Tag: Pak Punjab Province

  • 36 ರಸ್ತೆ, 5 ಉದ್ಯಾನವನಕ್ಕೆ ಕಾಶ್ಮೀರ ಎಂದು ಹೆಸರಿಡಲು ನಿರ್ಧರಿಸಿದ ಪಾಕ್

    36 ರಸ್ತೆ, 5 ಉದ್ಯಾನವನಕ್ಕೆ ಕಾಶ್ಮೀರ ಎಂದು ಹೆಸರಿಡಲು ನಿರ್ಧರಿಸಿದ ಪಾಕ್

    ಲಾಹೋರ್: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಮಾನ್ಯತೆಯನ್ನು ಭಾರತ ಸರ್ಕಾರ ರದ್ದು ಮಾಡಿರುವ ಹಿನ್ನೆಲೆ ಕಾಶ್ಮೀರ ಜನರೊಂದಿಗೆ ತಮ್ಮ ಸಾರ್ವಭೌಮತ್ವತೆ ತೋರಿಸಲು ಪಾಕಿಸ್ತಾನ ಮುಂದಾಗಿದೆ. ಹೀಗಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬರುವ 36 ರಸ್ತೆಗಳಿಗೆ ಹಾಗೂ 5 ಉದ್ಯಾನವನಕ್ಕೆ ಕಾಶ್ಮೀರ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ.

    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ ಭಾರತ ಸರ್ಕಾರ ನೀತಿಗೆ ಪಾಕಿಸ್ತಾನ ಖಂಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಎಂ ಉಸ್ಮಾನ್ ಬುಜ್ಧಾರ್ ಅವರು, ಕಾಶ್ಮೀರ ಜನರೊಂದಿಗೆ ಹೊಂದಿದ್ದ ಐಕ್ಯತೆ ಪ್ರತೀಕವಾಗಿ ಈ ನಿರ್ಣಯಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

    ಪಾಕ್ ಪಂಜಾಬ್ ಪ್ರಾಂತ್ಯದ ಪ್ರತಿ ಜಿಲ್ಲೆಯ ಒಂದು ರಸ್ತೆಗೆ ಕಾಶ್ಮೀರ ಎಂದು ಮರುನಾಮಕರಣ ಮಾಡಲಾಗುತ್ತದೆ. ಅಂದರೆ ಒಟ್ಟಾರೆ 36 ರಸ್ತೆಗಳಿಗೆ ಹಾಗೂ ಐದು ಮುಖ್ಯ ಉದ್ಯಾನವನಗಳಿಗೆ ಕಾಶ್ಮೀರ ರಸ್ತೆ ಮತ್ತು ಕಾಶ್ಮೀರ ಪಾರ್ಕ್ ಎಂದು ಹೆಸರಿಡಲಾಗುವುದು ಎಂದು ಹೇಳಿದ್ದಾರೆ.

    ಭಾರತದ ಸ್ವಾಂತಂತ್ರ್ಯ ದಿನವನ್ನು ಪಾಕಿಸ್ತಾನ ಕರಾಳ ದಿನವಾಗಿ ಆಚರಿಸಿದೆ. ಜೊತೆಗೆ ಬುಧವಾರ ಪಾಕಿಸ್ತಾನದ ಸ್ವಾಂತಂತ್ರ್ಯ ದಿನವನ್ನು ಕಾಶ್ಮೀರ ಐಕ್ಯತೆ ದಿನವೆಂದು ಆಚರಿಸಿತ್ತು.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಮಾನ್ಯತೆಯ ಕಲಂ 370 ರದ್ದು ಮಾಡಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶ ಮಾಡಿರುವ ಕ್ರಮಕ್ಕೆ ಪಾಕಿಸ್ತಾನ ಭಾರತ ವಿರುದ್ಧ ಕಿಡಿಕಾರುತ್ತಿದೆ. ಹಾಗೆಯೇ ಈ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೆಟ್ಟಿಲೇರಿ, ಭಾರತದ ನಡೆಯನ್ನು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿರುವ ಭಾರತ, ಇದು ನಮ್ಮ ಆಂತರಿಕ ವಿಚಾರ, ಪಾಕಿಸ್ತಾನ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ತಿರುಗೇಟು ನೀಡಿದೆ.