Tag: overload

  • ಸಂಚಾರಿ ನಿಯಮ ಉಲ್ಲಂಘನೆ – 2 ಲಕ್ಷ ದಂಡ ಕಟ್ಟಿದ ಟ್ರಕ್ ಮಾಲೀಕ

    ಸಂಚಾರಿ ನಿಯಮ ಉಲ್ಲಂಘನೆ – 2 ಲಕ್ಷ ದಂಡ ಕಟ್ಟಿದ ಟ್ರಕ್ ಮಾಲೀಕ

    ನವದೆಹಲಿ: ಲಾರಿಯಲ್ಲಿ ಓವರ್ ಲೋಡ್ ಹಾಕಿದ್ದಕ್ಕೆ ದೆಹಲಿಯ ಸಂಚಾರಿ ಪೊಲೀಸರು ಲಾರಿ ಚಾಲಕನಿಗೆ ಬರೋಬ್ಬರಿ 2,00,500 ರೂ ದಂಡ ಹಾಕಿರುವ ಘಟನೆ ಮುಕರ್ಬಾ ಚೌಕ್‍ನಲ್ಲಿ ನಡೆದಿದೆ.

    ದುಬಾರಿ ದಂಡವನ್ನು ಹಾಕಿಸಿಕೊಂಡ ಟ್ರಕ್ ಚಾಲಕನನ್ನು ರಾಮ್ ಕಿಶನ್ ಎಂದು ಗುರುತಿಸಲಾಗಿದೆ. ಹೊಸ ತಿದ್ದುಪಡಿ ನಿಯಮದ ಪ್ರಕಾರ ಓವರ್ ಲೋಡ್ ಸಾಗಿಸುವ ಲಾರಿಗಳಿಗೆ ಇದ್ದ ದಂಡವನ್ನು 2,000 ರೂ.ಗಳಿಂದ 20,000 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಹೆಚ್ಚುವರಿ ತೂಕದ ಶುಲ್ಕವನ್ನು ಪ್ರತಿ ಟನ್‍ಗೆ 1,000 ರೂ.ಗಳಿಂದ 2,000 ಟನ್‍ಗೆ ಹೆಚ್ಚಿಸಲಾಗಿದೆ.

    ಲಾರಿಯಲ್ಲಿ ಓವರ್ ಲೋಡಿಂಗ್ ಹಾಕಿದ್ದಕ್ಕೆ ಟ್ರಕ್ ಚಾಲಕ ರಾಮ್ ಕಿಶನ್‍ಗೆ 56,000 ರೂ. ಮತ್ತು ಈ ಹಿಂದೆ ಇತರ ಸಂಚಾರಿ ನಿಯಮ ಉಲ್ಲಂಘನೆಗಾಗಿ 70,000 ರೂ. ದಂಡ ವಿಧಿಸಲಾಗಿದೆ. ಇದರ ಜೊತೆಗೆ ವಿವಿಧ ಉಲ್ಲಂಘನೆಗಳಿಗಾಗಿ ಟ್ರಕ್‍ನ ಮಾಲೀಕರಿಗೆ 74,500 ರೂ.ಗಳ ದಂಡ ವಿಧಿಸಲಾಗಿದ್ದು, ಒಟ್ಟು 2,00,500 ರೂ. ಮೊತ್ತವನ್ನು ಟ್ರಕ್‍ನ ಮಾಲೀಕರು ಈಗ ಪಾವತಿಸಿದ್ದಾರೆ.

    ಈ ಹಿಂದೆ ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆಯಡಿ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನದ ವ್ಯಕ್ತಿಯೊಬ್ಬನಿಗೆ 1.41 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದಕ್ಕೂ ಮೊದಲು ಸೆಪ್ಟೆಂಬರ್ 3 ರಂದು ಹಲವಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಡಿಶಾದ ಸಂಬಲ್ಪುರ ಜಿಲ್ಲೆಯ ಟ್ರಕ್ ಚಾಲಕನಿಗೆ 86,500 ರೂ. ದಂಡ ವಿಧಿಸಲಾಗಿತ್ತು.