Tag: pakista

  • ಶಿಯಾ-ಸುನ್ನಿಗಳ ನಡುವೆ ಮತ್ತೆ ರಕ್ತಪಾತ – ದಿನ ದಿನಕ್ಕೂ ಏರುತ್ತಿದೆ ಸಾವಿನ ಸಂಖ್ಯೆ!

    ಶಿಯಾ-ಸುನ್ನಿಗಳ ನಡುವೆ ಮತ್ತೆ ರಕ್ತಪಾತ – ದಿನ ದಿನಕ್ಕೂ ಏರುತ್ತಿದೆ ಸಾವಿನ ಸಂಖ್ಯೆ!

    ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ (Khyber Pakhtunkhwa) ಜಿಲ್ಲೆಯೊಂದರಲ್ಲಿ ಕೋಮುಗಲಭೆ ಭುಗಿಲೆದ್ದಿದೆ. ಮುಸ್ಲಿಂ ಧರ್ಮದ ಎರಡು ದೊಡ್ಡ ಪಂಗಡಗಳಾದ ಶಿಯಾ ಮತ್ತು ಸುನ್ನಿಗಳ ನಡುವಿನ ಸಂಘರ್ಷ ಸಂಘರ್ಷಗಳು ನಿರಂತರವಾಗಿ ಶಾಂತಿ ಕದಡುತ್ತಿವೆ. ಪಾಕ್‌ನ ಆಫ್ಘನ್ ಗಡಿಯ ಕುರ್ರಂ ಜಿಲ್ಲೆಯ ಖೈಬ‌ರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ಎರಡು ಪಂಗಡಗಳು ಪರಸ್ಪರ ಕಾದಾಟಕ್ಕಿಳಿದಿದ್ದು, ಕಂಡಕಂಡಲ್ಲಿ ದಾಳಿಗಳು ನಡೆಯುತ್ತಿವೆ. ಈ ಸಂಘರ್ಷ ಕೇವಲ ಪಾಕಿಸ್ತಾನ ಮಾತ್ರವಲ್ಲದೇ ವಿಶ್ವದ ಇತರ ಮುಸ್ಲಿಂ ರಾಷ್ಟ್ರಗಳಲ್ಲೂ (Muslims Nation) ಕಂಪನ ಸೃಷ್ಟಿಸಿವೆ.

    ಕಳೆದ 6 ತಿಂಗಳಿನಿಂದ ಮತ್ತೆ ಶಿಯಾ – ಸುನ್ನಿ ಪಂಗಡಗಳ ನಡುವಿನ ಸಂಘರ್ಷ (Shia Sunni Clash) ತಾರಕಕ್ಕೇರಿದ್ದು, ಈ ಅವಧಿಯಲ್ಲಿ ನೂರಾರು ಮಂದಿ ಪ್ರಾಣ ತೆತ್ತಿದ್ದಾರೆ. ಸದ್ಯ ಒಂದು ವಾರ ಕದನವಿರಾಮ ಘೋಷಣೆಯಾಗಿದ್ದರೂ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತಲೇ ಇದೆ. ಇದರಿಂದ 1 ವಾರದಲ್ಲಿ 87 ಇದ್ದ ಸಾವಿನ ಸಂಖ್ಯೆ ಕಳೆದ 3 ದಿನಗಳಿಂದ 133ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 300ಕ್ಕೂ ಅಧಿಕ ಕುಟುಂಬಗಳು ವಲಸೆ ಹೋಗಿವೆ. ಈ ಸಂಘರ್ಷ ನಿಯಂತ್ರಣಕ್ಕೆ ಅಲ್ಲಿನ ಜಿಲ್ಲಾಡಳಿತ ಹಾಗೂ ಭದ್ರತಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಅದಕ್ಕಾಗಿ ಭದ್ರತಾ ಪಡೆಗಳು ಸ್ಥಳದಲ್ಲೇ ಬೀಡುಬಿಟ್ಟಿವೆ. ಕುರ್ರಂನ ಪ್ರಮುಖ ನಗರಗಳಾದ ಪರಾಚಿಬಾರ್‌, ಪೇಶಾಬವರ್‌ ಅನ್ನು ಸಂಪರ್ಕಿಸುವ ಮುಖ್ಯರಸ್ತೆಯನ್ನು ಬಂದ್‌ ಮಾಡಲಾಗಿದೆ.

    ಸಂಘರ್ಷಕ್ಕೆ ಕಾರಣವೇನು?

    ಇಸ್ಲಾಮಿನ ಅಂತಿಮ ಪ್ರವಾದಿ ಮೊಹಮ್ಮದ್‌ರ ನಂತರದ ಉತ್ತರಾಧಿಕಾರ ವಿಚಾರದಲ್ಲಿ ಹುಟ್ಟಿಕೊಂಡ ವಿವಾದ ಇಂದಿಗೂ ಮುಂದುವರಿದಿದೆ. ಪಾಕ್‌ನಲ್ಲಿ ಬಹುಸಂಖ್ಯಾತರಾಗಿರುವ ಸುನ್ನಿ ಸಮುದಾಯದವರು ರಾಜಕೀಯ ಸಹಿತ ಎಲ್ಲ ಅಧಿಕಾರವೂ ತಮ್ಮ ಬಳಿಯೇ ಇರಬೇಕೆಂದು ಬಯಸುತ್ತಿದ್ದು, ಹಾಗಾಗಿ ಅವರು ಶಿಯಾಗಳ (Shia) ನೆರಳನ್ನೂ ಕಾಣಲು ತಯಾರಿಲ್ಲ. ಈ ವಿಚಾರದಲ್ಲಿ ಎರಡೂ ಪಂಗಡಗಳ ನಡುವೆ ಘರ್ಷಣೆ ಸದಾ ಇದ್ದಿದ್ದೇ.

    ಸಂಘರ್ಷ ಶುರುವಾಗಿದ್ದು ಎಲ್ಲಿಂದ?

    ಪಾಕಿಸ್ತಾನದ ಪಖ್ತುಂಖ್ವಾ ಪ್ರಾಂತ್ಯ ಅನ್ನೋದು ಅಫ್ಘಾನಿಸ್ತಾನದ (Afghanistan) ಗಡಿಯಲ್ಲಿರುವ ಒಂದು ಸಣ್ಣ ಜಿಲ್ಲೆ. ಇಂದು ಅಲ್ಲಿ ಈ ಪರಿಯಾಗಿ ಸಂಘರ್ಷ ಶುರುವಾಗಲು ಕಾರಣ ಏನು ಎಂದು ಹುಡುಕುತ್ತಾ ಹೋದರೆ ಅಫ್ಘಾನಿಸ್ತಾನದ ಸಂಘರ್ಷ ಹಾಗೂ 70ರ ದಶಕದಲ್ಲಿ ಪಾಕಿಸ್ತಾನದ ಮಿಲಿಟರಿ ಅಧಿ ಕಾರಿಯಾಗಿದ್ದ ಜಿಯಾ ಉಲ್ ಹಕ್ ಎಂಬ ಸೇನಾ ನಾಯಕನ ಪಾತ್ರ ಕಾಣಿಸುತ್ತದೆ.

    ವಿಶ್ವದ 2ನೇ ಮಹಾಯುದ್ಧದ ಬಳಿಕ 2 ಬಲಾಡ್ಯ ರಾಷ್ಟ್ರಗಳ ನಡುವೆ ಉಂಟಾದ ʻಶೀತಲ ಸಮರ’ದ ಕಾಲದಲ್ಲಿ ಅಫ್ಘಾನಿಸ್ತಾನದಲ್ಲಿ ರಷ್ಯಾದ ಪಡೆಗಳು ಬೀಡುಬಿಟ್ಟಿದ್ದವು. ಇತ್ತ ಪಾಕಿಸ್ತಾನವು ಅಮೆರಿಕ ಪರ ನಿಂತುಕೊಂಡಿತ್ತು. ಆಗ ಅಫ್ಘಾನಿಸ್ತಾನದ ನಿರಾಶ್ರಿತರನ್ನು ಕರೆತಂದಿರುವ ಜಿಯಾ ಉಲ್ ಹಕ್ ಇದೇ ಪ್ರಾಂತ್ಯದಲ್ಲಿ ಆಶ್ರಯ ನೀಡುತ್ತಾ ಬಂದ. ಅವರಿಗಾಗಿಯೇ ಮದರಸಾಗಳನ್ನ ತೆರೆಯಲಾಯಿತು. ಇವರೆಲ್ಲರೂ ಶಿಯಾ ಸಮುದಾಯದವರಾಗಿದ್ದು, ಇವರನ್ನು ಅಫ್ಘಾನ್‌ನಲ್ಲಿದ್ದ ರಷ್ಯಾ ಪಡೆಗಳ ವಿರುದ್ಧ ಹಾಗೂ ಕಾಶ್ಮೀರದಲ್ಲಿ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಬಳಸಲು ಯೋಜನೆ ರೂಪಿಸಿ ಅವರಿಗೆ ಹಣಕಾಸಿನ ನೆರವನ್ನೂ ನೀಡಲಾಯಿತು. ವರ್ಷಗಳು ಉರುಳಿದಂತೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶಿಯಾಗಳ ಸಂಖ್ಯೆ ಕಡಿಮೆಯಾಗಿ ಸುನ್ನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಇದರಿಂದ ನಿಧಾನವಾಗಿ ಎರಡು ಪಂಗಡಗಳ ನಡುವೆ ಸಂಘರ್ಷದ ಕಿಡಿ ಹೊತ್ತಿಕೊಂಡಿತ್ತು.

    ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?

    ಈ ಸಮುದಾಯಗಳ ಸಂಘರ್ಷಕ್ಕೆ ಇನ್ನೂ ಒಂದು ಮುಖ್ಯ ಕಾರಣವಿದೆ. ಕುರ್ರಂ ಜಿಲ್ಲೆಯು ಬುಡಕಟ್ಟು ಪ್ರದೇಶವಾಗಿದ್ದು, 7.84 ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಶೇ.99 ರಷ್ಟು ತುರಿ, ಬಂಗಾಶ್‌, ಜೈಮುಷ್ಟ್‌, ಮಂಗಲ್‌, ಮುಕ್ಬಾಲ್‌ ಮತ್ತು ಮುಸುಜೈ ಮತ್ತು ಪರ್ಷಮ್ಕಾನಿ, ಬಂಗಾಶ್‌ ಶಿಯಾ ಸಮುದಾಗಳಿವೆ. ಉಳಿದವರು ಸುನ್ನಿಗಳಿದ್ದಾರೆ. 2001ರಲ್ಲಿ ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ಮಾಡಿದಾಗ ಲಕ್ಷಾಂತರ ಸುನ್ನಿಗಳು ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಅಫ್ಘಾನಿಸ್ತಾನದಲ್ಲಿದ್ದ ಸುನ್ನಿಗಳು ಪಾಕ್‌ನ ಹಲವು ಪ್ರದೇಶಗಳಲ್ಲಿ ನೆಲೆದರು. ಆದ್ರೆ ಕುರ್ರಂ ಜಿಲ್ಲೆಯಲ್ಲಿದ್ದ ಶಿಯಾಗಳು ಇಲ್ಲಿನ ಸುನ್ನಿಗಳಿಗೆ ನೆಲೆಯೂರಲು ವಿರೋಧ ವ್ಯಕ್ತಪಡಿಸಿತ್ತು. ಆದ್ರೆ ಅಂದಿನ ಜನರಲ್‌ ಜಿಯಾ ಉಲ್‌ ಹಕ್‌ನಿಂದಾಗಿ ಸುನ್ನಿಗಳಿಗೆ ಈ ಪ್ರದೇಶದಲ್ಲಿ ನೆಲೆಸುವ ಅವಕಾಶ ಸಿಕ್ಕಿತು. 2007ರಲ್ಲಿ ಶಿಯಾ – ಸುನ್ನಿಗಳ ನಡುವೆ ರಕ್ತಸಿಕ್ತ ಘರ್ಷಣೆ ನಡೆಯಿತು. ಈ ನಡುವೆ 2008 ರಲ್ಲಿ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೆಸರಿನ ಶಿಯಾ ವಿರೋಧಿ ಭಯೋತ್ಪಾದಕ ಸಂಘಟನೆ ರಚಿಸಲಾಯಿತು. ಇದು ಹಿಂಸಾಚಾರವನ್ನು ಮತ್ತಷ್ಟು ಹೆಚ್ಚಿಸಿತು. ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಈ ಯುದ್ಧದಲ್ಲಿ ಸಾವಿರಾರು ಜನ ಸತ್ತರು. ಅಂತಿಮವಾಗಿ 2011ರಲ್ಲಿ ಶಾಂತಿ ಒಪ್ಪಂದಕ್ಕೆ ಬರಲಾಯಿತು. 2021ರಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ ಮತ್ತೆ ಇಲ್ಲಿ ಹಿಂಸಾಚಾರ ಭುಗಿಲೆದ್ದಿತು.

    ಸಮುದಾಯಗಳ ಬಲಾ-ಬಲ ಹೇಗಿದೆ?

    ಪಾಕಿಸ್ತಾನದಲ್ಲಿ ಒಟ್ಟು 24.5 ಕೋಟಿ ಜನಸಂಖ್ಯೆಯಲ್ಲಿ ಸುಮಾರು 96% ರಷ್ಟು ಮುಸ್ಲಿಮರೇ ಇದ್ದಾರೆ. ಮುಸ್ಲಿಮರಲ್ಲಿ 80% ರಷ್ಟು ಸುನ್ನಿಗಳಿದ್ದಾರೆ. ಸುಮಾರು 12% ರಷ್ಟು ಶಿಯಾಗಳು ವಾಸವಾಗಿದ್ದಾರೆ. ಈ ಎರಡು ಪಂಗಡಗಳಲ್ಲದೇ ಸುಮಾರು 45 ಲಕ್ಷ ಅಹಮದೀಯರು ಈ ದೇಶದಲ್ಲಿದ್ದಾರೆ. ಧರ್ಮಾಚರಣೆ ಸಹಿತ ಅನೇಕ ವಿಚಾರಗಳಲ್ಲಿ ಈ ಪಂಗಡಗಳ ನಡುವೆ ಭಿನ್ನತೆ ಇದೆ.

    ಹಲವು ಬುಡಕಟ್ಟು ಸಮುದಾಯಗಳ ನೆಲೆಯಾಗಿರುವ ಕುರ್ರಂನಲ್ಲಿ ರಕ್ತಪಾತವಾಗಲು ಸ್ಥಳೀಯರು ಮಾತ್ರ ಕಾರಣವಲ್ಲ, ವಾಸ್ತವವಾಗಿ ಸೌದಿ ಅರೇಬಿಯಾ, ಇರಾನ್‌ ಸಹ ಇಲ್ಲಿನ ಹಿಂಸಾಚಾರಕ್ಕೆ ಕಾರಣ ಅನುಮಾನಗಳು ವ್ಯಕ್ತವಾಗಿವೆ. ಇರಾನ್‌ ಶಿಯಾಗಳನ್ನು ಹೆಚ್ಚಾಗಿ ಹೊಂದಿರುವ ದೇಶವಾಗಿದ್ದು, ಸೌದಿ ಅರೇಬಿಯಾ ಸುನ್ನಿಗಳ ಬಹುಸಂಖ್ಯಾತ ರಾಷ್ಟ್ರವಾಗಿದೆ. ಪಾಕಿಸ್ತಾನದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಕಾಂಟೆಂಪರರಿ ರಿಸರ್ಚ್ ವರದಿಯು ಸೌದಿ ಅರೇಬಿಯಾ ಕುರ್ರಂನಲ್ಲಿ ಸುನ್ನಿ ಉಗ್ರಗಾಮಿ ಸಂಘಟನೆಗಳನ್ನು ಹಾಗೂ ಇರಾನ್‌ ಶಿಯಾ ಸಂಘಟನೆಗಳನ್ನು ಬೆಂಬಲಿಸುತ್ತಿದೆ. ತಾಲಿಬಾನ್ ಬೆಂಬಲಿತ ಸಂಘಟನೆಗಳ ವಿರುದ್ಧ ಹೋರಾಡಲು ಜೈನ್ಬಿಯುನ್ ಬ್ರಿಗೇಡ್ ಎಂಬ ಹೆಸರಿನ ಸಂಘಟನೆಯನ್ನು ಇರಾನ್ ಇಲ್ಲಿ ಸ್ಥಾಪಿಸಿದೆ. ಪಾಕಿಸ್ತಾನ ಸರ್ಕಾರ ಜೈನ್ಬಿಯುನ್ ಬ್ರಿಗೇಡ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಅಂಕಿ ಅಂಶಗಳ ಪ್ರಕಾರ 2007 ಮತ್ತು 2011ರ ನಡುವೆ ಕುರ್ರಂನಲ್ಲಿ ನಡೆದ ಶಿಯಾ-ಸುನ್ನಿಗಳ ನಡುವಿನ ದಂಗೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡರು, 10 ಸಾವಿರಕ್ಕೂ ಹೆಚ್ಚು ಮಂದಿ ಆ ಪ್ರದೇಶದಿಂದಲೇ ಕಾಲ್ಕಿತ್ತರು ಎಂದು ಹೇಳಲಾಗಿದೆ.

    ಇತರ ಪಂಗಡಗಳಿಗೂ ನೆಮ್ಮದಿ ಇಲ್ಲ!

    ಪಾಕಿಸ್ತಾನದಲ್ಲಿ ಶಿಯಾ- ಸುನ್ನಿಗಳ ಹೊರತಾಗಿ ಅಹಮದೀಯರು, ಇಸ್ಮಾಯಿಲಿ, ಬಹುರಾ, ಜೈದಿ, ಸೂಫಿ ಪಂಥ ಸಹಿತ ಇನ್ನಿತರ ಪಂಗಡಗಳು ಇವೆ. ಆದರೆ, ಇವರೆಲ್ಲ ತೀರಾ ಚಿಕ್ಕ ಸಮುದಾಯ ಆಗಿರುವ ಕಾರಣ ಇವರ ಏಳಿಗೆಯನ್ನು ಅಲ್ಲಿನ ಬಹುಸಂಖ್ಯಾತರು ಸಹಿಸುತ್ತಿಲ್ಲ. ಬಹುತೇಕ ಈ ಚಿಕ್ಕ ಸಮುದಾಯವನ್ನು ಗುರಿಯಾಗಿಸಿಯೇ ಭಯೋತ್ಪಾದನಾ ದಾಳಿಗಳು ನಡೆಯುತ್ತಿದ್ದು, ರಕ್ತಸಿಕ್ತ ಅಧ್ಯಾಯದಿಂದ ಈ ಪಂಗಡಗಳು ನಲುಗಿ ಹೋಗಿವೆ.

    ಅಹಮದೀಯರಿಗೇಕೆ ನೆಲೆ ಇಲ್ಲ?

    ಪಾಕಿಸ್ತಾನದಲ್ಲಿ ಸುನ್ನಿ ಮತ್ತು ಶಿಯಾಗಳ ನಡುವೆ ಇನ್ನೊಂದು ಮುಸ್ಲಿಂ ಪಂಗಡ ವಾಸಿಸುತ್ತಿದೆ. ಅದುವೇ ಅಹಮ್ಮದೀಯ ಸಮುದಾಯ. ಆದರೆ, ಪಾಕಿಸ್ತಾನದಲ್ಲಿ ಸದ್ಯ ಅವರಿಗೆ ನೆಲೆಯೇ ಇಲ್ಲದ ಸ್ಥಿತಿ ಇದೆ. ಅಹಮದೀಯ ಪಂಥದವರು ತಮ್ಮನ್ನು ತಾವು ಮುಸ್ಲಿಂ ಎಂದು ಕರೆದುಕೊಳ್ಳುತ್ತಾರೆ. ಆದರೆ, ಅವರನ್ನು ಪಾಕಿಸ್ತಾನದ ಸಂವಿಧಾನದ ಅಡಿಯಲ್ಲಿ 1974ರಲ್ಲಿ ʻಮುಸ್ಲಿಮೇತರರು’ ಎಂದು ಘೋಷಿಸಲಾಯಿತು. ಪಂಜಾಬ್ ಪ್ರಾಂತ್ಯದಲ್ಲಿ ಇವರ ಸಂಖ್ಯೆ ಹೆಚ್ಚಾಗಿದೆ. ಧಾರ್ಮಿಕ ವಿಚಾರವಾಗಿ ಇವರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಅವರಿಗೆ ಸೇರಿದ ಧಾರ್ಮಿಕ ಸ್ಥಳಗಳು ಮತ್ತು ಖಬರಸ್ಥಾನಗಳನ್ನು (ಸ್ಮಶಾನ) ನಾಶ ಮಾಡಲಾಗಿದೆ. ಪಾಕಿಸ್ತಾನದಲ್ಲಿ 1985ರಲ್ಲಿ ವಿವಿಧ ಧಾರ್ಮಿಕ ಗುಂಪುಗಳಿಗೆ ಪ್ರತ್ಯೇಕ ಮತದಾರರ ಪಟ್ಟಿಯನ್ನು ಪರಿಚಯಿಸಲಾಯಿತು. ಇದರಲ್ಲಿ ಅಹಮ್ಮದೀಯರನ್ನೂ ಸೇರಿಸಲಾಯಿತು. ಇದು ಅಹಮ್ಮದೀಯರನ್ನು ಕೆರಳಿಸಿದ್ದು, ಇಂದಿಗೂ ಅವರು ಪೂರ್ಣ ಪ್ರಮಾಣದಲ್ಲಿ ಅಲ್ಲಿನ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ದೂರವೇ ಉಳಿದಿದ್ದಾರೆ ಎನ್ನುತ್ತವೆ ವರದಿಗಳು.

    WTC ದಾಳಿಯೂ ಸಂಘರ್ಷಕ್ಕೆ ಕಾರಣವಾಗಿದ್ದು ಹೇಗೆ?

    ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001ರ ಸೆ.11ರಂದು ತಾಲಿಬಾನಿಗಳು ದಾಳಿ ನಡೆಸಿದ ಬಳಿಕ ಅಮೆರಿಕದಿಂದ ಲಕ್ಷಾಂತರ ಮಂದಿ ಸುನ್ನಿ ಸಮುದಾಯದವರನ್ನು ಓಡಿಸಲಾಯಿತು. ಅವರು ನೆಲೆ ಇಲ್ಲದೇ ಬೇರೆ-ಬೇರೆ ದೇಶಗಳಿಗೆ ಹೋಗಿ ಆಶ್ರಯ ಪಡೆದರು. ಪಾಕಿಸ್ತಾನಕ್ಕೂ ಲಕ್ಷಾಂತರ ಸುನ್ನಿಗಳು ವಲಸೆ ಹೋದರು. ಅವರಿಗೆ ಪುನರ್ವಸತಿ ಕಲ್ಪಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಈ ಹಂತದಲ್ಲಿ ಪಾಕಿಸ್ತಾನದ ಅಂದಿನ ಸರ್ಕಾರ ಖೈಬ‌ರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಆಶ್ರಯ ಕಲ್ಪಿಸಲು ಮುಂದಾಗಿತ್ತು. ಆದ್ರೆ, ಆ ಪ್ರಾಂತ್ಯದಲ್ಲಿ ಬಹುಸಂಖ್ಯಾತರಾಗಿದ್ದ ಶಿಯಾ ಸಮುದಾಯ ಸುನ್ನಿಗಳಿಗೆ ಆಶ್ರಯ ನೀಡುವುದನ್ನು ವಿರೋಧಿಸಿತು. ಇಲ್ಲಿಂದ ಸಂಘರ್ಷ ತಾರಕಕ್ಕೇರಿತು.

  • ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?

    ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?

    ಶ್ರಾವಣ ಮಾಸದಲ್ಲಿ ನಾವು ಸ್ವಾಗತಿಸುವ ಮೊದಲ ಹಬ್ಬ ನಾಗರ ಪಂಚಮಿ (Naga Panchami). ನಾಗ ಪಂಚಮಿ, ಹೆಸರೇ ಸೂಚಿಸುವಂತೆ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಮುಂಬರುವ ಎಲ್ಲಾ ಹಬ್ಬಗಳಿಗೂ ಆದಿಯಾಗಿದೆ. ಮಹಿಳೆಯರು ಉಪವಾಸ ಆಚರಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಆಭರಣಗಳನ್ನು ಧರಿಸುತ್ತಾರೆ. ತಮ್ಮ ಸಹೋದರನ ಆರೋಗ್ಯ ಮತ್ತು ಯಶಸ್ಸಿಗಾಗಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಾರೆ. ನಾಗದೋಷ ನಿವಾರಣೆ, ನಾಗನಿಂದ ರಕ್ಷಣೆಗೆ ಪ್ರಾರ್ಥಿಸಿ ಆಚರಿಸುವ ಹಬ್ಬ ಇದು ಎಂದು ನಂಬಲಾಗಿದೆ.

    ಭಿನ್ನ ಸಂಸ್ಕೃತಿ, ಆಚರಣೆಗಳಿಗೆ ನೆಲೆಯಾಗಿರುವ ದೇಶ ಭಾರತ. ದೇಶಾದ್ಯಂತ ಭಿನ್ನ ರೀತಿಯಲ್ಲೇ ನಾಗರ ಪಂಚಮಿ ಹಬ್ಬ ಆಚರಣೆ ಮಾಡಲಾಗುತ್ತದೆ. ಮಧ್ಯ ಭಾರತ, ಉತ್ತರ ಮತ್ತು ವಾಯುವ್ಯ ಭಾರತ, ಪಶ್ಚಿಮ ಭಾರತ, ಪೂರ್ವ ಮತ್ತು ಈಶಾನ್ಯ ಭಾರತ, ದಕ್ಷಿಣ ಭಾರತದಲ್ಲಿ (Naga Panchami In India) ವಿಶಿಷ್ಟ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಹಬ್ಬ ಆಚರಿಸಲಾಗುತ್ತದೆ. ಹಿಂದೆ ಅಖಂಡ ಭಾರತದ ಭಾಗವೇ ಆಗಿದ್ದ ನೇಪಾಳ, ಪಾಕಿಸ್ತಾನದಲ್ಲಿ ಈಗಲೂ ನಾಗರ ಪಂಚಮಿ (Naga Panchami In Pakistan) ಆಚರಿಸುವುದುಂಟು. ಈ ಭಾಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ನಾಗಾರಾಧನೆ ಮಾಡುವ ಸಂಪ್ರದಾಯವಿದೆ.

    ಮಧ್ಯಭಾರತ:
    ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಆಚರಣೆಗೆ ಹೆಚ್ಚು ಮಹತ್ವವಿದೆ. ಹೆಸರೇ ಸೂಚಿಸುವಂತೆ ನಾಗಪುರವು ‘ನಾಗ’ ಜನರ ತಾಯ್ನಾಡು. ಕಾಲಾನಂತರದಲ್ಲಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಲ್‌ನಲ್ಲಿರುವ ನಾಗೋಬಾ ದೇವಸ್ತರವಾಡುಲ್ಲಿ ನಾಗ ಪಂಚಮಿ ದಿನದಂದು ಪೂಜೆ ಸಲ್ಲಿಸಲಾಗುತ್ತದೆ. ‘ನಾಗದ್ವಾರ ಯಾತ್ರೆ’ ಕೂಡ ಮಾಡಲಾಗುತ್ತದೆ. ಯಾತ್ರಗಾಗಿ ದೊಡ್ಡ ದೊಡ್ಡ ಕಡಾಯಿಯಲ್ಲಿ ಬೇಯಿಸುತ್ತಾರೆ.

