಾರ್ಥಿಸಿದ್ದರು. ಹಾಗೆಯೇ ಯೋಧರಿಗಾಗಿ ಉಡುಪಿಯ ಕೃಷ್ಣಮಠದಲ್ಲಿ ಕೂಡ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಪರ್ಯಾಯ ಪಲಿಮಾರು ಸ್ವಾಮೀಜಿಗಳು ಮಧ್ಯಾಹ್ನದ ಮಹಾಪೂಜೆಯಲ್ಲಿ ಅಭಿಷೇಕ ಮತ್ತು ಲಕ್ಷ ತುಳಸಿ ಅರ್ಪಣೆ ವೇಳೆ ಕೃಷ್ಣನಲ್ಲಿ ಸ್ವಾಮೀಜಿ ಅಭಿನಂದನ್ ಅವರಿಗಾಗಿ ಪ್ರಾರ್ಥಿಸಿದ್ದರು. ಇದನ್ನೂ ಓದಿ:ಭಾರತಕ್ಕೆ ರಾಜತಾಂತ್ರಿಕ ಜಯ – ಶುಕ್ರವಾರ ಪೈಲಟ್ ಅಭಿನಂದನ್ ಬಿಡುಗಡೆ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಲಿಮಾರು ವಿದ್ಯಾಧೀಶ ಶ್ರೀಗಳು, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಒಂದು ದಿಟ್ಟ ಹೆಜ್ಜೆ ಎಂದಿದ್ದಾರೆ. ಇದರಿಂದ ಸೇನೆಯ ಬಗ್ಗೆ ತುಂಬ ಅಭಿಮಾನ ಮೂಡಿದೆ. ಪಾಕಿಸ್ತಾನ ಅಭಿನಂದನ್ ವರ್ಧಮಾನ್‍ರನ್ನು ಬಂಧಿಸಿರುವುದು ಕಾನೂನು ಬಾಹಿರ. ಪಾಕ್ ಅವರನ್ನು ಶೀಘ್ರ ಬಿಡುಗಡೆ ಮಾಡಲಿ. ಜರಾಸಂಧನ ಸೆರೆಮನೆಯಲ್ಲಿಟ್ಟ ರಾಜಕುಮಾರರನ್ನು ಶ್ರೀಕೃಷ್ಣ ಬಿಡಿಸಿದ್ದ. ನರಕಾಸುರನನ್ನು ವಧೆ ಮಾಡಿ ರಾಜಕುಮಾರಿಯರನ್ನು ಸೆರೆಯಿಂದ ಬಿಡಿಸಿದ್ದ ಹಾಗೆಯೇ ದೇವರ ಕೃಪೆ ಯೋಧರ ಮೇಲೆ ಇದೆ ಅವರು ಕೂಡ ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಎಂದಿದ್ದರು.

    ಪಾಕಿಸ್ತಾನದ ಮೇಲೆ ಯುದ್ಧ ಬೇಡ. ನೇರ ಯುದ್ಧದಿಂದ ಮಾನವ ಜನಾಂಗದ ನಾಶವಾಗುತ್ತದೆ. ಸರ್ಜಿಕಲ್ ಸ್ಟ್ರೈಕ್ ಮೂಲಕವೇ ಉಗ್ರರ ನಾಶವಾಗಬೇಕು. ಉಗ್ರರಿರುವ ಅಡಗುದಾಣಗಳನ್ನು ಹುಡುಕಿ ದಾಳಿ ಮಾಡಬೇಕು ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಡಿಯಲ್ಲಿ ಯುದ್ಧ ಮಾಡುವುದೇ ನಿಜವಾದ ಯುದ್ಧ – ಪಾಕ್ ಕುತಂತ್ರದ ಬಗ್ಗೆ ಹೆಗ್ಗಡೆ ಮಾತು

