Tag: owner

  • ಬಾಡಿಗೆ ನೀಡದ್ದಕ್ಕೆ ವಿಧವೆಯನ್ನ ಮರಕ್ಕೆ ಕಟ್ಟಿದ ಮಾಲೀಕ

    ಬಾಡಿಗೆ ನೀಡದ್ದಕ್ಕೆ ವಿಧವೆಯನ್ನ ಮರಕ್ಕೆ ಕಟ್ಟಿದ ಮಾಲೀಕ

    – ಮನೆಯ ವಸ್ತುಗಳನ್ನ ಹೊರಗೆ ಎಸೆದ
    – ಲಾಕ್‍ಡೌನ್‍ನಲ್ಲಿ ಕೆಲಸ ಕಳೆದುಕೊಂಡಿದ್ದ ಮಹಿಳೆ

    ಲಕ್ನೋ: ಮನೆಯ ಬಾಡಿಗೆ ನೀಡದಕ್ಕೆ ಮಾಲೀಕನೋರ್ವ ಮಹಿಳೆ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಹಮರೀಪುರ ಜಿಲ್ಲೆಯ ತಲಾಬ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶೋಭಾ ದೇವಿ ಹಲ್ಲೆಗೊಳಗಾದ ಮಹಿಳೆ. ತಲಾಬ್ ಇಲಾಖೆಯಲ್ಲಿರುವ ಭಗೀರಥ್ ಪ್ರಜಾಪತಿ ಎಂಬಾತನ ಬಾಡಿಗೆ ಮನೆಯಲ್ಲಿ ಶೋಭಾ ವಾಸವಾಗಿದ್ದರು. ಶೋಭಾ ಪತಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಲಾಕ್‍ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ ಶೋಭಾ ಕೆಲ ತಿಂಗಳ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು.

    ಮಾನವೀಯತೆ ಮರೆತ ಭಗೀರಥ್ ಕೆಲ ಮಹಿಳೆಯರೊಂದಿಗೆ ಶೋಭಾ ಮನೆಗೆ ಆಗಮಿಸಿದ್ದಾನೆ. ಮಹಿಳೆಯರ ಸಹಾಯದಿಂದ ಶೋಭಾ ಅವರನ್ನ ಮರಕ್ಕೆ ಕಟ್ಟಿ ಹಾಕಿ, ಮನೆಯಲ್ಲಿದ್ದ ವಸ್ತುಗಳನ್ನು ಹೊರ ಹಾಕಿ ಬೀಗ ಹಾಕಿ ಬಾಡಿಗೆ ನೀಡುವಂತೆ ಕಿರುಕುಳ ನೀಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನ ರಕ್ಷಿಸಿ, ಭಗೀರಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಗೋದಾಮಿನಲ್ಲಿ ಬಳಸಿದ್ದ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಕಾಂಡೋಮ್ ವಶ

    ಗೋದಾಮಿನಲ್ಲಿ ಬಳಸಿದ್ದ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಕಾಂಡೋಮ್ ವಶ

    – ಮರು ತಯಾರಿಕೆಗಾಗಿ ದಿನಗೂಲಿ ಕಾರ್ಮಿಕರ ನೇಮಕ
    – ಮಾಹಿತಿ ಮೇರೆಗೆ ದಾಳಿ, ಮಾಲಕಿ ಅರೆಸ್ಟ್

    ಹನೋಯಿ: ಉಪಯೋಗಿಸಿ ಬಿಸಾಡಿದ್ದ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಕಾಂಡೋಮ್‍ಗಳನ್ನು ಮರುಬಳಕೆ ಮಾಡಲು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ವಿಯೆಟ್ನಾ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೇ ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಮರುಬಳಕೆ ಮಾಡಲಾಗುತ್ತಿದ್ದ 3,24,000 ಉಪಯೋಗಿಸಿದ ಕಾಂಡೋಮ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊದಲಿಗೆ ಉಪಯೋಗಿಸಿದ್ದ ಕಾಂಡೋಮ್‍ಗಳನ್ನು ಸಂಗ್ರಹಿಸಿ ರಾಸಾಯನಿಕಯುಕ್ತ ನೀರಿನಿಂದ ಶುಚಿಗೊಳಿಸಲಾಗುತ್ತಿತ್ತು. ನಂತರ ಅದನ್ನು ಮರದ ಕೋಲಿನಿಂದ ಮರು ರೂಪಿಸಲಾಗುತ್ತಿತ್ತು. ಈ ಕೆಲಸವನ್ನು ಮಾಡಲು ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು.

    ಇದು ದಕ್ಷಿಣ ವಿಯೆಟ್ನಾಂನ ಭಾಗದಲ್ಲಿರುವ ಬಿನ್ಹ್ ಡುವಾಂಗ್ ಪ್ರಾಂತ್ಯದ ಗೋದಾಮಿನಲ್ಲಿ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಆಗ ಬಳಸಿದ ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮರು ಪ್ಯಾಕೇಜ್ ಮಾಡಿ ಸುರಕ್ಷಿತವಲ್ಲದ ಕಾಂಡೋಮ್‍ಗಳನ್ನು ಮತ್ತೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು. ಈಗಾಗಲೇ ಸಾವಿರಾರು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಗೋದಾಮಿನ ಮಾಲಕಿ ಫಾಮ್ ಥಿ ಥನ್ ನ್ಗೋಕ್ (33)ಳನ್ನು ಪೊಲೀಸರು ಬಂಧಿಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಒಂದು ತಿಂಗಳ ಹಿಂದೆ ಕಾಂಡೋಮ್ ಸ್ವೀಕರಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಕಾಂಡೋಮ್‍ಗಳನ್ನು ಸಾಕ್ಷಿ ಸಮೇತ ವಶಪಡಿಸಿಕೊಳ್ಳಲಾಗಿದೆ. ಆದರೆ ಅವುಗಳನ್ನು ಅಪಾಯಕಾರಿ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಲಾಗಿರುವುದರಿಂದ ತಕ್ಷಣ ವಿಲೇವಾರಿ ಮಾಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈಗಾಗಲೇ ಎಷ್ಟು ಕಾಂಡೋಮ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದಿಲ್ಲ. ಆದರೆ ಪೊಲೀಸರು 360 ಕೆ.ಜಿ. ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಗೋದಾಮಿನ ಸಮೀಪವಿರುವ ಹೋಟೆಲ್‍ಗಳು ಮತ್ತು ಮಾರುಕಟ್ಟೆ ಮಳಿಗೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯ ವರದಿಗಳು ಹೇಳಿವೆ.

  • ಮಾಲೀಕನ ನೆನಪಲ್ಲೇ ಕೊರಗಿ ಕೊರಗಿ ಪ್ರಾಣ ಬಿಟ್ಟ ಶ್ವಾನ

    ಮಾಲೀಕನ ನೆನಪಲ್ಲೇ ಕೊರಗಿ ಕೊರಗಿ ಪ್ರಾಣ ಬಿಟ್ಟ ಶ್ವಾನ

    – ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ
    – ಮಾಲೀಕನ ಸಮಾಧಿ ಪಕ್ಕದಲ್ಲೇ ಮಣ್ಣಾದ ಶ್ವಾನ

    ಬೆಳಗಾವಿ: ಸಾಕಿ ಸಲುಹಿದ ಮಾಲೀಕನ ಅಗಲಿಕೆಯಿಂದ ಶ್ವಾನವೊಂದು ಅನ್ನ ನೀರು ತ್ಯಜಿಸಿ ಮಾಲೀಕನಿಗಾಗಿ ಹುಡುಕಾಟ ನಡೆಸಿತ್ತು. ಕೊನೆಗೆ ಮಾಲೀಕನ ನೆನಪಲ್ಲೇ ಕೊರಗಿ ಕೊರಗಿ ಪ್ರಾಣ ಬಿಟ್ಟಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ತನ್ನ ಬಳಿ ಬಂದು ನಿಂತಿದ್ದ ಶ್ವಾನವನ್ನು ಏಕಾಏಕಿ ಸರೋವರಕ್ಕೆ ಎಸೆದ- ವಿಡಿಯೋ ವೈರಲ್

    ಅವರಾದಿ ಗ್ರಾಮದ ನಿವಾಸಿ ಶಂಕ್ರಪ್ಪ ಮಡಿವಾಳರ ಸಾವನ್ನಪ್ಪಿದ್ದರು. ಆದರೆ ಅವರ ಸಾಕುನಾಯಿ ಕಡ್ಡಿ ಮಾಲೀಕನ ಅಕಾಲಿಕ ನಿಧನದಿಂದ ಅವರು ಸುತ್ತುತ್ತಿದ್ದ ಜಾಗವನ್ನೆಲ್ಲ ಸುತ್ತಿ ಮಾಲೀಕನಿಗಾಗಿ ಹುಡುಕಾಟ ನಡೆಸಿತ್ತು. ಕೊನೆಗೆ ಶ್ವಾನ ಕಡ್ಡಿ ಮಾಲೀಕನಿಗಾಗಿ ಹುಡುಕಿ ಹುಡುಕಿ ಆತನಿಲ್ಲದ ಕೊರಗಲ್ಲಿ ಊಟವನ್ನೂ ಸಹ ತ್ಯಜಿಸಿ ಸಾವನ್ನಪ್ಪಿದೆ. ಇದೇ ಸೆಪ್ಟೆಂಬರ್ 6ರಂದು ಶಂಕ್ರಪ್ಪ ಮಡಿವಾಳರ ಹೃದಯಾಘಾತದಿಂದ ಅಕಾಲಿಕವಾಗಿ ನಿಧನ ಹೊಂದಿದ್ದರು.

    ಮೃತ ಶಂಕ್ರಪ್ಪ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಹಾಲು ಮಾರಾಟ ಮಾಡುತ್ತಿದ್ದರು. ಹೀಗಾಗಿ ಶಂಕ್ರಪ್ಪ ಅಲ್ಲಿಗೆ ಹೋಗಿರಬಹುದು ಎಂದು ಶ್ವಾನ ಕಡ್ಡಿ ಅಲ್ಲಿಯೂ ಸಹ ಹುಡುಕಾಟ ನಡೆಸಿತ್ತು. ಕಳೆದ ಒಂದು ವಾರದಿಂದ ಮಾಲೀಕನ ನೆನಪಲ್ಲಿ ಊಟವನ್ನು ಸಹ ತ್ಯಜಿಸಿದ್ದ ಕಡ್ಡಿ ಆತನಿಗಾಗಿ ಊರೊಳಗೆ ಹುಡುಕದ ಜಾಗವಿಲ್ಲ. ದೂರದ ಮಹಾಲಿಂಗಪುರದ ಗಲ್ಲಿ ಗಲ್ಲಿಗೂ ಸಹ ತಿರುಗಿದ್ದ ಕಡ್ಡಿ ಕೊನೆಗೆ ಮಾಲೀಕನಿಲ್ಲದ ಕೊರಗಲ್ಲಿ ಸಾವನ್ನಪ್ಪಿದೆ ಎಂದು ಗ್ರಾಮಸ್ಥ ಪ್ರಕಾಶ್ ಹೇಳಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶ್ವಾನ ಕಡ್ಡಿಯ ಮೃತದೇಹವನ್ನು ಊರಿಗೆ ತಂದು ಊರಿನ ಪ್ರಮುಖರ ಸಮ್ಮುಖದಲ್ಲಿ ಮೆರವಣಿಗೆ ಮಾಡಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಾಲೀಕ ಶಂಕ್ರಪ್ಪ ಅವರ ಸಮಾಧಿ ಪಕ್ಕದಲ್ಲೇ ಮಣ್ಣು ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

  • ತಲೆ ಸುತ್ತು ಬಂದಾಗ ನನ್ನ ಬಟ್ಟೆ ಬಿಚ್ಚಿದ – ಬಾಡಿಗೆ ಕೊಡೋ ನೆಪದಲ್ಲಿ ಮಾಲೀಕನ ಪತ್ನಿಯ ಮೇಲೆ ರೇಪ್

    ತಲೆ ಸುತ್ತು ಬಂದಾಗ ನನ್ನ ಬಟ್ಟೆ ಬಿಚ್ಚಿದ – ಬಾಡಿಗೆ ಕೊಡೋ ನೆಪದಲ್ಲಿ ಮಾಲೀಕನ ಪತ್ನಿಯ ಮೇಲೆ ರೇಪ್

    – ತನಿಖೆ ವೇಳೆ ಮಹಿಳೆಯ ರಹಸ್ಯ ಬಯಲು

    ಲಕ್ನೋ: 23 ವರ್ಷದ ಯುವಕನೊಬ್ಬ ಮತ್ತು ಬರುವ ಔಷಧಿ ನೀಡಿ ಮನೆ ಮಾಲೀಕನ ಪತ್ನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಜಹಾಂಗೀರ್‌ಪುರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ವಿಶಾಲ್ ಎಂದು ಗುರುತಿಸಲಾಗಿದೆ. ಆರೋಪಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದನು. ಮತ್ತು ಬರುವ ಔಷಧಿ ನೀಡಿ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.

    ಈ ಘಟನೆ ನಡೆದಾಗ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಪತಿ ಕೆಲಸದ ನಿಮಿತ್ತ ರಾಜಸ್ಥಾನಕ್ಕೆ ಹೋಗಿದ್ದರು. ಆದರೆ ಏಪ್ರಿಲ್‍ನಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದರಿಂದ ಮಹಿಳೆಯ ಪತಿ ಅಲ್ಲಿಯೇ ಇದ್ದರು. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮಹಿಳೆ ಈಗ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ.

    “ಆರೋಪಿ ವಿಶಾಲ್ ಬಾಡಿಗೆ ನೀಡುವ ನೆಪದಲ್ಲಿ ನಮ್ಮ ಮನೆಗೆ ಬಂದಿದ್ದ. ನಂತರ ಇಬ್ಬರು ಚಹಾವನ್ನು ಕುಡಿದೆವು. ಚಹಾ ಕುಡಿದ ನಂತರ ನನಗೆ ತಲೆ ಸುತ್ತು ಬಂತು. ಈ ವೇಳೆ ವಿಶಾಲ್ ನನ್ನ ಬಟ್ಟೆಗಳನ್ನು ಬಿಚ್ಚಿದ್ದನು. ನಂತರ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ನಾನು ವಿರೋಧಿಸಿದಾಗ ಆರೋಪಿ ನನ್ನನ್ನು ಥಳಿಸಿ ನನ್ನ ಮತ್ತು ನನ್ನ ಇಬ್ಬರು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಚಹಾದಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ್ದನು” ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮಹಿಳೆ ಜೇವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ತನಿಖೆ ವೇಳೆ ಮಹಿಳೆಯ ಅನೈತಿಕ ಸಂಬಂಧ ಬಯಲಾಗಿದೆ.

    ಮಹಿಳೆ ಆರೋಪಿ ವಿಶಾಲ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇವರಿಬ್ಬರ ಸಂಬಂಧದ ಬಗ್ಗೆ ತಿಳಿದು ಪತಿ ಕೆಲವು ದಿನಗಳ ಹಿಂದೆ ಅವಳಿಂದ ದೂರವಾಗಿ ವಾಸಿಸುತ್ತಿದ್ದನು. ಆರೋಪಿಯನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಫಿರೋಜ್ ಖಾನ್ ಹೇಳಿದ್ದಾರೆ.

  • ಮೃತ ಮಾಲೀಕನ ಎಟಿಎಂ ಕಾರ್ಡ್ ಬಳಸಿ 34 ಲಕ್ಷ ರೂ. ಡ್ರಾ ಮಾಡಿದ ಮನೆ ಕೆಲಸದಾಕೆ!

    ಮೃತ ಮಾಲೀಕನ ಎಟಿಎಂ ಕಾರ್ಡ್ ಬಳಸಿ 34 ಲಕ್ಷ ರೂ. ಡ್ರಾ ಮಾಡಿದ ಮನೆ ಕೆಲಸದಾಕೆ!

    ಕೋಲ್ಕತ್ತಾ: ಮಹಿಳೆಯೊಬ್ಬಳು ತನಗೆ ಉದ್ಯೋಗ ನೀಡಿದ ಮಾಲೀಕ ಮೃತಪಟ್ಟ ಬಳಿಕ ಆತನ ಎಟಿಎಂನಿಂದಲೇ ಬರೋಬ್ಬರಿ 35 ಲಕ್ಷಕ್ಕೂ ಅಧಿಕ ಹಣ ಡ್ರಾ ಮಾಡಿದ ಘಟನೆಯೊಂದು ನಡೆದಿದೆ.

    ಆರೋಪಿ ಮಹಿಳೆಯನ್ನು ರಿತಾ ರಾಯ್ ಎಂದು ಗುರುತಿಸಲಾಗಿದ್ದು, ಈಕೆ ಕಳೆದ 7 ವರ್ಷಗಳಿಂದ ಸತ್ಯನಾರಾಯಣ್ ಅಗರ್ವಾಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಹಣ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಸತ್ಯನಾರಾಯಣ್ ಅವರು ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮೃತಪಟ್ಟಿದ್ದಾರೆ. ಆ ಬಳಿಕ ನಕಶಿಪರ ನಿವಾಸಿಯಾಗಿರುವ ರಾಯ್, ತನ್ನ ಸಂಬಂಧಿಕರ ಸಹಾಯ ಪಡೆದು ತನ್ನ ಮಾಲೀಕನ ಎಟಿಎಂನಿಂದಲೇ 34,90,000 ಹಣ ಪೀಕಿದ್ದಾಳೆ.

    ಸತ್ಯನಾರಾಯಣ್ ಅವರು ಲಾಕ್‍ಡೌನ್ ಆದ ಮೊದಲ ವಾರದಲ್ಲಿ ತೀರಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಅವರು, ಪ್ರಿನ್ಸ್ ಅನ್ವರ್ ಷಾ ರಸ್ತೆಯ ಸಿಟಿ ಹೈನಲ್ಲಿರುವ ಮನೆಯಲ್ಲಿಯೇ ಇದ್ದರು. ಸತ್ಯನಾರಾಯಣ್ ಮೃತಪಟ್ಟ ಸಂದರ್ಭದಲ್ಲಿ ರಾಯ್, ಅವರ ಬಳಿಯಿದ್ದ ಎಟಿಎಂ ಕಾರ್ಡ್ ಕದ್ದಿದ್ದಾಳೆ. ಅಲ್ಲದೆ ಆ ಬಳಿಕದಿಂದಲೇ ಹಣ ಡ್ರಾ ಮಾಡಲು ಆರಂಭಿಸಿದ್ದಾಳೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಯಾರೂ ಬ್ಯಾಂಕಿಗೆ ಹೋಗುತ್ತಿರಲಿಲ್ಲ. ಹೀಗಾಗಿ ಸತ್ಯನಾರಾಯಣ್ ಕುಟುಂಬಕ್ಕೆ ಹಣ ಡ್ರಾ ಮಾಡಿರುವ ವಿಚಾರವೂ ಗೊತ್ತಾಗಿರಲಿಲ್ಲ.

    ಇತ್ತ ಬ್ಯಾಂಕಿನಿಂದ ಸತ್ಯನಾರಾಯಣ್ ಅವರ ಮೊಬೈಲ್ ಗೆ ಮೆಸೇಜ್ ಗಳು ಬರುತ್ತಲೇ ಇತ್ತು. ಆದರೆ ಸತ್ಯನಾರಾಯಣ್ ತೀರಿಕೊಂಡ ಬಳಿಕ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಹೀಗಾಗಿ ಅವರ ಅಕೌಂಟಿನಿಂದ ಹಣ ಹೋಗುತ್ತಿರುವ ವಿಚಾರ ಕುಟುಂಬದ ಗಮನಕ್ಕೆ ಬಂದಿರಲಿಲ್ಲ. ಸತ್ಯನಾರಾಯಣ್ ಅವರ ಮಗ ಇನ್ನೊಂದು ಫ್ಲ್ಯಾಟ್‍ನಲ್ಲಿ ವಾಸವಾಗಿದ್ದನು. ಮೃತರು ಬಳಸಿದ ಮೊಬೈಲ್ ಸಂಖ್ಯೆ ಸ್ವಿಚ್ಛ್ ಆಫ್ ಆಗಿದ್ದರಿಂದ ಬ್ಯಾಂಕ್ ಅವರ ಕುಟುಂಬದ ಸದಸ್ಯರಿಗೆ ಮೆಸೇಜ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಲು ಆರಂಭಿಸಿತ್ತು.

    ಜೂನ್ 1ರಂದು ಸತ್ಯನಾರಾಯಣ್ ಪುತ್ರ ಅನುರಾಗ್ ಬ್ಯಾಂಕಿಗೆ ತೆರಳಿ ಖಾತೆಯ ವಿವರಗಳನ್ನು ತೆಗೆದುಗೊಂಡಾಗ ಮಹಿಳೆ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಟಿಎಂ ಸಿಸಿಟಿವಿಗಳನ್ನು ಪರೀಶಿಲಿಸಿದಾಗ ಇಬ್ಬರು ವ್ಯಕ್ತಿಗಳೊಂದಿಗೆ ಮಹಿಳೆ ಹಣ ಡ್ರಾ ಮಾಡುತ್ತಿರುವುದು ಬಯಲಾಗಿದೆ. ಸದ್ಯ ಘಟನೆ ಸಂಬಂಧಪಟ್ಟಂತೆ ಆರೋಪಿಗಳನ್ನು ಆಗಸ್ಟ್ 13ರಂದು ಬಂಧಿಸಲಾಗಿದ್ದು, ಆರೋಪಗಳಿಂದ 27 ಲಕ್ಷ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

  • ನೂತನ ವಧುವನ್ನು ಕೊಂದು ತಾನೂ ಶೂಟೌಟ್ ಮಾಡ್ಕೊಂಡ 3 ಮಕ್ಕಳ ತಂದೆ

    ನೂತನ ವಧುವನ್ನು ಕೊಂದು ತಾನೂ ಶೂಟೌಟ್ ಮಾಡ್ಕೊಂಡ 3 ಮಕ್ಕಳ ತಂದೆ

    ಚಂಡೀಗಢ: ಆಗ ತಾನೇ ಮದುವೆಯಾದ 20 ವರ್ಷದ ಯುವತಿಯನ್ನು ಡಾಬಾ ಮಾಲೀಕನೊಬ್ಬ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಡಿಕೊಂಡ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಆರೋಪಿಯನ್ನು ರಾಜೇಶ್(30) ಎಂದು ಗುರುತಿಸಲಾಗಿದ್ದು, ಈತ ಪ್ರಿಯಾಂಕ ಎಂಬಾಕೆಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ಭಾನುವಾರ ಪಟೌಡಿ ಎಂಬ ಪ್ರದೇಶದಲ್ಲಿ ನಡೆದಿದೆ.

    ಮೃತರಿಬ್ಬರೂ ಪಟೌಡಿಯ ನಂಕುವಾನ್ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ಪರಿಚಯವಿದ್ದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಮಧ್ಯೆ ಸಂಬಂಧವಿತ್ತು. ಈ ವಿಚಾರವೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಘಟನೆಯ ಸಂಬಂಧ ತನಿಖೆ ನಡೆಸಿದಾಗ, ರಾಜೇಶ್ ಗೆ ಈಗಾಗಲೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಪ್ರಿಯಾಂಗೆ ಕಳೆದ ಜೂನ್ 29ರಂದು ಮದುವೆಯಾಗಿದ್ದು, ತವರು ಮನೆಗೆ ಬಂದಿದ್ದಳು. ಈ ವೇಳೆ ಆರೋಪಿ ಕೃತ್ಯವೆಸಗಿದ್ದಾನೆ. ಪ್ರಿಯಾಂಕ ಅಂಕಲ್ ರಾಮ್‍ಜಿಲಾಲ್ ಅವರು ಪೊಲೀಸರಿಗೆ ದೂರು ನೀಡಿದ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.

    ರಾಜೇಶ್ ಶನಿವಾರ ಪ್ರಿಯಾಂಕ ಮನೆಗೆ ಬಂದಿದ್ದು, ಅಲ್ಲದೆ ಆಕೆಯನ್ನು ತನ್ನ ಡಾಬಾಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪ್ರಿಯಾಂಕ ಅಂಕಲ್ ಅರೋಪಿಸಿದ್ದಾರೆ. ಅಲ್ಲದೆ ರಾಜೇಶ್ ಜೊತೆ ಹೊರಹೋದ ಪ್ರಿಯಾಂಕ ತಡರಾತ್ರಿಯಾದರೂ ಮನೆಗೆ ವಾಪಸ್ ಆಗಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಕುಟುಂಬಸ್ಥರು ಪ್ರಿಯಾಂಕಳ ಹುಡುಕಾಟ ಆರಂಭಿಸಿದ್ದಾರೆ. ಹೀಗೆ ಹುಡುಕಡುತ್ತಿದ್ದಾಗ, ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ರಾಜೇಶ್ ಮಾಲೀಕತ್ವದ ಡಾಬಾ ಹಿಂಬದಿಯಲ್ಲಿ ಪ್ರಿಯಾಂಕ ಮೃತದೇಹ ಪತ್ತೆಯಾಗಿದೆ ಎಂದು ಲಾಲ್ ತಿಳಿಸಿದ್ದಾರೆ.

    ರಾಜೇಶ್ ಮೊದಲು ನನ್ನ ಸೊಸೆಯ ಎದೆಗೆ ಗುಂಡು ಹಾರಿಸಿ ನಂತರ ಆತನ ತಲೆಗೆ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಲಾಲ್ ಪೊಲೀಸರ ಬಳಿ ಹೇಳಿದ್ದಾರೆ. ಇಬ್ಬರ ಮೃತದೇಹವೂ ಹತ್ತಿರ ಹತ್ತಿರವೇ ದೊರೆತಿದ್ದು, ಕೊಲೆ ಹಾಗೂ ಆತ್ಮಹತ್ಯೆಗೆ ಬಳಸಿದ್ದ ಪಿಸ್ತೂಲ್ ಕೂಡ ಸ್ಥಳದಲ್ಲಿ ಸಿಕ್ಕಿದೆ.

    ಘಟನೆಯ ಮಹಿತಿ ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ. ಪಿಸ್ತಲ್ ವಶಕ್ಕೆ ಪಡೆದುಕೊಂಡಿದ್ದಾರೆ.

  • ಗಿಳಿಯನ್ನು ಬಿಟ್ಟಿದ್ದಕ್ಕೆ 8 ವರ್ಷದ ಬಾಲಕಿಯನ್ನು ಹೊಡೆದು ಕೊಂದ ಮಾಲೀಕರು

    ಗಿಳಿಯನ್ನು ಬಿಟ್ಟಿದ್ದಕ್ಕೆ 8 ವರ್ಷದ ಬಾಲಕಿಯನ್ನು ಹೊಡೆದು ಕೊಂದ ಮಾಲೀಕರು

    ಇಸ್ಲಾಮಾಬಾದ್: ಮನೆ ಕೆಲಸಕ್ಕೆ ಇದ್ದ ಎಂಟು ವರ್ಷದ ಬಾಲಕಿ ಪಂಜರದಲ್ಲಿ ಇದ್ದ ಗಿಳಿಯನ್ನು ಬಿಟ್ಟಿದ್ದಕ್ಕೆ ಮನೆ ಮಾಲೀಕರು ಆಕೆಯನ್ನು ಹೊಡೆದು ಕೊಂದಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಜೊಹ್ರಾ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಜೊಹ್ರಾ ಹಕ್ಕಿಗಳಿಗೆ ಆಹಾರ ಹಾಕಲು ಪಂಜರದ ಬಾಗಿಲನ್ನು ತೆರೆದಿದ್ದಾಳೆ. ಈ ವೇಳೆ ಒಂದು ಗಿಳಿ ಮರಿ ತಪ್ಪಿಸಿಕೊಂಡು ಹಾರಿ ಹೋಗಿದೆ. ಇದರಿಂದ ಕೋಪಗೊಂಡ ಮನೆಯ ಮಾಲೀಕರು ಆಕೆಯನ್ನು ಹೊಡೆದು ಸಾಯಿಸಿದ್ದಾರೆ.

    ಜೊಹ್ರಾ ಕೆಲಸ ಮಾಡುತ್ತಿದ್ದ ಮನೆಯವರು ಪ್ರಾಣಿ ಪಕ್ಷಿಗಳನ್ನು ಸಾಕಿ ಅವುಗಳನ್ನು ಮಾರುವ ವ್ಯಾಪಾರ ಮಾಡುತ್ತಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಇರುವ ಪುಟ್ಟಮಕ್ಕಳನ್ನು ನೋಡಿಕೊಳ್ಳಲು ಜೊಹ್ರಾಳನ್ನು ಮನೆ ಕೆಲಸಕ್ಕೆ ಇಟ್ಟಿಕೊಂಡಿದ್ದರು. ಈ ವೇಳೆ ಜೊಹ್ರಾ ಗಿಳಿ ಹಾರಿಹೋಗಲು ಬಿಟ್ಟಿದ್ದಾಳೆ ಎಂದು ಮಾಲೀಕರು ಮನಬಂದಂತೆ ಥಳಿಸಿದ್ದಾರೆ. ಪ್ರಜ್ಞಾಹೀನಾಳದ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸೋಮವಾರ ಸಾವನ್ನಪ್ಪಿದ್ದಾಳೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ರಾವಲ್ಪಿಂಡಿ ಪೊಲೀಸ್ ಅಧೀಕ್ಷಕ ಜಿಯಾ ಉದ್ದೀನ್, ಪ್ರಾಥಮಿಕ ತನಿಖೆಯ ಪ್ರಕಾರ ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಬಂದಾಗ ಆಕೆ ಬದುಕಿದ್ದಳು. ಆದರೆ ಆಕೆಯ ಮುಖ, ಕೈ-ಕಾಲು, ಪಕ್ಕೆಲುಬು ಮತ್ತು ಕಾಲಿನ ಕೆಳಭಾಗದಲ್ಲಿ ಗಂಭೀರ ಗಾಯಗಳಾಗಿದ್ದವು. ಜೊತೆಗೆ ಬಾಲಕಿಯ ತೊಡೆಯ ಭಾಗದಲ್ಲಿ ಗಾಯವಾಗಿದ್ದ ಕಾರಣ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬವುದು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.

    ಜೊಹ್ರಾಳನ್ನು ಚಿಕ್ಕಮಕ್ಕಳನ್ನು ನೋಡಿಕೊಳ್ಳುವ ಮನೆಯ ಕೆಲಸಕ್ಕೆ ಇಟ್ಟಿಕೊಳ್ಳಲಾಗಿತ್ತು. ಈ ಕೆಲಸಕ್ಕೆ ಹಣದ ರೂಪದಲ್ಲಿ ಅವಳ ಓದಿಗೆ ಸಹಾಯ ಮಾಡುವುದಾಗಿ ಮಾಲೀಕರು ಹೇಳಿದ್ದರು. ಆದರೆ ಗಿಳಿಗಾಗಿ ಆಕೆಯಯನ್ನು ಕ್ರೂರವಾಗಿ ಕೊಂದಿದ್ದಾರೆ. ಈ ವಿಚಾರವಾಗಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಜೊತೆಗೆ ತನಿಖೆ ಮುಂದುವರೆದಿದೆ ಎಂದು ಜಿಯಾ ಉದ್ದೀನ್ ಮಾಹಿತಿ ನೀಡಿದ್ದಾರೆ.

  • ಬಾಡಿಗೆ ನೀಡಿಲ್ಲವೆಂದು ಯುವತಿಯರನ್ನು ಕೂಡಿ ಹಾಕಿದ ಪಿಜಿ ಮಾಲೀಕ

    ಬಾಡಿಗೆ ನೀಡಿಲ್ಲವೆಂದು ಯುವತಿಯರನ್ನು ಕೂಡಿ ಹಾಕಿದ ಪಿಜಿ ಮಾಲೀಕ

    ಹಾಸನ: ಪಿಜಿ ಬಾಡಿಗೆ ನೀಡಿಲ್ಲ ಎಂದು ಇಬ್ಬರು ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ಹಾಸನದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

    ಹಾಸನದ ಖಾಸಗಿ ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ಯುವತಿಯರಿಬ್ಬರು, ಯುಗಾದಿ ಹಬ್ಬಕ್ಕೆಂದು ಮೈಸೂರಿನಲ್ಲಿರುವ ಮನೆಗೆ ತೆರಳಿದ್ದರು. ನಂತರ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಪಿಜಿಗೆ ಬಂದಿರಲಿಲ್ಲ.

    ಇಂದು ಬಟ್ಟೆ, ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಬಾಡಿಗೆ ಕಾರು ಮಾಡಿಕೊಂಡು ಪಿಜಿಗೆ ಬಂದಿದ್ದಾರೆ. ಈ ವೇಳೆ ಎರಡು ತಿಂಗಳ ಬಾಡಿಗೆ ಹಣ ನೀಡಲೇಬೇಕು ಎಂದು ಪಿಜಿ ಮಾಲೀಕ ಒತ್ತಾಯಿಸಿದ್ದಾನೆ. ಈ ವೇಳೆ ಯುವತಿಯರು ಹಣವಿಲ್ಲ ಎಂದು ತಮ್ಮ ಕಷ್ಟ ಹೇಳಿಕೊಂಡಿದ್ದು, ಅವರ ಮಾತಿಗೆ ಕ್ಯಾರೇ ಎನ್ನದ ಪಿಜಿ ಮಾಲೀಕ ಇಬ್ಬರನ್ನೂ ಪಿಜಿಯಲ್ಲೇ ಕೂಡಿ ಹಾಕಿದ್ದಾನೆ.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಡಾವಣೆ ಪೊಲೀಸರು ಯುವತಿಯರಿಬ್ಬರನ್ನು ಬಿಡುಗಡೆಗೊಳಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಬಾರ್ ಮಾಲೀಕರನ್ನ ಉದ್ಧಾರ ಮಾಡಬೇಡಿ: ಸಚಿವ ಸುರೇಶ್ ಕುಮಾರ್

    ಬಾರ್ ಮಾಲೀಕರನ್ನ ಉದ್ಧಾರ ಮಾಡಬೇಡಿ: ಸಚಿವ ಸುರೇಶ್ ಕುಮಾರ್

    ಚಾಮರಾಜನಗರ: ಬಾರ್ ಮಾಲೀಕರನ್ನು ಉದ್ಧಾರ ಮಾಡಬೇಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾರ್ಮಿಕರಿಗೆ ಕಿವಿಮಾತು ಹೇಳಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಉಗುರು ಕಟ್ಟೆ ಬಳಿ ನರೇಗಾ ಕಾಮಗಾರಿ ನಡೆಯುತ್ತಿದೆ. ಚಾಮರಾಜನಗರ ಜಿಲ್ಲೆಯ ವಿವಿದೆಡೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಇಂದು ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಬಳಿಕ ಕಾರ್ಮಿಕರಿಗೆ ಸಚಿವರು ಬುದ್ಧಿ ಮಾತು ಹೇಳಿದ್ದಾರೆ.

    ಬಾರ್ ಮುಚ್ಚಿತ್ತಲ್ಲ ಆಗ ಯಾರಿಗೆ ಖುಷಿಯಾಯ್ತು? ಯಾರಿಗೆ ಆಗಿಲ್ಲ? ಕೈ ಎತ್ತಿ ಎಂದು ಮಹಿಳಾ ಕಾರ್ಮಿಕರನ್ನು ಪ್ರಶ್ನಿಸಿದರು. ಈ ವೇಳೆ ಎಲ್ಲಾ ಮಹಿಳೆಯರು ನಮಗೆ ಖುಷಿಯಾಗಿತ್ತು ಎಂದು ಹೇಳಿದ್ದಾರೆ.

    ಆಗ ದುಡಿದ ಹಣವನ್ನು ಸದುಪಯೋಗಪಡಿಸಿಕೊಳ್ಳಿ. ಸುಮ್ಮನೆ ಕುಡಿಯಲು ಬಳಸಬೇಡಿ. ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ಕುಡಿದು ಬಾರ್ ಮಾಲೀಕರನ್ನು ಉದ್ದಾರ ಮಾಡುಬೇಡಿ ಎಂದು ಕಿವಿಮಾತು ಹೇಳುವ ಮೂಲಕ ಸುರೇಶ್ ಕುಮಾರ್ ಮದ್ಯಪಾನದ ಬಗ್ಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

    ಇದೇ ವೇಳೆ ಹಾರೆ ಹಿಡಿದು ರೈತರೊಂದಿಗೆ ಕೆಲಸ ಮಾಡಿ ಕಾರ್ಮಿಕರನ್ನು ಹುರಿದುಂಬಿಸುವ ಕೆಲಸಕ್ಕೆ ಮುಂದಾದರು. ಸಚಿವರಿಗೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಸಾಥ್ ನೀಡಿದರು.

  • ಕೊರೊನಾ ಸಂಕಷ್ಟದ ನಡುವೆಯೇ 62 ಕುರಿಗಳನ್ನು ಕಳೆದುಕೊಂಡ ಕುರಿಗಾಹಿ

    ಕೊರೊನಾ ಸಂಕಷ್ಟದ ನಡುವೆಯೇ 62 ಕುರಿಗಳನ್ನು ಕಳೆದುಕೊಂಡ ಕುರಿಗಾಹಿ

    – ಮಾಲೀಕರ ಕಣ್ಣೆದುರೇ ಸಾವನ್ನಪ್ಪಿದ ಕುರಿಗಳು

    ಗದಗ: ವಿಷಪ್ರಾಶನದಿಂದ 62 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆ ಗಜೇಂಡ್ರಗಡ ತಾಲೂಕಿನ ನರೇಗಲ್ ಬಳಿ ನಡೆದಿದೆ.

    ಈ ಕುರಿಗಳು ಜೋಳದ ಚಿಗುರು ತಿಂದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಬಳ್ಳಾರಿ ಜಿಲ್ಲೆಯಿಂದ ಕುರಿಗಳಿಗಾಗಿ ಆಹಾರ ಅರಸಿ ಬಂದ ಮೂರು ಜನ ಮಾಲೀಕರಿಗೆ ಸಂಬಂಧಿಸಿದ ಕುರಿಗಳು ಸಾವನ್ನಪ್ಪಿವೆ. ಕುರಿಗಾಹಿ ಸಿದ್ದಪ್ಪ ಪೂಜಾರಿ, ದೇವರಾಜ್, ಅಜಿತ್ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.

    ಬುಧವಾರ ಸಂಜೆಯ ವೇಳೆ ಚೆನ್ನಾಗಿಯೇ ಇದ್ದ ಕುರಿಗಳು, ಬೆಳಗ್ಗೆ ಕಣ್ಣೆದುರಿಗೆ ಸಾಯುವುದನ್ನು ನೋಡಿ ಮಾಲೀಕರು ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ನರೇಗಲ್ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಕುರಿಗಳನ್ನು ಬಾಗಲಕೋಟೆ ಪಶು ಸಂಗೋಪನಾ ಜೈವಿಕ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಈಗ ಕೊರೊನಾ ಸಂಕಷ್ಟದಲ್ಲಿ ಕುರಿಗಾರರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಸರ್ಕಾರ ಈ ಕುರಿಗಾಹಿಗಳ ನೆರವಿಗೆ ಬರಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ.