Tag: Padarayanapura

  • ಪಾದರಾಯನಪುರ ಪುಂಡನ ಪತ್ನಿಗೆ ಕೊರೊನಾ ಪಾಸಿಟಿವ್ – ಇಂದಿನಿಂದ ಕ್ವಾರಂಟೈನ್

    ಪಾದರಾಯನಪುರ ಪುಂಡನ ಪತ್ನಿಗೆ ಕೊರೊನಾ ಪಾಸಿಟಿವ್ – ಇಂದಿನಿಂದ ಕ್ವಾರಂಟೈನ್

    – ನಾಲ್ಕು ಏರಿಯಾ ಡೇಂಜರ್

    ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಗುರುವಾರ ಒಂದೇ ದಿನ ಏಳು ಮಂದಿಗೆ ಕಿಲ್ಲರ್ ಕೊರೊನಾ ದೃಢವಾಗಿದೆ.

    ಶಿವಾಜಿನಗರದಲ್ಲಿ ನಾಲ್ವರಿಗೆ, ಪಾದರಾಯನಪುರದಲ್ಲಿ ಇಬ್ಬರಿಗೆ ಮತ್ತು ಯಶವಂತಪುರದಲ್ಲೂ ಓರ್ವರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಪಾದರಾಯನಪುರದಲ್ಲಿ ಮತ್ತೆ ಕೊರೊನಾ ರಣಕೇಕೆ ಹಾಕುತ್ತಿದೆ. ಪಾದಾರಾಯನಪುರದಲ್ಲಿ 35 ವರ್ಷದ ಮಹಿಳೆ ಮತ್ತು 23 ವರ್ಷದ ಯುವಕನಿಗೆ ಡೆಡ್ಲಿ ವೈರಸ್ ದೃಢವಾಗಿದೆ.

    ಬೇರೆ ಬೇರೆ ಮನೆಗಳಲ್ಲಿ ಇದ್ದ ಈ ಇಬ್ಬರಿಗೆ ಸೋಂಕು ಬಂದಿದ್ದು,  ರ‍್ಯಾಂಡಮ್ ಟೆಸ್ಟ್‌ನಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ. ಇಬ್ಬರು ಸೋಂಕಿತನ ಮನೆ ಸುತ್ತ ಓಡಾಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಇಬ್ಬರ ಸೋಂಕಿನ ಮೂಲ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿಗಳಿಗಾಗಿ ಆರೋಗ್ಯ ಇಲಾಖೆ ಹುಡುಕಾಟ ನಡೆಸುತ್ತಿದೆ.

    ಸೊಂಕು ಬಂದ ಮಹಿಳೆ ಯಾರು ಗೊತ್ತಾ?
    ಪಾದರಾಯನಪುರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಪುಂಡಾಟಿಕೆ ಮಾಡಿದ ವ್ಯಕ್ತಿಯ ಪತ್ನಿ 35 ವರ್ಷದ ಮಹಿಳೆಗೆ ಈಗ ಸೋಂಕು ಬಂದಿರುವುದು. ಪಾದರಾಯನಪುರದ ಪುಂಡಾಟಿಕೆಯಲ್ಲಿ ಈಕೆಯ ಪತಿ ಅರೆಸ್ಟ್ ಆಗಿದ್ದಾನೆ. ಮಹಿಳೆ ಪಾದರಾಯನಪುರದ 10 ಕ್ರಾಸ್‍ನಲ್ಲಿ ವಾಸಿಸುತ್ತಿದ್ದು, ಆಶಾ ಕಾರ್ಯಕರ್ತೆಯರು ಹೋದಾಗ ರಾತ್ರೋರಾತ್ರಿ ದಬ್ಬಾಳಿಕೆ ಮಾಡಿದ್ದು ಈ ಮಹಿಳೆಯ ಪತಿ ಆಗಿದ್ದಾನೆ. ಮಹಿಳೆ ಪತಿ ಈಗ ಅರೆಸ್ಟ್ ಆಗಿ ಹಜ್ ಭವನದಲ್ಲಿ ಕ್ವಾರಂಟೈನ್‍ನಲ್ಲಿ ಇದ್ದಾನೆ.

    ಈಗ ಈಕೆಗೆ ರ‍್ಯಾಂಡಮ್ ಟೆಸ್ಟ್‌ನಲ್ಲಿ ಸೊಂಕು ಪತ್ತೆಯಾಗಿದೆ. ಈಗ ಪತಿಗೂ ಸೋಂಕು ಇದಿಯಾ ಅಂತ ಆರೋಗ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿದ್ದು, ಆತನನ್ನು ಟೆಸ್ಟ್ ಗೆ ಒಳಪಡಿಸುವ ಸಾಧ್ಯತೆ ಇದೆ.

    ಪಾದರಾಯನಪುರದ ಡೇಂಜರ್ ಕ್ರಾಸ್:
    ಎರಡು ಹೊಸ ಪಾಸಿಟಿವ್ ಕೇಸ್‍ಗಳಿಗೂ 4 ಕ್ರಾಸ್ ನಂಟು ಇದ್ದು, ಪಾದರಾಯನಪುರದಲ್ಲಿ ಇದುವರೆಗೂ 37 ಮಂದಿಗೆ ಕೊರೊನಾ ವೈರಸ್ ಬಂದಿದೆ. ಪಾದರಾಯನಪುರದಲ್ಲಿ 8ನೇ ಕ್ರಾಸ್, 9ನೇ ಕ್ರಾಸ್, 10ನೇ ಕ್ರಾಸ್, 11ನೇ ಕ್ರಾಸ್ ಈ ನಾಲ್ಕು ಡೇಂಜರ್ ಏರಿಯಾಗಳಾಗಿದ್ದು, ಈ ನಾಲ್ಕು ಕ್ರಾಸ್‍ಗಳಲ್ಲಿ ಓಡಾಡುವ ಜನರು ಜಾಗೃತವಾಗಿರಬೇಕು. ಈ ಕ್ರಾಸ್‍ಗಳಲ್ಲೇ ಹೆಚ್ಚು ರ‍್ಯಾಂಡಮ್ ಟೆಸ್ಟ್ ನಡೆದಿದೆ. ಇದೇ ರಸ್ತೆಗಳಲ್ಲಿ ಪುಂಡರು ಗಲಭೆ ಕೂಡ ಮಾಡಿದ್ದರು.

    ಅಲ್ಲದೇ ಈ ಕ್ರಾಸ್‍ಗಳಲ್ಲಿ ಓಡಾಡಿದ 250ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‍ನಲ್ಲಿದ್ದಾರೆ. ನಿನ್ನೆ ಪತ್ತೆಯಾದ ಸೋಂಕಿತರು ಕೂಡ ಇದೇ ಕ್ರಾಸ್‍ನಲ್ಲಿ ಓಡಾಡಿದ್ದರು. ಸೋಂಕಿತರು 9 ಮತ್ತು 10ನೇ ಕ್ರಾಸ್‍ನಲ್ಲಿ ಓಡಾಡಿದ್ದರು. ಹೀಗಾಗಿ ಜನರು ಎಚ್ಚರವಾಗಿರಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

  • ಪಾದರಾಯನಪುರ ಕೇಸ್- ಎಲ್ಲ ಸಿಬ್ಬಂದಿಗೆ ನೆಗೆಟಿವ್, ಗ್ರೀನ್ ಝೋನ್‍ನಲ್ಲಿ ರಾಮನಗರ

    ಪಾದರಾಯನಪುರ ಕೇಸ್- ಎಲ್ಲ ಸಿಬ್ಬಂದಿಗೆ ನೆಗೆಟಿವ್, ಗ್ರೀನ್ ಝೋನ್‍ನಲ್ಲಿ ರಾಮನಗರ

    – ಅಶ್ವತ್ಥ ನಾರಾಯಣ ಕ್ವಾರಂಟೈನ್ ಅವಧಿ ಮುಕ್ತಾಯ

    ಬೆಂಗಳೂರು: ಪಾದರಾಯನಪುರ ಪ್ರಕರಣದಿಂದ ಆತಂಕಕ್ಕೆ ಒಳಗಾಗಿದ್ದ ರಾಮನಗರ ಜಿಲ್ಲೆಯ ಜನರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಪಾದರಾಯನಪುರ ಗಲಭೆಯ ಆರೋಪಿಗಳ ನಿಗಾವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿಗೆ ಕೊರೊನಾ ಟೆಸ್ಟ್ ವರದಿಯು ನೆಗೆಟಿವ್ ಬಂದಿದೆ.

    ಈ ಕುರಿತು ಟ್ವಿಟ್ ಮಾಡಿರುವ ಅಶ್ವತ್ಥ ನಾರಾಯಣ ಅವರು, ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಪಾದರಾಯನಪುರ ಗಲಭೆಯ ಆರೋಪಿಗಳ ನಿಗಾವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು 68 ಮಂದಿಯ ಎರಡನೇ ಬಾರಿಯ ಕೊರೊನಾ ತಪಾಸಣೆ ಫಲಿತಾಂಶಗಳು ಕೂಡ ನೆಗೆಟಿವ್ ಬಂದಿವೆ. ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಾ, ರಾಮನಗರ ಜಿಲ್ಲೆ ಗ್ರೀನ್ ಝೋನ್‍ನಲ್ಲೇ ಉಳಿದಿದೆ ಎಂದು ಹೇಳಬಯಸುತ್ತೇನೆ ಎಂದು ತಿಳಿಸಿದ್ದಾರೆ.

    ಪಾದರಾಯನಪುರದ ಪುಂಡರು ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಗಲಭೆ ಎಬ್ಬಿಸಿದ್ದ 124 ಮಂದಿಯಲ್ಲಿ ಐವರಿಗೆ ಕೊರೊನಾ ಸೋಂಕು ಹಬ್ಬಿದೆ. ಅವರು ಕಾಲಿಟ್ಟಿದ್ದ ರಾಮನಗರ ಜಿಲ್ಲೆಗೂ ಕೊರೊನಾ ಸೋಂಕು ಹಬ್ಬುವ ಭೀತಿ ಎದುರಾಗಿತ್ತು. ಅದೃಷ್ಟವಶಾತ್ ಯಾವುದೇ ಸಿಬ್ಬಂದಿಗೆ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ರಾಮನಗರ ಜಿಲ್ಲೆಯ ಜನರು ನಿಟ್ಟುಸಿರುಬಿಟ್ಟಿದ್ದಾರೆ.

    ಪಾದರಾಯನಪುರದ ಪುಂಡರಲ್ಲಿ ಐವರಿಗೆ ಕೊರೊನಾ ಹೇಗೆ ಬಂತು ಎನ್ನುವುದು ಈಗ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಪುಂಡರು ಕೊರೊನಾ ಸೋಂಕಿತರ ಪ್ರಾಥಮಿಕ ಅಥವಾ ಸೆಕೆಂಡರಿ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ಇಲ್ಲ. ಅವರಿಗೆ ಕೊರೊನಾ ಹಬ್ಬಿದ್ದು ಹೇಗೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ.

    ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ನನ್ನ ಸೆಲ್ಫ್ ಕ್ವಾರಂಟೈನ್ ಅವಧಿ ಇಂದು ಮುಕ್ತಾಯವಾಗಿದೆ. ಮತ್ತೆ ನೆಗೆಟಿವ್ ಫಲಿತಾಂಶ ಬಂದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದ ಕಾರ್ಯಗಳಲ್ಲಿ ಭಾಗಿಯಾಗಿದ್ದೇನೆ. ಎಂದಿನಂತೆ ಜನಸೇವೆ ಮಾಡಲು ಉತ್ಸುಕನಾಗಿದ್ದೇನೆ. ಈ ದಿನಗಳಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ನನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

    ಕೊರೊನಾ ಸೋಂಕಿತ ಕ್ಯಾಮೆರಾಮೆನ್‍ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಅಶ್ವತ್ಥ ನಾರಾಯಣ ಅವರು ಕಳೆದ ತಿಂಗಳ 29ರಿಂದ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಿದ್ದರು. ಈಗ ಅವರ ಹೋಂ ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದೆ.

  • ಬೆಂಗ್ಳೂರಿಗೆ ಪಾದರಾಯನಪುರದ ತಬ್ಲಿಘಿಗಳೇ ಕಂಟಕ- ರಹಸ್ಯ ಭೇದಿಸುತ್ತಾ ಆರೋಗ್ಯ ಇಲಾಖೆ?

    ಬೆಂಗ್ಳೂರಿಗೆ ಪಾದರಾಯನಪುರದ ತಬ್ಲಿಘಿಗಳೇ ಕಂಟಕ- ರಹಸ್ಯ ಭೇದಿಸುತ್ತಾ ಆರೋಗ್ಯ ಇಲಾಖೆ?

    ಬೆಂಗಳೂರು: ಸಿಲಿಕಾನ್ ಸಿಟಿಯ ಪಾದರಾಯನಪುರದಲ್ಲಿ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾನೇ ಇದ್ದು, ಆರೋಗ್ಯ ಇಲಾಖೆಗೆ ಈ ಕೊರೊನಾ ಪ್ರಕರಣಗಳು ದೊಡ್ಡ ತಲೆನೋವಾಗಿದೆ. ಲಾಕ್ ಡೌನ್, ಸೀಲ್ ಡೌನ್ ಮತ್ತು ಡಬಲ್ ಲಾಕ್ ಡೌನ್ ಮಾಡಿದರೂ ಕೊರೊನಾ ಕಂಟ್ರೋಲ್ ಗೆ ಬರುತ್ತಿಲ್ಲ. ಹೀಗಾಗಿ ಆರೋಗ್ಯಾಧಿಕಾರಿಗಳು ಪಾದರಾಯನಪುರದಲ್ಲಿ ಕೊರೊನಾ ರಹಸ್ಯ ಭೇದಿಸಲು ಹರಸಾಹಸ ಪಡುತ್ತಿದ್ದಾರೆ.

    ಪಾದರಾಯನಪುರದಲ್ಲಿ ಕೊರೊನಾ ಕಂಟಕವಾಗಲು ಕಾರಣ ತಬ್ಲಿಘಿಗಳು ಅಂತ ಒಂದು ಕಡೆ ಹೇಳಿದರೆ, ಮತ್ತೊಂದು ಕಡೆ ಸಮುದಾಯಕ್ಕೆ ಹಬ್ಬಿದೆಯಾ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಹೀಗಾಗಿ ಪಾದರಾಯನಪುರದಲ್ಲಿ ಕೊರೊನಾದ ರಹಸ್ಯ ಭೇದಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನಿಲ್ಲದ ಯೋಜನೆಗಳನ್ನ ಮಾಡಿಕೊಳ್ಳುತ್ತಿದ್ದಾರೆ.

    ಪಾದರಾಯನಪುರದಲ್ಲಿ ಸೋಂಕಿತರ ನಿವಾಸ ಮತ್ತು ಕ್ವಾರಂಟೈನ್ ಮಾಡಿರುವ ಜಾಗದಲ್ಲಿ ಯಾರೆಲ್ಲ ಓಡಾಡುತ್ತಾರೆ, ಅವರಿಗೆ ರ್‍ಯಾಂಡಮ್ ಟೆಸ್ಟ್ ಮಾಡ್ತಾ ಇದೆ, ಈಗಾಗಲೇ ರ್‍ಯಾಂಡಮ್ ಟೆಸ್ಟ್ ನಲ್ಲಿ ಕೆಲವು ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಪಾದರಾಯನಪುರ ವಾರ್ಡಿನಲ್ಲಿ ಇರುವ ಕ್ಲಿನಿಕ್, ನರ್ಸಿಂಗ್ ಮತ್ತು ಮೆಡಿಕಲ್ ಸ್ಟೋರ್‍ಗಳಿಗೆ ಯಾರೆಲ್ಲಾ ಭೇಟಿ ಕೊಡ್ತಾರೆ ಅವರ ವಿವರ, ಏನು ಔಷಧಿ ತೆಗೆದುಕೊಂಡರು, ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅವರ ಸ್ಥಳ ಮತ್ತು ಅಡ್ರೆಸ್ ಮತ್ತು ಕಾಂಟ್ಯಾಕ್ಟ್ ನಂಬರ್ ಬರೆದಿಟ್ಟುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಮೆಡಿಕಲ್ ಸ್ಟೋರ್ ಮತ್ತು ಕ್ಲಿನಿಕ್ ಗಳಿಗೆ ಸೂಚನೆ ನೀಡಿದ್ದಾರೆ.

    ಜೊತೆಗೆ ಸೋಂಕಿನ ಲಕ್ಷಣ ಮುಚ್ಚಿಡಲು ಪ್ಯಾರಾಸೆಟಮಲ್ ಮಾತ್ರೆ ಸೇವಿಸುತ್ತಾ ಇದ್ದಾರೆ ಎಂಬ ಗುಮಾನಿ ಕೇಳಿ ಬರುತ್ತಿದ್ದಂತೆ ವೈದ್ಯರ ಟೀಂ ರೆಡಿಯಾಗಿದ್ದು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ರೀತಿ ಪಾದರಾಯನಪುರದಲ್ಲಿ ಕೊರೊನಾ ರಹಸ್ಯ ಭೇದಿಸಲು ಆರೋಗ್ಯಾಧಿಕಾರಿಗಳು ಎಷ್ಟೇ ಹರ ಸಾಹಸ ಪಟ್ಟರೂ ಕಂಟ್ರೋಲ್ ಗೆ ಬರದೇ ಇರೋದು ದೊಡ್ಡ ತಲೆ ನೋವಾಗಿದೆ. ಜೊತೆಗೆ ಸೋಂಕಿತರ ಸಂಬಂಧ ಕ್ವಾರಂಟೈನ್ ಮಾಡಿರುವ ವ್ಯಕ್ತಿಗಳಿಗೆ ಮತ್ತೊಮ್ಮೆ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಕೇಸ್ ಪತ್ತೆಯಾಗ್ತಿರೋದು ಎಲ್ಲಿ ಎನ್ನುವ ಪ್ರಶ್ನೆ ಆರೋಗ್ಯಾಧಿಕಾರಿಗಳಿಗೆ ಕಾಡ್ತಿದೆ.

    ತಬ್ಲಿಘಿ ಲಿಂಕ್ ಹೇಗೆ..?
    ಪಾದರಾಯನಪುರದ ಮೊದಲ ಕೊರೊನಾ ಕೇಸ್ ರೋಗಿ ನಂ. 167 & 168 ಆಗಿದೆ. ಮಾರ್ಚ್ 23ರಂದು ಪತ್ತೆಯಾದ ರೋಗಿಗಳಾದ 167, 168 ದೆಹಲಿ ನಿಜಾಮುದ್ದಿನ್ ಸಭೆಯಲ್ಲಿ ಭಾಗಿಯಾಗಿದ್ದರು. ಈ ತಬ್ಲಿಘಿಗಳಿಂದ ಒಂದೇ ರೂಂನಲ್ಲಿದ್ದ ಕೇಸ್ ನಂ.199ಕ್ಕೆ ಸೊಂಕು ತಗುಲಿದೆ. ರೋಗಿ 199 ಪಾದರಾಯನ ಪುರದಲ್ಲಿರುವ ಲೆದರ್ ಫ್ಯಾಕ್ಟರಿ ಮಾಲೀಕನಾಗಿದ್ದು, ಈತನಿಂದ ಅಲ್ಲಿನ ಉದ್ಯೋಗಿಗಳಿಗೆ ಸೋಂಕು ಹರಡಿದೆ. ಇನ್ನು ರೋಗಿ ನಂ. 199 ರಿಂದ ಲೆದರ್ ಫ್ಯಾಕ್ಟರಿ ಉದ್ಯೋಗಿ 292ಗೆ ವೈರಸ್ ಹರಡಿದೆ. ರೋಗಿ ನಂ.292 ರಿಂದ ಆತನ ಫ್ಯಾಮಿಲಿಯ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಂದರೆ, 292 ರಿಂದ 559ಕ್ಕೆ, ರೋಗಿ ನಂ 559 ರಿಂದ 560, 561-562-563ಕ್ಕೆ ಸೊಂಕು, ನಂತರ ಲೆದರ್ ಫ್ಯಾಕ್ಟರಿಯ ಉದ್ಯೋಗಿ 281ಗೆ ಸೋಂಕು, ಇವರಿಂದ 564ಕ್ಕೆ ಸೋಂಕು ಹರಡಿದೆ.

  • ಆರೇಳು ಬಾರಿ ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದ ಇಬ್ಬರಿಗೆ ಕೊರೊನಾ

    ಆರೇಳು ಬಾರಿ ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದ ಇಬ್ಬರಿಗೆ ಕೊರೊನಾ

    – ಬೆಂಗ್ಳೂರಿಗೆ ಪಾದರಾಯನಪುರ ಕಂಟಕ
    – ದೀಪಾಂಜಲಿ ನಗರದ ವೃದ್ಧನಿಗೆ ಕೊರೊನಾ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಪಾದರಾಯನಪುರದ ಕೊರೊನಾ ಸೋಂಕು ಕಂಟಕ ತರುತ್ತಾ ಎನ್ನುವ ಅನುಮಾನ ಶುರುವಾಗಿದೆ.

    ಹೌದು. ಸೋಂಕಿತರ ಮನೆಯ ಸುತ್ತಮುತ್ತ ಆರೇಳು ಬಾರಿ ಓಡಾಡಿದ್ದ ಇಬ್ಬರಿಗೆ ಕೊರೊನಾ ತಗುಲಿರುವುದು ಇಂದು ದೃಢಪಟ್ಟಿದೆ. ಪಾದರಾಯನಪುರದಲ್ಲಿ ರ್‍ಯಾಂಡಮ್ ಟೆಸ್ಟ್ ನಡೆಸಲಾಗುತ್ತಿದ್ದು, 29 ಜನರ ಗಂಟಲ ದ್ರವ  ಹಾಗೂ ರಕ್ತದ ಮಾದರಿಯನ್ನು ಲ್ಯಾಬ್‍ಗೆ ಕಳಿಸಲಾಗಿತ್ತು. ಈ ಪರೀಕ್ಷೆಯಲ್ಲಿ 6ನೇ ಕ್ರಾಸ್ ಮತ್ತು 8ನೇ ಕ್ರಾಸ್‍ನ ಇಬ್ಬರಿಗೆ ಕೊರೊನಾ ಪತ್ತೆಯಾಗಿದೆ.

    20 ವರ್ಷದ ಯುವಕ ರೋಗಿ-554 ಹಾಗೂ 28 ವರ್ಷದ ಪುರುಷ ರೋಗಿ-555 ಇಬ್ಬರೂ ಕಂಟೈನ್‍ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು. ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದ ಇಬ್ಬರಿಗೂ ಉಸಿರಾದ ಸಮಸ್ಯೆ, ನೆಗಡಿ, ಕೆಮ್ಮು ಆರಂಭವಾಗಿತ್ತು. ಬಳಿಕ ಇವರನ್ನು ರ್‍ಯಾಂಡಮ್ ಟೆಸ್ಟ್‌ಗೆ ಒಳಪಡಿಸಿದಾಗ ಕೊರೊನಾ ದೃಢಪಟ್ಟಿದೆ.

    ಪಾದರಾಯನಪುರವು ಬೆಂಗಳೂರಿಗೆ ಕಂಟಕವಾಗುತ್ತಿದೆ ಎಂಬ ಅನುಮಾನ ಶುರುವಾಗಿದೆ. ಈ ಮೊದಲು ನಿಜಾಮುದ್ದೀನ್‍ನಿಂದ ಬಂದ ವ್ಯಕ್ತಿಯಿಂದ ಕೊರೊನಾ ಸೋಂಕು ಪ್ರಾರಂಭವಾಗಿತ್ತು. ಇಂದು ಸಮುದಾಯದ ಮಟ್ಟಕ್ಕೆ ಬಂದಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಲಾಕ್‍ಡೌನ್, ಸೀಲ್‍ಡೌನ್ ಏನೇ ಮಾಡಿದ್ರೂ ಜನ ಮಾತ್ರ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗೆ ಮನೆಯಿಂದ ಹೊರ ಬಂದು ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ರೋಗಿ-557: ದೀಪಾಂಜಲಿ ನಗರದ ನಿವಾಸಿ 63 ವರ್ಷದ ವೃದ್ಧನಿಗೆ ಇಂದು ಸೋಂಕು ದೃಢಪಟ್ಟಿದೆ. ಯಾರಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮೃತ ಮಹಿಳೆ ರೋಗಿ-465ರಿಂದ ಸೋಂಕು ಬಂದಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆಯು ವೃದ್ಧನ ದೂರದ ಸಂಬಂಧಿ ಎನ್ನಲಾಗುತ್ತಿದೆ.

    ಕಳೆದ 10 ದಿನಗಳಿದ ವೃದ್ಧನಿಗೆ (ರೋಗಿ-557) ಉಸಿರಾಟದ ಸಮಸ್ಯೆ ಇತ್ತು. ಟೆಸ್ಟ್ ಮಾಡಿಸಿದಾಗ ಸೋಂಕು ಪತ್ತೆಯಾಗಿದೆ. ಈ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಮೃತ ಮಹಿಳೆ (ರೋಗಿ-465) ಪ್ರಯಾಣದ ಹಿನ್ನಲೆ ಬೆಂಗಳೂರಿಗರನ್ನು ಬೆಚ್ಚಿಬೀಳಿಸುವಂತಿದೆ. ನೆಗಡಿ, ಕೆಮ್ಮು, ಶೀತ ಜ್ವರದಿಂದ ಬಳಲುತ್ತಿದ್ದ ಮಹಿಳೆಯ ಪತಿ ಏಪ್ರಿಲ್ 2ರಂದು ಮೃತಪಟ್ಟಿದ್ದ. ಹೀಗಾಗಿ ಕುಟುಂಬವು ಟಿ.ಆರ್ ಮಿಲ್‍ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿತ್ತು. 10 ದಿನದ ಬಳಿಕ ಮಹಿಳೆಗೂ ನೆಗಡಿ, ಕೆಮ್ಮು, ಶೀತ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ರಾಜಾಜಿನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ ಮಹಿಳೆಯು ಹಂಪಿನಗರದಿಂದ ದೀಪಾಂಜಲಿ ನಗರದ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದರು.

    ಮಹಿಳೆಯ ಸಂಪರ್ಕದಲ್ಲಿದ್ದ ಆಕೆಯ ಅಕ್ಕ, ಮಗ ಮತ್ತು ಅಳಿಯನಿಗೆ (ರೋಗಿ-498, 499 ಹಾಗೂ 500) ಸೋಂಕು ತಗುಲಿದೆ. ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಮೃತ ಮಹಿಳೆಯು ಹಂಪಿನಗರ, ದೀಪಾಂಜಲಿ ನಗರ ಮತ್ತು ಮೂಡಲ ಪಾಳ್ಯದಲ್ಲಿ ಓಡಾಡಿದ್ದಳು. ಹೀಗಾಗಿ ಈ ಮೂರೂ ಪ್ರದೇಶಗಳಲ್ಲಿ ಹೆಮ್ಮಾರಿ ಕಂಟಕ ಉಂಟು ಮಾಡುವ ಲಕ್ಷಣಗಳು ಕಂಡುಬರುತ್ತಿವೆ.

  • ಯಾರ ಸಂಪರ್ಕ ಇಲ್ಲ, ಬೆಂಗ್ಳೂರಿನ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ? – ಪ್ರಶ್ನೆಗೆ ಉತ್ತರ ಸಿಕ್ತು

    ಯಾರ ಸಂಪರ್ಕ ಇಲ್ಲ, ಬೆಂಗ್ಳೂರಿನ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ? – ಪ್ರಶ್ನೆಗೆ ಉತ್ತರ ಸಿಕ್ತು

    ಬೆಂಗಳೂರು: ಕರ್ನಾಟಕದಲ್ಲಿ ಇಂದು 8 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಯಾರ ಸಂಪರ್ಕಕ್ಕೂ ಸಿಗದ ಪಾದರಾಯನಪುರದ ವ್ಯಕ್ತಿಗೆ ಕೊರೊನಾ ಬಂದಿದೆ.

    48 ವರ್ಷದ ವ್ಯಕ್ತಿ(ರೋಗಿ 513) ನಾನು ಲಾಕ್‍ಡೌನ್ ಬಳಿಕ ಮನೆಯಲ್ಲೇ ಇದ್ದೆ ಹೊರಗಡೆ ಹೋಗಿಲ್ಲ ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೇ ಪಾಸಿಟಿವ್ ಅಲ್ಲದ ವ್ಯಕ್ತಿಗಳ ಜೊತೆಗೂ ನಾನು ಸಂಪರ್ಕ ಹೊಂದಿಲ್ಲ. ವಿದೇಶಕ್ಕೆ ಹೋಗಿಲ್ಲ. ವಿದೇಶ ಹೋಗಿ ಬಂದವರ ಜೊತೆ ಸಂಪರ್ಕವನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

    ಯಾರ ಸಂಪರ್ಕಕ್ಕೆ ಬಾರದೇ ಇದ್ದರೂ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆಗೆ  ಆರೋಗ್ಯ ಅಧಿಕಾರಿಗಳಿಗೆ ಕೊನೆಗೆ ಉತ್ತರ ಸಿಕ್ಕಿದೆ. ಪಾದರಾಯನಪುರ ಸೀಲ್‍ಡೌನ್ ಆಗುವುದಕ್ಕೆ ಮೊದಲೇ ಸೋಂಕಿತರು ಇದ್ದ ಜಾಗದಲ್ಲಿ ನಾನು ಐದು, ಆರು ಬಾರಿ ಓಡಾಡಿದ್ದೆ ಎಂದು ವ್ಯಕ್ತಿ ಹೇಳಿದ್ದರಿಂದ ಎದ್ದಿದ್ದ ಅನುಮಾನ ಎಲ್ಲ ಈಗ ಬಗೆ ಹರಿದಿದೆ.