    ಗಡಿಯಲ್ಲಿ ಯುದ್ಧ ಮಾಡುವುದೇ ನಿಜವಾದ ಯುದ್ಧ – ಪಾಕ್ ಕುತಂತ್ರದ ಬಗ್ಗೆ ಹೆಗ್ಗಡೆ ಮಾತು

    ಧಾರವಾಡ: ಪಾಕಿಸ್ತಾನ ಯುದ್ಧ ಮಾಡುವುದಾದರೆ ಗಡಿಯಲ್ಲಿ ಯುದ್ಧ ಘೋಷಣೆ ಮಾಡಲಿ. ಆಗ ಶಕ್ತಿಯ ಪ್ರದರ್ಶನವಾಗುತ್ತದೆ. ಗಡಿಯಲ್ಲಿ ಯುದ್ಧ ಮಾಡುವುದು ನಿಜವಾದ ಯುದ್ಧ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಡಿಯಲ್ಲಿ ಯುದ್ಧ ಮಾಡುವುದು ನಿಜವಾದ ಯುದ್ಧ. ಆದ್ರೆ ಈಗ ನಡೆಯುತ್ತಿರುವುದು ಆಂತರಿಕ ಯುದ್ಧ, ಇದು ಸಿವಿಲ್ ವಾರ್. ಈ ಪರಿಸ್ಥಿತಿಯಲ್ಲಿ ಸಿವಿಲ್ ವಾರ್ ತುಂಬಾ ಕಷ್ಟ. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ನಾವು ಕಾಶ್ಮೀರದಲ್ಲಿ ಪ್ರಜೆಗಳೊಂದಿಗೆ ಹೋರಾಟ ಮಾಡಬೇಕಾಗಿದೆ. ಅಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ. ಒಳಗಡೆ ತುಂಬಾ ಬೆಂಕಿ ಇದೆ. ನಮ್ಮ ಸೈನಿಕರಿಗೆ ಶತ್ರುಗಳನ್ನ ಗುರುತಿಸುವುದು ಕಷ್ಟವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ಮಹಿಳೆಯರು ಕೂಡ ಸೈನಿಕರಿಗೆ ಕಲ್ಲು ಹೊಡೆಯುತ್ತಾರೆ. ಆದ್ರೆ ಈ ತಪ್ಪಿಗೆ ಮಹಿಳೆಯರು ಮತ್ತು ಮಕ್ಕಳನ್ನು ಶಿಕ್ಷಿಸುವಂತಿಲ್ಲ. ಪಾಕಿಸ್ತಾನದವರು ಯುದ್ಧ ಮಾಡುವುದಿದ್ದರೆ ಗಡಿಯಲ್ಲಿ ಮಾಡಲಿ, ಆಗ ನಮ್ಮ ಮತ್ತು ಅವರ ಶಕ್ತಿ ನಿರ್ಧಾರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಪಾಕಿಸ್ತಾನಕ್ಕೆ ಶಾಂತಿ ಬೇಕಾಗಿದೆ ಎಂದರೆ ಸಣ್ಣ ಸಣ್ಣದಾಗಿ ಚಿವುಟುವ ಕೆಲಸವನ್ನು ತಕ್ಷಣ ನಿಲ್ಲಿಸಲಿ. ಇಲ್ಲವೇ ರಾಜತಾಂತ್ರಿಕವಾಗಿಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿ. ಯುದ್ಧ ಬೇಡವೆಂದಾದರೆ ದೇಶದ ಶಾಂತಿ ಕದಡುವ ಭಯೋತ್ಪಾದನೆಯನ್ನು ಬಿಡಲಿ. ಉಗ್ರರು ಯಾವುದೇ ತಪ್ಪು ಮಾಡದ ಭಾರತೀಯ ಅಮಾಯಕ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಇದರಿಂದ ದೇಶವೇ ಒಗ್ಗಟ್ಟಾಗಿದೆ, ಎಲ್ಲರ ರಕ್ತ ಕುದಿಯುತ್ತಿದೆ. ಆದರೆ ರಾಜತಾಂತ್ರಿಕವಾಗಿ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವೇ ಯುದ್ಧವನ್ನೇ ಘೋಷಣೆ ಮಾಡಿ. ಎರಡು ಬಿಟ್ಟು ದೇಶದ ಜನರಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಮಾಡಬೇಡಿ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv