Tag: ox

  • ವಿದ್ಯುತ್ ತಂತಿ ಹರಿದು ಬೆಂಕಿ- ಕೊಟ್ಟಿಗೆಯಲ್ಲಿದ್ದ ಏಳು ಜಾನುವಾರು ಸಜೀವ ದಹನ

    ವಿದ್ಯುತ್ ತಂತಿ ಹರಿದು ಬೆಂಕಿ- ಕೊಟ್ಟಿಗೆಯಲ್ಲಿದ್ದ ಏಳು ಜಾನುವಾರು ಸಜೀವ ದಹನ

    ಹಾವೇರಿ: ವಿದ್ಯುತ್ ತಂತಿ ಹರಿದು ಬಿದ್ದಿದರಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಎತ್ತು, ಎಮ್ಮೆ, ಆಕಳುಗಳು ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ಜಿಲ್ಲೆಯ ಹಾನಗಲ್ ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತ ಫಕ್ಕೀರಪ್ಪ ಜಾನುಗುಂಡಿ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ದುರ್ಘಟನೆ ನಡೆದಿದೆ. ದನದ ಕೊಟ್ಟಿಗೆಯಲ್ಲಿದ್ದ ಎರಡು ಎತ್ತು, ಎರಡು ಎಮ್ಮೆ, ಒಂದು ಆಕಳು ಹಾಗೂ ಎರಡು ಕರುಗಳು ಸಜೀವ ದಹನವಾಗಿವೆ.

    ದನದ ಕೊಟ್ಟಿಗೆ ಊರಿನಿಂದ ದೂರ ಇದ್ದು, ಮಾಲೀಕರು ಊರಿನ ಮನೆಯಲ್ಲಿದ್ದಾಗ ಘಟನೆ ಸಂಭವಿಸಿದೆ. ನಿರ್ಜನ ಪ್ರದೇಶವಾಗಿದ್ದರಿಂದ ಬೆಂಕಿ ನಿಯಂತ್ರಿಸುವಲ್ಲಿ ತಡವಾಗಿದೆ. ಕೊಟ್ಟಿಗೆಯಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದ್ದಿದ್ದು, ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿದೆ. ಎತ್ತು, ಎಮ್ಮೆ, ಆಕಳು ಸಾವನ್ನಪ್ಪಿರುವುದರಿಂದ ರೈತ ಪಕ್ಕೀರಪ್ಪ ಅವರಿಗೆ ಎರಡು ಲಕ್ಷಕ್ಕೂ ಅಧಿಕ ರೂಪಾಯಿ ಹಾನಿಯಾಗಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ರಾಯಚೂರಿನಲ್ಲಿ ಸಿಡಿಲಿಗೆ 4 ಎತ್ತು ಬಲಿ – ಬಿರುಗಾಳಿಗೆ 9 ಕುಟುಂಬ ಬೀದಿಗೆ

    ರಾಯಚೂರಿನಲ್ಲಿ ಸಿಡಿಲಿಗೆ 4 ಎತ್ತು ಬಲಿ – ಬಿರುಗಾಳಿಗೆ 9 ಕುಟುಂಬ ಬೀದಿಗೆ

    ರಾಯಚೂರು: ತಾಲೂಕಿನ ಅರಷಿಗೆರೆಯಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಬಯಲು ಕೊಟ್ಟಿಗೆಯಲ್ಲಿ ಕಟ್ಟಿದ್ದ ನಾಲ್ಕು ಎತ್ತುಗಳು ಸಾವನ್ನಪ್ಪಿವೆ.

    ಅರಷಿಗೆರೆಯ ರೈತ ಶೇಖರಯ್ಯವರಿಗೆ ಸೇರಿದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳನ್ನು ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ. ಮುಂಗಾರು ಬಿತ್ತನೆಯ ಸಂದರ್ಭದಲ್ಲಿ ಎತ್ತುಗಳ ಕಳೆದುಕೊಂಡಿರುವುದು ರೈತನಿಗೆ ತುಂಬಲಾರದ ನಷ್ಟವಾಗಿದೆ. ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ರಾಯಚೂರು ತಾಲೂಕಿನ ಯದ್ಲಾಪುರ ಗ್ರಾಮದಲ್ಲಿ ಬಿರುಗಾಳಿಗೆ 9 ಟಿನ್ ಶೆಡ್ ಮನೆಗಳು ಸಂಪೂರ್ಣ ಜಖಂಗೊಂಡಿವೆ. ಟಿನ್‍ಗಳು ಗಾಳಿಗೆ ಹಾರಿ ವಿದ್ಯುತ್ ತಂತಿಯ ಮೇಲೆ ಬಿದ್ದಿವೆ. ಮನೆಯಲ್ಲಿನ ದವಸ ಧಾನ್ಯ ಸೇರಿದಂತೆ ಎಲ್ಲಾ ವಸ್ತುಗಳು ಬಿರುಗಾಳಿ ಸಹಿತ ಮಳೆಗೆ ಹಾಳಾಗಿವೆ. ಬಿರುಗಾಳಿಯಿಂದ ಒಂಭತ್ತು ಬಡ ಕುಟುಂಬಗಳು ಸೂರನ್ನು ಕಳೆದುಕೊಂಡು ವಾಸಮಾಡಲು ಜಾಗವಿಲ್ಲದೆ ಪರದಾಡುತ್ತಿವೆ.

    ರಮೇಶ್, ಜಿಂದಾವಲಿ, ಅಬ್ದುಲ್ ಸಾಬ್, ಮಾರೆಪ್ಪ, ಹುಲಿಗೆಮ್ಮ, ಹನುಮಂತಿ ಸೇರಿ ಒಂಭತ್ತು ಜನರ ಮನೆಗಳು ಸಂಪೂರ್ಣ ಹಾಳಾಗಿವೆ. ತಾಲೂಕು ಆಡಳಿತ ಕೂಡಲೇ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಮನೆ ಕಳೆದುಕೊಂಡ ನಿರಾಶ್ರಿತರು ಒತ್ತಾಯಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಅಲ್ಲಲ್ಲಿ ಭಾರಿ ಗಾಳಿ ಹಾಗೂ ಮಳೆಯಾಗಿದೆ.

  • ನರಗುಂದದಲ್ಲಿ ಮತ್ತೆ ಭೂಕುಸಿತ – 15 ಅಡಿ ಆಳದಲ್ಲಿ ಸಿಲುಕಿ ನರಳಾಡಿದ ಎತ್ತು

    ನರಗುಂದದಲ್ಲಿ ಮತ್ತೆ ಭೂಕುಸಿತ – 15 ಅಡಿ ಆಳದಲ್ಲಿ ಸಿಲುಕಿ ನರಳಾಡಿದ ಎತ್ತು

    ಗದಗ: ರೈತರೊಬ್ಬರ ಮನೆ ಮುಂದಿನ ರಸ್ತೆ ಪಕ್ಕದಲ್ಲಿ ಎತ್ತು ಕಟ್ಟಿದ್ದ ಸ್ಥಳದಲ್ಲಿಯೇ ಭೂಕುಸಿತ ಸಂಭವಿಸಿ, 15 ಅಡಿ ಆಳದಲ್ಲಿ ಎತ್ತು ಸಿಲುಕಿಕೊಂಡು ಒದ್ದಾಗಿದ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ದಂಡಾಪೂರ ಮಸೀದಿ ಬಳಿ ನಡೆದಿದೆ.

