Tag: P. Chidambaram press Conference

  • ಶೇ.8ರಿಂದ 4.5ಕ್ಕೆ ಜಿಡಿಪಿ ಇಳಿಕೆ, ಇದೇನಾ ಅಚ್ಛೇ ದಿನ್: ಚಿದಂಬರಂ ಪ್ರಶ್ನೆ

    ಶೇ.8ರಿಂದ 4.5ಕ್ಕೆ ಜಿಡಿಪಿ ಇಳಿಕೆ, ಇದೇನಾ ಅಚ್ಛೇ ದಿನ್: ಚಿದಂಬರಂ ಪ್ರಶ್ನೆ

    ನವದೆಹಲಿ: ದೇಶದ ಜಿಡಿಪಿ ಶೇ.8ರಿಂದ ಶೇ.4.5ಕ್ಕೆ ಇಳಿಕೆಯಾಗಿದ್ದು, ಇದೇನಾ ಅಚ್ಛೇ ದಿನ್ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಬರಂ ಪ್ರಶ್ನೆ ಮಾಡಿದ್ದಾರೆ.

    ಬುಧವಾರ ತಿಹಾರ್ ಜೈಲಿನಿಂದ ಹೊರ ಬಂದಿರುವ ಪಿ.ಚಿದಂಬರಂ ಇಂದು ಸುದ್ದಿಗೋಷ್ಠಿ ನಡೆಸಿ, ಮೋದಿ ಸರ್ಕಾರದ ಮೇಲೆ ಜಿಡಿಪಿ ಅಸ್ತ್ರವನ್ನ ಪ್ರಯೋಗಿಸಿದರು. ಕಳೆದ ಆರು ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.8ರಿಂದ ಶೇ.4.5ಕ್ಕೆ ಇಳಿಕೆಯಾಗಿದೆ. ಕೇಂದ್ರ ಸರ್ಕಾರ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

    ಇದೇನಾ ಅಚ್ಛೇ ದಿನ್?: ದೇಶದ ಆರ್ಥಿಕ ವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ. ಅರ್ಥವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಯಾವುದೇ ಉಪಾಯಗಳನ್ನು ಮಾಡುವಲ್ಲಿ ವಿಫಲವಾಗಿದೆ. ನೋಟ್ ಬ್ಯಾನ್, ಜಿಎಸ್‍ಟಿ ಮತ್ತು ಟ್ಯಾಕ್ಸ್ ಟೆರರಿಸಮ್ ಅರ್ಥವ್ಯವಸ್ಥೆಯ ಮೇಲೆ ನೇರ ಪರಿಣಾಮಗಳನ್ನು ಬೀರಿವೆ. ಬೇಕಾದ್ರೆ ನಾನು ನಿಮಗೆ ಕಳೆದ 6 ತ್ರೈಮಾಸಿಕದ ಅಂಕಿಅಂಶಗಳ ಮೂಲಕ ಸಾಬೀತು ಮಾಡುತ್ತೇನೆ. ಜಿಡಿಪಿ 8ರಿಂದ 7, 6.6, 5.5, 5 ಮತ್ತು 4.5ಕ್ಕೆ ಬಂದು ತಲುಪಿದೆ. ಇದೇನಾ ಎನ್‍ಡಿಎ ಸರ್ಕಾರ ಹೇಳಿರುವ ಅಚ್ಛೇ ದಿನ್ ಎಂದು ಪ್ರಶ್ನೆ ಮಾಡಿದರು.

    ಯಾರು ಹೊಣೆ?: ಈ ವರ್ಷದ ಅಂತ್ಯದೊಳಗೆ ಜಿಡಿಪಿ ದರ ಶೇ.5ಕ್ಕೆ ತಲುಪಿದ್ರೆ ನಿಮ್ಮನ್ನು ಅದೃಷ್ಟವಂತರು ಎನ್ನಬಹುದು. ಜಿಡಿಪಿ ಶೇ.5ಕ್ಕೆ ತಲುಪಿದಾಗ ಹಿರಿಯ ಅರ್ಥಶಾಸ್ತ್ರಜ್ಞರಾದ ಡಾ.ಅರವಿಂದ್ ಸುಬ್ರಮಣಿಯನ್ ಸರ್ಕಾರಕ್ಕೆ ಎಚ್ಚರಿಕೆಯನ್ನು ಸಹ ನೀಡಿದ್ದರು. ಆದ್ರೆ ಇಂದಿನ ಸ್ಥಿತಿ ಅದಕ್ಕಿಂತ ಕೆಟ್ಟದಾಗಿದೆ. ಎಂದಿನಂತೆ ಜಿಡಿಪಿ ವಿಷಯದಲ್ಲಿ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಈ ಸಂಬಂಧ ಸುಳ್ಳು ಮಾತನಾಡಲು ತಮ್ಮ ಮಂತ್ರಿಗಳನ್ನು ಬಿಟ್ಟಿದ್ದಾರೆ. ಸರ್ಕಾರ ಅರ್ಥವ್ಯವಸ್ಥೆ ನಿರ್ವಹಣೆಯಲ್ಲಿ ಎಡವಿದ್ದು, ಅದರ ಹೊಣೆಯನ್ನು ಹೊರಬೇಕಿದೆ ಎಂದರು.

    ವಿತ್ತಮಂತ್ರಿ ಈರುಳ್ಳಿ ತಿನ್ನಲ್ಲ: ಜಗತ್ತಿನ ಎಲ್ಲ ಉದ್ಯಮಿದಾರರು ವ್ಯವಹಾರದ ದೃಷ್ಟಿಯಿಂದ ಅಂತರಾಷ್ಟ್ರೀಯ ಪತ್ರಿಕೆಗಳನ್ನು ಓದುತ್ತಿರುತ್ತಾರೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಿ ಅಂಶಗಳನ್ನು ಗಮನಿಸಿ ದೇಶದ ಆರ್ಥಿಕತೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಲೆಕ್ಕ ಹಾಕುತ್ತಾರೆ. ಕೈಗಾರಿಕೆಗಳ ಸ್ಥಿತಿ ಕೆಟ್ಟದಾಗಿದ್ದು, ದಿನದಿಂದ ದಿನಕ್ಕೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಈರುಳ್ಳಿ ಬೆಲೆ ಕೆಜಿಗೆ 100 ರೂ.ಗಿಂತ ಹೆಚ್ಚಾಗಿದೆ. ಬಹುಶಃ ಹಣಕಾಸಿನ ಮಂತ್ರಿಗಳು ಈರುಳ್ಳಿ ತಿನ್ನದಿರಬಹುದು. ಹಾಗಾಗಿ ಪರಿಸ್ಥಿತಿಯ ಬಗ್ಗೆ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.

    ಕಾಶ್ಮೀರ ನಾಯಕರ ಬಗ್ಗೆ ಚಿಂತೆ: ಬುಧವಾರ ರಾತ್ರಿ 8 ಗಂಟೆಗೆ ತಿಹಾರ್ ಜೈಲಿನಿಂದ ಹೊರ ಬಂದು ಸ್ವತಂತ್ರದ ಉಸಿರು ತೆಗೆದುಕೊಂಡಿದ್ದೇನೆ. ಆದ್ರೆ ಆಗಸ್ಟ್ 4ರಿಂದ ಕಾಶ್ಮೀರದ 75 ಲಕ್ಷ ಜನರಿಗೆ ಸ್ವತಂತ್ರ ಸಿಕ್ಕಿಲ್ಲ. ಯಾವುದೇ ಆರೋಪಗಳಿಲ್ಲದೇ ಅನಾವಶ್ಯಕವಾಗಿ ಕಾಶ್ಮೀರದ ನಾಯಕರನ್ನು ಬಂಧನದಲ್ಲಿ ಇರಿಸಲಾಗಿದೆ. ನಮ್ಮ ಸ್ವಾತಂತ್ರದ ಬಗ್ಗೆ ಹೇಗೆ ಮಾತನಾಡುತ್ತವೆ. ಹಾಗೆಯೇ ಬೇರೆಯವರ ಸ್ವಾತಂತ್ರತೆ ಬಗ್ಗೆ ಹೋರಾಡಬೇಕಿದೆ ಎಂದರು.

    ಮಂತ್ರಿಯಾಗಿ ನನ್ನ ರೆಕಾರ್ಡ್ ಕ್ಲೀನ್ ಆಗಿದೆ. ನನ್ನೊಂದಿಗೆ ಕೆಲಸ ಮಾಡಿದ ಅಧಿಕಾರಿಗಳು ನನ್ನ ಸಂಪರ್ಕದಲ್ಲಿದ್ದಾರೆ. ನನ್ನ ಪ್ರಕರಣ ಏನು ಎಂಬುವುದು ಎಲ್ಲ ಪತ್ರಕರ್ತರಿಗೂ ಗೊತ್ತಿದೆ. ನನ್ನ ಪ್ರಕರಣಕ್ಕೆ ಸಂಬಂಧಿಸಿದ ಏನೇ ಪ್ರಶ್ನೆಗಳಿದ್ದರೂ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಸಂಪೂರ್ಣವಾಗಿ ಓದಿ. ಅಲ್ಲಿ ನಿಮಗೆ ಎಲ್ಲ ವಿಷಯಗಳು ಅರ್ಥವಾಗಲಿವೆ ಎಂದು ಪತ್ರಕರ್ತ ಪ್ರಶ್ನೆಗಳಿಗೆ ಉತ್ತರಿಸಿದರು.