Tag: Over Throw

  • ಓವರ್ ಥ್ರೋಗೆ 6 ರನ್ ನೀಡಿದ್ದು ತಪ್ಪು – ಮಾಜಿ ಅಂಪೈರ್ ಸೈಮನ್ ಟಫೆಲ್

    ಓವರ್ ಥ್ರೋಗೆ 6 ರನ್ ನೀಡಿದ್ದು ತಪ್ಪು – ಮಾಜಿ ಅಂಪೈರ್ ಸೈಮನ್ ಟಫೆಲ್

    ಲಂಡನ್: 2019ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡದ ಮೊದಲ ಕಪ್ ಗೆದ್ದು ಸಂಭ್ರಮಿಸಿದೆ. ಆದರೆ ಪಂದ್ಯದಲ್ಲಿ ಓವರ್ ಥ್ರೋಗೆ 6 ರನ್ ನೀಡಿದ ಅಂಪೈರ್‍ಗಳ ನಿರ್ಣಯ ತಪ್ಪು ಎಂದು ಖ್ಯಾತ ಮಾಜಿ ಅಂಪೈರ್ ಸೈಮನ್ ಟಫೆಲ್ ತಿಳಿಸಿದ್ದಾರೆ.

    ಫೈನಲ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್ ಗಳು ಓವರ್ ಥ್ರೋ ಕಾರಣಕ್ಕೆ 6 ರನ್ ನೀಡಿದ್ದು ತಪ್ಪು. ನಿಯಮಗಳ ಅನ್ವಯ ಅಲ್ಲಿ 5 ರನ್ ಮಾತ್ರ ನೀಡಬೇಕಿತ್ತು ಎಂದು ಹೇಳಿದ್ದಾರೆ.

    ವಿಶ್ವಕಪ್ ಪಂದ್ಯ ಟೈನಲ್ಲಿ ಅಂತ್ಯಗೊಂಡ ಬಳಿಕ ಅಂಪೈರ್ ಓವರ್ ಥ್ರೋಗೆ 6 ರನ್ ನೀಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಫಾಕ್ಸ್ ಸ್ಫೋಟ್ರ್ಸ್ ಪ್ರತಿಕ್ರಿಯೆ ನೀಡಿದ ಟಫೆಲ್, ಇದರಲ್ಲಿ ತಪ್ಪು ಸ್ಪಷ್ಟವಾಗಿದೆ. 6 ರನ್ ನೀಡುವಂತಿಲ್ಲ. 5 ರನ್ ಮಾತ್ರ ನೀಡಬೇಕಿತ್ತು ಎಂದು ಹೇಳಿದ್ದಾರೆ.

    ಸೈಮನ್ ಟಫೆಲ್ 5 ಬಾರಿ ಐಸಿಸಿ ನೀಡುವ ಶ್ರೇಷ್ಠ ಅಂಪೈರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ವಿಶ್ವದೆಲ್ಲೆಡೆ ಉತ್ತಮ ಅಂಪೈರ್ ಎನ್ನುವ ಹೆಸರನ್ನು ಸಂಪಾದಿಸಿದ್ದಾರೆ.

    242 ರನ್ ಬೆನ್ನತ್ತಿದ್ದ ಇಂಗ್ಲೆಂಡ್‍ಗೆ ಕೊನೆಯ 3 ಎಸೆತಗಳಿಗೆ 9 ರನ್ ಗಳಿಸುವ ಅನಿವಾರ್ಯತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಸ್ಟೋಕ್ಸ್ ಬ್ಯಾಟಿಗೆ ತಾಗಿದ್ದ ಚೆಂಡು ಬೌಂಡರಿ ಗೆರೆದಾಡಿತ್ತು. ಆದರೆ ಈ ಸಂದರ್ಭದಲ್ಲಿ ಸ್ಟೋಕ್ಸ್ 2ನೇ ರನ್ ಕದಿಯುವ ಪ್ರಯತ್ನದಲ್ಲಿದ್ದರು. ಆದರೆ 2ನೇ ರನ್ ಪೂರ್ಣವಾಗದೇ ಇರುವುದು ರಿಪ್ಲೇ ನಲ್ಲಿ ಸ್ಪಷ್ಟವಾಗಿತ್ತು.

    ಇಂಗ್ಲೆಂಡಿಗೆ 50ನೇ ಓವರಿನಲ್ಲಿ 15 ರನ್ ಬೇಕಿತ್ತು. ಬೌಲ್ಟ್ ಎಸೆದ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಬಾರದೇ ಇದ್ದರೆ ಮೂರನೇ ಎಸೆತವನ್ನು ಬೆನ್ ಸ್ಟೋಕ್ಸ್ ಸಿಕ್ಸರಿಗೆ ಅಟ್ಟಿದ್ದರು. ನಾಲ್ಕನೇ ಎಸೆತದಲ್ಲಿ ಒಂದು ರನ್ ಓಡಿ ಎರಡನೇ ರನ್ ಕದಿಯುವ ವೇಳೆ ಗುಪ್ಟಿಲ್ ಎಸೆದ ಚೆಂಡು ಬೆನ್ ಸ್ಟೋಕ್ಸ್ ಬ್ಯಾಟಿಗೆ ತಗಲಿ, ಕೀಪರ್ ಹಿಂದುಗಡೆ ಸಾಗಿ ಬೌಂಡರಿ ಗೆರೆಯನ್ನು ತಲುಪಿತು. ಎರಡು ರನ್ ಜೊತೆಗೆ ಇತರೇ ರೂಪದಲ್ಲಿ 4 ರನ್ ಬಂತು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಗಳಿಸಬೇಕಿತ್ತು. ಸ್ಟ್ರೈಕ್ ನಲ್ಲಿದ್ದ ಬೆನ್ ಸ್ಟೋಕ್ಸ್ ಎರಡು ರನ್ ಕದಿಯಲು ಯತ್ನಿಸಿದಾಗ ನಾನ್ ಸ್ಟ್ರೈಕ್ ನಲ್ಲಿದ್ದ ಅದಿಲ್ ರಶೀದ್ ರನೌಟ್ ಆದರು. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ಎಸೆತದಲ್ಲಿ ಒಂದು ರನ್ ಕಸಿದು ಎರಡನೇ ರನ್ ಓಡಲು ಯತ್ನಿಸಿದಾಗ ಮಾಕ್ ವುಡ್ ರನೌಟ್ ಆದರು. ಈ ಮೂಲಕ ಪಂದ್ಯ ಟೈ ಆಗಿ ಫಲಿತಾಂಶಕ್ಕೆ ಮೊದಲ ಬಾರಿಗೆ ಸೂಪರ್ ಓವರ್ ಮೊರೆ ಹೋಗಲಾಯಿತು.

    ಕಾನೂನು ಏನು ಹೇಳುತ್ತೆ?
    ಓವರ್ ಥ್ರೋಗೆ ಸಂಬಂಧಿಸಿದ ಐಸಿಸಿಯ 19.8 ಕಾನೂನು ಪ್ರಕಾರ ಫೀಲ್ಡರ್ ಎಸೆದ ಬಾಲ್ ಓವರ್ ಥ್ರೋ ಆದರೆ ಅಥವಾ ಉದ್ದೇಶಪೂರ್ವಕವಾಗಿ ಎಸೆದ ಬಾಲ್ ಬೌಂಡರಿ ಗೆರೆಗೆ ಹೋದರೆ ಎದುರಾಳಿ ತಂಡಕ್ಕೆ 4 ರನ್ ನೀಡುವುದರ ಜೊತೆಗೆ,  ಫೀಲ್ಡರ್ ಚೆಂಡು ಎಸೆಯುವ ವೇಳೆ ಇಬ್ಬರು ಬ್ಯಾಟ್ಸ್ ಮನ್ ಗಳು ಪಿಚ್ ಮಧ್ಯದಲ್ಲಿ ಒಬ್ಬರನ್ನೊಬ್ಬರು ದಾಟಿರಬೇಕು.

    ಅಭಿಮಾನಿಗಳ ವಾದ ಏನು?
    ಗುಪ್ಟಿಲ್ ಎಸೆದ ಬಾಲ್ ಬೆನ್ ಸ್ಟೋಕ್ಸ್ ಬ್ಯಾಟಿಗೆ ತಗಲಿ ಬೌಂಡರಿಗೆ ಹೋಗಿದೆ. ಗುಪ್ಟಿಲ್ ಚೆಂಡನ್ನು ಎಸೆಯುವ ವೇಳೆ ಸ್ಟೋಕ್ಸ್ ಹಾಗೂ ಆದಿಲ್ ರಶೀದ್ ಒಬ್ಬರನ್ನೊಬ್ಬರನ್ನು ದಾಟಿರಲಿಲ್ಲದ. ಎರಡನೇ ರನ್ ಕದಿಯುತ್ತಿದ್ದಾಗ ಕ್ರೀಸ್ ತಲುಪವ ಮೊದಲೇ ಸ್ಟೋಕ್ಸ್ ಬ್ಯಾಟಿಗೆ ಸಿಕ್ಕಿ ಬಾಲ್ ಬೌಂಡರಿಗೆ ತಲುಪಿದೆ. ಹೀಗಾಗಿ ಎರಡನೇಯ ರನ್ ಪರಿಗಣಿಸಬಾರದು. ಆದರೆ ಬೌಂಡರಿ ಜೊತೆಗೆ 2 ರನ್ ನೀಡಿದ ಪರಿಣಾಮ ಪಂದ್ಯ ಟೈ ಆಗಿದೆ. 5 ರನ್ ಮಾತ್ರ ನೀಡಿದ್ದರೆ ನ್ಯೂಜಿಲೆಂಡ್ ಜಯಗಳಿಸುತಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ವಾದಿಸುತ್ತಿದ್ದಾರೆ.

    https://twitter.com/bilbo44/status/1150657979718352897

    ಸೂಪರ್ ಓವರಿನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಹೊಡೆಯಿತು. ನ್ಯೂಜಿಲೆಂಡ್ ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಎರಡು ರನ್ ಕದಿಯಲು ಮುಂದಾಗಿದ್ದ ಗುಪ್ಟಿಲ್ ರನ್ ಔಟ್ ಆದರು. ಟ್ರೆಂಟ್ ಬೌಲ್ಟ್ ಎಸೆದ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ಒಂದೊಂದು ಬೌಂಡರಿ ಹೊಡೆದಿದ್ದರು. ಜೋಫ್ರಾ ಅರ್ಚರ್ ಎಸೆದ ಓವರ್ ನಲ್ಲಿ ನಿಶಮ್ ಒಂದು ಸಿಕ್ಸರ್ ಹೊಡೆದರೆ ಯಾವುದೇ ಬೌಂಡರಿ ಬಂದಿರಲಿಲ್ಲ. ಎರಡು ತಂಡಗಳ ರನ್ ಸಮವಾಗಿದ್ದರೂ ಒಟ್ಟು 24 ಬೌಂಡರಿ ಸಿಡಿದ ಪರಿಣಾಮ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನ್ಯೂಜಿಲೆಂಡ್ 17 ಬೌಂಡರಿ ಹೊಡೆದಿತ್ತು.