Tag: Pahani

  • ಪಹಣಿಯಲ್ಲಿ 24 ಲಕ್ಷ ರೂ. ಸಾಲ ಕಂಡು ದಂಗಾದ ರೈತ

    ಪಹಣಿಯಲ್ಲಿ 24 ಲಕ್ಷ ರೂ. ಸಾಲ ಕಂಡು ದಂಗಾದ ರೈತ

    ಧಾರವಾಡ: ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಧಾರವಾಡದ ರೈತರೊಬ್ಬರು ಪರದಾಡುವಂತಾಗಿದ್ದು, ಬ್ಯಾಂಕಿನಿಂದ ಸಾಲ ಸಿಗದೇ ಪರಿತಪಿಸುತ್ತಿದ್ದಾರೆ.

    ಅಧಿಕಾರಿಗಳ ಎಡವಟ್ಟಿನಿಂದ ತಾಲೂಕಿನ ರೈತ ನರೇಂದ್ರ ಗ್ರಾಮದ ನಾಗಪ್ಪ ಮೊರಬ ಬ್ಯಾಂಕಿನಿಂದ ಬ್ಯಾಂಕ್‍ಗೆ ಹಾಗೂ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಇವರ ಜಮೀನಿನ ಪಹಣಿ ಪತ್ರದಲ್ಲಿ 24 ಲಕ್ಷ ರೂ. ಸಾಲದ ಭೋಜಾ ಏರಿಸಲಾಗಿದ್ದು, ಇದರಿಂದ ಭೋಜಾ ಇಳಿಸದೇ ಯಾವುದೇ ಬ್ಯಾಂಕಿನವರು ಸಾಲ ಕೊಡಲು ನಿರಾಕರಿಸುತ್ತಿದ್ದಾರೆ. ಇನ್ನೂ ಅಚ್ಚರಿ ಸಂಗತಿ ಎಂದರೆ 7 ಎಕ್ರೆ ಜಮೀನಿನ ಈ ಪಹಣಿ ಪತ್ರದಲ್ಲಿ ಎಸ್‍ಬಿಎಂ ಬ್ಯಾಂಕ್‍ನ ಸಾಲ ಎಂದು ನಮೂದಿಸಲಾಗಿದೆ.

    ಆದರೆ ಈ ಬ್ಯಾಂಕ್‍ನಲ್ಲಿ ನಾಗಪ್ಪ ಮೊರಬ ಅವರ ಖಾತೆಯೇ ಇಲ್ಲ. ಹೀಗಾಗಿ ಇವರು ಸಾಲ ಕೇಳಲು ಬ್ಯಾಂಕ್‍ಗಳಿಗೆ ಹೋದರೆ ಸಾಲದ ಭೋಜಾ ಇದೆ ಅದನ್ನು ಕಡಿಮೆ ಮಾಡಿಸಿಕೊಂಡು ಬನ್ನಿ ಇಲ್ಲವೇ ಎಸ್‍ಬಿಎಂನಿಂದ ಎನ್‍ಒಸಿ ತೆಗೆದುಕೊಂಡು ಬನ್ನಿ ಎನ್ನುತ್ತಿದ್ದಾರೆ. ಇತ್ತ ಎಸ್‍ಬಿಎಂ ವಿಲೀನಗೊಂಡ ಹಿನ್ನೆಲೆ ನಾಗಪ್ಪ ಅವರು ಎಸ್‍ಬಿಐನ ಹುಬ್ಬಳ್ಳಿ ಶಾಖೆಗೆ ಹೋಗಿ ಭೋಜಾದ ಎನ್‍ಒಸಿ ಕೊಡುವಂತೆ ಕೇಳಿದ್ದಾರೆ. ನಮ್ಮಲ್ಲಿ ಖಾತೆಯೇ ಇಲ್ಲದೇ ಎನ್‍ಒಸಿ ಹೇಗೆ ಕೊಡುವುದು ಎಂದು ಪ್ರಶ್ನಿಸಿದ್ದಾರೆ.

    ಒಂದೆಡೆ ಎನ್‍ಒಸಿ ಇಲ್ಲದೇ ಬೇರೆ ಬ್ಯಾಂಕ್‍ಗಳು ಸಾಲ ಕೊಡುತ್ತಿಲ್ಲ. ಇತ್ತ ಭೋಜಾ ತೆಗೆದುಕೊಡಿ ಎಂದು ತಹಶೀಲ್ದಾರ ಕಚೇರಿಗೆ ಅಲೆದಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಈ ಹಿಂದೆ ಪಹಣಿ ಪತ್ರಗಳನ್ನು ಗಣಕೀಕೃತಗೊಳಸುವಾಗ ಅಧಿಕಾರಿಗಳು ಈ ರೀತಿ ಎಡವಟ್ಟು ಮಾಡಿದ್ದಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ರೈತ ನಾಗಪ್ಪ ಅವರು ಮಾತ್ರ ಸಾಲ ಸಿಗದೆ ಪರದಾಡುತ್ತಿದ್ದಾರೆ.