Tag: Padma Awards

  • ಭಾರತ ರತ್ನ – ಲತಾಗಿಲ್ಲದ ನಿಯಮಾವಳಿ ಸಿದ್ದಗಂಗಾ ಶ್ರೀಗಳಿಗೆ ಮಾತ್ರ ಯಾಕೆ?

    ಭಾರತ ರತ್ನ – ಲತಾಗಿಲ್ಲದ ನಿಯಮಾವಳಿ ಸಿದ್ದಗಂಗಾ ಶ್ರೀಗಳಿಗೆ ಮಾತ್ರ ಯಾಕೆ?

    – ವಾಟ್ಸಪ್‍ನಲ್ಲಿ ಹರಡ್ತಿರೋದು ಅರ್ಧ ಸತ್ಯ
    – ಕೇಂದ್ರದಲ್ಲಿ ಸರ್ಕಾರ ಯಾರದ್ದು ಅನ್ನೋದು ಮುಖ್ಯವಲ್ಲ
    – ಶ್ರೀಗಳಿಗೆ ಯಾಕೆ ಭಾರತ ರತ್ನ ಕೊಡಲಿಲ್ಲ ಎಂದಷ್ಟೇ ಹೇಳಿ

    ಬೆಂಗಳೂರು: ಪರಮಪೂಜ್ಯ ಸಿದ್ದಗಂಗಾ ಶ್ರೀಗಳಿಗೆ ‘ಭಾರತ ರತ್ನ’ ಗೌರವ ನೀಡದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೋದಿ ಸರ್ಕಾರದ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ. ಶ್ರೀಗಳು ಉತ್ತರ ಭಾರತೀಯರಾಗಿದ್ದು, ಹಿಂದಿ ಆರಾಧಕರಾಗಿದ್ದರೆ ಭಾರತ ರತ್ನ ನೀಡುತ್ತಿದ್ದರು. ಆದ್ರೆ, ಶ್ರೀಗಳು ದಕ್ಷಿಣ ಭಾರತೀಯರು. ಕನ್ನಡಿಗರು ಆಗಿರೋದ್ರಿಂದ ಅವರಿಗೆ ಭಾರತ ರತ್ನ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಈ ಎಲ್ಲದರ ನಡುವೆಯೇ ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂದೇಶ ಹರಿದಾಡಲು ಶುರುವಾಗಿದೆ. ಆ ಸಂದೇಶದ ಸಾರವಿಷ್ಟೇ, ‘ಏನಿದು ಭಾರತ ರತ್ನ, ಮಾಡಲಿಲ್ಲವೇ ಪ್ರಯತ್ನ!! ಒಂದು ಪದ್ಮ ಪ್ರಶಸ್ತಿಯನ್ನು ಕೊಟ್ಟ ನಂತರ ಅದಕ್ಕಿಂತ ಮೇಲಿನದನ್ನು ಅದೇ ವ್ಯಕ್ತಿಗೆ ಕೊಡಮಾಡಲು, ಕನಿಷ್ಠ 5 ವರ್ಷಗಳ ಅಂತರವಿರಬೇಕು ಎಂಬ ನಿಯಮವಿದೆ. #ಸಿದ್ದಗಂಗಾ ಶ್ರೀಗಳಿಗೆ 2015ರಲ್ಲಿ ಪದ್ಮಭೂಷಣ ಗೌರವ ನೀಡಿರುವ ಕಾರಣ, ಅವರಿಗೆ ಭಾರತ ರತ್ನ ಕೊಡಬೇಕೆಂದರೆ ಅದಕ್ಕೆ ನಾವೆಲ್ಲರೂ 2020ರವರೆಗೆ ಕಾಯಲೇಬೇಕಾದ ಅನಿವಾರ್ಯತೆ ಇದೆ’ ಎಂಬ ಸಂದೇಶವನ್ನು ವೈರಲ್ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ಸಂದೇಶದ ಮೂಲಭೂತ ಆಶಯ ಕೇಂದ್ರ ಸರ್ಕಾರಕ್ಕಾಗುವ ಡ್ಯಾಮೇಜ್ ತಪ್ಪಿಸಲು ಎಂಬಂತೆಯೇ ಇದೆ.

    ಅದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿಯ ನಿಯಮಾವಳಿಯ ಪ್ರತಿಯನ್ನು ಉಲ್ಲೇಖಿಸಿ ಇದರಲ್ಲಿ ಕೇಂದ್ರ ಸರ್ಕಾರದ್ದೇನೂ ತಪ್ಪಿಲ್ಲ. ಕೇಂದ್ರ ಸರ್ಕಾರ ಕಾನೂನು ಪಾಲಿಸುತ್ತಿದೆ. ಅದು ಬಿಟ್ಟು ಶ್ರೀಗಳಿಗೆ ಭಾರತ ರತ್ನ ನೀಡಬಾರದು ಎನ್ನುವುದು ಕೇಂದ್ರದ ನಿಲುವಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ಮಾಡಿದ್ದು ಸರಿ ಎನ್ನುವುದು ಈ ಸಂದೇಶದ ವಾದ. 2020ರವರೆಗೆ ಕಾದರೆ ಕೇಂದ್ರ ಸರ್ಕಾರವೇ ಕೊಡುತ್ತದೆ ಎಂಬ ಆಶಯವೂ ಇದೆ. ಇನ್ನು ರಾಜ್ಯದಲ್ಲಿರುವ ರಾಜಕಾರಣಿಗಳಂತೂ ಮಾಧ್ಯಮಗಳ ಮುಂದೆ ಮನವಿ ಮಾಡುತ್ತಲೇ ಇದ್ದಾರೆ. ಶ್ರೀಗಳಿಗೆ ಭಾರತ ರತ್ನ ಕೊಡಲೇಬೇಕು ಎಂದು ಹೇಳುತ್ತಲೇ ಇದ್ದಾರೆ. ನಿಮ್ಮ ಮಾತು ಅದ್ಯಾರಿಗೆ ಯಾವಾಗ ಕೇಳಿಸುತ್ತೋ…?

    https://www.facebook.com/publictv/videos/759008301132260/

    ಆದರೆ ಈಗ ವಾಟ್ಸಪ್, ಫೇಸ್‍ಬುಕ್‍ನಲ್ಲಿ ಸಂದೇಶ ಹರಡುತ್ತಿರುವವರು ಒಂದು ವಿಚಾರ ಗಮನಿಸಿ ಸಮರ್ಥನೆಗಿಳಿದರೆ ಉತ್ತಮ. 1999ರಲ್ಲಿ ಕೇಂದ್ರ ಸರ್ಕಾರ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿತ್ತು. ಇದಾಗಿ 2 ವರ್ಷಕ್ಕೆ ಅಂದ್ರೆ 2001ರಲ್ಲಿ ಕೇಂದ್ರ ಸರ್ಕಾರ ಲತಾ ಮಂಗೇಷ್ಕರ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿತು. ಹಾಗಾದರೆ ಈ ವೇಳೆ ಈ 5 ವರ್ಷದ ಕಾನೂನು ಇರಲಿಲ್ಲವೇ..? ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಸಮರ್ಥಿಸುತ್ತಿರುವವರ ನಿಲುವೇನು?

    ನಿಯಮಾವಳಿಯಲ್ಲಿ ಏನಿದೆ?
    ‘ಪದ್ಮಪ್ರಶಸ್ತಿಯನ್ನು ನೀವು ಕೊಡುವುದಾದರೆ ಬದುಕಿರುವಾಗ ಕೊಡಿ, ಮರಣೋತ್ತರವಾಗಿ ಕೊಡಬೇಡಿ. ಆದರೆ ಅನಿವಾರ್ಯ ಸಂದರ್ಭ ಬಂದರೆ ಈ ನಿಯಮವನ್ನು ಮೀರಬಹುದು. ಒಂದು ಪದ್ಮ ಪ್ರಶಸ್ತಿ ಕೊಟ್ಟ ಬಳಿಕ ಅದರ ನಂತರದ ಪ್ರಶಸ್ತಿ ನೀಡುವಾಗ 5 ವರ್ಷಗಳ ಅಂತರವನ್ನು ಕಾಯ್ದುಕೊಳ್ಳಿ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಅವಾರ್ಡ್ ಸಮಿತಿಯು ಈ ನಿಯಮವನ್ನು ಮೀರಿಯೂ ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ನಿಯಮ ಇದೆ.

    ವಾಟ್ಸಪ್ ಸಂದೇಶ ಹರಡುತ್ತಿರುವವರೇ ಈಗ ಏನಂತೀರಿ..? ನೀವು ಕಳಿಸ್ತಿರೋ ಸಂದೇಶದಲ್ಲೇ ನೀವು ಮಾರ್ಕ್ ಮಾಡಿದ ಅದೇ ವಾಕ್ಯದ ಕೆಳಗೆಯೇ ಈ ಅವಾರ್ಡ್ ಸಮಿತಿ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಆದರೆ ನೀವು ಕಳಿಸುತ್ತಿರೋ ಕನ್ನಡ ಸಂದೇಶದಲ್ಲಿ ಅದ್ಯಾವುದೂ ಇಲ್ಲ. ಇದನ್ನು ನೀವು ಉದ್ದೇಶಪೂರ್ವಕವಾಗಿ ಬಚ್ಚಿಟ್ಟಿದ್ದಲ್ಲ ತಾನೇ..?

    ಲತಾ ಮಂಗೇಶ್ಕರ್ ಎಂಬ ಗಾನ ಕೋಗಿಲೆಯ ವಿಚಾರದಲ್ಲೇ ಪಾಲನೆಯಾಗದ ನಿಯಮಾವಳಿ ಸಿದ್ಧಗಂಗಾ ಶ್ರೀಗಳಿಗೆ ಪ್ರಶಸ್ತಿ ನೀಡಲು ಅಡ್ಡಿಯಾಯಿತು ಎಂದು ಬಾಯಿ ಬಡ್ಕೋತಿರುವವರು ಸ್ವಲ್ಪ ಸಮಾಧಾನದಿಂದ ಪದ್ಮ ಅವಾರ್ಡ್ ಎಂಬ ವೆಬ್‍ಸೈಟಲ್ಲಿ ನಿಯಮಾವಳಿಗಳನ್ನು ಓದಿ. ಇದಾದ ಮೇಲೂ ನಿಮಗೆ 2020ರವರೆಗೆ ಕಾಯಲೇಬೇಕು ಎಂದೆನಿಸಿದರೆ ಚರ್ಚೆ ಮಾಡೋಣ. ನಿಮ್ಮ ಪಕ್ಷಗಳು ಯಾವುದೇ ಇರಲಿ. ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಕಚ್ಚಾಟ ಬೇಕಿಲ್ಲ. ನಮ್ಮ ತಪ್ಪಲ್ಲ ಅವರದ್ದು, ಅವರ ತಪ್ಪಲ್ಲ ಇನ್ನೊಬ್ಬರದು ಎಂಬ ವೃಥಾ ಪ್ರಲಾಪವೂ ಬೇಡ. ಗೌರವ ತಾನಾಗಿಯೇ ಬರಬೇಕೇ ಹೊರತು, ಕೇಳಿ ಕೇಳಿ ಪಡೆಯಬಾರದು. ಇನ್ನೊಬ್ಬರಿಗೆ ಯಾಕೆ ಪ್ರಶಸ್ತಿ ಕೊಟ್ಟಿದ್ದೀರಿ ಎಂದು ಕೇಳಲ್ಲ, ಆದರೆ ನಮ್ಮ ದೇವರಿಗೆ ಯಾಕೆ ಸಿಗಲಿಲ್ಲ ಎಂದು ಹೇಳಿ. 112ನೇ ವಯಸ್ಸಿನವರೆಗೂ ಜನರಿಗಾಗಿ ನಿಸ್ವಾರ್ಥ ಸೇವೆ ಮಾಡಿದ ನಮ್ಮ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಇಷ್ಟೆಲ್ಲಾ ಮನವಿ ಮಾಡಿದರೂ ಅದು ತಲುಪಬೇಕಾದವರ ಕಿವಿಗೆ ತಲುಪಿಲ್ಲ ಎಂದಾದರೆ ಧನ್ಯೋಸ್ಮಿ.

    ಇದೆಲ್ಲವನ್ನೂ ಮೀರಿ ನಿಮಗೆ ನಿಮ್ಮ ಅಭಿಪ್ರಾಯ ಹೇಳಬೇಕೆಂದಿದ್ದರೆ ಇಲ್ಲೇ ಕಮೆಂಟ್ ಮಾಡಿ.