    ನರಗುಂದ ನಿವಾಸಿ ಸಿದ್ದಪ್ಪ ಕುರಿ ಅವರಗೆ ಸೇರಿದ ಎತ್ತು ಭೂಕುಸಿತದಲ್ಲಿ ಸಿಲುಕಿಕೊಂಡಿತ್ತು. ಸುಮಾರು 15 ಅಡಿಯ ಆಳದವರೆಗೂ ಮಣ್ಣು ಕುಸಿದಿದ್ದು, ಎತ್ತು ಗುಂಡಿಯಲ್ಲಿ ಸಿಲುಕಿಕೊಂಡು ನರಳಾಡಿದೆ. ಎತ್ತು ಕೂಗುತ್ತಿದ್ದ ಶಬ್ಧ ಕೇಳಿ ಹೊರಗೆ ಬಂದ ರೈತ, ಭೂಕುಸಿತ ನೋಡಿ ದಿಗ್ಭ್ರಾಂತರಾಗಿದ್ದಾರೆ. ನಂತರ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸ್ಥಳಿಯರು ಭೂಕುಸಿತದ ಗುಂಡಿಯಲ್ಲಿ ಸಿಲುಕಿದ್ದ ಎತ್ತನ್ನು ಮೇಲೆಕ್ಕೆ ಕರೆತರಲು ಹರಸಾಹಸ ಪಟ್ಟಿದ್ದಾರೆ.

    ಘಟನೆ ನಡೆದ ಒಂದು ಗಂಟೆ ನಂತರ ಜೆಸಿಬಿ ಬಳಸಿಕೊಂಡು ಎತ್ತನ್ನು ರಕ್ಷಣೆ ಮಾಡಲಾಯಿತು. ಸ್ಥಳೀಯರು, ಅಗ್ನಿಶಾಮಕದಳ ಸಿಬ್ಬಂದಿ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಟ್ಟಾಗಿ ಕಾರ್ಯಾಚರಣೆ ನಡೆಸಿ ಎತ್ತನ್ನು ರಕ್ಷಣೆ ಮಾಡಿದರು. ನರಗುಂದ ಪಟ್ಟಣದಲ್ಲಿ ಪದೇ ಪದೇ ಭೂಕುಸಿತವಾಗುತ್ತಿದ್ದು, ಸ್ಥಳೀಯರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.

  • ಎತ್ತಿನ ಗಾಡಿಗೆ ಬಸ್ ಡಿಕ್ಕಿ- ಎತ್ತು, ರೈತ ಸ್ಥಳದಲ್ಲೇ ಸಾವು

    ಎತ್ತಿನ ಗಾಡಿಗೆ ಬಸ್ ಡಿಕ್ಕಿ- ಎತ್ತು, ರೈತ ಸ್ಥಳದಲ್ಲೇ ಸಾವು

    ಗದಗ: ಎತ್ತಿನ ಗಾಡಿ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಎತ್ತು ಹಾಗೂ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಅಡವಿ ಸೋಮಾಪುರ ಬಳಿ ನಡೆದಿದೆ.

    ಸಂಭಾಪೂರ ಗ್ರಾಮದ ರೈತರು ತಮ್ಮ ಜಮೀನಿನ ಕೆಲಸ ಮೂಗಿಸಿಕೊಂಡು ಮನೆಗೆ ಬರುವ ವೇಳೆ ಬಸ್‍ವೊಂದು ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ 75 ವರ್ಷದ ಹನುಮಪ್ಪ ಮುಳ್ಳೂರ ಹಾಗೂ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಡಿಯಲ್ಲಿ ಕುಳಿತ್ತಿದ್ದ ಫಕೀರಪ್ಪ ಹಾಗೂ ನಾರಾಯಣಗೆ ಗಂಭೀರ ಗಾಯಗಳಾಗಿವೆ. ಸಾವು ಬದುಕಿ ನಡುವೆ ನರಳಾಡುತ್ತಿದ್ದ ಇಬ್ಬರು ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗದಗನಿಂದ ಉಪ್ಪಿನ ಬೆಟಗೇರಿಗೆ ಹೊರಟಿದ್ದ ಬಸ್ ವೇಗವಾಗಿ ಬಂದಿದೆ. ಓವರ್‍ಟೆಕ್ ಮಾಡುವ ವೇಳೆ, ಬಸ್ ಚಾಲಕನ ಅಜಾಗರೂಕತೆಯಿಂದ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಹುಬ್ಬಳ್ಳಿಯಿಂದ ಹೊಸಪೇಟೆವರೆಗೆ ರಾಷ್ಟ್ರೀಯ ಹೆದ್ದಾರಿ 63 ರ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ವಿಳಂಬ ಜೊತೆಗೆ ಸರ್ವಿಸ್ ರಸ್ತೆಯಿಲ್ಲದಿರುವುದರಿಂದ ಇಂತಹ ಅನೇಕ ಘಟನೆಗಳು ನಡೆಯುತ್ತಿವೆ ಎಂಬುದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ತಡೆದ ಸ್ಥಳೀಯರು ರಸ್ತೆ ನಡುವೆ ಕಲ್ಲು ಇಟ್ಟು ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಸ್ಥಿತಿ ತಿಳಿಗೊಳಿಸಿದರು. ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಷ ಆಹಾರ ಸೇವನೆ – ಎರಡು ಎತ್ತು, ಒಂದು ಹಸು ಸಾವು

    ವಿಷ ಆಹಾರ ಸೇವನೆ – ಎರಡು ಎತ್ತು, ಒಂದು ಹಸು ಸಾವು

    ಮಂಡ್ಯ: ವಿಷ ಆಹಾರ ಸೇವಿಸಿದ ಪರಿಣಾಮ 2 ಎತ್ತು ಹಾಗೂ ಒಂದು ಹಸು ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತರಾದ ರವಿ, ಪ್ರೀತಮ್ ಹಾಗೂ ಲೀಲಾ ಎಂಬುವವರಿಗೆ ಸೇರಿದ ರಾಸುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಮೃತಪಟ್ಟ ರಾಸುಗಳು ಅಂದಾಜು 1.20 ಲಕ್ಷ ರೂ. ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ.

    ವಿಷ ಆಹಾರ ಸೇವಿಸಿದ ರಾಸುಗಳು ಒದ್ದಾಡುತ್ತಿದ್ದವು ಕೂಡಲೇ ರೈತರು ಪಶು ವೈದ್ಯರಿಗೆ ಕರೆ ಮಾಡಿದ್ದಾರೆ. ವೈದ್ಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮೃತಪಟ್ಟಿದ್ದವು.

    ಪಶುವೈದ್ಯ ಡಾ.ಗೋವಿಂದ ಹಾಗೂ ರಾಮ ಕೃಷ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಷ ಆಹಾರ ಸೇವಿಸಿ ಮೃತಪಟ್ಟಿವೆ ಎಂದು ದೃಢಪಡಿಸಿದ್ದಾರೆ. ರಾಸುಗಳು ಸಾವನ್ನಪ್ಪಿದ್ದರಿಂದ ಸರ್ಕಾರದಿಂದ ಪರಿಹಾರ ಕೊಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಸ್ತೆ ಗುಂಡಿಯಲ್ಲಿ ಕಾಲಿಟ್ಟು ತನ್ನ ಎರಡು ಕಾಲು ಕಳೆದುಕೊಂಡ ಎತ್ತು

    ರಸ್ತೆ ಗುಂಡಿಯಲ್ಲಿ ಕಾಲಿಟ್ಟು ತನ್ನ ಎರಡು ಕಾಲು ಕಳೆದುಕೊಂಡ ಎತ್ತು

    ಧಾರವಾಡ: ಹೊಲದಲ್ಲಿ ಉಳುಮೆ ಮಾಡಿ ವಾಪಸ್ ಬರುವಾಗ ರಸ್ತೆ ಗುಂಡಿಗೆ ಕಾಲಿಟ್ಟ ಎತ್ತಿನ ಎರಡು ಕಾಲುಗಳು ಮುರಿದ ಘಟನೆ ಧಾರವಾಡ ನಗರದ ಮುರುಘಾಮಠದ ಬಳಿ ನಡೆದಿದೆ.

    ನಗರದ ಗಾಂಧಿಚೌಕದ ನಿವಾಸಿಯಾದ ಶಂಕರ ಉಳ್ಳಾಗಡ್ಡಿ ಎಂಬವರಿಗೆ ಸೇರಿದ ಎತ್ತು ರಸ್ತೆ ಗುಂಡಿಗೆ ಬಿದ್ದು ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದೆ. ನಗರದ ಹೊರವಲಯದ ಕವಲಗೇರಿ ಗ್ರಾಮದ ರಸ್ತೆಯಲ್ಲಿ ಇವರ ಹೊಲಗಳಿವೆ. ಅಲ್ಲಿ ಎತ್ತಿನ ಮಾಲೀಕ ಉಳುಮೆ ಮುಗಿಸಿಕೊಂಡು ವಾಪಸ್ ಬರುವಾಗ ಈ ಘಟನೆ ನಡೆದಿದೆ.

    ಕಳೆದ ಹಲವು ದಿನಗಳಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ ಎಂದು ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಯಾರೂ ಕ್ಯಾರೇ ಎಂದಿರಲಿಲ್ಲ. ಎತ್ತಿನ ಕುಟುಂಬದವರು ಸ್ಥಳಕ್ಕೆ ಬಂದು ಕಣ್ಣೀರು ಹಾಕಿದ್ದು ಎಲ್ಲರಿಗೆ ನೋವು ತಂದಿದೆ. ಎತ್ತಿನ ಮಾಲೀಕ ಶಂಕರ ಎರಡು ಎತ್ತುಗಳನ್ನು ಮಹಾರಾಷ್ಟ್ರ ದಿಂದ ತಂದಿದ್ದರು. ಒಟ್ಟು 1 ಲಕ್ಷ 40 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಅದರಲ್ಲಿ ಒಂದು ಎತ್ತು ಕಾಲು ಕಳೆದುಕೊಂಡಿದ್ದು, ರೈತನಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

    ಮೊದಲೇ ಅಕಾಲಿಕ ಮಳೆಗೆ ಸಾಕಷ್ಟು ನಷ್ಟದಲ್ಲಿರುವ ರೈತನಿಗೆ ಇದು ಕೂಡಾ ಸಾಕಷ್ಟು ನೋವು ತಂದಿದೆ. ಸದ್ಯ ಈ ಎತ್ತಿಗೆ ಎಷ್ಟೇ ಖರ್ಚು ಮಾಡಿದರೂ ಅದು ಎದ್ದು ಓಡಾಡದ ಸ್ಥಿತಿಯಲ್ಲಿದ್ದು, ಇದಕ್ಕೆ ಇಲ್ಲಿಯ ಜನಪ್ರತಿನಿಧಿಗಳೇ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಟಿಸಿ ಹೊತ್ತು ನೀರಿನಲ್ಲಿ ಈಜಿದ ಎತ್ತುಗಳು

    ಟಿಸಿ ಹೊತ್ತು ನೀರಿನಲ್ಲಿ ಈಜಿದ ಎತ್ತುಗಳು

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ಬಂಡಿ ಜೋಡಿಸಿದ ಎತ್ತುಗಳೊಂದಿಗೆ ರೈತರು ಸಾಹಸ ಮೆರೆದಿದ್ದಾರೆ. ಎತ್ತಿನ ಬಂಡಿಯಲ್ಲಿ ಟಿಸಿಯನ್ನು ಕೃಷ್ಣ ನದಿಯ ದಡ ಸೇರಿಸಿದ್ದಾರೆ.

    ಪ್ರಾಣ ಒತ್ತೆ ಇಟ್ಟು ಎತ್ತುಗಳಿಂದ ವಿದ್ಯುತ್ ಪರಿವರ್ತಕ (ಟಿ.ಸಿ)ಯನ್ನು ಸ್ಥಳಾಂತರ ಮಾಡಲಾಗಿದೆ. ಕೃಷ್ಣಾ ನದಿಯ ಪ್ರವಾಹದ ನೀರಿನಲ್ಲಿ ಮುಳುಗಿ ಸುಟ್ಟುಹೋಗಿದ್ದ ಟಿಸಿಯನ್ನು ಇದೀಗ ಪ್ರವಾಹ ಕಡಿಮೆ ಆಗಿದ್ದರಿಂದ ಟಿಸಿ ದುರಸ್ತಿಗೆ ರೈತರು ತೆಗೆದುಕೊಂಡು ಹೋಗಿದ್ದಾರೆ.

    ಟಿಸಿ ಸ್ಥಳಾಂತರಿಸಲು ರೈತರು, ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಸಾಹಸ ಮಾಡಿದ್ದಾರೆ. ಕೃಷ್ಣಾ ನದಿ ಪ್ರವಾಹದಿಂದ ಸಂಗ್ರಹಗೊಂಡ ಹಳ್ಳದ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಟಿಸಿಯನ್ನು ರೈತರು ಹೊತ್ತೊಯ್ಯುದಿದ್ದಾರೆ. ನೀರಲ್ಲಿ ಪೂರ್ತಿ ಮುಳುಗಿದ್ದರೂ ಎತ್ತುಗಳು ಬಂಡಿಯನ್ನು ಈಜಿಕೊಂಡು ದಡ ಸೇರಿಸಿವೆ. ತಂಗಡಗಿ ಶಾಖೆಯ ಸೆಕ್ಷನ್ ಅಧಿಕಾರಿ ಎಂ.ಎಸ್.ತೆಗ್ಗಿನಮಠ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

  • ಎತ್ತಿನ ಬಂಡಿಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ವಾಲಿದ ಬಸ್ – ಎತ್ತು ಸಾವು

    ಎತ್ತಿನ ಬಂಡಿಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ವಾಲಿದ ಬಸ್ – ಎತ್ತು ಸಾವು

    ಬಾಗಲಕೋಟೆ: ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸಾವನ್ನಪ್ಪಿದ್ದು, ಡಿಕ್ಕಿ ಬಳಿಕ ನಿಯಂತ್ರಣ ತಪ್ಪಿ ಬಸ್ ಹಳ್ಳಕ್ಕೆ ನುಗ್ಗಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ನಡೆದಿದೆ.

    ಹಿರೇಪಡಸಲಗಿ-ನಾಗೂರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಬಸ್ ಜಮಖಂಡಿಯಿಂದ ಹಿರೇಪಡಸಲಗಿ ಗ್ರಾಮಕ್ಕೆ ಹೊರಟಿತ್ತು. ಈ ಬಸ್ಸಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ನಗರಕ್ಕೆ ಶಾಲೆ-ಕಾಲೇಜಿಗೆ ಹೋಗುತ್ತಾರೆ. ಇದೇ ವೇಳೆ ರಸ್ತೆ ಬದಿ ಬಯಲು ಶೌಚಕ್ಕೆ ಕುಳಿತಿದ್ದ ವೃದ್ಧೆಯನ್ನು ಉಳಿಸಲು ಹೋಗಿ ಬಸ್ ಎತ್ತಿನ ಬಂಡಿಗೆ ಗುದ್ದಿದೆ. ಪರಿಣಾಮ ಒಂದು ಎತ್ತು ಮೃತಪಟ್ಟಿದೆ. ಅಷ್ಟೇ ಅಲ್ಲದೇ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದು ಬಸ್ ಹಳ್ಳಕ್ಕೆ ವಾಲಿದೆ. ಇದರಿಂದ ಬಂಡಿ ಹೊಡೆಯುವ ರೈತನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಇನ್ನೊಂದು ಎತ್ತು ಪ್ರಾಣಾಪಾಯದಿಂದ ಪಾರಾಗಿದೆ.

    ಬಸ್ ಹಳ್ಳಕ್ಕೆ ನುಗ್ಗಿದ್ದ ಪರಿಣಾಮ ಐದು ಗ್ರಾಮಗಳ ವಿದ್ಯಾರ್ಥಿಗಳಿಗೆ ಇಂದು ಶಾಲೆ ಮತ್ತು ಕಾಲೇಜಿಗೆ ಹೋಗಲು ತೊಂದರೆಯಾಗಿದೆ. ಇಂದು ಮುಂಜಾನೆಯ ಮಂಜು, ಇಕ್ಕಟ್ಟಾದ ರಸ್ತೆಯಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎತ್ತಿನಗಾಡಿಗೆ ಕಾರ್ ಡಿಕ್ಕಿ- 1 ಎತ್ತು ಸ್ಥಳದಲ್ಲೇ ಸಾವು, ರಸ್ತೆಯಲ್ಲಿ ನರಳಾಡಿದ ಮತ್ತೊಂದು ಎತ್ತು

    ಎತ್ತಿನಗಾಡಿಗೆ ಕಾರ್ ಡಿಕ್ಕಿ- 1 ಎತ್ತು ಸ್ಥಳದಲ್ಲೇ ಸಾವು, ರಸ್ತೆಯಲ್ಲಿ ನರಳಾಡಿದ ಮತ್ತೊಂದು ಎತ್ತು

    ಮಂಡ್ಯ: ಎತ್ತಿನಗಾಡಿಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಂದು ಎತ್ತು ಮತ್ತು ರೈತ ಗಾಯಗೊಂಡಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಇಂದು ಮುಂಜಾನೆ ಇಂಡವಾಳು ಗ್ರಾಮದ ಸಮೀಪ ಬೆಂಗಳೂರು ಮೈಸೂರು ಹೆದಾರಿಯಲ್ಲಿ ವೇಗವಾಗಿ ಬಂದ ಕಾರು ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಮತ್ತೊಂದು ಎತ್ತು ಗಂಭೀರವಾಗಿ ಗಾಯಗೊಂಡಿದ್ದು, ಹೆದ್ದಾರಿ ಪಕ್ಕದಲ್ಲೇ ನರಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

     

    ಎತ್ತಿನಗಾಡಿ ಓಡಿಸುತ್ತಿದ್ದ ರೈತ ಮನು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವ್ಯವಸಾಯದ ಕೆಲಸಕ್ಕೆ ಹೋಗುತ್ತಿದ್ದ ಎತ್ತಿನಗಾಡಿಗೆ ಅಪಘಾತವಾದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಎತ್ತುಗಳನ್ನೇ ಜೀವನಾಧಾರವಾಗಿ ನಂಬಿದ್ದ ರೈತ ಮುಂದಿನ ದಾರಿ ಕಾಣದೆ ಕಂಗಾಲಾಗಿದ್ದಾರೆ.

     

  • ಭಾರೀ ಮಳೆಗೆ ಕುಸಿದ ಮನೆಯ ಮೇಲ್ಛಾವಣಿ- 4 ಎತ್ತು, 1 ಆಕಳು ಸಾವು

    ಭಾರೀ ಮಳೆಗೆ ಕುಸಿದ ಮನೆಯ ಮೇಲ್ಛಾವಣಿ- 4 ಎತ್ತು, 1 ಆಕಳು ಸಾವು

    ಹುಬ್ಬಳ್ಳಿ: ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದು ಜಾನುವಾರಗಳು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಗಣೇಶ ಪೇಟೆಯ ಬಡಾವಣೆಯಲ್ಲಿ ನಡೆದಿದೆ.

    ನಗರದ ಗಣೇಶ ಪೇಟೆ ಶೆಟ್ಟರ್ ಓಣಿಯಲ್ಲಿ ಮಲ್ಲಿಕಾರ್ಜುನ್ ಕೊರವಿ ಅವರ ಶಿಥಿಲಾವಸ್ಥೆಯಲ್ಲಿದ್ದ, ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದಿದೆ. ಈ ಪರಿಣಾಮ ನಾಲ್ಕು ಎತ್ತು ಮತ್ತು ಒಂದು ಆಕಳು ಸಾವನ್ನಪ್ಪಿವೆ.

    ಎತ್ತುಗಳನ್ನು ಕಳೆದುಕೊಂಡಿದ್ದರಿಂದ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಈ ವೇಳೆ ಮಲ್ಲಿಕಾರ್ಜುನ್ ಅವರ ಮಗಳು ವನಜಾ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಯಂತ್ರ ಬಳಸಿ ಎತ್ತುಗಳನ್ನು ಹೊರ ತೆಗೆಯಲು ಗ್ರಾಮಸ್ಥರ ಸಹಾಯದಿಂದ ಪೊಲೀಸ್ ಸಿಬ್ಬಂದಿ ಹೊರ ತೆಗೆದಿದ್ದಾರೆ.