Tag: pakistan

  • ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ ಶಾಹಿದ್ ಅಫ್ರಿದಿ

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ ಶಾಹಿದ್ ಅಫ್ರಿದಿ

    ಇಸ್ಲಾಮಾಬಾದ್: ಪಾಕಿಸ್ತಾನದ ಆಲ್ ರೌಂಡರ್ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.

    ಭಾನುವಾರದಂದು ಅಫ್ರಿದಿ ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದುತ್ತಿರುವ ಬಗ್ಗೆ ಘೋಷಿಸಿದ್ರು. 36 ವರ್ಷದ ಅಫ್ರೀದಿ ಈಗಾಗಲೇ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಪಂದ್ಯಗಳಿಂದ ನಿವೃತ್ತರಾಗಿದ್ರು.

    2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಅಫ್ರಿದಿ ತಂಡದ ನಾಯಕತ್ವ ವಹಿಸಿದ್ರು. ಪಂದ್ಯಾವಳಿಯ ನಂತರ ನಾಯಕ ಸ್ಥಾನದಿಂದ ಕೆಳಗಿಳಿದಿದ್ರು.

    ಅಫ್ರಿದಿ 1996ರಲ್ಲಿ 37 ಬಾಲ್‍ಗಳಿಗೆ ಸೆಂಚುರಿ ಬಾರಿಸಿ ಅಭಿಮಾನಿಗಳ ಫೇವರೇಟ್ ಆಟಗಾರಾಗಿದ್ದರು. ಅಂದು ಅಫ್ರಿದಿ ನಿರ್ಮಿಸಿದ್ದ ಈ ವಿಶ್ವದಾಖಲೆಯನ್ನ ಮುಂದಿನ 18 ವರ್ಷಗಳವರೆಗೆ ಯಾರೂ ಮುರಿದಿರಲಿಲ್ಲ.(ನ್ಯೂಜಿಲ್ಯಾಂಡಿನ ಕೋರಿ ಆಂಡರ್‍ಸನ್ 2014ರಲ್ಲಿ 36 ಬಾಲ್‍ಗಳಿಗೆ ಸೆಂಚುರಿ ಬಾರಿಸಿ ಈ ದಾಖಲೆ ಮುರಿದರು. ನಂತರ ಎಬಿ ಡಿವಿಲ್ಲಿಯರ್ಸ್ 2015ರಲ್ಲಿ 31 ಬಾಲ್‍ಗಳಿಗೆ ಸೆಂಚುರಿ ಬಾರಿಸಿದ್ದು ಸದ್ಯದ ದಾಖಲೆಯಾಗಿದೆ.)

    ಅಫ್ರಿದಿ 523 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 10,645 ರನ್ ಹಾಗೂ 540 ವಿಕೆಟ್‍ಗಳನ್ನ ಪಡೆದಿದ್ದಾರೆ. 27 ಟೆಸ್ಟ್ ಪಂದ್ಯಗಳನ್ನ ಆಡಿದ್ದು, 156 ಅತ್ಯಧಿಕ ಸ್ಕೋರ್‍ನೊಂದಿಗೆ ಒಟ್ಟು 1716 ರನ್ ಹಾಗೂ 48 ವಿಕೆಟ್‍ಗಳನ್ನ ಪಡೆದಿದ್ದಾರೆ. 398 ಏಕದಿನ ಪಂದ್ಯಗಳನ್ನ ಆಡಿದ್ದು, 124 ರನ್‍ಗಳ ಅತ್ಯಧಿಕ ಸ್ಕೋರ್‍ನೊಂದಿಗೆ ಒಟ್ಟು 8064 ರನ್ ಹಾಗೂ 395 ವಿಕೆಟ್‍ಗಳನ್ನ ಪಡೆದಿದ್ದಾರೆ. 98 ಟಿ20 ಪಂದ್ಯಗಳನ್ನಾಡಿ 1405 ರನ್ ಹಾಗೂ 97 ವಿಕೆಟ್‍ಗಳನ್ನ ಪಡೆದಿದ್ದಾರೆ.

     

  • ಪಾಕಿಸ್ತಾನ ಸಂಸತ್ತಿನಲ್ಲಿ ಹಿಂದೂ ವಿವಾಹ ಮಸೂದೆ ಸರ್ವಾನುಮತದಿಂದ ಅಂಗೀಕಾರ

    ಪಾಕಿಸ್ತಾನ ಸಂಸತ್ತಿನಲ್ಲಿ ಹಿಂದೂ ವಿವಾಹ ಮಸೂದೆ ಸರ್ವಾನುಮತದಿಂದ ಅಂಗೀಕಾರ

    ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತಿನಲ್ಲಿ ಬಹುಚರ್ಚಿತ ಹಿಂದೂ ವಿವಾಹ ಮಸೂದೆ 2017 ಸರ್ವಾನುಮತದಿಂದ ಅಂಗೀಕಾರವಾಗಿದೆ.

    ಶುಕ್ರವಾರದಂದು ಪಾಕಿಸ್ತಾನ ಸಂಸತ್ತು ಹಿಂದೂ ವಿವಾಹ ಮಸೂದೆಯನ್ನು ಅಳವಡಿಸಿಕೊಂಡಿದೆ. ಈ ಮಸೂದೆ 2015ರ ಸೆಪ್ಟೆಂಬರ್ 26ರಂದೇ ಕಳಮನೆ/ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಂಗೀಕಾರವಾಗಿತ್ತು. ಈಗ ಇದಕ್ಕೆ ರಾಷ್ಟ್ರಪತಿಗಳ ಅಂಕಿತವಷ್ಟೆ ಬಾಕಿ ಇದೆ.

    ಕಾನೂನು ಸಚಿವ ಝಾಹಿದ್ ಹಮೀದ್ ಮಂಡಿಸಿದ ಈ ಮಸೂದೆಗೆ ಯಾವುದೇ ವಿರೋಧವಾಗಲೀ ಆಕ್ಷೇಪವಾಗಲೀ ವ್ಯಕ್ತವಾಗಲಿಲ್ಲ.

    ಈ ಕಾಯ್ದೆ ಜಾರಿಗೆ ಬಂದ ನಂತರ ಹಿಂದೂ ಮಹಿಳೆಯರ ವಿವಾಹಕ್ಕೆ ಅಧಿಕೃತ ದಾಖಲೆ ಸಿಗಲಿದೆ. ಮುಸ್ಲಿಮರಿಗೆ ನಿಖಾನಾಮಾ ಇದ್ದಂತೆ ಹಿಂದೂಗಳಿಗೆ ಶಾದಿ ಪರಾತ್ ಹೆಸರಿನಲ್ಲಿ ಪುರೋಹಿತರ ಸಹಿ ಮತ್ತು ಸಂಬಂಧಪಟ್ಟ ಸರ್ಕಾರಿ ಇಲಾಖೆಯ ನೋಂದಣಿಯೊಂದಿಗೆ ಮದುವೆಯ ದಾಖಲೆ ಸಿಗಲಿದೆ.

    ಇಲ್ಲಿಯವರೆಗೆ ಹಿಂದೂ ಮಹಿಳೆಯರು ತಾವು ವಿವಾಹಿತರೆಂದು ಸಾಬೀತುಪಡಿಸಲು ಕಷ್ಟವಾಗಿತ್ತು. ಇದೇ ಕಾರಣದಿಂದ ದುಷ್ಕರ್ಮಿಗಳು ಬಲವಂತವಾಗಿ ಮತಾಂತರ ಮಾಡಿಸುತ್ತಿದ್ದರು. ಈ ಕಾಯ್ದೆಯಿಂದ ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಮಹಿಳೆಯರ ಬಲವಂತ ಮತಾಂತರಕ್ಕೆ ಕಡಿವಾಣ ಬೀಳಲಿದೆ ಎಂದು ಇಲ್ಲಿನ ಹಿಂದೂ ಶಾಸಕ ರಮೇಶ್ ಕುಮಾರ್ ವಾಂಕ್ವಾನಿ ಹೇಳಿದ್ದಾರೆ.

  • ಸೌದಿ ಅರೇಬಿಯಾದಿಂದ 39 ಸಾವಿರ ಪಾಕ್ ಪ್ರಜೆಗಳ ಗಡೀಪಾರು

    ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನೆಲೆಸಿದ್ದಕ್ಕೆ ಸೌದಿ ಅರೇಬಿಯಾ 39 ಸಾವಿರ ಪಾಕಿಸ್ತಾನದ ಪ್ರಜೆಗಳನ್ನು ಗಡೀಪಾರು ಮಾಡಿದೆ.

    ವೀಸಾ ಉಲ್ಲಂಘಿಸಿದ್ದಕ್ಕೆ ಕಳೆದ ನಾಲ್ಕು ತಿಂಗಳಿನಲ್ಲಿ ಸುಮಾರು 39 ಸಾವಿರ ಪಾಕಿಸ್ತಾನ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ಸೌದಿ ಅರೇಬಿಯಾದ ಭದ್ರತಾ ಮೂಲಗಳನ್ನು ಆಧಾರಿಸಿ ‘ಸೌದಿ ಗ್ಯಾಜೆಟ್’ ವರದಿ ಮಾಡಿದೆ.

    ಕೆಲ ಪಾಕಿಸ್ತಾನ ಪ್ರಜೆಗಳು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಜೊತೆ ತೊಡಗಿದ್ದ ಹಿನ್ನೆಲೆಯಲ್ಲಿ ಅವರ ದಾಖಲೆ ಪರಿಶೀಲಿಸುವಂತೆ ಭದ್ರತಾ ಅಧಿಕಾರಿಗಳು ಆದೇಶಿಸಿದ್ದಾರೆಂದು ಪತ್ರಿಕೆ ತಿಳಿಸಿದೆ. ಕಳ್ಳತನ, ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ, ನಕಲು ಮತ್ತು ಹಲ್ಲೆಯಂತಹ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಇನ್ನುಳಿದವರನ್ನು ಸ್ವದೇಶಕ್ಕೆ ಕಳುಹಿಸಲಾಗಿದೆ ಎಂದು ಹೇಳಿದೆ.

    ಫೆಬ್ರವರ ಮೊದಲ ವಾರದಲ್ಲಿ ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನೀಡದೇ ಇರಲು ಕುವೈತ್ ನಿರ್ಧರಿಸಿದೆ. ಪಾಕಿಸ್ತಾನ, ಸಿರಿಯಾ, ಇರಾಕ್, ಆಫ್ಘಾನಿಸ್ಥಾನ ಮತ್ತು ಇರಾನ್ ರಾಷ್ಟ್ರಗಳ  ಇಸ್ಲಾಮಿಕ್ ಉಗ್ರಗಾಮಿಗಳ ವಲಸೆ ತಡೆಯಲು ಕುವೈತ್ ವೀಸಾ ನೀಡದೇ ಇರುವ ನಿರ್ಧಾರಕ್ಕೆ ಬಂದಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆದರೆ ಈ ವರದಿಯನ್ನು ಪಾಕಿಸ್ತಾನ ನಿರಾಕರಿಸಿತ್ತು.

  • ಪಾಕಿಸ್ತಾನ ಸೇರಿ 5 ಮುಸ್ಲಿಂ ರಾಷ್ಟ್ರಗಳಿಗೆ ಇನ್ನು ಮುಂದೆ ಕುವೈತ್ ವೀಸಾ ಸಿಗಲ್ಲ

    ಕುವೈತ್: ಅಮೆರಿಕ 7 ಮುಸ್ಲಿಮ್ ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ನಿರ್ಬಂಧಿಸಿದ ಬೆನ್ನಲ್ಲೇ ಈಗ ಕುವೈತ್ ಪಾಕಿಸ್ತಾನ ಸೇರಿದಂತೆ 5 ರಾಷ್ಟ್ರದ ಪ್ರಜೆಗಳಿಗೆ ವೀಸಾ ನಿರ್ಬಂಧಿಸಿ ಆದೇಶ ಹೊರಡಿಸಿದೆ.

    ಪಾಕಿಸ್ತಾನ, ಸಿರಿಯಾ, ಇರಾಕ್, ಆಫ್ಘಾನಿಸ್ಥಾನ ಮತ್ತು ಇರಾನ್ ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡದೇ ಇರಲು ಕುವೈತ್ ನಿರ್ಧರಿಸಿದೆ. ಇಸ್ಲಾಮಿಕ್ ಉಗ್ರಗಾಮಿಗಳ ವಲಸೆ ತಡೆಯಲು ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ಸ್ಪುಟ್ನಿಕ್ ಇಂಟರ್‍ನ್ಯಾಷನಲ್ ವರದಿ ಮಾಡಿದೆ.

    ಟ್ರಂಪ್ ಆಡಳಿತಕ್ಕೂ ಬರುವ ಮೊದಲೇ ಸಿರಿಯಾ ನಾಗರೀಕರ ಪ್ರವೇಶಕ್ಕೆ ಕುವೈತ್ ದೇಶ ನಿರ್ಬಂಧ ಹಾಕಿತ್ತು. 2011 ರಲ್ಲೇ ಎಲ್ಲ ಸಿರಿಯನ್ ಪ್ರಜೆಗಳ ವೀಸಾಗಳನ್ನು ಕುವೈತ್ ನಗರ ಅಮಾನತಿನಲ್ಲಿಟ್ಟಿತ್ತು.

    2015 ರಲ್ಲಿ ಶಿಯಾ ಮಸೀದಿಯೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 27 ಕುವೈತ್ ಪ್ರಜೆಗಳು ಮೃತಪಟ್ಟಿದ್ದರು.

    ಇರಾಕ್, ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್ ದೇಶದ ಜನರ ಅಮೆರಿಕ ಪ್ರವೇಶವನ್ನು ನಿರ್ಬಂಧಿಸುವ ಯೋಜನೆಗೆ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದರು. ಭಯೋತ್ಪಾಕರಿಗೆ ಆಶ್ರಯ ನೀಡುತ್ತಿರುವ ಇನ್ನಷ್ಟು ದೇಶಗಳಿಗೆ ಈ ನಿರ್ಬಂಧ ಹೇರುವ ಸಾಧ್ಯತೆಯಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ತಿಳಿಸಿದ್ದರು.