ರಾಂಚಿ: ಅನಾರೋಗ್ಯದಿಂದ ಬಳಲುತಿದ್ರೂ ರಜೆ ನೀಡಿಲ್ಲ ಎಂದು ಆರೋಪಿಸಿ ಬ್ಯಾಂಕ್ ನೌಕರರೊಬ್ಬರು ಆಕ್ಸಿಜನ್ ಸಿಲಿಂಡರ್ ಸಹಿತ ಕೆಲಸಕ್ಕೆ ಹಾಜರಾಗಿದ್ದಾರೆ. ಜಾರ್ಖಂಡ್ ನ ಬೊಕೊರಾದ ಸೆಕ್ಟರ್ 4ರಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಈ ಘಟನೆ ನಡೆದಿದೆ.
ಅರವಿಂದ್ ಕುಮಾರ್ ಆಕ್ಸಿಜನ್ ಸಿಲಿಂಡರ್ ಜೊತೆಯಲ್ಲಿ ಬ್ಯಾಂಕಿಗೆ ಬಂದ ನೌಕರ. ಕೆಲ ದಿನಗಳ ಹಿಂದೆ ಅರವಿಂದ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ವರದಿ ನೆಗಟಿವ್ ಬಂದಿದ್ರೂ ಉಸಿರಾಟದ ತೊಂದರೆಯಿಂದ ಮನೆಯಲ್ಲಿ ಆಕ್ಸಿಜನ್ ಸಪೋರ್ಟ್ ಮೇಲಿದ್ದರು. ಉಸಿರಾಟದ ಸಮಸ್ಯೆ ಜೊತೆಗೆ ಶ್ವಾಸಕೋಶದಲ್ಲಿ ಸೋಂಕು ತಗುಲಿದ್ದರಿಂದ ಮನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ರು.
ಅನಾರೋಗ್ಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ರಜೆ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಆದ್ರೂ ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಹಾಕಲಾಗ್ತಿದೆ. ಆದ್ದರಿಂದ ಆಕ್ಸಿಜನ್ ಸಿಲಿಂಡರ್ ಜೊತೆಯಲ್ಲಿಯೇ ಕೆಲಸಕ್ಕೆ ಬರುವಂತಾಗಿದೆ ಎಂದು ಅರವಿಂದ್ ಕುಮಾರ್ ಹೇಳಿದ್ದಾರೆ.
ಅರವಿಂದ್ ಕುಮಾರ್ ರಾಜೀನಾಮೆ ನೀಡಿದ್ರೂ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಎನ್ನಲಾಗುತ್ತಿದೆ. ಇಂದು ಅರವಿಂದ್ ಜೊತೆ ಅವರ ಕುಟುಂಬಸ್ಥರು ಸಹ ಬ್ಯಾಂಕಿಗೆ ಆಗಮಿಸಿದ್ದರು. ಇತ್ತ ಬ್ಯಾಂಕ್ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.
ಮುಂಬೈ: ಕೋವಿಡ್-19 ಎರಡನೇ ಅಲೆಯು ಭಾರತದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಸಂಕಷ್ಟದ ಸಮಯದಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸಹಾಯ ಮಾಡುತ್ತಿದ್ದಾರೆ. ದೇಶದ ಹಲವಾರು ರಾಜ್ಯಗಳಲ್ಲಿ ಆಕ್ಸಿಜನ್ ಹಾಗೂ ಬೆಡ್ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ. ಇಂತಹ ಜನರಿಗೆ ಇದೀಗ ಸಹಾಯ ಮಾಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂದೆ ಬಂದಿದ್ದಾರೆ.
ಕಾಂಗ್ರೆಸ್ ಶಾಸಕ ಬಾಬಾ ಸಿದ್ವಿಕ್ ಹಾಗೂ ಅವರ ಪುತ್ರ ಜೇಶಾನ್ ಸಿದ್ವಿಕ್‍ರೊಟ್ಟಿಗೆ ಸಲ್ಮಾನ್ ಖಾನ್‍ರವರು ಕೋವಿಡ್-19 ರೋಗಿಗಳಿಗೆ 500 ಆಕ್ಸಿಜನ್ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದಾರೆ. ಅವುಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ನಮ್ಮ ಮೊದಲ 500 ಆಕ್ಸಿಜನ್ ಸಿಲಿಂಡರ್‍ಗಳು ಮುಂಬೈಗೆ ತಲುಪಿದೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವ ಕೊರೊನಾ ಸೋಂಕಿತರು ಈ ಸಂಖ್ಯೆಗೆ ಕರೆ ಮಾಡಿ 8451869785. ನಾವು ಈ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುತ್ತೇವೆ, ಒಮ್ಮೆ ಬಳಸಿದ ನಂತರ ಅದನ್ನು ಹಿಂದಿರುಗಿಸಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಸದ್ದು ಮಾಡಿದ ಬೆನ್ನಲ್ಲೇ ಇದೀಗ ಆಕ್ಸಿಜನ್ ಮಾಫಿಯಾ ಸಹ ಬೆಳಕಿಗೆ ಬಂದಿದ್ದು, 300 ರೂ. ಬೆಲೆಯ ಆಕ್ಸಿಜನ್ ಸಿಲಿಂಡರ್‍ನ್ನು 3 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಗ್ಯಾಸ್ ಏಜೆನ್ಸಿ ಮೇಲೆ ದಾಳಿ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಲ್ಲಿನ ಸೀಗಾ ಗ್ಯಾಸ್ ಏಜೆನ್ಸಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಯ ವೇಳೆ ಸೀಗಾ ಗ್ಯಾಸ್ ಏಜೆನ್ಸಿ ಉಸ್ತುವಾರಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿ ರವಿಕುಮಾರ್ ದುಪ್ಪಟ್ಟು ಹಣಕ್ಕೆ ಆಕ್ಸಿಜನ್ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಸರ್ಕಾರದ ಬೆಲೆ 300 ರೂಪಾಯಿ ಆದರೆ ಆರೋಪಿ ರವಿಕುಮಾರ್ 3 ಸಾವಿರ ರೂಪಾಯಿಯಂತೆ 47 ಲೀಟರ್ ಸಿಲಿಂಡರ್ ಗ್ಯಾಸ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಆರೋಪಿಯನ್ನು ಆರೋಪಿಯನ್ನು ವಶಕ್ಕೆ ಪಡೆದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ದಾಳಿಯ ವೇಳೆ 47 ಲೀಟರ್ ಆಕ್ಸಿಜನ್ ಗ್ಯಾಸ್ 6 ಸಾವಿರಕ್ಕೆ ಮಾರಾಟ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿ ವಿರುದ್ಧ ಸೆಕ್ಷನ್ 420 ಡ್ರಗ್ಸ್ ಪ್ರೈಸ್ ಕಂಟ್ರೋಲ್ ಆರ್ಡರ್ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಮಂಡ್ಯ: ಜಿಲ್ಲೆಯಲ್ಲಿ ಎದುರಾಗುತ್ತಿರುವ ಆಕ್ಸಿಜನ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಜಿಲ್ಲೆಗೆ ಪ್ರತಿ ದಿನ 2000 ಲೀಟರ್ ಸಾಮರ್ಥ್ಯದ 20 ಜಂಬೋ ಸಿಲಿಂಡರ್ ಗಳನ್ನು ನೀಡಲು ಮುಂದಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸಂಸದೆ ಸುಮಲತಾ ಅಂಬರೀಶ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದಿದ್ದರು. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚೆ ಮಾಡಲಾಯಿತು. ಇದೇ ವೇಳೆ ಜಿಲ್ಲೆಯಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆ ನೀಗಿಸಲು ಏನು ಮಾಡಬೇಕೆಂದು ಸಹ ಚಿಂತನೆ ಮಾಡಲಾಯಿತು. ಆದರೆ ಸದ್ಯ ಸರ್ಕಾರದಿಂದ ಎಂಪಿ ಫಂಡ್ ಅಥವಾ ಬೇರೆ ಯಾವುದೂ ಅನುದಾನ ಇಲ್ಲದ ಕಾರಣ ಸುಮಲತಾ ಅವರು ನನ್ನ ಸ್ವಂತ ಖರ್ಚಿನಲ್ಲಿ ಪ್ರತಿ ದಿನ 2000 ಲೀಟರ್ ಆಕ್ಸಿಜನ್ ಕಳಿಸಿಕೊಡುತ್ತೇನೆ ಎಂದು ತಿಳಿಸಿದ್ದರು.
ಸುಮಲತಾ ಅವರು ಅಂದು ಕೊಟ್ಟ ಭರವಸೆಯಂತೆ ಇಂದು 2000 ಲೀಟರ್ ಸಾಮರ್ಥ್ಯ 20 ಜಂಬೋ ಸಿಲಿಂಡರ್‍ನ್ನು ಜಿಲ್ಲಾಡಳಿತದ ಮೂಲಕ ಮದ್ದೂರಿನ ಗುರುಶಾಂತಪ್ಪ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪ್ರತಿ ದಿನ ಇದೇ ರೀತಿ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಸಂಸದೆ ಸುಮಲತಾ ಅಂಬರೀಶ್ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ಸುಮಲತಾ ಅವರ ಈ ಕಾರ್ಯಕ್ಕೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಮುಂಬೈ: ಕಳೆದ ವರ್ಷ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಬಾಲಿವುಡ್ ನಟ ಸೋನುಸೂದ್ ಅನೇಕ ಮಂದಿಗೆ ಸಹಾಯ ಮಾಡಿದ್ದರು. ಇದೀಗ ಕೊರೊನಾ ಎರಡನೇ ಅಲೆ ಮೂಲಕ ತನ್ನ ಆರ್ಭಟ ಆರಂಭಿಸಿದ್ದು, ಈ ವೇಳೆ ಕೂಡ ಸೋನುಸೂದ್ ಜನರಿಗೆ ಸಹಾಯ ಮಾಡುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ನಟ ಸೋನು ಸೂದ್ ಮನೆಯ ಮುಂದೆ ನೆರವಿನ ಅಂಗಲಾಚಿ ಬಂದಿದ್ದ ಜನರೊಂದಿಗೆ ನಟ ಸೋನು ಸೂದ್ ಮಾತನಾಡುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ.
ಈ ವೀಡಿಯೋವನ್ನು ಭಯಾನಿ ಎಂಬವರು ಹಂಚಿಕೊಂಡಿದ್ದು, ಸಹಾಯ ಕೇಳಿಕೊಂಡು ಬಂದಿದ್ದ ಜನರೊಂದಿಗೆ ನಟ ಸೋನು ಸೂದ್ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.
ವೀಡಿಯೋ ಜೊತೆ “ಜನರು ಸಹಾಯಕ್ಕಾಗಿ ಸೋನು ಸೂದ್ ಅವರ ನಿವಾಸದ ಹೊರಗೆ ಸೇರಿದ್ದಾರೆ. ಈ ದೇಶದಲ್ಲಿ ಸದ್ಯ ಜನರು ನಂಬಿರುವ ಏಕೈಕ ವ್ಯಕ್ತಿ ಅಂದರೆ ಅದು ಸೋನು ಸೂದ್. ಅವರು ಇತರ ಸಂಸ್ಥೆಗಳಿಗಿಂತ ವೇಗವಾಗಿ ಸಹಾಯ ಮಾಡುತ್ತಿದ್ದಾರೆ. ಜನರು ತಮ್ಮ ಅಗತ್ಯತೆಗಳನ್ನು ಕೇಳುತ್ತಿದ್ದಾಗ ಎಂದಿಗೂ ಉತ್ತರಿಸದೇ ಹೋಗದ ಏಕೈಕ ವ್ಯಕ್ತಿ ಎಂದರೆ ಸೋನು ಸೂದ್‍ರವರಾಗಿದ್ದಾರೆ. ಇಂತಹ ಭೀಕರ ಸಾಂಕ್ರಾಮಿಕ ರೋಗದ ಪರಿಸ್ಥಿಯಲ್ಲಿಯೂ ಜನರ ಮಧ್ಯೆ ನಿಂತಿದ್ದಾರೆ ಎಂದು ಸೋನು ಸೂದ್ ಅಭಿಮಾನಿ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
ದೇಶಾದ್ಯಂತ ಸೋನು ಸೂದ್ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಸೋನು ಸೂದ್ ಹಾಗೂ ಅವರ ಸ್ವಯಂ ಸೇವಕರ ತಂಡ ಬೆಂಗಳೂರು ನಗರದ ಆಸ್ಪತ್ರೆಗೆ 16ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್‍ಗಳನ್ನು ಒದಗಿಸಿ, 20ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಪ್ರಾಣ ಉಳಿಸಿದ್ದಾರೆ.
ಬೀದರ್: ಖಾಸಗಿ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೀದರ್ ನಲ್ಲಿ ನಡೆದಿದೆ.
ಅಬ್ದುಲ್ ಮನ್ನಾನ್ ಸೇಠ್(63) ಆಕ್ಸಿಜನ ಸಿಗದೆ ಇಂದು ಸಾವನ್ನಪ್ಪಿದ್ದಾರೆ. ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಬಿಬಿಎಸ್ ಆಸ್ಪತ್ರೆಯಲ್ಲಿ ತಡರಾತ್ರಿ ಆಕ್ಸಿಜನ್ ಮುಗಿದರು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಯ ಮಹಾ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಆಕ್ಸಿಜನ್ ವ್ಯವಸ್ಥೆಮಾಡಿ 13 ಜನರ ಪ್ರಾಣ ಉಳಿದಿದ್ದು ಪೊಲೀಸರ ಸಮಯ ಪ್ರಜ್ಞೆಯಿಂದಾಗಿ 13 ಜನರು ಪ್ರಾಣಾಪಾಯದಿಂದ ಪಾರಾಗಿದ್ದರೆ. ಆದರೆ ಅಬ್ದುಲ್ ಮನ್ನಾನ್‍ಗೆ ಕೊರೊನಾ ಸೋಂಕು ಇಲ್ಲದೆ ಇದ್ದರೂ ಆಕ್ಸಿಜನ್ ಸಿಗದೆ ಉಸಿರಾಟದ ತೀವ್ರ ಸಮಸ್ಯೆಯಾಗಿ ಬ್ರೀಮ್ಸ್‍ಗೆ ದಾಖಲಾಗಿದ್ದರು, ಇಂದು ಸಾವನ್ನಪ್ಪಿದ್ದಾರೆ.
ಆಕ್ಸಿಜನ್ ಸಮಸ್ಯೆಯೇ ನನ್ನ ಸಹೋದರನ ಸಾವಿಗೆ ಕಾರಣ ಎಂದು ಆಕ್ಸಿಜನ್ ಸಮಸ್ಯೆಯಿಂದಾಗಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದರ್‌ನಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗುತ್ತಿದ್ದು ಜಿಲ್ಲಾಡಳಿತ ಇಗಲೇ ಎಚ್ಚರಗೊಳ್ಳಬೇಕಿದೆ. ಇಲ್ಲವಾದರೆ ಚಾಮರಾಜನಗರದ ಪರಿಸ್ಥಿತಿ ಗಡಿ ಜಿಲ್ಲೆಯಲ್ಲಿ ಸಂಭವಿಸಿದರೂ ಆಶ್ಚರ್ಯವಿಲ್ಲಾ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು: ನಾವು ಮೈಸೂರಿನ ಜನರ ಜೊತೆಗೆ ಮಂಡ್ಯ, ಚಾಮರಾಜನಗರದ ಜನರನ್ನು ಸಹ ರಕ್ಷಣೆ ಮಾಡಬೇಕು. ಎಲ್ಲಾ ಕಡೆ ಆಕ್ಸಿಜನ್ ಕೊರತೆ ಇದೆ. ಚಾಮರಾಜನಗರದ ಘಟನೆಯನ್ನು ನೋಡಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ 24 ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಚಾಮರಾಜದಲ್ಲಿ ಆಗಿರುವಂತಹ ಘಟನೆಯೆ ಮೈಸೂರಿನಲ್ಲಿಯೂ 2 ದಿನಹಿಂದೆ ಸಂಭವಿಸುತ್ತಿತ್ತು. ಆಗ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್ ಟಿ ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರು ಒಂದು ತಿರ್ಮಾನವನ್ನು ಮಾಡಿದ್ದೆವು. ಖಾಸಗಿ ಆಸ್ಪತ್ರೆಯವರಿಗೆ 2 ದಿನಕ್ಕೆ ಆಗುವಷ್ಟು ಶನಿವಾರ ಮತ್ತು ಭಾನುವಾರಕ್ಕೆ ಆಗುವಷ್ಟು ಆಕ್ಸಿಜನ್ ಕೊಟ್ಟು ಪರಿಸ್ಥಿತಿಯನ್ನು ನಾವು ಹತೋಟಿಗೆ ತಂದಿದ್ದೆವು. ಆದರೆ ಇವತ್ತು ಮತ್ತೆ ನಮಗೆ ಒತ್ತಡದ ಪರಿಸ್ಥಿತಿ ಇದೆ ಎಂದರು.
ನನಗೆ ಚಾಮರಾಜನಗರದ ಡಿಸಿ ಕರೆ ಮಾಡಿರಲಿಲ್ಲ. ನಾನೇ ಚಾಮರಾಜನಗರ ಡಿಸಿಗೆ ಕರೆಮಾಡಿದ್ದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಗೊತ್ತಾಯಿತು. ಇಲ್ಲಿ ತುಂಬಾ ಸಮಸ್ಯೆ ಎದುರಾಗಿದೆ ಎಂದು ಸಹ ಹೇಳಿದ್ದರು. ಆಗ ನಾನು ಚಾಮರಾಜನಗರ ಡಿಸಿಗೆ ಸಂಪರ್ಕಿಸಲು ಪ್ರಯತ್ನ ಪಟ್ಟೆ. ಆದರೆ ಅವರಿಗೆ ಕರೆ ಹೋಗಲಿಲ್ಲ, ಕಂಟ್ರೋಲ್ ರೂಂಗೆ ಹೋಯಿತು. ಆಗ ಅವರಿಗೆ ಡಿಸಿ ಅವರು ಬೇಗ ನನ್ನನ್ನು ಸಂಪರ್ಕ ಮಾಡಲಿ ಎಂದು ಹೇಳಿದ್ದೇನು.
ಚಾಮರಾಜನಗರ ಡಿಸಿ ಕರೆ ಮಾಡಿದ್ರು. ಈ ವೇಳೆ ಮೈಸೂರು ಎಡಿಸಿ ಅವರಿಗೆ ಕಾನ್ಫರೆನ್ಸ್ ಕಾಲ್ ಹಾಕಿದ್ದೆ. ಈ ವೇಳೆ ತಕ್ಷಣವಾಗಿ 50 ಸಿಲಿಂಡರ್ ಕಳಿಸಿಕೊಟ್ಟೆವು. ಬೆಳಗ್ಗಿನ ಜಾವ 3 ಗಂಟೆಗೆ ಮತ್ತು 7 ಗಂಟೆ ಸಹ ಕಳಿಸಿಕೊಟ್ಟಿದ್ದೇವೆ. ಇಷ್ಟಾದರೂ 24 ಜನ ಸಾವನ್ನಪ್ಪಿರುವುದು ನಮಗೆ ನೋವು ತಂದಿದೆ. ನಾವು ಮೈಸೂರಿನ ಜನರ ಜೊತೆಗೆ ಮಂಡ್ಯ, ಚಾಮರಾಜನಗರದ ಜನರನ್ನು ಸಹ ರಕ್ಷಣೆ ಮಾಡಬೇಕು. ಎಲ್ಲಾ ಕಡೆ ಆಕ್ಸಿಜನ್ ಕೊರತೆ ಇದೆ. ಮೈಸೂರಿಗೆ 73 ಕೆಎಲ್ ಆಕ್ಸಿಜನ್ ಬೇಕಾಗಿದೆ. ನಾನು ಯಾರ ಮೇಲಿಯೂ ಆರೋಪ ಮಾಡಲ್ಲ ಎಂದಿದ್ದಾರೆ.
ಸದ್ಯ ಎಲ್ಲಾ ಕಡೆ ಸವಾಲಿನ ಪರಿಸ್ಥಿತಿ ಇದೆ. ಈಗ ಅವರಿವರನ್ನು ದೂಶಿಸುವುದು ಸರಿಯಲ್ಲ. ಚಾಮರಾಜನಗರದ ಘಟನೆಯನ್ನು ನೋಡಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಚಾಮರಾಜನಗರ ಡಿಸಿ ಮೈಸೂರಿನ ಜಿಲ್ಲಾಡಳಿತಕ್ಕೆ ಮೊದಲು ಕೇಳಿದ್ದಾರೆ. ಮೈಸೂರಿನಲ್ಲಿ ಕೆಆರ್ ಆಸ್ಪತ್ರೆಯಲ್ಲಿ 300 ಬೆಡ್‍ಗಳು ಇವೆ. ಇಲ್ಲೂ ಸ್ವಲ್ಪ ಸಮಸ್ಯೆ ಇದ್ದರಿಂದ ಅದು ಆಗಿಲ್ಲ. ನಾನು ಕರೆ ಮಾಡಿದ್ದಾಗ ಅವರು 50 ಸಿಲಿಂಡರ್ ಬೇಕು ಎಂದು ಕೇಳಿಕೊಂಡಿದ್ದರು ನಾನು ಕಳಿಸಿಕೊಟ್ಟಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನಮಗೆ ಟ್ರಾನ್ಸ್‍ಪೋರ್ಟ್ ಸಮಸ್ಯೆ ಎದುರಾಗುತ್ತಿದೆ. ಜನರು ಸಹ ಜಾಗೃತರಾಗಬೇಕು ಎಂದು ತಿಳಿಸಿದ್ದಾರೆ.
ಮೈಸೂರು: ನಿನ್ನೆ ರಾತ್ರಿ 12.30ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟಿದ್ದಾರೆ ಎಂಬ ಎಂಬ ಗಂಭೀರ ಆರೋಪಕ್ಕೆ ಮೈಸೂರು ಜಿಲ್ಲಾಡಳಿತ ಪ್ರತಿಕ್ರಿಯೆ ನೀಡಿದೆ.
ಚಾಮರಾಜನಗರದವರ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಸರಿಯಾದ ಸಮಯದಲ್ಲಿ ಬಂದಿದ್ದೇಯಾ ಇಲ್ಲವೋ ಗೊತ್ತಿಲ್ಲ. ಆಕ್ಸಿಜನ್ ಲಿಕ್ವಿಡ್ ಬಳ್ಳಾರಿಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು. ಆದರೆ ನಿನ್ನೆ ರಾತ್ರಿ 12:30ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು 250 ಆಕ್ಸಿಜನ್ ಸಿಲಿಂಡರ್ ಕಳುಹಿಸಲಾಗಿದೆ ಎಂದು ತಿಳಿಸಿದೆ
ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ವಿಳಂಬ ಮಾಡಿಲ್ಲ. ನಾವು ಅಧಿಕೃತವಾಗಿ 250 ಆಕ್ಸಿಜನ್ ಸಿಲಿಂಡರ್ ನಿನ್ನೆ ಮಧ್ಯರಾತ್ರಿಯ ವೇಳೆಗೆ ಕಳಿಸಿರೋದು ದಾಖಲೆಯಲ್ಲಿದೆ. ಮೈಸೂರಿನ ಸೌತ್ರನ್ ಗ್ಯಾಸ್‍ನಿಂದ 210 ಹಾಗೂ ಮೈಸೂರು ಜಿಲ್ಲಾ ಆಸ್ಪತ್ರೆಯಿಂದ 40 ಆಕ್ಸಿಜನ್ ಗ್ಯಾಸ್ ಸಿಲಿಂಡರ್ ಚಾಮರಾಜನಗರಕ್ಕೆ ನಿನ್ನೆ ಮಧ್ಯರಾತ್ರಿಯೆ ರವಾನೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಸ್ಪಷನೆ ನೀಡಿದೆ.
ಚಾಮರಾಜನಗರಕ್ಕೆ 250 ಆಕ್ಸಿಜನ್ ಸಿಲಿಂಡರ್ ಕಳಿಸಿದ್ದೇವೆ ಎನ್ನುತ್ತಿದೆ ಮೈಸೂರು ಜಿಲ್ಲಾಡಳಿತ. ಹಾಗಾದರೆ ತಪ್ಪು ಯಾರಾದು? ಲಿಕ್ವಿಡ್ ಆಕ್ಸಿಜನ್ ಬರೋದು ವಿಳಂಬವಾಗಿದ್ದೇ ಸಾವಿಗೆ ಕಾರಣವಾ? ಲಿಕ್ವಿಡ್ ಆಕ್ಸಿಜನ್ ತರಿಸಿಕೊಳ್ಳೋ ವಿಚಾರದಲ್ಲಿ ಸರಿಯಾದ ಪ್ಲಾನ್ ಮಾಡಲಿಲ್ವಾ ಚಾಮರಾಜ ನಗರ ಡಿಸಿ? ಡಿಸಿ ಬೇಜವಾಬ್ದಾರಿ ತನಕ್ಕೆ ಬಲಿಯಾದ್ರಾ ಅಮಾಯಕ ಜನ? ಅಥವಾ ಮೈಸೂರು – ಚಾಮರಾಜ ನಗರ ಡಿಸಿಗಳ ನಡುವಿನ ಹೊಂದಾಣಿಕೆ ಕೊರತೆಗೆ ಬಲಿಯಾದ್ರಾ ಅಮಾಯಕರು ಎನ್ನುವ ಪ್ರಶ್ನೆಗಳು ಎದ್ದಿದೆ.
ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. 24 ಮಂದಿ ಸಾವನ್ನಪ್ಪಿರುವುದನ್ನು ಖಚಿತಪಡಿಸಿದ ಆರೋಗ್ಯಾಧಿಕಾರಿಗಳು. ನಿನ್ನೆ ರಾತ್ರಿ 16, ಬೆಳಗಿನ ಜಾವ 6 ಕ್ಕು ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಕೊರತೆಯಿಂದ ಬಲಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ನಿನ್ನೆ ರಾತ್ರಿ ಆಕ್ಸಿಜನ್ ಖಾಲಿಯಾಗಿದ್ದು ಎಂದು ರೋಗಿಗಳ ಸಂಬಂಧಿಕರ ಆರೋಪ ಜಿಲ್ಲಾಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಲಕ್ನೋ: ಕೊರೊನಾ ದಿಂದ ಬಳಲುತ್ತಿರುವ ಸೋಂಕಿತರು ಆಕ್ಸಿಜನ್ ಇಲ್ಲದೆ ಪ್ರಾಣವನ್ನು ಬಿಡುತ್ತಿದ್ದಾರೆ. ಆದರೆ ಉದ್ಯಮಿಯೊಬ್ಬರು ಆಕ್ಸಿಜನ್ ಸಿಲಿಂಡರ್‌ಗಳನ್ನು ಕೇವಲ 1 ರೂಪಾಯಿಗೆ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉತ್ತರ ಪ್ರದೇಶದ ಹಮಿರ್ಪುರ್ ಜಿಲ್ಲೆಯ ಉದ್ಯಮಿ ಮನೋಜ್ ಗುಪ್ತಾ ಕೇವಲ 1 ರೂ.ಗೆ ಸಿಲಿಂಡರ್ ರೀಫಿಲ್ ಮಾಡಿಕೊಡುವ ಮೂಲಕ ಸೋಂಕಿತರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ಮನೋಜ್ ಗುಪ್ತಾರ ಮಾನವೀಯತೆಯಿಂದ ನಿತ್ಯ ಅದೆಷ್ಟೋ ಸೋಂಕಿತರು ಸಾವಿನ ದವಡೆಯಿಂದ ಪಾರಾಗುತ್ತಿದ್ದಾರೆ.
ದೇಶದಲ್ಲಿ ಕೊರೊನಾ 2ನೇ ಅಲೆಯ ಭೀಕರತೆ ತಾಂಡವವಾಡುತ್ತಿದೆ. ಆಕ್ಸಿಜನ್ ಕೊರತೆಯಿಂದ ಸೋಂಕಿತರು ಉಸಿರು ಚೆಲ್ಲುತ್ತಿದ್ದಾರೆ. ಆಕ್ಸಿಜನ್ ಪೂರೈಕೆ ಸಮಸ್ಯೆಯನ್ನು ನೀಗಿಸಲು ಸರ್ಕಾರಗಳು ಹರಸಾಹಸಪಡುತ್ತಿವೆ. ಇಂಥ ಸಂಕಷ್ಟದ ಸಮಯದಲ್ಲಿ ಮನೋಜ್ ಅವರು ಮಾಡುತ್ತಿರು ಈ ಸಹಾಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
1 ರೂಪಾಯಿಗೆ ಆಕ್ಸಿಜನ್ ತುಂಬಿಸಿಕೊಡುವ ಗುಪ್ತಾರ ನಿರ್ಧಾರ ಹಿಂದೆಯೂ ಒಂದು ಮನಕಲಕುವ ಘಟನೆಯಿದೆ. ಕಳೆದ ವರ್ಷ ಮನೋಜ್ ಗುಪ್ತಾ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ನಾನು ಅನುಭವಿಸಿದ ಯಾತನೆ ಮತ್ತೊಬ್ಬರು ಅನುಭವಿಸಬಾರದು ಎಂಬ ಉದ್ದೇಶದಿಂದಲೇ ಈ ಕೆಲಸಕ್ಕೆ ಮುಂದಾದೆ ಎಂದು ಗುಪ್ತಾ ಅವರು ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕಾರ್ಖಾನೆಯಲ್ಲಿ ನಿತ್ಯ 1 ಸಾವಿರ ಸಿಲಿಂಡರ್‌ಗಳಿಗೆ ಆಕ್ಸಿಜನ್ ತುಂಬಬಹುದು. ಸೋಂಕಿತರ RTPCR ರಿಪೋರ್ಟ್ ನೋಡಿ ಆಕ್ಸಿಜನ್ ಸಿಲಿಂಡರ್ ರಿಫೀಲ್ ಮಾಡಿಕೊಡಲಾಗುತ್ತಿದೆ. ಕೇವಲ 1 ರೂಪಾಯಿ ಪಡೆದು ನಾನು ನಿತ್ಯ 1 ಸಾವಿರ ಸಿಲಿಂಡರ್‌ಗಳಿಗೆ ಆಕ್ಸಿಜನ್ ತುಂಬಿ ಕೊಡುವ ಕೆಲಸ ಮಾಡುತ್ತಿದ್ದೇನೆ ಎಂದು ಗುಪ್ತಾ ಅವರು ಹೆಮ್ಮೆಯಿಂದ ಹೇಳಿದ್ದಾರೆ.
ಹಣ ಕೊಡಲು ಸಾಧ್ಯವಾಗದ ಬಡವರು ದೂರದೂರುಗಳಿಂದ ಇಲ್ಲಿಗೆ ಆಗಮಿಸಿ ಆಕ್ಸಿಜನ್ ಸಿಲಿಂಡರ್ ಪಡೆಯುತ್ತಿದ್ದಾರೆ. ಸಂಕಷ್ಟದಿಂದ ಬಂದ ಯಾರನ್ನೂ ಗುಪ್ತಾ ನಿರಾಸೆಗೊಳಿಸದೆ ಸಾಮರ್ಥ್ಯ ಇರುವಷ್ಟು ಆಕ್ಸಿಜನನ್ನು ರೀಫಿಲ್ ಮಾಡಿ ಕೊಡುತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ ಸಾವಿನ ಹಂಚಿನಲ್ಲಿದ್ದ ಅದೆಷ್ಟೋ ಸೋಂಕಿತರು ಇವರಿಂದ ಪಾರಾಗುತ್ತಿದ್ದಾರೆ.
ಭೋಪಾಲ್: ಕೋವಿಡ್ ಸೋಂಕಿತರಿಗೆ ನೀಡಲಾಗುವ ಆಕ್ಸಿಜನ್ ಸಿಲಿಂಡರ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಮಧ್ಯ ಪ್ರದೇಶದ ಆಸ್ಪತ್ರೆಗೆ ತರಲಾಗಿದ್ದ ಆಕ್ಸಿಜನ್ ಸಿಲಿಂಡರ್‍ಗಳನ್ನು ದುಷ್ಕರ್ಮಿಗಳು ಕದ್ದಿರುವ ಘಟನೆ ದಾಮೋದ್ ಜಿಲ್ಲೆಯಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ತರಲಾಗುತ್ತಿತ್ತು. ಆಮ್ಲಜನಕ ಸಿಲಿಂಡರ್‍ಗಳು ಇದ್ದ ವಾಹನವು ಜಿಲ್ಲಾಸ್ಪತ್ರೆಗೆ ಬರುತ್ತಿದ್ದಂತೆ ಟ್ರಕ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಸಿಲಿಂಡರ್‍ಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.
MP: Oxygen cylinders looted by some people at Damoh District Hospital last night. District Collector says, “We’ve been told that as soon as Oxygen truck came, people looted cylinders even when the hospital has adequate Oxygen supply. We’re identifying these people & filing cases” pic.twitter.com/K0D2wh6UwC
ಆಕ್ಸಿಜನ್ ಸಿಲಿಂಡರ್‍ಗಳು ಲೂಟಿಯಾಗಿರುವುದು ನಿಜ. ಆದರೆ ಇದರಿಂದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿಲ್ಲ. ಆಸ್ಪತ್ರೆಯಲ್ಲಿ ಸಾಕಷ್ಟು ಆಕ್ಸಿಜನ್ ಮೊದಲೇ ಇತ್ತು. ಹೀಗಾಗಿ ರೋಗಿಗಳು ಆತಂಕಪಡುವ ಅಗತ್ಯತೆ ಇಲ್ಲ. ನಾವು ಪ್ರಕರಣವನ್ನು ದಾಖಲಿಸಿದ್ದೇವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ದಾಮೋ ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದ್ದಾರೆ.