Tag: Outflow

  • ಬಸವಸಾಗರ ಜಲಾಶಯದಿಂದ 1.75 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಗ್ರಾಮಸ್ಥರಿಗೆ ಎಚ್ಚರಿಕೆ

    ಬಸವಸಾಗರ ಜಲಾಶಯದಿಂದ 1.75 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಗ್ರಾಮಸ್ಥರಿಗೆ ಎಚ್ಚರಿಕೆ

    ಯಾದಗಿರಿ: ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಬರೋಬ್ಬರಿ 1,75,916 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನಾಳೆ ಬೆಳಗ್ಗೆ ವೇಳೆಗೆ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ನೀಡಿದೆ.

    ನೀರಿನ ಪ್ರಮಾಣ 2 ಲಕ್ಷ ಕ್ಯೂಸೆಕ್ ತಲುಪಿದರೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗಲಿದೆ. ಜಿಲ್ಲೆಯ ಶಳಗ್ಗಿ, ದೇವಾಪುರ, ಯಕ್ಷಚಿಂತಿ, ಗೌಡೂರು ಮತ್ತು ಕೊಳ್ಳೂರು ಗ್ರಾಮಗಳು ಮತ್ತೆ ಜಲಾವೃತವಾಗುವ ಭೀತಿ ನಿರ್ಮಾಣವಾಗಿದೆ. ಕೊಳ್ಳೂರು ಬ್ರಿಡ್ಜ್ ಮುಳುಗಡೆಯ ಮಟ್ಟ ತಲುಪಿದ್ದು, ದೇವದುರ್ಗ ಮತ್ತು ಯಾದಗಿರಿಗೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಕಳೆದ ಬಾರಿಯ ಪ್ರವಾಹಕ್ಕೆ ನೀಲಕಂಠರಾಯನ ಗಡ್ಡಿ ಸೇತುವೆ ಕೊಚ್ಚಿಹೋಗಿದ್ದು, ಗ್ರಾಮಕ್ಕೆ ವಿದ್ಯುತ್ ಮತ್ತು ಬಾಹ್ಯ ಸಂಪರ್ಕ ಕಡಿತಗೊಂಡು ನಡುಗಡ್ಡೆಯಾಗಿದೆ.

    ನದಿಪಾತ್ರದ ಜಮೀನುಗಳಲ್ಲಿ ನದಿ ನೀರು ಹೊಕ್ಕು ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ. ಈಗಾಗಲೇ ಅಧಿಕಾರಿಗಳು ನದಿಪಾತ್ರದ ಗ್ರಾಮಗಳಲ್ಲಿ ಬಿಡು ಬಿಟ್ಟಿದ್ದು, ಜನರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದಷ್ಟು ಬೇಗ ಮತ್ತೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯುವ ಚಿಂತನೆಯನ್ನು ಜಿಲ್ಲಾಡಳಿತ ನಡೆಸಿದೆ.

    ನಾರಾಯಣಪುರ ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದು, ಇಂದು ಮಧ್ಯಾಹ್ನ 3 ಗಂಟೆಯ ಮಾಹಿತಿ ಪ್ರಕಾರ 17 ಗೇಟ್‍ಗಳಿಂದ 1,75,916 ಕ್ಯೂಸೆಕ್ ಹೊರಕ್ಕೆ ಬಿಡಲಾಗುತ್ತಿದೆ. ನಾರಾಯಣಪುರ ಜಲಾಶಯ ಒಳಹರಿವು 1,40,000 ಕ್ಯೂಸೆಕ್ ಇದ್ದು, ನೀರಿನ ಮಟ್ಟ 491.77 ಮೀ. ಇದೆ. ಜಲಾಶಯದ ಗರಿಷ್ಟ ಮಟ್ಟ 492.25 ಮೀ. ಆಗಿದೆ. ಗರಿಷ್ಟ ಸಂಗ್ರಹ ಸಾಮಥ್ರ್ಯ 33.315 ಟಿಎಂಸಿ ಆಗಿದ್ದು ಪ್ರಸ್ತುತ 31.28 ಟಿಎಂಸಿ ನೀರು ಸಂಗ್ರಹವಾಗಿದೆ.

  • ಕೆಆರ್‌ಎಸ್‌ ಭರ್ತಿ – 42 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಕೆಆರ್‌ಎಸ್‌ ಭರ್ತಿ – 42 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಮಂಡ್ಯ: ಕಳೆದ ನಾಲ್ಕು ದಿನದಲ್ಲಿ ದಾಖಲೆಯ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಕೆಆರ್‌ಎಸ್‌ ಜಲಾಶಯ ಮಂಗಳವಾರ ಭರ್ತಿಯಾಗಿದೆ.

    ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ಗರಿಷ್ಟ ಮಟ್ಟ 124.80 ಅಡಿ ಆಗಿದ್ದು ಈಗ 124.30 ಅಡಿ ನೀರು ಸಂಗ್ರಹಗೊಂಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಎರಡು ದಿನಗಳ ಹಿಂದೆ 2 ಲಕ್ಷ ಕ್ಯೂಸೆಕ್ ಅಧಿಕ ನೀರು ಬರುತಿತ್ತು. ಈಗ ಮಳೆ ಪ್ರಮಾಣ ತಗ್ಗಿದ್ದು, 50 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಈಗ ಒಳಹರಿವು 54,496 ಕ್ಯೂಸೆಕ್ ಇದ್ದು, 43,093 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಸದ್ಯ ಈಗ ಒಟ್ಟು 48.754 ಟಿಎಂಸಿ ನೀರು ಸಂಗ್ರಹಗೊಂಡಿದೆ.

    ಕಾವೇರಿ ಜಲಾನಯನ ಪ್ರದೇಶ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹೇಮಾವತಿ ಮತ್ತು ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತಿತ್ತು. ಪರಿಣಾಮ ಭಾನುವಾರ ಸಂಜೆ 2,05,852 ಕ್ಯುಸೆಕ್ ಇದ್ದ ಒಳ ಹರಿವಿನ ಪ್ರಮಾಣ ಸೋಮವಾರ ಬೆಳಗ್ಗೆ 2.04 ಲಕ್ಷ ಕ್ಯುಸೆಕ್ ಇತ್ತು.

    ಸೋಮವಾರ ಬೆಳಗ್ಗೆ 122.40 ಅಡಿ ಇದ್ದ ನೀರಿನ ಮಟ್ಟವು ಹೊರ ಹರಿವಿನಿಂದ ಹೆಚ್ಚಳದಿಂದಾಗಿ ಸಂಜೆ ವೇಳೆಗೆ 121.80 ಅಡಿಗೆ ಇಳಿದಿತ್ತು. ಸೋಮವಾರ ಬೆಳಿಗ್ಗೆಯಿಂದ 1.64 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ನಂತರ ಒಳ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಹೊರ ಹರಿವನ್ನು 50 ಸಾವಿರಕ್ಕೆ ಇಳಿಸಲಾಗಿತ್ತು. ಇದೀಗ ಒಳ ಹರಿವಿಗೆ ತಕ್ಕಂತೆ ಹೊರ ಹರಿವನ್ನು ತಗ್ಗಿಸಿದ್ದು 43,093 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.

    2012 ರಿಂದ 2017ರವರೆಗೆ ಬರ ಬಂದಿದ್ದರಿಂದ ಜಲಾಶಯ ಭರ್ತಿಯಾಗಿರಲಿಲ್ಲ. ಕಳೆದ ವರ್ಷ ಜುಲೈ 15 ರಂದು ಕೆಆರ್‌ಎಸ್‌ ಭರ್ತಿಯಾಗಿತ್ತು. ಈ ಮೂಲಕ ದಶಕದ ಬಳಿಕ ಕೆಆರ್‌ಎಸ್‌ ಅವಧಿಗೂ ಮುನ್ನವೇ ಭರ್ತಿಯಾಗಿತ್ತು. ಈ ಹಿಂದೆ 2007ರಲ್ಲಿ ಕೆಆರ್‌ಎಸ್‌ ಜುಲೈ ತಿಂಗಳಿನಲ್ಲಿ ಭರ್ತಿಯಾಗಿತ್ತು.