Tag: Outer State

  • ಹೊರರಾಜ್ಯದಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರಕ್ಕೆ: ಹಾಸನ ಡಿಸಿ ಸೂಚನೆ

    ಹೊರರಾಜ್ಯದಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರಕ್ಕೆ: ಹಾಸನ ಡಿಸಿ ಸೂಚನೆ

    – ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿ ಬಿಡುಗಡೆ

    ಹಾಸನ: ಹಾಸನಕ್ಕೆ ಮುಂಬೈನಿಂದ ಬರಲು ಸಾವಿರಕ್ಕೂ ಹೆಚ್ಚು ಜನರ ಸೇವಾಸಿಂಧು ಮೂಲಕ ನೋಂದಣಿ ಮಾಡಿಕೊಂಡಿದ್ದು, ಹಾಸನದಲ್ಲಿ ಕೊರೊನಾ ಭೀತಿ ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿದೆ.

    ಗ್ರೀನ್‍ಜೋನ್ ಆಗಿದ್ದ ಹಾಸನದಲ್ಲಿ ನಿನ್ನೆ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರಿಗೆ ಮತ್ತು ಇಂದು ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಹಾಸನದಲ್ಲಿ ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಸೋಂಕಿತರೆಲ್ಲರೂ ಬಾಂಬೆಯಿಂದ ವಾಪಸ್ಸಾದವರೇ ಆಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಮುಂಬೈನಿಂದ ಹಾಸನಕ್ಕೆ ಬರುವವರು ಸಾಧ್ಯವಾದಷ್ಟು ಇದ್ದಲ್ಲೇ ಇರಲು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಮನವಿ ಮಾಡಿದ್ದಾರೆ. ಒಂದು ವೇಳೆ ಹೊರರಾಜ್ಯದಿಂದ ಹಾಸನಕ್ಕೆ ಬಂದರೆ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರಲು ಸೂಚನೆ ನೀಡಿದ್ದಾರೆ. ಇಂದು ಪಾಸಿಟಿವ್ ಕಂಡುಬಂದ ನಾಲ್ವರ ಟ್ರಾವೆಲ್ ಹಿಸ್ಟರಿ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ, ನಾಲ್ವರೂ ಒಂದೇ ಕುಟುಂಬದವರಾಗಿದ್ದು, ಗಂಡ ಹೆಂಡತಿ ಇಬ್ಬರು ಮಕ್ಕಳಾಗಿದ್ದಾರೆ ಎಂದಿದ್ದಾರೆ.

    ಸೋಂಕಿತರು ನಿನ್ನೆ ಮೇ 12 ರಂದು ಮುಂಬೈನಿಂದ ಸ್ವಂತ ಕಾರಿನಲ್ಲಿ ಹಾಸನಕ್ಕೆ ಬಂದಿದ್ದಾರೆ. ಈ ಕುಟುಂಬ ಎಲ್ಲೂ ಸುತ್ತಾಡದೆ ನೇರವಾಗಿ ಜಿಲ್ಲಾಡಳಿತ ಮಾಡಿರುವ ಕ್ವಾರಂಟೈನ್ ಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪಾಸಿಟಿವ್ ಬಂದಿರುವವರ ಜೊತೆ ಕ್ವಾರಂಟೈನ್ ಕೇಂದ್ರದಲ್ಲಿದ್ದ 57 ಮಂದಿಯನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಅವರಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾಗಿ ತಿಳಿಸಿದ್ದಾರೆ.

  • ಹೊರ ರಾಜ್ಯದಿಂದ ಬೆಂಗ್ಳೂರಿಗೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್ ಫಿಕ್ಸ್

    ಹೊರ ರಾಜ್ಯದಿಂದ ಬೆಂಗ್ಳೂರಿಗೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್ ಫಿಕ್ಸ್

    ಬೆಂಗಳೂರು: ಹೊರರಾಜ್ಯಗಳಿಂದ ಬೆಂಗಳೂರಿಗೆ ಸಾಕಷ್ಟು ಮಂದಿ ಬರುತ್ತಿರುವ ಹಿನ್ನೆಲೆ ಅವರಿಂದ ನಗರದಲ್ಲಿ ಕೊರೊನಾ ಸೋಂಕು ಹರಡಬಾರದು ಎಂದು ಬೆಂಗಳೂರು ಜಿಲ್ಲಾಡಳಿತ ಹೊಸ ಪ್ಲಾನ್ ಮಾಡಿದೆ.

    ಹೊರ ರಾಜ್ಯದಿಂದ ಸಿಲಿಕಾನ್ ಸಿಟಿಗೆ ಬರುವವರಿಗೆ ಕಡ್ಡಾಯವಾಗಿ ಕೈಗೆ ಸ್ಟಾಂಪಿಂಗ್ ಮಾಡಲಾಗುತ್ತದೆ. ಅವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರಲೇಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

    ಹೊರ ರಾಜ್ಯದವರಿಂದ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಬೇರೆ ರಾಜ್ಯದಿಂದ ಬಂದವರ ಕೈಗೆ ಸ್ಟಾಂಪಿಂಗ್ ಹಾಕಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ, 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಸೂಚಿಸಲಾಗುತ್ತದೆ. ಬೈಕು, ಕಾರು ಯಾವುದೇ ಖಾಸಗಿ ವಾಹನದಲ್ಲೂ ಬಂದರೂ ಸೀಲ್ ಫಿಕ್ಸ್, ಕ್ವಾರಂಟೈನ್ ಕಡ್ಡಾಯ ಎಂದು ಬೆಂಗಳೂರು ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಷರತ್ತು ಪಾಲಿಸಿ: ಲಾಕ್‍ಡೌನ್ ಘೋಷಣೆಗೂ ಮುನ್ನ ನೆರೆ ರಾಜ್ಯಕ್ಕೆ ಹೋಗಿರುವ ಕನ್ನಡಿಗರು ಪಾಸ್ ಪಡೆಯುವ ಮೂಲಕ ಮರಳಿ ಕರ್ನಾಟಕಕ್ಕೆ ಬರಬಹುದಾಗಿದೆ. ರಾಜ್ಯಕ್ಕೆ ಬರುವ ಕನ್ನಡಿಗರು ಸೇವಾ ಸಿಂಧು ವೆಬ್‍ಸೈಟ್‍ಗೆ ತೆರಳಿ ವಿವರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ವಿವರಗಳು ಸರಿಯಾಗಿದ್ದರೆ ಇ ಪಾಸ್ ಡೌನ್‍ಲೋಡ್ ಮಾಡಬಹುದು.

    ಇ ಪಾಸ್ ಸಿಕ್ಕಿದ ದಿನದಿಂದ ಒಂದು ವಾರದ ವರೆಗೆ ಮಾತ್ರ ಈ ಪಾಸ್ ಉರ್ಜಿತದಲ್ಲಿರುತ್ತದೆ. ಸ್ವಂತ ವಾಹನ, ಬಾಡಿಗೆ ವಾಹನ ಅಥವಾ ಬಸ್ ಇವುಗಳ ಮೂಲಕ ಬರಬಹುದು. ವಾಹನದಲ್ಲಿ ಬರಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಬೇಕು. ಒಂದು ಕಾರಿನಲ್ಲಿ ಗರಿಷ್ಟ 3 ಮಂದಿ, ಎಸ್‍ಯುವಿ ವಾಹನದಲ್ಲಿ 5, ವ್ಯಾನ್ ನಲ್ಲಿ 10 ಮಂದಿ, ಬಸ್ ನಲ್ಲಿ ಗರಿಷ್ಟ 25 ಮಂದಿ ಪ್ರಯಾಣಿಸಬಹುದು. ಯಾವ ಚೆಕ್ ಪೋಸ್ಟ್ ಮೂಲಕ ಅನುಮತಿ ನೀಡಲಾಗಿದೆಯೋ ಆ ಚೆಕ್ ಪೋಸ್ಟ್ ಮೂಲಕ ಮಾತ್ರ ಪ್ರವೇಶ ನೀಡಲಾಗುತ್ತದೆ.

    ವೆಬ್‍ಸೈಟಿಗ್ ಭೇಟಿ ನೀಡಲು ಕ್ಲಿಕ್ ಮಾಡಿ: www.sevasindhu.karnataka.gov.in/