Tag: Package

  • 20.97 ಲಕ್ಷ ಕೋಟಿ ರೂ. ಪ್ಯಾಕೇಜ್ ಲೆಕ್ಕ ಕೊಟ್ಟ ಸೀತಾರಾಮನ್

    20.97 ಲಕ್ಷ ಕೋಟಿ ರೂ. ಪ್ಯಾಕೇಜ್ ಲೆಕ್ಕ ಕೊಟ್ಟ ಸೀತಾರಾಮನ್

    – 1 ವರ್ಷದವರೆಗೆ ಕಂಪನಿಗಳ ದಿವಾಳಿ ಕ್ರಮ ಇಲ್ಲ

    ನವದೆಹಲಿ: ಕೊರೊನಾ ಪರಿಹಾರ ಪ್ಯಾಕೇಜ್‍ನ ಐದನೇ ಮತ್ತು ಕೊನೆಯ ಹಂತದ ಘೋಷಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವಿವರಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‍ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಲಾಗಿದೆ ಎಂದು ವಿವರಿಸಿದ್ದಾರೆ.

    ನಿರ್ಮಲಾ ಸೀತಾರಾಮನ್ ಅವರು ಇಂದು ನರೇಗಾ, ಆರೋಗ್ಯ, ಶಿಕ್ಷಣ, ವ್ಯವಹಾರ, ಕಂಪನಿಗಳ ಕಾಯ್ದೆಗಳಿಗೆ ಸಂಬಂಧಿಸಿದ ಕೆಲವು ಮಾಹಿತಿ ಪ್ರಕಟಿಸಿದರು. ನರೇಗಾ ಯೋಜನೆಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ. ನೀಡಲಾಗಿದೆ. ಒಂದು ವರ್ಷದವರೆಗೆ ಕಂಪನಿಗಳ ಮೇಲೆ ಯಾವುದೇ ದಿವಾಳಿತ ಕ್ರಮ ಇರುವುದಿಲ್ಲ. ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳನ್ನು ತೆರೆಯಲಾಗುವುದು. ಕೊರೊನಾ ವೈರಸ್ ಬಳಿಕ ಕೇಂದ್ರ ಸರ್ಕಾರ ಒಟ್ಟು 20,97,530 ಕೋಟಿ ರೂ. ಪ್ಯಾಕೇಜ್ ಘೋಷಿಸಿವೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ಉಂಟು ಮಾಡಿದ ಸಂಕಷ್ಟದಿಂದಾಗಿ ರಾಜ್ಯಗಳು ಮತ್ತು ಕೇಂದ್ರದ ಆದಾಯ ಕಡಿಮೆಯಾಗುತ್ತಿದೆ. ಇದರ ಹೊರತಾಗಿಯೂ ರಾಜ್ಯಗಳಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದೇವೆ. ಸಾಲ ಮಿತಿಯನ್ನು ಶೇ.3ರಿಂದ ಶೇ.5ಕ್ಕೆ ಏರಿಸಲಾಗಿದೆ. ಇದರಿಂದ ರಾಜ್ಯಗಳಿಗೆ ಹೆಚ್ಚುವರಿ 4.28 ಲಕ್ಷ ಕೋಟಿ ರೂ. ದೊರೆಯುತ್ತದೆ ಎಂದು ಸೀತಾರಾಮಾನ್ ತಿಳಿಸಿದ್ದಾರೆ.

    ಪ್ರಧಾನಿ ಮೋದಿ ಅವರ ಭಾಷಣಕ್ಕೂ ಮುನ್ನ 1,92,800 ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿತ್ತು. ಆ ಬಳಿಕ ವಿತ್ತ ಸಚಿವೆ ಸೀತಾರಾಮನ್ ಅವರು ಮೊದಲ ಸುದ್ದಿಗೋಷ್ಠಿಯಲ್ಲಿ 5,94,550 ಕೋಟಿ ರೂ, ಎರಡನೇ ಸುದ್ದಿಗೋಷ್ಠಿ 3.10 ಲಕ್ಷ ಕೋಟಿ ರೂ. ಘೋಷಿಸಿದ್ದರು. ಆ ಬಳಿಕ ಮೂರನೇ ಸುದ್ದಿಗೋಷ್ಠಿಯಲ್ಲಿ 1.50 ಲಕ್ಷ ಕೋಟಿ ರೂ., ನಾಲ್ಕನೇ ಸುದ್ದಿಗೋಷ್ಠಿಯಲ್ಲಿ 8,100 ಕೋಟಿ ರೂ, ಹಾಗೂ ಇಂದು ಐದನೇ ಸುದ್ದಿಗೋಷ್ಠಿಯಲ್ಲಿ 40 ಸಾವಿರ ಕೋಟಿ ರೂ. ಘೋಷಿಸಿದರು. ಜೊತೆಗೆ ಆರ್‌ಬಿಐ 8,01,603 ಕೋಟಿ ರೂ. ಪ್ಯಾಕೇಜ್ ನೀಡಿತ್ತು. ಈ ಎಲ್ಲ ಮೊತ್ತವು 20,97,053 ಕೋಟಿ ರೂ. ಆಗಿದೆ ಎಂದು ಹೇಳಿದರು.

  • ಕೇಂದ್ರದಿಂದ ನಾಲ್ಕನೇ ಹಂತದಲ್ಲಿ ಆರ್ಥಿಕ ಪ್ಯಾಕೇಜ್ ಹಂಚಿಕೆ – ಸಂಜೆ 4 ಗಂಟೆಗೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

    ಕೇಂದ್ರದಿಂದ ನಾಲ್ಕನೇ ಹಂತದಲ್ಲಿ ಆರ್ಥಿಕ ಪ್ಯಾಕೇಜ್ ಹಂಚಿಕೆ – ಸಂಜೆ 4 ಗಂಟೆಗೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

    – ಇಂದು ಪ್ರವಾಸೋದ್ಯಮ, ಸೇವಾವಲಯಕ್ಕೆ ನೆರವು ನೀಡುವ ಸಾಧ್ಯತೆ

    ನವದೆಹಲಿ: ಕೊರೊನಾ ವೈರಸ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಮಂದಿಗೆ ಆರ್ಥಿಕತೆ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕನೇ ಹಂತದಲ್ಲಿ ಪ್ಯಾಕೇಜ್ ಹಂಚಿಕೆ ಮಾಡಲಿದ್ದಾರೆ.

    ಸಂಜೆ 4 ಗಂಟೆಗೆ ಈಗಾಗಲೇ ಸುದ್ದಿಗೋಷ್ಠಿಗೆ ಸಮಯ ನಿಗಧಿ ಮಾಡಿದ್ದು, ಇಂದು ಸುಮಾರು 2 ಲಕ್ಷ ಕೋಟಿ ಮೌಲ್ಯದ ಪ್ಯಾಕೇಜ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇಂದು ದೇಶದ ಪ್ರವಾಸೋದ್ಯಮ, ಸೇವಾವಲಯ ಕೇಂದ್ರಿಕರಿಸಿ ಪ್ಯಾಕೇಜ್ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಹೋಂ ಸ್ಟೇ, ಲಾಡ್ಜ್, ಅತಿಥಿ ಗೃಹಗಳು ಸೇರಿಸಂತೆ ಆತಿಥ್ಯ ವಲಯ, ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಆಗಲಿದೆ.

    ಸಾರಿಗೆ ವ್ಯವಸ್ಥೆ ವಲಯದಡಿ ವಿಮಾನಯಾನ, ಖಾಸಗಿ ಸಾರಿಗೆ ಸಂಸ್ಥೆಗಳಿಗೆ ನೆರವು, ಚಿಲ್ಲರೆ ಮಾರುಕಟ್ಟೆ, ಶಿಕ್ಷಣ, ಸಿನಿಮಾದಂತಹ ಮನರಂಜನಾ ವಲಯಕ್ಕೂ ರಿಲೀಫ್ ಸಾಧ್ಯತೆ ಇದೆ. ಶುಕ್ರವಾರ ಸುಮಾರು 1.5 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿರುವ ಹಣಕಾಸು ಸಚಿವಲಾಯ, ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಹಿಂದಿನ 1.75 ಲಕ್ಷ ಕೋಟಿ ಹಾಗೂ ಆರ್‌ಬಿಐ ಘೋಷಿಸಿದ್ದ ಆರ್ಥಿಕ ನೆರವುಗಳು ಒಳಗೊಂಡು 16.5 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿತ್ತು.

  • ರೈತರು, ಆಶಾಕಾರ್ಯಕರ್ತೆಯರಿಗೆ 512.5 ಕೋಟಿಯ ವಿಶೇಷ ಪ್ಯಾಕೇಜ್ ಫೋಷಿಸಿದ ಸಿಎಂ

    ರೈತರು, ಆಶಾಕಾರ್ಯಕರ್ತೆಯರಿಗೆ 512.5 ಕೋಟಿಯ ವಿಶೇಷ ಪ್ಯಾಕೇಜ್ ಫೋಷಿಸಿದ ಸಿಎಂ

    – ನನ್ನಿಂದ ಅನ್ನದಾತರಿಗೆ ಅನ್ಯಾಯ ಆಗಲ್ಲ ಎಂದ ಬಿಎಸ್‍ವೈ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಸುದ್ದಿಗೋಷ್ಠಿ ನಡೆಸಿದ್ದು, ರೈತರಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ವಿಶೇಷ ಪ್ಯಾಕೇಜ್ ಫೋಷಿಸಿದ್ದಾರೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥನಾರಾಯಣ್, ಲಕ್ಷ್ಮಣ್ ಸವದಿ ಸೇರಿದಂತೆ ಹಲವು ಸಚಿವರ ದಂಡಿನೊಂದಿಗೆ ಸಿಎಂ ಸುದ್ದಿಗೋಷ್ಠಿ ನಡೆಸಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿವೆ. ನಾನು ರೈತಪರ ಬಜೆಟ್ ಮಂಡಿಸಿದವನು. ಹಸಿರು ಶಾಲು ಹಾಕಿ ಪ್ರಮಾಣವಚನ ಸ್ವೀಕರಿಸಿದವನು. ನನ್ನಿಂದ ರೈತರಿಗೆ ಅನ್ಯಾಯ ಆಗಲ್ಲ. ರೈತರ ಉತ್ಪನ್ನಗಳು ದುಪ್ಪಟ್ಟು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗಳನ್ನು ಮಾಡಿದ್ದಾರೆ. ಶಿಕಾರಿಪುರದಲ್ಲಿ 45 ವರ್ಷಗಳ ಹಿಂದೆ ಎಪಿಎಂಸಿ ಮುಂದೆ ರೈತರು ಬೆಳೆದ ಬೆಳೆಗೆ ನಾನು ಹೋರಾಟ ಮಾಡಿದ್ದೆ. ರೈತ ತನ್ನ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಈ ಕಾಯ್ದೆಯಿಂದ ಎಪಿಎಂಸಿ ಸಮಿತಿಗಳಿಗೆ ಯಾವುದೇ ದಕ್ಕೆ ಆಗಲ್ಲ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: ಹಣ್ಣು, ತರಕಾರಿ ಬೆಳೆಗಾರರಿಗೆ 15 ಸಾವಿರ ರೂ.- ಬಿಎಸ್‍ವೈಯಿಂದ ಮತ್ತೆ 162 ಕೋಟಿ ಪ್ಯಾಕೇಜ್ ಪ್ರಕಟ

    ರೈತರಿಗೆ ಪ್ಯಾಕೇಜ್:
    ಖಾಸಗಿ ಮಾರುಕಟ್ಟೆ 2007ರಲ್ಲೇ ಪ್ರಾರಂಭವಾಗಿದೆ. ಈಗಾಗಲೇ ಆನ್‍ಲೈನ್ ಮಾರುಕಟ್ಟೆ ಕೂಡ ಬಂದಿದೆ. ಎಲ್ಲಾ ಪ್ರತಿಪಕ್ಷಗಳ ಜತೆ ಮಾತನಾಡಿ ತಪ್ಪು ಗ್ರಹಿಕೆ ಮಾಡಬಾರದು ಎಂದು ಹೇಳಿದ್ದೇನೆ. ಹೀಗಾಗಿ ಮೂರನೇ ಪ್ಯಾಕೇಜ್ ಘೋಷಣೆ ಮಾಡಲಾಗುತ್ತಿದ್ದು, ಮೆಕ್ಕೆಜೋಳ ಬೆಳೆದ ರೈತನಿಗೆ ಬೆಂಬಲ ಬೆಲೆ ನೀಡಲಾಗುತ್ತದೆ. ರಾಜ್ಯದಲ್ಲಿ 10 ಲಕ್ಷ ಮೆಕ್ಕೆಜೋಳ ಬೆಳೆದ ರೈತರು ಇದ್ದಾರೆ. ಒಬ್ಬ ರೈತನಿಗೆ 5 ಸಾವಿರ ಎನ್ನುವಂತೆ ಒಟ್ಟು 500 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ ಹಾಗೆಯೇ ಅಪಘಾತ, ನೈಸರ್ಗಿಕ ವಿಕೋಪಕ್ಕೆ ತುತ್ತಾದ ಮೃತ ಪಟ್ಟ ಕುರಿ ಮೇಕೆಗಳಿಗೆ 5 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳಿಗೆ ಸಾಲ – 5 ಸಾವಿರ ಕೋಟಿ ರೂ. ಪ್ಯಾಕೇಜ್ ಪ್ರಕಟ

    ಆಶಾ ಕಾರ್ಯಕರ್ತೆಯರಿಗೆ ಪ್ಯಾಕೇಜ್:
    40,250 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಎನ್ನುವಂತೆ 12.5 ಕೋಟಿಯ ಪ್ಯಾಕೇಜ್ ಘೋಷಿಸಲಾಗಿದೆ. ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂಪಾಯಿ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಬಳಿಕ ರಾಜ್ಯ ಸರ್ಕಾರದ ಈವರಗೆ ಮೂರು ಪ್ಯಾಕೇಜ್‍ಗಳನ್ನು ಘೋಷಿಸಿದೆ. ಒಟ್ಟು 2,274.5 ಕೋಟಿಯ ಪ್ಯಾಕೇಜ್ ಅನ್ನು ಘೋಷಿಸಿದೆ. ಮೊದಲ ಹಂತದ ಪ್ಯಾಕೇಜ್‍ನಲ್ಲಿ 1,610 ಕೋಟಿ ರೂಪಾಯಿ, ಎರಡನೇ ಹಂತದ ಪ್ಯಾಕೇಜ್‍ನಲ್ಲಿ 162 ಕೋಟಿ ರೂಪಾಯಿ, ಮೂರನೇ ಹಂತದಲ್ಲಿ 512.5 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ.

  • ಸ್ಪಷ್ಟತೆ ಇಲ್ಲದ 20 ಲಕ್ಷ ಕೋಟಿ ಪ್ಯಾಕೇಜ್, ಇದೊಂದು ಗಿಮಿಕ್: ಪ್ರಿಯಾಂಕ್ ಖರ್ಗೆ

    ಸ್ಪಷ್ಟತೆ ಇಲ್ಲದ 20 ಲಕ್ಷ ಕೋಟಿ ಪ್ಯಾಕೇಜ್, ಇದೊಂದು ಗಿಮಿಕ್: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ, ಇದೊಂದು ಗಿಮಿಕ್ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಬಡ ಮಧ್ಯಮ ವರ್ಗದ ಜನರು ತೀವ್ರ ಸಂಕಟಕ್ಕೀಡಾಗಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ದೇಶದ ಬೆನ್ನೆಲುಬಾದ ರೈತಾಪಿ ವರ್ಗ ಲಾಕ್‍ಡೌನ್ ನಿಂದಾಗಿ ತೀವ್ರ ಹಾನಿ ಅನುಭವಿಸಿದೆ. ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ನಷ್ಟ ಅನುಭವಿಸಿದ್ದಾರೆ. ಇವರಿಗೆ ಪ್ರಧಾನಿ ಮೋದಿ ನಿರಾಸೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಜನ ಪ್ರಧಾನಿಯವರ ಭಾಷಣದಲ್ಲಿ ಅವರ ಬದುಕಿಗೆ ಸ್ಥಿರ ಭರವಸೆಗಳನ್ನು ನೀಡುತ್ತಾರೆಂದು ನಿರೀಕ್ಷಿಸಿದ್ದರು. ಆದರೆ ಪ್ರಧಾನಿಯವರ ಅರ್ಧ ತಾಸಿನ ಭಾಷಣದಲ್ಲಿ ಹೆಚ್ಚಿನ ಅವಧಿಯನ್ನು ಪ್ರಮುಖವಲ್ಲದ ವಿಷಯಕ್ಕೆ ಮೀಸಲಿಟ್ಟು, ಕೇವಲ ಎರಡು ನಿಮಿಷದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದ ಈ ಪ್ಯಾಕೇಜ್ ಘೋಷಿಸಿದರು. ಇದು ದೇಶದ ಬಹುಪಾಲು ಜನರಿಗೆ ನಿರಾಸೆ ಉಂಟು ಮಾಡಿದೆ. ಹೀಗಾಗಿ ಇದೂ ಕೂಡ ಗಿಮಿಕ್ ಎಂದು ದೂರಿದರು.

    20 ಲಕ್ಷ ಕೋಟಿ ರೂ. ಮೊತ್ತದಲ್ಲಿ ಈ ಹಿಂದೆ ಘೋಷಿಸಲಾದ ಕೇಂದ್ರ ಸರಕಾರದ ಪ್ರಾಯೋಜಿತ ನಿಧಿಯೂ ಸೇರಿದೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಪ್ರಧಾನಿ ಯಾವುದೇ ಸ್ಪಷ್ಟತೆ ನೀಡಲಿಲ್ಲ. ಹಣಕಾಸು ಸಚಿವರು ವಿವರವಾಗಿ ಹೇಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಸ್ವತಃ ಪ್ರಧಾನಿಗಳೇ ಜನರಿಗೆ ತಿಳಿಸಬಹುದಿತ್ತಲ್ಲ, ಅವರಿಗಿಂತ ದೊಡ್ಡವರು ಯಾರಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

  • ಕೇಂದ್ರದಿಂದ 1.70 ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟ – ಬಡವರಿಗೆ 3 ತಿಂಗಳು 5 ಕೆಜಿ ಅಕ್ಕಿ ಉಚಿತ

    ಕೇಂದ್ರದಿಂದ 1.70 ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟ – ಬಡವರಿಗೆ 3 ತಿಂಗಳು 5 ಕೆಜಿ ಅಕ್ಕಿ ಉಚಿತ

    ನವದೆಹಲಿ: ಕೊರೊನಾದಿಂದ ಕಂಗೆಟ್ಟವರಿಗೆ ಪ್ರಧಾನಿ ಮಂತ್ರಿ ನಿಧಿಯಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 1.70 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

    ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 21 ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದ್ದಾರೆ. ಇದು ಜನರ ಜೀವನ ಮತ್ತು ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಹೀಗಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಹೊರಬರಲು 1.70 ಲಕ್ಷ ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅಕ್ಕಿ ಯೋಜನೆ ಅಡಿ ಈಗಾಗಲೇ 5 ಕೆಜಿ ಅಕ್ಕಿ/ ಗೋಧಿ ನೀಡಲಾಗುತ್ತಿದೆ. ಇದರ ಜೊತೆ ಹೆಚ್ಚುವರಿಯಾಗಿ ಮೂರು ತಿಂಗಳ ಕಾಲ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.

    ವಲಸೆ ಕಾರ್ಮಿಕರು, ನಗರ ಮತ್ತು ಗ್ರಾಮೀಣ ಬಡವವರಿಗೆ, ತಕ್ಷಣದ ಸಹಾಯದ ಅಗತ್ಯವಿರುವ ಬಡವರಿಗೆ ಪ್ಯಾಕೇಜ್ ಸಿದ್ಧವಾಗಿದೆ. ಯಾರೂ ಹಸಿವಿನಿಂದ ಬಳಲಬಾರದು ಎನ್ನುವುದು ನಮ್ಮ ಸರ್ಕಾರ ಉದ್ದೇಶ. ಹೀಗಾಗಿ 1.7 ಲಕ್ಷ ಕೋಟಿ ರೂ. ಮೌಲ್ಯದ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    8.69 ಕೋಟಿ ರೂ. ರೈತರ ಖಾತೆಗೆ ಈ ಕೂಡಲೇ ಏಪ್ರಿಲ್ ತಿಂಗಳ 2 ಸಾವಿರ ರೂ. ಹಣವನ್ನು ಹಾಕಲಾಗುವುದು. ನರೇಗಾ ಯೋಜನೆ ಅಡಿ ಕೆಲಸ ಮಾಡುವ ಪ್ರತಿ ಕಾರ್ಮಿಕರಿಗೆ 2 ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗುವುದು ಎಂದರು.

    ಸುದ್ದಿಗೋಷ್ಠಿಯ ಮುಖ್ಯಾಂಶಗಳು
    – ಕೊರೊನಾ ವೈರಸ್ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ ಆರೋಗ್ಯ ವಿಮೆ. ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ.
    – ವಿಧವೆಯರು, ಹಿರಿಯ ನಾಗರಿಕರು, ದಿವ್ಯಾಂಗರು ಅಂಗವಿಕರಿಗೆ ಒಂದು ಬಾರಿಯ ಪರಿಹಾರ ಮೊತ್ತ 1,000 ರೂ. ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು 3 ಕೋಟಿ ಜನರಿಗೆ ಇದರಿಂದ ಅನುಕೂಲ.
    – 3 ತಿಂಗಳ ಕಾಲ ಮಹಿಳಾ ಜನ ಧನ್ ಖಾತೆಗೆ 500 ರೂ. ಹಾಕಲಾಗುವುದು. ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳ ವರೆಗೂ ಮೂರು ಅನಿಲ ಸಿಲಿಂಡರ್‍ಗಳು ಉಚಿತ ವಿತರಣೆ. ಈ ನಿರ್ಧಾರದಿಂಧ 8 ಕೋಟಿ ಮಹಿಳೆಯರು ಲಾಭ.

    – ಮುಂದಿನ ತಿಂಗಳ ಸಂಸ್ಥೆಗಳು ಮತ್ತು ಉದ್ಯೋಗಿಗಳ ಇಪಿಎಫ್ ಮೊತ್ತವನ್ನು ಸರ್ಕಾರವೇ ತುಂಬಲಿದೆ. 100 ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ತಿಂಗಳಿಗೆ 15,000 ರೂ.ವರೆಗೂ ವೇತನ ಪಡೆಯುತ್ತಿರುವ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಇದರ ಲಾಭ ಸಿಗಲಿದೆ.

    – ಇಪಿಎಫ್ ಯೋಜನೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ.75ರಷ್ಟು ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ ಸಿಗುತ್ತದೆ. ಕಾರ್ಮಿಕರು 3 ತಿಂಗಳ ಸಂಬಳ ಅಥವಾ ಶೇ.75ರಷ್ಟು ಮುಂಗಡ ಮೊತ್ತ;, ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್ ನೋಂದಾಯಿಸಿರುವ ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

    https://www.youtube.com/watch?v=15Y8lx-A4wA&feature=emb_title

  • ಶ್ರೀರಾಮನ ಚರಿತ್ರೆ ತಿಳಿಯಲು ಹಳಿಯಲ್ಲಿ ಓಡಲಿದೆ ಶ್ರೀರಾಮಾಯಣ ಎಕ್ಸ್‌ಪ್ರೆಸ್‌: ಈ ರೈಲಿನ ವಿಶೇಷತೆ ಏನು? ಪ್ಯಾಕೇಜ್ ಎಷ್ಟು?

    ಶ್ರೀರಾಮನ ಚರಿತ್ರೆ ತಿಳಿಯಲು ಹಳಿಯಲ್ಲಿ ಓಡಲಿದೆ ಶ್ರೀರಾಮಾಯಣ ಎಕ್ಸ್‌ಪ್ರೆಸ್‌: ಈ ರೈಲಿನ ವಿಶೇಷತೆ ಏನು? ಪ್ಯಾಕೇಜ್ ಎಷ್ಟು?

    ನವದೆಹಲಿ: ರಾಮನಿಂದಾಗಿ ಪ್ರಸಿದ್ಧಿ ಹೊಂದಿರುವ ಪ್ರಮುಖ ಸ್ಥಳಗಳ ಪ್ರವಾಸಕ್ಕಾಗಿಯೇ ಭಾರತೀಯ ರೈಲ್ವೇ ಇಲಾಖೆಯ ಪ್ರವಾಸೋದ್ಯಮ ನಿಗಮ ವಿಶೇಷ `ಶ್ರೀರಾಮಾಯಣ ಎಕ್ಸ್‌ಪ್ರೆಸ್‌’ ರೈಲು ಓಡಿಸಲು ಮುಂದಾಗಿದೆ.

    ಶ್ರೀರಾಮನ ಬಗ್ಗೆ ತಿಳಿಯುವುದಕ್ಕಾಗಿ ಭಾರತೀಯ ರೈಲ್ವೇ ಇಲಾಖೆ ತನ್ನ ಪ್ರವಾಸೋದ್ಯಮ ಯೋಜನೆಯಡಿ ಈ ಪ್ರವಾಸವನ್ನು ಆರಂಭಿಸಲಿದೆ. ಈ ರೈಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದ್ದು, 800 ಆಸನಗಳನ್ನು ಹೊಂದಿದೆ. ಈ ರೈಲಿನಲ್ಲಿ ಶ್ರೀರಾಮನ ಬದುಕಿನ ಅಧ್ಯಾಯಗಳೊಂದಿಗೆ ತಳುಕು ಹಾಕಿಕೊಂಡಿರುವ ಪ್ರಮುಖ ಸ್ಥಳಗಳ ಭೇಟಿಗೆ ಅವಕಾಶ ಕಲ್ಪಿಸಿದೆ. 16 ದಿನಗಳಲ್ಲಿ ದೇಶದ ಪ್ರಮುಖ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುತ್ತದೆ. ಈ ವರ್ಷದ ನವೆಂಬರ್ ನಲ್ಲಿ ದೆಹಲಿಯ ಸಫರ್ ಜಂಗ್ ರೈಲ್ವೇ ನಿಲ್ದಾಣದಿಂದ ಮೊದಲ ಪ್ರಯಾಣ ಆರಂಭವಾಗಲಿದೆ. ಇದನ್ನು  ಓದಿ: ಸೀತೆಯ ಜನ್ಮ ಸ್ಥಳದಿಂದ ಅಯೋಧ್ಯೆಗೆ ಬಸ್: ನೇಪಾಳದಲ್ಲಿ ಮೋದಿ ಚಾಲನೆ

    ಈ ಪ್ರವಾಸದಲ್ಲಿ ಊಟ, ವಸತಿ, ಯಾತ್ರಾ ಸ್ಥಳಗಳ ಪ್ರಯಾಣ, ಸುತ್ತಲಿನ ಪ್ರವಾಸಿ ತಾಣಗಳ ಭೇಟಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಸಿಗರಿಗೆ ಅಗತ್ಯ ನೆರವು ಹಾಗೂ ವ್ಯವಸ್ಥೆ ಗಮನಿಸಲು ಟೂರ್ ಮ್ಯಾನೇಜರ್ ಗಳನ್ನು ಸಹ ಇದಕ್ಕಾಗಿ ನಿಯೋಜಿಸಲಾಗಿದೆ.

    ಎಲ್ಲಿಂದ, ಎಲ್ಲಿಗೆ ಸಾಗುತ್ತದೆ?
    ವಿಶೇಷ ರೈಲು ದೆಹಲಿಯಿಂದ ಹೊರಟು ಮೊದಲಿಗೆ ಅಯೋಧ್ಯೆಯಲ್ಲಿ ತಲುಪುತ್ತದೆ. ಅಲ್ಲಿನ ಹುಮಾನ್ ಗುಡಿ, ರಾಮಕೋಟ್ ಹಾಗೂ ಕನಕ್ ದೇವಾಲಯ ಹಾಗೂ ರಾಮಾಯಣದಲ್ಲಿ ಪ್ರಸ್ತಾಪವಾಗುವ ಇತರ ಪ್ರಮುಖ ಸ್ಥಳಗಳ ಸುತ್ತಾಟದಲ್ಲಿ ನಂತರ ನಂದಿಗ್ರಾಮ, ಸೀತಾಮಡಿ, ಜನಕಪುರ್, ವಾರಾಣಾಸಿ, ಪ್ರಯಾಗ್, ಶೃಂಗವೇರ್ ಪುರ , ಚಿತ್ರಕೂಟ, ನಾಸಿಕ್, ಹಂಪಿ ಹಾಗೂ ರಾಮೇಶ್ವರಕ್ಕೆ ಬಂದು ತಲುಪಲಿದೆ.

    ಶ್ರೀಲಂಕ್ಕೂ ಹೋಗಬಹುದು:
    ಭಾರತ ಅಲ್ಲದೇ ಶ್ರೀಲಂಕಾಕ್ಕೂ ಪ್ರವಾಸದ ಮೂಲಕವೇ ಹೋಗಬಹುದು. ರಾಮೇಶ್ವರದಿಂದ ಪ್ರಯಾಣ ಮುಂದುವರಿಸುವ ಪ್ರಯಾಣಿಕರು ವಿಮಾನದ ಮೂಲಕ ಶ್ರೀಲಂಕಾಕ್ಕೆ ತೆರಳಬಹುದು. ಶ್ರೀಲಂಕಾದಲ್ಲಿ ಬರುವ ಕ್ಯಾಂಡಿ, ಕೊಲಂಬೋ ಹಾಗೂ ನಿಗೊಂಬೊ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ.

    ಶ್ರೀರಾಮಾಯಣ ಎಕ್ಸ್‌ಪ್ರೆಸ್‌ನ ಪ್ಯಾಕೇಜ್ ಎಷ್ಟು?
    ಈ ವಿಶೇಷ ರೈಲಿನಲ್ಲಿ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ ನವದೆಹಲಿಯಿಂದ ರಾಮೇಶ್ವರದವರೆಗೆ 15,120 ರೂ. ನಿಗದಿ ಮಾಡಲಾಗಿದ್ದು, ರಾಮೇಶ್ವರಂದಿಂದ ಶ್ರೀಲಂಕಾಕ್ಕೆ ತೆರಳುವ ಪ್ರವಾಸಿಗರು ಪ್ರತ್ಯೇಕವಾಗಿ 36,970 ಪಾವತಿಮಾಡಬೇಕಾಗುತ್ತದೆ. ಇದರಲ್ಲಿ ವಿಮಾನ ಪ್ರಯಾಣ ಶುಲ್ಕ ಸೇರಿದಂತೆ ಊಟ, ವಸತಿ ಹಾಗೂ ಪ್ರವಾಸಿ ತಾಣಗಳ ಭೇಟಿಯ ಪ್ಯಾಕೇಜನ್ನು ಭಾರತೀಯ ರೈಲ್ವೇ ಇಲಾಖೆಯೇ ಒದಗಿಸಲಿದೆ.

    `ಶ್ರೀರಾಮಾಯಣ ಎಕ್ಸ್‌ಪ್ರೆಸ್‌’ ಒಟ್ಟು 16 ದಿನಗಳಲ್ಲಿ ತನ್ನ ಯಾತ್ರೆಯನ್ನು ಪೊರೈಸಲಿದ್ದು, ಮೊದಲನೇ ಪ್ರಯಾಣವನ್ನು ನವೆಂಬರ್ 14 ರಿಂದ ಪ್ರಾರಂಭಗೊಳಿಸುತ್ತದೆ. ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌ ಪ್ಯಾಕೇಜ್ ಪ್ರಯಾಣವನ್ನು ಭಾರತೀಯ ರೈಲ್ವೆ ಇಲಾಖೆ ತನ್ನ ವೆಬ್‍ಸೈಟ್‍ ನಲ್ಲಿ ಪ್ರಕಟಿಸಿದೆ. ಕೇಂದ್ರ ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ರವರು ನೂತನ ಶ್ರೀ ರಾಮಾಯಣ ಎಕ್ಸ್‍ಪ್ರೆಸ್ ಕುರಿತು ಕಿರು ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

    ಏನಿದು ರಾಮಾಯಣ ಸರ್ಕ್ಯೂಟ್?
    ಧಾರ್ಮಿಕ ಪ್ರವಾಸಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸಾಧಿಸಲು ವಿಶೇಷ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದರಲ್ಲಿ ರಾಮಾಯಣ ಸರ್ಕ್ಯೂಟ್ ಒಂದಾಗಿದ್ದು, ಇದರ ಅಡಿಯಲ್ಲಿ ರಾಮಾಯಣ ಕಥೆಗೆ ಸಂಬಂಧಿಸಿದ 15 ಪ್ರವಾಸಿ ಜಾಗಗಳನ್ನು ಸಂಪರ್ಕಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.

    ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಶಾದ ಮಹೇಂದ್ರ ಗಿರಿ, ಛತ್ತೀಸ್‍ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಸಿಕ್ ಮತ್ತು ನಾಗ್ಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸರ್ಕ್ಯೂಟ್ ನಲ್ಲಿದೆ.

    ವಿಶೇಷ ರೈಲಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ: www.irctctourism.com