Tag: Padarayanapura

  • ರಾಮನಗರ ಜೈಲಿನಲ್ಲಿ ಪಾದರಾಯನಪುರದ ಪುಂಡರು – ಮುಂದಿನ ಅನಾಹುತಕ್ಕೆ ಸರ್ಕಾರವೇ ಹೊಣೆ : ಎಚ್‍ಡಿಕೆ ಕಿಡಿ

    ರಾಮನಗರ ಜೈಲಿನಲ್ಲಿ ಪಾದರಾಯನಪುರದ ಪುಂಡರು – ಮುಂದಿನ ಅನಾಹುತಕ್ಕೆ ಸರ್ಕಾರವೇ ಹೊಣೆ : ಎಚ್‍ಡಿಕೆ ಕಿಡಿ

    ಬೆಂಗಳೂರು: ಪಾದರಾಯನಪುರದ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಐವತ್ತನಾಲ್ಕು ಮಂದಿ ಪುಂಡರನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸುವುದರಿಂದಾಗುವ ಮುಂದಿನ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

    ಕೊರೊನಾ ಸೋಂಕಿನ ವಿಷಯದಲ್ಲಿ ಹಸಿರು ವಲಯವಾಗಿರುವ ರಾಮನಗರದಲ್ಲಿ ಕ್ವಾರಂಟೈನ್ ಗೆ ಒಳಗಾಗಬೇಕಿದ್ದ ಗಲಭೆಕೋರರನ್ನು ರಾಮನಗರ ಜೈಲಿನಲ್ಲಿರಿಸುವುದು ವಿವೇಕಯುತ ನಿರ್ಧಾರವಲ್ಲ. ಚೋದ್ಯವೆಂದರೆ ರಾಮನಗರ ಜೈಲಿನ ಖೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿ, ಪಾದರಾಯನಪುರದ ಪುಂಡರನ್ನು ರಾಮನಗರದ ಕಾರಗೃಹದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿಯನ್ನು ಒಂದೇ ಕೊಠಡಿಯಲ್ಲಿರಿಸುವ ಮೂಲಕ ಕೊರೊನಾ ಭೀತಿ ಎದುರಾಗಿದೆ. ಜಿಲ್ಲೆಯ ಜನತೆ ಭಯಗೊಂಡಿದ್ದಾರೆ. ಸರಕಾರ ತಕ್ಷಣವೇ ತನ್ನ ನಿರ್ಧಾರವನ್ನು ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸೋಮವಾರ ಸೆರೆ ಸಿಕ್ಕ 54 ಮಂದಿ ನ್ಯಾಯಾಂಗ ಬಂಧನಕ್ಕೆ ಒಳಗಾದವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಇರಿಸುವುದನ್ನು ಬಿಟ್ಟು ರಾಮನಗರ ಜಿಲ್ಲಾ ಕಾರಾಗೃಹದಲ್ಲಿರಿಸುವ ನಿರ್ಧಾರ ತಗೆದುಕೊಂಡವರು ಯಾರು? ನನಗಿರುವ ಮಾಹಿತಿ ಪ್ರಕಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಇಂತಹದ್ದೊಂದು ದುಡುಕು ನಿರ್ಧಾರಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಗೃಹ ಕಾರ್ಯದರ್ಶಿ ಅವರೊಂದಿಗೆ ಎರೆಡೆರಡು ಬಾರಿ ದೂರವಾಣಿಯಲ್ಲಿ ಚರ್ಚಿಸಿದ್ದೇನೆ. ರಾಮನಗರ ಜಿಲ್ಲೆಯ ಜನರು ಮತ್ತು ಜನ ಪ್ರತಿನಿಧಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಪ್ರತಿಭಟನೆಗೆ ಇಳಿಯದಂತೆ ಅವರ ಮನವೊಲಿಸಿದ್ದೇನೆ. ಇದನ್ನು ಸರಕಾರದ ಗಮನಕ್ಕೂ ತರಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

    ಪಾದರಾಯನಪುರ ಗಲಭೆ ಸಂಬಂಧ ಒಟ್ಟು ಈವರೆಗೆ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಈ ಎಲ್ಲರನ್ನೂ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್ ಅಥವಾ ಯಾವುದಾದರೂ ಕಟ್ಟಡದಲ್ಲಿ ಸೂಕ್ತ ಬಂದೋಬಸ್ತ್ ಮಾಡಿ ಇಡುವುದು ಸೂಕ್ತ. ಸರಕಾರ ಇಂತಹ ಸೂಕ್ಷ ವಿಚಾರದಲ್ಲಿ ಜನತೆಯೊಂದಿಗೆ ಚೆಲ್ಲಾಟವಾಡದೇ ತಕ್ಷಣವೇ ತುರ್ತು ಅಗತ್ಯ ಕ್ರಮ ತಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ರಾಮನಗರ ಕಾರಾಗೃಹದಲ್ಲಿ ಅಡುಗೆಯವರು ಮತ್ತು ಶುಚಿತ್ವದ ಸಿಬ್ಬಂದಿ ವಾಸಿಸುತ್ತಿದ್ದು ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಗಲಭೆಕೊರರಿಂದ ಅಕಸ್ಮಾತ್ ಸೋಂಕು ತಗುಲಿದರೆ ಜಿಲ್ಲೆಯ ಸ್ವಾಸ್ಥ್ಯ ಹದಗೆಡುತ್ತದೆ ಎಂಬ ಕನಿಷ್ಠ ಪ್ರಜ್ಞೆ ಸರಕಾರಕ್ಕೆ ಬೇಡವೇ ಎಂದು ಪ್ರಶ್ನಿಸಿ ಕಿಡಿ ಕಾರಿದ್ದಾರೆ.

  • ಜಮೀರ್ ಅಹಮ್ಮದ್‍ರನ್ನ ಗೂಂಡಾ ಕಾಯ್ದೆಯಡಿ ಬಂಧಿಸಿ: ಕಟೀಲ್ ಆಗ್ರಹ

    ಜಮೀರ್ ಅಹಮ್ಮದ್‍ರನ್ನ ಗೂಂಡಾ ಕಾಯ್ದೆಯಡಿ ಬಂಧಿಸಿ: ಕಟೀಲ್ ಆಗ್ರಹ

    ಮಂಗಳೂರು: ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಪಾದರಾಯನಪುರ ಗಲಾಟೆ ವಿಚಾರದಲ್ಲಿ ಶಾಸಕ ಜಮೀರ್ ಅಹ್ಮದ್ ನೀಡಿದ ಹೇಳಿಕೆ ವಿಚಾರ ಹಾಗೂ ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಘಟನೆ ನಡೆದಾಗ ಶಾಸಕ ಜಮೀರ್ ತೆಗೆದುಕೊಂಡ ನಿರ್ಧಾರ ಮತ್ತು ವರ್ತನೆ ಕಾನೂನು ಬಾಹಿರವಾಗಿದೆ. ಅಲ್ಲಿನ ಗೂಂಡಾಗಿರಿಗೆ ಶಾಸಕನಾಗಿ ಬೆಂಗಾವಲಾಗಿ ನಿಂತಿರುವುದು ಕಾನೂನಿಗೆ ವಿರುದ್ಧ ಎಂದು ಆಕ್ರೋಶ ಹೊರ ಹಾಕಿದರು.

    ಅಧಿಕಾರಿಗಳನ್ನ ಬೆದರಿಸಿ ನನ್ನ ಅನುಮತಿ ಪಡೆದು ಬನ್ನಿ ಎನ್ನುವುದಕ್ಕೆ ಇದು ಸರ್ವಾಧಿಕಾರಿ ರಾಷ್ಟ್ರವಲ್ಲ. ವೀಸಾ ಮುಗಿದ ಮೇಲೂ ಅಲ್ಲಿ ಕೆಲವರು ಇದ್ದಾರೆ. ಅವರೆಲ್ಲಾ ಜಮೀರ್ ಅಹ್ಮದ್ ಅನುಮತಿ ಪಡೆದು ಕೂತಿದ್ದಾರೆ. ಅವರ ರಕ್ಷಣೆ ಜಮೀರ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ನಾನು ಸಿಎಂ ಯಡಿಯೂರಪ್ಪ ಮತ್ತು ಸರ್ಕಾರದ ಬಳಿ ಮಾತನಾಡಿ, ಜಮೀರ್ ಅಹ್ಮದ್ ಮೇಲೆ ಕೇಸು ದಾಖಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ವಿನಂತಿ ಮಾಡ್ತೇನೆ ಎಂದು ಹೇಳಿದರು.

    ಜಮೀರ್ ಅವರು ಹೀಗೆ ಮಾತನಾಡುತ್ತಿರುವುದು ಇದು ಮೊದಲ ಬಾರಿ ಅಲ್ಲ. ಹತ್ತಾರು ಬಾರಿ ದೇಶದ್ರೋಹ, ಕಾನೂನು ಬಾಹಿರ ಕೃತ್ಯ ಎಸಗಿದ್ದಾರೆ. ಅವರನ್ನು ತಕ್ಷಣ ಜೈಲಿಗೆ ಹಾಕುವ ಕೆಲಸ ಆಗಬೇಕು. ಅವರು ಕಾಂಗ್ರೆಸ್ ಪಕ್ಷಕ್ಕೂ ಅವಮಾನ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಕೂಡ ಅವರನ್ನ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸರ್ಕಾರದ ನಡೆಯನ್ನು ಬೆಂಬಲಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಾದರಾಯಣಪುರ ಪ್ರಕರಣದ ನಂತರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದು ಸ್ವಾಗತಾರ್ಹ. ಇದಕ್ಕಾಗಿ ವಿಶೇಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸರ್ಕಾರವನ್ನ ಅಭಿನಂಧಿತ್ತೇನೆ ಎಂದರು.

  • ಪಾದರಾಯನಪುರ ಗಲಾಟೆ- ಟ್ವಿಟ್ಟರ್ ಮೂಲಕ ಜಮೀರ್ ಅಹ್ಮದ್ ಸ್ಪಷ್ಟನೆ

    ಪಾದರಾಯನಪುರ ಗಲಾಟೆ- ಟ್ವಿಟ್ಟರ್ ಮೂಲಕ ಜಮೀರ್ ಅಹ್ಮದ್ ಸ್ಪಷ್ಟನೆ

    -ಎಲ್ಲರೂ ಒಂದಾಗಿ ಬಾಳಬೇಕು, ಎಲ್ಲರೂ ಒಂದೇ ತಾಯಿಯ ಮಕ್ಕಳು

    ಬೆಂಗಳೂರು: ಭಾನುವಾರ ರಾತ್ರಿ ನಡೆದ ಪಾದರಾಯನಪುರ ಗಲಾಟೆ ಮತ್ತು ಸೋಮವಾರ ಮಾಧ್ಯಮಗಳಿಗೆ ತಾವು ನೀಡಿದ ಹೇಳಿಕೆಗಳಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಟ್ವಿಟ್ಟರ್‍ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ಜಮೀರ್ ಅಹ್ಮದ್ ಟ್ವೀಟ್:
    ಪಾದರಾಯನಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ ಎಂದು ನನ್ನಿಂದ ಇನ್ನೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ, ತಮ್ಮನ್ನೇ ಉಳಿಸಲು ಬಂದವರ ಮೇಲೆ ಜನ ಹಲ್ಲೆಗೆ ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ. ನಾನು ಯಾರಿಗೂ ನನ್ನ ಅಪ್ಪಣೆ ಪಡೆದು ಚಾಮರಾಜಪೇಟೆಗೆ ಬರಬೇಕು ಎಂದು ಎಲ್ಲಿಯೂ ಹೇಳಿಲ್ಲ, ಹೇಳುವುದು ಇಲ್ಲ. ನನ್ನ ಕ್ಷೇತ್ರವೂ ಇತರ ಕ್ಷೇತ್ರಗಳಂತೆ ಒಂದು ಸಾಮಾನ್ಯ ಕ್ಷೇತ್ರ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದಕ್ಕೆ ಸಾಕಷ್ಟು ನೋವಾಗಿದೆ.

    ಲಾಕ್‍ಡೌನ್ ಪ್ರಾರಂಭವಾದ ದಿನದಿಂದ ಹಿಡಿದು ನಿನ್ನೆಯ ಸಂಜೆಯವರೆಗೂ ಹಗಲು ರಾತ್ರಿಯೆನ್ನದೆ ನಾನು ಕ್ಷೇತ್ರದಲ್ಲಿದ್ದು, ಅಧಿಕಾರಿಗಳಿಗೆ ಸ್ಪಂದಿಸಿ, ಜನರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ನಿಂತು ಯಾವುದೇ ರೀತಿಯ ಗೊಂದಲ ಆಗದಂತೆ ನೋಡಿಕೊಂಡಿದ್ದು ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕೆಂದು. ಆದರೆ ನಿನ್ನೆಯ ಘಟನೆ ನಡೆಯಬಾರದಿತ್ತು, ನಡೆದಿದೆ. ಅದಕ್ಕೆ ನನ್ನ ವಿಷಾದವಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿ. ಮುಂದೆ ಇಂತಹ ಘಟನೆಗಳು ನನ್ನ ಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ನಡೆಯದಂತೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ.

    ನನ್ನ ಜನ ಈ ರೀತಿ ವರ್ತಿಸುತ್ತಾರೆ ಎಂದು ನಾನು ಎಂದು ಭಾವಿಸಿರಲಿಲ್ಲ. ಯಾರೋ ಒಂದಷ್ಟು ಜನರ ದುರ್ವರ್ತನೆಗೆ ಇಡೀ ಸಮುದಾಯವನ್ನು ದೂರುವುದು ಕೂಡ ಸರಿಯಲ್ಲ. ಧರ್ಮಾತೀತವಾಗಿ ಕೊರೊನಾ ವಿರುದ್ಧ ದೇಶ ಹೋರಾಡುತ್ತಿದೆ, ಇದು ಒಂದಾಗಬೇಕಾದ ಸಮಯವೇ ಹೊರತು ಸಮಾಜ ಒಡೆಯುವ ಸಮಯವಲ್ಲ. ಮಾಧ್ಯಮದ ಸ್ನೇಹಿತರು ಎಲ್ಲರೂ ಒಟ್ಟಾಗಿ ನನ್ನ ಮೇಲೆ ಮುಗಿಬಿದ್ದಿದ್ದರಿಂದ ಅನಿವಾರ್ಯವಾಗಿ ಉತ್ತರಿಸದೆ ಹೊರನಡೆಯಬೇಕಾಯಿತು. ಘಟನೆಯ ಬಗ್ಗೆ ಮಾಧ್ಯಮ ಮಿತ್ರರಿಗಿದ್ದ ಆಕ್ರೋಶ, ನೋವಿನ ಅರಿವು ನನಗಿದೆ. ಇಂತಹ ಒಂದು ದುರ್ಘಟನೆ ನಡೆದ ನಂತರ ಈ ರೀತಿ ಆಕ್ರೋಶಭರಿತ ಮಾತುಗಳು ಬರುವುದು ಸಹಜ.

    ಈ ಘಟನೆ ಸಂಭವಿಸದಂತೆ ಕೈಗೊಳ್ಳಬಹುದಾಗಿದ್ದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಾನು ಆಡಿದ ಮಾತುಗಳಿಗೆ ಬೇರೆಯದೇ ಅರ್ಥ ನೀಡಿ ಕೆಲ ಸಚಿವರು ನನ್ನ ವಿರುದ್ಧ ಏನೇನು ಪದಗಳನ್ನು ಬಳಸಬಹುದೋ ಅವೆಲ್ಲವನ್ನೂ ಬಳಸಿ ನನ್ನನ್ನು ಹಾಡಿ ಹೊಗಳಿದ್ದಾರೆ, ಸಂತೋಷವಾಗಿದೆ. ಅವರಿಗೂ ಧನ್ಯವಾದ. ನಾನು ಏನು ಹೇಳಲು ಬಯಸಿದ್ದೆ ಅದನ್ನು ಹೇಳಲು ಎಲ್ಲಿಯೂ ನನಗೆ ಅವಕಾಶ ಸಿಗಲಿಲ್ಲ. ಹಿಂದೂ ಮುಸ್ಲಿಂ ಇರಲಿ ಎಲ್ಲರೂ ಒಂದಾಗಿ ಬಾಳಬೇಕು, ಎಲ್ಲರೂ ಒಂದೇ ತಾಯಿಯ ಮಕ್ಕಳು. ನಮ್ಮ ದೇಶವನ್ನು, ರಾಜ್ಯವನ್ನು ಕೊರೊನಾದಿಂದ ಕಾಪಾಡಬೇಕು. ಇದಕ್ಕೆ ನನ್ನ ಕ್ಷೇತ್ರದ ಜನರ ಸಂಪೂರ್ಣ ಸಹಕಾರ ದೊರೆಯಲಿದೆ.

    ಆ ಒಂದು ಘಟನೆಯಿಂದ ನನ್ನ ಹೆಸರಿಗೆ ಮಸಿ ಬಳಿಯಲು ಎಷ್ಟೇ ಪ್ರಯತ್ನಿಸಿದರೂ ನಾನು ಜನಸೇವೆಯಿಂದ ಹಿಂದೆ ಸರಿಯುವವನಲ್ಲ. ಮಾನವೀಯತೆಯೇ ನನ್ನ ಧರ್ಮ. ಹಣ, ಅಧಿಕಾರ ಯಾವುದೂ ಶಾಶ್ವತವಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ನನ್ನ ಸಹೋದರ, ಸಹೋದರಿಯರಿದ್ದಂತೆ. ಇವರೆಲ್ಲರ ಜೊತೆ ಸದಾ ಇರುತ್ತೇನೆ. ಮುಂದೆ ಇಂಥ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯ ಮುಂಜಾಗ್ರತೆ ವಹಿಸಲಾಗುತ್ತದೆ. ನನ್ನ ಕ್ಷೇತ್ರದ ಜನತೆ ಎಂದಿನಂತೆ ಮುಂದೆಯೂ ಸರ್ಕಾರ, ವೈದ್ಯಕೀಯ ಸಿಬ್ಬಂದಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ ಎಂಬ ಭರವಸೆ ನನಗಿದೆ. ನಮ್ಮೆಲ್ಲರ ಗುರಿ ಕೊರೊನಾ ನಿರ್ಮೂಲನೆಯೊಂದೇ ಆಗಿರಲಿ.

  • ಕೋಲಾರಕ್ಕೆ ಬೆಂಗಳೂರಿನ ಪಾದರಾಯನಪುರ ನಂಟು

    ಕೋಲಾರಕ್ಕೆ ಬೆಂಗಳೂರಿನ ಪಾದರಾಯನಪುರ ನಂಟು

    ಕೋಲಾರ: ಬೆಂಗಳೂರಿನ ಪಾದರಾಯನಪುರದ ಕೆಲ ಪುಂಡರು ಕೋಲಾರಕ್ಕೆ ತೆರಳಿದ್ದು, ತಾಲೂಕಿನ ಶಿಳ್ಳಂಗೆರೆ ಗ್ರಾಮಕ್ಕೆ ಐವರು ಆಗಮಿಸಿದ್ದಾರೆ.

    ಬೆಂಗಳೂರಿನ ಪಾದರಾಯನಪುರದಲ್ಲಿ ಗಲಾಟೆಯಾದ ನಂತರ ಈ ಐವರು ಕೋಲಾರಕ್ಕೆ ಆಗಮಿಸಿದ್ದು, ಆರೋಗ್ಯಾಧಿಕಾರಿಗಳು ಇವರನ್ನು ಹೋಮ್ ಕ್ವಾರಂಟೈನ್‍ನಲ್ಲಿ ಇರಿಸಿದ್ದಾರೆ. ಇದರಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದು, ಹೊರ ಬರುವುದಕ್ಕೂ ಹೆದರುತ್ತಿದ್ದಾರೆ. ಎಲ್ಲಿ ಬೆಂಗಳೂರಿನಿಂದ ಕೊರೊನಾ ತಂದಿದ್ದಾರೋ ಎಂದು ಭಯಭೀತರಾಗಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸಹ ಕಟ್ಟೆಚ್ಚರ ವಹಿಸಿದ್ದಾರೆ.

    ಇತ್ತ ಪಾದರಾಯನಪುರದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಠಿಣ ನಿಯಮಗಳು ಇಂದಿನಿಂದ ಅನ್ವಯವಾಗಲಿದ್ದು, ಜನರು ಮನೆಯಿಂದ ಹೊರ ಬರುವಂತಿಲ್ಲ. ಸೀಲ್‍ಡೌನ್ ಆಗಿದ್ರೂ ಯಾವುದೇ ರೀತಿಯ ಭಯವಿಲ್ಲದೇ ಜನ ಆರಾಮವಾಗಿ ಮನೆಯಿಂದ ಹೊರಬಂದು ಕಾಲಹರಣ ಮಾಡುತ್ತಿದ್ದರು. ಭಾನುವಾರ ರಾತ್ರಿ ನಡೆದ ಗಲಭೆಯಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಪುಂಡರನ್ನ ಬಂಧಿಸಿದ್ದಾರೆ. ಇಡೀ ಪಾದರಾಯನಪುರ ಪೊಲೀಸ್ ಸರ್ಪಗಾವಲಿನಲ್ಲಿದೆ. ದಿನ ಬೆಳ್ಳಂ ಬೆಳಗ್ಗೆ ಹಾಲು, ತರಕಾರಿ ನೆಪ ಹೇಳಿಕೊಂಡು ಹೊರಬರುತ್ತಿದ್ದ ಜನ ಈಗ ಮನೆಯಿಂದ ಹೊರಬರುತ್ತಿಲ್ಲ.

    ಪಾದರಾಯನಪುರ ಗಲಾಟೆ ಪ್ರಕರಣ ಸಂಬಂಧ ಬಂಧಿಸಲಾಗಿದ್ದ 54 ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡಲು ಆದೇಶಿಸಲಾಗಿದೆ. ಆರೋಪಿಗಳನ್ನು ಪರಪ್ಪನ ಅಗ್ರಹಾರದಿಂದ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ. ಹಾಗೆಯೇ ರಾಮನಗರ ಜೈಲಿನಲ್ಲಿರುವ 177 ಮಂದಿ ಖೈದಿಗಳು, ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

    ಕೊರೊನಾ ಗ್ರೀನ್ ಜೋನ್‍ನಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಇಲ್ಲಿಯ ತನಕ ಯಾವುದೇ ಪಾಸಿಟಿವ್ ಕೇಸ್ ಕಾಣಿಸಿಕೊಂಡಿಲ್ಲ. ಹೀಗಾಗಿ ರಾಮನಗರ ಜೈಲಿನಲ್ಲಿನ ಖೈದಿಗಳು, ಆರೋಪಿಗಳು ಸಹ ಪರಪ್ಪನ ಅಗ್ರಹಾರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದು, ತಮ್ಮನ್ನು ಶಿಫ್ಟ್ ಮಾಡುತ್ತಿರುವುದಕ್ಕೆ ವಿರೋಧಿಸುತ್ತಿದ್ದಾರೆ ಎಂದು ಜೈಲಿನ ಮೂಲಗಳಿಂದ ತಿಳಿದುಬಂದಿದೆ.

  • ಪಾದರಾಯನಪುರದಲ್ಲಿ ಹೊಸ ನಿಯಮಗಳು

    ಪಾದರಾಯನಪುರದಲ್ಲಿ ಹೊಸ ನಿಯಮಗಳು

    ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಠಿಣ ನಿಯಮಗಳು ಇಂದಿನಿಂದ ಅನ್ವಯವಾಗಲಿದ್ದು, ಜನರು ಮನೆಯಿಂದ ಹೊರ ಬರುವಂತಿಲ್ಲ.

    ಸೀಲ್‍ಡೌನ್ ಆಗಿದ್ರೂ ಯಾವುದೇ ರೀತಿಯ ಭಯವಿಲ್ಲದೇ ಜನ ಆರಾಮವಾಗಿ ಮನೆಯಿಂದ ಹೊರಬಂದು ಕಾಲಹರಣ ಮಾಡುತ್ತಿದ್ದರು. ಭಾನುವಾರ ರಾತ್ರಿ ನಡೆದ ಗಲಭೆಯಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಪುಂಡರನ್ನ ಬಂಧಿಸಿದ್ದಾರೆ. ಇಡೀ ಪಾದರಾಯನಪುರ ಪೊಲೀಸ್ ಸರ್ಪಗಾವಲಿನಲ್ಲಿದೆ. ದಿನ ಬೆಳ್ಳಂ ಬೆಳಗ್ಗೆ ಹಾಲು, ತರಕಾರಿ ನೆಪ ಹೇಳಿಕೊಂಡು ಹೊರಬರುತ್ತಿದ್ದ ಜನ ಈಗ ಮನೆಯಿಂದ ಹೊರಬರುತ್ತಿಲ್ಲ.

    ಹೊಸ ನಿಯಮಗಳು:
    1. ಮನೆಯಿಂದ ಯಾರು ಹೊರಗಡೆ ಬರುವಂತಿಲ್ಲ. (ತುರ್ತು ವೈದ್ಯಕೀಯ ಹೊರತುಪಡಿಸಿ)
    2. ಪಾದರಾಯನಪುರ ಏರಿಯಾ ಸಂಪೂರ್ಣ ಲಾಕ್‍ಡೌನ್.
    3. ಪ್ರವೇಶ ಮತ್ತು ನಿರ್ಗಮನಗೆ ಒಂದೇ ಮಾರ್ಗ. ಉಳಿದೆಲ್ಲ ರಸ್ತೆಗಳು ಬಂದ್
    4. ಲಾಕ್‍ಡೌನ್ ಪ್ರದೇಶಕ್ಕೆ ದಿನಕ್ಕೊಂದು ಬಾರಿ ತರಕಾರಿ, ಹಾಲು, ದಿನಸಿಯವರ ಪ್ರವೇಶ
    5. ಆಯಾಯ ವ್ಯಾಪಾರಿಗಳಿಗೆ ಕೋಡ್ ಹಾಗೂ ಸಮವಸ್ತ್ರ ಕೊಡಲಾಗುತ್ತೆ. ಅವರಿಗಷ್ಟೇ ಪ್ರವೇಶ
    6. ಮನೆಬಾಗಿಲಿಗೆ ದಿನಸಿ ,ಔಷಧಿ ತಲುಪಿಸಲಾಗುತ್ತೆ.
    7. ಇಡೀ ಚಟುವಟಿಕಗೆ ಕಂಪ್ಲೀಟ್ ಬ್ರೇಕ್.
    8. ವೈದ್ಯರನ್ನು ಹೊರತು ಪಡಿಸಿ ಈ ಏರಿಯಾಗೆ ಬೇರೆ ಯಾರ ಎಂಟ್ರಿಯೂ ಇಲ್ಲ. ಸಂಪೂರ್ಣ ಪ್ರವೇಶ ನಿಷಿದ್ಧ.
    9. ಎಂಎಲ್‍ಎ ಸೇರಿದಂತೆ ಜನಪ್ರತಿನಿಧಿಗಳ ನಿವಾಸ ಕಂಟೈನ್‍ಮೆಂಟ್ ಝೋನ್ ನಲ್ಲಿದ್ರೇ ಅವರು ಕೂಡ ಹೊರಗೆ ಬರುವಂತಿಲ್ಲ.
    10. ಈಗಾಗಲೇ ಪಾದರಾಯನಪುರದಲ್ಲಿದೆ ಗರುಡು ಟೀಂ ಇದೆ.

  • ಪಾದರಾಯನಪುರ ಪುಂಡಾಟದ ಮಾಸ್ಟರ್ ಮೈಂಡ್ ಇರ್ಫಾನ್ ಪಾಷಾ

    ಪಾದರಾಯನಪುರ ಪುಂಡಾಟದ ಮಾಸ್ಟರ್ ಮೈಂಡ್ ಇರ್ಫಾನ್ ಪಾಷಾ

    – ಬಿಬಿಎಂಪಿ ಎಲೆಕ್ಷನ್ ಇಟ್ಕೊಂಡು ಗಲಭೆ

    ಬೆಂಗಳೂರು: ನಗರದ ಪಾದರಾಯನಪುರದಲ್ಲಿ ನಡೆದ ಗಲಭೆಯ ಮಾಸ್ಟರ್ ಮೈಂಡ್ ಕೆಎಫ್‍ಡಿ ಇರ್ಫಾನ್ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೆಎಫ್‍ಡಿ ಮುಖಂಡ ಇರ್ಫಾನ್ ಪಾಷಾ ತಾನು ಗೆಲ್ಲೋಕೆ ಜನರನ್ನ ಉಪಯೋಗಿಸಿಕೊಂಡಿದ್ದ. ಮುಂದಿನ ವರ್ಷ ಕಾರ್ಪೋರೇಷನ್ ಎಲೆಕ್ಷನ್ ಇದೆ ಚುನಾವಣೆಗೆ ನಿಲ್ಬೇಕು. ಕಳೆದ ಬಾರಿ ಇಮ್ರಾನ್ ಪಾಷಾ ಮುಂದೆ ನಿಂತು ಅವಮಾನ ಅನುಭವಿಸಿದ್ದೀನಿ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅಂತ ಆತನ ತೀರ್ಮಾನ ಮಾಡಿ ಈ ಕೃತ್ಯ ಎಸಗಿದ್ದಾನೆ.

    ಇಮ್ರಾನ್ ಪಾಷಾ ನಿಮ್ಮನ್ನೆಲ್ಲ ಕರೆದುಕೊಂಡು ಹೋಗಿ ಜೈಲಿಗೆ ಹಾಕ್ತಾನೆ. ಇದೆಲ್ಲಾ ಬೇಕಾ ನಿಮಗೆ. ಅವನು ಹೇಳಿದ ಹಾಗೆ ಕೇಳ್ಬೇಡಿ. ನಾನು ನಿಮಗೆ ನ್ಯಾಯ ಕೊಡಿಸ್ತೀನಿ ಅಂತ ಪ್ರಚೋದನೆ ಕೊಟ್ಟಿದ್ದನಂತೆ. ನಾವೇನು ಉದ್ದೇಶ ಇಟ್ಕೊಂಡು ಮಾಡಿಲ್ಲ. ಅವನು ಹೇಳಿದ ಹಾಗೇ ಮಾಡಿದ್ದೀವಿ ಅಂತ ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ.

    ಮಧ್ಯಾಹ್ನ ಕ್ವಾರಂಟೈನ್ ಮಾಡಲು ಬಂದಾಗಲೇ ಇರ್ಫಾನ್ ಗೆ ಅಸಮಾಧಾನ ಇತ್ತು. ಬಳಿಕ ಸಂಜೆ 4 ಗಂಟೆಗೆ ಮತ್ತೆ ಬರ್ತೀವಿ ಅಂತ ವೈದ್ಯರು, ಆಶಾಕಾರ್ಯಕರ್ತೆಯರು ಹೋದ್ರು. ಆ ಸಂದರ್ಭದಲ್ಲಿ ನಮ್ಮ ಜೊತೆ ಮಾತನಾಡಿದ್ದ ಇರ್ಫಾನ್, ಸಂಜೆ ಬಂದಾಗ ಅವರಿಗೆ ತಕ್ಕ ಶಾಸ್ತಿ ಮಾಡ್ಬೇಕು ಅಂತ ಹೇಳಿದ್ದ. ಆದರೆ ಅವರು ಸಂಜೆ ಬರಲಿಲ್ಲ ಬದಲಾಗಿ ರಾತ್ರಿ ಬಂದಿದ್ರು. ನಮ್ಮ ಕೆಲಸವೂ ಸುಲಭ ಆಗಿತ್ತು. ನೋಡ ನೋಡ್ತಿದ್ದಂತೆ ಇರ್ಫಾನ್ ಕಿರುಚಾಡಲು ಶುರು ಮಾಡಿದ್ದ ಎಂದಿದ್ದಾರೆ.

    ಅಲ್ಲದೆ ಕ್ವಾರಂಟೈನ್ ಗೆ ಹೋಗಲು ನಿಂತಿದ್ದವರಿಗೆ ನಿಮಗೆ ಬುದ್ಧಿ ಇಲ್ವಾ ಅಂತ ಬೈಯೋಕೂ ಶುರು ಮಾಡಿದ್ದ. ಆ ಸಂದರ್ಭದಲ್ಲಿಯೇ ಗಲಾಟೆ ಆಗಿದ್ದು. ನಮಗೆ ನ್ಯಾಯ ಬೇಕು ಅಂತ ಕೂಗಾಡ್ತಾ ಇದ್ವಿ. ಇದ್ದಕ್ಕಿದ್ದಂತೆ ಗಲಾಟೆ ಪ್ರಾರಂಭ ಆಯ್ತು. ನಾವು ಎಲ್ಲರ ಜೊತೆ ಸೇರ್ಕೊಂಡು ಗಲಾಟೆ ಮಾಡಿದ್ವಿ ಎಂದು ಆರೋಪಿಗಳು ಪೊಲೀಸರ ಮುಂದೆ ಸತ್ಯ ಬಾಯಿಬಿಟ್ಟಿದ್ದಾರೆ.

    ಇರ್ಫಾನ್ ಯಾರು..?
    ಕೆಎಫ್ ಡಿಯ ಇರ್ಫಾನ್ ಕೇವಲ ಕೆಎಫ್ ಡಿ ಅಲ್ಲಿ ಇರಲಿಲ್ಲ. ಕಳೆದ ಬಾರಿ ಎಸ್‍ಡಿಪಿಐಯಿಂದ ಕಾರ್ಪೋರೇಷನ್ ಎಲೆಕ್ಷನ್ ಗೆ ನಿಂತು ಸೋತಿದ್ದ. ಈ ಮೂಲಕ ಎಸ್ ಡಿಪಿಐ ಅಲ್ಲಿ ಕೂಡ ಗುರುತಿಸಿಕೊಂಡಿದ್ದ. ಹಾಲಿ ಕಾರ್ಫೊರೇಟರ್ ಇಮ್ರಾನ್ ಪಾಷಾ ವಿರುದ್ಧ ತೊಡೆ ತಟ್ಟೋದೆ ಈತನ ಉದ್ದೇಶವಾಗಿದೆ.

    ಸದ್ಯ ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ದಂಡು ನೆರೆದಿದ್ದು, ಇಂದು ಬೆಳಗ್ಗೆ ಖಾಕಿಗಳಿಂದ ಪಥಸಂಚಲನ ನಡೆಯಿತು. ದೊಂಬಿ ಬಳಿಕ ಸೀಲ್‍ಡೌನ್ ಪಾದರಾಯನಪುರದಲ್ಲಿ ಖಾಕಿ ಭದ್ರಕೋಟೆಯಿದ್ದು, ಗಲಭೆ ಎಬ್ಬಿಸಿದ 54 ಪುಂಡರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ದೊಂಬಿ ಸಂಬಂಧ ಮತ್ತೆ 80 ಮಂದಿಯನ್ನ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.

  • ಸಿಎಂ ಕಾರ್ಯವೈಖರಿಗೆ ಕೆಲ ಸಚಿವರಿಂದ ಅಸಮಾಧಾನ

    ಸಿಎಂ ಕಾರ್ಯವೈಖರಿಗೆ ಕೆಲ ಸಚಿವರಿಂದ ಅಸಮಾಧಾನ

    ಬೆಂಗಳೂರು: ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಬಿಎಸ್‍ವೈ ಕಾರ್ಯವೈಖರಿ ಬಗ್ಗೆ ಕೆಲ ಸಚಿವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಲಾಠಿ ಕೈಗೆತ್ತಿಕೊಳ್ಳಬೇಡಿ ಎಂದು ಪೊಲೀಸರಿಗೆ ಸೂಚಿಸಿದ್ದು ತಪ್ಪು. ಅವತ್ತು ಆಶಾ ಕಾರ್ಯಕರ್ತೆ ಮೇಲೆ ದಾಳಿ ನಡೆದಾಗಲೇ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಕೆಲ ಸಚಿವರು ಅಸಮಾಧನ ತೋರ್ಪಡಿಸಿದ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೊರೊನಾ ಲಾಕ್‍ಡೌನ್ ವಿಚಾರದಲ್ಲಿ ಮೃದು ಧೋರಣೆ ಬೇಡ. ಇನ್ನೇನಿದ್ದರೂ ದಂಡಂ ದಶಗುಣಂ ಇರಬೇಕು ಎಂದು ಸಚಿವರಾದ ಅಶೋಕ್, ಸಿಟಿ ರವಿ, ಶ್ರೀರಾಮುಲು ಹೇಳಿದ್ದಾರೆ.

    ಬೆನ್ನಲ್ಲೇ, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ, ಅಧಿಕಾರ ನೀಡುವ ಬಗ್ಗೆ ಸಿಎಂ ಘೋಷಣೆ ಮಾಡಿದ್ದಾರೆ. ಡೋಂಟ್ ವರಿ, ಇನ್ನು ಮುಂದೆ ಒಂದು ಸಣ್ಣ ಗಲಾಟೆ ಆಗಲು ಅವಕಾಶ ಕೊಡಲ್ಲ ಎಂದು ಬಿಎಸ್‍ವೈ ಭರವಸೆ ನೀಡಿದ್ದಾರೆ ಅಂತಾ ತಿಳಿದುಬಂದಿದೆ.

    ಪಾದರಾಯನಪುರ ಗಲಭೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ದೃಷ್ಟಿಯಿಂದ, ಕೇರಳ ಮತ್ತು ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರಿವಾಜ್ಞೆ ಜಾರಿ ಮಾಡಲು ಸಿದ್ಧತೆ ನಡೆಸಿದೆ.

    ಇನ್ನೆರಡು ದಿನಗಳಲ್ಲಿ ಕರ್ನಾಟಕ ರಾಜ್ಯ ಸಾಂಕ್ರಾಮಿಕ ರೋಗಗಳ ಅಧಿನಿಯಮದ ಹೆಸರಿನಲ್ಲಿ ಸುಗ್ರಿವಾಜ್ಞೆ ಹೊರಡಿಸುವ ಸಾಧ್ಯತೆಯಿದೆ. ಕೊರೊನಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಗಲಭೆ ಎಬ್ಬಿಸಿದ್ರೆ ಅಂಥವರಿಗೆ 2 ವರ್ಷ ಶಿಕ್ಷೆ ವಿಧಿಸುವ ಮತ್ತು ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಕಾನೂನು ಬದ್ಧ ಸಂಸ್ಥೆಗಳಿಗೆ ಇರಲಿದೆ.

    ಕೊರೋನಾ ತಪಾಸಣೆಗೆ ತೆರಳುವ ವೈದ್ಯರು, ಆಶಾ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳನ್ನು ಸಹಿಸಲ್ಲ, ಹಲ್ಲೆಗೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ, ಗಲಭೆ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ.

  • ಪಾದರಾಯನಪುರ ಘಟನೆಯ ಹಿಂದೆ ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ: ಡಿವಿಎಸ್

    ಪಾದರಾಯನಪುರ ಘಟನೆಯ ಹಿಂದೆ ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ: ಡಿವಿಎಸ್

    ನವದೆಹಲಿ: ಪಾದರಾಯಣಪುರ ಘಟನೆಯ ಹಿಂದೆ ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ. ಇದೊಂದು ಪೂರ್ವ ನಿಯೋಜಿತ ಘಟನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಆರೋಪಿಸಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನ ಎನ್ನುವುದು ಜವಾಬ್ದಾರಿಯುತ ಸ್ಥಾನ, ಆ ಸ್ಥಾನದಲ್ಲಿ ಕುಳಿತು ತಪ್ಪಿತಸ್ಥರ ಪರ ಮಾತನಾಡುವುದು ಗಮನಿಸಿದರೇ ಇದರಲ್ಲಿ ಜಮೀರ್ ಅಹ್ಮದ್ ಪಾತ್ರ ಸ್ಪಷ್ಟವಾಗಿದೆ. ಜಮೀರ್ ಕಾರಣದಿಂದಲೇ ಆ ಕ್ಷೇತ್ರದ ಪರಿಸ್ಥಿತಿ ಹೀಗಾಗಿದೆ. ಘಟನೆಯನ್ನು ಸಮರ್ಥಿಸಿಕೊಳ್ಳುವುದು ನೋಡಿದರೇ ಇದು ಅವರ ಆಂತರಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತಿದೆ ಇದನ್ನು ಸುಮ್ಮನೆ ಬಿಟ್ಟರೆ ಕೊರೊನಾಗಿಂತ ವೇಗವಾಗಿ ಹರಡಲಿದೆ ಎಂದು ಹರಿಹಾಯ್ದರು.

    ಆಶಾ ಕಾರ್ಯಕರ್ತೆರ ಮೇಲೆ ದಾಳಿ ಆದಾಗಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಅದನ್ನು ಲಘುವಾಗಿ ಪರಿಗಣಿಸಿದಕ್ಕಾಗಿ ಈ ಘಟನೆ ನಡೆದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ರಾಜ್ಯ ಗೃಹ ಸಚಿವರು ಕಠೋರ ನಿರ್ಧಾರಗಳಿಗೆ ಸೂಚನೆ ನೀಡಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.

    ಪ್ರತಿಕೂಲ ವಾತಾವರಣ ಸೃಷ್ಟಿಸುವ ಜಮೀರ್ ಅಹ್ಮದ್ ಶಾಸಕ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ಅರ್ಹತೆ ಇಲ್ಲ. ಗೌರವದ ಗಂಧ ಗಾಳಿ ಗೊತ್ತಿದ್ದರೆ ರಾಜೀನಾಮೆ ಕೇಳಬಹುದಿತ್ತು. ರಾಜಕೀಯ ಅವಕಾಶಕಕ್ಕಿರುವ ಜನರಿಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ‘ಅವ್ರನ್ನ ಸಾಯಿಸಿ, ಸಾಯಿಸಿ’ – ಪೊಲೀಸರ ಹತ್ಯೆಗೂ ನಡೆದಿತ್ತು ಸ್ಕೆಚ್

    ‘ಅವ್ರನ್ನ ಸಾಯಿಸಿ, ಸಾಯಿಸಿ’ – ಪೊಲೀಸರ ಹತ್ಯೆಗೂ ನಡೆದಿತ್ತು ಸ್ಕೆಚ್

    – ಕಲ್ಲು, ದೊಣ್ಣೆ, ಚಾಕು ಹಿಡಿದಿದ್ದ ಗುಂಪು
    – ಕೃತ್ಯ ಎಸಗಿದ ಬಳಿಕ ಸಾಕ್ಷ್ಯ ನಾಶಕ್ಕೆ ಯತ್ನ

    ಬೆಂಗಳೂರು: ಭಾನುವಾರ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ದಾಳಿಯಲ್ಲಿ ಪೊಲೀಸರ ಹತ್ಯೆಗೂ ಸ್ಕೆಚ್ ಹಾಕಲಾಗಿತ್ತು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

    ಈ ಗಲಭೆಯನ್ನು ಮಾಡಲು ಪೂರ್ವ ನಿಯೋಜಿತವಾಗಿ ಸಂಚು ರೂಪಿಸಲಾಗಿತ್ತು. ಈ ವಿಚಾರವಾಗಿ ಪಾದರಾಯನಪುರದ 11ನೇ ಕ್ರಾಸ್‍ನಲ್ಲಿ ದಾಳಿ ಪ್ಲಾನ್ ಮಾಡಲಾಗಿತ್ತು. ಮೊದಲೇ ನಡೆದ ಪ್ಲಾನ್‍ನಂತೆ ಏರಿಯಾದಲ್ಲಿ ವಿದ್ಯುತ್ ಹೋದ ತಕ್ಷಣ ಕಿಡಿಗೇಡಿಗಳ ಗುಂಪು ಬಂದು ಏಕಾಏಕಿ ಪೊಲೀಸರ ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಕಲ್ಲು, ದೊಣ್ಣೆಗಳಿಂದ ದಾಳಿ ಮಾಡಿತ್ತು.

    ಈ ದಾಳಿಯಲ್ಲಿ ಪೊಲೀಸರ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಸಿದ್ಧಗೊಳಿಸಿರುವ ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ದಾಳಿ ಮಾಡಿದ ದುಷ್ಕರ್ಮಿಗಳು ದಾಳಿಯ ವೇಳೆ ಸಾಯಿಸಿ ಸಾಯಿಸಿ ಪೊಲೀಸರನ್ನು ಸಾಯಿಸಿ ಎಂದು ಘೋಷಣೆ ಕೂಡ ಕೂಗುತ್ತಿದ್ದರು. ಕೃತ್ಯ ಎಸಗಿದ ಬಳಿಕ ಸಿಸಿಟಿವಿಯನ್ನು ಧ್ವಂಸ ಮಾಡಲಾಗಿದೆ ಎಂದು ಪೊಲೀಸರು ಎಫ್‍ಐಆರ್ ನಲ್ಲಿ ನಮೂದಿಸಿದ್ದು, ಎಫ್‍ಐಆರ್ ಕಾಪಿ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನು ಓದಿ:ನರಕದಿಂದ ನಮ್ಮನ್ನು ಹೊರ ತರಲು ಕಷ್ಟ ಪಡ್ತಿರೋರಿಗೆ ನಾವು ಸಹಕರಿಸೋಣ – ಗುಣಮುಖವಾಗಿ ಕಣ್ಣೀರಿಟ್ಟ

    ಭಾನುವಾರ ರಾತ್ರಿ ಪಾದರಾಯನಪುರದ 58 ಮಂದಿ ಕೊರೊನಾ ಶಂಕಿತರನ್ನು ಬೇರೆಡೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ಈ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಕೊರೊನಾ ಸೋಂಕು ಶಂಕಿತರು ಭಾಗಿಯಾಗಿದ್ರು ಎನ್ನಲಾಗಿದ್ದು, ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಬಳಿ ರಾತ್ರಿಯೇ 54 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಜೊತೆಗೆ ಈಗ 22 ಜನರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

  • ಯಾರ್ರೀ ಅದು ಜಮೀರ್ ಅಹ್ಮದ್? ಅವರಿಗೇನು ಸಂಬಂಧ?- ಸಿಎಂ ಬಿಎಸ್‍ವೈ ಕಿಡಿ

    ಯಾರ್ರೀ ಅದು ಜಮೀರ್ ಅಹ್ಮದ್? ಅವರಿಗೇನು ಸಂಬಂಧ?- ಸಿಎಂ ಬಿಎಸ್‍ವೈ ಕಿಡಿ

    -ಅವರ ಅಪ್ಪಣೆ ತೆಗೆದುಕೊಳ್ಳಬೇಕಾ?
    -ಶಾಸಕ ಜಮೀರ್‍ಗೆ ಸಿಎಂ ಖಡಕ್ ವಾರ್ನಿಂಗ್

    ಬೆಂಗಳೂರು: ನಾವು ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದು ಅಂತ ಕೇಳಲು ಜಮೀರ್ ಅಹ್ಮದ್ ಯಾರು? ಸರ್ಕಾರ ಮಾಡುವ ಕೆಲಸಗಳಿಗೆ ಅವರ ಅಪ್ಪಣೆ ಪಡೆದುಕೊಂಡು ಹೋಗಬೇಕಾ? ಈ ತರಹದ ಹೇಳಿಕೆ ಕೊಡಲು ಅವರು ಏನು ಸಂಬಂಧ? ಈ ರೀತಿಯ ಹೇಳಿಕೆ ಕೊಡೊದನ್ನ ನೋಡಿದ್ರೆ ಇದಕ್ಕೆಲ್ಲ ರಾಜ್ಯದ ಜನತೆ ಅವರೇ ಪ್ರಚೋದನೆ ನೀಡ್ತಿದ್ದಾರೆ ಅಂತಾ ಅರ್ಥೈಸಿಕೊಳ್ಳಬೇಕಾ? ತಪ್ಪು ಮಾಡಿದವ್ರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ ಅಂತ ಹೇಳಬೇಕಾದ ವ್ಯಕ್ತಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಜಮೀರ್ ಅಹ್ಮದ್ ವಿರುದ್ಧ ಸಿಎಂ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

    ಪೊಲೀಸರು, ಆರೋಗ್ಯಾಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ಮೇಲೆ ಗೂಂಡಾಗಿರಿ ನಡೆಸಿ, ಸೀಲ್‍ಡೌನ್ ಗಾಗಿ ಹಾಕಿದ್ದ ಶೆಡ್ ಗಳನ್ನು ಧ್ವಂಸಗೊಳಿಸಿರೋದನ್ನ ಸಹಿಸಲ್ಲ. ಅಲ್ಲಿರುವ ತಾತ್ಕಾಲಿಕ ಚೆಕ್‍ಪೋಸ್ಟ್ ಗಳನ್ನು ಧ್ವಂಸಗೊಳಿಸಿರೋದು ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಜೀವನ ರಕ್ಷಿಸಲು ಹೋದವರ ಮೇಲೆಯೇ ಹಲ್ಲೆಗೆ ಯತ್ನಿಸಿರೋದನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ಗೃಹಸಚಿವರ ಜೊತೆಯೂ ಚರ್ಚಿಸಿದ್ದು, ಕಾನೂನು ರೀತಿ ಕಠಿಣ ಕ್ರಮಗಳನ್ನು ಜರುಗಿಸುವಂತೆ ಆದೇಶಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

    ಹಿಂದೆಂದೂ ಈ ರೀತಿಯ ಘಟನೆಗಳು ನಡೆದಿರಲಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತ ಅನ್ನೋ ಪ್ರಶ್ನೆಯೇ ಉದ್ಭವಿಸಲ್ಲ. ಕಾನೂನು ಕೈಗೆ ತೆಗೆದುಕೊಂಡುವರು ಯಾರೇ ಇರಲಿ, ಅವರಿಗೆ ಶಿಕ್ಷೆ ಆಗಬೇಕು ಎಂದರು.