Tag: Pakistan Election

  • ಪಾಕ್ ಚುನಾವಣೆ ಮತ ಎಣಿಕೆ ಅಂತ್ಯ; ಇಮ್ರಾನ್ ಖಾನ್ ಮುನ್ನಡೆ, ನವಾಜ್ ಷರೀಫ್‌ಗೆ ಸೇನೆ ಬೆಂಬಲ

    ಪಾಕ್ ಚುನಾವಣೆ ಮತ ಎಣಿಕೆ ಅಂತ್ಯ; ಇಮ್ರಾನ್ ಖಾನ್ ಮುನ್ನಡೆ, ನವಾಜ್ ಷರೀಫ್‌ಗೆ ಸೇನೆ ಬೆಂಬಲ

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಪಾಕಿಸ್ತಾನಕ್ಕೆ ಚುನಾವಣೆಯ ಅತಂತ್ರ ತೀರ್ಪಿನಿಂದ ಮತ್ತೊಂದು ಹೊಡೆತ ಬಿದ್ದಿದೆ. ಇತ್ತ ಪಕ್ಷಗಳು ಬಹುಮತಕ್ಕಾಗಿ ನಾಯಕರನ್ನು ಒಗ್ಗೂಡಿಸಲು ಮುಂದಾಗಿದ್ದು, ಕುದುರೆ ವ್ಯಾಪಾರದ ಪರಿಸ್ಥಿತಿ ಎದುರಾಗಿದೆ.

    ಜೈಲಿನಲ್ಲಿರುವ ಇಮ್ರಾನ್ ಖಾನ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿತ್ತು. ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಅವರದೇ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇನ್ಸಾಫ್ (ಪಿಟಿಐ) ಅನ್ನು ಬೆಂಬಲಿಸುವ ಸ್ವತಂತ್ರ ಅಭ್ಯರ್ಥಿಗಳು 101 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಆದರೆ ಸರ್ಕಾರ ರಚನೆಗೆ ಬೇಕಾದ ಬಹುಮತಕ್ಕೆ 32 ಸ್ಥಾನಗಳ ಕೊರತೆಯಿದೆ. ಇದನ್ನೂ ಓದಿ: ಪಾಕ್ ಚುನಾವಣಾ ಫಲಿತಾಂಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿಗಳು

    ಗುರುವಾರ ಸಂಜೆ ಮತದಾನ ಮುಗಿದ ಸುಮಾರು 60 ಗಂಟೆಗಳ ನಂತರ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಯಿತು. ಪಾಕಿಸ್ತಾನ ಚುನಾವಣಾ ಆಯೋಗವು, ಇಂಟರ್ನೆಟ್ ಸಮಸ್ಯೆಯು ವಿಳಂಬಕ್ಕೆ ಕಾರಣವಾಗಿದೆ. ಇದರಿಂದಾಗಿ ಮತದಾನ ಕೇಂದ್ರಗಳು ಫಲಿತಾಂಶ ರವಾನಿಸಲು ತೊಂದರೆ ಎದುರಿಸುತ್ತಿವೆ ಎಂದು ತಿಳಿಸಿದೆ.

    ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್), ಸೇನೆಯ ಬೆಂಬಲ ಹೊಂದಿದೆ. 266 ಸ್ಥಾನಗಳ ಅಸೆಂಬ್ಲಿಯಲ್ಲಿ ಕೇವಲ 73 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳನ್ನು ಗೆದ್ದಿದೆ. ಇದನ್ನೂ ಓದಿ: ಲಂಡನ್‌ ಪ್ಲಾನ್‌ ವಿಫಲವಾಗಿದೆ- ಫಲಿತಾಂಶ ಘೋಷಣೆಗೂ ಮುನ್ನ ಇಮ್ರಾನ್‌ ವಿಜಯದ ಭಾಷಣ

    ಖಾನ್ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಇಬ್ಬರೂ ಶನಿವಾರ ತಮ್ಮ ವಿಜಯ ಘೋಷಿಸಿಕೊಂಡಿದ್ದರು. ಮುಂದಿನ ಸರ್ಕಾರವನ್ನು ಯಾರು ರಚಿಸುತ್ತಾರೆ ಎಂಬುದು ಅನಿಶ್ಚಿತತೆಯಿಂದ ಕೂಡಿದೆ.

  • ಪಾಕಿಸ್ತಾನ ಚುನಾವಣೆಗೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತ

    ಪಾಕಿಸ್ತಾನ ಚುನಾವಣೆಗೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತ

    ಇಸ್ಲಾಮಾಬಾದ್: ಫೆಬ್ರವರಿ 8 ರಂದು ನಡೆಯಲಿರುವ ಚುನಾವಣೆಗೆ ಪಾಕಿಸ್ತಾನ ತೆಹ್ರಿಕ್‌ ಇ ಇನ್ಸಾಫ್‌ ಸಂಸ್ಥಾಪಕ ಇಮ್ರಾನ್‌ ಖಾನ್‌ (Imran Khan) ಸಲ್ಲಿಸಿದ ನಾಮಪತ್ರಗಳನ್ನು ಪಾಕಿಸ್ತಾನ ಚುನಾವಣಾ ಆಯೋಗ ತಿರಸ್ಕರಿಸಿದೆ.

    ಪಾಕಿಸ್ತಾನದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಂಡಿದ್ದರೂ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ತಮ್ಮ ತವರು ಕ್ಷೇತ್ರವಾದ ಮಿಯಾನ್ವಾಲಿಯಿಂದ ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌, ಉಗ್ರ ನಾಯಕ ಹಫೀಜ್‌ನನ್ನ ಭಾರತಕ್ಕೆ ಹಸ್ತಾಂತರಿಸಲ್ಲ: ಪಾಕ್‌ ಪ್ರತಿಕ್ರಿಯೆ

    ಖಾನ್ ಅವರು ರಾಷ್ಟ್ರೀಯ ಅಸೆಂಬ್ಲಿಯ NA-89 ಕ್ಷೇತ್ರಕ್ಕೆ ತಮ್ಮ ನಾಮಪತ್ರ ಪತ್ರಗಳನ್ನು ಸಲ್ಲಿಸಿದ್ದರು. ಮಾಜಿ ಪ್ರಧಾನಿ ಪರವಾಗಿ ಪಿಟಿಐ ಮುಖಂಡ ಉಮರ್ ಬೋಡ್ಲಾ ಹಾಜರಾಗಿದ್ದರು.

    ಪಿಟಿಐ ಸಂಸ್ಥಾಪಕ, 70 ವಯಸ್ಸಿನ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆ. ಅವರು ಏಪ್ರಿಲ್ 2022 ರಲ್ಲಿ ಸಂಸತ್ತಿನ ಅವಿಶ್ವಾಸ ಮತದಲ್ಲಿ ಪದಚ್ಯುತಗೊಂಡಾಗಿನಿಂದ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಖಾನ್ ಅವರನ್ನು ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಅದನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್‌ ತಿರಸ್ಕರಿಸಿತು. ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯನ್ನು ಮತ್ತೆ ಬೆಳಕಿಗೆ ತರಲು ಮೋದಿಯಿಂದ ಮಾತ್ರ ಸಾಧ್ಯವಾಯ್ತು: ಮಾರಿಷಸ್‌ ಸಂಸದ

    ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆಯುವಲ್ಲಿ ಯಶಸ್ವಿಯಾದರು. ಆದಾಗ್ಯೂ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇನ್ನೂ ಎರಡು ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿರುವುದರಿಂದ ಜೈಲಿನಿಂದ ಹೊರಬರುವುದು ಕಷ್ಟ ಸಾಧ್ಯವಿದೆ.

  • ಪಾಕ್‌ ಚುನಾವಣೆ; ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಹಫೀಜ್‌ ಬೆಂಬಲಿತ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಿಂದ ಕಣಕ್ಕೆ

    ಪಾಕ್‌ ಚುನಾವಣೆ; ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಹಫೀಜ್‌ ಬೆಂಬಲಿತ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಿಂದ ಕಣಕ್ಕೆ

    ಇಸ್ಲಾಮಾಬಾದ್: ಮುಂಬೈ ಭಯೋತ್ಪಾದನಾ ದಾಳಿಯ (Mumbai Terror Attack) ಮಾಸ್ಟರ್ ಮೈಂಡ್ ಹಫೀಜ್ ಸಯೀದ್ (Hafiz Saeed) ಬೆಂಬಲಿತ ಪಕ್ಷ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

    ಲಷ್ಕರ್-ಎ-ತೈಬಾದ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್‌ನ ರಾಜಕೀಯ ಘಟಕವಾದ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (PMML) ಮುಂಬರುವ ಚುನಾವಣೆಗೆ ಪಾಕಿಸ್ತಾನದಾದ್ಯಂತ ಪ್ರತಿಯೊಂದು ರಾಷ್ಟ್ರೀಯ ಮತ್ತು ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2024 ರ ಫೆಬ್ರವರಿ 8 ರಂದು ಚುನಾವಣೆ (Pakistan Election) ನಡೆಯಲಿದೆ. ಇದನ್ನೂ ಓದಿ: ಜೀಸಸ್‌ ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮ ಇಲ್ಲ

    ಹಫೀಜ್ ಸಯೀದ್‌ನ ಪುತ್ರ ತಲ್ಹಾ ಸಯೀದ್, ಲಾಹೋರ್‌ನ ನ್ಯಾಷನಲ್ ಅಸೆಂಬ್ಲಿಯ NA-127 ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾನೆ. ಆದರೆ PMML ನ ಕೇಂದ್ರ ಅಧ್ಯಕ್ಷ ಖಾಲಿದ್ ಮಸೂದ್ ಸಿಂಧು NA-130 ನಿಂದ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

    2019 ರಿಂದ ಜೈಲಿನಲ್ಲಿರುವ ಮೊಹಮ್ಮದ್‌ ಹಫೀಜ್‌ಗೆ 2022 ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ವಿಶೇಷ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು, ಭಯೋತ್ಪಾದನೆಗೆ ಹಣಕಾಸು ಒದಗಿಸುವುದ ಆರೋಪಕ್ಕಾಗಿ 33 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    ಪಿಎಂಎಂಎಲ್‌ನ ಚುನಾವಣಾ ಚಿಹ್ನೆ ಕುರ್ಚಿಯಾಗಿದೆ. ಪಿಎಂಎಂಎಲ್ ವಕ್ತಾರ ತಬಿಶ್ ಕಯ್ಯುಮ್, ದೇಶದಾದ್ಯಂತ ಎಲ್ಲಾ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.