    ಈಗಾಗಲೇ ಪಾದರಾಯನಪುರದಲ್ಲಿ ಜಮಾತ್‍ಗೆ ಹೋಗಿ ಬಂದಿದ್ದ ವ್ಯಕ್ತಿಯಿಂದ 23 ಜನರಿಗೆ ಸೋಂಕು ಬಂದಿದೆ. ಈಗ ಇಂದು ಬಂದಿರುವ ವ್ಯಕ್ತಿಗೆ ಕೊರೊನಾ ಬಂದಿರುವುದು ಆರೋಗ್ಯ ಅಧಿಕಾರಿಗಳ ತಲೆಕೆಡಿಸಿದೆ.

    ಈ ವ್ಯಕ್ತಿಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ಈತನ ಮನೆಯ ಸುತ್ತ ಇದ್ದ 10ಕ್ಕೂ ಹೆಚ್ಚು ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು ಎಲ್ಲರನ್ನು ಪರೀಕ್ಷೆ ಒಳಪಡಿಸಲಾಗುತ್ತದೆ.

    ಪಾದರಾಯನಪುರದಲ್ಲಿ ಸಮುದಾಯಕ್ಕೆ ಕೊರೊನಾ ಹಬ್ಬಿದ್ಯಾ ಎಂದು ತಿಳಿಯಲು ರ್‍ಯಾಂಡಮ್ ಆಗಿ ಅಲ್ಲಿದ್ದ 25 ಜನರನ್ನು ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ 24 ಜನರ ಫಲಿತಾಂಶ ನೆಗೆಟಿವ್ ಬಂದಿದ್ದು, 48 ವರ್ಷದದ ವ್ಯಕ್ತಿ ಫಲಿತಾಂಶ ಪಾಸಿಟಿವ್ ಬಂದಿದೆ.

  • ಪಾದರಾಯನಪುರ ಪ್ರಕರಣದ ಪ್ರಮುಖ ಆರೋಪಿಯ ಬಂಧನ

    ಪಾದರಾಯನಪುರ ಪ್ರಕರಣದ ಪ್ರಮುಖ ಆರೋಪಿಯ ಬಂಧನ

    ಬೆಂಗಳೂರು: ಪಾದರಾಯನಪುರದಲ್ಲಿ ಚೆಕ್ ಪೋಸ್ಟ್ ನಾಶ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಜೆಜೆ ನಗರ ಪೊಲೀಸರಿಂದ ಪಾದರಾಯನಪುರ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್‍ನನ್ನು ಬಂಧಿಸಲಾಗಿದ್ದು, ಕಳೆದ ಒಂದು ವಾರದಿಂದ ಇರ್ಫಾನ್‍ಗಾಗಿ ಪೊಲೀಸರು ಬಲೆ ಬೀಸಿದ್ದರು. ಆದರೆ ಬಂಧನ ಸಾಧ್ಯವಾಗಿರಲಿಲ್ಲ. ಪ್ರಮುಖ ಆರೋಪಿ ಬೆಂಗಳೂರಿನಲ್ಲೇ ತಲೆಮರೆಸಿಕೊಂಡಿದ್ದ. ಇದೀಗ ಇರ್ಫಾನ್‍ನನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 150ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಗಲಾಟೆಯ ಮಾಸ್ಟರ್‍ಮೈಂಡ್ ಇರ್ಫಾನ್‍ನನ್ನೂ ಬಂಧಿಸಿದ್ದಾರೆ. ಇರ್ಫಾನ್ ಫರ್ಜುವಾ ಜೊತೆ ಸೇರಿ ದಂಗೆ ಎಬ್ಬಿಸಿ ತಲೆಮರಿಸಿಕೊಂಡಿದ್ದ. ಕೆಎಫ್‍ಡಿ(ಕರ್ನಾಟಕ ಫೋರಂ ಫಾರ್ ಡಿಗ್ನಿಟಿ) ಇರ್ಫಾನ್ ಎಂದು ಗುರುತಿಸಿಕೊಂಡಿದ್ದ ಆರೋಪಿ, ತನ್ನ ಜೊತೆ ಇದ್ದ ಹುಡುಗರಿಗೆ ಬ್ಯಾರಿಕೇಡ್ ಹಾಗೂ ಚೆಕ್‍ಪೋಸ್ಟ್‍ನ ಪೆಂಡಾಲ್ ಧ್ವಂಸಗೊಳಿಸುವಂತೆ ಸೂಚಿಸಿದ್ದ ಎನ್ನಲಾಗಿದೆ. ಕಳೆದೊಂದು ವಾರದಿಂದ ಈತನಿಗಾಗಿ ಜೆಜೆ ನಗರ ಪೊಲೀಸರು ಹುಡುಕಾಟ ನಡೆಸಿದ್ದು, ಇದೀಗ ಬಂಧಿಸಿದ್ದಾರೆ.

    ಇರ್ಫಾನ್ ಯಾರು..?
    ಕೆಎಫ್ ಡಿಯ ಇರ್ಫಾನ್ ಕೇವಲ ಕೆಎಫ್ ಡಿ ಅಲ್ಲಿ ಇರಲಿಲ್ಲ. ಕಳೆದ ಬಾರಿ ಎಸ್‍ಡಿಪಿಐಯಿಂದ ಕಾರ್ಪೋರೇಷನ್ ಎಲೆಕ್ಷನ್ ಗೆ ನಿಂತು ಸೋತಿದ್ದ. ಈ ಮೂಲಕ ಎಸ್ ಡಿಪಿಐ ಅಲ್ಲಿ ಕೂಡ ಗುರುತಿಸಿಕೊಂಡಿದ್ದ. ಹಾಲಿ ಕಾರ್ಫೊರೇಟರ್ ಇಮ್ರಾನ್ ಪಾಷಾ ವಿರುದ್ಧ ತೊಡೆ ತಟ್ಟೋದೆ ಈತನ ಉದ್ದೇಶವಾಗಿದೆ.

    ಸದ್ಯ ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ದಂಡು ನೆರೆದಿದ್ದು, ಇಂದು ಬೆಳಗ್ಗೆ ಖಾಕಿಗಳಿಂದ ಪಥಸಂಚಲನ ನಡೆಯಿತು. ದೊಂಬಿ ಬಳಿಕ ಸೀಲ್‍ಡೌನ್ ಪಾದರಾಯನಪುರದಲ್ಲಿ ಖಾಕಿ ಭದ್ರಕೋಟೆಯಿದ್ದು, ಗಲಭೆ ಎಬ್ಬಿಸಿದ 54 ಪುಂಡರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ದೊಂಬಿ ಸಂಬಂಧ ಮತ್ತೆ 80 ಮಂದಿಯನ್ನ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.

  • ಪಾದರಾಯನಪುರ ಪುಂಡರಿಂದ್ಲೇ ಅವಾಂತರ- ಮಾತ್ರೆ ತಗೊಂಡು ಜ್ವರ ಮುಚ್ಚಿಟ್ಟಿದ್ರಾ?

    ಪಾದರಾಯನಪುರ ಪುಂಡರಿಂದ್ಲೇ ಅವಾಂತರ- ಮಾತ್ರೆ ತಗೊಂಡು ಜ್ವರ ಮುಚ್ಚಿಟ್ಟಿದ್ರಾ?

    ಬೆಂಗಳೂರು: ಪಾದರಾಯನಪುರದ ಪುಂಡರು ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಗಲಭೆ ಎಬ್ಬಿಸಿದ್ದ 124 ಮಂದಿಯಲ್ಲಿ ಐವರಿಗೆ ಕೊರೊನಾ ಸೋಂಕು ಹಬ್ಬಿದೆ. ಇವರು ಕಾಲಿಟ್ಟಿದ್ದ ರಾಮನಗರ ಜಿಲ್ಲೆಗೂ ಕೊರೊನಾ ಸೋಂಕು ಹಬ್ಬುವ ಭೀತಿ ಎದುರಾಗಿದೆ. ಗ್ರೀನ್‍ಝೋನ್‍ನಿಂದ ರಾಮನಗರವನ್ನು ಹೊರಗಿಡಲಾಗಿದ್ದು, ಈಗ ಹಾಟ್‍ಸ್ಪಾಟ್ ಆಗುವ ಆತಂಕ ಉಂಟಾಗಿದೆ.

    ಪಾದರಾಯನಪುರದ ಪುಂಡರಲ್ಲಿ ಐವರಿಗೆ ಕೊರೊನಾ ಹೇಗೆ ಬಂತು ಅನ್ನೋದು ಈಗ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಪುಂಡರು ಕೊರೊನಾ ಸೋಂಕಿತರ ಪ್ರಾಥಮಿಕ ಅಥವಾ ಸೆಕೆಂಡರಿ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ಇಲ್ಲ. ಸದ್ಯಕ್ಕೆ ಇವರಿಗೆ ಕೊರೊನಾ ಹಬ್ಬಿದ್ದು ಹೇಗೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ.

    ಜ್ವರ ಮುಚ್ಚಿಟ್ಟಿದ್ರಾ ಪುಂಡರು?
    ಅಂದಹಾಗೆ ಪಾದರಾಯನಪುರದಲ್ಲಿ ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಿ ಬ್ಯಾರಿಕೇಡ್, ಪೆಂಡಾಲ್‍ಗಳನ್ನ ಧ್ವಂಸಗೊಳಿಸಿದ್ದ ಈ ಪಾಪಿಗಳು ತಮಗೆ ಕೊರೊನಾದ ಲಕ್ಷಣ ಇದ್ದರೂ ಮುಚ್ಚಿಟ್ಟಿದ್ರಾ ಎಂಬ ಅನುಮಾನ ಮೂಡಿದೆ. ಜ್ವರ, ಶೀತ ಮತ್ತು ಕೆಮ್ಮಿನ ಮಾತ್ರೆಗಳನ್ನು ಸೇವಿಸಿ ಯಾರಿಗೂ ಕೊರೊನಾ ಬಗ್ಗೆ ಅನುಮಾನ ಬರದಂತೆ ಊರೆಲ್ಲ ಓಡಾಡಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ.

    ಕೈಕೊಟ್ಟ ರ‍್ಯಾಪಿಡ್ ಟೆಸ್ಟ್ ಕಿಟ್:
    ಲಾಕ್‍ಡೌನ್ ಘೋಷಣೆಯಾಗಿ ಇಂದಿಗೆ 32ನೇ ದಿನ. ಹೀಗಿದ್ದರೂ ಇನ್ನೂ ಕರ್ನಾಟಕದಲ್ಲಿ ರ‍್ಯಾಪಿಡ್ ಟೆಸ್ಟ್ ಆರಂಭವಾಗಿಲ್ಲ. ರ‍್ಯಾಪಿಡ್ ಟೆಸ್ಟ್ ಮಾಡಿದ್ದರೆ ಆಗ ಈ ಪಾದರಾಯನಪುರದ ಪುಂಡರಲ್ಲಿ ಕೊರೊನಾ ಲಕ್ಷಣ ಇದ್ದಿದ್ದರ ಸುಳಿವು ಸಿಗುತ್ತಿತ್ತು ಎನ್ನಲಾಗಿದೆ.

    ಯಾಕೆಂದರೆ ಗಲಭೆಗೂ ಮೊದಲೇ ಪಾದರಾಯನಪುರ ಕೊರೊನಾ ಹಾಟ್‍ಸ್ಪಾಟ್ ಏರಿಯಾ ಎಂದು ಘೋಷಣೆ ಆಗಿತ್ತು. ಸೀಲ್‍ಡೌನ್ ಕೂಡ ಮಾಡಲಾಗಿತ್ತು. ಸೀಲ್‍ಡೌನ್ ಏರಿಯಾದಲ್ಲಿ ರ‍್ಯಾಪಿಡ್ ಟೆಸ್ಟ್ ಗೆ ಸೂಚಿಸಲಾಗಿತ್ತು. ಆದರೆ ಚೀನಾದಿಂದ ತರಿಸಿದ ರ‍್ಯಾಪಿಡ್ ಟೆಸ್ಟ್ ಕಿಟ್‍ಗಳಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಪರೀಕ್ಷೆಯನ್ನ ಸ್ಥಗಿತಗೊಳಿಸಲಾಗಿತ್ತು. ಇವೆಲ್ಲವೂ ಪಾದರಾಯನಪುರದ ಕೊರೊನಾ ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸಿತಾ ಅನ್ನೋ ಪ್ರಶ್ನೆ ಕಾಡುತ್ತಿದೆ.

    ಮಾಹಿತಿ ಕೊಡದೇ ಸತಾಯಿಸ್ತಿದ್ದಾರೆ ಪುಂಡರು:
    ಈ ಪಾದರಾಯನಪುರ ಪುಂಡರ ಆಟಾಟೋಪ ಒಂದೆರಡಲ್ಲ. ಸೋಂಕು ಕಾಣಿಸಿಕೊಂಡವರು ತಾವು ಯಾರ ಜೊತೆಗೆ ಸಂಪರ್ಕಕ್ಕೆ ಮಾಡಿದ್ದೀವಿ, ಎಲ್ಲೆಲ್ಲಿ ಹೋಗಿದ್ದೀವಿ ಅನ್ನೋದರ ಮಾಹಿತಿ ಕೊಡಬೇಕು. ಆದರೆ ಅದ್ಯಾವುದನ್ನೂ ಈ ಪುಂಡರು ಕೊಡುತ್ತಿಲ್ಲ. ಹೀಗಾಗಿ ಇವರ ಕಾಲ್ ರೆಕಾರ್ಡ್ ಡೀಟೇಲ್ಸ್ ಹುಡುಕುವ ಮೂಲಕ ಟ್ರೇಸ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಟಿಪ್ಪು ನಗರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ತನಗೆ ಎರಡನೇ ಪತ್ನಿ ಇದ್ದ ವಿಚಾರವನ್ನೇ ಮುಚ್ಟಿಟ್ಟಿದ್ದ. ಆತನ ಕಾಲ್‍ ಟ್ರೇಸ್ ಮಾಡಿದಾಗಲೇ ಸತ್ಯ ಬಯಲಾಗಿತ್ತು.

    ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬರೋಬ್ಬರಿ 30 ಕೊರೊನಾ ಪಾಸಿಟಿವ್ ಪ್ರಕರಣ ವರದಿ ಆಗಿದೆ. ಇದರಲ್ಲಿ ಪಾದರಾಯನಪುರದಲ್ಲಿ 23 ಕೇಸ್ ಮತ್ತು ಟಿಪ್ಪು ನಗರದಲ್ಲಿ 7 ಪ್ರಕರಣ ವರದಿ ಆಗಿದೆ.

  • ಸಾರ್ ನಮ್ಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ, ನಮ್ಮನ್ನ ಕ್ವಾರಂಟೈನ್ ನಲ್ಲಿ ಇಡಬೇಡಿ – ಎಚ್‍ಡಿಕೆ ಬಳಿ ಜೈಲು ಸಿಬ್ಬಂದಿ ಅಳಲು

    ಸಾರ್ ನಮ್ಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ, ನಮ್ಮನ್ನ ಕ್ವಾರಂಟೈನ್ ನಲ್ಲಿ ಇಡಬೇಡಿ – ಎಚ್‍ಡಿಕೆ ಬಳಿ ಜೈಲು ಸಿಬ್ಬಂದಿ ಅಳಲು

    – ಯಾರೊ ಮಾಡಿದ ತಪ್ಪಿಗೆ ನಾವು ನೋವು ಅನುಭವಿಸುವಂತಾಗಿದೆ

    ರಾಮನಗರ: ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದ್ದ 120 ಮಂದಿ ಪಾದರಾಯನಪುರ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮೂವರನ್ನು ಶಂಕಿತರು ಎಂದು ಗುರುತಿಸಲಾಗಿದೆ. ಹೀಗಾಗಿ ಜೈಲಿನ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲು ಚಿಂತಿಸಲಾಗುತ್ತಿದೆ. ಈ ಬಗ್ಗೆ ತಿಳಿದ ಸಿಬ್ಬಂದಿ ಮಾತ್ರ ನಮ್ಮನ್ನು ಕ್ವಾರಂಟೈನ್ ಮಾಡಬೇಡಿ. ನಮ್ಮನ್ನು ಕ್ವಾರಂಟೈನ್ ಮಾಡುವುದಾದರೆ ನಮ್ಮ ಕ್ವಾಟರ್ಸ್ ನಲ್ಲೇ ಕ್ವಾರಂಟೈನ್ ಮಾಡಲು ಹೇಳಿ. ನಮಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ ಎಂದು ಮಾಜಿ ಸಿಎಂ ಹೆಚ್‍ಡಿಕೆ ಬಳಿ ಅಳಲನ್ನು ತೋಡಿಕೊಂಡಿದ್ದಾರೆ.

    ಪಾದರಾಯನಪುರ ಆರೋಪಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಹಂಚಿದ್ದ ರಾಮನಗರ ನಗರಸಭೆ 15 ಮಂದಿ ಸಿಬ್ಬಂದಿಗಳನ್ನು ಕ್ವಾರಂಟೈನ್‍ನಲ್ಲಿ ಇರಿಸಲು ಚಿಂತನೆ ನಡೆಸಲಾಗಿದೆ. ಸದ್ಯ ಗುರುವಾರ ಜೈಲಿಗೆ ಭೇಟಿ ನೀಡಿದ್ದವರನ್ನು ಒಂದೆಡೆ ಕರೆಸಿ ಮಾತುಕತೆ ಮಾಡಲಾಗಿದೆ. ಇದರಿಂದ ಕಳೆದ 3 ದಿನಗಳಿಂದ ಜೈಲಿನಲ್ಲಿ ಕಾರ್ಯ ನಿರ್ವಹಿಸಿದ್ದ ಸಿಬ್ಬಂದಿ ಆತಂಕ್ಕಕ್ಕೆ ಒಳಗಾಗಿದ್ದಾರೆ. ಮೂರು ದಿನಗಳಿಂದ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದ ಸಿಬ್ಬಂದಿ ಹಾಗೂ ಪೊಲೀಸರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ ಮಾಡಲು ಚಿಂತಿಸಲಾಗಿದ್ದು, ಜೈಲು ಸಿಬ್ಬಂದಿ ಆರೋಗ್ಯ ಪರೀಕ್ಷೆ ನಡೆಸಿ ಕ್ವಾರಂಟೈನ್ ಮಾಡುವ ಕುರಿತು ಚರ್ಚೆ ಮಾಡಲಾಗಿದೆ.

    ಈ ಮಧ್ಯೆ ಕುಮಾರಸ್ವಾಮಿ ಬಳಿ ಕಾರಾಗೃಹ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ಕ್ವಾರಟೆಂನ್‍ನಲ್ಲಿ ಇಡಬೇಡಿ. ಯಾರೋ ಮಾಡಿದ ತಪ್ಪಿಗೆ ನಾವು ನೋವು ಅನುಭವಿಸುವಂತಾಗಿದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದ್ದು, ನಿಮ್ಮ ಮನೆಗಳಲ್ಲಿಯೇ ಇರಿ ಯಾರು ಹೊರಬರಬೇಡಿ ಅಂತಾ ಜೈಲು ಸಿಬ್ಬಂದಿಗೆ ಎಚ್‍ಡಿಕೆ ಮನವಿ ಮಾಡಿದರು.

    ಹಾಗೆಯೇ ಜೈಲಿನ ಮಹಿಳಾ ಸಿಬ್ಬಂದಿ, ಸಾರ್ ನಮೆಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ದಯಮಾಡಿ ನಮ್ಮನ್ನು ಕ್ವಾಟ್ರೆಸ್‍ನಲ್ಲೇ ಕ್ವಾರೆಂಟೈನ್ ಮಾಡೋಕೆ ಹೇಳಿ. ಬೇರೆ ಕಡೆ ಕ್ವಾರೆಂಟೈನ್ ಮಾಡಿಸಬೇಡಿ. ಪಾದರಾಯನಪುರ ಆರೋಪಿಗಳನ್ನ ಇಲ್ಲಿಗೆ ಕರೆ ತರುವಾಗ ನಮ್ಮ ಅಭಿಪ್ರಾಯ ಕೇಳಲಿಲ್ಲ. ಕನಿಷ್ಟ ಅಗತ್ಯ ಸೌಕರ್ಯಗಳನ್ನೂ ನೀಡಿಲ್ಲ. ಮಾಸ್ಕ್, ಸ್ಯಾನಿಟೈಸರ್ ಸಹ ನಮಗೆ ನೀಡಿಲ್ಲ. ದಯಮಾಡಿ ಬೇರೆ ಕಡೆ ಕ್ವಾರೆಂಟೈನ್ ಮಾಡಿಸಬೇಡಿ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನು ತಿಳಿದ ಎಚ್‍ಡಿಕೆ ಅವರು ಜಿಲ್ಲಾಧಿಕಾರಿಗೆ ಕರೆ ಮಾಡಿ, ಜೈಲು ಸಿಬ್ಬಂದಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ.

  • ರಾಮನಗರ ಜೈಲಿನಲ್ಲಿ ಐವರಿಗೆ ಕೊರೊನಾ ದೃಢ: ಅಶ್ವತ್ಥನಾರಾಯಣ

    ರಾಮನಗರ ಜೈಲಿನಲ್ಲಿ ಐವರಿಗೆ ಕೊರೊನಾ ದೃಢ: ಅಶ್ವತ್ಥನಾರಾಯಣ

    – ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಸಲ್ಲದು
    – ಡಿಕೆಶಿಗೆ ಡಿಸಿಎಂ ಟಾಂಗ್

    ಬೆಂಗಳೂರು: ರಾಮನಗರ ಜೈಲಿನಲ್ಲಿ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಉಪಮುಖ್ಯಮಂತ್ರಿ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿ ಬಳಿಕ ಮಾತನಾಡಿದ ಅವರು, ರಾಮನಗರದಲ್ಲಿರುವ ಖೈದಿಗಳನ್ನು ವರ್ಗಾಯಿಸುವ ವೇಳೆ ವಿರೋಧ ಇತ್ತು. ಪರಪ್ಪನ ಅಗ್ರಹಾರ ದೊಡ್ಡ ಜೈಲು, ರಾಮನಗರ ಚಿಕ್ಕ ಜೈಲು. ಹಾಗಾಗಿ ಪಾದರಾಯನಪುರದ ಆರೋಪಿಗಳನ್ನು ರಾಮನಗರ ಜೈಲಿನಲ್ಲಿ ಇಡಲಾಯ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 5 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

    ರಾಮನಗರ ಜೈಲಿನ 19 ಮಂದಿ ಖೈದಿಗಳನ್ನು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುತ್ತೇವೆ. ಪಾಸಿಟಿವ್ ಬಂದಿರುವ 5 ಮಂದಿಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ. ಉಳಿದವರನ್ನು ಹಜ್ ಭವನಕ್ಕೆ ಕಳುಹಿಸುತ್ತೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ನಾವು ಮುನ್ನೆಚ್ಚಿರಕ ಕ್ರಮಗಳನ್ನು ಕೈಗೊಂಡೇ ಆರೋಪಿಗಳನ್ನು ರಾಮನಗರ ಜೈಲಿನಲ್ಲಿ ಇರಿಸಿದ್ದೆವು. ಇಂತಹ ಪರಿಸ್ಥಿತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರಕ್ಕೆ ಸಲಹೆ ನೀಡಿಬೇಕೇ ಹೊರತು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಯಾವುದೇ ಕಾರಣಕ್ಕೂ ಜನರನ್ನು ಪ್ರಚೋದನೆ ಮಾಡಬಾರದು. ಈವರೆಗೂ ಸಹಕಾರ ಕೊಟ್ಟಿದ್ದಾರೆ. ಅವರು ಒಂದು ಪಕ್ಷದ ರಾಜ್ಯಾಧ್ಯಕ್ಷರು, ಪ್ರಚೋದನೆ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಟಾಂಗ್ ಕೊಟ್ಟರು.

    121 ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದು, ಅದರಲ್ಲಿ ಇಬ್ಬರು ಆರೋಪಿಗಳಿಗೆ ಸೋಂಕಿನ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಗುರುವಾರ ತಡರಾತ್ರಿಯೇ ಇಬ್ಬರು ಸೋಂಕಿತ ಆರೋಪಿಗಳನ್ನು ಆರೋಗ್ಯ ಸಿಬ್ಬಂದಿ ಶಿಫ್ಟ್ ಮಾಡಿದ್ದರು. ಜೈಲಿನಿಂದ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೋಂಕಿತರ ಶಿಫ್ಟ್ ಮಾಡಿದ್ದು, ಆರೋಗ್ಯ ಸಿಬ್ಬಂದಿ ಮತ್ತು ಜಿಲ್ಲಾಡಳಿತ ಜೈಲಿನ ಸುತ್ತಮುತ್ತ ಸೀಲ್‍ಡೌನ್ ಮಾಡಿದ್ದಾರೆ. ಈ ಬೆನ್ನಲ್ಲೇ ಐವರಿಗೆ ಸೋಂಕು ತಗುಲಿರುವುದನ್ನು ಅಶ್ವತ್ಥನಾರಾಯಣ ಅವರು ದೃಢಪಡಿಸಿದ್ದಾರೆ.

    ರಾಮನಗರ ಜೈಲಿನಲ್ಲಿರುವ ಕೈದಿಗಳಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಇತ್ತ ಬೆಂಗಳೂರು ಪೊಲೀಸರಿಗೂ ಆತಂಕ ಶುರುವಾಗಿದೆ. ಹೀಗಾಗಿ ಪಾದರಾಯನಪುರ ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳನ್ನು ಅಟ್ಟಾಡಿಸಿ ಸೆರೆ ಹಿಡಿದಿದ್ದಾರೆ. ಮೂರು ರಾತ್ರಿ- ಹಗಲು ಕಾರ್ಯಚರಣೆ ನಡೆಸಿ ಸುಮಾರು 135 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಎಲ್ಲಾ ಆರೋಪಿಗಳನ್ನು ರಾಮನಗರ ಜೈಲಿಗೆ ಬಿಟ್ಟು ಬಂದಿದ್ದರು. ಸದ್ಯ ರಾಮನಗರ ಜೈಲಿನಲ್ಲಿರುವ ಇಬ್ಬರು ಆರೋಪಿಗಳಿಗೆ ಪಾಸಿಟಿವ್ ಬಂದಿದ್ದು, ಇದೀಗ ಮತ್ತೆ ಮೂವರಿಗೆ ಕೊರೊನಾ ಪಾಸಿಟಿವ್ ಇರೋ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಆರೋಪಿಗಳನ್ನು ಬೆಂಗಳೂರಿಗೆ ವಾಪಸ್ ಕರೆ ತರೋ ಸಾಧ್ಯತೆಗಳಿವೆ.

  • ಪಾದರಾಯನಪುರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ್ರ ವಿರುದ್ಧ ಪ್ರಕರಣ ದಾಖಲು

    ಪಾದರಾಯನಪುರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ್ರ ವಿರುದ್ಧ ಪ್ರಕರಣ ದಾಖಲು

    ಚಿಕ್ಕಬಳ್ಳಾಪುರ: ಭಾರತ್ ಲಾಕ್ ಡೌನ್ ಉಲ್ಲಂಘಿಸಿ ಬೆಂಗಳೂರಿನ ಪಾದರಾಯನಪುರ ಸೇರಿದಂತೆ ಜಯನಗರ, ಚಾಮರಾಜಪೇಟೆಯಿಂದ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮರಾಠಿಪಾಳ್ಯಕ್ಕೆ ಆಗಮಿಸಿದ ಐವರ ಮೇಲೆ ಪ್ರಕರಣ ದಾಖಲಾಗಿದೆ.

    ಪಾದರಾಯನಪುರದಲ್ಲಿ ಗಲಾಟೆ ಪ್ರಕರಣದ ನಂತರ ಕದ್ದುಮುಚ್ಚಿ ಪಾದರಾಯನಪುರ ಹಾಗೂ ಚಾಮರಾಜಪೇಟೆಯ ತಲಾ ಇಬ್ಬರು ಹಾಗೂ ಜಯನಗರದ ಓರ್ವ ಸೇರಿ ಐದು ಮಂದಿ ಆಟೋ ಮೂಲಕ ಮರಾಠಿಪಾಳ್ಯದ ಸಂಬಂಧಿಕರ ಮನೆಗೆ ಆಗಮಿಸಿದ್ರು. ಈ ವೇಳೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು 5 ಮಂದಿಯನ್ನ ವಶಕ್ಕೆ ಪಡೆದು ಕ್ವಾರಂಟೈನ್ ಮಾಡಿದ್ದಾರೆ. ಈ ಐದು ಮಂದಿ ವಿರುದ್ಧವೂ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದೇ ಗೌರಿಬಿದನೂರು ತಾಲೂಕು ಡಿ ಪಾಳ್ಯ ಗ್ರಾಮದ 4 ಮಂದಿ ಹಿಂದೂಪುರಕ್ಕೆ ಹೋಗಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ವಾಪಾಸ್ಸಾಗಿದ್ರು. ಹೀಗಾಗಿ ಮಾಹಿತಿ ತಿಳಿದ ಪೊಲೀಸರ 4 ಮಂದಿಯನ್ನ ಕ್ವಾರಂಟೈನ್ ಗೆ ಓಳಪಡಿಸಿದ್ರು. ಈ 4 ಮಂದಿಯ ಗಂಟಲ ದ್ರವದ ಡೆಸ್ಟ್ ಮಾಡಿಸಿದ್ದು ನೆಗೆಟಿವ್ ಬಂದಿದೆ.

    ಲಾಕ್ ಡೌನ್ ಉಲ್ಲಂಘಿಸಿ ನೆರೆಯ ರಾಜ್ಯಕ್ಕೆ ಹೋಗಿ ಬಂದ ಹಿನ್ನೆಲೆಯಲ್ಲಿ 4 ಮಂದಿ ವಿರುದ್ಧ ಕೂಡ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟು 9 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 168, 169, 170 ಅಡಿ ಪ್ರಕರಣ ದಾಖಲಿಸಲಾಗಿದೆ.