Tag: paint roller

  • ವೀಡಿಯೋ: ಪೇಂಟ್ ರೋಲರ್‌ನಲ್ಲಿ ವಧುವಿಗೆ ಅರಿಶಿಣ ಶಾಸ್ತ್ರ ನೆರವೇರಿಸಿದ ಮಹಿಳೆ!

    ವೀಡಿಯೋ: ಪೇಂಟ್ ರೋಲರ್‌ನಲ್ಲಿ ವಧುವಿಗೆ ಅರಿಶಿಣ ಶಾಸ್ತ್ರ ನೆರವೇರಿಸಿದ ಮಹಿಳೆ!

    – ಮಹಿಳೆಯ ಐಡಿಯಾಕ್ಕೆ ಭರ್ಜರಿ ಕಮೆಂಟ್

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದ ಬಳಿಕ ಸಾಕಷ್ಟು ಅವಾಂತರಗಳು ನಡೆದಿದೆ. ಈ ಸಾಂಕ್ರಾಮಿಕ ರೋಗದಿಂದ ದೂರ ಇರಲು ಕೆಲವೊಂದು ನಿಯಮಗಳನ್ನು ತಾವೇ ರೂಪಿಸಿಕೊಳ್ಳುವ ಮೂಲಕ ಜೀವನ ಮುಂದುವರಿಸಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಮದುವೆಗಳು ರದ್ದಾದರೆ, ಇನ್ನೂ ಕೆಲವೊಂದು ಮದುವೆಗಳು ಅತ್ಯಂತ ಸರಳವಾಗಿ ನಡೆಯುತ್ತಿವೆ. ಈ ಮಧ್ಯೆ ಅರಿಶಿಣ ಶಾಸ್ತ್ರದಲ್ಲಿ ಮಹಿಳೆಯೊಬ್ಬರು ಕಂಡುಕೊಂಡ ಐಡಿಯಾ ಇದೀಗ ಭಾರೀ ಸುದ್ದಿಯಾಗಿದೆ.

    ಹೌದು. ಮಹಿಳೆಯೊಬ್ಬರು ವಧುವಿಗೆ ಪೇಂಟ್ ರೋಲರ್ ಮೂಲಕ ಅರಿಶಿಣ ಶಾಸ್ತ್ರ ನೆರವೇರಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಹರ್ಜಿಂದರ್ ಸಿಂಗ್ ಕುಕ್ರೇಜಾ ಎಂಬವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಅಂತರದಿಂದ ಹುಟ್ಟಿಕೊಂಡ ಹೊಸ ವಿಧಾನ! ಈ ಶಾಸ್ತ್ರ ಭಾರತದಲ್ಲಿ ವಿವಾಹದ ಪೂರ್ವದಲ್ಲಿ ನಡೆಯುತ್ತದೆ. ದಾಂಪತ್ಯ ಜೀವನಕ್ಕೆ ಕಾಲಿಡುವ ದಿನದಂದು ಬೆಳಗ್ಗೆ ವಿವಾಹಿತ ಮಹಿಳೆಯರು ಅರಿಶಿಣ, ಎಣ್ಣೆ ಹಾಗೂ ನೀರು ಮಿಕ್ಸ್ ಮಾಡಿ ವಧು-ವರನಿಗೆ ಹಚ್ಚುತ್ತಾರೆ. ಈ ರೀತಿ ಮಾಡಿದರೆ ಮದುವೆಗೆ ಮೊದಲು ಜೋಡಿಗೆ ಆಶೀರ್ವಾದ ಸಿಕ್ಕಂತಾಗುತ್ತದೆ ಎಂಬ ನಂಬಿಕೆಯಿದೆ.

    ಲೂಧಿಯಾನದಲ್ಲಿ ನಡೆದ ಅರಿಶಿಣ ಶಾಸ್ತ್ರದ 13 ಸೆಕೆಂಡಿನ ಈ ವೀಡಿಯೋದಲ್ಲಿ, ಸಂಬಂಧಿಕರೊಬ್ಬರು ವಧುವಿಗೆ ಅರಿಶಿಣ ಹಚ್ಚಲು ಪೇಂಟ್ ರೋಲರ್ ಬಳಸಿರುವುದುನ್ನು ಕಾಣಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡು ವಧುವಿಗೆ ಅರಿಶಿಣ ಹಚ್ಚಿರುವುದನ್ನು ನೋಡಿ ಸಮಾರಂಭದಲ್ಲಿ ನೆರೆದಿದ್ದವರು ಜೋರಾಗಿ ನಕ್ಕಿದ್ದಾರೆ. ಈ ಮೂಲಕ ಕಾರ್ಯಕ್ರಮದಲ್ಲಿ ಮೋಜು ಮಾಡಿದ್ದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇದುವರೆಗೂ ಈ ವೀಡಿಯೋ 6 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಸಾವಿರಾರು ಕಮೆಂಟ್ ಗಳು ಕೂಡ ಬಂದಿವೆ. ಒಬ್ಬರು ಈ ವೀಡಿಯೋ ನೋಡಿದರೆ ನಗು ಬರುತ್ತದೆ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು ಹಳದಿ ಪೇಂಟ್‍ಗಾಗಿ ಒಳ್ಳೆಯ ಉಪಾಯ ಕಂಡುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    https://twitter.com/jass_kukreja/status/1310673800640499715