Tag: owner

  • ಹಣ ಕೊಡ್ಲಿಲ್ಲ ಅಂತ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ

    ಹಣ ಕೊಡ್ಲಿಲ್ಲ ಅಂತ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ

    – ‘ನಿನ್ನೆಯಿಂದ ಟೈಟಾಗಿದ್ದೀನಿ, ಇವತ್ತು 2 ಕ್ವಾಟ್ರು ಕುಡ್ದಿದ್ದೀನಿ’

    ಚಿಕ್ಕಮಗಳೂರು: ಹೆಂಡತಿ-ಮಕ್ಕಳಿಗೆ ಹಣ ಬೇಕು. ನಿಮ್ಮ ಕಾಲಿಗೆ ಬೀಳ್ತೀನಿ ಅಂದ್ರು ಮಾಲೀಕ ಹಣ ಕೊಡಲಿಲ್ಲ ಅಂತ ಹೇಳದೆ-ಕೇಳದೆ ಎಣ್ಣೆ ಏಟಲ್ಲಿ 14 ಚಕ್ರದ ಟಿಪ್ಪರ್ ಲಾರಿಯನ್ನ ತೆಗೆದುಕೊಂಡು ಊರಿಗೆ ಹೋಗಲು ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

    ಮಂಗಳೂರು ಮೂಲದ ರಂಗಪ್ಪ ಎಂಬವನು ಕಡೂರು ತಾಲೂಕಿನಲ್ಲಿ ಪ್ರಭಾಕರ್ ಅವರ ಬಳಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದಮೇಲೆ ಡ್ರೈವರ್ ರಂಗಪ್ಪ ಒಂದೂವರೆ ತಿಂಗಳು ಊರಿಗೆ ಹೋಗಿಲ್ಲ. ಹೀಗಾಗಿ ಮಾಲೀಕನಿಗೆ ಹೆಂಡತಿ-ಮಕ್ಕಳಿಗೆ ಜೀವನಕ್ಕೆ ದುಡ್ಡು ಬೇಕು, ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಕೇಳಿಕೊಂಡಿದ್ದರೂ ಮಾಲೀಕ ಹಣ ಹಾಕಿರಲಿಲ್ಲ. ಇದರಿಂದಾಗಿ ಎಣ್ಣೆ ಮತ್ತಲ್ಲಿದ್ದ ರಂಗಪ್ಪ ಟಿಪ್ಪರ್ ನಲ್ಲಿ ಅರ್ಧ ಟ್ಯಾಂಕರ್ ಡಿಸೇಲ್ ಇದ್ದರಿಂದ ಊರಿಗೆ ಮುಟ್ತಿನಿ ಎನ್ನುವ ನಂಬಿಕೆ ಬಂದಿತ್ತು. ಆದರೆ ಮಾಲೀಕನಿಗೆ ಹೇಳದೆ ಲಾರಿ ತಂದು ಕೊಟ್ಟಿಗೆಹಾರ ಚೆಕ್‍ಪೋಸ್ಟ್‍ನಲ್ಲಿ ಸಿಕ್ಕಿಬಿದ್ದಿದ್ದಾನೆ.

    ಮದ್ಯದ ಮತ್ತಿನಲ್ಲಿದ್ದ ರಂಗಪ್ಪ, “ಊಟಕ್ಕೆ ದುಡ್ ಇರಲಿಲ್ಲ, ಊಟವೂ ಇಲ್ಲ. ಹಣ ಯಾರ್ ಕೊಡ್ತಾರೆ. ಒಂದು ಹೊಟೇಲ್ ಇಲ್ಲ. ಅದಕ್ಕೆ ಲಾರಿಯಲ್ಲಿ ಡಿಸೇಲ್ ಇತ್ತು ಕೀ ನನ್ನ ಬಳಿಯೇ ಇತ್ತು. ಊರಿಗೆ ಹೊರಟಿದ್ದೇನೆ. ಬಿಟ್ಟರೇ ಊರಿಗೆ ಹೋಗ್ತೀನಿ. ಬಿಡಲಿಲ್ಲ ಅಂದ್ರೆ ಲಾರಿಯನ್ನ ಇಲ್ಲೇ ನಿಲ್ಲಿಸ್ತೀನಿ. ಸಾಕು ನನಗೆ ಊಟ ಕೊಡಿ” ಎಂದು ಪೊಲೀಸರಿಗೆ ಕೇಳಿದ್ದಾನೆ. ಸ್ಥಳೀಯರು ಕೇಳಿದ ಪ್ರಶ್ನೆಗೆಲ್ಲಾ ಹರಳು ಹುರಿದಂತೆ ಉತ್ತರಿಸಿದ ರಂಗಪ್ಪ, “ರೆಕಾರ್ಡ್ ಮಾಡ್ಕಳಿ, ನಿನ್ನೆಯಿಂದ ಟೈಟಾಗಿದ್ದೀನಿ, ಇವತ್ತು ಎರಡು ಕ್ವಾಟ್ರು ಕುಡಿದಿದ್ದೀನೆ. ಹೆಂಡತಿ-ಮಕ್ಕಳ ನೋಡ್ಬೇಕು ಹೋಗ್ತೀನಿ” ಎಂದಿದ್ದಾನೆ.

  • ಮನೆಯೊಳಗೆ ಬರದಂತೆ ನವದಂಪತಿಯನ್ನು ತಡೆದ ಮಾಲೀಕ

    ಮನೆಯೊಳಗೆ ಬರದಂತೆ ನವದಂಪತಿಯನ್ನು ತಡೆದ ಮಾಲೀಕ

    ಬೆಂಗಳೂರು: ಕೊರೊನಾ ವೈರಸ್ ಹರಡವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿ ಲಾಕ್ ಡೌನ್ ವಿಸ್ತರಿಸುವಂತೆ ಕರೆ ಕೊಟ್ಟಿದ್ದಾರೆ. ಲಾಕ್ ಡೌನ್‍ನಿಂದಾಗಿ ಅನೇಕ ಮಂದಿಯ ಜೀವನ ಅತಂತ್ರವಾಗಿದೆ. ಹೀಗೆ ಬೆಂಗಳೂರಲ್ಲಿ ಮದುವೆ ಮುಗಿಸಿಕೊಂಡು ಬಂದ ನವದಂಪತಿಯನ್ನು ಮಾಲೀಕನೊಬ್ಬ ತಡೆದ ಪ್ರಸಂಗವೊಂದು ನಡೆದಿದೆ.

    ಹೌದು. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಂಗ, ಪವಿತ್ರ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಕೆಲಸವಿಲ್ಲದೆ ಬೇರೆಯವರ ಮನೆಯಲ್ಲಿದ್ದ ರಂಗ ನಿನ್ನೆ ರಾತ್ರಿ 11 ಗಂಟೆಗೆ ತಾನು ಉಳಿದುಕೊಂಡಿದ್ದ ಮನೆಗೆ ವಾಪಸ್ಸಾಗಿದ್ದಾನೆ. ಈ ವೇಳೆ ಮಾಲೀಕ ಗೇಟಿಗೆ ಬೀಗ ಹಾಕಿ ನವದಂಪತಿಯನ್ನು ಹೊಹಾಕಿದ್ದಾನೆ.

    ಸುತ್ತಾಡಿ ಬಂದಿದ್ದೀರಿ ಮೆಡಿಕಲ್ ರಿಪೋರ್ಟ್ ತಗೊಂಡು ಬನ್ನಿ ಎಂದು ಮಾಲೀಕ ಗಲಾಟೆ ಮಾಡಿದ್ದಾನೆ. ಅಲ್ಲದೆ ಕೊರೊನಾ ಬಂದಿರುವ ಶಂಕೆ ಇದೆ. ಹೀಗಾಗಿ ಮೆಡಿಕಲ್ ರಿಪೋರ್ಟ್ ತಂದು ಮನೆಗೆ ಬನ್ನಿ ಎಂದು ಗೇಟಿಗೆ ಬೀಗ ಜಡಿದಿದ್ದಾನೆ. ಪರಿಣಾಮ ಬೇರೆ ದಾರಿ ಇಲ್ಲದೆ ದಂಪತಿ ಕಾರಿನಲ್ಲೇ ಮಲಗಿದ್ದಾರೆ.

    ಮದ್ವೆಯಾಗಿ 1 ತಿಂಗಳಾಗಿದೆ. ಕ್ಯಾಬ್ ಕೆಲಸವೂ ಇಲ್ಲದೆ ಹಸಿದಿದ್ದ ನವದಂಪತಿ ಬಗಲಗುಂಟೆಯಲ್ಲಿ ಮನೆ ಮಾಡಿ ಊಟಕ್ಕಾಗಿ ಬೇರೆಯವರ ಮನೆಯಲ್ಲಿದ್ದರು. ಕಷ್ಟದಲ್ಲಿದ್ದರೂ ಮನೆ ಮಾಲೀಕನ ದುರ್ವರ್ತನೆಗೆ ನವದಂಪತಿ ನೊಂದಿದ್ದಾರೆ.

  • ಹಿಂಬಾಗಿಲಿನಿಂದ ಮದ್ಯ ಮಾರಾಟಕ್ಕೆ ಮುಂದಾದ ಮಾಲೀಕ ಅರೆಸ್ಟ್

    ಹಿಂಬಾಗಿಲಿನಿಂದ ಮದ್ಯ ಮಾರಾಟಕ್ಕೆ ಮುಂದಾದ ಮಾಲೀಕ ಅರೆಸ್ಟ್

    ರಾಯಚೂರು: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಹಿನ್ನೆಲೆ ಇಡೀ ದೇಶಾದ್ಯಂತ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಮಾಡಲಾಗಿದೆ.

    ಲಾಕ್‍ಡೌನ್ ಹಿನ್ನೆಲೆ ಬಾರ್ ಗಳ ಬೀಗಕ್ಕೆ ಸೀಲ್ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಲಿಂಗಸುಗೂರಿನ ಹಟ್ಟಿಯಲ್ಲಿ ಬಾರ್ ಮಾಲೀಕನೋರ್ವ ತನ್ನ ಅಂಗಡಿಯಲ್ಲಿನ ಮದ್ಯವನ್ನು ಹಿಂಬಾಗಿಲಿನಿಂದ ತಾನೇ ಕದ್ದು ಮಾರಾಟ ಮಾಡಲು ಮುಂದಾದ ವೇಳೆ ಸಿಕ್ಕಿಬಿದ್ದಿದ್ದಾನೆ.

    ಇಲ್ಲಿನ ಕೋಹಿನೂರ್ ಬಾರ್ ಅಂಡ ರೆಸ್ಟೋರೆಂಟ್ ನಲ್ಲಿ ಮದ್ಯ ಹಾಗೂ ನಗದು ಹಣವನ್ನು ತೆಗೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ 1 ಲಕ್ಷ 5 ಸಾವಿರದ 650 ರೂ. ನಗದು ಹಾಗೂ 2,750 ರೂ ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಅಕ್ರಮ ಮಾರಾಟಕ್ಕೆ ಮದ್ಯ ಕದ್ದ ಬಾರ್ ಮಾಲೀಕ ಜಿಯಾಹುಸೇನ್ ಹಾಗೂ ಕೆಲಸಗಾರರಾದ ಚಿರಂಜೀವಿ, ವೆಂಕಟೇಶ್ ಅನ್ನು ಬಂಧಿಸಲಾಗಿದೆ.

    ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿಯನ್ನು ನೀಡಲು ಆದೇಶ ನೀಡಿದೆ. ಆದರೆ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ 30 ಕೆಜಿ ಅಕ್ಕಿ ನೀಡಬೇಕಾಗಿದ್ದ ಅಳತೆಯಲ್ಲಿ 25 ಕೆಜಿ ನೀಡುತ್ತಿದ್ದು ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ನ್ಯಾಯಬೆಲೆ ಅಂಗಡಿಯಲ್ಲಿ ಮಲ್ಲಸಂದ್ರ, ಕದಿರನ್ನಾಗಾರಪಲ್ಲಿ, ಊಗಲನಾಗೇಪಲ್ಲಿ ಗ್ರಾಮಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ.

    ಈ ರೀತಿ ಪ್ರತಿಯೊಬ್ಬರಿಗೂ 1 ಕೆಜಿ, 2 ಕೆಜಿ, ಮತ್ತು 3 ಕೆಜಿ ತೂಕದಲ್ಲಿ ಕಡಿತ ಮಾಡಿ ಕಡಿಮೆ ನೀಡುತ್ತಿದ್ದರೆ. ಇದೇ ರೀತಿ ಮಾಲೀಕ ಉಳಿತಾಯ ಮಾಡಿ ಲಾಭಗಳಿಸುತ್ತಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಮಾಲೀಕನಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಇನ್ನು ಮುಂದೆ ಈ ರೀತಿ ನಡೆಯದಂತೆ ನಮಗೆ ಸೂಕ್ತ ನ್ಯಾಯಕೊಡಿಸಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಅಂಗಡಿ ಮಾಲೀಕರಿಂದ ಲಾಕ್‍ಡೌನ್ ನಿಯಮ ಉಲ್ಲಂಘನೆ – ವಶಕ್ಕೆ ಪಡೆದು ಕೇಸ್ ಹಾಕಿ ಎಚ್ಚರಿಕೆ

    ಅಂಗಡಿ ಮಾಲೀಕರಿಂದ ಲಾಕ್‍ಡೌನ್ ನಿಯಮ ಉಲ್ಲಂಘನೆ – ವಶಕ್ಕೆ ಪಡೆದು ಕೇಸ್ ಹಾಕಿ ಎಚ್ಚರಿಕೆ

    ಹಾವೇರಿ: ಭಾರತ ಲಾಕ್‍ಡೌನ್ ನಿಯಮಕ್ಕೆ ಕ್ಯಾರೇ ಅನ್ನದೆ ಅಂಗಡಿಗಳನ್ನ ತೆರೆದವರಿಗೆ ಹಾವೇರಿಯಲ್ಲಿ ಪೊಲೀಸರು ಬಿಸಿಬಿಸಿ ಕಜ್ಜಾಯ ನೀಡಿ, ಪ್ರಕರಣ ದಾಖಲಿಸುವ ಮೂಲಕ ಖಡಕ್ ಎಚ್ಚರಿಕೆ ನೀಡ್ತಿದ್ದಾರೆ.

    ಗುರುವಾರ ಮತ್ತು ಇಂದು ನಗರದ ಹಲವೆಡೆ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್, ಪೇಂಟಿಂಗ್, ರೇಡಿಯಂ, ಚಪ್ಪಲಿ ಸೇರಿದಂತೆ ಕೆಲವು ಅಂಗಡಿಗಳ ಬಾಗಿಲು ತೆರೆಯಲಾಗಿತ್ತು. ಇದನ್ನ ಕಂಡು ಗರಂ ಆದ ಪೊಲೀಸರು ಅಂಗಡಿಗಳ ಮಾಲೀಕರಿಗೆ ಲಾಠಿ ರುಚಿ ತೋರಿಸಿ ಬಿಸಿ ಮುಟ್ಟಿಸಿದ್ದಾರೆ.

    ಅಂಗಡಿಗಳ ಮುಂದೆ ನೆರೆದಿದ್ದವರು ಸಹ ಪೊಲೀಸರನ್ನ ಕಂಡು ಎದ್ನೋ ಬಿದ್ನೋ ಎಂದು ಓಡಿ ಹೋದರು. ನಂತರ ಅಂಗಡಿಗಳನ್ನ ಬಂದ್ ಮಾಡಿಸಿದ ಪೊಲೀಸರು ರೂಲ್ಸ್ ಬ್ರೇಕ್ ಮಾಡಿ ಅಂಗಡಿಗಳ ಬಾಗಿಲು ತೆರೆದಿದ್ದವರನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇನ್ನು ನಗರದ ಲಕ್ಕಿ ಸೂಪರ್ ಮಾರ್ಕೆಟ್‍ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಅಲ್ಲಿಯೂ ಸಹ ಪೊಲೀಸರು ಬಿಸಿಬಿಸಿ ಕಜ್ಜಾಯ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.

    ಅಲ್ಲದೆ ಎಸ್‍ಪಿ ಕೆ.ಜಿ ದೇವರಾಜ್ ಅವರು ನಗರದಲ್ಲಿ ಸಂಚರಿಸಿ ಲಾಕ್‍ಡೌನ್ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ, ಉಲ್ಲಂಘನೆ ಮಾಡಿದವರ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

  • ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಉಡುಪಿ: ಕೊರೊನಾ ವೈರಸ್‍ನಿಂದ ದೇಶಕ್ಕೆ ಬೀಗ ಹಾಕಲಾಗಿದೆ. ಬ್ಯಾಂಕ್‍ಗಳ EMI ಪಾವತಿಸಲು ಆರ್‌ಬಿಐ ವಿನಾಯಿತಿ ಕೊಟ್ಟಿದೆ. ಈ ನಡುವೆ ಸಂಪೂರ್ಣ ಲಾಕ್‍ಡೌನ್ ಆಗಿರುವ ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ಮಾಲೀಕರೊಬ್ಬರು ತನ್ನ ಅಂಗಡಿಗಳಿಗೆ ಬಾಡಿಗೆ ವಿನಾಯಿತಿ ಮಾಡಿದ್ದಾರೆ.

    ಕುಂದಾಪುರ ಉಳ್ತೂರು ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಎಲ್ಲಾ ಅಂಗಡಿಗಳಿಗೆ ರಿಯಾಯಿತಿ ನೀಡುವುದಾಗಿ ಮಾಲೀಕ ರಮೇಶ್ ಅಡಿಗ ಘೋಷಣೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿರುವ ಈ ಕಾಂಪ್ಲೆಕ್ಸ್‌ನ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ. ಸಂದರ್ಭಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಅಡಿಗ, ಬಾಡಿಗೆದಾರರು ವ್ಯಾಪಾರ ಮಾಡದೆ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಅವರಿಂದ ಬಾಡಿಗೆ ತೆಗೆದುಕೊಳ್ಳಲು ಮನಸ್ಸಾಗುತ್ತಿಲ್ಲ. ಒಂದು ತಿಂಗಳ ಬಾಡಿಗೆ ಪಡೆಯದಿದ್ದರೆ ನಮಗೆ ಲಾಭ ಆಗದೇ ಇರಬಹುದು. ಆದರೆ ನಷ್ಟ ಆಗುವುದಿಲ್ಲ. ನಮ್ಮಲ್ಲಿರುವ ಎಲ್ಲ ಬಾಡಿಗೆದಾರರು ಇಲ್ಲಿ ನಡೆಯುವ ವ್ಯಾಪಾರವನ್ನು ಅವಲಂಬಿಸಿಯೇ ಜೀವನ ಮಾಡುತ್ತಿದ್ದಾರೆ ಎಂದರು.

    ಈಗಾಗಲೇ ಅವರು ಅವರ ಜೀವನೋಪಾಯಕ್ಕಾಗಿ ಸಾಲಗಳನ್ನು ಮಾಡಿದ್ದು, ಕಂತು ಕಟ್ಟಲು ಬಹಳ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವುದು ನನಗೆ ಯಾಕೋ ಸರಿ ಅನ್ನಿಸಲಿಲ್ಲ. ನನ್ನದು ಸಣ್ಣ ಕಾಂಪ್ಲೆಕ್ಸ್ ಹಳ್ಳಿ ಭಾಗದಲ್ಲಿದೆ. ಪೇಟೆಯಲ್ಲಿರುವ ಕಾಂಪ್ಲೆಕ್ಸ್‌ಗಳು ಕೂಡ ಇದೇ ನಿರ್ಧಾರವನ್ನು ಮಾಡಬೇಕು. ಜನಸಾಮಾನ್ಯರ ಮೇಲಿನ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಸಬೇಕು ಎಂದು ವಿನಂತಿ ಮಾಡಿಕೊಂಡರು.

  • ಸಂಬಳ ಹೆಚ್ಚು ಕೇಳಿದ ಚಾಲಕನ ಮೇಲೆ ಕಲ್ಲು ಎತ್ತಾಕಿ, ದೇಹ ಸುಟ್ಟ ಮಾಲೀಕ

    ಸಂಬಳ ಹೆಚ್ಚು ಕೇಳಿದ ಚಾಲಕನ ಮೇಲೆ ಕಲ್ಲು ಎತ್ತಾಕಿ, ದೇಹ ಸುಟ್ಟ ಮಾಲೀಕ

    – ಅರ್ಧಂಬರ್ಧ ಸುಟ್ಟ ಮೃತದೇಹ ಕೆರೆಗೆ ಎಸೆದ

    ಬೆಂಗಳೂರು: ಸಂಬಳ ಹೆಚ್ಚು ಕೇಳಿದಕ್ಕೆ ಚಾಲಕನ ಮೇಲೆ ಮಾಲೀಕ ಹಾಗೂ ಆತನ ಸ್ನೇಹಿತ ಕಲ್ಲು ಎತ್ತಾಕಿ ಕೊಲೆಗೈದು, ಮೃತದೇಹ ಸುಟ್ಟು, ಅರ್ಧಂಬರ್ಧ ಸುಟ್ಟ ಮೃತದೇಹವನ್ನು ರಾಮ್‍ಪುರ ಕೆರೆಯಲ್ಲಿ ಎಸೆದ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಮಾರ್ಚ್ 10ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪ್ಯಾಕರ್ಸ್ ಅಂಡ್ ಮೂವರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಚಿಂತಾಮಣಿ ನಿವಾಸಿ ಕೃಷ್ಣ ಹಾಗೂ ಹಲಸೂರು ನಿವಾಸಿ ಮಾಯಾಕೃಷ್ಣ ಎಂದು ಗುರುತಿಸಲಾಗಿದೆ. ಕೃಷ್ಣ ನಡೆಸುತ್ತಿದ್ದ ಕಂಪನಿಯನ್ನು ಚಾಲಕನಾಗಿದ್ದ ಶ್ರೀನಿವಾಸ್ ಪಾರ್ಸೆಲ್‌ಗಳನ್ನು ಗ್ರಾಹಕರ ಮನೆ ಬಾಗಲಿಗೆ ಡೆಲಿವರಿ ಮಾಡುತ್ತಿದ್ದನು.

    ಮಾಚ್ 10ರಂದು ಶ್ರೀನಿವಾಸ್ ಕೃಷ್ಣನ ಬಳಿ ತನಗೆ ಸಂಬಳ ಹೆಚ್ಚಿಗೆ ಮಾಡಿ ಎಂದು ಕೇಳಿದ್ದನು. ಈ ಬಗ್ಗೆ ಆತನ ಜೊತೆ ಕೂತು ಮಾತನಾಡಿ ಮಾಲೀಕ ನಿರ್ಧಾರ ತೆಗೆದುಕೊಳ್ಳುವ ಬದಲು ಚಾಲಕನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದು, ತನ್ನ ಸ್ನೇಹಿತ ಮಾಯಾಕೃಷ್ಣನ ಸಹಾಯ ಪಡೆದು ಚಾಲಕನನ್ನ ಕೊಲೆ ಮಾಡಲು ನಿರ್ಧರಿಸಿದನು.

    ಚಾಲಕ ಮಲಗಿದ್ದ ವೇಳೆ ಆತನ ತಲೆ ಮೇಲೆ ಕಲ್ಲು ಎತ್ತಾಕಿ ಕೃಷ್ಣ ಹಾಗೂ ಆತನ ಗೆಳೆಯ ಕೊಲೆ ಮಾಡಿದರು. ಬಳಿಕ ಮೃತದೇಹವನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದರು. ಆ ನಂತರ ಈ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ಅರ್ಧಂಬರ್ಧ ಸುಟ್ಟಿದ್ದ ಶವವನ್ನು ರಾಮ್‍ಪುರ ಕೆರೆಯಲ್ಲಿ ಎಸೆದು ಹೋದರು.

    ಆದರೆ ಸ್ಥಳೀಯರು ಕೆರೆ ಬಳಿ ಓಡಾಡುತ್ತಿದ್ದಾಗ ದುರ್ನಾತ ಬರುತ್ತಿದ್ದದನ್ನು ಗಮನಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಕುರಿತು ತನಿಖೆ ಕೈಗೊಂಡಾಗ ಸತ್ಯಾಂಶ ಹೊರಬಿದ್ದಿದೆ.

    ಪ್ರಮುಖ ಆರೋಪಿ ಕೃಷ್ಣನನ್ನು ಸದ್ಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ವಿಚಾರಣೆ ವೇಳೆ ಕೊಲೆ ಮಾಡಲು ಕಾರಣವೇನು? ಹೇಗೆ ಕೊಲೆ ಮಾಡಲಾಯ್ತು ಎಂಬ ವಿಚಾರವನ್ನು ಆರೋಪಿ ಬಾಯಿಬಿಟ್ಟಿದ್ದಾನೆ.

  • ಕೆಲಸದಿಂದ ತೆಗೆದಿದ್ದಕ್ಕೆ ಕೊಲೆಗೆ ಯತ್ನಿಸಿದ್ದ ಆರೋಪಿಗಳು ಅರೆಸ್ಟ್

    ಕೆಲಸದಿಂದ ತೆಗೆದಿದ್ದಕ್ಕೆ ಕೊಲೆಗೆ ಯತ್ನಿಸಿದ್ದ ಆರೋಪಿಗಳು ಅರೆಸ್ಟ್

    ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮಾಲೀಕನನ್ನು ಕೊಲೆ ಮಾಡಲು ಯತ್ನಿಸಿದ್ದ ನಾಲ್ವರನ್ನ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಆರೋಪಿಗಳಾದ ಪ್ರೇಮ್ ಕುಮಾರ್, ಸುನೀಲ್, ವಿನೋದ್, ಕಿರಣ್ ಸೇರಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸುನೀಲ್, ವಿನೋದ್, ಕಿರಣ್ ಮೂವರು ಕೂಡ ಶೇಖರ್ ಗೌಡ ಎಂಬವರ ಬಳಿ ಕೆಲಸ ಮಾಡುತ್ತಿದ್ದರು. ಆದರೆ ಶೇಖರ್ ಗೌಡ ಹಾಗೂ ಆರೋಪಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಕೆಲಸದಿಂದ ತೆಗೆದಿದ್ದರು. ಇದೇ ಕಾರಣಕ್ಕೆ ಆರೋಪಿಗಳು ಶೇಖರ್ ಗೌಡರ ಕೊಲೆ ಮಾಡಲು ಮುಂದಾಗಿದ್ದರು. ಶೇಖರ್ ಅವರನ್ನು ಮುಗಿಸಿ ಅವರ ಬಳಿ ಇದ್ದ ನಗದು ಹಾಗೂ ಚಿನ್ನಾಭರಣವನ್ನ ದೋಚಲು ಹೊಂಚು ಹಾಕಿದ್ದರು.

    ಆರೋಪಿಗಳು ಮಂಗಳವಾರ ರಾತ್ರಿ ಕುರುಬರ ಹಳ್ಳಿ ಬಳಿ ಇರುವ ಕೆಂಪೇಗೌಡ ಆಟದ ಮೈಧಾನದ ಬಳಿ ಕತ್ತಲ್ಲಿನಲ್ಲಿ ಶೇಖರ್ ಗೌಡರ ಮೇಲೆ ಹಲ್ಲೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ಬಗ್ಗೆ ತಿಳಿದ ಸಿಸಿಬಿ ಪೊಲೀಸರು ದಾಳಿ ಮಾಡಿ ನಾಲ್ವರನ್ನ ಬಂಧಿಸಿದ್ದಾರೆ. ಆರೋಪಿಗಳು ಕೆಲಸ ಬಿಸಿಡಿದ್ದನ್ನೇ ನೆಪ ಮಾಡಿಕೊಂಡು ಆರೋಪಿಗಳು ಶೇಖರ್ ಗೌಡರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ, ಹಣ, ಚಿನ್ನವನ್ನ ದೋಚುವುದಕ್ಕೆ ಯತ್ನಸಿರುವ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

    ಸದ್ಯ ಆರೋಪಿಗಳ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಹಾಗೂ ಶೇಖರ್ ಗೌಡ ನಡುವೆ ಯಾಕೆ ಗಲಾಟೆ ನಡೆದಿತ್ತು? ಇನ್ನಿತರೆ ವಿಚಾರದ ಕುರಿತು ಪೊಲೀಸರು ಆರೋಪಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

  • ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಯಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಅದರಂತೆ ರಾಜ್ಯದಲ್ಲಿಯೂ ಕೊರೊನಾ ವೈರಸ್‍ನ ಪರಿಣಾಮ ಸಾಕಷ್ಟಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಕುಕ್ಕುಟೋದ್ಯಮ ನಷ್ಟ ಅನುಭವಿಸುತ್ತಿದೆ. ಶಿವಮೊಗ್ಗದ ಸಂತೆಕಡೂರಿನಲ್ಲಿ ಶ್ರೀನಿವಾಸ್ ಕೋಳಿ ಫಾರಂನ ಮಾಲೀಕರಾದ ಶ್ರೀನಿವಾಸ್ ನಷ್ಟ ಅನುಭವಿಸಿದ್ದು, ಸುಮಾರು 4 ಸಾವಿರ ಜೀವಂತ ಕೋಳಿಮರಿಗಳನ್ನು ಗುಂಡಿ ತೆಗೆದು ಹೂತಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಜಗತ್ತಿನ ಹಲವು ದೇಶಗಳ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿದೆ. ಈ ನಡುವೆ ರಾಜ್ಯದಲ್ಲಿಯೂ ಕೊರೊನಾ ವೈರಸ್ ಭೀತಿಯ ಎಫೆಕ್ಟ್ ಬಹಳ ಜೋರಾಗಿದ್ದು, ಈಗಾಗಲೇ ರಾಜ್ಯದಲ್ಲಿ 4 ಮಂದಿಗೆ ಈ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಹಕ್ಕಿ ಜ್ವರದ ಭೀತಿ ಕೂಡ ಶುರುವಾಗಿದ್ದು, ಶಿವಮೊಗ್ಗದ ಕುಕ್ಕುಟೋದ್ಯಮದ ಮೇಲೆ ಭಾರೀ ಗಂಭೀರ ಪರಿಣಾಮ ಬೀರಿದೆ.

    ಶಿವಮೊಗ್ಗದ ಸಂತೆಕಡೂರು ಗ್ರಾಮದ ಶ್ರೀನಿವಾಸ್ ಕೋಳಿ ಫಾರಂನಲ್ಲಿದ್ದ 22 ದಿನಗಳ ಸುಮಾರು 4 ಸಾವಿರ ಕೋಳಿ ಮರಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿದೆ. ಕಳೆದ ನಾಲ್ಕು ದಿನಗಳಿಂದ ಕೋಳಿ ಮಾಂಸ ಮಾರಾಟಗಾರರು ಕೋಳಿ ಖರೀದಿಗೆ ಹಿಂದೇಟು ಹಾಕಿದ್ದು, ಸುಮಾರು 170 ರೂ. ಇದ್ದ ಕೋಳಿ ಮಾಂಸದ ಬೆಲೆ ಕೇವಲ 70 ರೂ. ಗೆ ಇಳಿದಿದೆ. ಇದರಿಂದಾಗಿ ಭಾರೀ ನಷ್ಟವುಂಟಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಕೂಡ ನಷ್ಟದ ಹಾದಿಯಲ್ಲಿದ್ದು, ತಾವು ಫಾರಂನಲ್ಲಿ ಬೆಳೆಸಲಾಗುತ್ತಿರುವ ಕೋಳಿಗಳಿಗೆ ಬೆಲೆ ಇಲ್ಲದಂತಾಗಿ ನಷ್ಟ ಅನುಭವಿಸುವ ಬದಲು ಜೀವಂತವಾಗಿ ಹೂತರೆ ಇನ್ನಷ್ಟು ನಷ್ಟವುಂಟಾಗುವುದು ತಪ್ಪುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

    ಇಂದು ಜೆಸಿಬಿ ಮೂಲಕ 12 ಅಡಿ ಆಳದ ಗುಂಡಿ ತೆಗೆದು ಜೀವಂತವಾಗಿ ಕೋಳಿ ಮರಿಗಳನ್ನು ಹೂತು ಹಾಕಿದ್ದಾರೆ. ಶ್ರೀನಿವಾಸ್ ಅವರಿಗೆ ಒಂದು ಕೆಜಿ ಕೋಳಿಗೆ ಕೇವಲ 8 ರೂ. ಮಾತ್ರ ಸಿಗುತ್ತಿದ್ದು, ಕೋಳಿ ಸಾಕಲು 16 ರೂ. ವರೆಗೂ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡೂವರೆ ಲಕ್ಷ ಖರ್ಚಾಗಿದ್ದು, ಇದನ್ನು ಮತ್ತೆ ಸಾಕಲು ಮುಂದಾದರೆ ಮತ್ತೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತದೆ. ಹೀಗಾಗಿ ಈಗಲೇ ಹೂತು ಹಾಕಿದರೇ ಲಕ್ಷಾಂತರ ರೂಪಾಯಿ ನಷ್ಟ ತಪ್ಪಿದಂತಾಗುತ್ತದೆ ಎಂಬ ನಿರ್ಧಾರಕ್ಕೆ ಶ್ರೀನಿವಾಸ್ ಬಂದಿದ್ದಾರೆ.

    ಆದ್ದರಿಂದ ಶ್ರೀನಿವಾಸ್ ಅವರು 4 ಸಾವಿರ ಕೋಳಿಗಳನ್ನು ಸಮಾಧಿ ಮಾಡುವ ತೀರ್ಮಾನಕ್ಕೆ ಬಂದಿದ್ದು, ಜೀವಂತ ಕೋಳಿಗಳನ್ನು ತಮ್ಮ ಫಾರಂನ ಆವರಣದಲ್ಲಿಯೇ ಹೂತಿದ್ದಾರೆ. ಕೊರೊನಾ ವೈರಸ್ ಭೀತಿಗೆ ಜನರು ಕೋಳಿ ಮಾಂಸ ಸೇವಿಸದೇ ಇರುವುದೇ ಈ ನಷ್ಟಕ್ಕೆ ಕಾರಣವಾಗಿದೆ. ಕೋಳಿ ಕೃಷಿ ಮಾಡುವವರು ಇದೀಗ ಬೀದಿಗೆ ಬರುವಂತಾಗಿದ್ದು, ಮಾಂಸ ಮಾರಾಟಗಾರರು ಕೂಡ ಮಾಂಸ ಮಾರಾಟ ಮಾಡಲಾಗದೇ, ಕೋಳಿಗಳನ್ನ ಖರೀದಿಸದೇ ಸುಮ್ಮನಾಗಿದ್ದಾರೆ.

    ಕೊರೊನಾ ವೈರಸ್ ಕೋಳಿಯಿಂದ ಬಾರಲ್ಲ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತೆದೆ. ಹೀಗಾಗಿ ಕೋಳಿ ತಿನ್ನುವುದರಲ್ಲಿ ಸಮಸ್ಯೆ ಇಲ್ಲ. ಕೋಳಿ ಮಾಂಸ ಖರೀದಿಸಿ, ನಮ್ಮನ್ನು ಉಳಿಸಿ ಎಂಬುದು ಕೋಳಿ ಫಾರಂ ಮಾಲೀಕರ ಅಳಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೋಳಿ ಫಾರಂ ಮಾಲೀಕರು ಮನವಿ ಮಾಡಿದ್ದಾರೆ.

    ಕೊರೊನಾ ವೈರಸ್ ಮತ್ತು ಹಕ್ಕಿ ಜ್ವರದ ಭೀತಿ ಪರಿಣಾಮದಿಂದಾಗಿ ಕುಕ್ಕುಟೋದ್ಯಮಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಇದೀಗ ಜಿಲ್ಲೆಯಲ್ಲಿ ಪ್ರಥಮ ಕೋಳಿ ಫಾರಂ ಮುಚ್ಚಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಏನೇ ಆಗಲಿ ಕೊರೊನಾ ವೈರಸ್‍ನ ಭೀತಿಯಿಂದಾಗಿ ಜನರು ನಲುಗಿಹೋಗಿದ್ದು, ಇದನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

  • ಲಾಡ್ಜ್ ಮೇಲೆ ದಾಳಿ – ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರ ಬಂಧನ

    ಲಾಡ್ಜ್ ಮೇಲೆ ದಾಳಿ – ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರ ಬಂಧನ

    ಕಾರವಾರ: ಲಾಡ್ಜ್ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ವನಶ್ರೀ ಲಾಡ್ಜ್‌ನಲ್ಲಿ ನಡೆದಿದೆ.

    ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಕುರಿತು ಖಚಿತ ದೂರಿನ ಆಧಾರದ ಮೇಲೆ ಹಳಿಯಾಳದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಲಾಡ್ಜ್ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿ, ನಾಲ್ವರು ಯುವತಿಯರ ರಕ್ಷಣೆ ಮಾಡಿದ್ದಾರೆ.

    ಹಲವು ವರ್ಷಗಳಿಂದ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪ ಕೇಳಿ ಬರುತ್ತಿತ್ತು. ಈ ಕುರಿತು ಸಾರ್ವಜನಿಕರೇ ಲಾಡ್ಜ್ ಮಾಲೀಕನ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಒಡನಾಡಿ ಸಂಸ್ಥೆ, ಕರ್ನಾಟಕ ಮಕ್ಕಳ ರಕ್ಷಣೆ ಆಯೋಗದಿಂದ ದಾಳಿ ನಡೆಸಿ ಮಾಲೀಕನ ಸಮೇತ ನಾಲ್ಕು ಜನರನ್ನು ಬಂಧಿಸಿ, ನಾಲ್ವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ.