Tag: Pakistan Loan

  • ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಇಸ್ಲಾಮಾಬಾದ್:‌ ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಪಾಕಿಸ್ತಾನವನ್ನ ಶೆಹಬಾಜ್ ಷರೀಫ್ (Shehbaz Sharif) ಆಡಳಿತ ಇನ್ನಷ್ಟು ಸಾಲದ ಕೂಪಕ್ಕೆ ತಳ್ಳಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪ್ರಸಕ್ತ ವರ್ಷ ಜೂನ್‌ ವೇಳೆಗೆ ಪಾಕಿಸ್ತಾನದ ಸಾಲದ ಮಿತಿ 2,86,832 ಶತಕೋಟಿ ಡಾಲರ್‌ (USD) ಅಂದ್ರೆ ಸುಮಾರು 80.6 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗೆ ಏರಿಕೆಯಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದ್ರೆ 13 ಪ್ರತಿಶತದಷ್ಟು ಹೆಚ್ಚಾಗಿದೆ.

    ಹೌದು. ಪಾಕಿಸ್ತಾನದ ಹಣಕಾಸು ಸಚಿವಾಲಯ (Pakistan Ministry of Finance) ಬಿಡುಗಡೆ ಮಾಡಿದ 2025ರ ಅಂಕಿ-ಅಂಶದ ಪ್ರಕಾರ, ಜೂನ್ 2025ರ ಅಂತ್ಯದ ವೇಳೆಗೆ ಪಾಕಿಸ್ತಾನದ ಒಟ್ಟು ಸಾಲ 80.6 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗಳಷ್ಟಾಗಿದೆ. ಇದರಲ್ಲಿ 54.5 ಲಕ್ಷ ಕೋಟಿ ದೇಶಿಯ ಸಾಲ, 26 ಲಕ್ಷ ಕೋಟಿ ಬಾಹ್ಯ ಸಾಲ ಇದೆ. ಅಲ್ಲದೇ ದೇಶದ ಸಾಲದ ಪ್ರಮಾಣ ಜಿಡಿಪಿಗಿಂತ 70% ಏರಿಕೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ʻಒಂದ್‌ ಸಲ ಕಮಿಟ್‌ ಆದ್ರೆ ತನ್ನ ಮಾತ್‌ ತಾನೇ ಕೇಳಲ್ಲʼ – ಜಾಹೀರಾತಿನಿಂದ ಸಿಟ್ಟಿಗೆದ್ದ ಟ್ರಂಪ್‌, ಕೆನಡಾ ಮೇಲೆ ಹೆಚ್ಚುವರಿ 10% ಸುಂಕ

    ಸಾಲದ ಹೊರೆ ಹೆಚ್ಚಾಗಿದ್ದೇಕೆ?
    ದೇಶಿಯ ಸಾಲವು ವರ್ಷದಿಂದ ವರ್ಷಕ್ಕೆ ಶೇ.15 ರಷ್ಟು ಏರಿಕೆಯಾಗುತ್ತಿದೆ. ಇದರೊಂದಿಗೆ ಬಾಹ್ಯ ಸಾಲವು ವಾರ್ಷಿಕ ಶೇ.6 ರಷ್ಟು ಹೆಚ್ಚಾಗುತ್ತಾ ಬಂದಿದೆ. ಐಎಂಎಫ್‌, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB), ಇತರ ಬಹುಪಕ್ಷೀಯ ಸಂಸ್ಥೆಗಳಿಂದ ಸಂಸ್ಥೆಗಳಿಂದಲೂ ನಿಧಿಗಳು ಹರಿದುಬಂದಿದ್ದು, ಸಾಲದ ಹೊರೆ ಹೆಚ್ಚಾಗುತ್ತ ಸಾಗಿದೆ. ಇದನ್ನೂ ಓದಿ: Bihar Election 2025 | ಪಂಚಾಯತ್ ಪ್ರತಿನಿಧಿಗಳಿಗೆ ಪಿಂಚಣಿ, 50 ಲಕ್ಷ ವಿಮೆ, 5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತೇಜಸ್ವಿ ಭರವಸೆ

  • ಅಸಲಿ ಆಟ ಈಗ ಶುರು – ಸಾಲದ ಹಣ ಬಿಡುಗಡೆಗೆ ಪಾಕ್‌ಗೆ 11 ಷರತ್ತು ವಿಧಿಸಿದ IMF

    ಅಸಲಿ ಆಟ ಈಗ ಶುರು – ಸಾಲದ ಹಣ ಬಿಡುಗಡೆಗೆ ಪಾಕ್‌ಗೆ 11 ಷರತ್ತು ವಿಧಿಸಿದ IMF

    – ಒಟ್ಟು 50 ಕಂಡೀಷನ್‌; ಪಾಲಿಸದಿದ್ರೆ ಹಣ ಸಿಗಲ್ಲ ಅಂತ ವಾರ್ನಿಂಗ್‌

    ಇಸ್ಲಾಮಾಬಾದ್‌: ಭಾರತದ ಆಪರೇಷನ್‌ ಸಿಂಧೂರ (Operation Sindoor) ಬಳಿಕ ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಇದೀಗ ತನ್ನ ವರಸೆ ಬದಲಿಸಿದೆ. ಸಾಲದ ಹಣ ಬಿಡುಗಡೆ ಮಾಡುವುದಕ್ಕೆ ಮೊದಲೇ 11 ಹೊಸ ಷರತ್ತುಗಳನ್ನು ಪಾಕಿಸ್ತಾನಕ್ಕೆ ವಿಧಿಸಿದೆ. ಜೊತೆಗೆ ಷರತ್ತು ಪಾಲಿಸದಿದ್ದರೆ ಹಣ ಸಿಗುವುದಿಲ್ಲ ಅಂತ ಎಚ್ಚರಿಕೆಯನ್ನೂ ನೀಡಿದೆ.

    ಹೌದು.. ಪಾಕಿಸ್ತಾನಕ್ಕೆ ಸಾಲ (Pakistan Loan) ಮಂಜೂರು ಮಾಡಿದ ಬಳಿಕ ಐಎಂಎಫ್‌ಗೆ ಸಾಲ ಮರುಪಾವತಿ ಆಗುತ್ತದೆಯೇ ಇಲ್ಲವೇ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಸಾಲ ಮಂಜೂರು ಮಾಡಿದ್ದ ಐಎಂಎಫ್‌ 11 ಹೊಸ ಷರತ್ತುಗಳನ್ನು ವಿಧಿಸಿದೆ. ಇದರಿಂದ ಪಾಕ್‌ ಮೇಲೆ ಈವರೆಗೆ ವಿಧಿಸಿರುವ ಒಟ್ಟು ಷರತ್ತುಗಳು 50ಕ್ಕೆ ಏರಿಕೆಯಾಗಿದೆ. ಈ ಷರತ್ತುಗಳನ್ನು ಪೂರೈಸದ್ದರೆ ಮುಂದಿನ ಕಂತಿನ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಐಎಂಎಫ್‌ ಖಡಕ್ಕಾಗಿ ಹೇಳಿದೆ. ಇದನ್ನೂ ಓದಿ: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು – ಪಾಕ್‌ನಲ್ಲಿ ಹೆಚ್ಚಿದ ಹಸಿವು; 1.1 ಕೋಟಿ ಜನರಿಗೆ ಆಹಾರ ಅಭದ್ರತೆ

    india pakistan

    ಜೊತೆಗೆ ಭಾರತ-ಪಾಕಿಸ್ತಾನದ ಉದ್ವಿಗ್ನತೆ (India Pakistan Clash) ಮುಂದುವರಿದ್ರೆ ಅದರ ಪರಿಣಾಮವು ಹಣಕಾಸು ವ್ಯವಸ್ಥೆ, ದೇಶದ ಆಂತರಿಕ ಮತ್ತು ಬಾಹ್ಯ ಸುಧಾರಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಭಾರತ, ಚೀನಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಎತ್ತಿಕಟ್ಟುತ್ತಿವೆ: ರಷ್ಯಾ ವಿದೇಶಾಂಗ ಸಚಿವ

    17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್‌ಗೆ ಅನುಮೋದನೆ ನೀಡುವುದು, ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ ತರುವುದು, ವಿದ್ಯುತ್ ಬಿಲ್‌ಗಳ ಮೇಲೆ ಹೆಚ್ಚಿನ ಸರ್‌ಚಾರ್ಜ್ ವಿಧಿಸುವುದು ಸೇರಿದಂತೆ 11 ಷರತ್ತುಗಳನ್ನು ವಿಧಿಸಿದೆ. ಇದು ದುಸ್ಥಿತಿಯಲ್ಲಿರುವ ಪಾಕಿಸ್ತಾನದ ಆರ್ಥಿಕತೆಗೆ ಮತ್ತಷ್ಟು ಹೊಡೆತ ನೀಡುವ ಸಾಧ್ಯತೆಗಳಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

    ಏನೇನು ಷರತ್ತುಗಳು?
    * ಮುಂದಿನ ಜುಲೈ 1ರೊಳಗೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಯ ಅಧಿಸೂಚನೆ ಹೊರಡಿಸುವುದು.
    * 2026ರ ಫೆಬ್ರವರಿ 15 ರೊಳಗೆ ಅರ್ಧ ವಾರ್ಷಿಕ ಅನಿಲ ದರ ಹೊಂದಾಣಿಕೆ.
    * ವಿದ್ಯುತ್‌ ಸ್ಥಾವರಗಳ ಮೇಲೆ ವಿಧಿಸುವ ಶುಲ್ಕಕ್ಕೆ ಈ ವರ್ಷದ ಅಂತ್ಯದೊಳಗೆ ಸುಗ್ರೀವಾಜ್ಞೆ ಶಾಶ್ವತಗೊಳಿಸಬೇಕು (ಕೈಗಾರಿಕಾ ಇಂಧನ ಬಳಕೆಯನ್ನು ರಾಷ್ಟ್ರೀಯ ಗ್ರಿಡ್‌ಗೆ ಬದಲಾಯಿಸುವ ಗುರಿ)
    * ಮುಂದಿನ ಜೂನ್ ಅಂತ್ಯದ ವೇಳೆಗೆ ಸಾಲ ಸೇವಾ ಸರ್‌ಚಾರ್ಜ್‌ನ ಪ್ರತಿ ಯೂನಿಟ್‌ಗೆ 3.21 ರೂ. ಮಿತಿ ತೆಗೆದುಹಾಕುವುದು.
    * 17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್‌ಗೆ ಸಂಸತ್ತಿನ ಅನುಮೋದನೆ
    * ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ
    * ದೀರ್ಘ ಕಾಲಕ್ಕೆ ಹಣಕಾಸು ವಲಯಕ್ಕೆ ಕಾರ್ಯತಂತ್ರ
    * ವಿಶೇಷ ತಂತ್ರಜ್ಞಾನ ವಲಯಗಳ ಪ್ರೋತ್ಸಾಹಕ್ಕಾಗಿ ಹಂತ-ಹಂತದ ಯೋಜನೆ
    * 3 ವರ್ಷಗಳು ಮಾತ್ರ ಉಪಯೋಗಿಸಿದ ಕಾರು ಆಮದು ಉದಾರೀಕರಣ
    * ಅಭಿವೃದ್ಧಿ ವೆಚ್ಚದ ಬದ್ಧತೆ
    * 6 ಟ್ರಿಲಿಯನ್ ಬಜೆಟ್‌ನಲ್ಲಿ 1.07 ಟ್ರಿಲಿಯನ್ ಅಭಿವೃದ್ಧಿ ವೆಚ್ಚಕ್ಕೆ ಮೀಸಲಿಡಬೇಕು.

    IMF ಗುರಿಗಳಿಗೆ ಅನುಗುಣವಾಗಿ ಷರತ್ತು
    IMF ವರದಿಯ ಪ್ರಕಾರ, ಪಾಕಿಸ್ತಾನದ ಮುಂಬರುವ ರಕ್ಷಣಾ ಬಜೆಟ್ ವೆಚ್ಚ 2,414 ಶತಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ 12% ಹೆಚ್ಚಾಗಲಿದೆ. ಆದರೆ ಇತ್ತೀಚೆಗೆ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರವು ಈ ತಿಂಗಳ ಆರಂಭದಲ್ಲಿ ಇದನ್ನು 2,500 ಶತಕೋಟಿ ರೂ. ಅಂದರೆ 18% ಹೆಚ್ಚಿಸಲು ನಿರ್ಧರಿಸಿದೆ, ಇದು IMF ಹಣಕಾಸಿನ ಸಮತೋಲನ ಗುರಿಗೆ ವಿರುದ್ಧವಾಗಿದೆ. IMF ಗುರಿಗಳಿಗೆ ಅನುಗುಣವಾಗಿ ಇದೇ ಜೂನ್ ತಿಂಗಳ ಒಳಗೆ 2026ರ ಬಜೆಟ್ ಅನ್ನು ಅಂಗೀಕರಿಸುವಂತೆ ಐಎಂಎಫ್‌ ಸಂಸತ್ತಿಗೆ ಹೇಳಿದೆ. ಇದನ್ನೂ ಓದಿ: Hyderabad Fire | ಕಾಪಾಡಲು ಹೋಗಿದ್ದ ತಾಯಿ ಮಕ್ಕಳನ್ನು ಅಪ್ಪಿಕೊಂಡೇ ಸುಟ್ಟು ಕರಕಲು!

  • ಭಾರತದ ವಿರೋಧದ ನಡುವೆಯೂ ಪಾಕ್‌ಗೆ 19,000 ಕೋಟಿ ಸಾಲ ಕೊಟ್ಟ ಐಎಂಎಫ್‌

    ಭಾರತದ ವಿರೋಧದ ನಡುವೆಯೂ ಪಾಕ್‌ಗೆ 19,000 ಕೋಟಿ ಸಾಲ ಕೊಟ್ಟ ಐಎಂಎಫ್‌

    ನವದೆಹಲಿ: ಭಾರತದ (India) ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) 19 ಸಾವಿರ ಕೋಟಿ ಸಾಲವನ್ನು ಮಂಜೂರು ಮಾಡಿದೆ.

    ಐಎಂಎಫ್ ಕಾರ್ಯಕಾರಿ ಮಂಡಳಿಯು ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್‌ಗಳ ಎರಡನೇ ಸಾಲದ ಕಂತನ್ನು ವಿತರಿಸಲು ಅನುಮೋದನೆ ನೀಡಿದೆ. ಇದನ್ನೂ ಓದಿ: ನಾವಿರುವ ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳುತ್ತಿದೆ: ಓಮರ್ ಅಬ್ದುಲ್ಲಾ

    ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗೆ ಹಣಕಾಸಿನ ನೆರವು ಎಂದು ಭಾರತ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಪಾಕಿಸ್ತಾನಕ್ಕೆ ಸಾಲ ನೀಡುವ ಸಂಬಂಧ ಮತದಾನದಿಂದ ಭಾರತ ದೂರ ಉಳಿಯಿತು.

    ಪುನರಾವರ್ತಿತ ಆರ್ಥಿಕ ಬಿಕ್ಕಟ್ಟುಗಳು ಮತ್ತು ಹಿಂದಿನ ಐಎಂಎಫ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಕಳಪೆ ದಾಖಲೆಯಿಂದ ಗುರುತಿಸಲ್ಪಟ್ಟ ಇಎಫ್‌ಎಫ್ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನದ ಪ್ರಗತಿಯನ್ನು ಐಎಂಎಫ್ ಪರಿಶೀಲಿಸಿದ ನಂತರ ಈ ಅನುಮೋದನೆ ನೀಡಲಾಗಿದೆ. ಹಿಂದಿನ ಐಎಂಎಫ್ ಸಾಲಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ಪಾಕಿಸ್ತಾನದ ನಿರಂತರ ವೈಫಲ್ಯದ ಬಗ್ಗೆ ಭಾರತ ಎಚ್ಚರಿಕೆ ನೀಡಿತ್ತು. ನಿಧಿಯ ಕಾರ್ಯಕ್ರಮ ವಿನ್ಯಾಸಗಳು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳು ದೇಶದ ಆರ್ಥಿಕ ಮತ್ತು ರಾಜಕೀಯ ವಾಸ್ತವಗಳಿಗೆ ಹೊಂದಿಕೊಳ್ಳುತ್ತವೆಯೇ ಎಂದು ಪ್ರಶ್ನಿಸಿತ್ತು. ಇದನ್ನೂ ಓದಿ: ಫಿರೋಜ್‌ಪುರದ ಮನೆ ಮೇಲೆ ಬಿದ್ದ ಪಾಕ್‌ ಡ್ರೋನ್‌ – ಮೂವರಿಗೆ ಗಾಯ, ಓರ್ವ ಗಂಭೀರ

    ಕಳೆದ ಐದು ವರ್ಷಗಳಲ್ಲಿ ನಾಲ್ಕು ಐಎಂಎಫ್ ಕಾರ್ಯಕ್ರಮಗಳ ಹೊರತಾಗಿಯೂ, ಪಾಕಿಸ್ತಾನವು ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಲೇ ಇದೆ ಎಂದು ಭಾರತ ಎತ್ತಿ ತೋರಿಸಿದೆ. ಇದರಿಂದಾಗಿ ಭವಿಷ್ಯದ ಸಾಲ ನೀಡಿಕೆಯು ಹೆಚ್ಚಿನ ಯಶಸ್ಸನ್ನು ನೀಡುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಭಾರತ ಗಮನ ಸೆಳೆದಿತ್ತು.

  • ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಸಿಗುತ್ತಾ ಬೂಸ್ಟರ್‌ ಡೋಸ್‌!

    ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಸಿಗುತ್ತಾ ಬೂಸ್ಟರ್‌ ಡೋಸ್‌!

    ಸಾಮಾನ್ಯವಾಗಿ ಯಾವುದೇ ಒಂದು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಾಗ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಆರ್ಥಿಕ ನೆರವು ಪಡೆಯುತ್ತವೆ. ಇದೀಗ ದಿವಾಳಿ ಹಂತ ತಲುಪಿರುವ ಪಾಕಿಸ್ತಾನ ಕೂಡ ಅದೇ ದಾರಿ ಅನುರಿಸಿದೆ. ಈ ಹಿಂದೆ ಐಎಂಎಫ್ ಮಾತ್ರವಲ್ಲದೇ ಸೌದಿ, ಚೀನಾ (China) ದೇಶಗಳಿಂದ ಸಾಲ ಪಡೆದಿದ್ದರೂ ಪಾಕ್‌ ದಾರಿದ್ರ್ಯ ನೀಗಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ನಡುವೆ ಐಎಂಎಫ್‌ ಷರತ್ತುಗಳಿಗೆ ಒಪ್ಪಿ‌ ಮತ್ತೆ ಸಾಲ ಪಡೆದುಕೊಳ್ಳಲು ಮುಂದಾಗಿದೆ.

    ಕಳೆದ ಜುಲೈ ತಿಂಗಳಲ್ಲೇ 7 ಶತಕೋಟಿ ಡಾಲರ್‌ ಸಾಲಕ್ಕೆ (Billion USD Loan) ಐಎಂಎಫ್‌ ಜೊತೆಗೆ ಮಾತುಕತೆ ಮುಕ್ತಾಯಗೊಂಡಿದೆ. ಆದರೂ ಈವರೆಗೆ ಸಾಲ ಸಿಕ್ಕಿಲ್ಲ. ಏಕೆಂದರೆ ಐಎಂಎಫ್‌ ಕಾರ್ಯಕಾರಿ ಮಂಡಳಿ ಸಾಲಕ್ಕೆ ಅನುಮೋದನೆ ನೀಡಿಲ್ಲ. ಇದೇ ಸೆಪ್ಟೆಂಬರ್‌ 25ರಂದು ಐಎಂಎಫ್‌ ಕಾರ್ಯಕಾರಿ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ಸಾಲ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧಸಲಾಗುತ್ತದೆ. ಒಂದು ವೇಳೆ ಪಾಕ್‌ಗೆ ಸಾಲ ಕೊಡಲು ಅನುಮತಿ ಸಿಕ್ಕರೆ ಮುಂದಿನ 37 ತಿಂಗಳಲ್ಲಿ ಹಂತ ಹಂತವಾಗಿ ಪಾಕ್‌ 7 ಶತಕೋಟಿ ಡಾಲರ್‌ ನೆರವು ಪಡೆದುಕೊಳ್ಳಲಿದೆ. ಹಾಗಿದ್ದರೆ ಐಎಂಎಫ್‌ನ ಷರತ್ತುಗಳೇನು? ಪಾಕ್‌ನ ಪರಿಸ್ಥಿತಿಗೆ ಕಾರಣವೇನು? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

    ಐಎಂಎಫ್‌ ಷರತ್ತುಗಳೇನು?

    ಐಎಂಎಫ್‌ ಪಾಕ್‌ಗೆ ಸಾಲ ನೀಡಲು ಒಪ್ಪಿದಾಗ ಹಲವು ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಪ್ರಮುಖವಾಗಿ ಆದಾಯದ ಮೇಲಿನ ತೆರಿಗೆ ದುಪ್ಪಟ್ಟು ಮಾಡುವುದಾಗಿದೆ. ಮೂಲಗಳ ಪ್ರಕಾರ, ಕೃಷಿ ಆದಾಯದ ಮೇಲಿನ ತೆರಿಗೆಯನ್ನು 15% ನಿಂದ 45%ಗೆ ಹೆಚ್ಚಿಸುವುದಾಗಿ ಷರತ್ತು ವಿಧಿಸಿದೆ. ಜೊತೆಗೆ ವಿದ್ಯುತ್‌ ಮೇಲಿನ ಸಬ್ಸಿಡಿಗಳನ್ನು ಕೊನೆಗೊಳಿಸುವ ಷರತ್ತು ವಿಧಿಸಿದೆ. ಆದಾಗ್ಯೂ ಐಎಂಎಫ್‌ನ ಎಲ್ಲಾ ಷರತ್ತುಗಳಿಗೆ ಪಾಕ್‌ ಸಿದ್ಧ ಎಂದು ಹೇಳಿದೆ. ಖುದ್ದು ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ (shehbaz sharif) ಐಎಂಎಫ್‌ನ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

    ಪಾಕ್‌ ಸರ್ಕಾರದಲ್ಲೇ ಐಎಂಎಫ್‌ ವಿರುದ್ಧ ಭಿನ್ನಮತ:

    ಪಾಕಿಸ್ತಾನಕ್ಕೆ ಐಎಂಎಫ್‌ ಸಾಲ ನೀಡಲು ಒಪ್ಪಿದ ಬಳಿಕ 2 ತಿಂಗಳಾದರೂ ಈ ವರೆಗೆ ಕಾರ್ಯಕಾರಿ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಪಾಕ್‌ ಸರ್ಕಾರದಲ್ಲೇ ಐಎಂಎಫ್‌ ವಿರುದ್ಧ ಭಿನ್ನಮತ ಸ್ಫೋಟಗೊಂಡಿದೆ. ಉಪ ಪ್ರಧಾನಿ ಇಶಾಕ್‌ ದಾರ್‌, ಐಎಂಎಫ್ ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನವನ್ನು ಹಾಳು ಮಾಡಿದೆ. ಪಾಕಿಸ್ತಾನ ದಿವಾಳಿಯಾಗಬೇಕೆಂದು ಐಎಂಎಫ್ ಬಯಸಿದೆ. ಅದಕ್ಕಾಗಿಯೇ ತೆರಿಗೆ ಹೆಚ್ಚಿಸುವ, ಸಬ್ಸಿಡಿಗಳನ್ನು ನಿಲ್ಲಿಸುವ ಷರತ್ತುಗಳನ್ನು ವಿಧಿಸಿದೆ. ಇದನ್ನು ನಮ್ಮ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

    ಸಾಲ ನೀಡಲು ಐಎಂಎಫ್‌ ವಿಳಂಬ ಮಾಡುತ್ತಿರುವುದು ಏಕೆ?

    ಅಂತಾರಾಷ್ಟ್ರೀಯ ಹಣಕಾಸು ನಿಧಿ ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನಕ್ಕೆ ಸಾಲ ನೀಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದ್ರೆ ವಾಸ್ತವಾಂಶ ಬೇರೆಯೇ ಇದೆ. ಈಗಾಗಲೇ ಮುಂದಿನ ಸಾಲಕ್ಕೆ ಪಾಕ್‌ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿದೆ. ಆದ್ರೆ ಸಾಲ ಪಡೆಯುವ ಪೂರ್ವದಲ್ಲಿ ಮಾಡಬೇಕಾದ ಪ್ರಮುಖ ಷರತ್ತುಗಳನ್ನು ಪಾಕ್‌ ಪೂರೈಸುವಲ್ಲಿ ವಿಫಲವಾಗಿದೆ.

    ಏನದು ಷರತ್ತು?: ಐಎಂಎಫ್‌ನಿಂದ ಸಾಲ ಪಡೆಯುವುದಕ್ಕೂ ಮುನ್ನ ಪಾಕ್‌ ತನ್ನ ಮೇಲಿರುವ 12 ಶತಕೋಟಿ ಡಾಲರ್‌ ಸಾಲವನ್ನು ತೀರಿಸಬೇಕು ಎಂಬುದು ಷರತ್ತಾಗಿದೆ. ಸೌದಿ ಅರೇಬಿಯಾಕ್ಕೆ 5 ಶತಕೋಟಿ ಡಾಲರ್‌ ಮತ್ತು ಚೀನಾಕ್ಕೆ 4 ಶತಕೋಟಿ ಡಾಲರ್‌ ಮತ್ತು ಯುಎಇಗೆ 3 ಶತಕೋಟಿ ಡಾಲರ್‌ ಸಾಲವನ್ನು ಪಾಕ್‌ ಮರುಪಾವತಿ ಮಾಡಬೇಕಾಗಿದೆ. 2ನೇ ಷರತ್ತು 2 ಶತಕೋಟಿ ಡಾಲರ್‌ನಷ್ಟು ಪಾಕಿಸ್ತಾನ ಡೆಪಾಸಿಟ್‌ ಹೊಂದಿರಬೇಕು. ಆದ್ರೆ ಪಾಕ್‌ ಈ ಷರತ್ತು ಪಾಲಿಸುವಲ್ಲಿ ವಿಫಲವಾದ ಕಾರಣ ಪಾಕ್‌ ಸಾಲ ಪಡೆದಿಲ್ಲ. ಈ ನಡುವೆ ಪಾಕ್‌ಗೆ ಚೀನಾ ಸೌದಿಗೆ ಶಹಬಾಜ್‌ ಷರೀಫ್‌ ವಿಶೇಷ ಧನ್ಯವಾದ ಅರ್ಪಿಸಿದ್ದು, ಸಾಲ ಮುಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ 2 ಶತಕೋಟಿ ಡಾಲರ್‌ ಹೊಂದಿಸಲು ಪಾಕ್‌ ಮಧ್ಯಪ್ರಾಚ್ಯ ದೇಶಗಳೊಂದಿಗೆ ಸಂಪರ್ಕದಲ್ಲಿದೆ. ಆದಾಗ್ಯೂ ಇದುವರೆಗೆ ಯಾವುದೇ ಒಪ್ಪಂದಗಳು ನಡೆದಿರುವುದು ಬೆಳಕಿಗೆ ಬಂದಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

    ಪಾಕಿಸ್ತಾನಕ್ಕೆ ಸಾಲ ಏಕೆ ಬೇಕು?

    * ಹೆಚ್ಚುತ್ತಿರುವ ಸಾಲದ ಹೊರೆ:
    ಪಾಕಿಸ್ತಾನವು ಸದ್ಯ ಸಾಲದ ಬಲೆಯಲ್ಲಿ ಸಿಲುಕಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ, ಜೂನ್ 2024ರ ವೇಳೆಗೆ ದೇಶವು ಪಾಕಿಸ್ತಾನಿ ರೂಪಾಯಿ 71,245 ಶತಕೋಟಿಗಿಂತ ಹೆಚ್ಚಿನ ಸಾಲವನ್ನು ಹೊಂದಿದೆ. ಇದು ನುಂಗಲಾರದ ತುತ್ತಾಗಿದೆ.

    * ವಿದೇಶಿ ವಿನಿಮಯ ಮೀಸಲು ಖಾಲಿ:
    ಪಾಕಿಸ್ತಾನದ ವಿದೇಶಿ ವಿನಿಮಯಕ್ಕೆ ಮೀಸಲಿರಿಸಿದ್ದ ಖಜಾನೆ ಸಹ ಖಾಲಿಯಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಇತ್ತೀಚಿನ ವರದಿಯ ಅನುಸಾರ, 2020-21ರಲ್ಲಿ 17.2 ಶತಕೋಟಿ ಡಾಲರ್‌ ವಿದೇಶಿ ವಿನಿಮಯವಷ್ಟೇ ಮೀಸಲು ಹೊಂದಿತ್ತು. ಆದರೆ, 2023-24ರ ವೇಳೆಗೆ ಇದು 9.3 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ.

    * ನಿರಂತರವಾಗಿ ಕುಸಿಯುತ್ತಿರುವ ಕರೆನ್ಸಿ ಮೌಲ್ಯ:
    ಪಾಕಿಸ್ತಾನಿ ರೂಪಾಯಿಯ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. 2022ರ ಮೇ ತಿಂಗಳಲ್ಲಿ 1 ಡಾಲರ್‌ಗೆ 185 ಪಾಕಿಸ್ತಾನಿ ರೂಪಾಯಿ ಇತ್ತು. ಆದರೀಗ 1 ಅಮೆರಿಕನ್‌ ಡಾಲರ್‌ಗೆ 278 ಪಾಕಿಸ್ತಾನಿ ರೂ.ನಷ್ಟು ಹೆಚ್ಚಾಗಿದೆ.

    * ಹುಚ್ಚುಚ್ಚಾಗಿ ಹೆಚ್ಚುತ್ತಿರುವ ಹಣದುಬ್ಬರ:
    ಪಾಕಿಸ್ತಾನದಲ್ಲಿ ಹಣದುಬ್ಬರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಕಳೆದ ಕೆಲ ದಿನಗಳಲ್ಲಿ ಹಣದುಬ್ಬರ 10% ಹೆಚ್ಚಾಗಿದೆ. ಉದಾಹರಣೆಗೆ ಒಂದು ಕೆಜಿ ಗೋದಿ ಹಿಟ್ಟು 800 ರೂ.ಗಿಂತಲೂ ಹೆಚ್ಚಾಗಿದೆ.

    ಪಾಕ್‌ ವಿಶ್ವದ 5ನೇ ಅತಿದೊಡ್ಡ ಸಾಲಗಾರನಾಗಿರೋದು ಏಕೆ?

    ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾದಾಗಿನಿಂದ 23 ಬಾರಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆದುಕೊಂಡಿದೆ. ಪಾಕಿಸ್ತಾನ ಐಎಂಎಫ್‌ಗೆ ವಿಶ್ವದ 5ನೇ ಅತಿದೊಡ್ಡ ಸಾಲಗಾರ ರಾಷ್ಟ್ರವಾಗಿದೆ. ಐಎಂಎಫ್‌ ವರದಿ ಪ್ರಕಾರ ಪಾಕಿಸ್ತಾನ 2024ರ ಸೆಪ್ಟೆಂಬರ್‌ 12ರ ವೇಳೆಗೆ ಪಾಕ್‌ 6.15 ಶತಕೋಟಿ ಡಾಲರ್‌ ಸಾಲವನ್ನು ಹೊಂದಿತ್ತು ಎನ್ನಲಾಗಿದೆ.

    ಐಎಂಎಫ್‌ನಿಂದ 31 ಶತಕೋಟಿ ಡಾಲರ್‌ ಸಾಲ ಪಡೆದ ಅರ್ಜೆಂಟೀನಾ ಮೊದಲ ಸ್ಥಾನದಲ್ಲಿತ್ತು. 10.3 ಶತಕೋಟಿ ಡಾಲರ್‌ ಸಾಲ ಪಡೆದ ಈಜಿಪ್ಟ್‌ 2ನೇ ಸ್ಥಾನ, 10.2 ಶತಕೋಟಿ ಡಾಲರ್ ಸಾಲ ಪಡೆದಿರುವ ಉಕ್ರೇನ್ 3ನೇ ಸ್ಥಾನ, 6.4 ಶತಕೋಟಿ ಡಾಲರ್ ಸಾಲ ಪಡೆದುಕೊಂಡಿರುವ ಈಕ್ವೆಡಾರ್‌ 4ನೇ ಸ್ಥಾನದಲ್ಲಿದ್ದರೆ, 1.15 ಶತಕೋಟಿ ಡಾಲರ್‌ ಹೊಂದಿರುವ ಪಾಕ್‌ 5ನೇ ರಾಷ್ಟ್ರವಾಗಿದೆ. ಇದೀಗ ಮುಂದಿನ 37 ತಿಂಗಳಲ್ಲಿ ಹಂತ ಹಂತವಾಗಿ 7 ಶತಕೋಟಿ ಡಾಲರ್‌ ಸಾಲ ಪಡೆದುಕೊಂಡರೆ, ಒಟ್ಟು 13 ಶತಕೋಟಿ ಡಾಲರ್‌ಗಿಂತ ಹೆಚ್ಚು ಸಾಲ ಪಡೆದುಕೊಂಡಂತೆ ಆಗುತ್ತದೆ. ಈ ಮೂಲಕ ಏಷ್ಯಾದಲ್ಲೇ ಪಾಕ್‌ ಅತಿದೊಡ್ಡ ಸಾಲಗಾರ ರಾಷ್ಟ್ರ ಎಂಬ ಕುಖ್ಯಾತಿಗೆ ಗುರಿಯಾಗಲಿದೆ. ‌

    ಸದ್ಯ ಭಾರತದ ಜೊತೆಗೆ ಸಂಬಂಧ ಹೊಂದಲು ಹಾತೊರೆಯುತ್ತಿರುವ ಪಾಕ್‌ ಮುಂದೆ ಯಾವ ರೀತಿ ತನ್ನ ದೇಶವನ್ನು ದಿವಾಳಿತನದಿಂದ ಕಾಪಾಡಿಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.