Tag: Pakistanis

  • ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ – ಕಾಂಗ್ರೆಸ್‌ ಮಾಜಿ ಸಚಿವ

    ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ – ಕಾಂಗ್ರೆಸ್‌ ಮಾಜಿ ಸಚಿವ

    – ನಾವು ಸ್ನೇಹಶೀಲರಾಗಿದ್ದರೆ ಅವರೂ ಅತೀ ಸ್ನೇಹಶೀಲರಾಗಿರ್ತಾರೆ ಎಂದ ಮಣಿಶಂಕರ್ ಅಯ್ಯರ್‌
    – ಭಾರತ-ಪಾಕ್‌ ನಡುವೆ ಮೋದಿ ಆಡಳಿತ ದ್ವೇಷ ಮೂಡಿಸಿದೆ ಎಂದು ಆರೋಪ

    ನವದೆಹಲಿ: ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ. ಭಾರತೀಯರು ಸ್ನೇಹಶೀಲರಾಗಿದ್ದರೆ ಪಾಕಿಸ್ತಾನಿಯರು ಇನ್ನೂ ಹೆಚ್ಚು ಸ್ನೇಹಶೀಲರಾಗಿರುತ್ತಾರೆ. ಹಾಗಾಗಿ ಭಾರತ-ಪಾಕಿಸ್ತಾನದ (India, Pakistan) ನಡುವೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಆದ್ರೆ ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ (Narendra Modi) ಆಡಳಿತವು ವಿಶ್ವಾಸದ ಬದಲು ದ್ವೇಷ ಮೂಡಿಸಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್‌ (Mani Shankar Aiyar) ಪ್ರಧಾನಿ ಮೋದಿ ವಿರುದ್ಧ ಟೀಕಿಸಿದ್ದಾರೆ.

    ಭಾರತೀಯರು ಸ್ನೇಹಶೀಲರಾಗಿದ್ದರೆ ಪಾಕಿಸ್ತಾನಿಯರು (Pakistanis) ಇನ್ನೂ ಹೆಚ್ಚು ಸ್ನೇಹಶೀಲರಾಗಿರುತ್ತಾರೆ. ಪಾಕಿಸ್ತಾನದಷ್ಟು ಪ್ರೀತಿ ತೋರುವ ಇನ್ನಾವುದೇ ದೇಶವನ್ನು ನಾನು ನೋಡಿಲ್ಲ. ನನ್ನ ಅನುಭವದಲ್ಲಿ ಹೇಳುವುದಾದ್ರೆ ಪಾಕಿಸ್ತಾನಿಯರು ಎಲ್ಲದಕ್ಕೂ ಅತಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ನಾವು ಸ್ನೇಹಶೀಲರಾಗಿದ್ದರೆ ಅವರು ಅತೀ ಸ್ನೇಹಶೀಲರಾಗಿರುತ್ತಾರೆ. ನಾವು ತಿರುಗಿನಿಂತರೆ ಅವರು ಇನ್ನೂ ತೀಕ್ಷ್ಣವಾಗಿ ತಿರುಗಿ ನಿಲ್ಲುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ದೊಡ್ಡ ಗೆಲುವು – ಕತಾರ್‌ನಲ್ಲಿ ಅರೆಸ್ಟ್‌ ಆಗಿದ್ದ ನೌಕಾ ಅಧಿಕಾರಿಗಳು ಬಿಡುಗಡೆ, ಸ್ವದೇಶಕ್ಕೆ ವಾಪಸ್‌

    ಪಾಕಿಸ್ತಾನದ ಅಲ್ಹಾಮಾದಲ್ಲಿ ನಡೆದ ಫೈಜ್ ಉತ್ಸವದಲ್ಲಿ ಇತ್ತೀಚೆಗೆ ಮಾತನಾಡಿದ್ದ ಅವರು, ನಾನು ಈ ಹಿಂದೆ ಪಾಕಿಸ್ತಾನದಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಕೆಲಸ ಮಾಡಿದ್ದೆ. ಆಗ ಪಾಕಿಸ್ತಾನಿಯರು ನನ್ನನ್ನೂ ನನ್ನ ಪತ್ನಿಯನ್ನೂ ಮುಕ್ತವಾಗಿ ಸ್ವಾಗತಿಸಿ ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದರು. ಹೀಗಾಗಿ ಭಾರತ-ಪಾಕಿಸ್ತಾನದ ನಡುವೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಆದರೆ ಕಳೆದ 10 ವರ್ಷಗಳ ನರೇಂದ್ರ ಮೋದಿ ಆಡಳಿತವು ವಿಶ್ವಾಸದ ಬದಲು ದ್ವೇಷ ಮೂಡಿಸಿದೆ ಎಂದು ಆರೋಪಿಸಿದ್ದಾರೆ.

    ಪಾಕಿಸ್ತಾನ ಹೇಗೆ ಇಸ್ಲಾಮಿಕ್‌ ಗಣರಾಜ್ಯವಾಗಿದೆಯೋ ಹಾಗೆಯೇ ಭಾರತವನ್ನು ಹಿಂದುತ್ವದ ಗಣರಾಜ್ಯವನ್ನಾಗಿ ಮಾಡುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ನಡೆದಿದೆ. ಇದು ತಪ್ಪು. ಪಾಕಿಸ್ತಾನದ ರಚನೆಯ ಕಾಲದಲ್ಲೇ ನೆಹರು ಹಾಗೂ ಗಾಂಧೀಜಿಯವರು ಭಾರತವನ್ನು ಧರ್ಮದ ಆಧಾರದ ಮೇಲೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂಬುದನ್ನು ಪುನರುಚ್ಛರಿಸಿದ್ದರು. ಇದನ್ನೂ ಓದಿ: ಪತಿ-ಪತ್ನಿಯ ವೈಮನಸ್ಸಿನಿಂದ ನಡೆದೇಹೋಯ್ತು ಘೋರ ದುರಂತ – ಮಹಿಳೆ ಮೇಲೆ ಗ್ಯಾಂಗ್‌ ರೇಪ್‌

    ಇನ್ನೂ ಭಾರತ ಹಾಗೂ ಪಾಕಿಸ್ತಾನ ಸರ್ಕಾರಗಳು ಪರಸ್ಪರ ಕಚ್ಚಾಡುತ್ತಿದ್ದರೂ ಉಭಯ ದೇಶಗಳ ಜನರು ಅನ್ಯ ತಟಸ್ಥ ದೇಶಗಳಲ್ಲಿ ಪರಸ್ಪರ ಭೇಟಿಯಾಗಿ ಭ್ರಾತೃತ್ವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ಮಣಿಶಂಕರ್ ಅಯ್ಯರ್ ಅವರು ತಮ್ಮ ಪುಸ್ತಕದಲ್ಲಿ ಪಾಕಿಸ್ತಾನವನ್ನು ಹೊಗಳಿದ್ದು ತೀವ್ರ ವಿವಾದವಾಗಿತ್ತು. ಅಲ್ಲದೇ ಇತ್ತೀಚೆಗಷ್ಟೇ ಮಣಿಶಂಕರ್ ಅಯ್ಯರ್‌ ಪುತ್ರಿ ರಾಮಮಂದಿರ ವಿರೋಧಿಸಿ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಮುಸ್ಲಿಮರು ನಮ್ಮ ಹಿಂದುತ್ವ ಬೆಂಬಲಿಸುತ್ತಾರೆ.. ಬಿಜೆಪಿ ಹಿಂದುತ್ವ ತಿರಸ್ಕರಿಸುತ್ತಾರೆ: ಉದ್ಧವ್‌ ಠಾಕ್ರೆ

  • ಪಾಕ್ ನಾಗರಿಕರಿಗೆ ಆಹಾರ-ನೀರು ಕೊಟ್ಟು ಮಾನವೀಯತೆ ಮೆರೆದ ಪೊಲೀಸರು

    ಪಾಕ್ ನಾಗರಿಕರಿಗೆ ಆಹಾರ-ನೀರು ಕೊಟ್ಟು ಮಾನವೀಯತೆ ಮೆರೆದ ಪೊಲೀಸರು

    ಚಂಡೀಗಢ: ಭಾರತ ಮತ್ತು ಪಾಕಿಸ್ತಾನ ಜನರು ನಡುವೆ ಸದ್ಯಕ್ಕೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಪಾಕಿಸ್ತಾನದ ಅಧಿಕಾರಿಗಳು ಸಂಜೋತಾ ಎಕ್ಸ್ ಪ್ರೆಸ್ ರೈಲನ್ನು ಸ್ಥಗಿತಗೊಳಿಸಿದ್ದರು. ಇದರಿಂದ ಪಾಕಿಸ್ತಾನಿಯರು ಭಾರತದ ಪಂಜಾಬ್ ನಲ್ಲಿ ಸಿಲುಕಿಕೊಂಡಿದ್ದರು. ಅವರಿಗೆ ಪಂಜಾಬ್ ಪೊಲೀಸರು ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಶಾಂತಿ ಸಂಕೇತವಾಗಿ ಎರಡು ರಾಷ್ಟ್ರಗಳ ನಡುವೆ ಸಂಜೋತಾ ಎಕ್ಸ್ ಪ್ರೆಸ್ ಸಂಚರಿಸುತ್ತದೆ. ಆದರೆ ಪಾಕಿಸ್ತಾನ ಅಧಿಕಾರಿಗಳು ಏಕಾಏಕಿ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ಬೇರೆ ದಾರಿ ಇಲ್ಲದೆ ರೈಲಿನಲ್ಲಿದ್ದ ಸುಮಾರು 40-50 ಪಾಕಿಸ್ತಾನಿ ಪ್ರಯಾಣಿಕರು ಪಂಜಾಬ್‍ನ ಅಮೃತ್‍ಸರದ ಅತಾರಿ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

    ಪಾಕಿಸ್ತಾನಿಯರು ತುಂಬಾ ಸಮಯದವರೆಗೂ ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಇದನ್ನು ನೋಡಿದ ಪಂಜಾಬ್ ಪೊಲೀಸರು ಅವರಿಗೆ ತಿನ್ನಲು ಆಹಾರ ಮತ್ತು ಕುಡಿಯಲು ನೀರು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ತವರಿಗೆ ಮರಳಲು ಕಾಯುತ್ತಿದ್ದ ಪಾಕಿಸ್ತಾನಿ ಪ್ರಯಾಣಿಕರನ್ನು ಪಂಜಾಬ್ ಪೊಲೀಸರು ಅತಾರಿ-ವಾಘಾ ಚೆಕ್‍ ಪೋಸ್ಟ್ ಮೂಲಕ ಅಂತರಾಷ್ಟ್ರೀಯ ಗಡಿಯನ್ನು ದಾಟಿಸಿ ಸಹಾಯ ಮಾಡಿದ್ದಾರೆ.

    ಪಾಕಿಸ್ತಾನ ಸರ್ಕಾರ ಗುರುವಾರ ಎರಡು ರಾಷ್ಟ್ರಗಳ ನಡುವಣ ಶಾಂತಿ ಸಂಕೇತದ ರೈಲನ್ನು ಲಾಹೋರ್ ರೈಲು ನಿಲ್ದಾಣದಿಂದ ಹೊರಡಲು ಅವಕಾಶ ಮಾಡಿಕೊಡಲಿಲ್ಲ. ಈ ರೈಲು ಭಾರತ ಮತ್ತು ಪಾಕಿಸ್ತಾನದ ನಡುವೆ ಸೋಮವಾರ ಮತ್ತು ಗುರುವಾರ ಸಂಚರಿಸುತ್ತದೆ. ಇದು ಲಾಹೋರ್ ಮತ್ತು ಅತಾರಿ ಮಧ್ಯೆ ಪಂಜಾಬ್ ಗೆ ಸಂಚರಿಸುತ್ತದೆ. ಭಾರತದ ಇನ್ನೊಂದು ರೈಲು ಅತಾರಿಯಿಂದ ದೆಹಲಿಗೆ ಸಂಪರ್ಕ ಕಲ್ಪಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv