Tag: paint

  • ಬಣ್ಣ ಕಾಣದ ಸರ್ಕಾರಿ ಶಾಲೆಗೆ ಹೋಳಿ ಹಬ್ಬದ ರಂಗು ಹಚ್ಚಿದ ಹಳೆಯ ವಿದ್ಯಾರ್ಥಿಗಳು

    ಬಣ್ಣ ಕಾಣದ ಸರ್ಕಾರಿ ಶಾಲೆಗೆ ಹೋಳಿ ಹಬ್ಬದ ರಂಗು ಹಚ್ಚಿದ ಹಳೆಯ ವಿದ್ಯಾರ್ಥಿಗಳು

    – ವಿಭಿನ್ನ ರೀತಿಯಲ್ಲಿ ಹೋಳಿ ಆಚರಿಸಿದ ರಾಯಚೂರಿನ ಯುವಕರು
    – ಶ್ರಮದಾನ ಮೂಲಕ ಶಾಲೆಗೆ ಹೊಸ ರೂಪ, ಸಸಿ ನೆಟ್ಟು ಸಂಭ್ರಮ
    – 10 ಬ್ಯಾಚ್ ವಿದ್ಯಾರ್ಥಿಗಳಿಂದ ಶಾಲೆಯ ಅಭಿವೃದ್ಧಿಗೆ ಪಣ

    ರಾಯಚೂರು: ರಂಗಿನ ಹಬ್ಬ ಹೋಳಿ ಆಚರಿಸಲು ಈ ಬಾರಿ ಕೊರೊನಾ ತಡೆಯಾಗಿದೆ. ಕೊರೊನಾ ಎರಡನೇ ಅಲೆ ಬೀಸುತ್ತಿರುವುದರಿಂದಾಗಿ ಈ ಬಾರಿ ಸಾರ್ವಜನಿಕವಾಗಿ ಯಾರೂ ಹೋಳಿ ಆಡದಂತೆ ಮಾಡಿದೆ. ಆದರೆ ರಾಯಚೂರಿನ ಯುವಕರ ಗುಂಪೊಂದು ಸರ್ಕಾರಿ ಶಾಲೆಗೆ ಬಣ್ಣ ಹಚ್ಚುವ ಮೂಲಕ ಎಲ್ಲರಿಗೂ ಮಾದರಿಯಾಗುವಂತೆ ಹೋಳಿ ಹಬ್ಬವನ್ನು ಆಚರಿಸಿದೆ.

    ನಗರದ ಜವಾಹನಗರದ ಕಲ್ಲೂರು ಸರಾಫ್ ಶೀನಯ್ಯ ಬಾಲರಾಜ್ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಸರ್ಕಾರಿ ಅನುದಾನಿತ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಕಟ್ಟಡ ಬಣ್ಣವನ್ನು ಕಂಡು 15 ರಿಂದ 20 ವರ್ಷವೇ ಕಳೆದಿತ್ತು. ಶಾಲೆಯ ಕಟ್ಟಡ ಸಹ ಅಲ್ಲಲ್ಲಿ ಶಿಥಿಲಗೊಂಡಿತ್ತು. ಇದನ್ನು ಕಂಡ ಈ ಶಾಲೆಯ 1998ರ ಬ್ಯಾಚ್‍ನ ಹಳೆಯ ವಿದ್ಯಾರ್ಥಿ ರಂಗಾರಾವ್ ದೇಸಾಯಿ ತನ್ನ ಸಹಪಾಠಿಗಳ ಸಹಾಯದಿಂದ ಶಾಲೆಗೆ ಹೊಸ ರೂಪವನ್ನೇ ಕೊಟ್ಟಿದ್ದಾರೆ. ಹೋಳಿ ಹಬ್ಬವನ್ನು ಒಬ್ಬರಿಗೊಬ್ಬರು ಬಣ್ಣ ಎರಚಿ ಆಡುವುದಕ್ಕಿಂತ, ತಾವು ಓದಿದ ಶಾಲೆಗೆ ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ. ಈ ಮೂಲಕ ತಮ್ಮ ಬಾಲ್ಯದ ಹಳೆಯ ನೆನಪುಗಳಿಗೆ ರಂಗಿನ ಮೂಲಕ ಹೊಸ ಜೀವ ತುಂಬಿದ್ದಾರೆ.

    ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲೂ ಕಾಳಜಿ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಜೀವ ಕಳೆ ತುಂಬಿದ್ದಾರೆ. 1969 ರಲ್ಲಿ ಆರಂಭವಾದ ಈ ಶಾಲೆ 51 ವರ್ಷಗಳನ್ನ ಪೂರೈಸಿದೆ. ಇಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಉದ್ಯೋಗದಲ್ಲಿದ್ದಾರೆ. ಅಮೆರಿಕ, ಕೆನಡಾ, ಬ್ರೆಜಿಲ್, ಮಲೇಷ್ಯಾ, ಸೇರಿ ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಶಾಲೆ ಮಾತ್ರ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತ ಬಂದಿತ್ತು. ಇದನ್ನು ಗಮನಿಸಿದ ಹಳೆಯ ವಿದ್ಯಾರ್ಥಿಗಳು ಎಲ್ಲರೂ ಒಟ್ಟಾಗಿ ಸೇರಿ ಹೋಳಿ ಹಬ್ಬ ನಿಮಿತ್ತ ಶಾಲೆಗೆ ಹೊಸ ರೂಪ ನೀಡಿದ್ದಾರೆ.

    ಸಾಧ್ಯವಾಗಿದ್ದು ಹೇಗೆ?
    ಬ್ರೆಜಿಲ್‍ನಲ್ಲಿ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿ ರಂಗಾರಾವ್ ವರ್ಕ್ ಫ್ರಂ ಹೋಂ ಹಿನ್ನೆಲೆ ರಾಯಚೂರಿನಲ್ಲೆ ಇದ್ದು ಶಾಲೆಯ ಫೋಟೋ ತೆಗೆದು ಸ್ನೇಹಿತರಿಗೆ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ಫೋಟೋವನ್ನು ಶೇರ್ ಮಾಡಿದ ಕೂಡಲೇ ಸುಮಾರು 10 ಬ್ಯಾಚ್‍ನ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ. ಒಂದೆಡೆ ಶಾಲೆಯನ್ನು ತುಂಬಾ ವರ್ಷಗಳ ನಂತರ ನೋಡಿದ ಖುಷಿಯಿದ್ದರೆ, ಇನ್ನೊಂಡೆ ಶಾಲೆ ಕಳೆ ಹೀನವಾಗಿದ್ದಕ್ಕೆ ಬೇಸರಗೊಂಡಿದ್ದಾರೆ. ಸದ್ಯ ಶಾಲೆಗೆ ಬಣ್ಣಗಳಿಂದ ಅಲಂಕಾರ ಮಾಡಿ, ಶ್ರಮದಾನ ಮೂಲಕ ಸ್ವಚ್ಛಗೊಳಿಸಿ ಸಸಿಗಳನ್ನು ನೆಟ್ಟಿದ್ದಾರೆ. ಮುಂದೆ ಸಹ ಶಾಲೆಯ ಕುಂದುಕೊರತೆಗಳನ್ನು ಅರಿತು ಶಾಲಾ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಹಳೆಯ ವಿದ್ಯಾರ್ಥಿಗಳು ಹೇಳಿದ್ದಾರೆ. ಇದರಿಂದ ಶಾಲೆಯ ಶಿಕ್ಷಕರು ಸಹ ಸಂತೋಷ ವ್ಯಕ್ತಪಡಿಸಿದ್ದಾರೆ.

  • ‘ಇಂಥದ್ದನ್ನ ಸಹಿಸಬೇಕಾ ಹೇಳಿ’- ಟೀಕೆಯ ಬೆನ್ನಲ್ಲೇ ಚಾಮುಂಡಿ ಬೆಟ್ಟದ ರಥದ ಚಕ್ರಗಳ ಪೇಂಟಿಂಗ್ ಬದಲಾವಣೆ

    ‘ಇಂಥದ್ದನ್ನ ಸಹಿಸಬೇಕಾ ಹೇಳಿ’- ಟೀಕೆಯ ಬೆನ್ನಲ್ಲೇ ಚಾಮುಂಡಿ ಬೆಟ್ಟದ ರಥದ ಚಕ್ರಗಳ ಪೇಂಟಿಂಗ್ ಬದಲಾವಣೆ

    ಮೈಸೂರು: ಚಾಮುಂಡಿಬೆಟ್ಟದಲ್ಲಿ ರಥದ ಚಕ್ರಕ್ಕೆ ಆಕ್ಷೇಪರ್ಹ ಚಿತ್ರರಚನೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪರ ವಿರೋಧದ ನಡುವೆ ರಥದ ಚಕ್ರಗಳ ಪೇಂಟಿಂಗ್ ಬದಲಾವಣೆ ಮಾಡಲಾಗಿದೆ.

    ಸಂಸದ ಪ್ರತಾಪ್ ಸಿಂಹ ಅವರು ಚಾಮುಂಡಿ ಬೆಟ್ಟದ ರಥ ಚಕ್ರಗಳಿಗೆ ಮಾಡಿದ್ದ ಪೇಂಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಸಂಸದರು, ಚಾಮುಂಡಿ ಬೆಟ್ಟದ ರಥದ ಚಕ್ರಗಳಿಗೆ ಮಾಡಿ ಪೇಂಟಿಂಗ್ ನೋಡಿ… ಇಂಥದ್ದನ್ನ ಸಹಿಸಬೇಕಾ ಹೇಳಿ ಎಂದು ಪ್ರಶ್ನಿಸಿದ್ದರು. ಬಳಿಕ ಮತ್ತೊಂದು ಟ್ವೀಟ್ ಮಾಡಿ, ನಿಮ್ಮ ಗಮನಕ್ಕೆ ಇರಲಿ ಅಂತ ಫೋಟೋ ಹಾಕಿದ್ದೇನೆ. ಪಾಠ ಕಲಿಸದೇ ಬಿಡಲ್ಲ ಎಂದು ಗುಡುಗಿದ್ದರು.

    ಚಿತ್ರದಲ್ಲಿ ಏನಿತ್ತು?:
    ಚಾಮುಂಡಿ ಬೆಟ್ಟದ ಮಹಾಬಲೇಶ್ವರ ರಥದ ಚಕ್ರಗಳಿಗೆ ಹಸಿರು ಬಣ್ಣದಿಂದ ಅರ್ಧ ಚಂದ್ರ ಹಾಗೂ ಅದರ ಮೇಲೊಂದು ನಕ್ಷದ ಬಿಂಬಿಸುವಂತಹ ಕಲಾಕೃತಿ ಬಿಡಿಸಲಾಗಿತ್ತು. ಇದಕ್ಕೆ ಸಂಸದ ಪ್ರತಾಪ್ ಸಿಂಹ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ರಥದ ಚಕ್ರಗಳ ಮೇಲಿದ್ದ ಅರ್ಧ ಚಂದ್ರ ಹಾಗೂ ನಕ್ಷತ್ರದ ಬಿಂಬಿಸುವ ಕಲಾಕೃತಿಯನ್ನು ತೆಗೆದು ಹಾಕಲಾಗಿದೆ.

    ಆದರೆ ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧ ವ್ಯಕ್ಯವಾಗಿತ್ತು. ಸಂಸದರೇ ಹೀಗೆ ಪ್ರಚೋದನಕಾರಿ ಪೋಸ್ಟ್ ಮಾಡಿದ್ದು ಸರಿಯೇ ಎಂದು ಕೆಲವರು ಪ್ರಶ್ನಿಸಿದ್ದರು. ಈ ವಿಚಾರ ಮುಜುರಾಯಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಪೇಟಿಂಗ್ ಬದಲಾವಣೆ ಮಾಡಿದ್ದಾರೆ.

  • ಡಿಸಿಪಿ ಆದೇಶ – ಅಪಘಾತ ತಡೆಗೆ ಮೇಲ್ಸೇತುವೆಗೆ ಬಣ್ಣ

    ಡಿಸಿಪಿ ಆದೇಶ – ಅಪಘಾತ ತಡೆಗೆ ಮೇಲ್ಸೇತುವೆಗೆ ಬಣ್ಣ

    ಬೆಂಗಳೂರು: ಸಿಲಿಕಾನ್ ಸಿಟಿಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಮೇಲೆ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಅಪಘಾತಗಳನ್ನ ತಪ್ಪಿಸುವ ಉದ್ದೇಶದಿಂದ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಸೌಮ್ಯಲತಾ ಆದೇಶದ ಮೇರೆಗೆ ಸೇತುವೆಗೆ ಬಣ್ಣ ಬಳೆಯಲಾಗಿದೆ.

    ಸಿಟಿ ಮಾರ್ಕೆಟ್, ಮೈಸೂರು ರೋಡ್ ಸದಾ ಬ್ಯುಸಿ ಇರುವ ರಸ್ತೆ. ದಿನಕ್ಕೆ ಲಕ್ಷಾಂತರ ವಾಹನಗಳು ಮೈಸೂರು ರಸ್ತೆ ಮೂಲಕ ಸಂಚಾರ ಮಾಡುತ್ತಿರುತ್ತವೆ. ಹೀಗಾಗಿ ಸದಾ ಟ್ರಾಫಿಕ್‍ನಿಂದ ಕೂಡಿರುತ್ತದೆ. ಕೆಂಗೇರಿ, ಬಿಡದಿ, ರಾಮನಗರ, ಮಂಡ್ಯ ಮತ್ತು ಮೈಸೂರು ಕಡೆ ಹೋಗುವ ವಾಹನ ಸವಾರರು ಈ ಮಾರ್ಗವಾಗಿ ಹೋಗುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ.

    ಅದರಲ್ಲೂ ಮೆಜೆಸ್ಟಿಕ್ ಮತ್ತು ಟೌನ್‍ಹಾಲ್ ಕಡೆಯಿಂದ ಬರುವ ವಾಹನಗಳು ಸಿಟಿ ಮಾರ್ಕೆಟ್‍ನ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಮೇಲೆ ಸಂಚಾರ ಮಾಡಬೇಕಾಗಿದೆ. ಈ ಮೇಲ್ಸೇತುವೆ ಮೇಲೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರಿ ನಿಯಮಗಳು ಉಲ್ಲಂಘನೆ ಮಾಡುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ಈ ಮೇಲ್ಸೇತುವೆ ಮೇಲೆ ಅಪಘಾತಗಳನ್ನ ತಪ್ಪಿಸುವ ಉದ್ದೇಶದಿಂದ ಸೇತುವೆಗೆ ಬಣ್ಣ ಬಳಿಯಲಾಗಿದೆ.

    ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಸೌಮ್ಯಲತಾ ಅವರು ಈ ಮೇಲ್ಸೇತುವೆಗೆ ಬಣ್ಣವನ್ನು ಬಳಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಇರಬಹುದು, ಮುಂಜಾನೆ ಇರಬಹುದು, ಬೆಳಗಿನ ಸಮಯದಲ್ಲಿ ಕೂಡ ಸೇತುವೆ ಗೋಡೆ, ಅಡೆತಡೆ ವಾಹನ ಸವಾರರಿಗೆ ಕಂಡು ಎಚ್ಚರಿಕೆಯಿಂದ ಸವಾರರು ವಾಹನಗಳನ್ನ ಸಂಚಾರಿಸಲಿ ಎಂದು ಬಣ್ಣ ಬಳಿಯಲಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸೌಮ್ಯಲತಾ ಅವರು, “ಈ ದಿನ ಪಶ್ಚಿಮ ವಿಭಾಗ ವ್ಯಾಪ್ತಿಯ ಮೈಸೂರು ರಸ್ತೆ, ಸಿಟಿ ಮಾರುಕಟ್ಟೆಯ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಮೇಲ್ಸೇತುವೆ ರಸ್ತೆಯಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದವು. ಈ ರಸ್ತೆಯಲ್ಲಿ ಅಪಘಾತವನ್ನು ತಡೆಗಟ್ಡುವ ನಿಟ್ಟಿನಲ್ಲಿ ನನ್ನ ಸೂಚನೆ, ನಿಲುವಳಿ ಮತ್ತು ನಿರ್ದೇಶನದ ಮೇರೆಗೆ ಬಿಬಿಎಂಪಿಯು ಮೇಲ್ಸೇತುವೆಯ ರಸ್ತೆಯ ಗೋಡೆಗೆ ಬಣ್ಣ ಬಳಿಸಿ ಕ್ರಮ ಕೈಗೊಂಡಿರುತ್ತದೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

    ಪಶ್ಚಿಮ ವಿಭಾಗದ ಡಿಸಿಪಿ ಸೌಮ್ಯಲತಾ ಅವರು ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಬಣ್ಣ ಬಳಿಯುವಂತೆ ಬಿಬಿಎಂಪಿಗೆ ನಿರ್ದೇಶನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಸೇತುವೆಗೆ ಬಣ್ಣ ಬಳಿಯುವ ಮೂಲಕ ಅಪಘಾತ ತಡೆಗೆ ಮುಂದಾಗಿದ್ದಾರೆ. ಇನ್ನಾದರೂ ವಾಹನ ಸವಾರರು ಎಚ್ಚೇತ್ತು ಎಚ್ಚರಿಕೆ ವಾಹನಗಳನ್ನ ಓಡಿಸುತ್ತಾರ ಕಾದು ನೋಡಬೇಕಿದೆ.

  • ಸರ್ಕಾರಿ ಶಾಲೆಯ ಅಂದ ಚೆಂದ ಹೆಚ್ಚಿಸಿದ ಬಸ್, ರೈಲು, ವಿಮಾನ, ಹಡುಗು!

    ಸರ್ಕಾರಿ ಶಾಲೆಯ ಅಂದ ಚೆಂದ ಹೆಚ್ಚಿಸಿದ ಬಸ್, ರೈಲು, ವಿಮಾನ, ಹಡುಗು!

    ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಬಹಳ ಮಂದಿ, ಪಾಳು ಬೀಳೋ ಸ್ಥಿತಿಯಲ್ಲಿರೋ ಕಟ್ಟಡಗಳು, ಮುರಿದ ಕಿಟಕಿಗಳು, ಬಾಗಿಲುಗಳೇ ಇಲ್ಲದ ಕೊಠಡಿಗಳು ಈ ತರ ಸರ್ಕಾರಿ ಶಾಲೆಗಳಲ್ಲಿ ನಾನಾ ಸಮಸ್ಯೆಗಳು, ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಅಂದ-ಚೆಂದವಾಗಿ ಕಂಗೊಳಿಸುತ್ತಿದೆ.

    ಅಂದಹಾಗೆ ಶಾಲೆಯ ಗೋಡೆಗಳ ಮೇಲೆ 3ಡಿ ಮಾದರಿಯಲ್ಲಿ ಬಸ್, ರೈಲು, ವಿಮಾನದ ಚಿತ್ರಗಳನ್ನ ಬಿಡಿಸಲಾಗಿದ್ದು, ಶಾಲೆಯ ಅಂದ ಚೆಂದವೇ ಬದಲಾಗಿ ಹೋಗಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಜೊತೆಗೂಡಿ ಗ್ರಾಮಪಂಚಾಯತಿ ಅನುದಾನ ಪಡೆದು ಶಾಲೆಯ ಗೋಡೆಗಳ ಮೇಲೆ ಈ ಚಿತ್ರಗಳನ್ನ ಬಿಡಿಸಲಾಗಿದ್ದು ಶಾಲೆಯ ರೂಪವೇ ಬದಲಾಗಿ ಬಣ್ಣ ಬಣ್ಣಗಳಿಂದ ಮಿಂಚುತ್ತಿದೆ.

    ಶಾಲೆಯ ಹೊರಭಾಗದ ಗೋಡೆಗಳ ಮೇಲೆ ರೈಲು, ಬಸ್, ವಿಮಾನ ಹಾಗೂ ಹಡುಗು ಸೇರಿದಂತೆ ಶಾಲೆಯ ಕೊಠಡಿಗಳ ಒಳಭಾಗದಲ್ಲಿ ಶಿಡ್ಲಘಟ್ಟ ರೇಷ್ಮೆ ನಗರಿ ಅನ್ನೋ ಖ್ಯಾತಿ ಪ್ರತೀಕವಾಗಿ ರೇಷ್ಮೆ ಹುಳು. ಚಂದ್ರಿಕೆ ಹಾಗೂ ರೈತನ ಚಿತ್ರ ಬಿಡಿಸಲಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ಶಾಲೆ ಆರಂಭವಾಗಿ 75 ವರ್ಷಗಳ ಕಳೆದ ಹಿನ್ನೆಲೆ ಅಮೃತ ಮಹೋತ್ಸವ ಸಮಾರಂಭ ನಡೆಸಿ, ಶಿಕ್ಷಣ ಇಲಾಖಾಧಿಕಾರಿಗಳು, ಹಾಗೂ ತಹಶೀಲ್ದಾರ್ ರನ್ನ ಶಾಲೆಗೆ ಆಹ್ವಾನಿಸಿ, ನೂತನ ಚಿತ್ರಗಳನ್ನು ಉದ್ಘಾಟನೆ ಮಾಡಲಾಗಿದೆ.

    ಶಾಲೆಯ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸಾಕಷ್ಟು ಶ್ರಮಿಸುತ್ತಿದ್ದು, ಶಾಲೆಗಾಗಿ 9 ಎಕೆರೆ ಭೂಮಿಯನ್ನ ಮೀಸಲಿಡಲಾಗಿದೆ. ಈ ಜಾಗದಲ್ಲಿ ನೂರಾರು ಮರ ಗಿಡಗಳನ್ನ ಬೆಳೆಸಲಾಗುತ್ತಿದೆ. ಮತ್ತೊಂದೆಡೆ ಇದೇ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಆಧುನಿಕ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರ ಬಾ ಪುಲೆ ಹೆಸರನ್ನ ನಾಮಕರಣ ಮಾಡಲಾಗಿದೆ. ಸದ್ಯ ಶಾಲೆ ಬಣ್ಣ ಬಣ್ಣದ ಚಿತ್ರಗಳಿಂದ ಮಿರ ಮಿರ ಮಿಂಚುತ್ತಿದ್ದು, ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೂ ಶಾಲೆ ಮಾದರಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

  • ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

    ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

    ಪುತ್ತೂರು(ಮಂಗಳೂರು): ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮಣ್ಣಿನ ಮನೆಗಳಿದ್ದುದರಿಂದ ನೆಲ, ಗೋಡೆಯ ಅರ್ಧ ಭಾಗಕ್ಕೆ ಸೆಗಣಿ ಸಾರುತ್ತಿದ್ದರು. ಆದ್ರೆ ಇದೀಗ ಸಿಮೆಂಟ್ ಬಿಲ್ಡಿಂಗ್ ಗಳು ತಲೆಯೆತ್ತುತ್ತಿದ್ದು, ಜನರು ಸೆಗಣಿ ಮುಟ್ಟುವ ಗೋಜಿಗೆ ಹೋಗಲ್ಲ. ಆದ್ರೆ ಪುತ್ತೂರಿನ ವ್ಯಕ್ತಿಯೊಬ್ಬರು ತಮ್ಮ ಮನೆಯ ಗೋಡೆಗೆ ಸೆಗಣಿ ಪೇಂಟ್ ಮಾಡುವ ಮೂಲಕ ವಿಶಿಷ್ಠ ಯೋಜನೆಗೆ ಕೈ ಹಾಕಿದ್ದಾರೆ.

    ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಸಮೀಪದ ದೇವಕಾನ ನಿವಾಸಿ ಪಂಚಗವ್ಯ ಸಿದ್ದ ವೈದ್ಯ ಡಾ. ಶಶಿಶೇಖರ ಭಟ್, `ಗೋ ರಂಗ್’ ಅನ್ನೋ ಯೋಜನೆ ಆರಂಭಿಸಿದ್ದಾರೆ. ನಾಟಿ ಹಸುವಿನ ಸೆಗಣಿಯನ್ನು ಬಳಸಿ ಬಣ್ಣ ತಯಾರಿಸಿ ಮನೆಯ ಗೋಡೆಗೆ ಬಳಿಯುವ ಮೂಲಕ ಯಶಸ್ಸು ಕಂಡಿದ್ದಾರೆ.

    ಐಡಿಯಾ ಬಂದಿದ್ದು ಹೇಗೆ..?
    ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪದಾರ್ಥಗಳಿಂದ ಮಾಡಿದ ಬಣ್ಣಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ಮನಗಂಡ ಅವರು ಈ ನೂತನ ಉತ್ಪನ್ನವನ್ನು ತಯಾರಿಸಲು ಮುಂದಾಗಿದ್ದು, ಯಶಸ್ವಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.

    ಕೇವಲ ಸ್ವದೇಶೀ ತಳಿಯ ಗೋವಿನ ಸೆಗಣಿಯಿಂದ ಮಾತ್ರವೇ ಈ ಸೆಗಣಿ ಪೇಂಟ್ ತಯಾರಿಸಲು ಸಾಧ್ಯ. ಈ ಮೂಲಕ ಸೆಗಣಿಯನ್ನು ಕೇವಲ ಗೋಬರ್ ಗ್ಯಾಸ್ ಹಾಗೂ ಗೊಬ್ಬರಕ್ಕೆ ಬಳಸುತ್ತಿದ್ದ ಕಾಲ ಇನ್ನು ದೂರವಾಗಲಿದ್ದು, ಸೆಗಣಿಯ ಪೇಂಟ್ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯೂ ಹೆಚ್ಚಾಗಿದೆ.

    ಪೈಂಟ್ ತಯಾರಿಸೋದು ಹೇಗೆ..?
    ಸೆಗಣಿಗೆ ಕೆಲವು ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ಸಿಂಥೆಟಿಕ್ ಪೇಂಟ್ ನಂತೆ ಗೋಡೆಗೆ ಅಂಟಿಕೊಳ್ಳುವಂತೆ ತಯಾರಿಸಿದ್ದಾರೆ. ಬಳಿಕ ಮನೆಯ ಎಲ್ಲಾ ಕೋಣೆಗಳಿಗೂ ಬಳಿದಿದ್ದಾರೆ. ಸೆಗಣಿಯ ಈ ಪೇಂಟ್ ಅನ್ನು ಹಲವು ಬಣ್ಣದಲ್ಲೂ ಸಿದ್ಧಪಡಿಸುವ ಯೋಜನೆಯನ್ನೂ ಶಶಿಶೇಖರ್ ಅವರು ಹಾಕಿಕೊಂಡಿದ್ದಾರೆ.

    ಹಿಂದಿನ ಕಾಲದಲ್ಲೂ ಸೆಗಣಿಯನ್ನು ಗೋಡೆಗಳಿಗೆ ಹಾಗೂ ನೆಲಕ್ಕೆ ಬಳಿಯುವಂತಹ ವ್ಯವಸ್ಥೆಗಳಿತ್ತು. ಆದರೆ ಈ ಆಧುನಿಕ ಯುಗದಲ್ಲಿ ರಾಸಾಯನಿಕ ಮಿಶ್ರಿತ ಪೇಂಟ್ ಗಳನ್ನು ಬಳಸಲು ಆರಂಭವಾಗಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮನೆ ಮಂದಿಯ ಆರೋಗ್ಯದ ಮೇಲೆ ಸೆಗಣಿಯ ರೋಗ ನಿರೋಧಕ ಶಕ್ತಿಯ ಪರಿಣಾಮ ಬೀಳಲಿ ಎಂಬುದೇ ಸೆಗಣಿಯ ಪೇಂಟ್ ಮಾಡುವುದರ ಮುಖ್ಯ ಉದ್ದೇಶ ಎಂದು ಡಾ.ಶಶಿಶೇಖರ್ ಭಟ್ ಹೇಳಿದ್ದಾರೆ.

    ಬಳಕೆ ಹೇಗೆ..?
    ರಾಸಾಯನಿಕ ಮಿಶ್ರಿತ ಸಿಂಥೆಟಿಕ್ ಪೇಂಟ್ ಗಳಂತೆಯೇ ಸೆಗಣಿಯ ಪೇಂಟ್ ಅನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ಪೇಂಟ್ ಗಳನ್ನು ಗೋಡೆಗೆ ಎರಡು ಬಾರಿ ಬಳಿಯುವಂತೆ ಸೆಗಣಿಯ ಪೇಂಟ್ ಅನ್ನು ಎರಡು ಬಾರಿ ಬಳಿಯಬೇಕಾಗುತ್ತದೆ. ಈ ಪೇಂಟ್ ವಾಟರ್ ಪ್ರೂಫ್ ಕೂಡಾ ಆಗಿದೆ. ಅಂಗಡಿಯಲ್ಲಿ ಸಿಗುವ ರಾಸಾಯನಿಕ ಬಣ್ಣಗಳನ್ನು ಬಳಿಯುವಾಗ ಇರುವ ಕಣ್ಣುರಿತ, ತುರಿಕೆಯ ಲಕ್ಷಣಗಳು ಸೆಗಣಿಯಿಂದ ತಯಾರಿಸಿದ ಬಣ್ಣದಲ್ಲಿ ಇಲ್ಲದ ಕಾರಣ ಪೇಂಟ್ ಮಾಡುವವರು ಕೂಡ ಇಂತಹ ಪೇಂಟ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಬೇಕು ಎನ್ನುವ ಇಚ್ಛೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

    ತಾವೇ ಫಸ್ಟ್ ಟ್ರಯಲ್:
    ನಾವು ವಾಸಿಸುವ ಮನೆಯನ್ನು ರಾಸಾಯನಿಕ ಬಣ್ಣಗಳಿಂದ ಮುಕ್ತಗೊಳಿಸಿ ವಿಕಿರಣ ರಹಿತ ಮಾಡುವ ನಿಟ್ಟಿನಲ್ಲಿ ಗೋ ರಂಗ್ ತಯಾರಿಸಿ ಮೊದಲು ತಮ್ಮದೇ ಮನೆಯ ಗೋಡೆಗೆ ಬಣ್ಣ ಬಳಿದಿದ್ದೇನೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮನುಷ್ಯನ ಆಯುಷ್ಯ ಹಾಗೂ ಆರೋಗ್ಯವೂ ವೃದ್ಧಿಸುತ್ತದೆ. ಇದಲ್ಲದೆ ಉಷ್ಣಾಂಶ ತಡೆಯುವ ಶಕ್ತಿ ಕೂಡ ಈ ಗೋ ರಂಗ್‍ಗೆ ಇದೆ ಎಂದು ಡಾ. ಶಶಿಶೇಖರ ಭಟ್ ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನೀರೆಂದು ಥಿನ್ನರ್ ಕುಡಿದು 7 ವರ್ಷದ ಬಾಲಕಿ ಗಂಭೀರ!

    ನೀರೆಂದು ಥಿನ್ನರ್ ಕುಡಿದು 7 ವರ್ಷದ ಬಾಲಕಿ ಗಂಭೀರ!

    ಕಲಬುರಗಿ: ಮನೆಗೆ ಹಚ್ಚುವ ಪೇಂಟ್‍ನಲ್ಲಿ ಮಿಕ್ಸ್ ಮಾಡುವ ಥಿನ್ನರ್ ಅನ್ನು ಕುಡಿಯುವ ನೀರೆಂದು ತಿಳಿದು ಬಾಲಕಿಯೋರ್ವಳು ಕುಡಿದು ತೀವ್ರ ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಲಿಂಗನವಾಡಿ ಗ್ರಾಮದಲ್ಲಿ ನಡೆದಿದೆ.

    7 ವರ್ಷದ ಬಾಲಕಿ ಸೌಮ್ಯ ಅಸ್ವಸ್ಥಗೊಂಡು ಕಲಬುರಗಿಯ ಬಸವೇಶ್ಬರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ದಿನಗಳ ಹಿಂದೆ ಬಾಲಕಿ ತಂದೆ ರೇವಣಸಿದ್ದಪ್ಪರು ಮನೆಗೆ ಪೇಂಟಿಂಗ್ ಮಾಡಿಸಲು ನಗರಕ್ಕೆ ಬಂದು ಪೇಂಟ್, ಪೆಂಟ್ ಬ್ರಷ್, ಥಿನ್ನರ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನ ಮನೆಗೆ ತಂದಿದ್ದಾರೆ.

    ಈ ವೇಳೆ ಮಗಳು ಸೌಮ್ಯ ಅಪ್ಪನ ಬಳಿ ಬಂದು ನನಗೇ ಏನು ತಿನ್ನಲು ತಂದಿದಿಯಾ ಅಂತಾ ಕೇಳಿದ್ದಾಳೆ. ಆಗ ಅಪ್ಪ ಮಗಳನ್ನ ನಾ ಏನೂ ತಂದಿಲ್ಲ ಅಂತಾ ಹೇಳಿ ಹೊರಗಡೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಕಿಯು ಅಪ್ಪ ತಂದಿಟ್ಟಿದ್ದ ಬ್ಯಾಗ್ ತೆರೆದು ನೋಡಿದ್ದಾಳೆ. ಬ್ಯಾಗ್‍ನಲ್ಲಿದ್ದ ಥಿನ್ನರ್ ಬಾಟಲನ್ನು ಕುಡಿಯುವ ನೀರಿನ ಬಾಟಲ್ ಅಂತಾ ತಿಳಿದು ಗಳಗಳನೆ ಕುಡಿದಿದ್ದಾಳೆ.

    ಪರಿಣಾಮ ಬಾಲಕಿಯ ಮುಖವೆಲ್ಲ ವಿಚಿತ್ರವಾಗಿ ಊದಿಕೊಂಡಿದೆ. ಸದ್ಯ ಬಾಲಕಿಯು ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ.