Tag: oscar fernandes

  • ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ

    ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ

    ಉಡುಪಿ: ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸಿದ್ದರು. ಹಿಂದೊಮ್ಮೆ ನಮ್ಮ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದರು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ರಾಜಕೀಯ ಬಾಂಬ್ ಹಾಕಿದ್ದಾರೆ.

    BASAVARAJ BOMMAI

    ಉಡುಪಿಯ ಪೆರ್ಡೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹಳೆಯ ಕಥೆಯನ್ನು ಬಿಚ್ಚಿಟ್ಟ ಸೊರಕೆ, ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್‌ -ಸಂಘಪರಿವಾರದ ಜನ ಅಲ್ಲ. ಬಿಜೆಪಿಯವರಿಗೆ ಬೊಮ್ಮಾಯಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಂಡಿರುವುದು ಸಹಿಸಲಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಪರೇಷನ್ ಕಾಂಗ್ರೆಸ್ ಸದ್ದಿಲ್ಲದೆ ನಡೆಯುತ್ತದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಚುನಾವಣೆ ಸಂದರ್ಭ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎಂದು ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯ ಕೆಲ ಶಾಸಕರು ಅತಂತ್ರದಲ್ಲಿ ಇದ್ದಾರೆ. ಈ ಹಿಂದೆ ಬೊಮ್ಮಾಯಿ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಎಂದರು. ಇದನ್ನೂ ಓದಿ: ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ, ಬೆಲೆ ಸತತವಾಗಿ ಹೆಚ್ಚಳವಾಗಿದೆ: ಬೊಮ್ಮಾಯಿ

    ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್‌ ಸಂಘಪರಿವಾರದ ಜನ ಅಲ್ಲ. ಬೊಮ್ಮಾಯಿಯವರ ತಂದೆ ಜೆಡಿಎಸ್‍ನಲ್ಲಿ ಇದ್ದವರು. ಎಂ.ಪಿ ಪ್ರಕಾಶ್ ಕಾಂಗ್ರೆಸ್ ಸೇರುವಾಗ ಬೊಮ್ಮಾಯಿ ಕೂಡ ನಮ್ಮನ್ನು ಸಂಪರ್ಕ ಮಾಡಿದ್ದರು. ಬೊಮ್ಮಾಯಿ ಜಾತ್ಯಾತೀತ ನಿಲುವು ಇರುವವರು. ಜಾತ್ಯಾತೀತ ನಿಲುವನ್ನು ಬಿಜೆಪಿಯವರು ಸಹಿಸುತ್ತಾರಾ? ಬಿಜೆಪಿಯವರಿಗೆ ಯು.ಪಿಯ ಯೋಗಿಯಂತ ಜನ ಬೇಕು. ಬೊಮ್ಮಾಯಿ ಸಿಎಂ ಆಗಿ ಎಷ್ಟು ಸಮಯ ಇರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:  ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ

  • ಇಂದು ಮಧ್ಯಾಹ್ನ ಬೆಂಗಳೂರಿಗೆ ಬರಲಿದ್ದಾರೆ ರಾಹುಲ್ ಗಾಂಧಿ

    ಇಂದು ಮಧ್ಯಾಹ್ನ ಬೆಂಗಳೂರಿಗೆ ಬರಲಿದ್ದಾರೆ ರಾಹುಲ್ ಗಾಂಧಿ

    ಬೆಂಗಳೂರು: ಇಂದು ಮಧ್ಯಾಹ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

    ಮಧ್ಯಾಹ್ನ 1:45ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಅಗಲಿದ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

    ರಿಚ್ಮಂಡ್ ಟೌನ್ ನಲ್ಲಿರುವ ರೆಸ್ಟ್ ಹೌಸ್ ಆಪಾರ್ಟ್ ಮೆಂಟ್‍ನಲ್ಲಿ ಆಸ್ಕರ್ ಫರ್ನಾಂಡಿಸ್  ಕುಟುಂಬದ ಸದಸ್ಯರನ್ನ ಭೇಟಿ ಮಾಡಿ ರಾಹುಲ್ ಗಾಂಧಿ ಸಾಂತ್ವನ ಹೇಳಲಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ, ಮಾಜಿ ಕೇಂದ್ರ ಸಚಿವ, ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರದ ಮುಂದೆ ಭಗವದ್ಗೀತೆ, ಬೈಬಲ್, ಕುರಾನ್ ಸಮಾಗಮ

    ಮಧ್ಯಾಹ್ನ 12:30ಕ್ಕೆ ಕೆಪಿಸಿಸಿ ಕಚೇರಿಯಿಂದ ಮೆರವಣಿಗೆ ಮೂಲಕ ಹೊರಟು ಶಾಂತಿ ನಗರದ ಹೊಸೂರು ರಸ್ತೆಯಲ್ಲಿರುವ ಸೆಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ಅಂತಿಮ ಪೂಜಾ ವಿಧಿಗಳು ನೆರವೇರಲಿದೆ. ಇದನ್ನೂ ಓದಿ: ಅಗಲಿದ ಕಾಂಗ್ರೆಸ್ ನಾಯಕ ಆಸ್ಕರ್‌ಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ

    3 ಗಂಟೆಗೆ ಶಾಂತಿನಗರದ ಹೊಸೂರು ರಸ್ತೆಯ ಸೆಂಟ್ ಪ್ಯಾಟ್ರಿಕ್ ಸ್ಮಶಾನದಲ್ಲಿ ಆಸ್ಕರ್ ಫರ್ನಾಂಡಿಸ್ ಅಂತ್ಯಕ್ರಿಯೆ ನೆರವೇರಲಿದೆ. ರಾಜ್ಯ ಕಾಂಗ್ರೆಸ್ ಎಲ್ಲಾ ಪ್ರಮುಖ ನಾಯಕರುಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

  • ಅಗಲಿದ ಕಾಂಗ್ರೆಸ್ ನಾಯಕ ಆಸ್ಕರ್‌ಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ

    ಅಗಲಿದ ಕಾಂಗ್ರೆಸ್ ನಾಯಕ ಆಸ್ಕರ್‌ಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ

    ಉಡುಪಿ: ಅಗಲಿದ ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್  ಫೆರ್ನಾಂಡಿಸ್ ಅವರಿಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಭಾರತೀಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಮೂಲಕ ಹೊಸ ತಲೆಮಾರಿನ ರಾಜಕೀಯ ನಾಯಕರು ಹಿರಿಯರು ಹಾಕಿದ್ದ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.

    ಚುನಾವಣೆ ಸಂದರ್ಭ ರಾಜಕೀಯ, ಚುನಾವಣೆ ನಂತರ ನಾವೆಲ್ಲರೂ ಜನಪ್ರತಿನಿಧಿಗಳು. ಎಲೆಕ್ಷನ್ ಟೈಮಲ್ಲಿ ಕೆಸರೆರಚಾಟ ಚುನಾವಣೆ ಗೆದ್ದ ಮೇಲೆ ಮಿತ್ರತ್ವ. ಉಡುಪಿಯಲ್ಲಿ ಈ ಸಂಪ್ರದಾಯ ಇನ್ನೂ ಚಾಲ್ತಿಯಲ್ಲಿದೆ. ಕಾಂಗ್ರೆಸ್ ನ ಹಿರಿಯ ನಾಯಕ ಸುದೀರ್ಘ ನಾಲ್ಕು ದಶಕಗಳ ಕಾಲ ರಾಜಕೀಯವನ್ನೇ ಜೀವನ ಮಾಡಿಕೊಂಡಿದ್ದ ಆಸ್ಕರ್ ಫೆರ್ನಾಂಡಿಸ್ ಕೊನೆಯುಸಿರೆಳೆದಿದ್ದಾರೆ. ಉಡುಪಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಆಸ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

    ಉಡುಪಿ ಶಾಸಕ ಕೆ. ರಘುಪತಿ ಭಟ್ ನುಡಿನಮನ ಸಲ್ಲಿಸಿ, ನಮ್ಮ ವಿರೋಧ ಪಕ್ಷದವರಾದರೂ ಆಸ್ಕರ್ ಫೆರ್ನಾಂಡಿಸ್ ಉಡುಪಿಗೆ ನೀಡಿದ ಸೇವೆ ಸ್ಮರಿಸಬೇಕಾಗಿದೆ. ಇಂಥ ಸಂಸ್ಕೃತಿ ಉಡುಪಿ ಜಿಲ್ಲೆಯಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ರಾಜಕೀಯ ಸಿದ್ಧಾಂತವನ್ನು ಬಿಡದೇ ಬೇರೆ ಪಕ್ಷದ ಹಿರಿಯರು ನಿಧನರಾದಾಗ ಅವರಿಗೆ ನಮ್ಮ ಪಕ್ಷದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದು ನಮ್ಮ ಕರ್ತವ್ಯ. ಕಾರ್ಮಿಕ ಸಂಘಟನೆಗಳಿಂದ ಬೆಳೆದ ನಾಯಕರಾದ ಆಸ್ಕರ್, ಯಾವತ್ತೂ ಹಗೆತನದ ರಾಜಕೀಯ ಮಾಡಿದವರಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮಾಡಿದಾಗಲೂ ಆಸ್ಕರ್ ಅದನ್ನು ಬೆಂಬಲಿಸಿಲ್ಲ. ಡಾ.ಆಚಾರ್ಯ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು. ಇದನ್ನೂ ಓದಿ:  BJP, RSS ನಕಲಿ ಹಿಂದುಗಳು, ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

    ಅವರೊಬ್ಬ ಮಾನವೀಯ ಗುಣವಿದ್ದ ನಾಯಕ ಎಂದು ಗುಣಗಾನ ಮಾಡಿದರು. ನನ್ನ ವೈಯಕ್ತಿಕ ಜೀವನದಲ್ಲಿ ದುರ್ಘಟನೆ ಆದಾಗ ಸಾಂತ್ವನ ಹೇಳಿದ್ದರು. ಕಾಂಗ್ರೆಸ್ ಪಕ್ಷದವರು ನನ್ನನ್ನು ಟೀಕಿಸಿದಾಗಲೂ ಮಾನವೀಯ ಗುಣ ತೋರಿದ್ದರು. ಮಾನಸಿಕ ವೇದನೆಯಲ್ಲಿದ್ದಾಗ ನನ್ನ ಬಳಿಗೇ ಬಂದು ಸಾಂತ್ವನ ಹೇಳಿ, ಸಹಾಯ ಬೇಕಾದರೆ ಕೇಳಿ ಎಂದಿದ್ದರು. ಅವರ ಸಹಾಯಕ್ಕಿಂತಲೂ ಸಾಂತ್ವನದಿಂದ ನಾನು ಹಗುರಾಗಿದ್ದೆ. ಅತ್ಯಂತ ಒಳ್ಳೆಯ ಗುಣ ಹೊಂದಿದ್ದರು. ಅದೇ ಕಾರಣಕ್ಕೆ ಬೆಂಗಳೂರಿಂದ ಬಂದು ಅಂತಿಮ ದರ್ಶನ ಪಡೆದಿದ್ದೇನೆ ಎಂದು ಭಟ್ ಹೇಳಿದರು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಶ್ರದ್ಧಾಂಜಲಿ ಅರ್ಪಿಸಿ, ವಿರೋಧಿಗಳನ್ನು ಪ್ರೀತಿಸುವ ಗುಣ ಹೊಂದಿದ್ದರು. ಹಿಂದುತ್ವದ ವಿಶ್ವಾಸ ಮತ್ತು ಗೌರವವನ್ನು ಹೊಂದಿದ್ದರು. ಪಕ್ಷ ಮತ್ತು ನಾಯಕತ್ವದ ಮೇಲಿನ ನಿಷ್ಠೆಯನ್ನು ಆಸ್ಕರ್ ಅವರಿಂದ ಕಲಿಯಬೇಕು ಎಂದು ಹೇಳಿದರು. ಇದನ್ನೂ ಓದಿ:  ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ: ಸಿದ್ದರಾಮಯ್ಯ

    ಡಾ. ವಿ.ಎಸ್. ಆಚಾರ್ಯರು ನಿಧನರಾದಾಗ ದಿಲ್ಲಿಯಲ್ಲಿದ್ದ ಆಸ್ಕರ್, ಕಾಂಗ್ರೆಸ್ ನಾಯಕರಿಗೆ ಕರೆ ಮಾಡಿ, ಕಾಂಗ್ರೆಸ್ ಭವನದಲ್ಲಿ ಡಾ. ಆಚಾರ್ಯರ ಭಾವಚಿತ್ರ ಇರಿಸಿ, ಶ್ರದ್ಧಾಂಜಲಿ ಸಲ್ಲಿಸುವಂತೆ ಸೂಚಿಸಿದ್ದರು. ಇಂದು ಆಸ್ಕರ್ ನಿಧನರಾದಾಗ ಸಚಿವ ಸುನೀಲ್ ಕುಮಾರ್ ಅವರು ಬಿಜೆಪಿ ನಾಯಕರಿಗೆ ಕರೆ ಮಾಡಿ, ಆಸ್ಕರ್ ಅವರಿಗೆ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲು ಸೂಚಿಸಿದ್ದಾರೆ.

  • ಫೆರ್ನಾಂಡಿಸ್‍ರಷ್ಟು ಸಜ್ಜನ ದೇಶದುದ್ದಗಲ ಎಲ್ಲೂ ಇಲ್ಲ- ಡಿಕೆಶಿ ಗುಣಗಾನ

    ಫೆರ್ನಾಂಡಿಸ್‍ರಷ್ಟು ಸಜ್ಜನ ದೇಶದುದ್ದಗಲ ಎಲ್ಲೂ ಇಲ್ಲ- ಡಿಕೆಶಿ ಗುಣಗಾನ

    ಉಡುಪಿ: ಆಸ್ಕರ್ ಫೆರ್ನಾಂಡಿಸ್ ರಂತಹ ಸಜ್ಜನ ರಾಜಕಾರಣಿ ದೇಶದ ಉದ್ದಗಲ ಎಲ್ಲೂ ಇಲ್ಲ. ಆಸ್ಕರ್ ಒಬ್ಬ ಅಜಾತಶತ್ರು ರಾಜಕಾರಣಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆನೆದರು.

    ಆಸ್ಕರ್ ಫೆರ್ನಾಂಡಿಸ್ ಅವರ ಅಂತಿಮ ದರ್ಶನ ಪಡೆದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಕರ್ ಅವರ ಪಕ್ಷದ ಮೇಲಿದ್ದ ಪ್ರಾಮಾಣಿಕತೆ, ನಿಷ್ಠೆ ದೇಶ ಮೆಚ್ಚುವಂತಹದ್ದು. ಪಕ್ಷ ಸದೃಢ ಆಗಿದ್ದಾಗ ಎಲ್ಲರೂ ಮುಂದೆ ಬಂದು ನಾಯಕತ್ವ ವಹಿಸುತ್ತಾರೆ. ಸಂಕಷ್ಟ ಕಾಲದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಆಸ್ಕರ್ ಕೇಂದ್ರಕ್ಕೂ ರಾಜ್ಯಕ್ಕೂ ಇದ್ದ ದೊಡ್ಡ ರಾಜಕೀಯ ಕೊಂಡಿ. ಬೆಂಗಳೂರು ಮೈಸೂರು ದಶಪಥ ರಸ್ತೆಗೆ ಆಸ್ಕರ್ ಕಾರಣ. ಅವರ ಮುತುವರ್ಜಿಯಿಂದ ಈ ಬೃಹತ್ ಯೋಜನೆ ಕಾರ್ಯರೂಪಕ್ಕೆ ಬಂದಿತು ಎಂದರು. ಇದನ್ನೂ ಓದಿ: ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರದ ಮುಂದೆ ಭಗವದ್ಗೀತೆ, ಬೈಬಲ್, ಕುರಾನ್ ಸಮಾಗಮ

    ಯುಪಿಎ ಸರ್ಕಾರದ ಅವಧಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಕರ್ ಫೆರ್ನಾಂಡಿಸ್ ಒಂದು ಯೋಜನೆಯನ್ನು ಜಾರಿಗೆ ತಂದು, ಕಾರ್ಮಿಕರ ಮಕ್ಕಳು ಎಂಬಿಬಿಎಸ್ ಓದಲು ಕಾರಣರಾದರು. ಇಂದಿಗೂ ಕೂಡ ಬಡ ಮಕ್ಕಳು ಎಂಬಿಬಿಎಸ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಆಸ್ಕರ್ ಆತ್ಮ ಸ್ವರ್ಗ ಸಾಮ್ರಾಜ್ಯ ತಲುಪಿದೆ – ಉಡುಪಿ ಬಿಷಪ್ ಪ್ರಾರ್ಥನೆ

    ಫೆರ್ನಾಂಡಿಸ್ ರ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ. ಆಸ್ಕರ್ ನಿಧನದಿಂದ ರಾಷ್ಟ್ರ ಕಾಂಗ್ರೆಸ್‍ಗೆ ನಷ್ಟ ಆಗಿದೆ. ಅಗಲಿನ ಆತ್ಮಕ್ಕೆ ಚಿರಶಾಂತಿಗಾಗಿ ಪ್ರಾರ್ಥನೆ ಮಾಡುತ್ತೇನೆ. ಆಸ್ಕರ್ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಎಂದು ಡಿಕೆಶಿ ಪ್ರಾರ್ಥನೆ ಮಾಡಿದರು.

  • ಆಸ್ಕರ್ ಆತ್ಮ ಸ್ವರ್ಗ ಸಾಮ್ರಾಜ್ಯ ತಲುಪಿದೆ – ಉಡುಪಿ ಬಿಷಪ್ ಪ್ರಾರ್ಥನೆ

    ಆಸ್ಕರ್ ಆತ್ಮ ಸ್ವರ್ಗ ಸಾಮ್ರಾಜ್ಯ ತಲುಪಿದೆ – ಉಡುಪಿ ಬಿಷಪ್ ಪ್ರಾರ್ಥನೆ

    ಉಡುಪಿ: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಮಂಗಳೂರಿನಿಂದ ಉಡುಪಿಗೆ ಆಗಮಿಸಿತು. ಉಡುಪಿ ಶೋಕ ಮಾತಾ ಇಗರ್ಜಿಗೆ ಕರೆತಂದು ಸದ್ಗತಿಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.

    ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಂತಿಮ ನಮನ ಸಲ್ಲಿಸಿದರು. ಬಳಿಕ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಬಲಿಪೂಜೆ ನೆರವೇರಿಸಿ, ಧರ್ಮಪ್ರಾಂತ್ಯದ ಪರವಾಗಿ ಅಂತಿಮ ಗೌರವ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಚರ್ಚ್ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಯಿತು. ಇದನ್ನೂ ಓದಿ:  ಮನೆಗಳ ಹಕ್ಕು ಪತ್ರ ಕೊಡಿಸಲು ಒತ್ತಾಯ – ರೈತ ಸಂಘದಿಂದ ಹಾಸನದಲ್ಲಿ ಪ್ರತಿಭಟನೆ

    ಉಡುಪಿ ಧರ್ಮ ಪ್ರಾಂತ್ಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಮಾತನಾಡಿ, ನಿಧನರಾದವರ ಹೆಸರಿನಲ್ಲಿ ನಾವು ಚರ್ಚ್ ಹಾಲ್ ನಲ್ಲಿ ಬಲಿ ಪೂಜೆಯನ್ನು ನೆರವೇರಿಸಿದ್ದೇವೆ. ಕ್ರೈಸ್ತ ಧರ್ಮದಲ್ಲಿ ಅಂತಿಮ ನಮನಕ್ಕೆ ಬಹಳ ಪ್ರಾಮುಖ್ಯತೆ ಇದೆ. ಜೀವಿತಾವಧಿಯಲ್ಲಿ ವ್ಯಕ್ತಿ ಜೀವನದಲ್ಲಿ ತಪ್ಪು ಮಾಡಿದ್ದರೆ ಅದಕ್ಕೆ ದೇವರಲ್ಲಿ ಸಾಮೂಹಿಕವಾಗಿ ಕ್ಷಮೆ ಕೋರಲಾಗುತ್ತದೆ. ಮನುಷ್ಯ ಮಾಡಿದ ನ್ಯೂನ್ಯತೆಗಳನ್ನು ನೀಗಿಸಿ ಆತ್ಮ ಪರಮಾತ್ಮನಲ್ಲಿ ಲೀನವಾಗಲಿ. ಆಸ್ಕರ್ ಗೆ ಸ್ವರ್ಗ ಸಾಮ್ರಾಜ್ಯ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಕುಟುಂಬಕ್ಕಾಗಿ ವಿಶೇಷವಾಗಿ ದೇವರಲ್ಲಿ ಪ್ರಾರ್ಥಿಸಲಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಅವರಿಗೋಸ್ಕರ ನಾವೆಲ್ಲ ಬೇಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ:  ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್- 8 ಜನರು ಅರೆಸ್ಟ್

    ಪ್ರಾರ್ಥನೆಯ ಬಳಿಕ ಬ್ರಹ್ಮಗಿರಿಯ ಆಸ್ಕರ್ ಮನೆಗೆ ಮೃತದೇಹ ಕರೆದೊಯ್ಯಲಾಯಿತು. ಮಣಿಪಾಲ ಕ್ರೈಸ್ಟ್ ಚರ್ಚ್‍ನ ಧರ್ಮಗುರು ಫೆಡ್ರಿಕ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಈ ವೇಳೆ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಸಹೋದರಿಯರಾದ ಜುಡಿತ್ ಶ್ರೇಷ್ಠ, ಸಾಲಿಯಟ್ ಮತ್ತು ಮರಿಯಟ್, ಮಕ್ಕಳು ಓಶನ್ ಮತ್ತು ಓಶಾನಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರಶೆಟ್ಟಿ, ಮಾಜಿ ಶಾಸಕ ಜೆ.ಆರ್.ಲೋಬೊ, ಐವನ್ ಡಿಸೋಜ, ಎಂ.ಎ.ಗಫೂರ್ ಮೊದಲಾದವರು ಹಾಜರಿದ್ದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿಜೆಪಿ ನಾಯಕರು ಅಂತಿಮ ದರ್ಶನ ಪಡೆದರು. ಇದನ್ನೂ ಓದಿ:  ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?

  • ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರದ ಮುಂದೆ ಭಗವದ್ಗೀತೆ, ಬೈಬಲ್, ಕುರಾನ್ ಸಮಾಗಮ

    ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರದ ಮುಂದೆ ಭಗವದ್ಗೀತೆ, ಬೈಬಲ್, ಕುರಾನ್ ಸಮಾಗಮ

    ಉಡುಪಿ: ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ವಿಧಿವಶರಾಗಿದ್ದಾರೆ. ಪಾರ್ಥಿವ ಶರೀರದ ಮುಂದೆ ಹಿಂದೂ ಕ್ರೈಸ್ತ ಮುಸಲ್ಮಾನ ಮೂರು ಧರ್ಮದ ಪವಿತ್ರ ಗ್ರಂಥಗಳು ಶ್ಲೋಕಗಳ ಪಠಣ ಮಾಡಲಾಯಿತು. ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಯಿತು.

    ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರವನ್ನು ಇರಿಸಿ ಉಡುಪಿಯ ಕಾಂಗ್ರೆಸ್ ಅಂತಿಮ ನಮನ ಸಲ್ಲಿಸಲಾಯಿತು. ಮುಸಲ್ಮಾನ ಧರ್ಮಗುರುಗಳು ಖರಾನ್ ಸಂದೇಶಗಳನ್ನು ವೇದಿಕೆಯಲ್ಲಿ ಬೋಧಿಸಿದರು. ಸಾಮಾಜಿಕ ರಾಜಕೀಯ ಚಟುವಟಿಕೆ ಮಾಡುವ ಮೂಲಕ ಎಲ್ಲಾ ವರ್ಗದವರಿಗೆ ಆಸ್ಕರ್ ಸಹಾಯ ಮಾಡಿದ್ದನ್ನು ಸ್ಮರಿಸಲಾಯಿತು. ಇದನ್ನೂ ಓದಿ: 5 ದಶಕದಿಂದ ರಾಷ್ಟ್ರ ರಾಜಧಾನಿ, ರಾಜ್ಯದ ಕಾಂಗ್ರೆಸ್ಸಿನ ಬಹುದೊಡ್ಡ ಕೊಂಡಿಯಾಗಿದ್ದ ಆಸ್ಕರ್ ಇನ್ನು ನೆನಪು ಮಾತ್ರ

    ಅಂತಿಮ ದರ್ಶನಕ್ಕೆ ಜನ ಬರುತ್ತಿದ್ದಂತೆ ಭಗವದ್ಗೀತೆಯ ಮಂತ್ರಪಠಣ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಲಾಯಿತು. ಮರಣದ ನಂತರ ಆತ್ಮ ಭಗವಂತನಲ್ಲಿ ಐಕ್ಯ ಹೊಂದುವ ಕುರಿತಾದ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಲಾಯಿತು. ಸಾಮೂಹಿಕ ಭಜನೆ ಕಾರ್ಯಕ್ರಮ ಕೂಡ ಈ ಸಂದರ್ಭದಲ್ಲಿ ನಡೆಯಿತು. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಡೆದು ಬಂದ ಹಾದಿ

    ಫಾದರ್ ವಿಲಿಯಂ ಮಾರ್ಟಿಸ್ ಬೈಬಲ್ ನ ಕೆಲವು ಶ್ಲೋಕಗಳನ್ನು ಪಠಣ ಮಾಡಿದರು. ಆಸ್ಕರ್ ಫೆರ್ನಾಂಡಿಸ್ ಅವರ ಕುಟುಂಬಕ್ಕೆ ನೋವು ಮರೆಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥನೆ ಮಾಡಲಾಯ್ತು.

    ಕ್ರೈಸ್ತ ಧರ್ಮದವರ ಆಗಿದ್ದರು ಆಸ್ಕರ್ ಫೆರ್ನಾಂಡಿಸ್ ಅತಿಹೆಚ್ಚು ಹಿಂದೂ, ಮುಸಲ್ಮಾನ ಗೆಳೆಯರು ಹಿತೈಷಿಗಳು ಇದ್ದರು. ಹಿಂದೂ ಸಂಪ್ರದಾಯದ ಪ್ರಕಾರ ಬೆಳಗ್ಗೆ 9 ಗಂಟೆಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಜನೆಯನ್ನು ಏರ್ಪಡಿಸಲಾಗಿತ್ತು. ಕ್ರೈಸ್ತ ಧರ್ಮದಲ್ಲಿ ಹುಟ್ಟಿದ್ದರೂ ಆಸ್ಕರ್ ಫೆರ್ನಾಂಡಿಸ್‍ಗೆ ಭಜನೆ ದೇವರನಾಮ ಸಂಕೀರ್ತನೆಗಳನ್ನು ಕೇಳುವುದು ಬಹಳ ಅಚ್ಚುಮೆಚ್ಚಿನದ್ದಾಗಿತ್ತು ಎಂದು ಆಸ್ಕರ್ ಆಪ್ತ ಗಫೂರ್ ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

    ಕಳೆದ ನಾಲ್ಕೈದು ವರ್ಷಗಳಿಂದ ಆಸ್ಕರ್ ಫೆರ್ನಾಂಡಿಸ್ ತೀವ್ರ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಮನೆಯಲ್ಲಿ ಸಂಗೀತ ಭಜನೆಗಳನ್ನು ಆಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮ ನಮನದ ಸಂದರ್ಭ ಕಾಂಗ್ರೆಸ್ ಕಚೇರಿಯಲ್ಲಿ ಭಜನೆಯನ್ನು ಏರ್ಪಡಿಸಲಾಗಿತ್ತು. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

  • 5 ದಶಕದಿಂದ ರಾಷ್ಟ್ರ ರಾಜಧಾನಿ, ರಾಜ್ಯದ ಕಾಂಗ್ರೆಸ್ಸಿನ ಬಹುದೊಡ್ಡ ಕೊಂಡಿಯಾಗಿದ್ದ ಆಸ್ಕರ್ ಇನ್ನು ನೆನಪು ಮಾತ್ರ

    5 ದಶಕದಿಂದ ರಾಷ್ಟ್ರ ರಾಜಧಾನಿ, ರಾಜ್ಯದ ಕಾಂಗ್ರೆಸ್ಸಿನ ಬಹುದೊಡ್ಡ ಕೊಂಡಿಯಾಗಿದ್ದ ಆಸ್ಕರ್ ಇನ್ನು ನೆನಪು ಮಾತ್ರ

    ಮಂಗಳೂರು: ಕಳೆದ ಐದು ದಶಕಗಳಿಂದ ರಾಷ್ಟ್ರ ರಾಜಧಾನಿ ಮತ್ತು ರಾಜ್ಯದ ಕಾಂಗ್ರೆಸ್ ನಡುವೆ ಇದ್ದ ಬಹುದೊಡ್ಡ ಕೊಂಡಿ ಕಳಚಿದೆ. ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಇಹಲೋಕ ತ್ಯಜಿಸಿದ್ದಾರೆ. ಅಜಾತಶತ್ರುವನ್ನು ಕಳೆದುಕೊಂಡ ಇಡೀ ರಾಜಕೀಯ ವಲಯ ಕಂಬನಿ ಮಿಡಿದಿದೆ.

    ಮೃದು ವ್ಯಕ್ತಿತ್ವ ಮೇಲೆ ಮಾಸದ ನಗು… ಅಜಾತ ಶತ್ರು ರಾಜಕಾರಣಿ ಆಸ್ಕರ್ ಫೆರ್ನಾಂಡಿಸ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಐದು ಬಾರಿ ಲೋಕಸಭೆ ಮತ್ತು ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಕರ್ನಾಟಕ ಕಾಂಗ್ರೆಸ್ಸಿನಿಂದ ದೆಹಲಿಯಲ್ಲಿ ಛಾಪು ಮೂಡಿಸಿದ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ತನ್ನ ಬದುಕಿನ ಜೈತ್ರಯಾತ್ರೆಯನ್ನು ಕೊನೆಗೊಳಿಸಿದ್ದಾರೆ. ರಾಜಕೀಯ ವಿರೋಧಿ ಗಳಿಂದಲೂ ಗೌರವಿಸಲ್ಪಟ್ಟಿದ್ದ ಆಸ್ಕರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು ಎರಡು ತಿಂಗಳುಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ ಆಸ್ಕರ್ ಪರಮಾತ್ಮನಲ್ಲಿ ಲೀನರಾಗಿದ್ದಾರೆ. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಡೆದು ಬಂದ ಹಾದಿ

    ಉಡುಪಿಯ ಮುನ್ಸಿಪಾಲಿಟಿಯಿಂದ ರಾಜಕೀಯ ಆರಂಭಿಸಿ ದೆಹಲಿಯ ಸಂಸತ್ ಭವನದವರೆಗೆ ಆಸ್ಕರ್ ಅವರು ನಡೆದು ಹೋದ ದಾರಿ ಬಲು ದೊಡ್ಡದು. ದೆಹಲಿ ರಾಜಕೀಯವಲಯದಲ್ಲಿ ಕರ್ನಾಟಕದ ಅಧಿಕೃತ ಪ್ರತಿನಿಧಿಯಂತೆ ಇದ್ದ ಆಸ್ಕರ್ ಇಲ್ಲಿನ ಕಾರ್ಯಕರ್ತರಿಗೆ ಆಸ್ಕರ್ ಅಣ್ಣ ಎಂದೇ ಚಿರಪರಿಚಿತ. ಗಾಂಧಿ ಕುಟುಂಬಕ್ಕೆ ಅತಿ ಆಪ್ತನಾಗಿದ್ದ ಆಸ್ಕರ್ ಕಟ್ಟಕಡೆಯ ಕಾರ್ಯಕರ್ತನಿಗೂ ಕೈಗೆ ಸಿಗುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಫೆರ್ನಾಂಡಿಸ್ ಜುಲೈ 19ರಂದು ಮನೆಯಲ್ಲಿ ಯೋಗ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದರು. ಮೆದುಳಿನಲ್ಲಿ ರಕ್ತಸ್ರಾವವಾಗಿ ಕೋಮಕ್ಕೆ ಜಾರಿದ್ದರು. ಆಸ್ಕರ್ ನಿಧನಕ್ಕೆ ರಾಜ್ಯ ರಾಷ್ಟ್ರಮಟ್ಟದ ನಾಯಕರು ಕಂಬನಿ ಮಿಡಿದಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

    ಯೋಗ, ಈಜು, ಯಕ್ಷಗಾನ, ಹುಲಿ ವೇಷ ಆಯುರ್ವೇದ ಹೀಗೆ ಆಸ್ಕರ್ ಫರ್ನಾಂಡಿಸ್ ಅವರದ್ದು ಒಂದು ವರ್ಣರಂಜಿತ ಜೀವನ. ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಮಂಗಳವಾರ ವಿಶೇಷ ಪ್ರಾರ್ಥನೆ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮದರ್ಶನ ನಡೆಯಲಿದೆ. ಬಳಿಕ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿಗೆ ಆಸ್ಕರ್ ಫರ್ನಾಂಡಿಸ್ ಅವರ ಮೃತದೇಹವನ್ನ ರವಾನೆ ಮಾಡಲಾಗುತ್ತಿದ್ದು, ಕೇಂದ್ರದ ರಾಜ್ಯದ ಹಿರಿಯ ನಾಯಕರು ಅಂತಿಮ ದರ್ಶನ ಮಾಡಲಿದ್ದಾರೆ. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

  • ಆಸ್ಕರ್ ಫರ್ನಾಂಡಿಸ್ ನಡೆದು ಬಂದ ಹಾದಿ

    ಆಸ್ಕರ್ ಫರ್ನಾಂಡಿಸ್ ನಡೆದು ಬಂದ ಹಾದಿ

    ಉಡುಪಿ: ಕರಾವಳಿಯ ಗಾಂಧಿ ಎಂದು ಪಕ್ಷದೊಳಗೆ ಕರೆಸಿಕೊಳ್ಳುತ್ತಿದ್ದ, ಕಾಂಗ್ರೆಸ್ ಮುತ್ಸದ್ಧಿ ಹಿರಿಯ ನೇತಾರ ಆಸ್ಕರ್ ಫರ್ನಾಂಡಿಸ್ ಕೊನೆಯುಸಿರೆಳೆದಿದ್ದಾರೆ. ಒಂಬತ್ತು ಬಾರಿ ಲೋಕಸಭೆ ಮತ್ತು ರಾಜ್ಯಸಭೆಗೆ ಆಸ್ಕರ್ ಆಯ್ಕೆಯಾಗಿದ್ದರು.

    ಆಸ್ಕರ್ ಫರ್ನಾಂಡಿಸ್ 1941ರ ಮಾರ್ಚ್ 27 ರಂದು ಜನಿಸಿದ್ದರು. ತಂದೆ ರೋಕೀ ಫರ್ನಾಂಡಿಸ್ ಅಧ್ಯಾಪಕರಾಗಿದ್ದರು. ತಾಯಿ ಲಿಯೋನಿಸ್ಸಾ ಫರ್ನಾಂಡಿಸ್ ಪ್ರಗತಿಶೀಲ ಮಹಿಳೆ. ರೋಕಿಯವರ 12 ಮಕ್ಕಳಲ್ಲಿ ಒಬ್ಬರು ಓಸ್ಕರ್. ತಂದೆ ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ ಹೋರಾಟಗಾರರಾಗಿದ್ದರು. ತಾಯಿ ಲಿಯೋನಿಸ್ಸಾ ಫರ್ನಾಂಡಿಸ್ ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಬೆಂಚ್ ಮ್ಯಾಜಿಸ್ಟ್ರೇಟ್ ಆಗಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

    ಆಸ್ಕರ್ ಫರ್ನಾಂಡಿಸ್ ಪ್ರೌಢ ಶಿಕ್ಷಣ ಬೋರ್ಡ್ ಹೈಸ್ಕೂಲಿನಲ್ಲಿ ನಡೆಯಿತು. ಮುಂದೆ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಮೂಲತ: ಆಸ್ಕರ್ ಕೃಷಿಕರಾಗಿದ್ದರು. ಜನ ನಾಯಕನಾದ ಮೇಲೂ ಗದ್ದೆ ಉಳುಮೆ ಮಾಡುತ್ತಿದ್ದರು. ಕೆಲಕಾಲ ಭಾರತೀಯ ಜೀವವಿಮಾ ನಿಗಮದ ಉದ್ಯೋಗಿಯಾಗಿ ದುಡಿಮೆ ಮಾಡಿದ್ದರು. 1972 ರಲ್ಲಿ ಉಡುಪಿ ಮುನ್ಸಿಪಾಲಿಟಿಯ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದ ಆಸ್ಕರ್, ಬ್ಲಾಸಂ ಫರ್ನಾಂಡಿಸ್ ರನ್ನು ವಿವಾಹ ಆಗಿದ್ದಾರೆ. ಆಮೇಲೆ ಅವರು ರಾಷ್ಟ್ರ ರಾಜಧಾನಿಯತ್ತ ಪಯಣ ಮಾಡಿ, ಗಾಂಧಿ ಕುಟುಂಬಕ್ಕೆ ಹತ್ತಿರರಾದರು. 1980 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ದೆಹಲಿ ರಾಜಕೀಯ ಅಲ್ಲಿಂದ ಶುರುವಾಯ್ತು. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

    ಉಡುಪಿ ಸಂಸದರಾಗಿ 1980, 1984, 1989, 1991, 1996ರಲ್ಲಿ ಆಯ್ಕೆಯಾದರು. ಒಟ್ಟು ಐದು ಬಾರಿ ಉಡುಪಿಯನ್ನು ಪ್ರತಿನಿಧಿಸಿದ್ದು, 1998 ರಲ್ಲಿ ಅಲ್ಪ ಮತಗಳ ಅಂತರದಿಂದ ಐಎಂ ಜಯರಾಮ ಶೆಟ್ಟಿ ವಿರುದ್ಧ ಸೋಲು ಅನುಭವಿಸಿದರು. ಬಳಿಕ ರಾಜ್ಯಸಭಾ ಸದಸ್ಯರಾಗಿ ರಾಜ್ಯಸಭಾ ಸದಸ್ಯನಾಗಿ ರಾಜಕೀಯ ಮುಂದುವರೆಸಿದರು. 1998 ರಿಂದ ಒಟ್ಟು ನಾಲ್ಕನೇ ಬಾರಿ ರಾಜ್ಯಸಭೆ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಹಾಗೂ ಸರ್ಕಾರದಲ್ಲಿ ವಿವಿಧ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದರು. 1983ರಲ್ಲಿ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು 1985 ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗುತ್ತಾರೆ.

    ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ನಂಬಿಕೆಯ ನಾಯಕನಾಗಿ ಗುರುತಿಸಲ್ಪಡುತ್ತಾರೆ. 1986 ರಲ್ಲಿ ಕನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದರು. ಕೇಂದ್ರದ ರಾಷ್ಟ್ರೀಯ ಹೆದ್ದಾರಿ, ಅಂಕಿ ಅಂಶ, ಯುವಜನ ಸೇವೆ, ಕ್ರೀಡೆ ಹಾಗೂ ಕಾರ್ಮಿಕ ಸಚಿವರಾಗಿ 2004-2009ರ ತನಕ ಸೇವೆ ಸಲ್ಲಿಸಿದ್ದಾರೆ. ಉಡುಪಿಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಸ್ಕರ್, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವಾಗಲೇ ಆಸ್ಕರ್ ಫರ್ನಾಂಡಿಸ್ ಇಹಲೋಕದ ಪಯಣ ಮುಗಿಸಿದ್ದಾರೆ.

  • ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

    ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

    ಉಡುಪಿ: ಕೇಂದ್ರ ಸರ್ಕಾರದ ಮಾಜಿ ಸಚಿವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ವಿಧಿವಶರಾಗಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ಮೃತದೇಹವನ್ನು ಉಡುಪಿ ನಗರದ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

    ಮಂಗಳವಾರ ಮುಂಜಾನೆ 9 ಗಂಟೆ ಸುಮಾರಿಗೆ ಕರೆತರಲಾಗುತ್ತದೆ. ಚರ್ಚ್‍ನಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಧರ್ಮಗುರುಗಳು ನೆರವೇರಿಸಲಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಪ್ರಾರ್ಥನೆ ನೆರವೇರಲಿದೆ.

    ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಚರ್ಚ್ ಫಾದರ್ ಚಾಲ್ರ್ಸ್ ಮಿನೇಜಸ್ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿಕೊಡುತ್ತಾರೆ. ಜಿಲ್ಲೆಯ ಕೆಲ ಗಣ್ಯರು ಇದೇ ಸಂದರ್ಭದಲ್ಲಿ ಆಸ್ಕರ್ ಫರ್ನಾಂಡಿಸ್ ಅವರ ಅಂತಿಮ ದರ್ಶನ ಮಾಡಲಿದ್ದಾರೆ. ಇದನ್ನೂ ಓದಿ:  ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರ ಸಂತಾಪ

    ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಸ್ಕರ್ ಫರ್ನಾಂಡಿಸ್ ಮೃತದೇಹವನ್ನು ರವಾನೆ ಮಾಡಲಾಗುತ್ತದೆ. ಜಿಲ್ಲೆಯ ಹಿರಿಯ ನಾಯಕರು ಕಾರ್ಯಕರ್ತರು ಆಸ್ಕರ್ ಫರ್ನಾಂಡಿಸ್ ಹಿತೈಷಿಗಳು ಆಪ್ತರು ಬಂದು ದರ್ಶನ ಮಾಡುವ ವ್ಯವಸ್ಥೆಯನ್ನು. ಮಧ್ಯಾಹ್ನ 1.30ರವರೆಗೆ ಅಂತಿಮ ದರ್ಶನ ವ್ಯವಸ್ಥೆ ಇದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮಾಹಿತಿ ನೀಡಿದೆ.

  • ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರ ಸಂತಾಪ

    ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರ ಸಂತಾಪ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್(80) ಅವರು ಇಹಲೋಕ ತ್ಯಜಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

    ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ದುಃಖವಾಗಿದೆ. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಹಿತೈಷಿಗಳೊಂದಿಗೆ ಇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಎಸ್ ಆರ್ ವಿಶ್ವನಾಥ್ ಸಂತಾಪ ಸೂಚಿಸಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

     

    ಕಾಂಗ್ರೆಸ್‍ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಸರಳ ಸಜ್ಜನ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಜನಾನುರಾಗಿಯಾಗಿದ್ದರು ಎಂದು ವಿಶ್ವನಾಥ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

    ಫರ್ನಾಂಡಿಸ್ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾಗಿದೆ. ಅವರ ನಿಧನದಿಂದ ರಾಜ್ಯ ಮತ್ತು ರಾಷ್ಟ್ರ ಒಬ್ಬ ಉತ್ತಮ ಜನನಾಯಕನನ್ನು ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.

    ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ನ ಹಿರಿಯ ನಾಯಕ ,ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.ಲೋಕಸಭಾ ಸದಸ್ಯರಾಗಿ ರಾಜ್ಯ ಸಭಾ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು, ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ ಉಡುಪಿಯಲ್ಲಿ ಹುಟ್ಟಿ, ನಂತರ ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದದ್ದು ಒಂದು ಸಾಹಸಗಾಥೆ. ಅವರ ನಿಧನದಿಂದ ರಾಜ್ಯ ಮತ್ತು ರಾಷ್ಟ್ರ ಒಬ್ಬ ಅತ್ಯುತ್ತಮ ಜನನಾಯಕ ನನ್ನ ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸುನಿಲ್ ಕುಮಾರ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.