Tag: Orphanage

  • ಅನಾಥಾಶ್ರಮದಲ್ಲಿ ಬೆಳೆದ ಯುವತಿಗೆ ಬಾಳು ಕೊಟ್ಟ ಯುವಕ

    ಅನಾಥಾಶ್ರಮದಲ್ಲಿ ಬೆಳೆದ ಯುವತಿಗೆ ಬಾಳು ಕೊಟ್ಟ ಯುವಕ

    ಧಾರವಾಡ: ಅನಾಥಾಶ್ರಮದಲ್ಲಿ ಬೆಳೆದ ಯುವತಿಯನ್ನು ಯುವಕ ಮದುವೆ ಮಾಡಿಕೊಳ್ಳುವ ಮೂಲಕ ಬಾಳನ್ನು ಕೊಟ್ಟಿದ್ದಾರೆ.

    ಧಾರವಾಡದ ಮೊಬೈಲ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೀನಿವಾಸ್ ದೇಶಪಾಂಡೆ ಎಂಬವರು ಬೆಳಗಾವಿಯ ಗಂಗಮ್ಮ ಚಿಕ್ಕುಂಬಿಮಠ ಬಾಲ್ಯಕಲ್ಯಾಣ ಅನಾಥಾಶ್ರಮದಲ್ಲಿ ಬೆಳೆದ ಆರತಿ ಪುರಾಣಿಮಠ ಅವರನ್ನು ವರಿಸಿದ್ದಾರೆ.

    ಮದುವೆ ಧಾರವಾಡ ನಗರದ ಪ್ರಾಣ ದೇವರ ದೇವಸ್ಥಾನದಲ್ಲಿ ಇಂದು ನಡೆಯಿತು. ಮೂಲತಃ ಮಹಾರಾಷ್ಟ್ರದ ಆರತಿ ಎರಡು ವರ್ಷದವರಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ನಂತರ 10 ವರ್ಷದವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಿದ್ದರು.

    ತಂದೆ- ತಾಯಿಯನ್ನು ಕಳೆದುಕೊಂಡ ನಂತರ ಅನಾಥಾಶ್ರಮದವರು ಆರತಿ ಅವರಿಗೆ ಆಶ್ರಯ ನೀಡಿದ್ದರು. ಅನಾಥಾಶ್ರಮದ ಪದಾಧಿಕಾರಿಗಳು ಹಾಗೂ ದೇಶಪಾಂಡೆ ಕುಟುಂಬದವರು ಆರತಿ ಬಗ್ಗೆ ಚರ್ಚಿಸಿ ಶ್ರೀನಿವಾಸ್ ದೇಶಪಾಂಡೆ ಅವರ ಜೊತೆ ಮದುವೆ ಮಾಡಿಸಿದರು.

    ಈ ಮದುವೆಯಲ್ಲಿ ಭಾಗವಹಿಸಿದ್ದ ಧಾರವಾಡ ಶಾಸಕ ಅರವಿಂದ್ ಬೆಲ್ಲದ ಅವರು ಕೂಡ ಈ ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದರು.

  • ತಾಯಿಯನ್ನು ಇಡೀ ರಾತ್ರಿ ಬೀದಿಯಲ್ಲಿ ಕಳೆಯುವಂತೆ ಮಾಡಿದ ಪಾಪಿ ಮಗ

    ತಾಯಿಯನ್ನು ಇಡೀ ರಾತ್ರಿ ಬೀದಿಯಲ್ಲಿ ಕಳೆಯುವಂತೆ ಮಾಡಿದ ಪಾಪಿ ಮಗ

    ಮೈಸೂರು: ತಾಯಿಯೊಬ್ಬರಿಗೆ ನಾಲ್ಕು ಮಕ್ಕಳು ಇದ್ದರೂ ಆಕೆ ಅನಾಥೆ. ಏಕೆಂದರೆ ಹೆತ್ತ ಮಕ್ಕಳಿಗೆ ತಾಯಿ ಬೇಕಿಲ್ಲ. ತಾಯಿ ಬಂದು ಮನೆ ಬಾಗಿಲಲ್ಲಿ ಕುಳಿತಿದ್ದರು ರಾತ್ರಿಯೆಲ್ಲ ಮನೆ ಬಾಗಿಲು ತೆಗೆಯದೆ ಇಳಿ ವಯಸ್ಸಿನಲ್ಲಿರುವ ತಾಯಿಯನ್ನು ಇಡೀ ರಾತ್ರಿ ಬೀದಿಯಲ್ಲೆ ಕಳೆಯುವಂತೆ ಮಾಡಿದ್ದಾರೆ.

    ಮೈಸೂರಿನ ಬನ್ನಿ ಮಂಟಪದ ಮೂರನೇ ಹಂತದಲ್ಲಿ ಈ ಘಟನೆ ನಡೆದಿದೆ. 80 ವರ್ಷದ ಅಮೀನಾ ಅವರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಕ್ಕಳು ತಾಯಿಯನ್ನು ಸಾಕಲಾರದೆ ಬೆಂಗಳೂರಿನ ಅನಾಥಶ್ರಮಕ್ಕೆ ಬಿಟ್ಟಿದ್ದರು. ಅಲ್ಲಿರಲು ಮನಸ್ಸಾಗದೆ ಅಮೀನಾ ಶನಿವಾರ ರಾತ್ರಿ ತಮ್ಮ ಮನೆಗೆ ಬಂದರು. ತಾಯಿ ವಾಪಸ್ ಬಂದಿದ್ದನ್ನು ಕಂಡ ಮಕ್ಕಳು ಮನೆ ಬಾಗಿಲು ಹಾಕಿಕೊಂಡು ತಮ್ಮ ಸಂಸಾರ ಸಮೇತ ಹೊರಗೆ ಹೋಗಿದ್ದಾರೆ.

    ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಈ ಪ್ರಮೇಯವನ್ನು ಕಂಡು, ತಮ್ಮ ಮನೆಯಲ್ಲಿ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.

  • ಮದರ್ ಥೆರೆಸಾರಿಂದ ಸ್ಫೂರ್ತಿ ಪಡೆದು ಮಾನಸಿಕ ಅಸ್ವಸ್ಥರಿಗೆ ಆಸರೆಯಾದ ಜೋಸೆಫ್ ಕ್ರಾಸ್ತಾ!

    ಮದರ್ ಥೆರೆಸಾರಿಂದ ಸ್ಫೂರ್ತಿ ಪಡೆದು ಮಾನಸಿಕ ಅಸ್ವಸ್ಥರಿಗೆ ಆಸರೆಯಾದ ಜೋಸೆಫ್ ಕ್ರಾಸ್ತಾ!

    ಮಂಗಳೂರು: ಮದರ್ ಥೆರೆಸಾ ಅವರಿಂದ ಸ್ಫೂರ್ತಿ ಪಡೆದಿರುವ ಜೋಸೆಫ್ ಕ್ರಾಸ್ತಾ ಮಾನಸಿಕ ಅಸ್ವಸ್ಥರಿಗೆ ಆಸರೆ ನೀಡಿ ಅವರ ಜೀವನನಕ್ಕೆ ಬೆಳಕಾಗುತ್ತಿದ್ದಾರೆ.

    ಮಂಗಳೂರಿನ ಜೋಸೆಫ್ ಕ್ರಾಸ್ತಾ ಅವರು ಮಾನಸಿಕ ಅಸ್ವಸ್ಥರು, ನಿರ್ಗತಿಕರ ಪಾಲಿನ ಬೆಳಕಾಗಿದ್ದು, `ಸ್ನೇಹಾಲಯ’ ಎಂಬ ಸಂಸ್ಥೆ ಕಟ್ಟಿ ಇವರೆಲ್ಲರಿಗೂ ಆಶ್ರಯದಾತರಾಗಿದ್ದಾರೆ. ಮಾನಸಿಕ ಅಸ್ವಸ್ಥರನ್ನ ಅಸಡ್ಡೆ ಮಾಡುವ ಹಲವರಿಗೆ ಮಾದರಿಯಾಗಿರುವ ಜೋಸೆಫ್ ಕ್ರಾಸ್ತಾ ಎಲ್ಲರನ್ನು ಅಕ್ಕರೆಯಿಂದ ಆರೈಕೆ ಮಾಡುತ್ತಿದ್ದಾರೆ.

    ಈ ಹಿಂದೆ ಬಸ್ ಡ್ರೈವರ್ ಆಗಿದ್ದ ಜೋಸೆಫ್ ಅವರು ಬಳಿಕ ಆಟೋ ಚಾಲಕನಾಗಿ ವೃತ್ತಿಜೀವನ ನಡೆಸುತ್ತಿದ್ದರು, ಈ ವೇಳೆ ಒಂದು ದಿನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಮೀನು ಮಾರ್ಕೆಟ್‍ನಿಂದ ಹರಿದು ಹೋಗುತ್ತಿದ್ದ ದುರ್ನಾತದ ನೀರನ್ನು ಕುಡಿಯುತ್ತಿದ್ದಿದ್ದನ್ನು ಕಂಡು ಅಂದಿನಿಂದ ಆಟೋದಲ್ಲಿ ಐದಾರು ಊಟವನ್ನು ಪಾರ್ಸೆಲ್ ಮಾಡಿಸಿ, ದಾರಿ ಬದಿ ಸಿಗುವ ಮಾನಸಿಕ ಅಸ್ವಸ್ಥರಿಗೆ ಕೊಡಲು ಆಂರಂಭಿಸಿದ್ದರು.

    ಸದ್ಯ ತಮ್ಮ ಈ ಸೇವೆಯನ್ನ ಮುಂದುವರಿಸಿದ ಜೋಸೆಫ್ ಅವರಿಗೆ ತಂದೆಯ ಆಸ್ತಿಯಿಂದ ಬಂದ 14 ಲಕ್ಷ ರೂ.ಗಳಿಂದ ತಲಪಾಡಿಯ ತುಮ್ಮಿನಾಡು ಎಂಬಲ್ಲಿ ಅನಾಥಾಲಯ ನಡೆಸುತ್ತಿದ್ದರು. ಬಳಿಕ 2014ರಲ್ಲಿ ಕೇರಳ ಸರ್ಕಾರದ ಸಹಕಾರದಿಂದ ಗಡಿಭಾಗವಾದ ಕುಂಜತ್ತೂರಿನಲ್ಲಿ ನೂತನ ಸ್ನೇಹಾಲಯ ಹೆಸರಿನಲ್ಲಿ ಆಶ್ರಮವನ್ನ ನಿರ್ಮಿಸಿದ್ದಾರೆ. ಅಲ್ಲದೇ ಆಶ್ರಮದಲ್ಲಿ ದಾದಿಯರೂ ಸೇವೆ ಆಯ್ಕೆ ತೆಗೆದುಕೊಂಡು ಹಲವರ ಜೀವನಕ್ಕೆ ಅಸರೆಯಾಗಿದ್ದಾರೆ.

    ಸ್ನೇಹಾಲಯ ಆಶ್ರಮದಲ್ಲಿ ಎಲ್ಲಾ ರಾಜ್ಯದವರೂ ಮಾತ್ರವಲ್ಲ ಪಾಕಿಸ್ತಾನದ ಓರ್ವ ಹಾಗೂ ನೇಪಾಳದ ಇಬ್ಬರು ಮಾನಸಿಕ ಅಸ್ವಸ್ಥರೂ ಇದ್ದಾರೆ. ಆಶ್ರಮ ಮಾತ್ರ ಅಲ್ಲ, ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಪರಿಚಾರಕರಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ.

    https://www.youtube.com/watch?v=a44YoEOEin0

  • ಹಾವು ಹಿಡಿಯೋ ದಿನನಿತ್ಯದ ವೃತ್ತಿ ಜೊತೆಗೆ ಅನಾಥ ಜೀವಗಳನ್ನು ಪೋಷಿಸ್ತಿದ್ದಾರೆ ಶಿವಮೊಗ್ಗದ ಜೇನಿ ಪ್ರಭಾಕರ್

    ಹಾವು ಹಿಡಿಯೋ ದಿನನಿತ್ಯದ ವೃತ್ತಿ ಜೊತೆಗೆ ಅನಾಥ ಜೀವಗಳನ್ನು ಪೋಷಿಸ್ತಿದ್ದಾರೆ ಶಿವಮೊಗ್ಗದ ಜೇನಿ ಪ್ರಭಾಕರ್

    ಶಿವಮೊಗ್ಗ: ಸರ್ಕಾರಿ ಅನುದಾನ ಪಡೆದು, ಅವರಿವರಿಂದ ಕೊಡುಗೆ ಪಡೆದು ಆಶ್ರಮ ನಡೆಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಸರ್ಪಗಳ ಸಹವಾಸ ಮಾಡಿ ಅನಾಥರನ್ನು ಸಾಕುತ್ತಿದ್ದಾರೆ. ಶಿವಮೊಗ್ಗದ ಜೇನಿ ಪ್ರಭಾಕರ್ ಅವರೇ ನಮ್ಮ ಪಬ್ಲಿಕ್ ಹೀರೋ.

    ನೂರಾರು ಮಂದಿಗೆ ಆಸರೆ ನೀಡಿದ್ದ ಈ ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್‍ಪೇಟೆಯ ಚಿಕ್ಕಜೇನಿಯಲ್ಲಿರೋ ಪದ್ಮಶ್ರೀ ಅನಾಥಾಶ್ರಮ, ವಯೋವೃದ್ಧರಿಗೆ, ಮಾನಸಿಕ ಅಸ್ವಸ್ಥರಿಗೆ ಆಶ್ರಯತಾಣವಾಗಿದೆ. ಈ ಆಶ್ರಮದಲ್ಲಿ ಸುಮಾರು 20 ಮಂದಿ ಆಸರೆ ಪಡೆದಿದ್ದಾರೆ.

    ಪದ್ಮಶ್ರೀ ಅನಾಥಾಶ್ರಮದ ರೂವಾರಿ ಜೇನಿ ಪ್ರಭಾಕರ್. ಕೇವಲ ಹಾವು ಹಿಡಿಯೋ ಮೂಲಕವೇ ಈ ಆಶ್ರಮವನ್ನ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಎಲ್ಲೇ ಹಾವು ಕಂಡು ಬಂದ್ರೂ ಕರೆ ಮೊದಲು ಬರೋದು ಜೇನಿ ಪ್ರಭಾಕರ್ ಅವರಿಗೆ. ಹಾವು ಹಿಡಿದಿದ್ದಕ್ಕೆ ಪ್ರತಿಯಾಗಿ ಧವಸ ಧಾನ್ಯ, ತರಕಾರಿ ಪಡೆದು ಅನಾಥರನ್ನು ಪೋಷಿಸುತ್ತಿದ್ದಾರೆ.

    ಜೇನಿ ಪ್ರಭಾಕರ್ ಆಶ್ರಮ ಸ್ಥಾಪಿಸಲು ಕಾರಣ ಬಾಲ್ಯದಲ್ಲಿ ನಡೆದ ಕಹಿ ಘಟನೆ. ಕೆಲಸ ಅರಸಿ ಮುಂಬೈಗೆ ಹೋಗಿದ್ದ ಪ್ರಭಾಕರ್ ಪರ್ಸ್ ಕಳೆದುಕೊಂಡು ಭಿಕ್ಷೆ ಬೇಡಿದ್ರಂತೆ. ಆಗ ಮಾನಸಿಕ ಅಸ್ವಸ್ಥರು, ವಯೋವೃದ್ಧರ ಕಷ್ಟ ಜೇನಿ ಮನಸ್ಸಿಗೆ ತಟ್ಟಿತ್ತಂತೆ. ಅಲ್ಲಿಂದ ವಾಪಸ್ ಆಗಿ ಹಾವು ಹಿಡಿಯೋ ವೃತ್ತಿ ಕರಗತ ಮಾಡಿಕೊಂಡ ಜೇನಿ, 2012ರಲ್ಲಿ ಪದ್ಮಶ್ರೀ ಅನಾಥಾಶ್ರಮ ಸ್ಥಾಪಿಸಿದ್ದಾರೆ.

    ಇನ್ನಷ್ಟು ಮಂದಿಗೆ ನೆರವಾಗುವ ನಿಟ್ಟಿನಲ್ಲಿ ತಮ್ಮ 2 ಎರಡೆಕರೆ ಜಮೀನಿನಲ್ಲಿ ಈಗ ದೊಡ್ಡ ಅನಾಥಾಶ್ರಮ ಕಟ್ಟುತ್ತಿದ್ದಾರೆ. ಇದಕ್ಕಾಗಿ ಧರ್ಮಸ್ಥಳದಿಂದ 2ಲಕ್ಷ ಹಣದ ನೆರವು ದೊರಕಿದೆ. ಉಳಿದ ಹಣಕ್ಕಾಗಿ ದಾನಿಗಳ ನೆರವಿಗೆ ಕಾಯುತ್ತಿದ್ದಾರೆ.

    https://www.youtube.com/watch?v=Ua9wibyA5b4