Tag: Package

  • ರೈಲ್ವೆ ಇಲಾಖೆಯಿಂದ ಚಾರ್ ಧಾಮ್ ಯಾತ್ರೆಗೆ ಮೇ ತಿಂಗಳಲ್ಲಿ ವಿಶೇಷ ಆಫರ್

    ರೈಲ್ವೆ ಇಲಾಖೆಯಿಂದ ಚಾರ್ ಧಾಮ್ ಯಾತ್ರೆಗೆ ಮೇ ತಿಂಗಳಲ್ಲಿ ವಿಶೇಷ ಆಫರ್

    ನವದೆಹಲಿ: ರೈಲ್ವೆ ಇಲಾಖೆ ಮೇ ತಿಂಗಳಲ್ಲಿ ಚಾರ್ ಧಾಮ್ ಯಾತ್ರೆಗೆ ವಿಶೇಷ ರಿಯಾಯ್ತಿ ಘೋಷಿಸಿದೆ. ಐಆರ್​ಸಿಟಿಸಿ ವಿಶೇಷ ರಿಯಾಯ್ತಿ ಘೋಷಿಸಿದ್ದು, ಹಲವು ಅಗತ್ಯ ಸೌಲಭ್ಯಗಳಿರುವ ಟೂರ್ ಪ್ಯಾಕೇಜ್ ಇದಾಗಿದೆ.

    ಯಾವ ಸ್ಥಳಗಳಿಗೆ: ಹರಿದ್ವಾರ, ಬಾರ್‍ಕೊಟ್, ಜಾನಕಿಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಸನ್‍ಪ್ರಯಾಗ, ಕೇದಾರನಾಥ, ಬದರಿನಾಥ ಕ್ಷೇತ್ರಗಳನ್ನು ಸಂದರ್ಶಿಸಲಾಗುತ್ತದೆ. ನಾಗಪುರ ಮತ್ತು ದೆಹಲಿ ಮಾರ್ಗವಾಗಿ ವಾಯುಯಾನ ಟಿಕೆಟ್‍ಗಳನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ.

    ಭಾರತ ಸರ್ಕಾರದ ಆಜಾದಿ ಕ ಅಮೃತ್ ಮಹೋತ್ಸವ್ ಮತ್ತು ದೇಖೋ ಆಪ್ನಾ ದೇಶ್ ಉಪಕ್ರಮಗಳ ಭಾಗವಾಗಿ ಐಆರ್​ಸಿಟಿಸಿ ಈ ಯೋಜನೆಯನ್ನು ಪರಚಯಿಸಿದೆ. ಈ ವರ್ಷ ಕೊರೊನಾ ಪ್ರಕರಣಗಳು ಕಡಿಮೆಯಾಗಿರುವುದರಿಂದ ಸಾಕಷ್ಟು ಜನರು ಈ ಸೌಲಭ್ಯ ಪಡೆದುಕೊಳ್ಳಬಹುದು. ಮೇ 14ರಿಂದ ಆರಂಭವಾಗಿ ಮೇ 25ಕ್ಕೆ ಮುಕ್ತಾಯವಾಗಲಿರುವ ಈ ಯಾತ್ರೆಯು 12 ಹಗಲು ಮತ್ತು 11 ರಾತ್ರಿಗಳ ಪ್ರವಾಸ ಪ್ಯಾಕೇಜ್ ಹೊಂದಿರುತ್ತದೆ. ಇದನ್ನೂ ಓದಿ: ಕ್ರಿಶ್ಚಿಯನ್ ವರ, ಮುಸ್ಲಿಂ ವಧು ಹಿಂದೂ ಸಂಪ್ರದಾಯದಂತೆ ಮದುವೆ 

    ಪ್ರಯಾಣ ದರ: ಒಬ್ಬರಿಗೆ 77,600 ಮತ್ತು ಇಬ್ಬರಿಗೆ 61,400 ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಪ್ರಯಾಣದರದೊಂದಿಗೆ ವಸತಿ, ಊಟೋಪಚಾರ ವೆಚ್ಚಗಳನ್ನೂ ಒಳಗೊಂದಿದೆ. ಹೆಚ್ಚಿನ ಮಾಹಿತಿಗೆ  www.irctctourism.com ಜಾಲತಾಣ ನೋಡಿ.

     

  • ಕೋವಿಡ್ 2ನೇ ಅಲೆ ಪ್ಯಾಕೇಜ್ – 20,713 ಕಲಾವಿದರಿಗೆ ತಲಾ ಮೂರು ಸಾವಿರ ರೂ. ನೆರವು

    ಕೋವಿಡ್ 2ನೇ ಅಲೆ ಪ್ಯಾಕೇಜ್ – 20,713 ಕಲಾವಿದರಿಗೆ ತಲಾ ಮೂರು ಸಾವಿರ ರೂ. ನೆರವು

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ‘ಕೋವಿಡ್-19ರ 2ನೇ ಅಲೆಯಿಂದ ಸಂಕಷ್ಟದಲ್ಲಿರುವ ಕಲಾವಿದರುಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಿಕೆಗೆ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಕೋವಿಡ್ 2ನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ 3,000 ರೂ.ಗಳ ಆರ್ಥಿಕ ನೆರವು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ಡಿ.ಬಿ.ಟಿ. ಮೂಲಕ ಒಟ್ಟು 6.23 ಕೋಟಿ ರೂ. ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

    ಕೋವಿಡ್-19ರ 2ನೇ ಅಲೆಯಿಂದ ಸಂಕಷ್ಟಕ್ಕೀಡಾದ ದುರ್ಬಲ ವರ್ಗದವರಿಗೆ ಒಟ್ಟು 2,050 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಿದ್ದು, ಈಗಾಗಲೇ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳು ಮೊದಲಾದವರಿಗೆ ಡಿ.ಬಿ.ಟಿ. ಮೂಲಕ ಆರ್ಥಿಕ ನೆರವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗಿದೆ. ಉಳಿದ ವರ್ಗಗಳಿಗೂ ಶೀಘ್ರವೇ ನೆರವು ನೀಡಲು ಕ್ರಮ ವಹಿಸಲಾಗುತ್ತಿದೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಮೊದಲು ಶಾಲೆ ಆರಂಭ ಬೇಡ: ಪ್ರತಾಪ್ ಸಿಂಹ

    ಮೊದಲ ಅಲೆಯ ಸಂದರ್ಭದಲ್ಲಿಯೂ ಕಲಾವಿದರಿಗೆ ನೆರವು ನೀಡಲಾಗಿತ್ತು. ಈ ಬಾರಿಯೂ ಸರ್ಕಾರ ಅವರ ನೆರವಿಗೆ ಧಾವಿಸಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿ, ಕಲಾವಿದರ ದಾಖಲೆಗಳನ್ನು ಪರಿಶೀಲಿಸಿ, ಅತ್ಯಂತ ಪಾರದರ್ಶಕವಾಗಿ ನೆರವು ನೀಡಲು ಮಂಜೂರಾತಿ ನೀಡಲಾಗಿದೆ. ಫಲಾನುಭವಿಗಳು ಡಿ.ಬಿ.ಟಿ. ಆಪ್ ಮುಖಾಂತರ ತಮ್ಮ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ನೆರವು ವರ್ಗಾವಣೆ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಇದೀಗ ವಿವಿಧ ಜಿಲ್ಲೆಗಳಲ್ಲಿ ನಿರ್ಬಂದಗಳನ್ನು ತೆರವು ಗೊಳಿಸಲಾಗಿದೆ. ಆದರೆ ಕಲಾವಿದರು ಮುನ್ನೆಚ್ಚರಿಕೆಯ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಜೊತೆಗೆ ಲಸಿಕೆಯನ್ನು ಸಹ ಸರ್ಕಾರ ಉಚಿತವಾಗಿ ನೀಡುತ್ತಿದ್ದು, ತಪ್ಪದೆ ಹಾಕಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದರು.

    ಸಮಾರಂಭದಲ್ಲಿ ಮಾತನಾಡಿದ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಮೊದಲ ಅಲೆಯ ಸಂದರ್ಭದಲ್ಲಿಯೂ 17 ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ನೆರವು ನೀಡಲಾಗಿತ್ತು. ಈಗ ಮತ್ತೆ ಕಲಾವಿದರಿಗೆ ತಲಾ 3 ಸಾವಿರ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

    ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ರವಿಶಂಕರ್, ನಿರ್ದೇಶಕ ಎಸ್. ರಂಗಪ್ಪ, ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

  • ಪ್ರವಾಸಿ ಮಾರ್ಗದರ್ಶಿಗಳಿಗೆ 5 ಸಾವಿರ ರೂ. ಕೋವಿಡ್ ಪರಿಹಾರ – ಯೋಗೇಶ್ವರ್

    ಪ್ರವಾಸಿ ಮಾರ್ಗದರ್ಶಿಗಳಿಗೆ 5 ಸಾವಿರ ರೂ. ಕೋವಿಡ್ ಪರಿಹಾರ – ಯೋಗೇಶ್ವರ್

    ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತವಾಗಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಕೋವಿಡ್ ಸಂಕಷ್ಟದ ಪರಿಹಾರವಾಗಿ 5 ಸಾವಿರ ರೂ. ನೀಡಲು ಪ್ರವಾಸೋದ್ಯಮ ಸಚಿವರಾದ ಸಿ.ಪಿ.ಯೋಗೇಶ್ವರ್ ಮುಂದಾಗಿದ್ದಾರೆ.

    ಪ್ರವಾಸೋದ್ಯಮ ಇಲಾಖೆಯಲ್ಲಿ 384 ನೋಂದಾಯಿತ ಪ್ರವಾಸಿ ಗೈಡ್‍ಗಳಿದ್ದು, ಅವರೆಲ್ಲರಿಗೂ ಕೋವಿಡ್ ಸಂಕಷ್ಟದ ಸಮಯದಲ್ಲಿ ನೆರವಾಗಲು ನಿರ್ಧರಿಸಿದ್ದು, ಪ್ರತಿಯೊಬ್ಬರಿಗೂ ತಲಾ 5 ಸಾವಿರ ರೂಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದು, ಹೋಟೆಲ್ ಕಾರ್ಮಿಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಯೋಜನೆಯಡಿ 3 ಸಾವಿರ ರೂಗಳನ್ನು ನೀಡಲು ಸಹ ಆರ್ಥಿಕ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದೆ. ಅತೀ ಶೀಘ್ರದಲ್ಲಿ ಸರ್ಕಾರಿ ಆದೇಶ ಹೊರಡಲಿದೆ ಎಂದು ಸಚಿವರು ಅಭಿಪ್ರಯಾಪಟ್ಟರು. ಇದನ್ನೂ ಓದಿ: ಹಂಪಿ ಪ್ರವಾಸಿ ಗೈಡ್‍ಗಳಿಗೆ ನೆರವಿನ ಹಸ್ತಚಾಚಿದ ಸುಧಾಮೂರ್ತಿ

    ಬೆಂಗಳೂರಿನ ಖನಿಜ ಭವನದಲ್ಲಿರುವ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಕಛೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೋವಿಡ್ ಲಾಕ್‍ಡೌನ್‍ನಿಂದ ಪ್ರವಾಸೋದ್ಯಮ ಕ್ಷೇತ್ರದ ಮೇಲಾಗಿರುವ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಪದಾಧಿಕಾರಿಗಳ ಜೊತೆ ಸಹ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸೊಸೈಟಿಯ ಪದಾಧಿಕಾರಿಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಕಷ್ಟಗಳನ್ನು ವಿವರಿಸಿ ಪರಿಹಾರ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಸರ್ಕಾರ ರಚನೆಯಾಗೋದಕ್ಕೆ ನನ್ನದೂ ಅಳಿಲು ಸೇವೆ ಇದೆ : ಸಿ.ಪಿ.ಯೋಗೇಶ್ವರ್

    ಆಸ್ತಿ ತೆರಿಗೆಯನ್ನು ಮನ್ನಾ ಮಾಡಬೇಕು. ಮದ್ಯ ಪರವಾನಗಿ ಶುಲ್ಕವನ್ನು ಶೇ.50 ರಷ್ಟು ಮನ್ನಾ ಮಾಡಿ ಉಳಿದ ಶೇ.50 ರಷ್ಟು ಶುಲ್ಕವನ್ನು ಕಟ್ಟಲು ಈ ವರ್ಷದ ಡಿಸೆಂಬರ್ ಅಂತ್ಯದವರೆಗೆ ಸಮಯ ವಿಸ್ತರಿಸಬೇಕು ಹಾಗೂ ವಿದ್ಯುತ್‍ಚ್ಛಕ್ತಿ ದರದಲ್ಲಿ ರಿಯಾಯಿತಿ ನೀಡಬೇಕು. ಪ್ರವಾಸೋದ್ಯಮ ವಾಹನಗಳ ತೆರಿಗೆಯನ್ನು ಆರು ತಿಂಗಳ ಅವಧಿಗೆ ಮನ್ನಾ ಮಾಡಬೇಕು. ಪ್ರವಾಸಿ ವಾಹನಗಳನ್ನು ಚಲಾಯಿಸುತ್ತಿರುವ ಚಾಲಕರಿಗೆ 2 ಸಾವಿರ ರೂಗಳ ಕೋವಿಡ್ ಪರಿಹಾರ ಹಣವಾಗಿ ನೀಡಬೇಕು. ರಾಜ್ಯದಲ್ಲಿ ಓಲಾ, ಉಬರ್ ಸೇರಿದಂತೆ ಒಟ್ಟು 3 ಲಕ್ಷ 30 ಸಾವಿರ ಪ್ರವಾಸಿ ವಾಹನ ಚಾಲಕರಿದ್ದು, ಅವರೆಲ್ಲರಿಗೂ ಕೋವಿಡ್ ಪ್ಯಾಕೇಜ್ ಹಣ ನೀಡಬೇಕೆಂದು ಒತ್ತಾಯಿಸಿದರು. ಇದೇ ತಿಂಗಳ 21 ರಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್‍ಗಳನ್ನು ತೆಗೆಯಲು ಅವಕಾಶ ನೀಡಬೇಕು. ಟೂರ್ ಆಪರೇಟರ್ಸ್ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಬೇಕೆಂದು ಸಹ ಮನವಿ ಮಾಡಿದರು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೆ.ಎಸ್.ಎಫ್.ಸಿ.ಯಿಂದ ತೆಗೆದುಕೊಂಡಿರುವ ಸಾಲದ ಮೇಲಿನ ಬಡ್ಡಿಗೆ ರಿಯಾಯಿತಿ ಕೊಡಿಸಬೇಕು ಎಂದು ಸಹ ಕೋರಿದರು.

    ರಾಜ್ಯದಲ್ಲಿರುವ ಎಲ್ಲಾ ಹೋಟೆಲ್‍ಗಳಿಗೂ, ಸ್ಟಾರ್ ಹೋಟೆಲ್‍ಗಳಿಗೆ ನೀಡಿರುವ ಕೈಗಾರಿಕಾ ಸ್ಥಾನಮಾನ ವಿಸ್ತರಿಸಬೇಕೆಂದು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಅಧ್ಯಕ್ಷ ಕೆ.ಶ್ಯಾಮರಾಜ್, ಉಪಾಧ್ಯಕ್ಷ ವಿನಿತ್ ವರ್ಮಾ, ಕಾರ್ಯದರ್ಶಿ ಮಹಾಲಿಂಗಯ್ಯ ಇವರು ಸಚಿವರಿಗೆ ಮನವಿ ಪತ್ರ ನೀಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದರು.

    ಜೂನ್ ತಿಂಗಳ ಅಂತ್ಯಕ್ಕೆ ವಿಜಯಪುರ, ಹಂಪಿ, ಬಾದಾಮಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ತ್ರೀ ಸ್ಟಾರ್ ಹೋಟೆಲ್‍ಗಳಿಗೆ ಶಿಲಾನ್ಯಾಸ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ತಿಂಗಳ ಅಂತ್ಯಕ್ಕೆ ಪ್ರವಾಸೋದ್ಯಮ ನೀತಿಗೆ ಮಾರ್ಗಸೂಚಿಗಳನ್ನು ಅಳವಡಿಸಿ, ಸರ್ಕಾರಿ ಆದೇಶ ಹೊರಡಿಸಲು ಹಾಗೂ ಸ್ಟಾರ್ ಹೋಟೆಲ್‍ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿರುವ ಬಗ್ಗೆ ಸಹ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಇದನ್ನೂ ಓದಿ: ಗುಡುಗು ಯತ್ನಾಳ್, ಮಿಂಚು ಯೋಗೇಶ್ವರ್ ಮಳೆ ಬಂದ್ಮೇಲೆ ತಣ್ಣಗಾಗ್ತಾರೆ: ಕೋಟ ವ್ಯಾಖ್ಯಾನ

    ಹೆಲಿಟೂರಿಸಂ, ಸಿ-ಪ್ಲೈನ್ ಹಾಗೂ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ವಾಟರ್ ಸ್ಪೋಟ್ರ್ಸ್ ಆರಂಭಿಸುವುದು, ನಂದಿಬೆಟ್ಟ ಹಾಗೂ ಇತರ ಕಡೆ ರೋಪ್-ವೇಗಳನ್ನು ನಿರ್ಮಾಣ ಮಾಡುವ ಯೋಜನೆಗಳಿಗೆ ವೇಗ ನೀಡುವಂತೆ ಇದೇ ವೇಳೆ ಅಧಿಕಾರಿಗಳಿಗೆ ಆದೇಶಿಸಿದರು. ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಪ್ರವಾಸೋದ್ಯಮ ಯೋಜನೆಗಳಿಗೆ ಆದ್ಯತೆ ಮೇಲೆ ಕ್ರಮ ಕೈಗೊಂಡು ನಿಗಧಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಿದರು.

    ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ ಕುಮಾರ್ ಪಾಂಡೆ, ನಿರ್ದೇಶಕಿ ಸಿಂಧು ಬಿ.ರೂಪೇಶ್, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮಾ ಹಾಗೂ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಪ್ರಗತಿ ಪರಿಶೀಲನೆ ಸಭೆಯ ನಂತರ ಸಚಿವ ಯೋಗೇಶ್ವರರವರು ಚಿತ್ರಕಲಾ ಪರಿಷತ್‍ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯಿಂದ ಟೂರ್ ಆಪರೇಟರ್ಸ್ ಹಾಗೂ ಚಾಲಕರಿಗೆ ಆಯೋಜಿಸಿದ್ದ ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ, ಸಚಿವರು ಚಾಲನೆ ನೀಡಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಪ್ರಥಮ ಆದ್ಯತೆಯಾಗಿ ಕೋವಿಡ್ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಸಚಿವರು ತಿಳಿಸಿದರು.

  • ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    – ಪ್ಯಾಕೇಜ್ ಘೋಷಣೆಗೆ ಆಗ್ರಹ

    ನೆಲಮಂಗಲ: ರಾಜ್ಯ ಸರ್ಕಾರ ಗೂಡ್ಸ್ ವಾಹನ ಚಾಲಕರಿಗೆ ವಾಹನಗಳ ವಿಮಾಕಂತು ಹಾಗೂ ತೆರಿಗೆಗಳನ್ನು ಒಂದು ವರ್ಷ ಮುಂದೂಡುವ ಜೊತೆ ಚಾಲಕರಿಗೆ ಸಹಾಯವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ಸಂಸ್ಥಾಪಕ ಅಧ್ಯಕ್ಷ ಎಂಪಿ ರವೀಶ್ ಎಚ್ಚರಿಕೆ ನೀಡಿದ್ದಾರೆ.

    ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಾದವಾರದ ಬಳಿ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ವತಿಯಿಂದ ಗೂಡ್ಸ್ ವಾಹನಗಳ ಚಾಲಕರಿಗೆ ಆಹಾರ ಪ್ಯಾಕೇಟ್ ನೀಡಿ ಮಾತನಾಡಿದ ಎಂಪಿ ರವೀಶ್, ಕೊರೊನಾ ಸಂಕಷ್ಟದಲ್ಲಿ ವೈದ್ಯಕೀಯ ಸಲಕರಣೆಗಳು, ದಿನಸಿ ಸಾಮಗ್ರಿಗಳು ಸೇರಿದಂತೆ ಪ್ರತಿಯೊಂದು ಸಾಮಗ್ರಿಗಳನ್ನು ಸಾಗಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಚಾಲಕರು ಕೊರೊನಾ ಸೋಂಕಿನಿಂದ ನಲುಗುತ್ತಿದ್ದಾರೆ. ಸರಿಯಾದ ಬಾಡಿಗೆಗಳು ಸಿಗದೇ ಗೂಡ್ಸ್ ವಾಹನಗಳು ನಷ್ಟ ಅನುಭವಿಸುತ್ತಿದ್ದು ಸರ್ಕಾರ ನಮ್ಮ ವಾಹನಗಳ ಇಎಮ್‍ಐ ಪಾವತಿಯಲ್ಲಿ ವಿನಾಯಿತಿ, ವಿಮಾಕಂತು ಹಾಗೂ ತೆರಿಗೆಯನ್ನು ಒಂದು ವರ್ಷ ಮುಂದೂಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್!

    ಗೂಡ್ಸ್ ವಾಹನ ಮಾಲೀಕರು ಹಾಗೂ ಚಾಲಕರ ಕಷ್ಟಕ್ಕೆ ಸರ್ಕಾರ ಸ್ಪಂದನೆ ನೀಡಬೇಕು, ನಮ್ಮ ಬೇಡಿಕೆಯ ಮನವಿ ಸ್ಪಂದನೆ ಸಿಗದಿದ್ದರೇ ರಾಜ್ಯಾದ್ಯಂತ ಗೂಡ್ಸ್ ವಾಹನಗಳನ್ನು ಸ್ಥಗಿತಗೊಳಿಸಿ ಹೋರಾಟ ಮಾಡಲಾಗುತ್ತದೆ ಎಂದರು. ಮಾದವರದ ಬಳಿ ಬೆಂಗಳೂರು ಹಾಗೂ ನೈಸ್ ರಸ್ತೆಯ ಮೂಲಕ ಹೋಗುವ ಗೂಡ್ಸ್ ವಾಹನಗಳ ಚಾಲಕರಿಗೆ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದಿಂದ ಒಂದು ಸಾವಿರದಷ್ಟು ನೀರಿನ ಬಾಟಲ್, ಆಹಾರದ ಪ್ಯಾಕೇಟ್ ಹಾಗೂ ಮಾಸ್ಕ್, ಸ್ಯಾನಿಟೈಸರ್ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಹೆಚ್.ವಿಜಯಕುಮಾರ್, ರಾಜ್ಯಾಧ್ಯಕ್ಷ ಎಂ.ಮುನಿಕೃಷ್ಣ, ಉಪಾಧ್ಯಕ್ಷ ಕುಪ್ಪುಸ್ವಾಮಿ, ರಾಜ್ಯ ಸಹಕಾರ್ಯದರ್ಶಿ ರಮೇಶ್ ಮತ್ತಿತರರಿದ್ದರು.

  • ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ಪ್ಯಾಕೇಜ್ ಘೋಷಣೆ- ಸಿಎಂಗೆ ಬಸವರಾಜ ಹೊರಟ್ಟಿ ಅಭಿನಂದನೆ

    ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ಪ್ಯಾಕೇಜ್ ಘೋಷಣೆ- ಸಿಎಂಗೆ ಬಸವರಾಜ ಹೊರಟ್ಟಿ ಅಭಿನಂದನೆ

    ಹುಬ್ಬಳ್ಳಿ: ಜಾಗತಿಕ ಮಹಾಮಾರಿ ಕೋವಿಡ್‍ದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಕಳೆದ ವರ್ಷದಿಂದ ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತಿದ್ದು ತಮ್ಮ ಮನವಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಸಂತಸ ವ್ಯಕ್ತಪಡಿಸಿದರು.

    ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿ ಮಾಡಿದ ಬಿ.ಎಸ್.ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ ಬಸವರಾಜ ಹೊರಟ್ಟಿಯವರು ಕಳೆದ ಬಾರಿಯ ಕೋವಿಡ್ ಸಂದರ್ಭದಿಂದ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಪ್ಯಾಕೇಜ್ ನೀಡಿ ಅವರಿಗೆ ಸರ್ಕಾರ ಸೂಕ್ತ ಸಹಾಯ ಕಲ್ಪಿಸುವಂತೆ ಹಲವು ಬಾರಿ ಒತ್ತಾಯಿಸಿದ್ದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.


    ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪನವರು, ಮಾನ್ಯ ಸಭಾಪತಿಗಳು ತಮಗೆ ಸಲಹೆ ರೂಪದಲ್ಲಿ ನೀಡಲಾದ ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಸಭಾಪತಿಗಳು ಸೂಚಿಸಿದಂತೆ ಎಲ್ಲಾ ಶಿಕ್ಷಕರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಲಾಗಿದೆ ಹಾಗೂ ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತೀವ್ರ ಸಂಕಷ್ಟದಲ್ಲಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಸಹಾಯಧನ ನೀಡಬೇಕೆಂದು ತಾವೇ ಮೊದಲ ಬಾರಿಗೆ ನನ್ನನ್ನು ಹಲವಾರು ಬಾರಿ ಖುದ್ದಾಗಿ ಹಾಗೂ ಪತ್ರದ ಮೂಲಕ ಒತ್ತಾಯಿಸಿದ್ದು ತಮ್ಮ ಒತ್ತಾಸೆಯಂತೆ ಕೂಡಲೇ ಸ್ಪಂದಿಸಿ ರೂ. 5 ಸಾವಿರ ಪರಿಹಾರಧನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ:ಶಿಕ್ಷಣ ಸಚಿವರಿಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ : ಪದವೀಧರ ಶಿಕ್ಷಕರಿಗೆ ಮುಂಬಡ್ತಿ ಕೊಡಲು ಒತ್ತಾಯ

    ಸಭಾಪತಿಗಳು ಈಗಾಗಲೇ ಸೂಚಿಸಿರುವಂತೆ ಎಲ್ಲ ಶಿಕ್ಷಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಸಭಾಪತಿಗಳ ಸಲಹೆಯಂತೆ ಬ್ಲ್ಯಾಕ್ ಫಂಗಸ್‍ದಿಂದ ಬಳಲುತ್ತಿರುವ ರೋಗಿಗಳಿಗೆ ಸರ್ಕರದಿಂದಲೇ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬರುವ ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳಿಗಾಗುವ ತೊಂದರೆಗಳ ಕುರಿತು ತಜ್ಞರ ಸಮಿತಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ಯಾಕೇಜ್ ಘೋಷಿಸಬೇಕು ಹಾಗೂ ಕೋವಿಡ್ ಕರ್ತವ್ಯದ ಸಂದರ್ಭದಲ್ಲಿ ಮರಣ ಹೊಂದಿದ ಶಿಕ್ಷಕರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕೆಂದು ಹಾಗೂ ಸೂಕ್ತ ಪರಿಹಾರ ಘೋಷಿಸುವಂತೆ ಸಲಹೆ ಮಾಡಿದರು. ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.

    ಈಗ ಘೋಷಿಸಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ನೀಡಿರುವ ಪ್ಯಾಕೇಜ್‍ನ್ನು ಸ್ವಾಗತಿಸಲಾಗುವೆಂದು ಮುಖ್ಯಮಂತ್ರಿಗಳಿಗೆ ತಿಳಿಸಿದ ಬಸವರಾಜ ಹೊರಟ್ಟಿ ಇಷ್ಟೇ ಪ್ಯಾಕೇಜ್ ಸಾಲದು ಇನ್ನೂ ಹೆಚ್ಚಿನ ಸಹಾಯಧನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದರು. ರಾಜ್ಯದಲ್ಲಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಅಗತ್ಯ ಪ್ಯಾಕೇಜ್ ಹಾಗೂ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುವಂತೆ ಮುಖ್ಯಮಂತ್ರಿಗಳೂ ಸೇರಿದಂತೆ ಉಪಮುಖ್ಯಗಳಾದ ಡಾ. ಅಶ್ವತ್ಥನಾಯಾರಾಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರಿಗೂ ಹಲವು ಬಾರಿ ಪತ್ರ ಬರೆದು ಈ ಹಿಂದೆ ಕೋರಿದ್ದಾಗಿ ಮುಖ್ಯಮಂತ್ರಿಗಳಿಗೆ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

  • ಖಾಸಗಿ ಅನುದಾನರಹಿತ ಶಿಕ್ಷಕ-ಶಿಕ್ಷಕೇತರರಿಗೆ ಆರ್ಥಿಕ ಪ್ಯಾಕೇಜ್ ನೀಡಿ – ಸುರೇಶ್ ಕುಮಾರ್

    ಖಾಸಗಿ ಅನುದಾನರಹಿತ ಶಿಕ್ಷಕ-ಶಿಕ್ಷಕೇತರರಿಗೆ ಆರ್ಥಿಕ ಪ್ಯಾಕೇಜ್ ನೀಡಿ – ಸುರೇಶ್ ಕುಮಾರ್

    ಬೆಂಗಳೂರು: ನಮ್ಮ ವಿದ್ಯಾರ್ಥಿಗಳ ಹಿತ ಕಾಯುತ್ತಿರುವ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕ-ಶಿಕ್ಷಕೇತರ ಸಮುದಾಯಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್‍ರವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಕೋವಿಡ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ ಶಿಕ್ಷಣ ಕ್ಷೇತ್ರವೂ ಪ್ರಧಾನವಾದ ಕ್ಷೇತ್ರವಾಗಿದೆ. ಸರ್ಕಾರ ವಿಧಿಸಿದ ಲಾಕ್ ಡೌನ್ ರಾಜ್ಯಾದ್ಯಂತ ಇರುವ ಸಾವಿರಾರು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬಿಸಿದ್ದ ಹಲವು ವರ್ಗಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದ ಕಾರಣ, ಪೋಷಕರು ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ನಿರೀಕ್ಷಿತ ರೀತಿಯಲ್ಲಿ ಆಸಕ್ತಿ ತೋರಲಿಲ್ಲ. ಇದೂ ಕೂಡಾ ಬಹು ವಿಧದ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಯಿತು.

    ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕಾಯಕದಲ್ಲಿ ಸಾವಿರಾರು ವಿದ್ಯಾ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿವೆ. ಈ ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ಲಕ್ಷಾಂತರ (ಅಂದಾಜು ಎರಡು ಲಕ್ಷ) ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾ ಸಂಸ್ಥೆಗಳ ಆಡಳಿತ ವರ್ಗಗಳು ನೀಡುವ ವೇತನ-ಭತ್ಯೆಗಳನ್ನು ಸಂತೃಪ್ತಿಯಿಂದ ಸ್ವೀಕರಿಸಿ ಮಕ್ಕಳ ಭವಿಷ್ಯವನ್ನ ಕಾಯುತ್ತಿದ್ದಾರೆ.

    ಆದರೆ, ಖಾಸಗಿ ಶಾಲೆಗಳಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಬಜೆಟ್ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಧಕ, ಬೋಧಕೇತರ ಸಿಬ್ಬಂದಿ ಮುನ್ನೆಲೆಗೆ ಬಾರದ, ಅತಿಯಾದ ಸಮಸ್ಯೆಗೆ ಸಿಲುಕಿರುವ ಸಮುದಾಯದವರಾಗಿದ್ದಾರೆ. ಪೋಷಕ-ಶಾಲೆಗಳ ನಡುವಿನ ಸಮಸ್ಯೆಗಳ ನೇರ ಪರಿಣಾಮ ಈ ಸಮುದಾಯದ ಮೇಲಾಗಿದೆ. ಅಸಂಖ್ಯ ಶಿಕ್ಷಕರು, ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿದ್ದಾರೆ. ಹಣ್ಣು ತರಕಾರಿ ಮಾಡಿದ್ದಾರೆ. ಇದನ್ನು ನಾವು ಹಲವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಕೇಳಿದ್ದೇವೆ. ಅವರ ನೆರವಿಗೆ ಧಾವಿಸುವುದೂ ಸಹ ಸರ್ಕಾರದ ಜವಾಬ್ದಾರಿಯಾಗಿದೆ.

    ಶಿಕ್ಷಣದಂತಹ ಪವಿತ್ರ ವೃತ್ತಿಯನ್ನು ಕೈಗೆತ್ತಿಕೊಂಡ ಇಂತಹ ಶಿಕ್ಷಕ ಸಮುದಾಯಕ್ಕೆ ನಾಗರಿಕ ಸಮಾಜದ ಪ್ರತಿಕ್ರಿಯೆ ತನ್ನದೇ ಆದ ದೂರಗಾಮಿ, ನಕಾರಾತ್ಮಕವಾದ ಪರಿಣಾಮವನ್ನು ಬೀರಬಲ್ಲುದು. ಮುನ್ನೆಲೆಗೆ ಬಾರದ ಹಾಗೂ ತಮ್ಮ ಆಯ್ಕೆಯ ಬೌದ್ಧಿಕ ಕ್ಷೇತ್ರ ಕಲ್ಪಿಸುವ ಸಾಮಾಜಿಕ ಸಂಕೋಚದ ಕಾರಣ, ಈ ವರ್ಗ ಗದ್ದಲದ ಹೋರಾಟಕ್ಕೂ ಮುಂದಾಗಿಲ್ಲ.

    ಆದರೆ, ಈ ಸಮುದಾಯ ತೀವ್ರ ಆರ್ಥಿಕ-ಭೌತಿಕ ಸಂಕಷ್ಟಗಳನ್ನು ಅನುಭವಿಸುತ್ತಿರುವುದು ಸತ್ಯ. ಹಾಗಾಗಿ ಇಂತಹ ಸಂದರ್ಭದಲ್ಲಿ ತಾವು ಈ ವರ್ಗದ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕಾದ ತುರ್ತು ಅವಶ್ಯಕತೆ ಇರುತ್ತದೆ. ಈ ವರ್ಗಕ್ಕೆ ನೀಡುವ ಸಹಕಾರವು ನಮ್ಮ ಮಕ್ಕಳ ಭವಿಷ್ಯ ಕಾಯುವಂತಹ ನಿರ್ಣಯವಾಗುತ್ತದೆ. ಆದ ಕಾರಣ, ದಯವಿಟ್ಟು, ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ, ಬಜೆಟ್ ಅನುದಾನರಹಿತ ಶಾಲೆ ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ತಾವು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಈ ಸಮುದಾಯಕ್ಕೆ ವಿಶ್ವಾಸ ತುಂಬಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ.

    
    

  • ಕೋವಿಡ್ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್ ಫಾಸ್ಟ್ ಗೂ ಆಗಲ್ಲ-ಎಚ್.ಕೆ ಪಾಟೀಲ್

    ಕೋವಿಡ್ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್ ಫಾಸ್ಟ್ ಗೂ ಆಗಲ್ಲ-ಎಚ್.ಕೆ ಪಾಟೀಲ್

    ಗದಗ: ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಿಎಂ ಬಿಎಸ್‍ವೈ ನೀಡಿರುವ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್ ಫಾಸ್ಟ್ ಗೂ ಸಾಕಗಲ್ಲ ಎನ್ನುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ಟೀಕೆ ಮಾಡಿದ್ದಾರೆ.

    ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಎಚ್.ಕೆ ಪಾಟೀಲ್, ಯಡಿಯೂರಪ್ಪ ಕೊರೊನಾ ಕಷ್ಟಕಾಲದಲ್ಲಿ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ಏನು ಪ್ರಯೋಜನ ಇಲ್ಲ. ಅದರಲ್ಲೂ ಕಲಾ ತಂಡದಲ್ಲಿ ಎಂಟತ್ತು ಜನರಿರುತ್ತಾರೆ ಅವರಿಗೆ 3 ಸಾವಿರ ಯಾವ ಲೆಕ್ಕ ಎಂದು ಹೇಳುವ ಮೂಲಕ ಆರ್ಥಿಕ ಪ್ಯಾಕೇಜ್ ಬಗ್ಗೆ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

    ಟೀಕೆ ಬಂದಿದೆ ಎಂದು ನೀವು ಈ ಕುರಿತು ಯೋಚಿಸಿಸುವುದು ಬೇಡ ಯಡಿಯೂರಪ್ಪನವರೇ ವ್ಯವಹಾರಿಕವಾಗಿ ಆಲೋಚಿಸಿ. ಆಗ ನಿಮಗೆ ತಿಳಿಯುತ್ತದೆ. ತಕ್ಷಣವೇ ಬಡವರಿಗೆ ಮೂರು ಪಟ್ಟು ಹಣ ಕೊಡಲು ವ್ಯವಸ್ಥೆ ಮಾಡಿ ಇದನ್ನು ಹೊರತು ಪಡಿಸಿ. ನೀವು ಈಗ ಕೊಟ್ಟಿರುವ ಪ್ಯಾಕೇಜ್‍ನಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ನಿರ್ಣಯ ಮಾಡಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ಹಣ ಕೊಡಿ. ಆಗಲೇ ಜನರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

  • ವಿಶೇಷ ಆರ್ಥಿಕ ಪ್ಯಾಕೇಜ್ ಸಮರ್ಥಿಸಿಕೊಂಡ ಸಿಎಂ

    ವಿಶೇಷ ಆರ್ಥಿಕ ಪ್ಯಾಕೇಜ್ ಸಮರ್ಥಿಸಿಕೊಂಡ ಸಿಎಂ

    ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಕಂಗೆಟ್ಟಿದ್ದ ಜನರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇದೀಗ ಆರ್ಥಿಕ ಸಂಕಷ್ಟದ ಕಾಲದಲ್ಲಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ ಎಂದು ಹೇಳುವ ಮೂಲಕ ಸಿಎಂ ತಮ್ಮ ವಿಶೇಷ ಆರ್ಥಿಕ ಪ್ಯಾಕೇಜ್‍ನ್ನು ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಸಂದರ್ಭ ನಾನು ಘೋಷಣೆ ಮಾಡಿದ್ದೇನೆ. 1,250ಕೋಟಿ ರೂ. ಪ್ಯಾಕೇಜ್ ರಾಜ್ಯದ ಜನತೆಗೆ ನೀಡಿದ್ದೇನೆ ಎಂದು ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡಿದ್ದಾರೆ.

    ಇತ್ತ ವಿರೋಧ ಪಕ್ಷಗಳು ಯಡಿಯೂರಪ್ಪ ಅವರು ಘೋಷಿಸಿರುವ ವಿಶೇಷ ಪ್ಯಾಕೇಜ್ ಏನು ಪ್ರಯೋಜನವಿಲ್ಲ. ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ ಎನ್ನುವ ಮೂಲಕ ಟೀಕೆ ವ್ಯಕ್ತಪಡಿಸಿವೆ. ಈ ಕುರಿತು ಮಾಧ್ಯಮಗಳು ಪ್ರಶ್ನೆ ಎತ್ತುತ್ತಿದ್ದಂತೆ ಪ್ರತಿಕ್ರಿಯೆಗೆ ಯಡಿಯೂರಪ್ಪ ನಿರಾಕರಿಸಿದರು.

  • ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನವಿಲ್ಲ, ಜನರ ದುಡ್ಡನ್ನು ಲೂಟಿ ಮಾಡ್ತಿದ್ದೀರಿ – ಸರ್ಕಾರದ ವಿರುದ್ಧ ಹೆಚ್‍ಡಿಕೆ ಗರಂ

    ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನವಿಲ್ಲ, ಜನರ ದುಡ್ಡನ್ನು ಲೂಟಿ ಮಾಡ್ತಿದ್ದೀರಿ – ಸರ್ಕಾರದ ವಿರುದ್ಧ ಹೆಚ್‍ಡಿಕೆ ಗರಂ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನವಿಲ್ಲ, ಜನರ ದುಡ್ಡನ್ನು ಲೂಟಿ ಮಾಡ್ತಿದ್ದೀರಿ ಎಂದು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ನಿರಾಶಾದಾಯಕ ಪ್ಯಾಕೇಜ್. ಹೂವಿನ ಬೆಳೆಗಾರರಿಗೆ ಘೋಷಣೆ ಮಾಡಿರೋ ಪ್ಯಾಕೇಜ್ ಕಳೆದ ವರ್ಷಕ್ಕಿಂತ ಕಡಿಮೆ. ಇದು ಯಾವುದಕ್ಕೂ ಸಾಲುವುದಿಲ್ಲ. ಕೂಲಿ, ಬೀಜದ ಬೆಲೆ ಏರಿಕೆ ಆಗಿರೋವಾಗ ಈ ಸಹಾಯ ಏನೂ ಸಾಲೋದಿಲ್ಲ ಎಂದರು.

    ಇದು ಅರೆ ಕಾಸಿನ ಮಜ್ಜಿಗೆಗೆ ಕೊಟ್ಟ ಪರಿಹಾರದಂತೆ ಇದೆ. ಹಣ್ಣು, ತರಕಾರಿ ಬೆಳೆಗಾರರ ಪ್ಯಾಕೇಜ್ ಕೂಡಾ ಸರಿಯಿಲ್ಲ. ಆಟೋ, ಕ್ಯಾಬ್ ಡ್ರೈವರ್ ಗಳಿಗೆ ಈ ಹಣ ಸಾಕಾಗೊಲ್ಲ. ಕಾರ್ಮಿಕರು, ಚಮ್ಮಾರರು, ಕಮ್ಮಾರಿಗೆ ಕೊಟ್ಟ ಹಣ ಯಾವುದಕ್ಕೂ ಸಾಕಾಗೊಲ್ಲ. ಅಕ್ಕಿ ಕೊಡೋದ್ರಲ್ಲೂ ನಾಟಕ ಮಾಡಿದ್ದೀರಾ. 10 ಕೆಜಿ ಅಕ್ಕಿ ಕೂಡಾ ಸಾಕಾಗೊಲ್ಲ. ಇದು ರಾಜ್ಯ ಸರ್ಕಾರದ ನಾಟಕ. ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನ ಇಲ್ಲ ಎಂದು ಹೆಚ್‍ಡಿಕೆ ಜರಿದಿದ್ದಾರೆ.

    ಜನರ ದುಡ್ಡನ್ನು ನೀವು ಲೂಟಿ ಮಾಡ್ತಿದ್ದೀರಾ. ಜನರ ಸಹಕಾರಕ್ಕೆ ಸರ್ಕಾರ ಬರಬೇಕು. ಲೂಟಿ ಮಾಡೋದನ್ನ ಸರ್ಕಾರ ನಿಲ್ಲಿಸಬೇಕು. ನಿಗಮ-ಮಂಡಳಿಗಳಿಗೆ ನೇಮಕ ಮಾಡಿರೋರನ್ನ ರದ್ದು ಮಾಡಿ. ಆ ಹಣವನ್ನ ಜನರಿಗಾಗಿ ಉಪಯೋಗ ಮಾಡಿ. ಶ್ರಮಿಕರಿಗೆ ಕನಿಷ್ಠ 10 ಸಾವಿರ ಸಹಕಾರ ಕೊಡಲೇಬೇಕು. ಇದು ಜನತೆಯ ದುಡ್ಡು, ಇದು ಧರ್ಮಕ್ಕೆ ಕೊಡುತ್ತಿರೋದಲ್ಲ. ಜನರ ದುಡ್ಡು ಜನರಿಗೆ ಕೊಡಿ ಎಂದು ಆಗ್ರಹಿಸಿದರು.

    ಪ್ರತಿ ಕುಟುಂಬಕ್ಕೆ 10 ಸಾವಿರ ಕೊಡಿ. ಜನರ ಜೀವನದ ಚೆಲ್ಲಾಟ ಆಡಬೇಡಿ. ಇದು ಡಂಬಾಚಾರದ ಪ್ಯಾಕೇಜ್ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

  • ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ: ಡಿಕೆಶಿ

    ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ: ಡಿಕೆಶಿ

    – ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪ್ಯಾಕೇಜ್ ಘೋಷಣೆ

    ಬೆಂಗಳೂರು: ಕಳೆದ ಬಾರಿ ಹೀಗೆ ಲಾಕ್‍ಡೌನ್ ಪ್ಯಾಕೇಜ್ ಘೋಷಣೆ ಮಾಡಿದರು. ಸರಿಯಾಗಿ ಹಣ ಕೊಡಲಿಲ್ಲ. ಈಗ ಸರಿಯಾಗಿ ಪ್ಯಾಕೇಜ್ ಹಂಚಿಕೆ ಮಾಡ್ತಾರೆ ಅನ್ನೋ ಗ್ಯಾರಂಟಿ ಇಲ್ಲಾ ಎಂದು ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಸಾವಿರ ಪಂಚಾಯ್ತಿ ಮೂಲಕ ಕೊಡಬೇಕು. ಇದು ಕೊಡಬೇಕು ಅಂತ ಕೊಟ್ಟಿರೋದಲ್ಲ. ನಾವೆಲ್ಲಾ ಒತ್ತಾಯ ಮಾಡಿದೆವು ಅಂತ ಏನೋ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬಡವರ ಬಗ್ಗೆ ಚಿಂತನೆ ಮಾಡುವಂತ ಸರ್ಕಾರ ಅಂತು ಇದಲ್ಲ ಎಂದು ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಕೊಡುವ ವಿಧಾನವೇ ಸಂಪೂರ್ಣ ಫೈಲ್ಯೂರ್ ಆಗಿದೆ. ಇಂದಿರಾ ಕ್ಯಾಂಟೀನ್ ಊಟಕ್ಕೆ ಆಧಾರ್ ಕಾರ್ಡ್ ಐಡಿ ಕಾರ್ಡ್ ತನ್ನಿ ಅಂದಿದ್ದರು. ನಾವು ಹೇಳಿದ ಮೇಲೆ ವಾಪಸ್ ಪಡೆದರು. ಕಾರ್ಮಿಕರು ಶ್ರಮಿಕ ವರ್ಗಕ್ಕೆ ಏನು ಇಲ್ಲಾ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದಿದ್ದಾರೆ.

    ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ. ಹತ್ತು ಲಕ್ಷ ಡ್ರೈವರ್ ಇದ್ದಾರೆ ಎಂದು ಹೇಳಿ ಎರಡು ಲಕ್ಷ ಜನರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಪರಿಹಾರ ಹಂಚಿಕೆ ವಿಧಾನ ಸರಿ ಇಲ್ಲ. ಪರಿಹಾರ ಹಂಚುವ ಜವಾಬ್ದಾರಿ ಗ್ರಾಮ ಪಂಚಾಯ್ತಿಗೆ ಕೊಡಿ. ಅವರು ಮಡಿವಾಳ, ಕ್ಷೌರಿಕ ಹೂ ಮಾರುವವನು, ಆರ್ಚಕರು, ಅಡಿಗೆ ಮಾಡುವವನು ಎಲ್ಲರೂ ಅವರಿಗೆ ಗೊತ್ತಾಗುತ್ತೆ. ಹಳ್ಳಿ ಜನ ಮೋಸ ಮಾಡದೇ ಎಲ್ಲರಿಗೂ ಕೊಡ್ತಾರೆ ಎಂದಿದ್ದಾರೆ.

    ನಮಗಂತು ಸರ್ಕಾರದ ನಿರ್ವಾಹಣೆ ಬಗ್ಗೆ ವಿಶ್ವಾಸ ಇಲ್ಲ. ನಮ್ಮ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಸರ್ಕಾರದ ಮೇಲೆ ನಂಬಿಕೆ ಇಲ್ಲಾ ಅಂತಾನೆ ಡಿಸಿಗಳ ಜೊತೆ ಪಿಎಂ ಮೀಟಿಂಗ್ ಮಾಡಿದ್ದಾರೆ. ಇವರು ಪ್ಯಾಕೇಜ್ ಮಾಡಿರುವ ಹಂಚುವ ವಿಧಾನವೇ ಸರಿ ಇಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ.