Tag: owner

  • ಅತ್ಯುತ್ತಮ ಕೆಲಸ ಮಾಡಿದ ಉದ್ಯೋಗಿಗಳ ಪಾದ ತೊಳೆದ ಬಾಸ್ – ವಿಡಿಯೋ ವೈರಲ್

    ಅತ್ಯುತ್ತಮ ಕೆಲಸ ಮಾಡಿದ ಉದ್ಯೋಗಿಗಳ ಪಾದ ತೊಳೆದ ಬಾಸ್ – ವಿಡಿಯೋ ವೈರಲ್

    ಬೀಜಿಂಗ್: ಸಾಮಾನ್ಯವಾಗಿ ಕಂಪನಿಗಳಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ಮಾಲೀಕರು ನೌಕಕರನ್ನು ಉತ್ತೇಜಿಸುವ ಸಲುವಾಗಿ ಬೋನಸ್, ಬಡ್ತಿ ಅಥವಾ ಗಿಫ್ಟ್ ನೀಡುವುದನ್ನು ನೀವು ಕೇಳಿರಬಹುದು. ಆದರೆ ಚೀನಾದ ಕಂಪನಿಯೊಂದರಲ್ಲಿ ಮಾಲೀಕನೇ ಉದ್ಯೋಗಿಗಳ ಪಾದ ತೊಳೆದ ಪ್ರಸಂಗ ನಡೆದಿದೆ.

    ಈ ಘಟನೆ ನವೆಂಬರ್ 2ರಂದು ಚೀನಾದ ಶಂಡೊಂಗ್ ಪ್ರಾಂತ್ಯದಲ್ಲಿರುವ ಜಿನನ್ ನ 2ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಡೆದಿದೆ.

    ಮಾಲೀಕ ತಮ್ಮ ನೌಕರರ ಶ್ರಮವನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಪಾದಗಳನ್ನು ತೊಳೆಯುವ ಮೂಲಕ ಮತ್ತಷ್ಟು ಉತ್ತಮ ಕೆಲಸ ಮಾಡುವಂತೆ ಪ್ರೇರೇಪಿಸಿದ್ದಾರೆ. ಅಲ್ಲದೆ ಈ ಮೂಲಕ ಮಾಲೀಕ ಮತ್ತು ಉದ್ಯೋಗಿಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.

    ಇಬ್ಬರು ಹಿರಿಯ ಅಧಿಕಾರಿಗಳು ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಅವರನ್ನು ಕುಳಿತುಕೊಳ್ಳಿಸಿ, ಪಾದ ತೊಳೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

    ಕಾಸ್ಮೆಟಿಕ್ ಕಂಪನಿಯ ಅಧ್ಯಕ್ಷ ಹಾಗೂ ಹಿರಿಯ ಕಾರ್ಯನಿರ್ವಾಹಕರೊಬ್ಬರು ತಮ್ಮ ಎರಡೂ ಕೈಗಳನ್ನು ಜೋಡಿಸಿ ಕಠಿಣ ಶ್ರಮ ವಹಿಸಿ ಕೆಲಸ ಮಾಡಿದ ಉದ್ಯೋಗಿಗಳ ಮುಂದೆ ತಲೆಬಾಗಿದ್ದಾರೆ. ನಂತರ ಉದ್ಯೋಗಿಗಳನ್ನು ವೇದಿಕೆಗೆ ಕರೆದು, ಸಾಲಾಗಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಬಳಿಕ ಅವರ ಶೂ ಹಾಗೂ ಸಾಕ್ಸ್ ಬಿಚ್ಚಿದ್ದಾರೆ. ಆ ನಂತರ 8 ಮಂದಿ ನೌಕರರು ಕುರ್ಚಿಯಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಮಾಲೀಕರು ಕಚೇರಿ ಸಿಬ್ಬಂದಿ ಅಥವಾ ನೌಕರರ ಪಾದ ತೊಳೆದಿದ್ದಾರೆ. ಇದನ್ನೂ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಒಟ್ಟಿನಲ್ಲಿ ಮಾಲೀಕರು, ತಮ್ಮ ಶ್ರೇಯಸ್ಸಿಗೆ ಕಾರಣರಾದ ಉದ್ಯೋಗಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಲ್ಲದೇ ಮುಂದೆಯೂ ಉತ್ತಮ ಕೆಲಸ ನಿರ್ವಹಿಸುವಂತೆ ಆಶಿಸಿದ್ದಾರೆ.

    ಸದ್ಯ ವೈರಲಾಗುತ್ತಿರುವ ವಿಡಿಯೋಗೆ ಸಾಕಷ್ಟು ಕಮೆಂಟ್ ಗಳು ಬರುತ್ತಿದೆ. ಕೆಲವರು ಕಂಪನಿ ಮಾಲೀಕನ ಕೆಲಸವನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ತೆಗಳಿದ್ದಾರೆ. ಮತ್ತೆ ಕೆಲವರು ಉತ್ತಮ ಕೆಲಸ ಮಾಡಿದರೆ ನೌಕಕರಿಗೆ ಬೋನಸ್ ನೀಡಿದರೆ ಸಾಕು ಎಂದು ಸಲಹೆ ನೀಡಿದ್ದಾರೆ.

    ಇದು ಸರ್ವೇ ಸಾಮಾನ್ಯ. ನಮ್ಮಿಂದಾಗಿ ನೀವು ಸಾಕಷ್ಟು ಹಣ ಮಾಡಿದ್ದೀರಿ. ಹೀಗಾಗಿ ನೀವು ನಿಮ್ಮ ಪಾದ ತೊಳೆದರೆ ಏನೂ ಪ್ರಯೋಜವಾಗಲ್ಲ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಪಾದ ತೊಳೆಯುವ ಮೂಲಕ ಉದ್ಯೋಗಿಗಳು ಮತ್ತೆ ಬೋನಸ್ ಕೇಳದಂತೆ ಮಾಡುವ ಮಾಲೀಕನ ಕುತಂತ್ರ ಇದಾಗಿದೆ ಎಂದಿದ್ದಾರೆ. ಮಗದೊಬ್ಬರು, ಇದೂ ಒಂದು ಅವರ ಸಾಧನೆಯಾಗಿದೆ. ಮುಂದೆ ಅವರ ರೆಸ್ಯೂಮ್ ನಲ್ಲಿ ಬಳಸಿಕೊಳ್ಳಬಹುದೆಂದು ವ್ಯಂಗ್ಯವಾಡಿದ್ದಾರೆ.

  • ವಿಷಹಾಕಿ ನಾಯಿ ಕೊಂದು, ಮಾಲೀಕನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ್ರು

    ವಿಷಹಾಕಿ ನಾಯಿ ಕೊಂದು, ಮಾಲೀಕನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ್ರು

    ವಿಜಯಪುರ: ಮೊದಲು ನಾಯಿಗೆ ವಿಷಹಾಕಿ ಕೊಂದ ಬಳಿಕ ದುಷ್ಕರ್ಮಿಗಳು ಮಾಲೀಕನ ಕೊಲೆಗೆ ಸ್ಕೆಚ್ ಹಾಕಿ, ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ.

    ತಡರಾತ್ರಿ ಜಿಲ್ಲೆ ಆಲಮೇಲ ಪಟ್ಟಣದಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸೆಗಿದ್ದಾರೆ. ಆಲಮೇಲ ನಿವಾಸಿ ಬಸವರಾಜ್ ಗುರುಲಿಂಗಪ್ಪ ನನದಿ ಮೃತ ದುರ್ದೈವಿ. ಬಸವರಾಜ್ ಅವರನ್ನು ದುಷ್ಕಮಿಗಳು ತಡರಾತ್ರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಸವರಾಜ್ ಪತ್ನಿಯನ್ನು ಹತ್ಯೆಗೈಯ್ಯಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು. ಈ ವೇಳೆ ಪತ್ನಿ ತೋಟದಲ್ಲಿ ಓಡಿಹೋಗಿ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ ಬಸವರಾಜ್ ಅವರ ಮನೆಯಲ್ಲಿ ಸಾಕಿದ್ದ ನಾಯಿಗೆ ದುಷ್ಕರ್ಮಿಗಳು ವಿಷ ಹಾಕಿ ಕೊಂದಿದ್ದರು. ಇದೇ ಬೆನ್ನಲ್ಲೇ ಈಗ ನಾಯಿ ಮಾಲೀಕನ ಕೊಲೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಸದ್ಯ ಸ್ಥಳಕ್ಕೆ ಆಲಮೇಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಶ್ವಾನದಳದಿಂದ ದುಷ್ಕರ್ಮಿಗಳ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ.

  • ರಾಜಧಾನಿಯಲ್ಲಿ ಬಯಲು ಶೌಚಕ್ಕೂ ಬಾಡಿಗೆ -ಮಾವಿನ ತೋಪಿನಲ್ಲಿ ಶೌಚಕ್ಕೆ ತಿಂಗಳಿಗೆ 200 ರೂ.

    ರಾಜಧಾನಿಯಲ್ಲಿ ಬಯಲು ಶೌಚಕ್ಕೂ ಬಾಡಿಗೆ -ಮಾವಿನ ತೋಪಿನಲ್ಲಿ ಶೌಚಕ್ಕೆ ತಿಂಗಳಿಗೆ 200 ರೂ.

    ಬೆಂಗಳೂರು: ಬಯಲು ಶೌಚಾಲಯದಿಂದ ಮುಕ್ತಿ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದರೆ, ಅದಕ್ಕೆ ಬ್ರೇಕ್ ಮಾತ್ರ ಬಿದ್ದಿಲ್ಲ. ಗ್ರಾಮ ಪ್ರದೇಶಗಳನ್ನು ಬಿಡಿ ನಗರಗಳಲ್ಲೂ ಇನ್ನೂ ಬಯಲು ಶೌಚಾಲಯವನ್ನೇ ಜನ ಅವಲಂಬಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಸುಮಾರು 200ಕ್ಕೂ ಹೆಚ್ಚಿನ ಕುಟುಂಬಗಳಿಂದ ಬಯಲು ಶೌಚಾಲಯಕ್ಕೆ ಎಂದು 200 ರೂ. ತಿಂಗಳಿಗೆ ಬಾಡಿಗೆ ನೀಡುತ್ತಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಬಯಲು ಶೌಚಾಲಯಕ್ಕೆ ತಿಂಗಳು ಇನ್ನೂರರಂತೆ ಆ ಜಮೀನಿನ ಮಾಲೀಕನಿಗೆ ನೀಡಬೇಕು. ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಕೆಆರ್ ಪುರಂನ ಹೊರಮಾವು ಬಳಿಯ ಬಿಬಿಎಂಪಿಯ ವಾರ್ಡ್ ನಂಬರ್ 26ರ ಚಿಕ್ಕನಂಜುಂಡಪ್ಪ ಲೇಔಟ್ ಬಳಿ ರೇವಣ್ಣ ಎಂಬವರ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿವೆ. ದೂರದ ಕರ್ನಾಟಕ ಅಂದರೆ ಗಡಿಭಾಗದ ಈ ಜನ ಕೆಲಸ ಅರಸಿ ಬಂದು ಇಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಾಗದ ಮಾಲೀಕ ರೇವಣ್ಣ ಇವರಿಗೆ ತಮ್ಮ ಸ್ವಂತ ಜಾಗದಲ್ಲಿ ಜೋಪಡಿ ಹಾಕಲು ಬಿಟ್ಟಿದ್ದಾರೆ. ಆದರೆ ಶೌಚಾಲಯಕ್ಕೆ ಪಕ್ಕದ ಕೃಷ್ಣ ಮೂರ್ತಿ ಎಂಬವರ ಮಾವಿನ ತೋಪನ್ನು ಬಳಸಲು ಹೇಳಿದ್ದಾರೆ. ಇದನ್ನು ಲಾಭ ಮಾಡಿಕೊಳ್ಳಲು ಮಾವಿನ ತೋಪಿನ ಮಾಲೀಕ ಸುಮಾರು 1 ವರ್ಷದಿಂದ ಒಂದು ಕುಟುಂಬವೊಂದ್ದಕ್ಕೆ ತಿಂಗಳಿಗೆ 200 ರೂ. ವಸೂಲಿ ಮಾಡುತ್ತಿದ್ದಾನೆ.

    ಈ ಬಗ್ಗೆ ಜೋಪಡಿ ನಿವಾಸಿಗಳನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ;
    ಪಬ್ಲಿಕ್ ಟಿವಿ: ಜಮೀನಿನ ಮಾಲೀಕರೇ ದುಡ್ಡು ಕೊಡಿ ಎಂದು ಬಂದು ಕೇಳಿದ್ರಾ?
    ಜೋಪಡಿ ವಾಸಿ: ಇಲ್ಲ ಅವರೇ ಬಂದು ಮಾತಾಡಿದ್ದು, ಒಂದು ಜೋಪಡಿಗೆ 200 ರೂ. ಕೊಡಿ, ಇಲ್ಲ ಖಾಲಿ ಮಾಡ್ಕೊಂಡ್ ಹೋಗಿ. ಖಾಲಿ ಮಾಡ್ಕೊಂಡ್ ಹೋದ್ರೆ ಎಲ್ಲಿ ಸರ್ ಹೋಗೋದು. ಅಷ್ಟೊಂದು ಬಾಡಿಗೆ ಕೊಟ್ಟು. ಅದಕ್ಕೆ 200 ರೂ. ಕೊಟ್ಟು ಸುಮ್ಮನಾಗ್ತೀವಿ.
    ಪಬ್ಲಿಕ್ ಟಿವಿ: ಹೆಣ್ಣು ಮಕ್ಕಳು ಇರ್ತಾರೆ ಹೇಂಗ್ ಬಯಲು ಶೌಚ ಯೂಸ್ ಮಾಡ್ತೀರಿ.
    ಜೋಪಡಿ ವಾಸಿ: ತೋಪಲ್ಲಿ ಒಂದು ಕಡೆ ಅವರು ಹೋಗ್ತಾರೆ, ಮತ್ತೊಂದು ಕಡೆ ನಾವ್ ಹೋಗ್ತಿವಿ. ಏನ್ ಮಾಡೋದು ಸರ್.
    ಪಬ್ಲಿಕ್ ಟಿವಿ: 200 ರೂ. ತಗೊಂಡು ಕ್ಲೀನ್ ಮಾಡ್ತಾರಂತ. ಮಣ್ಣು ಏನಾದ್ರೂ ಹಾಕ್ತಾರ.
    ಜೋಪಡಿ ವಾಸಿ: ಏನೂ ಮಾಡಲ್ಲ ಸರ್. ಸುಮ್ನೆ ಬಾಡಿಗೆ ಅಂತ 200 ರೂ. ತಗೋತಾರೆ.
    ಪಬ್ಲಿಕ್ ಟಿವಿ: ಏನೇನ್ ಕೆಲಸ ಮಾಡ್ತೀರ?
    ಜೋಪಡಿ ವಾಸಿ: ಗಾರೆ ಕೆಲಸ, ಸೆಂಟ್ರಿಂಗ್ ಕೆಲಸ, ಪ್ಲಂಬರ್, ಡ್ರೈವರ್ ಕೆಲಸ ಮಾಡ್ತೀವಿ.
    ಪಬ್ಲಿಕ್ ಟಿವಿ: ಯಾವ ಊರಿನವರು?
    ಜೋಪಡಿ ವಾಸಿ: ಮಂತ್ರಾಲಯ, ಬಳ್ಳಾರಿ ಕಡೆಯವರಿದ್ದೀವಿ.

    ಜಾಗದ ಮಾಲೀಕ ಕೃಷ್ಣ ಮೂರ್ತಿ, ನೀವು ಶೌಚಕ್ಕೆ ನಮ್ಮ ತೋಟವನ್ನು ಬಳಸುತ್ತಿದ್ದೀರಿ ಜೆಸಿಬಿ ಮೂಲಕ ಮಣ್ಣು ಬದಲಿಸಿ ಸ್ವಚ್ಛಗೊಳಿಸಬೇಕಾಗುತ್ತೆ ಎಂದು 200 ರೂ. ಫಿಕ್ಸ್ ಮಾಡಿದ್ದಾರೆ. ಇನ್ನೇನ್ ಮಾತನಾಡುವುದಕ್ಕೆ ಆಗುತ್ತೆ, ಹೇಗೋ ಉಳಿಯಲು ಜಾಗ ಇದ್ಯಲ್ಲ ಎಂದು ಅಲ್ಲಿನ ವಾಸಿಗಳು ದುಡ್ಡು ನೀಡುತ್ತಾ ಬಂದಿದ್ದಾರೆ. ಮಹಿಳೆಯರು ಒಂದು ಭಾಗಕ್ಕೆ, ಪುರುಷರು ಮತ್ತೊಂದು ಭಾಗದಲ್ಲಿ ಶೌಚಕ್ಕೆ ಹೋಗುತ್ತೇವೆ. ಏನೂ ತೊಂದರೆ ಇಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಆದರೆ ಬಯಲು ಶೌಚಾಲಯ ತಪ್ಪು ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ.

  • ನಾಯಿ ಬೊಗಳಿದ್ದಕ್ಕೆ ನೆರೆ ಮನೆಯವರಿಂದ ಆತ್ಮಹತ್ಯೆಗೆ ಯತ್ನ

    ನಾಯಿ ಬೊಗಳಿದ್ದಕ್ಕೆ ನೆರೆ ಮನೆಯವರಿಂದ ಆತ್ಮಹತ್ಯೆಗೆ ಯತ್ನ

    – ಒಡತಿಗೆ ನಾಯಿ ಸಾಕದಂತೆ ಆದೇಶ
    – ಡೈರಿ ಸಾಕ್ಷ್ಯಕ್ಕೆ ಕೋರ್ಟ್ ಅಸ್ತು

    ಲಂಡನ್: ನಾಯಿ ಅತಿಯಾಗಿ ಬೊಗಳುತ್ತದೆ ಎಂದು ನೆರೆಮನೆಯವರು ಆತ್ಮಹತ್ಯೆಗೆ ಯತ್ನಿಸಿದ ವಿಚಿತ್ರ ಪ್ರಕರಣವೊಂದು ಇಂಗ್ಲೆಂಡ್‍ನ ಆನ್‍ಸ್ಟೇ ಪ್ರದೇಶದಲ್ಲಿ ನಡೆದಿದ್ದು, ನಾಯಿ ಒಡತಿಗೆ ಕೋರ್ಟ್ ನಾಯಿ ಸಾಕುವಂತಿಲ್ಲ ಎಂದು ಆದೇಶ ನೀಡಿದೆ.

    ಆನ್‍ಸ್ಟೇ ನಿವಾಸಿ, ವನೆಸ್ಸಾ ಸ್ಟೋನ್(51) ನಾಯಿ ಸಾಕಿದ್ದರು. ಅದಕ್ಕೆ ಪ್ರೀತಿಯಿಂದ ರಿಗ್ಗಿ ಎಂದು ಹೆಸರಿಟ್ಟಿದ್ದರು. ಆದರೆ ರಿಗ್ಗಿ ಸುಮ್ಮನಿರುವ ನಾಯಿಯಲ್ಲ, ಅದಕ್ಕೆ ಸದಾ ಬೊಗಳುವ ಅಭ್ಯಾಸವಿತ್ತು. ಆದ್ದರಿಂದ ಹಗಲು, ರಾತ್ರಿ ಎನ್ನದೇ ಸದಾ ಬೊಗಳುತ್ತಲೇ ಇರುತ್ತಿತ್ತು. ಯಾವಾಗಲು ನಾಯಿ ಬೊಗಳುತ್ತಿದ್ದ ಕಾರಣಕ್ಕೆ ನೆರೆಮನೆಯವರಿಗೆ ತುಂಬಾ ತೊಂದರೆ ಆಗುತ್ತಿತ್ತು. ಹೀಗಾಗಿ ಅವರು ಹಲವು ಬಾರಿ ವನೆಸ್ಸಾ ಅವರ ಬಳಿ ಕೂಡ ನಾಯಿ ಬಗ್ಗೆ ದೂರಿದ್ದರು. ಆದರೆ ವನೆಸ್ಸಾ ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ನೆರೆಮನೆಯವರನ್ನು ಸಮಾಧಾನಗೊಳಿಸಿ ಕಳುಹಿಸುತ್ತಿದ್ದರು.

    ಆದರೆ ರಿಗ್ಗಿ ಮಾತ್ರ ಏನೇ ಮಾಡಿದರು ಸುಮ್ಮನೆ ಇರುತ್ತಲೇ ಇರಲಿಲ್ಲ, ಬೊಗಳುತ್ತಲೇ ಇರುತ್ತಿತ್ತು. ಇದರಿಂದ ಬೇಸತ್ತ ನೆರೆಮನೆ ನಿವಾಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಹೀಗಾಗಿ ನಾಯಿ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ವನೆಸ್ಸಾ ಅವರಿಗೆ ಇನ್ಮುಂದೆ ನಾಯಿಯನ್ನೇ ಸಾಕದಂತೆ ನಿಷೇಧ ಹೇರಿದೆ. ಒಡತಿಗೆ ನಿಷೇಧ ಹೇರಿದ್ದರಿಂದ ನಾಯಿ ರಿಗ್ಗಿ ಅನಾಥವಾಗಿದ್ದು, ಕೊನೆಗೆ ಅದನ್ನು ಚಾರ್ನ್ ವುಡ್ ಬರೋ ಕೌನ್ಸಿಲ್ ವಶಕ್ಕೆ ಪಡೆದುಕೊಂಡಿದೆ.

    ಕೋರ್ಟಿನಲ್ಲಿ ದೂರುದಾರರು ನಾಯಿ ವಿರುದ್ಧ ಒಪ್ಪಿಸಿದ ಸಾಕ್ಷಿ ವಿಚಿತ್ರವಾಗಿತ್ತು. ನಾಯಿ ಎಷ್ಟು ಬಾರಿ ಬೊಗಳಿದೆ ಎಂಬುದನ್ನು ನೆರೆಮನೆಯವರು ಡೈರಿಯಲ್ಲಿ ಬರೆದಿಟ್ಟುಕೊಂಡು ಅದನ್ನು ಕೋರ್ಟಿಗೆ ಸಲ್ಲಿಸಿದ್ದರು. ನಾಯಿ ಸಂಜೆ 6 ಗಂಟೆಯಿಂದ ಬೆಳಗಿನ ಜಾವದವರೆಗೂ ಬೊಗಳುತ್ತಲೇ ಇರುತ್ತಿತ್ತು. ಇದರಿಂದ ನನಗೆ ಸರಿಯಾಗಿ ನಿದ್ದೆ ಮಾಡಲು ಆಗುತ್ತಿರಲಿಲ್ಲ ಎಂದು ಹೇಳಿದ್ದರು.

  • ಹೊಸ ನಿಯಮಕ್ಕೂ ಮುಂಚೆಯೇ 6.53 ಲಕ್ಷ ದಂಡ ಕಟ್ಟಿದ್ದ ಟ್ರಕ್ ಮಾಲೀಕ

    ಹೊಸ ನಿಯಮಕ್ಕೂ ಮುಂಚೆಯೇ 6.53 ಲಕ್ಷ ದಂಡ ಕಟ್ಟಿದ್ದ ಟ್ರಕ್ ಮಾಲೀಕ

    ಭುವನೇಶ್ವರ: ಟ್ರಕ್ ಮಾಲೀಕನೊಬ್ಬ ಹೊಸ ಮೋಟಾರು ವಾಹನಗಳ ಕಾಯ್ದೆ ಬರುವ ಮೊದಲೇ 6.53 ಲಕ್ಷ ದಂಡ ಕಟ್ಟಿರುವ ಘಟನೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ.

    ನಾಗಾಲ್ಯಾಂಡ್ ನೋಂದಾಯಿತ ಟ್ರಕ್ಕೊಂದು ಏಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 6.53 ಲಕ್ಷ ದಂಡವನ್ನು ಮಾಲೀಕ ಕಟ್ಟಿದ್ದಾರೆ. ಈ ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ಹೊಸ ಸಂಚಾರಿ ನಿಯಮ ಸೆಪ್ಟಂಬರ್ 1 ರಿಂದ ಜಾರಿಗೆ ಬಂದಿದ್ದರೆ ಈ ಟ್ರಕ್ ಮಾಲೀಕನಿಗೆ ಆಗಸ್ಟ್ 10 ರಂದೇ ಹಳೆಯ ಕಾಯ್ದೆಯ ಅಡಿ ಬರೋಬ್ಬರಿ 6.53 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಸಂಬಲ್ಪುರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್.ಟಿ.ಒ) ಟ್ರಕ್ ಚಾಲಕ ದಿಲೀಪ್ ಕಾರ್ತಾ ಮತ್ತು ಲಾರಿ ಮಾಲೀಕ ಶೈಲೇಶ್ ಶಂಕರ್ ಲಾಲ್ ಗುಪ್ತ ಅವರ ಲಾರಿಗೆ ಒಡಿಶಾ ಮೋಟಾರು ವಾಹನಗಳ ತೆರಿಗೆ (ಒಎಂವಿಟಿ) ಕಾಯ್ದೆಯಡಿ ರಸ್ತೆ ತೆರೆಗೆ ಪಾವತಿಸದ್ದಕ್ಕೆ 6,40,500 ರೂ ದಂಡ ಹಾಕಲಾಗಿದೆ.

    ಶೈಲೇಶ್ ಶಂಕರ್ ಲಾಲ್ ಗುಪ್ತ ಲಾರಿಯನ್ನು 2014ರ ಜುಲೈ 21 ರಂದು ಖರೀದಿಸಿದ ನಂತರ ರಸ್ತೆ ತೆರಿಗೆಯನ್ನು ಪಾವತಿಸಿರಲಿಲ್ಲ. ಸೆ.30 ರಂದು ದಂಡವನ್ನು ಪಾವತಿ ಮಾಡಲು ತೆರಳಿದ್ದಾರೆ. ಹೀಗಾಗಿ 5 ವರ್ಷ ತೆರಿಗೆ ಪಾವತಿ ಮಾಡದೇ ಲಾರಿ ಚಾಲನೆ ಮಾಡಿದಕ್ಕೆ ಅವರಿಗೆ 6,40,500 ದಂಡ ಹಾಕಿದ್ದರೆ ಇತರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಉಳಿದ 12,500 ರೂ. ದಂಡವನ್ನು ವಿಧಿಸಲಾಗಿದೆ.

    ಮಾಲೀಕನಿಗೆ ನೀಡಿರುವ ಚಲನ್ ಪ್ರತಿ ಪ್ರಕಾರ, ರಸ್ತೆ ತೆರಿಗೆ ದಂಡದ ಜೊತೆಗೆ, ಸಾಮಾನ್ಯ ಅಪರಾಧಕ್ಕೆ 100 ರೂ. ಹಾಗೂ ಆದೇಶಗಳ ಅವಿಧೇಯತೆ ಮತ್ತು ಅಡಚಣೆಗೆ 500 ರೂ, ವಾಯು ಮತ್ತು ಶಬ್ದ ಮಾಲಿನ್ಯ ಮಾಡಿದ್ದಕ್ಕೆ 1,000 ರೂ. ಮತ್ತು ಸರಕು ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ್ದಕ್ಕೆ 5,000 ರೂ., ಇದಲ್ಲದೆ ಪರವಾನಗಿ ಇಲ್ಲದೆ ವಾಹನವನ್ನು ಬಳಸಿದ್ದಕ್ಕಾಗಿ ಅಥವಾ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 5,000 ರೂ. ವಿಮೆಯಿಲ್ಲದೆ ಲಾರಿ ಚಲಿಸಿದಕ್ಕೆ 1,000 ರೂ. ಸೇರಿ ಒಟ್ಟು 6.53 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

  • ಸಂಚಾರಿ ನಿಯಮ ಉಲ್ಲಂಘನೆ – 2 ಲಕ್ಷ ದಂಡ ಕಟ್ಟಿದ ಟ್ರಕ್ ಮಾಲೀಕ

    ಸಂಚಾರಿ ನಿಯಮ ಉಲ್ಲಂಘನೆ – 2 ಲಕ್ಷ ದಂಡ ಕಟ್ಟಿದ ಟ್ರಕ್ ಮಾಲೀಕ

    ನವದೆಹಲಿ: ಲಾರಿಯಲ್ಲಿ ಓವರ್ ಲೋಡ್ ಹಾಕಿದ್ದಕ್ಕೆ ದೆಹಲಿಯ ಸಂಚಾರಿ ಪೊಲೀಸರು ಲಾರಿ ಚಾಲಕನಿಗೆ ಬರೋಬ್ಬರಿ 2,00,500 ರೂ ದಂಡ ಹಾಕಿರುವ ಘಟನೆ ಮುಕರ್ಬಾ ಚೌಕ್‍ನಲ್ಲಿ ನಡೆದಿದೆ.

    ದುಬಾರಿ ದಂಡವನ್ನು ಹಾಕಿಸಿಕೊಂಡ ಟ್ರಕ್ ಚಾಲಕನನ್ನು ರಾಮ್ ಕಿಶನ್ ಎಂದು ಗುರುತಿಸಲಾಗಿದೆ. ಹೊಸ ತಿದ್ದುಪಡಿ ನಿಯಮದ ಪ್ರಕಾರ ಓವರ್ ಲೋಡ್ ಸಾಗಿಸುವ ಲಾರಿಗಳಿಗೆ ಇದ್ದ ದಂಡವನ್ನು 2,000 ರೂ.ಗಳಿಂದ 20,000 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಹೆಚ್ಚುವರಿ ತೂಕದ ಶುಲ್ಕವನ್ನು ಪ್ರತಿ ಟನ್‍ಗೆ 1,000 ರೂ.ಗಳಿಂದ 2,000 ಟನ್‍ಗೆ ಹೆಚ್ಚಿಸಲಾಗಿದೆ.

    ಲಾರಿಯಲ್ಲಿ ಓವರ್ ಲೋಡಿಂಗ್ ಹಾಕಿದ್ದಕ್ಕೆ ಟ್ರಕ್ ಚಾಲಕ ರಾಮ್ ಕಿಶನ್‍ಗೆ 56,000 ರೂ. ಮತ್ತು ಈ ಹಿಂದೆ ಇತರ ಸಂಚಾರಿ ನಿಯಮ ಉಲ್ಲಂಘನೆಗಾಗಿ 70,000 ರೂ. ದಂಡ ವಿಧಿಸಲಾಗಿದೆ. ಇದರ ಜೊತೆಗೆ ವಿವಿಧ ಉಲ್ಲಂಘನೆಗಳಿಗಾಗಿ ಟ್ರಕ್‍ನ ಮಾಲೀಕರಿಗೆ 74,500 ರೂ.ಗಳ ದಂಡ ವಿಧಿಸಲಾಗಿದ್ದು, ಒಟ್ಟು 2,00,500 ರೂ. ಮೊತ್ತವನ್ನು ಟ್ರಕ್‍ನ ಮಾಲೀಕರು ಈಗ ಪಾವತಿಸಿದ್ದಾರೆ.

    ಈ ಹಿಂದೆ ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆಯಡಿ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನದ ವ್ಯಕ್ತಿಯೊಬ್ಬನಿಗೆ 1.41 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದಕ್ಕೂ ಮೊದಲು ಸೆಪ್ಟೆಂಬರ್ 3 ರಂದು ಹಲವಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಡಿಶಾದ ಸಂಬಲ್ಪುರ ಜಿಲ್ಲೆಯ ಟ್ರಕ್ ಚಾಲಕನಿಗೆ 86,500 ರೂ. ದಂಡ ವಿಧಿಸಲಾಗಿತ್ತು.

  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ – ಭೂಮಿಯೊಳಗಿನ ಶಬ್ದಕ್ಕೆ ಹೆದರಿ ಮನೆ ಬಿಟ್ಟ ಮಾಲೀಕ

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ – ಭೂಮಿಯೊಳಗಿನ ಶಬ್ದಕ್ಕೆ ಹೆದರಿ ಮನೆ ಬಿಟ್ಟ ಮಾಲೀಕ

    ಚಿಕ್ಕಮಗಳೂರು: ಮೂರು ದಿನಗಳಿಂದ ದಿನ ಕಳೆದಂತೆ ಮಳೆ ಪ್ರಮಾಣ ಜಾಸ್ತಿ ಆಗುತ್ತಿದೆ. ಭಾರೀ ಮಳೆ-ಗಾಳಿಯಿಂದ ಮಲೆನಾಡಿಗರ ಆತಂಕ ಹೆಚ್ಚಾಗಿದ್ದು, ಶಬ್ದಕ್ಕೆ ಹೆದರಿ ಮಾಲೀಕ ಮನೆ ಖಾಲಿ ಮಾಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕಮಕಿ ಗ್ರಾಮದ ಪ್ರಶಾಂತ್ ಎಂಬವರು ಭೂಮಿಯೊಳಗಿನ ಕೇಳಿ ಬಂದ ಶಬ್ದಕ್ಕೆ ಹೆದರಿ ಮನೆ ಖಾಲಿ ಮಾಡಿದ್ದಾರೆ. ಇಂದು ಬೆಳಗ್ಗೆ ಸುಮಾರು 4.45ಕ್ಕೆ 2-3 ಸೆಕೆಂಡ್ ಭೂಮಿಯೊಳಗಿಂದ ಭಾರೀ ಶಬ್ದ ಕೇಳಿ ಬಂದಿದೆ. ಈ ಶಬ್ದಕ್ಕೆ ಹೆದರಿದ ಮಾಲೀಕ ಪ್ರಶಾಂತ್ ಅವರು ತಮ್ಮ ಕುಟುಂಬದ ಜೊತೆ ಮನೆ ಖಾಲಿ ಮಾಡಿ ಮೂಡಿಗೆರೆಗೆ ಬಂದಿದ್ದಾರೆ.

    ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬೀಸುತ್ತಿರುವ ರಣಗಾಳಿಗೆ ಮಲೆನಾಡಿಗರು ಊರು ಬೀಡುವಂತೆ ಮಾಡುತ್ತಿದೆ. ಮೂಡಿಗೆರೆ ತಾಳೂಕಿನ ಚನ್ನಹಡ್ಲು, ಬಾಳೂರು, ಸುಂದರಬೈಲು, ಆಲೇಖಾನ್ ಹೊರಟ್ಟಿ, ಚಕ್ಕಮಕ್ಕಿ ಗ್ರಾಮಗಳಲ್ಲಿ ಭೂಮಿಯೊಳಗಿಂದ ನಾಲ್ಕೈದು ಸೆಕೆಂಡ್ ಭಾರೀ ಶಬ್ದ ಕೇಳಿ ಬರುತ್ತಿದ್ದು, ಜನ ರಾತ್ರೋರಾತ್ರಿ ಮನೆ ಬಿಟ್ಟು ಬರುತ್ತಿದ್ದಾರೆ.

    ಕಳೆದ ತಿಂಗಳ ಮಳೆಗೆ ಮನೆಯ ಮೇಲ್ಛಾವಣೆ ಕುಸಿಯುತ್ತಿತ್ತು. ಆದರೆ ಎರಡನೇ ರೌಂಡಿನ ಮಳೆರಾಯನ ಅಬ್ಬರಕ್ಕೆ ಮನೆಯ ತಳಪಾಯವೇ ಕುಸಿಯುವಂತಾಗಿದೆ. ಆಗಸ್ಟ್ ತಿಂಗಳ ಮಳೆಯಿಂದ ಕುಸಿದಿದ್ದ ಬೆಟ್ಟಗುಡ್ಡಗಳ ಹಾಸುಪಾಸಿನಲ್ಲೇ ಮತ್ತೆ ಕುಸಿತ ಉಂಟಾ ಆಗುತ್ತಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ದಾರಿ ಕಾಣದಂತಾಗಿದೆ. ಮೂಡಿಗೆರೆಯ ಕೊಟ್ಟಿಗೆಹಾರ, ದುರ್ಗದಹಳ್ಳಿ, ಮಲೆಮನೆ, ಹಿರೇಬೈಲು, ಜಾವಳಿ, ಬಣಕಲ್ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

  • ವಾರದ ಬಳಿಕ ಸಿಕ್ಕ ಮಾಲೀಕ- ಒಂದೇ ಸಮನೆ ಶ್ವಾನ ರೋಧನೆ

    ವಾರದ ಬಳಿಕ ಸಿಕ್ಕ ಮಾಲೀಕ- ಒಂದೇ ಸಮನೆ ಶ್ವಾನ ರೋಧನೆ

    – ಕಣ್ಣೀರು ಹಾಕುತ್ತಲೇ ಬಿಟ್ಟೋದ್ರು
    – ಗಾಯವಾದ್ರೂ ಕುಂಟುತ್ತಾ ಹಿಂಬಾಲಿಸಿದ ಶ್ವಾನ

    ಬೆಳಗಾವಿ: ಪ್ರವಾಹದ ಅಬ್ಬರಕ್ಕೆ ಮಾಲೀಕನನ್ನು ಕಳೆದುಕೊಂಡು ಅಲೆದಾಡುತ್ತಿದ್ದ ಶ್ವಾನಕ್ಕೆ ಒಂದು ವಾರದ ಬಳಿಕ ಮಾಲೀಕ ಸಿಕ್ಕಿದ್ದಾರೆ. ಒಂದೆಡೆ ಪ್ರವಾಹದ ಭೀತಿ, ಇನ್ನೊಂದೆಡೆ ಮಾಲೀಕ ಸಿಕ್ಕ ಖುಷಿಗೆ ಶ್ವಾನ ಸುಮಾರು ಅರ್ಧ ಗಂಟೆ ಒಂದೇ ಸಮನೆ ರೋಧಿಸಿ, ಮಾಲೀಕನ ಮಡಿಲಲ್ಲಿ ಹೊರಳಾಡಿ ನೋವು ವ್ಯಕ್ತಪಡಿಸಿದ ಮನಕಲಕುವ ಘಟನೆ ಗೋಕಾಕ್‍ನಲ್ಲಿ ನಡೆದಿದೆ.

    ಪ್ರವಾಹದ ಬಳಿಕ ಸಾಕು ನಾಯಿ ತನ್ನ ಮಾಲೀಕನನ್ನು ಕಂಡು ಖುಷಿ ವ್ಯಕ್ತಪಡಿಸಿದೆ. ಆದರೆ ರಸ್ತೆಯಲ್ಲಿ ಮುಳುಗುವಷ್ಟು ನೀರಿದ್ದ ಕಾರಣ ಮಾಲೀಕ ಬೇಸರದಿಂದಲೇ ಶ್ವಾನವನ್ನು ಕರೆದುಕೊಂಡು ಹೋಗಲಾಗದೇ ಮತ್ತೆ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

    ನಾಯಿ ಪ್ರವಾಹದಲ್ಲಿ ಸಿಲುಕಿದ್ದರಿಂದ ಕಾಲಿಗೆ ಗಾಯವಾಗಿದೆ. ಹೀಗಿದ್ದರೂ ತನ್ನನ್ನು ಕರೆದುಕೊಂಡು ಹೋಗುತ್ತಿಲ್ಲ ಎಂದು ಒಂಟಿ ಕಾಲಲ್ಲಿ ಕುಂಟುತ್ತಾ ಆಳದ ನೀರಿನಲ್ಲಿ ರೋಧಿಸಿ ತನ್ನ ಮಾಲೀಕನ ಹಿಂದೆ ಬಿಟ್ಟು ಹೋಗಬೇಡ ಎಂಬಂತೆ ನಾಯಿ ಓಡುತ್ತಾ ಹೋಗುವ ದೃಶ್ಯ ಎಂತವರನ್ನೂ ಕಣ್ಣೀರು ತರಿಸುವಂತಿತ್ತು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಲೀಕ, ನಾಯಿಗೆ ತನ್ನ ಮನೆ ಸಿಗುತ್ತಿಲ್ಲ. ಪ್ರವಾಹಕ್ಕೆ ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ನಾವು ಬೋಟ್‍ನಲ್ಲಿ ಹೇಗೋ ಹೋಗುತ್ತೇವೆ. ಆದರೆ ನಾಯಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಮನೆ ಕೊಚ್ಚಿ ಹೋಗುವಂತಾಗಿದ್ದು, ನಮಗೆ ಭಯ ಶುರುವಾಗಿದೆ. ನಾಯಿಗೆ ಎಲ್ಲಿಯೂ ಹೋಗಿ ಅಭ್ಯಾಸ ಇಲ್ಲ. ಅಲ್ಲದೆ ಅದಕ್ಕೆ ಈಜುವುದಕ್ಕೂ ಬರಲ್ಲ. ಹೀಗಾಗಿ ನಾಯಿಯನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ.

  • ಶ್ವಾನ ಕೊಂದಿದ್ದಕ್ಕೆ ಸಿಟ್ಟು – ವಿಷ ಹಾಕಿ ಮೂರು ಚಿರತೆಗಳನ್ನು ಕೊಂದ ಮಾಲೀಕ

    ಶ್ವಾನ ಕೊಂದಿದ್ದಕ್ಕೆ ಸಿಟ್ಟು – ವಿಷ ಹಾಕಿ ಮೂರು ಚಿರತೆಗಳನ್ನು ಕೊಂದ ಮಾಲೀಕ

    ಹರಿದ್ವಾರ: ತಾನು ಪ್ರೀತಿಯಿಂದ ಸಾಕಿದ್ದ ನಾಯಿಯನ್ನು ಕೊಂದು ಹಾಕಿವೆ ಎಂಬ ಕಾರಣಕ್ಕೆ ಮಾಲೀಕ ವಿಷ ಹಾಕಿ ಮೂರು ಚಿರತೆಗಳನ್ನು ಕೊಂದಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ.

    ನಾಯಿಯ ಮಾಲೀಕನನ್ನು ಸುಖ್‍ಪಾಲ್ ಎಂದು ಗುರುತಿಸಿದ್ದು, ಆರೋಪಿಯು ನಾನು ಚಿರತೆಗಳಿಗೆ ವಿಷಪ್ರಾಶನ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ನನ್ನ ಮೂರು ನಾಯಿ ಮರಿಗಳನ್ನು ಹೊತ್ತುಕೊಂಡು ಹೋಗಿದ್ದ ಚಿರತೆ ಒಂದನ್ನು ಸಾಯಿಸಿ ಇನ್ನೆರೆಡು ಮರಿಗಳನ್ನು ತೀವ್ರವಾಗಿ ಗಾಯಗೊಳಿಸಿದ್ದವು. ಈ ಕಾರಣದಿಂದ ನಾನು ಚಿರತೆಗಳಿಗೆ ವಿಷ ಹಾಕಿದ್ದೆ ಎಂದು ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

    ಈ ಘಟನೆ ರಾಜಾಜಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದ್ದು, ಆರೋಪಿ ಸುಖ್‍ಪಾಲ್ ಕೀಟನಾಶಕವನ್ನು ಸತ್ತ ನಾಯಿಯ ಶವದ ಮೇಲೆ ಅಪಾರ ಪ್ರಮಾಣದಲ್ಲಿ ಸಿಂಪಡಿಸಿ ನಂತರ ಮೃತ ದೇಹವನ್ನು ಕಾಡಿನೊಳಗೆ ಎಸೆದಿದ್ದಾನೆ. ನಾಯಿಯ ಮಾಂಸವನ್ನು ತಿಂದ ಮೂರು ಚಿರತೆಗಳು ಸಾವನ್ನಪ್ಪಿವೆ.

    ಆಗಸ್ಟ್ 5 ರಂದು ಉದ್ಯಾನವನದ ವಿವಿಧ ಭಾಗಗಳಲ್ಲಿ ಮೂರು ಚಿರತೆಯ ಶವಗಳು ಪತ್ತೆಯಾದ ಕಾರಣ ಅಲ್ಲಿನ ಅಧಿಕಾರಿಗಳು ಚಿರತೆಗಳ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಮೂರು ಚಿರತೆಗಳು ಒಂದೇ ನಾಯಿಯ ಮಾಂಸವನ್ನು ಸೇವಿಸಿ ಮೃತ ಪಟ್ಟಿವೆ, ಅ ಮಾಂಸದಲ್ಲಿ ಅಪಾರ ಪ್ರಮಾಣದ ವಿಷ ಇದೆ ಎಂದು ವಿಧಿವಿಜ್ಞಾನ ತಜ್ಞರು ತಿಳಿಸಿದ್ದರು.

    ಮರಣೋತ್ತರ ಪರೀಕ್ಷೆ ಮಾಹಿತಿ ಪಡೆದ ಅಧಿಕಾರಿಗಳು ತನಿಖೆ ಮಾಡಿದಾಗ, ಅರಣ್ಯದ ನರ್ಸರಿಯಲ್ಲಿ ಬಳಸುವ ಕೀಟನಾಶಕದಿಂದ ಚಿರತೆಗಳು ಸಾವನ್ನಪಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಅಧಿಕಾರಿಗಳಿಗೆ ಸುಖ್‍ಪಾಲ್ ಚಿರತೆಗಳಿಗೆ ವಿಷ ಹಾಕಿರುವುದು ತಿಳಿದು ಬಂದಿದೆ. ಆರೋಪಿ ಸುಖ್‍ಪಾಲ್‍ನ ಹೆಂಡತಿ ಅರಣ್ಯದ ನರ್ಸರಿಯಲ್ಲಿ ಗುತ್ತಿಗೆ ಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದು, ಅವಳ ಕಡೆಯಿಂದ ಸತ್ತ ನಾಯಿಯ ದೇಹಕ್ಕೆ ಕೀಟನಾಶಕವನ್ನು ಹಾಕಿ ಚಿರತೆಗಳನ್ನು ಕೊಂದೆ ಎಂದು ಸುಖ್‍ಪಾಲ್ ಒಪ್ಪಿಕೊಂಡಿದ್ದಾನೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಅಪಾರ ಪ್ರಮಾಣದ ಕೀಟನಾಶಕವನ್ನು ನಾಯಿಯ ದೇಹದ ಮೇಲೆ ಹಾಕಿದ ಕಾರಣ ಅದನ್ನು ಸೇವಿಸಿದ ಮೂರು ಚಿರತೆ ಮರಿಗಳು ಸಾವನ್ನಪ್ಪಿವೆ. ಸುಖ್‍ಪಾಲ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ತಿಳಿಸಿದ್ದಾರೆ.

  • ಅನೈತಿಕ ಸಂಬಂಧ ಹೊಂದಿದ್ದ ಶ್ವಾನವನ್ನು ಮನೆಯಿಂದ ಹೊರಹಾಕಿದ ಮಾಲೀಕ

    ಅನೈತಿಕ ಸಂಬಂಧ ಹೊಂದಿದ್ದ ಶ್ವಾನವನ್ನು ಮನೆಯಿಂದ ಹೊರಹಾಕಿದ ಮಾಲೀಕ

    ತಿರುವನಂತಪುರಂ: ನೆರೆ ಮನೆಯ ನಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪಮೋರಿಯನ್ ನಾಯಿಯೊಂದನ್ನು ಮಾಲೀಕ ಮನೆಯಿಂದ ಹೊರಹಾಕಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

    ಹೌದು, ವಿಚಿತ್ರ ಎನಿಸಿದರು ಇದು ಸತ್ಯ. ಮನುಷ್ಯರು ಅನೈತಿಕ ಸಂಬಂಧ ಹೊಂದಿರುವುದು ಬಯಲಾದರೆ. ಅವರನ್ನು ಕುಟುಂಬಸ್ಥರು ಮನೆಯಿಂದ ಹೊರಹಾಕುವುದು, ಹಲ್ಲೆ ಮಾಡುವ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಆದ್ರೆ ಅನೈತಿಕ ಸಂಬಂಧ ಹೊಂದಿದೆ ಎಂದು ನಾಯಿಯನ್ನು ಮನೆಯಿಂದ ಹೊರಹಾಕಿರುವುದು ಇದೇ ಮೊದಲ ಪ್ರಕರಣ ಎಂದು ವರದಿಯಾಗಿದೆ.

    ಈ ನಾಯಿಗೆ ಸುಮಾರು ಮೂರು ವರ್ಷ ವಯಸ್ಸಾಗಿದ್ದು, ತಿರುವನಂತಪುರದ ಚೆಕಾಯ್ ಮಾರುಕಟ್ಟೆಯಲ್ಲಿ ಅನಾಥವಾಗಿ ಈ ನಾಯಿ ನಿಂತಿತ್ತು. ಈ ವೇಳೆ ಪೀಪಲ್ ಫಾರ್ ಎನಿಮಲ್ಸ್(ಪಿಎಫ್‍ಎ) ಸ್ವಯಂ ಸೇವಕ ಶಮೀಮ್ ಅವರು ನಾಯಿಯನ್ನು ಕಂಡು ಅದರ ಬಳಿ ಹೋಗಿ ನೋಡಿದಾಗ, ಅದರ ಕೊರಳಿಗೆ ಒಂದು ಚೀಟಿಯನ್ನು ಕಟ್ಟಲಾಗಿತ್ತು. ಅದನ್ನು ತೆರೆದು ನೋಡಿದಾಗ ನಾಯಿ ಬಗ್ಗೆ ಶಮೀಮ್ ಅವರಿಗೆ ತಿಳಿದಿದೆ.

    ಚೀಟಿಯಲ್ಲಿ ಏನಿದೆ?
    ಇದು ಆತ್ಯುತ್ತಮ ತಳಿಯ ನಾಯಿ, ಒಳ್ಳೆ ನಡವಳಿಕೆ ಹೊಂದಿದೆ. ಇದಕ್ಕೆ ಯಾವುದೇ ಕಾಯಿಲೆಗಳಿಲ್ಲ. ಇದಕ್ಕೆ ಸಾಮಾನ್ಯವಾಗಿ ಐದು ದಿನಗಳಿಗೆ ಒಮ್ಮೆ ಸ್ನಾನ ಮಾಡಿಸಲಾಗುತಿತ್ತು. ಇದು ಕೇವಲ ಬೊಗಳುತ್ತದೆ, ಕಚ್ಚುವುದಿಲ್ಲ. ಮೂರು ವರ್ಷದಲ್ಲಿ ಯಾರನ್ನೂ ಕಡಿದಿಲ್ಲ. ಹಾಲು, ಬಿಸ್ಕೆಟ್ ಮತ್ತು ಮೊಟ್ಟೆಯನ್ನು ಹೆಚ್ಚು ತಿನ್ನಲು ಇಷ್ಟ ಪಡುತ್ತದೆ. ನೆರೆಮನೆಯ ನಾಯಿ ಜೊತೆಗೆ ಇದು ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ತಿಳಿದಿದ್ದಕ್ಕೆ ಇದನ್ನು ಮನೆಯಿಂದ ಹೊರ ಹಾಕಲಾಗಿದೆ ಎಂದು ಬರೆಯಲಾಗಿದೆ.

    https://www.facebook.com/sreedevi.s.kartha/posts/10156939196634300

    ಅಲ್ಲದೆ ಈ ಬಗ್ಗೆ ತಿಳಿದ ಬಳಿಕ, ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಶ್ರೀದೇವಿ ಎಸ್. ಕರ್ಥ ಅವರು ಪೊಮೇರಿಯನ್ ನಾಯಿಯ ಫೋಟೋ ಹಾಗೂ ಅದರ ಕೊರಳಿನಲ್ಲಿದ್ದ ಚೀಟಿಯ ಫೋಟೋವನ್ನು ತಮ್ಮ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಪ್ರಾಣಿಪ್ರಿಯರು ನಾಯಿಯ ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.