Tag: Pagal Premi

  • ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ಚಿಕ್ಕಮಗಳೂರು: ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಸ್ಕ್ರೂ ಡ್ರೈವರ್‌ನಿಂದ ಇರಿದು ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ.

    ಬಿಂದು(23) ಮೃತಪಟ್ಟ ಯುವತಿ. ಬಿಂದು ಎನ್.ಆರ್ ಪುರ ತಾಲೂಕಿನ ಬಾಸಾಪುರ ನಿವಾಸಿಯಾಗಿದ್ದು, ಆರೋಪಿ ಮಿಥುನ್ ಬಾಳೆಹೊನ್ನೂರಿನ ಗಡಿಗೇಶ್ವರದ ನಿವಾಸಿ. ಎನ್.ಆರ್ ಪುರ ತಾಲೂಕಿನ ದೀಪ್ತಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಇಬ್ಬರು 10ನೇ ತರಗತಿ ನಂತರ ಸಂಪರ್ಕದಲ್ಲಿ ಇರಲಿಲ್ಲ. ಬಳಿಕ ಬಿಂದು ಫೇಸ್‍ಬುಕ್‍ನಲ್ಲಿ ಆರೋಪಿ ಮಿಥುನ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ಬಿಂದು ಯಾವಾಗಲೂ ಮಿಥುನ್‍ನನ್ನು ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಿದ್ದಳು. ಮಿಥುನ್ ಯುವತಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

    ನಡೆದಿದ್ದೇನು?
    ಕಳೆದ 5 ದಿನದ ಹಿಂದೆ ಬಿಂದು ತನ್ನ ಫೇಸ್‍ಬುಕ್ ಗೆಳೆಯ ಮಿಥುನ್ ಜೊತೆ ಜಾಲಿ ರೇಡ್‍ಗೆ ಹೋಗಿದ್ದಾಳೆ. ಇಬ್ಬರು ಕಳಸ, ಹೊರನಾಡು ಹೋಗಿ ಹಿಂತಿರುಗಿ ಬರುವಾಗ ಕಗ್ಗನಹಳ್ಳದ ಬಳಿ ಭದ್ರಾ ನದಿ ದಂಡೆ ಮೇಲೆ ಕೂತು ಮಾತನಾಡುತ್ತಿದ್ದರು. ಈ ವೇಳೆ ಬಿಂದು ನನಗೆ ಬೆಂಗಳೂರು-ಮಂಗಳೂರಿನಲ್ಲಿ ಸ್ನೇಹಿತರು ಇದ್ದಾರೆ ಎಂದು ಹೇಳಿದ್ದಾಳೆ. ಬಳಿಕ ಮಾಜಿ ಪ್ರಿಯಕರನ ಹೆಸರು ಕೂಡ ಹೇಳಿದ್ದಾಳೆ. ಮಾಜಿ ಪ್ರಿಯಕರನ ಹೆಸರು ಹೇಳುತ್ತಿದ್ದಂತೆಯೇ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಮಿಥುನ್ ಕೋಪ ನೆತ್ತಿಗೇರಿದೆ. ಈ ವೇಳೆ ಬೈಕಿನಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ಮನಸ್ಸೋ ಇಚ್ಛೆ ಚುಚ್ಚಿ, ಎಸ್ಕೇಪ್ ಆಗಿದ್ದನು. ನಾಲ್ಕು ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಿಂದು ಈಗ ಮೃತಪಟ್ಟಿದ್ದಾಳೆ.

    ಆರೋಪಿ ಮಿಥುನ್, ಬಿಂದುವಿಗೆ ಒಂದು ಬಾರಿ ಚುಚ್ಚಿಲ್ಲ. ಆಕೆ ತನ್ನ ಮಾಜಿ ಪ್ರಿಯಕರನ ಹೆಸರು ಹೇಳುತ್ತಿದ್ದಂತೆ ಮಿಥುನ್ ಆಕೆಯನ್ನು ದಂಡೆಯಿಂದ ಭದ್ರಾ ನದಿಗೆ ನೂಕಿದ್ದಾನೆ. ಆಕೆ ಎದ್ದು ಬರುವಾಗ ಮನಸ್ಸೋ ಇಚ್ಛೆ ಕಲ್ಲು ಎಸೆದಿದ್ದಾನೆ. ಆಕೆ ಮೇಲೆ ಬಂದ ಕೂಡಲೇ ಕೈಯಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ಕೆನ್ನೆ, ಕತ್ತು, ಪಕ್ಕೆಲುಬು ಸೇರಿದಂತೆ ದೇಹದ ಸೂಕ್ಷ್ಮ ಜಾಗಗಳಿಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದನು. ಹಲ್ಲೆಯಿಂದ ಯುವತಿ ನರಳುತ್ತಾ ರಸ್ತೆಯಲ್ಲೇ ಬಿದ್ದಿದ್ದಳು. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದವರು ನೋಡಿ ಆಕೆಯನ್ನು ಆಸ್ಪತ್ರೆ ಸೇರಿಸಿದ್ದರು.

    ಯುವತಿಯನ್ನು ಮೊದಲು ಚಿಕ್ಕಮಗಳೂರು ಹಾಗೂ ಹಾಸನದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಬಿಂದು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಕಾರಣ ಆಕೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಯುವತಿಯ ತಲೆಗೆ ಹತ್ತು ಹೊಲಿಗೆ ಹಾಕಲಾಗಿತ್ತು. ಆದರೆ ಗುಪ್ತಾಂಗಕ್ಕೆ ಚುಚ್ಚಿದ್ದರಿಂದ ಊದಿಕೊಂಡು ಕಿವುಗಟ್ಟಿದ್ರಿಂದ ಬಿಂದು ಮೃತಪಟ್ಟಿದ್ದಾಳೆ. ಬಿಂದು ಮೇಲೆ ಹಲ್ಲೆ ಮಾಡಿ ನಾಪತ್ತೆಯಾಗಿದ್ದ ಮಿಥುನ್ ನೇರ ನ್ಯಾಯಾಲಯದಲ್ಲಿ ಶರಣಾಗಿ, ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಮಿಥುನ್ ಯುವತಿಯನ್ನು ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿತ್ತು. ಈಗ ಮಿಥುನ್ ಸ್ಕ್ರೂ ಡ್ರೈವರ್‌ನಿಂದ ಯುವತಿಗೆ ಇರಿದಿದ್ದಾನೆ ಎಂಬ ವಿಷಯ ತಿಳಿದು ಬಂದಿದೆ.

  • ಪ್ರೇಯಸಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಪಾಗಲ್ ಪ್ರೇಮಿ!

    ಪ್ರೇಯಸಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಪಾಗಲ್ ಪ್ರೇಮಿ!

    ಬೆಳಗಾವಿ: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ.

    ರಾಜು ದೊಡಮನಿ ತನ್ನ ಪ್ರೇಯಸಿ ಸುರೇಖಾ ಮಹಾಂತೇಶ್ ಐಹೊಳೆ(30)ಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸುರೇಖಾ ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಕೂಡ ರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಕ್ಲುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ರಾಜು ಹಾಗೂ ಸುರೇಖಾ ನಡುವೆ ಜಗಳ ಆಗಿದೆ. ಹಾಗಾಗಿ ರಾಜು, ಸುರೇಖಾಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

    ಶುಕ್ರವಾರ ತಡರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಇದರಿಂದ ಕೋಪಗೊಂಡ ರಾಜು ತನ್ನ ಪ್ರೇಯಸಿ ಸುರೇಖಾಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಕೂಡಲೇ ಸುರೇಖಾ ಪೋಷಕರು ಆಕೆಯನ್ನು ಮಹರಾಷ್ಟ್ರದ ಮೀರಜ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಖಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

    ರಾಜು ಕೊಲೆ ಮಾಡಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುರೇಖಾ ಮದುವೆ ಆಗಿ ತನ್ನ ಪತಿಯನ್ನು ಬಿಟ್ಟು ರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೆ ಸುರೇಖಾಗೆ 6 ಹಾಗೂ 8 ವರ್ಷದ ಹೆಣ್ಣು ಮಕ್ಕಳು ಇದ್ದಾರೆ.

    ಈ ಬಗ್ಗೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಕಂಗೆಟ್ಟ ಹುಬ್ಬಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿ

    ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಕಂಗೆಟ್ಟ ಹುಬ್ಬಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿ

    ಹುಬ್ಬಳ್ಳಿ: ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿ ಕಂಗೆಟ್ಟು ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಿರಂತರವಾಗಿ ಫೋನ್ ಮಾಡಿ ವಿಮಾನ ನಿಲ್ದಾಣ ಉಡಾಯಿಸುವ ಬೆದರಿಕೆ ಹಾಕುತ್ತಿದ್ದಾನೆ.

    ಇಂದು ಪ್ರಧಾನಿ ಮೋದಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯ ಬೆದರಿಕೆ ಕರೆಗೆ ಭದ್ರತಾ ಸಿಬ್ಬಂದಿಗೆ ಆತಂಕ ಹೆಚ್ಚಿಸಿತ್ತು.

    ಏನಿದು ಹುಚ್ಚಾಟ:
    ರಾಯ್ ಪ್ರೇಯಸಿ ಗೋವಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ರಾಯ್ ಕಾಟ ತಾಳಲಾರದೇ ಯುವತಿ ಗೋವಾದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗಾವಣೆಗೊಂಡು ಬಂದಿದ್ದಾರೆ. ಆಗಿನಿಂದ ರಾಯ್‍ನ ಹುಚ್ಚಾಟ ತಪ್ಪಿಲ್ಲ. ರಾಯ್ ಈಗ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ತನ್ನ ಮಾಜಿ ಪ್ರೇಯಸಿಗಾಗಿ ಕರೆ ಮಾಡಿ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾನೆ.

    ಲವ್ ಬ್ರೇಕ್ ಆದ ಹಿನ್ನೆಲೆಯಲ್ಲಿ ಕರೆ ಮಾಡುತ್ತಿರುವ ರಾಯ್ ಡಿಯಾಸ್, ಏರ್ ಟ್ರಾಫಿಕ್ ಕಂಟ್ರೋಲ್ ರೂಮಿಗೂ ಕರೆ ಮಾಡುತ್ತಿದ್ದಾನೆ. ಇದರಿಂದ ಕಿರಿಕಿರಿಗೊಳಗಾದ ಸಿಬ್ಬಂದಿ ಏರ್ ಟ್ರಾಫಿಕ್ ಕಂಟ್ರೋಲ್ ನಂಬರ್ ಬದಲಿಸಿದ್ದಾರೆ. ಆದರೆ ಹೇಗೋ ಮತ್ತೆ ನಂಬರ್ ತೆಗೆದುಕೊಂಡು ರಾಯ್ ಕರೆ ಮಾಡುತ್ತಿದ್ದಾನೆ.

    ಗೋವಾ ಮೂಲದ ರಾಯ್ ಡಿಯಾಸ್ ಕಳೆದ 2 ವರ್ಷದಿಂದ ಪ್ರತಿದಿನ ಕರೆ ಮಾಡುತ್ತಾನೆ. ದುಬೈನಿಂದ ಇಂಟರ್ ನೆಟ್ ಕರೆ ಅಲ್ಲದೆ ಬೇರೆ ಬೇರೆ ನಂಬರ್ ನಿಂದ ಕರೆ ಮಾಡಿ ತನ್ನ ಪ್ರೇಯಸಿಗೆ ಫೋನ್ ಕೊಡುವಂತೆ ತೊಂದರೆ ಕೊಡುತ್ತಿದ್ದಾನೆ.

    ರಾಯ್ ಕರೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಸಿಬ್ಬಂದಿ ಫೋನ್ ಎಂಗೇಜ್ ಆಗಿರುವ ಹಿನ್ನೆಲೆಯಲ್ಲಿ ಹಲವು ಸಾರಿ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಅಕ್ಟೋಬರ್ 6, 2018 ರಂದು ಗೋಕುಲ್ ಠಾಣೆ ಹಾಗೂ ಆಗಷ್ಟ್ 14, 2018ರಂದು ಸೈಬರ್ ಕ್ರೈಂನಲ್ಲಿ ದೂರು ದಾಖಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

  • ಲವ್ವರ್ ಸಿಗಲಿಲ್ಲ ಅಂತ ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿ ಅರೆಸ್ಟ್!

    ಲವ್ವರ್ ಸಿಗಲಿಲ್ಲ ಅಂತ ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿ ಅರೆಸ್ಟ್!

    ಚಿಕ್ಕೂಡಿ: ಲವ್ವರ್ ಸಿಗಲಿಲ್ಲ ಅಂತ ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿಯನ್ನು ಬಂಧಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.

    ಉಮೇಶ್ ಅಚಕನಹಳ್ಳಿ(18) ಬಂಧಿತ ಆರೋಪಿ. ಕಳೆದ ಜೂನ್ 4ರಂದು ಉಮೇಶ್ ಶಾಲೆಗೆ ಬೆಂಕಿ ಇಟ್ಟಿದ್ದನು. ಪ್ರಕರಣದ ದಿಕ್ಕು ತಪ್ಪಿಸಲು ತಾನೇ ಬೇರೆಯವರ ಹೆಸರಲ್ಲಿ ಲೆಟರ್ ಬರೆದಿದ್ದ. ಸದ್ಯ ಪೊಲೀಸ್ ತನಿಖೆ ವೇಳೆ ಎಲ್ಲ ಕೃತ್ಯವನ್ನು ತಾನೇ ಮಾಡಿದ್ದಾಗಿ ಉಮೇಶ್ ಒಪ್ಪಿಕೊಂಡಿದ್ದಾನೆ.

    ಏನಿದು ಘಟನೆ?
    ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಶಾಲೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಪಾಗಲ್ ಪ್ರೇಮಿ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದನು. ಈ ಹಿಂದೆ ಶಾಲೆಗೆ ಬೆಂಕಿ ಇಟ್ಟಿದ್ದ ಕಿರಾತಕನಿಂದ ಶಾಲೆಯ ಕೊಠಡಿಯಲ್ಲಿ ಐದು ಲವ್ ಲೆಟರ್ ಗಳನ್ನು ಬರೆದು ಹಳೆಯ ಪ್ರೇಮಿಗಳನ್ನು ಒಂದು ಮಾಡದಿದ್ದಲ್ಲಿ ಶಾಲೆ ಧ್ವಂಸಗೊಳಿಸುವದಾಗಿ ಬೆದರಿಕೆ ಹಾಕಿದ್ದನು. ಪೊಲೀಸರು ತಮ್ಮನ್ನು ಪತ್ತೆ ಹಚ್ಚುವುದು ಅಸಾಧ್ಯ ಎಂದು ಬರೆದಿರುವ ಜೊತೆಗೆ ನಮ್ಮನ್ನು ಒಂದು ಮಾಡಿ ಎಂದು ವಿನಂತಿಸಿಕೊಂಡಿದ್ದಾನೆ. ಮತ್ತೆ ಪಾಗಲ್ ಪ್ರೇಮಿಯ ಕೃತ್ಯದಿಂದ ಶಾಲೆಯ ಆಡಳಿತ ಸಿಬ್ಬಂದಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು.

    ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.