    ವರ್ಷದಲ್ಲಿ ಒಂದು ದಿನ ಮಾತ್ರೆ ದೇಗುಲ ಓಪನ್
    ಮಹಾಕಾಳೇಶ್ವರ ಜೋತಿರ್ಲಿಂಗ ದೇವಾಲಯದ ಮೂರನೇ ಮಹಡಿಯಲ್ಲಿ ನಾಗ ಚಂದ್ರೇಶ್ವರ ಉಜ್ಜಯಿನಿ ಎಂಬ ಉಪದೇವಾಲಯವಿದೆ. ಇದು ವರ್ಷದಲ್ಲಿ ಒಂದೇ ದಿನ, ನಾಗಪಂಚಮಿಯಂದು ಮಾತ್ರ ತೆರೆದಿರುತ್ತದೆ. ವರ್ಷದ ಉಳಿದ ದಿನಗಳಲ್ಲಿ ಮುಚ್ಚಿರುತ್ತದೆ. 10 ಹೆಡೆಯ ಹಾವಿನ ಮೇಲೆ ಶಿವ ಮತ್ತು ಪಾರ್ವತಿ ಕುಳಿತಿರುವ ನಾಗಚಂದ್ರೇಶ್ವರ ಮೂರ್ತಿ (Nagchandreshwar Statue) ಇಲ್ಲಿದೆ. ಸುತ್ತ ನಂದಿ ಗಣೇಶ, ಇತರೆ ಮೂರ್ತಿಗಳು ಇದರ ಸುತ್ತ ಇವೆ. ನಾಗ ಪಂಚಮಿಯಂದು ವಿಶೇಷ ಪೂಜೆ ಸಲ್ಲಿಸುವುದರಿಂದ ನಾಗದೋಷ, ಸರ್ಪದೋಷ ಸೇರಿ ಯಾವುದೇ ತೊಂದರೆಗಳಿಂದ ಭಕ್ತ ಮುಕ್ತಿ ಹೊಂದಬಹುದು ಎಂಬ ನಂಬಿಕೆಯಿದೆ.

    ಉತ್ತರ ಮತ್ತು ವಾಯುವ್ಯ ಭಾರತ
    ಉತ್ತರ ಭಾರತದಾದ್ಯಂತ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಕಾಶ್ಮೀರದಲ್ಲಿ ಐತಿಹಾಸಿಕ ಕಾಲದಿಂದಲೂ ಹಿಂದೂಗಳು ಹಾವುಗಳನ್ನು ಪೂಜಿಸುತ್ತಿದ್ದಾರೆ. ವಾಯುವ್ಯ ಭಾರತದಲ್ಲಿ ಬನಾರಸ್‌ನಂತಹ ನಗರಗಳಲ್ಲಿ ನಾಗ ಪಂಚಮಿ ಆಚರಣೆಯ ಭಾಗವಾಗಿ ಅಖಾರಾಗಳನ್ನು (ಕುಸ್ತಿ ಅಖಾಡ) ಅಲಂಕರಿಸುತ್ತಾರೆ. ಅಖಾರಾಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಹಾವುಗಳ ಚಿತ್ರಗಳಿಂದ ಗೋಡೆಗಳನ್ನು ಚಿತ್ರಿಸಲಾಗುತ್ತದೆ. ಹಾವುಗಳು ಹಾಲು ಕುಡಿಯುವುದನ್ನು ತೋರಿಸುವ ಹಾವಿನ ಚಿತ್ರಗಳಿಂದ ಅಖಾಡಗಳನ್ನು ಅಲಂಕರಿಸಲಾಗುತ್ತದೆ.

    ವಾರಣಾಸಿಯ ನರಸಿಂಗ್‌ಗಢ್ ಅಖಾರಾದಲ್ಲಿ ನಾಗ ರಾಜನಿಗೆ (ನಾಗರ ರಾಜ) ಮೀಸಲಾಗಿರುವ ವಿಶೇಷ ದೇವಾಲಯವಿದೆ. ಅಲ್ಲಿ ಹಾವಿನ ಚಿತ್ರದ ಮೇಲೆ ಒಂದು ಬಟ್ಟಲನ್ನು ತೂಗುಹಾಕಲಾಗುತ್ತದೆ. ಅದರಲ್ಲಿ ಹಾಲನ್ನು ಸುರಿಯಲಾಗುತ್ತದೆ. ಹಾಲು ಹಾವಿನ ದೇವರ ಮೇಲೆ ನೈವೇದ್ಯದ ರೂಪದಲ್ಲಿ ಹರಿಯುತ್ತದೆ. ನಾಗರ ಪಂಚಮಿಯಂದು ಹಾವಾಡಿಗರು ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಎಲ್ಲೆಡೆ ಹಾವುಗಳನ್ನು ತಮ್ಮ ಬುಟ್ಟಿಗಳಲ್ಲಿ ತಂದು ಪ್ರದರ್ಶಿಸುತ್ತಾರೆ. ಇದನ್ನು ವೀಕ್ಷಿಸಲು ಜನರು ಸೇರುತ್ತಾರೆ. ಈ ಸಂದರ್ಭದಲ್ಲಿ ಬುಟ್ಟಿಯಲ್ಲಿರುವ ಹಾವುಗಳನ್ನೂ ಪೂಜಿಸಲಾಗುತ್ತದೆ.

    ಪಂಜಾಬ್‌ನಲ್ಲಿ ಈ ಹಬ್ಬವನ್ನು ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಮತ್ತು ವಿಭಿನ್ನ ಸ್ವರೂಪದಲ್ಲಿ ಆಚರಿಸಲಾಗುತ್ತದೆ. ಇದನ್ನು ಗುಗಾ ನೌವಮಿ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಹಿಟ್ಟಿನಿಂದ ಹಾವಿನ ಮೂರ್ತಿ ತಯಾರಿಸಲಾಗುತ್ತದೆ. ಅದನ್ನು ಒಂದು ಬುಟ್ಟಿಯಲ್ಲಿಟ್ಟು ಊರಲ್ಲೆಲ್ಲ ಮೆರವಣಿಗೆ ಮಾಡಲಾಗುತ್ತದೆ. ಜನರು ಹಿಟ್ಟು ಮತ್ತು ಬೆಣ್ಣೆಯನ್ನು ಅದಕ್ಕೆ ಅರ್ಪಿಸುತ್ತಾರೆ. ಮೆರವಣಿಗೆ ಬಳಿಕ ಅದನ್ನು ಹೂಳಲಾಗುತ್ತದೆ. ಮಹಿಳೆಯರು ಒಂಬತ್ತು ದಿನಗಳ ಕಾಲ ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಮೊಸರು ನೈವೇದ್ಯ ನೀಡುತ್ತಾರೆ.

    ಪಶ್ಚಿಮ ಭಾರತ
    ಪಶ್ಚಿಮ ಭಾರತದಲ್ಲಿ ನಾಗ ಪಂಚಮಿಯನ್ನು ಕೇತರ್ಪಾಲ್ ಅಥವಾ ಕ್ಷೇತ್ರಪಾಲ್ ಎಂದು ಕರೆಯಲಾಗುತ್ತದೆ. ಕಚ್ ಪ್ರದೇಶದಲ್ಲಿ (ಗುಜರಾತ್) ಭುಜಿಯಾ ಎಂಬ ಕೋಟೆಯಲ್ಲಿ ನಾಗದೇವರ ದೇವಾಲಯವಿದೆ. ಇಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷ ನಾಗ ಪಂಚಮಿಯಂದು ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಯುತ್ತದೆ. ಸಿಂಧಿ ಸಮುದಾಯದಲ್ಲಿ ನಾಗ ಪಂಚಮಿಯನ್ನು ಗೊಗ್ರೋ ಗೌರವಾರ್ಥವಾಗಿ ಆಚರಿಸಲಾಗುತ್ತದೆ.

    ಪೂರ್ವ ಮತ್ತು ಈಶಾನ್ಯ ಭಾರತ
    ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಾದ ಪಶ್ಚಿಮ ಬಂಗಾಳ, ಜಾರ್ಖಂಡ್, ಒರಿಸ್ಸಾ ಮತ್ತು ಅಸ್ಸಾಂನಲ್ಲಿ ದೇವಿಯನ್ನು ಮಾನಸ ಎಂದು ಪೂಜಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಮಾನಸ ನಾಗದೇವತೆಯಾಗಿದ್ದು, ಇದನ್ನು ಜರತ್ಕಾರು ಎಂದೂ ಕರೆಯುತ್ತಾರೆ. ಬ್ರಾಹ್ಮಣ ಋಷಿಯ ಪತ್ನಿ ಜರತ್ಕಾರು ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಮಾನಸ ದೇವಿಯ ಪ್ರತೀಕವಾದ ಮಾನಸ ಸೊ ಸೇಲ್ ಗಿಡದ (ಯೂಫೋರ್ಬಿಯಾ ಲಿಂಗುಲಾರಮ್) ರೆಂಬೆಯನ್ನು ನೆಲದ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ದೇಶದ ಇತರ ಭಾಗಗಳಲ್ಲಿ ಶ್ರಾವಣ ಮಾಸದಲ್ಲಿ ಮಾತ್ರವಲ್ಲದೆ, ಭಾದ್ರ ಮಾಸದಲ್ಲಿಯೂ ಸಹ ಹಬ್ಬವನ್ನು ಮನೆಗಳಲ್ಲಿ ಆಚರಿಸಲಾಗುತ್ತದೆ.

    ದಕ್ಷಿಣ ಭಾರತ
    ನಾಗರ ಪಂಚಮಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಈ ಹಬ್ಬಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಸುಪ್ರಿಸಿದ್ಧ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕರಾವಳಿ-ಮಲೆನಾಡಿನ ಭಾಗಗಳಲ್ಲಿ ನಾಗನಿಗೆ ಇರುವ ಪ್ರಮುಖ ಸ್ಥಾನ. ತುಳುನಾಡಿನಲ್ಲಿ ನಾಗರ ಪಂಚಮಿಯಂದು ಎಲ್ಲ ಸೇರಿ ಕುಟುಂಬದ ನಾಗಬನಕ್ಕೆ ಹೋಗುವುದು ಸಂಪ್ರದಾಯ. ಬೆಲ್ಲ-ಕಾಯಿ ತುರಿಯಿಂದ ತಯಾರಿಸುವ ಅರಿಶಿನ ಎಲೆಯ ಗಟ್ಟಿಯನ್ನು (ಕಡುಬು) ಮಾಡಿ ದೇವರಿಗೆ ನೈವೇದ್ಯ ಮಾಡಿ ಮನೆಮಂದಿ ತಿನ್ನುವುದು ಪದ್ಧತಿ. ಉತ್ತರ ಕರ್ನಾಟಕ ಕಡೆ ಇದೊಂದು ಸಾಂಸ್ಕೃತಿಕ ಹಬ್ಬ. ಸಹೋದರ ಸಹೋದರಿಯರು ಒಂದೆಡೆ ಸೇರಿ ಪ್ರೀತಿ, ವಾತ್ಸಲ್ಯದಿಂದ ಸಹೋದರರನ್ನು ಹಾರೈಸುವುದು, ಆಶೀರ್ವಾದ ಪಡೆಯುವುದು ನಡೆಯುತ್ತದೆ. ಮನೆಯ ಹೆಣ್ಮಕ್ಕಳಿಗೆ ಚಕ್ಕುಲಿ, ಚೂಡ, ಅರಳು, ಉಂಡೆ ಎಲ್ಲವನ್ನೂ ಕೊಬ್ಬರಿ ಜೊತೆಗಿಟ್ಟು ಕುಪ್ಪುಸದ ಕಣದೊಂದಿಗೆ ಬಾಗೀನ ನೀಡಲಾಗುತ್ತದೆ.

    ಹಳೇ ಮೈಸೂರು ಭಾಗದಲ್ಲಿ ಇದು ಅಣ್ಣ-ತಮ್ಮಂದಿರ ಹಬ್ಬ ಎಂದೇ ಪ್ರಸಿದ್ಧಿ ಪಡೆದಿದೆ. ಸಹೋದರರ ಒಳಿತನ್ನು ಕೋರಿ ಸಹೋದರಿಯರು ಅವರಿಗೆ ಬೆನ್ನುಪೂಜೆ ಮಾಡುವುದು ಈ ಹಬ್ಬದ ವಿಶೇಷ. ಪೂಜೆಯ ಭಾಗವಾಗಿ ನಾಗರ ಕಲ್ಲುಗಳಿಗೆ ಹಾಗೂ ಹುತ್ತಕ್ಕೆ ಎಳನೀರು, ಹಾಲಿನಿಂದ ಅಭಿಷೇಕ (ತನಿ ಎರೆಯುವುದು) ಮಾಡಲಾಗುತ್ತದೆ. ಉತ್ತರ ಕನ್ನಡದಲ್ಲಿ ನಾಗನಿಗೆ ಉಪ್ಪು ಹಾಕದ ಸಪ್ಪೆ ಅಕ್ಕಿರೊಟ್ಟಿಯ ನೈವೇದ್ಯ ಹಾಗೂ ಕ್ಷೀರಾಭಿಷೇಕ ಮಾಡಲಾಗುತ್ತದೆ.

    ಕೇರಳದಲ್ಲಿ ಈಳವರು ಮತ್ತು ನಾಯರ್‌ಗಳು ಸರ್ಪ ಆರಾಧಕರು. ಮನೆಯ ನೈರುತ್ಯ ಮೂಲೆಯಲ್ಲಿ ನಾಗದೇವತೆಗಾಗಿ ಒಂದು ದೇವರ ಕೋಣೆ ಮಾಡಿರುತ್ತಾರೆ. ನಾಗ ಪಂಚಮಿ ಹಿಂದಿನ ದಿನ ಮಹಿಳೆಯರು ಉಪವಾಸ ಮಾಡುತ್ತಾರೆ. ನಾಗ ಪಂಚಮಿ ದಿನ ಮುಂಜಾನೆ ಸ್ನಾನ ಮಾಡಿ ತರವಾಡು ಸರ್ಪ ಕಾವುನಲ್ಲಿ ಪ್ರಾರ್ಥಿಸುತ್ತಾರೆ. ತೀರ್ಥಂ ಹಾಲನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಚೆಂಬರತಿ (ದಾಸವಾಳ) ಹೂವನ್ನು ಹಾಲಿನಲ್ಲಿ ಅದ್ದಿ ಸಹೋದರನ ಬೆನ್ನಿನ ಮೇಲೆ ಚಿಮುಕಿಸಿ ನಂತರ ಆರತಿ ಮಾಡುತ್ತಾರೆ. ಅರಿಶಿನದಲ್ಲಿ ಅದ್ದಿದ ದಾರವನ್ನು ಸಹೋದರನ ಬಲ ಮಣಿಕಟ್ಟಿನ ಮೇಲೆ ಕಟ್ಟಲಾಗುತ್ತದೆ. ಕೊನೆಗೆ ಹಬ್ಬದೂಟ ನೀಡುತ್ತಾರೆ.

  • ಸಿಎಎ, ಎನ್​ಆರ್​ಸಿ, 370 ರದ್ದು ಪ್ರತಿಭಟನೆಯಿಂದ ಪ್ರಚೋದನೆಗೆ ಒಳಗಾಗಿದ್ದೆ – ಆರ್ದ್ರಾ

    ಸಿಎಎ, ಎನ್​ಆರ್​ಸಿ, 370 ರದ್ದು ಪ್ರತಿಭಟನೆಯಿಂದ ಪ್ರಚೋದನೆಗೆ ಒಳಗಾಗಿದ್ದೆ – ಆರ್ದ್ರಾ

    ಬೆಂಗಳೂರು: ಸಿಎಎ, ಎನ್​ಆರ್​ಸಿ ಹಾಗೂ ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದು ವಿರೋಧವಾಗಿ ನಡೆಯುತ್ತಿದ್ದ ಪ್ರತಿಭಟನೆಯಿಂದ ನಾನು ಪ್ರಚೋದನೆಗೆ ಒಳಗಾಗಿದ್ದೆ. ಎಲ್ಲೆಲ್ಲಿ ಸಿಎಎ, ಎನ್​ಆರ್​ಸಿ ವಿರುದ್ಧವಾಗಿ ನಡೆಯುವ ಎಲ್ಲಾ ಪ್ರತಿಭಟನೆಯಲ್ಲೂ ನಾನು ಭಾಗಿಯಾಗುತ್ತಿದ್ದೆ ಎಂದು ಆರ್ದ್ರಾ ಅಲಿಯಾಸ್ ಅನ್ನಪೂರ್ಣೇಶ್ವರಿ ಸ್ವಇಚ್ಚಾ ಹೇಳಿಕೆ ನೀಡಿದ್ದಾಳೆ.

    ಎಸ್‍ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಹಲವು ವಿಚಾರಗಳನ್ನು ತಿಳಿಸಿರುವ ಈಕೆ, ಎಲ್ಲೆಲ್ಲಿ ಕಾರ್ಯಕ್ರಮಗಳು ನಿಗದಿಯಾಗುತ್ತಿತ್ತೋ ಆ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಕಾರ್ಯಕ್ರಮಗಳಿಗೆ ತಾನೇ ಮುಂದಾಗಿ ಹೋಗುತ್ತಿದ್ದೆ ಎಂದಿದ್ದಾಳೆ.

     

    ಗುರುವಾರ ಸಂಜೆ ಫ್ರೀಡಂ ಪಾರ್ಕಿನಲ್ಲಿ ಅಮೂಲ್ಯ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದೆ. ಈ ವೇಳೆ ಅಮೂಲ್ಯಳ ‘ಪಾಕಿಸ್ತಾನ್ ಜಿಂದಾಬಾದ್’ ಹೇಳಿಕೆಗೆ ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಶುಕ್ರವಾರ ಅಮೂಲ್ಯ ವಿರುದ್ಧವಾಗಿ ಹಿಂದೂಪರ ಸಂಘಟನೆಗಳು ಇಂದು ಟೌನ್ ಹಾಲ್ ಬಳಿ ಸೇರಿ ಪ್ರತಿಭಟನೆ ನಡೆಸಲಿದ್ದಾರೆ ಎನ್ನುವ ವಿಚಾರ ತಿಳಿಯಿತು. ಹೀಗಾಗಿ ಗುರುವಾರವೇ ನಾನು ಮುಸಲ್ಮಾನ್ ಹಾಗೂ ದಲಿತರನ್ನ ಮುಕ್ತಗೊಳಿಸಿ, ಫ್ರೀ ಕಾಶ್ಮೀರ್ ಎಂಬ ಇಂಗ್ಲೀಷ್ ಹಾಗೂ ಕನ್ನಡದ ಬರಹಗಳಿರುವ ಸಂದೇಶಗಳನ್ನ ಬರೆದು ಇಟ್ಟುಕೊಂಡಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.

    ಪಿಜಿ ಬಳಿಯಿದ್ದ ಅಂಗಡಿಯಿಂದ ಪೇಂಟ್ ತಗೆದುಕೊಂಡು ಬಂದು ಖಾಕಿ ಬಾಕ್ಸ್ ಗೆ ಮುಸಲ್ಮಾನ್, ಕಾಶ್ಮೀರ, ದಲಿತ್, ಟ್ರಾನ್ಸ್, ಆದಿವಾಸಿ ಮುಕ್ತಿ ಎಂದು ಬರೆದಿದ್ದೆ ಎಂಬುದಾಗಿ ತಿಳಿಸಿದ್ದಾಳೆ.

    ಸ್ನೇಹಿತರು ಹೇಳೋದು ಏನು?
    ಪಿಜಿಯಲ್ಲಿ ತೀರ್ಮಾನ ಮಾಡಿಕೊಂಡು ಬೆಳಗ್ಗೆ ಪ್ಲಕಾರ್ಡ್ ತಯಾರು ಮಾಡಿಕೊಂಡು ಬಂದಿದ್ದಳು. ಆಕೆಯ ಹೋರಾಟ ಮತ್ತು ಹೇಳಿಕೆ ಬಗ್ಗೆ ಗೊತ್ತಿಲ್ಲ. ಆಕೆಯ ಹೇಳಿಕೆಗೂ ನಮಗು ಯಾವುದೇ ಸಂಬಂಧ ಇಲ್ಲ. ನಾವು ಸ್ನೇಹಿತರಾದ ಕಾರಣ ಬಂದಿದ್ದೇವೆ ಅಷ್ಟೇ. ನಾವು ಯಾವ ಹೋರಾಟದಲ್ಲೂ ಭಾಗಿಯಾಗಿಲ್ಲ. ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಅಮೂಲ್ಯ ಮತ್ತು ಆರ್ದ್ರಾ ಸ್ನೇಹಿತರಾದ ಪರನ್ ಅಮಿತವ್, ನಾಜಿಬುಲ್ಲ ತಿಳಿಸಿದ್ದಾರೆ.

  • ಚೀನಾದ ದೌರ್ಬಲ್ಯ ಭಿಕ್ಷೆ ಬೇಡುತ್ತಿರುವ ಪಾಪಿಸ್ತಾನಕ್ಕೆ ನೆರವಾಗುತ್ತಿದೆ ಹೇಗೆ?

    ಚೀನಾದ ದೌರ್ಬಲ್ಯ ಭಿಕ್ಷೆ ಬೇಡುತ್ತಿರುವ ಪಾಪಿಸ್ತಾನಕ್ಕೆ ನೆರವಾಗುತ್ತಿದೆ ಹೇಗೆ?

    ಬೀಜಿಂಗ್: ವಿಶ್ವದಲ್ಲಿ ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನ ಚೀನಾದ ದೌರ್ಬಲ್ಯದಿಂದ ಭಾರತದ ವಿರುದ್ಧ ಕಷ್ಟಪಟ್ಟು ತೊಡೆ ತಟ್ಟುತ್ತಿದೆ.

    ಹೌದು. ವಿವಿಧ ಕಾರಣಗಳಿಂದಾಗಿ ಈಗ ಚೀನಾ ಪಾಕಿಸ್ತಾನದ ಸೇನೆಯ ಮೇಲೆ ಹೆಚ್ಚು ಅವಲಂಬನೆಯಾಗಿದೆ. ಚೀನಾ-ಪಾಕಿಸ್ತಾನ ಆರ್ಥಿಕ ವಲಯ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚೀನಾ ನಾಗರಿಕರು ಕೆಲಸ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 60 ಸಾವಿರ ಚೀನಿಯರು ಪಾಕಿಸ್ತಾನಿದಲ್ಲಿದ್ದಾರೆ.

    ಇದರ ಜೊತೆಯಲ್ಲಿ ಪಾಕಿಸ್ತಾನ ಸೇನೆಯ ಅಗತ್ಯ ಚೀನಾಕ್ಕಿದೆ. ದಕ್ಷಿಣ ಚೀನಾದ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಗಡಿ ದಾಟದಂತೆ ತಡೆಯಲು ಚೀನಾಗೆ ಪಾಕ್ ಸೇನೆಯ ಬೆಂಬಲ ಬೇಕು. ಈ ಹಿಂದೆ ಕ್ಸಿನ್‍ಜಿಯಾಂಗ್ ಪ್ರತ್ಯೇಕವಾದಿ ಉಗ್ರರು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಮೂಲದ ಭಯೋತ್ಪಾದಕರ ಸಹಾಯ ಪಡೆದಿದ್ದರು. ಹೀಗಾಗಿ ಗಡಿ ಭಾಗದಲ್ಲಿ ಶಾಂತಿ ಕಾಪಾಡಿಕೊಳ್ಳುವ ಸಲುವಾಗಿ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಯಲ್ಲಿ ಚೀನಾ ಸರ್ಕಾರ ಕೋಟಿಗಟ್ಟಲೇ ಹಣವನ್ನು ಚೀನಾ ಸುರಿದಿದೆ. ಏಷ್ಯಾದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಸಡ್ಡು ಹೊಡೆಯಲೆಂದೇ ಈ ಯೋಜನೆಗೆ ಚೀನಾ ಚಾಲನೆ ನೀಡಿದೆ. ಈ ಯೋಜನೆ ಪೂರ್ಣವಾಗಬೇಕಾದರೆ ಪಾಕ್ ಸಹಕಾರ ಬೇಕೇ ಬೇಕು.

    ನೆರೆಯ ರಾಷ್ಟ್ರಗಳ ಶಸ್ತ್ರಪಡೆಯ ಮನಸ್ಥಿತಿ ಅರಿಯಲು ಪಾಕಿಸ್ತಾನದ ಸೇನೆಯಲ್ಲಿ ತನ್ನದೇ ಆದ ಮೂಲಗಳನ್ನು ಚೀನಾ ಹೊಂದಿದೆ. ಉಭಯ ದೇಶಗಳ ಸೈನ್ಯದ ಉನ್ನತ ಅಧಿಕಾರಿಗಳು ನಿತ್ಯವೂ ಭೇಟಿಯಾಗಿ ಮಾತುಕತೆ ನಡೆಸುತ್ತಾರೆ. ಜಂಟಿ ಸಮರ ಅಭ್ಯಾಸ ನಡೆಸುವ ಜೊತೆಗೆ ಚೀನಾ ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳನ್ನು ಸಹ ನೀಡಿದೆ. ಈ ಕಾರಣಕ್ಕಾಗಿ ಪಾಕಿಸ್ತಾನ ಚೀನಾದ ಮೇಲೆ ಒತ್ತಡ ತಂದು ತನ್ನ ಪರವಾಗಿಯೇ ಹೇಳಿಕೆ ನೀಡುವಂತೆ ಮಾಡುತ್ತಿದೆ.

    ಇದೇ ಕಾರಣಕ್ಕೆ ಬುಧವಾರ ನಡೆದಿದ್ದ ರಷ್ಯಾ-ಭಾರತ- ಚೀನಾ (ಆರ್‌ಐಸಿ) ಸಭೆಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಪಾಕಿಸ್ತಾದವು ಭಯೋತ್ಪಾದನೆಯ ವಿರೋಧಿ ದೇಶವಾಗಿದೆ ಎಂದು ಹೇಳಿಕೆ ನೀಡಿದ್ದರು. ಆರ್‌ಐಸಿ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನ ಹಾಗೂ ಭಯೋತ್ಪಾದಕರಿಂದ ನಾವು ಎಂದಿಗೂ ಮಾನವೀಯತೆಯನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಉಗ್ರರನ್ನು ಸೆದೆ ಬಡಿಯಲು ವಿಶ್ವದ ರಾಷ್ಟ್ರಗಳು ಒಂದಾಗಿ ಹೋರಾಡಬೇಕಿದೆ ಎಂದು ಹೇಳಿದ್ದರು. ಇದರಿಂದ ಎಚ್ಚೆತ್ತುಕೊಂಡ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾದ ಪರ ಬ್ಯಾಟ್ ಬೀಸಿದ್ದರು. ಅಷ್ಟೇ ಅಲ್ಲದೆ ಪಾಕಿಸ್ತಾನ ಹಾಗೂ ಭಾರತ ನಮಗೆ ಆತ್ಮೀಯ ದೇಶಗಳು. ಪರಸ್ಪರ ಮಾತುಕತೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಪುಲ್ವಾಮಾ ದಾಳಿಯ ತನಿಖೆಗೆ ಉಭಯ ದೇಶಗಳು ಸಹಕಾರ ನೀಡುವ ಮೂಲಕ ಶಾಂತಿ ಹಾಗೂ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv