Tag: Pager Explosions

  • ಹಿಜ್ಬುಲ್ಲಾ ಮೇಲೆ ಮತ್ತೊಂದು ಸ್ಟ್ರೈಕ್‌ – ಪೇಜರ್‌ ಆಯ್ತು ಈಗ ಏಕಕಾಲದಲ್ಲಿ ವಾಕಿಟಾಕಿಗಳು ಸ್ಫೋಟ

    ಹಿಜ್ಬುಲ್ಲಾ ಮೇಲೆ ಮತ್ತೊಂದು ಸ್ಟ್ರೈಕ್‌ – ಪೇಜರ್‌ ಆಯ್ತು ಈಗ ಏಕಕಾಲದಲ್ಲಿ ವಾಕಿಟಾಕಿಗಳು ಸ್ಫೋಟ

    ಬೈರೂತ್‌: ಪೇಜರ್‌ಗಳು ಸ್ಫೋಟಗೊಂಡ  (Pager Explosions) ಬೆನ್ನಲ್ಲೇ ಲೆಬನಾನ್‌ನಲ್ಲಿ (Lebanon) ಈಗ ಏಕಕಾಲದಲ್ಲಿ ವಾಕಿಟಾಕಿಗಳು (Walkie Talkie )ಸ್ಫೋಟಗೊಂಡಿವೆ.

    ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಸದಸ್ಯರು ಸಂವಹನಕ್ಕೆ ಬಳಸುತ್ತಿದ್ದ ಸಾಧನಗಳು ಬುಧವಾರ ಮಧ್ಯಾಹ್ನ ಏಕಾಏಕಿಯಾಗಿ ಸ್ಫೋಟಗೊಂಡಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್‌ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?

    ವಾಕಿ-ಟಾಕಿಗಳನ್ನು ಹಿಜ್ಬುಲ್ಲಾ ಸದಸ್ಯರು ಮತ್ತು ಅವರ ಸಹಚರರು ಬಳಸುತ್ತಿದ್ದರು. 4000 ಅಧಿಕ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡ 24 ಗಂಟೆಗಳ ನಂತರ ಲೆಬನಾನ್‌ ಈಗ ಇನ್ನೊಂದು ಸ್ಫೋಟ ಸಂಭವಿಸಿದೆ.

  • ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್‌ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?

    ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್‌ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?

    ಬೈರೂತ್‌: ಅತ್ಯಾಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಯುದ್ಧದ ಪರಿಭಾಷೆಯೇ ಬದಲಾಗಿದೆ. ಲೆಬನಾನ್, ಸಿರಿಯಾದಲ್ಲಿ (Lebanon Pager Explosions) ಬುಧವಾರ ಯಾರೂ ಊಹೆ ಮಾಡದ ಸಿನಿಮಾ ಶೈಲಿಯಲ್ಲಿ ದಾಳಿಗಳು ನಡೆದಿದೆ. ಎರಡು ದೇಶಗಳಲ್ಲಿ ಒಂದೇ ದಿನ, ಒಂದೇ ಕ್ಷಣದಲ್ಲಿ ಸಾವಿರಾರು ಪೇಜರ್‌ಗಳು ಏಕಾಏಕಿ ಸ್ಫೋಟಗೊಂಡಿವೆ.

    ಈ ದಾಳಿಯಲ್ಲಿ ಕನಿಷ್ಠ 10 ಮಂದಿ ಬಲಿಯಾಗಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಸಾವಿನ ಸಂಖ್ಯೆ ಹೆಚ್ಚಿದ್ದು ನಿಖರ ಮಾಹಿತಿಯನ್ನು ಎರಡು ದೇಶಗಳು ನೀಡುತ್ತಿಲ್ಲ ಎಂದು ವರದಿಯಾಗಿದೆ.

    ಮೃತರದಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು, ಸಂಸದರೊಬ್ಬರ ಪುತ್ರ ಕೂಡ ಸೇರಿದ್ದಾನೆ. ಗಾಯಾಳುಗಳಲ್ಲಿ ಲೆಬನಾನ್‌ನಲ್ಲಿರುವ ಇರಾನ್ ರಾಯಭಾರಿ ಜೊತೆಗೆ ಹಿಜ್ಬುಲ್ಲಾ ಸಂಘಟನೆಯ ಮುಖ್ಯ ನಾಯಕರಿದ್ದಾರೆ. ಹಿಜ್ಬುಲ್ಲಾ ಮುಖ್ಯಸ್ಥ ನಸ್ರುಲ್ಲಾಗೆ ಯಾವುದೇ ಅಪಾಯವಾಗಿಲ್ಲ. ಅವರು ಕ್ಷೇಮವಾಗಿದ್ದಾರೆ ಎಂದು ಆ ಸಂಘಟನೆ ಹೇಳಿಕೊಂಡಿದೆ.

    ದಾಳಿಗಳ ಹಿಂದೆ ಇಸ್ರೇಲ್ ಕೈವಾಡವಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಲೆಬನಾನ್ ದೂರು ನೀಡಿದೆ.

    ತಮ್ಮ ವಿರುದ್ಧದ ಆರೋಪಗಳನ್ನು ಇಸ್ರೇಲ್ ಇಲ್ಲಿಯವರೆಗೆ ತಳ್ಳಿಹಾಕಿಲ್ಲ. ನಿಗೂಢ ಕಾರ್ಯಚರಣೆಗೆ ಹೆಸರಾದ ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸಾದ್, ಹೆಜ್ಬುಲ್ಲಾ ಸ್ವಂತ ಟೆಲಿಕಾಂ ನೆಟ್‌ವರ್ಕ್ ಹ್ಯಾಕ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

     

    ಪೇಜರ್‌ ಬಳಸಿದ್ದು ಯಾಕೆ?
    ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ನಾಯಕರ ಮೇಲೆ ಗುರಿಯಿಟ್ಟು ಇಸ್ರೇಲ್‌ ದಾಳಿ ನಡೆಸುತ್ತಿತ್ತು. ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ಮಾಹಿತಿಗಳು ಸೋರಿಕೆಯಾಗಿ ಇಸ್ರೇಲ್‌ ದಾಳಿ ಮಾಡುತ್ತಿದೆ ಎಂದು ಅರಿತ ಹಿಜ್ಬುಲ್ಲಾ ಫೋನ್‌ ಬಳಸದೇ ಸಂವಹನಕ್ಕಾಗಿ ಪೇಜರ್‌ ಬಳಸುತ್ತಿತ್ತು. ಈಗ ಅದೇ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.

    ಸ್ಫೋಟ ಹೇಗೆ ಆಗಿರಬಹುದು?
    ಈ ಸ್ಫೋಟ ಹೇಗೆ ನಡೆದಿದೆ ಎನ್ನುವುದಕ್ಕೆ ಯಾರೂ ನಿಖರವಾದ ಕಾರಣ ನೀಡಿಲ್ಲ. ತಜ್ಞರು ಒಂದೊಂದು ಮಾಧ್ಯಮದಲ್ಲಿ ಒಂದೊಂದು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರುಗಳನ್ನು ನೀಡಿದ ವಿವರಗಳನ್ನು ಇಲ್ಲಿ ಒಟ್ಟಾಗಿ ಕ್ರೋಢಿಕರಿಸಿ ತಿಳಿಸಲಾಗಿದೆ.

    ಹೊಸ ಮಾಡೆಲ್‌ನ ಪೇಜರ್‌ಗಳನ್ನು ಇರಾನ್‌ನಿಂದ ತಂದು ಲೆಬನಾನ್‌ನಲ್ಲಿ ಬಳಕೆ ಮಾಡಲಾಗಿದೆ. ಇಸ್ರೇಲ್ ಜೊತೆ ಇರಾನ್‌ನ ಪೇಜರ್ ಕಂಪನಿ ಕೈಜೋಡಿಸಿರಬಹುದು.

     

    ಕಂಪನಿಯಿಂದ ಪೇಜರ್‌ ರಫ್ತಾಗುವ ವೇಳೆ ದಾರಿ ಮಧ್ಯೆ ಈ ಪೇಜರ್‌ ಬಾಕ್ಸ್‌ಗಳನ್ನು ಬದಲಾಯಿಸಿ ಸ್ಫೋಟಕ ಇರುವ ಪೇಜರ್‌ಗಳನ್ನು ಬಾಕ್ಸ್‌ ಇಡಲಾಗಿತ್ತು ಅಥವಾ ಸ್ಫೋಟಕ ಇರುವ ಯಾವುದೋ ವಸ್ತುವನ್ನು ಸೇರಿಸಲಾಗಿದೆ. ಪೇಜರ್‌ ಸಾಗಾಣಿಕೆ ಮಾಡಿದವರು ಸ್ಫೋಟದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ಎದ್ದಿದೆ.

    ಪೇಜರ್‌ಗಳಲ್ಲಿ ತಯಾರಾಗುವ ಸಮಯದಲ್ಲೇ ಬ್ಯಾಟರಿಗಳಲ್ಲಿ ಶಕ್ತಿಯುತ ಸ್ಫೋಟಕವಾದ ಸಣ್ಣ ಪ್ರಮಾಣದ PETN ಇಡಲಾಗಿತ್ತು. ರೇಡಿಯೋ ಸಿಗ್ನಲ್‌ ಬಳಸಿ ಏಕಕಾಲದಲ್ಲಿ ಪೇಜರ್‌ಗಳ ಸ್ಫೋಟ ಮಾಡಿರಬಹುದು. ಸೈಬರ್ ದಾಳಿ ಮೂಲಕ ಪೇಜರ್‌ನ ಬ್ಯಾಟರಿ ಬಿಸಿಯಾಗುವಂತೆ ಮಾಡಿ ಸ್ಫೋಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಒಂದೇ ಸಮಯದಲ್ಲೇ ಹೇಗೆ?
    ಸ್ಪೋಟಕ ಇರಿಸಿದರೆ ಒಂದೇ ಸಮಯದಲ್ಲಿ ಸ್ಫೋಟವಾಗಲು ಸಾಧ್ಯವಿಲ್ಲ. ಬ್ಯಾಟರಿ ಚಾರ್ಜ್‌ ಮಾಡಿದ ನಂತರ ಈ ಹಿಂದೆ ಸ್ಫೋಟವಾಗಿರಬೇಕಿತ್ತು. ಹೀಗಾಗಿ ಒಂದು ರಹಸ್ಯ ಕೋಡ್‌ಗೆ ಪೇಜರ್‌ ಸ್ಫೋಟಗೊಳ್ಳುವಂತೆ ಮಾಡುವ ಒಂದು ಬೋರ್ಡ್‌ ಅನ್ನು ಮೊಸಾದ್‌ ಸೇರಿಸಿತ್ತು. ಪೇಜರ್‌ ಕನೆಕ್ಟ್‌ ಆಗಿರುವ ಟೆಲಿಕಾಂ ನೆಟ್‌ವರ್ಕ್‌ ಅನ್ನು ಮೊಸಾದ್‌ ಹ್ಯಾಕ್‌ ಮಾಡಿ ಆ ಕೋಡ್‌ ಸಂದೇಶವನ್ನು ಕಳುಹಿಸಿದ್ದರಿಂದ ಏಕಕಾಲದಲ್ಲಿ ಪೇಜರ್‌ ಸ್ಫೋಟಗೊಂಡಿರಬಹುದು ಎಂಬ ಬಲವಾದ ಶಂಕೆಯನ್ನು ಹಲವು ಮಂದಿ ವ್ಯಕ್ತಪಡಿಸಿದ್ದಾರೆ.


    ನಮ್ಮಿಂದ ತಪ್ಪಾಗಿಲ್ಲ:
    ಈ ಪೇಜರ್‌ಗಳನ್ನು ತೈವಾನ್‌ ಮೂಲದ ಕಂಪನಿ ಅಭಿವೃದ್ಧಿ ಪಡಿಸಿದೆ ಎಂಬ ವಿಷಯಕ್ಕೆ ಗೋಲ್ಡ್ ಅಪೊಲೊ ಕಂಪನಿ ಸ್ಪಷ್ಟನೆ ನೀಡಿದೆ. ಈ ಪೇಜರ್‌ಗಳನ್ನು ನಾವು ತಯಾರಿಸಿಲ್ಲ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಪಾಲುದಾರಿಕೆ ಹೊಂದಿರುವ BAC CONSULTING KFT ಕಂಪನಿ ತಯಾರಿಸಿದೆ.

     

    ಈ ಪೇಜರ್‌ಗಳನ್ನು ಲೆಬನಾನ್‌ಗೆ ನೇರವಾಗಿ ರಫ್ತು ಮಾಡಿಲ್ಲ. ಸಾಧನದಲ್ಲಿನ ಘಟಕಗಳಾದ ಆಂಟೆನಾ, ಮೈಕ್ರೋಚಿಪ್, ಡಿಕೋಡರ್, ಸಣ್ಣ ಸಂಖ್ಯೆ, ಬ್ಯಾಟರಿಯು ಸ್ಫೋಟಕ್ಕೆ ಕಾರಣವಾಗುವುದಿಲ್ಲ.


    2022 ರಿಂದ ಆಗಸ್ಟ್ 2024 ರವರೆಗೆ ನಾವು 2.60 ಲಕ್ಷ ಪೇಜರ್‌ಗಳನ್ನು ರಫ್ತು ಮಾಡಿದ್ದೇವೆ. ಅಮೆರಿಕ(24,771), ಹಾಂಕಾಂಗ್‌ (5,570), ಆಸ್ಟ್ರೇಲಿಯಾ(3,665), ನೆದರ್ಲ್ಯಾಂಡ್ಸ್ (1,808), ಫ್ರಾನ್ಸ್(1,264), ಹಂಗೇರಿ(254) ಪೇಜರ್‌ಗಳನ್ನು ರಫ್ತು ಮಾಡಲಾಗಿದೆ. ಇಲ್ಲಿಯವರೆಗೆ ಈ ಪೇಜರ್‌ಗಳು ಸ್ಫೋಟಗೊಂಡ ಯಾವುದೇ ವರದಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದೆ.