Tag: Oxygen Shortage

  • ಬೆಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ – ಕೊಂಚ ಯಾಮಾರಿದ್ರೂ ರಣ ಭೀಕರ ದುರಂತ!

    ಬೆಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ – ಕೊಂಚ ಯಾಮಾರಿದ್ರೂ ರಣ ಭೀಕರ ದುರಂತ!

    – ಹಾರಿಹೋಗ್ತಿತ್ತು  ಸೋಂಕಿತರ ಜೀವ
    – ರಾತ್ರೋರಾತ್ರಿ ಕಾರ್ಯಾಚರಣೆ

    ಬೆಂಗಳೂರು: ಆಕ್ಸಿಜನ್ ಅಭಾವದಿಂದ ರಾತ್ರಿ ಕೆಸಿಜನರಲ್ ಆಸ್ಪತ್ರೆಯಲ್ಲಿ ನಡೆಯಬಹುದಾಗಿದ್ದ ಭಾರೀ ಅನಾಹುತ ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಪೊಲೀಸರ ಪ್ರಯತ್ನದಿಂದ ತಪ್ಪಿದೆ.

    ಒಟ್ಟು 150 ಮಂದಿ ಆಕ್ಸಿಜನ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕ್ಸಿಜನ್ ಟ್ಯಾಂಕ್ ಖಾಲಿಯಾಗುತ್ತಿದ್ದರೂ ಬರಬೇಕಾಗಿದ್ದ ಟ್ಯಾಂಕರ್ ಬಾರದೇ ಇದ್ದ ಕಾರಣ ವೈದ್ಯಧಿಕಾರಿಗಳಿಗೆ ಆತಂಕ ಎದುರಾಗಿತ್ತು. ಮಧ್ಯರಾತ್ರಿ ಡಿಸಿಎಂ ಅಶ್ವತ್ಥ ನಾರಾಯಣ ಮಧ್ಯಪ್ರವೇಶದಿಂದ ಬಿಕ್ಕಟ್ಟು ಬಗೆ ಹರಿದಿದ್ದು ವೈದ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮಧ್ಯರಾತ್ರಿ 3 ಗಂಟೆಗಳ ಕಾಲ ವೈದ್ಯಾಧಿಕಾರಿಗಳು ಮತ್ತು ತಾಂತ್ರಿಕ ತಂಡ ಕಾರ್ಯಾಚರಣೆ ಆಕ್ಸಿಜನ್ ಮೇಲೆ ನಿಗಾ ಇಟ್ಟು ಸಮಸ್ಯೆಯನ್ನು ಪರಿಹರಿಸಿದ್ದಾರೆ.

    ನಡೆದಿದ್ದು ಏನು?
    ಬಳ್ಳಾರಿಯಿಂದ ಹೊರಟಿದ್ದ ಆಕ್ಸಿಜನ್ ಟ್ಯಾಂಕರ್ ರಾತ್ರಿ 11ಕ್ಕೆ ಬರಬೇಕಿತ್ತು. ರಾತ್ರಿ 11:30 ಆದರೂ ಟ್ಯಾಂಕರ್ ಬಾರದೇ ಇದ್ದ ವಿಚಾರ ಆಕ್ಸಿಜನ್ ನಿರ್ವಹಣೆ ಹೊಣೆ ಹೊತ್ತಿದ್ದ ವೈದ್ಯಾಧಿಕಾರಿ ಡಾ. ವೆಂಕಟೇಶ್ ಪ್ರಸಾದ್ ಗಮನಕ್ಕೆ ಬಂದಿದೆ.

    ಯಾಕೆ ಬಂದಿಲ್ಲ ಎಂದು ವಿಚಾರಿಸಿದಾಗ ಟ್ಯಾಂಕರ್ ಸಕ್ರಾ ಆಸ್ಪತ್ರೆಗೆ ಹೋಗಿರುವ ವಿಚಾರ ಗೊತ್ತಾಗಿದೆ. ತಕ್ಷಣ ಕಾರ್ಯೋನ್ಮುಖರಾದ ವೈದ್ಯರು ಎಮರ್ಜೆನ್ಸಿ ಮತ್ತು ಇತರ ವಾರ್ಡ್‍ಗಳ ಆಕ್ಸಿಜನ್ ಮರುಹಂಚಿಕೆ ಮಾಡಿ ನಿಗಾ ಇಟ್ಟಿದ್ದರು.

    ಕೂಡಲೇ ಆಸ್ಪತ್ರೆಯ ವೈದ್ಯರು ನೇರವಾಗಿ ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಪೊಲೀಸರ ಮೊರೆ ಹೋಗುತ್ತಾರೆ. ಬೆಳಗಿನ ಜಾವ 5 ಗಂಟೆಯಷ್ಟೊತ್ತಿಗೆ ಆಕ್ಸಿಜನ್ ಪ್ಲಾಂಟ್ ನಿಂದ ಪೊಲೀಸ್ ಎಸ್ಕಾರ್ಟ್‍ನಲ್ಲಿ ಆಸ್ಪತ್ರೆಗೆ ಆಕ್ಸಿಜನ್ ಟ್ಯಾಂಕರ್ ಬರುತ್ತದೆ.

    ಕಡಿಮೆ ಹೇಗಾಯ್ತು?
    ಬೆಳಗ್ಗೆ ಮತ್ತು ಸಂಜೆ ಎರಡು ಗಂಟೆ ಟ್ಯಾಂಕ್‍ಗೆ ಆಕ್ಸಿಜನ್ ಭರ್ತಿ ಮಾಡಲಾಗುತ್ತದೆ. ಆಕ್ಸಿಜನ್ ನೋಡಿಕೊಳ್ಳುವ ತಂಡಕ್ಕೆ ಸಂಜೆ 6 ಗಂಟೆಗೆ ಟ್ಯಾಂಕ್ ಖಾಲಿಯಾಗುತ್ತಿರುವುದು ಗಮನಕ್ಕೆ ಬಂದಿದೆ. 8 ಟನ್ ಸಾಮರ್ಥ್ಯದ ಟ್ಯಾಂಕ್ ನಲ್ಲಿ ರಾತ್ರಿ 9 ಗಂಟೆಯ ವೇಳೆ ಇದು 3 ಟನ್‍ಗೆ ಕುಸಿದಿರುವುದನ್ನು ನೋಡಿ ಗಾಬರಿಗೊಂಡಿದ್ದಾರೆ. ಕೊನೆಗೆ ಇತರ ವಾರ್ಡ್‍ಗಳಿಗೆ ಮೀಸಲಾಗಿದ್ದ ಆಕ್ಸಿಜನ್ ಬಳಕೆ ಮಾಡಿ ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ.

  • ಆಕ್ಸಿಜನ್ ಕೊರತೆಗೆ ಸರ್ಕಾರ ಕಾರಣ ಅಲ್ಲ: ಸಚಿವ ಸೋಮಶೇಖರ್ ಉಡಾಫೆ ಉತ್ತರ

    ಆಕ್ಸಿಜನ್ ಕೊರತೆಗೆ ಸರ್ಕಾರ ಕಾರಣ ಅಲ್ಲ: ಸಚಿವ ಸೋಮಶೇಖರ್ ಉಡಾಫೆ ಉತ್ತರ

    ಬೆಂಗಳೂರು. ಆಕ್ಸಿಜನ್ ಕೊರತೆಗೆ ಸರ್ಕಾರ ಕಾರಣ ಅಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಉಡಾಫೆ ಉತ್ತರ ನೀಡಿದ್ದಾರೆ.

    ಆರೋಗ್ಯ ಸಚಿವ ಸುಧಾಕರ್ ಅವರನ್ನ ಭೇಟಿಯಾದ ನಂತರ ಎಸ್.ಟಿ.ಸೋಮಶೇಖರ್ ಮಾಧ್ಯಮಗಳ ಜೊತೆ ಮಾತನಾಡಿ, ಎಲ್ಲರಂತೆ ಸರ್ಕಾರವನ್ನು ಸಮರ್ಥಿಸಿಕೊಂಡರು. ಸಂಜೆ ಸಭೆ ಬಳಿಕ ಅಲ್ಲಿ ಚರ್ಚೆ ಮಾಡುತ್ತೇವೆ. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳು ಇರ್ತಾರೆ. ಅವರು ಕೆಲಸ ಮಾಡದೇ ಹೋದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು. ಅಧಿಕಾರಿಗಳ ನಿರ್ಲಕ್ಷ್ಯ ಇದರಲ್ಲಿದೆ ಎಂದು ಹೇಳಿ ಜಾರಿಕೊಂಡರು.

    ಎರಡು ಗಂಟೆಗೆ ಆಕ್ಸಿಜನ್ ಖಾಲಿ ಆಗುತ್ತೆ ಗೊತ್ತಿದ್ರೆ, 12 ಗಂಟೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದು ಹೇಳಿ ಕಾರ್ ಹೋದರು. ಇತ್ತ ಆರೋಗ್ಯ ಸಚಿವ ಕೆ. ಸುಧಾಕರ್, ಕಲಬುರಗಿ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

  • ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

    ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

    – ನನ್ನಳಿಯ ನನಗೆ ಬೇಕು, ಮಗಳನ್ನ ಹೀಗೆ ನೋಡಲಾರೆ: ಕಣ್ಣೀರಿಟ್ಟ ಹೆತ್ತೊಡಲು
    – ಪತ್ನಿಗೆ ಕರೆ ಮಾಡಿ ನರಳಿ ನರಳಿ ಸಾವನ್ನಪ್ಪಿದ ಸೋಂಕಿತ

    ಚಾಮರಾಜನಗರ: ರಾಜ್ಯ ಸರ್ಕಾರದ ಕುಂಭಕರ್ಣನ ನಿದ್ದೆಗೆ 24 ಅಮಾಯಕ ಜೀವಗಳು ಬಲಿಯಾಗಿದೆ. ಈ ದುರಂತದಲ್ಲಿ ಪತಿಯನ್ನ ಕಳೆದುಕೊಂಡು ನವ ವಧು ನನ್ನ ತಾಳಿ ಉಳಿಸಿಕೊಡಿ ಅಂತ ಕಣ್ಣೀರಿಟ್ಟ ದೃಶ್ಯ ನೋಡಿದವರು ಕಣ್ಣೀರು ಹಾಕುವಂತಿತ್ತು. ಇಷ್ಟು ಚಿಕ್ಕ ವಯಸ್ಸಿನ ಮಗಳನ್ನ ಹೀಗೆ ನೋಡಲಾರೆ ಅಂತ ಸೆರಗೊಡ್ಡಿ ಅಳಿಯನನ್ನ ಉಳಿಸಿಕೊಡಿ ಎಂದು ಹೆತ್ತಮ್ಮ ಕಣ್ಣೀರಿಡುತ್ತಿತ್ತು.

    ಬೆಳಗ್ಗೆ ಇಡ್ಲಿ ತರೋಕೆ ಹೇಳಿದ್ರು:
    ಬೆಂಗಳೂರಿನ ಯಲಹಂಕದ ಮಹಾದೇವ ಸ್ವಾಮಿ ಎಂಬ 28 ವರ್ಷದ ಯುವಕನಿಗೆ ಪಾಸಿಟಿವ್ ಆಗಿತ್ತು. 3 ದಿನಗಳ ಹಿಂದೆ ಬೆಂಗಳೂರಲ್ಲಿ ವೆಂಟಿಲೇಟರ್ ಇಲ್ಲ ಎಂದು ಕುಟುಂಬಸ್ಥರು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕ್ಸಿಜನ್ ಸಿಗದೇ ಸೋಂಕಿತ ಸಾವನ್ನಪ್ಪಿದ್ದಾನೆ. ಜಿಲ್ಲಾಸ್ಪತ್ರೆ ಮುಂದೆ ಕುಟುಂಬಸ್ಥರು ಬಿದ್ದು ಹೊರಳಾಡಿದ್ರು. ನಮಗೆ ಫೆಬ್ರವರಿ 21ಕ್ಕೆ ಮದ್ವೆ ಆಗಿತ್ತು. ನಿನ್ನೆ ರಾತ್ರಿ ಅವರಿಗೆ ನಾನೇ ಊಟ ಮಾಡಿಸಿ ಬಂದಿದ್ದೆ. ಬೆಳಗ್ಗೆ ತಿಂಡಿಗೆ ಇಡ್ಲಿ ಬೇಕೆಂದು ಹೇಳಿದ್ದರು. ಆದರೆ ಬೆಳಗ್ಗೆ ನೋಡಿದ್ರೆ ಹೀಗಾಗಿದೆ ಎಂದು ಮಹಾದೇವ ಸ್ವಾಮಿ ಪತ್ನಿ ಗೋಳಾಡಿದರು.

    ಮದ್ವೆಯಾಗಿ 2 ತಿಂಗಳು ಆಗಿತ್ತು:
    ಮಹದೇವಸ್ವಾಮಿ ಮದುವೆಯಾಗಿ ಎರಡು ತಿಂಗಳು ಆಗಿತ್ತು. ನಿನ್ನೆ ರಾತ್ರಿ ಹತ್ತೂವರೆ ಸುಮಾರಿಗೆ ಹೆಂಡ್ತಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ನನಗೆ ಆಕ್ಸಿಜನ್ ಪ್ರಾಬ್ಲಂ ಆಗ್ತಿದೆ. ಆಕ್ಸಿಜನ್ ಕೊಡ್ತಿಲ್ಲ ಅಂತ ಹೇಳಿದ್ದಾನೆ. ಆಗ ತಕ್ಷಣ ನರ್ಸ್ ಬಂದು ಫೋನ್ ಕಿತ್ತಿಕೊಂಡು ಇಟ್ಟುಕೊಂಡಿದ್ದಾರೆ. ಆಮೇಲೆ ಅವನು ನಾಲ್ಕೂವರೆ ಗಂಟೆ ನರಳಾಡಿ ನರಳಾಡಿ ಪ್ರಾಣ ಬಿಟ್ಟಿದ್ದಾನೆ ಅಂತ ಮೃತನ ಸಂಬಂಧಿ ಆರೋಪಿಸಿದ್ದಾರೆ. 24 ಸೋಂಕಿತರ ಸಾವಿಗೆ ಕಾರಣವಾದ ಚಾಮರಾಜನಗರ ಜಿಲ್ಲಾಸ್ಪತ್ರೆ ಎದುರು ಮೃತರ ಕುಟುಂಬಸ್ಥರು ಹಿಡಿ ಶಾಪ ಹಾಕುತ್ತಿದ್ದರು. ಮೃತದೇಹದ ಮೇಲೆ ರಕ್ತದ ಕಲೆಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸುವ ದೃಶ್ಯಗಳು ಕಂಡು ಬಂದವು.

    ಇಷ್ಟಾದ್ರೂ ಸರ್ಕಾರ ಮಾತ್ರ ಸಾಧ್ಯವಾದಷ್ಟೂ ನುಣಚಿಕೊಳ್ಳುವ ಮೂಲಕ ತನ್ನ ಹಳೆ ನಿರ್ಲಕ್ಷ್ಯದ ಚಾಳಿಯನ್ನ ಮುಂದುವರಿಸಿಕೊಂಡು, ಸಭೆ ಮಾಡ್ತೀವಿ, ಚರ್ಚೆ ಮಾಡ್ತೀವಿ, ತನಿಖೆ ಮಾಡ್ತೀವಿ ಅಂತ ತೋಚಿದ್ದನ್ನ ಹೇಳ್ಕೊಂಡು ಬೀಸೋ ದೊಣ್ಣೆಯಿಂದ ಪಾರಾದ್ರೆ ಸಾಕು ಅಂತ ಓಡಾಡ್ತಿದೆ.

    ಫೆಬ್ರವರಿ ಆರಂಭದಲ್ಲಿ ಕೊರೊನಾ ಸ್ಫೋಟದ ಮುನ್ಸೂಚನೆಯನ್ನ ತಜ್ಞರು ನೀಡಿದ್ರೂ ಸರ್ಕಾರ ಮಾತ್ರ ಏನೂ ಆಗಿಲ್ಲ ಅನ್ನುವಂತೆ ತನ್ನ ರಾಜಕಾರಣದಲ್ಲಿ ಮೈಮರೆತಿತ್ತು. ಈಗ ಸರ್ಕಾರದ ಬೇಜಾವಾಬ್ದಾರಿಗೆ 24 ಜೀವಗಳು ಬಲಿಯಾಗಿವೆ. ಒಂದೊಂದು ಕುಟುಂಬದ್ದು ಕಣ್ಣೀರ ಕಥೆ. ಕೇಳಿದ್ರೆ ಕಲ್ಲು ಹೃದಯದಲ್ಲಿ ಕಣ್ಣೀರು ಜಿನುಗುತ್ತೆ. ತಮ್ಮವರನ್ನ ಕಳೆದುಕೊಂಡವರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅದಕ್ಕಿಂತ ಸಾಮಾನ್ಯ ಜನರು ಏನು ಮಾಡೋದಕ್ಕೆ ಸಾಧ್ಯ ಇಲ್ಲ ಅನ್ನೋದು ತಿಳಿದ ಹುಂಬ ಸರ್ಕಾರ ಒಂದು ಸುದ್ದಿಗೋಷ್ಠಿ ನಡೆಸಿ ಅವರಿವರ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳೋಕೆ ಮುಂದಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

  • ಆಕ್ಸಿಜನ್ ಇಲ್ಲದೆ ಮೂವರಷ್ಟೇ ಸಾವು ಅಂತ ಸಚಿವರಿಬ್ಬರ ಸಮರ್ಥನೆ

    ಆಕ್ಸಿಜನ್ ಇಲ್ಲದೆ ಮೂವರಷ್ಟೇ ಸಾವು ಅಂತ ಸಚಿವರಿಬ್ಬರ ಸಮರ್ಥನೆ

    ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿರುವ ವಿಚಾರದಲ್ಲಿ ಸರ್ಕಾರ ತನ್ನ ಸಮರ್ಥನೆಯ ಚಾಳಿಯನ್ನ ಮುಂದುವರಿಸಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸುರೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಕೆ.ಸುಧಾಕರ್, ಆಕ್ಸಿಜನ್ ಇಲ್ಲದೇ ಮೂವರಷ್ಟೇ ಸಾವನ್ನಪ್ಪಿದ್ದು ಅಂತ ಸಮರ್ಥಿಸಿಕೊಂಡಿದ್ದಾರೆ. ಹಾಗಾದ್ರೆ ಸಚಿವರ ಪ್ರಕಾರ ಆ ಮೂರು ಜೀವಗಳಿಗೆ ಬೆಲೆ ಇಲ್ಲವಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

    ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗ್ತಿದ್ದಂತೆ ಎಚ್ಚೆತ್ತ ಸಚಿವರು ಚಾಮರಾಜನಗರಕ್ಕೆ ದೌಡಾಯಿಸಿದರು. ಪರಿಶೀಲನೆ ನಡೆಸಿ ಇಬ್ಬರು ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ 24 ಕೋವಿಡ್ ಸಂಬಂಧಿತ ಸಾವು ಆಗಿದೆ. ಆಮ್ಲಜನಕದ ಕೊರತೆಯಿಂದ 24 ಜನ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಎಲ್ಲ ಸಾವುಗಳು ಆಮ್ಲಜನಕ ಕೊರತೆಯಿಂದ ಸಂಭವಿಸಿಲ್ಲ. ಬೇರೆ ಬೇರೆ ಕಾರಣಗಳಿಂದಲೂ ಸಾವನ್ನಪ್ಪಿದ್ದಾರೆ. ಈ ಕುರಿತು ತನಿಖೆ ನಡೆಬೇಕಿದೆ. ಸರ್ಕಾರ ಸಹ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದರು.

    ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, 24 ಗಂಟೆಯಲ್ಲಿ 24 ಸಾವು ಆಗಿರೋದು ನೋವು ತಂದಿದೆ. ರಾತ್ರಿ 12 ಗಂಟೆವರೆಗೂ ಆಕ್ಸಿಜನ್ ಲಭ್ಯತೆ ಇತ್ತು. 123 ಕೋವಿಡ್ ರೋಗಿಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೇವಲ ಮೂವರು ಪ್ರಾಣವಾಯು ಇಲ್ಲದೇ ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲ್ಲ ಅಂತ ನುಣಚಿಕೊಂಡರು. ಇದನ್ನೂ ಓದಿ: ಸತ್ತಿರೋದು 24 ಅಲ್ಲ, 34 ರಿಂದ 35 – ಸುಳ್ಳು ಹೇಳ್ತಿದೆಯಾ ಸರ್ಕಾರ? – ಕಾಂಗ್ರೆಸ್ ಶಾಸಕರ ಸುದ್ದಿಗೋಷ್ಠಿ ತಡೆದ ಅಧಿಕಾರಿಗಳು

    24 ಅಲ್ಲ 35: ನನ್ನ ಪ್ರಕಾರ ಆಮ್ಲಜನಕ 34 ರಿಂದ 35 ಜನ ಸಾವನ್ನಪ್ಪಿದ್ದಾರೆ. ಪ್ರತಿದಿನ ಜಿಲ್ಲಾ ಸರ್ಜನ್, ಡಿಸಿ ಜೊತೆ ಮಾತನಾಡುತ್ತಿದ್ದೇನೆ. ನಿನ್ನೆ ವೈದ್ಯಾಧಿಕಾರಿಗಳು ಆಕ್ಸಿಜನ್ ಕೊರತೆ ಇದೆ ಎಂದು ಹೇಳಿದ್ದರು. ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ಮೈಸೂರು ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡುವಂತೆ ಹೇಳಿದ್ರು. ಅವರಿಗೆ ಹೇಳಿದ್ರೂ ಆಕ್ಸಿಜನ್ ಬರಲಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ. ಇದನ್ನೂ ಓದಿ: ದುರಂತದ ನಡುವೆ ವಿಚಿತ್ರ ಘಟನೆ – ಬದುಕಿದ್ರೂ ಸತ್ತಿದ್ದಾರೆ ಅಂತ ಸುಳ್ಳು ಮಾಹಿತಿ-ವೆಂಟಿಲೇಟರ್‌ನಲ್ಲಿದ್ದ ಅಮ್ಮನ ಕಂಡು ನಿಟ್ಟುಸಿರು ಬಿಟ್ಟ ಪುತ್ರ

  • ಆಕ್ಸಿಜನ್ ಕೊರತೆಯೇ ನಮ್ಮ ಮೇಜರ್ ಪ್ರಾಬ್ಲಂ: ಸಚಿವ ನಾರಾಯಣಗೌಡ

    ಆಕ್ಸಿಜನ್ ಕೊರತೆಯೇ ನಮ್ಮ ಮೇಜರ್ ಪ್ರಾಬ್ಲಂ: ಸಚಿವ ನಾರಾಯಣಗೌಡ

    – ಇವತ್ತು ರಾತ್ರಿ, ನಾಳೆಗೆ ಕಷ್ಟವಿದೆ

    ಮಂಡ್ಯ: ಆಕ್ಸಿಜನ್ ಕೊರತೆಯೇ ನಮ್ಮ ಮೇಜರ್ ಪ್ರಾಬ್ಲಂ. ಸದ್ಯ ಇವತ್ತು ಸಂಜೆಯವರೆಗೂ ಆಕ್ಸಿಜನ್ ಆಗಲಿದೆ. ಇವತ್ತು ರಾತ್ರಿ ಮತ್ತು ನಾಳೆಗೆ ಕಷ್ಟವಿದೆ. ಹಾಗಾಗಿ ನಾನೇ ಆಕ್ಸಿಜನ್ ಫಿಲ್ಲಿಂಗ್ ಕಂಪನಿಗೆ ಭೇಟಿ ನೀಡುತ್ತಿದ್ದೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಆಕ್ಸಿಜನ್ ಎಲ್ಲಿಯೂ ಸಿಗುತ್ತಿಲ್ಲ. ಮೆಡಿಕಲ್ ಕಾಲೇಜಿನಲ್ಲಿ 150 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ರೋಗಿಗಳನ್ನ ಒಂದು ಕಡೆ ಶಿಫ್ಟ್ ಮಾಡಲಾಗಿದೆ. ತಾಲೂಕುಗಳಿಗೆ ಆಕ್ಸಿಜನ್ ಸಿಲಿಂಡರ್ ಗಳೇ ಹೋಗಬೇಕು. ದಿನಕ್ಕೆ 350 ರಿಂದ 400 ಸಿಲಿಂಡರ್ ಗಳ ಅವಶ್ಯಕತೆವಿದೆ. ಇದುವರೆಗೂ ಯಾವುದೇ ಸಮಸ್ಯೆ ಆಗಿಲ್ಲ. ಈಗ ಆಕ್ಸಿಜನ್ ಅಭಾವ ಕಾಣಿಸಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಆಕ್ಸಿಜನ್ ಅಭಾವ ಹಿನ್ನೆಲೆ ನಾನೇ ಫ್ಯಾಕ್ಟರಿಗೆ ತೆರಳಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ತುಂಬಿ ಕಳುಹಿಸುವ ಕೆಲಸ ಮಾಡುತ್ತೇನೆ. ಇಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಬೇಕಾಗುತ್ತೆ ಅಂತ ಸರ್ಕಾರಕ್ಕೆ ಅಂದಾಜು ಇರಲಿಲ್ಲ. ಈಗ ಯಾರೇ ದಾಖಲಾದ್ರೂ ಆಕ್ಸಿಜನ್ ಕೇಳುತ್ತಾರೆ. ಗ್ರಾಮೀಣ ಭಾಗದ ಜನರು ಜ್ವರ ಬಂದ್ರೂ ಎಂಟರಿಂದ ಹತ್ತು ದಿನ ಅಲ್ಲೇ ಇರುತ್ತಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಆಸ್ಪತ್ರೆಗೆ ಬರುತ್ತಾರೆ. ಹಾಗಾಗಿ ಜಿಲ್ಲೆಯಲ್ಲಿ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.

    ಮಂಡ್ಯ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಾವಿರಕ್ಕೂ ಅಧಿಕ ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ವಸತಿ ನಿಲಯಗಳನ್ನ ಕೋವಿಡ್ ಕೇರ್ ಸೆಂಟರ್ ಗಳಾಗಿ ಬದಲಾಯಿಸಲಾಗಿದೆ. ಜಿಲ್ಲೆಯ ಕೊರೊನಾ ಸೋಂಕಿತರು ಅಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.