Tag: Orphan

  • ಅನಾಥ ಮಕ್ಕಳ ದತ್ತು ಪಡೆದ ನಟಿ ಶ್ರೀಲೀಲಾ

    ಅನಾಥ ಮಕ್ಕಳ ದತ್ತು ಪಡೆದ ನಟಿ ಶ್ರೀಲೀಲಾ

    ಶ್ರೀಲೀಲಾ (Sreeleela) ಮತ್ತೆ ಸುದ್ದಿಗೆ ಬಂದಿದ್ದಾರೆ. ಇದುವರೆಗೆ ಸಿನಿಮಾ ಗೆದ್ದಿದ್ದು, ಸೋತಿದ್ದಕ್ಕೆ ಮಾತ್ರ ಲೈಮ್‌ಲೈಟಿನಲ್ಲಿದ್ದರು. ಮೊದಲ ಬಾರಿ ಪ್ರೀತಿ ತೋರಿಸಿ ಎಲ್ಲರಿಂದ ಭಪ್ಪರೇ ಹುಡುಗಿ ಎಂದು ಹೊಗಳಿಸಿಕೊಂಡಿದ್ದಾರೆ. ಅಂಥ ಕಾಯಕ ಏನು ಮಾಡಿದರು ಶ್ರೀಲೀಲಾ? ಅದ್ಯಾವ ಜೀವಗಳಿಗೆ ಆಸರೆಯಾದರು ? ಮನ ಕಲಕುವ ಕಥನ ಇಲ್ಲಿದೆ.

    ಸಿನಿಮಾ ನಟ ನಟಿಯರು ಸುದ್ದಿಯಲ್ಲಿ ಸದಾ ಇರುತ್ತಾರೆ. ಒಳ್ಳೆಯದು, ಕೆಟ್ಟದ್ದು ಎರಡನ್ನೂ ಮಾಧ್ಯಮ ಬಿಚ್ಚಿಡುತ್ತವೆ. ಕೆಲವರು ಒಳ್ಳೆಯದನ್ನು ಬಾಯಿ ಚಪ್ಪರಿಸಿಕೊಂಡು ನೋಡುತ್ತಾರೆ.. ಉಳಿದವರು ಕೆಟ್ಟದ್ದಕ್ಕೆ ಕಿಡಿ ಕಾರುತ್ತಾರೆ. ಆದರೆ ಶ್ರೀಲೀಲಾ ಮಾತ್ರ ಎರಡನ್ನೂ ಒಪ್ಪಿಕೊಂಡಿದ್ದಾರೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದು ನೆರವಾಗಿದ್ದಾರೆ. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ನಿಭಾಯಿಸುವುದಾಗಿ ಹೇಳಿಕೊಂಡಿದ್ದಾರೆ. ಇದಪ್ಪಾ ರಿಯಲ್ ಹೀರೋಯಿನ್ ಲಕ್ಷಣ ಎಂದಿದ್ದಾರೆ ಜನ.

    ಕನ್ನಡದ ಈ ಹುಡುಗಿ ಏಕಾಏಕಿ ಟಾಲಿವುಡ್‌ನಲ್ಲಿ ಸರ ಪಟಾಕಿ ಹಚ್ಚಿದ್ದು ಸಣ್ಣ ಮಾತಲ್ಲ. ಹತ್ತತ್ತು ಸಿನಿಮಾ ಒಪ್ಪಿ, ಟಾಪ್ ಸ್ಟಾರ್ಸ್ ಜೊತೆ ಹೆಜ್ಜೆ ಹಾಕಿ ಸೆನ್ಸೇಶನಲ್ ಹೀರೋಯಿನ್ ಪಟ್ಟ ಏರಿದರು. ರಶ್ಮಿಕಾ ಬಾಲಿವುಡ್‌ಗೆ ಹೋಗಿದ್ದು ಶ್ರೀಲೀಲಾ ಹಾದಿಗೆ ಹೂವು ಹಾಸಿತು. ಪವನ್‌ಕಲ್ಯಾಣ್ ಸಿನಿಮ ಹಿಟ್ ಆದರೆ ಶ್ರೀ ಆಕಾಶಕ್ಕೆ ಏರುವುದು ಖಚಿತ. ಅದೇ ಹುಡುಗಿ ಈಗ ಇಬ್ಬರು ಮಕ್ಕಳ ಬಾಳಿಗೆ ದೀಪ ಹಚ್ಚಿದ್ದಾರೆ. ಹಣ ಇದ್ದರೆ ಸಾಲದು ಅದನ್ನು ಅಸಹಾಯಕರಿಗೆ ಹಂಚುವ ಮನಸು ಬೇಕು. ಅದು ಶ್ರೀಗೆ ಇದೆ.

  • ಪತ್ನಿಯ ತಿಥಿ ದಿನವೇ ಪತಿ ಸಾವು -ಇಬ್ಬರು ಮಕ್ಕಳು ಅನಾಥ

    ಪತ್ನಿಯ ತಿಥಿ ದಿನವೇ ಪತಿ ಸಾವು -ಇಬ್ಬರು ಮಕ್ಕಳು ಅನಾಥ

    ಮೈಸೂರು: ಕೋವಿಡ್‍ನಿಂದ ಮೃತಪಟ್ಟ ಪತ್ನಿಯ ತಿಥಿ ದಿನವೇ ಪತಿಯೂ ಕೋವಿಡ್‍ನಿಂದಾಗಿ ಸಾವನ್ನಪ್ಪಿದ್ದು, ಇವರ ಇಬ್ಬರು ಮಕ್ಕಳು ಅನಾಥರಾಗಿರುವ ಮನಕಲಕುವ ಘಟನೆ  ಮೈಸೂರಿನಲ್ಲಿ ನಡೆದಿದೆ. ಇದನ್ನೂ ಓದಿ:  ಪತ್ನಿಗೆ ಕೊರೊನಾ- ಪ್ರಾಣ ಬಿಟ್ಟ ಪತಿರಾಯ

    ಕೆ. ಸುಷ್ಮ(37) ಹಾಗೂ ಡಿ.ಪ್ರಸನ್ನ(44) ಮೃತರಾಗಿದ್ದಾರೆ. ಮೈಸೂರಿನ ಗಂಗೋತ್ರಿ ಲೇಔಟ್‍ನ ನಿವಾಸಿಗಳಾದ ಇವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಹಾಸನ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕಿ ಕೆ. ಸುಷ್ಮ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪತಿ ಡಿ.ಪ್ರಸನ್ನ ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗದಲ್ಲಿ ತಾತ್ಕಾಲಿಕ ವಾಹನ ಚಾಲಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ:
    ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿ

    ತಿಂಗಳ ಹಿಂದೆ ಪತಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಪತ್ನಿಯಲ್ಲಿಯೂ ಸೋಂಕು ಕಾಣಿಸಿಕೊಂಡಿತ್ತು. ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಶಾಲೆಗೆ ರಜೆ ಇದ್ದ ಕಾರಣ ಮಕ್ಕಳನ್ನು ತಾತ ಹುಣಸೂರು ತಾಲ್ಲೂಕಿನಲ್ಲಿನ ಮನೆಯಲ್ಲಿ ಇದ್ದರು. 11 ದಿನದ ಹಿಂದೆ ಸುಷ್ಮ ಮೃತಪಟ್ಟಿದ್ದರು. ಶುಕ್ರವಾರ ಸುಷ್ಮಾ ಅವರ ಹನ್ನೊಂದನೇ ದಿನದ ಕಾರ್ಯವನ್ನು ಮಾಡಲು ಮೈಸೂರಿಗೆ ಮಕ್ಕಳು ಆಗಮಿಸಿದ್ದರು. ಇತ್ತ ತಿಥಿ ಕಾರ್ಯ ನಡೆಯಬೇಕಾದರೆ ತಂದೆ ಪ್ರಸನ್ನ ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ 14,12 ವರ್ಷದ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಕಾರ್ಮೋಡ ಆವರಿಸಿದೆ. ಇದನ್ನೂ ಓದಿ:  ಕೊರೊನಾದಿಂದ ದೂರವಿರಲು ಹಾವು ತಿಂದ

  • ಹೊಸ ಜೀವನಕ್ಕೆ ಕಾಲಿಟ್ಟ ಅನಾಥೆ –  ಸಾವಿತ್ರಿಗೆ ಆಸೆರೆಯಾದ ಸೇವಾ ಭಾರತಿ ಟ್ರಸ್ಟ್

    ಹೊಸ ಜೀವನಕ್ಕೆ ಕಾಲಿಟ್ಟ ಅನಾಥೆ – ಸಾವಿತ್ರಿಗೆ ಆಸೆರೆಯಾದ ಸೇವಾ ಭಾರತಿ ಟ್ರಸ್ಟ್

    ಹುಬ್ಬಳ್ಳಿ: ಅನಾಥ ಬಾಲಕಿಯನ್ನು ಪಾಲನೆ, ಪೋಷಣೆ ಮಾಡಿ ಬೆಳೆಸಿದ ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ ಇಂದು ಯುವತಿಯನ್ನ ಅದ್ಧೂರಿಯಾಗಿ ಮದುವೆ ಮಾಡಿಕೊಡುವ ಮೂಲಕ ಸಾವಿತ್ರಿ ಬಾಳಿಗೆ ಆಸೆರೆಯಾಗಿದೆ.

    ನಗರದಲ್ಲಿ ನಡೆದ ಸರಳ ವಿವಾಹದ ಮೂಲಕ ಸಾವಿತ್ರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಹುಟ್ಟಿದಾಗಿನಿಂದ ಇಲ್ಲಿಯವರೆಗೆ ತಂದೆ, ತಾಯಿಯ ಆಸರೆಯಲ್ಲಿ ಬೆಳೆಯದಿದ್ದರೂ ಇದೀಗ ಅಂದುಕೊಂಡಂತೆ ಮದುವೆಯಾಗಿದೆ. ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ ನ ಪ್ರಕಲ್ಪವಾದ ಮಾತೃ ಛಾಯಾ ಬಾಲಕಲ್ಯಾಣ ಕೇಂದ್ರದ ಯುವತಿ ಇಂದು ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾಳೆ.

    ಬಿ.ಕಾಂ ಪದವಿಧರೆಯಾಗಿರುವ 24 ವರ್ಷದ ಸಾವಿತ್ರಿ, ಸದ್ಯ ರಾಷ್ಟ್ರ ಸೇವಿಕ ಸಮಿತಿಯ ಪ್ರಾಂತದ ಸಹಶಾರೀರಕಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಅವರು ಕುಮಟಾ ತಾಲೂಕಿನ ಅಜ್ಜಿ ಗದ್ದೆಯ ಕಂದವಳ್ಳಿ ಗ್ರಾಮದ ಕೃಷಿ ಕುಟುಂಬದ ರೇವಂತನೊಂದಿಗೆ ಸಪ್ತಪದಿ ತುಳಿದರು. ಪಿಯುಸಿ ಓದಿರುವ ರೇವಂತ, ಅನಾಥ ಯುವತಿಯನ್ನು ಮದುವೆಯಾಗಿ ಬಾಳಿಗೆ ಅರ್ಥ ಕೊಡಬೇಕು ಎಂಬ ಕನಸು ಹೊಂದಿದ್ದರು. ಈ ಹಿನ್ನೆಲೆ ಸಾವಿತ್ರಿಯವರನ್ನು ವಿವಾಹವಾಗಿದ್ದಾರೆ.

    ಅನಾಥ ಯುವತಿ ಸಾವಿತ್ರಿಯನ್ನು ಕೇಂದ್ರ ಸಚಿವ ಪ್ರಹ್ಲಾದ್‌ಜೋಶಿ ಸಹೋದರ ಗೋವಿಂದ ಜೋಶಿ ಧಾರೆ ಎರೆದುಕೊಡುವ ಮೂಲಕ ಬ್ರಾಹ್ಮಣ ಸಮುದಾಯದಲ್ಲಿ ನಡೆಯಬೇಕಾದ ಎಲ್ಲ ಪದ್ಧತಿ, ಸಂಪ್ರದಾಯಗಳ ಮೂಲಕ ಮದುವೆ ಮಾಡಿಕೊಟ್ಟಿರು. ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ ಮೂಲಕ ನಡೆಯುತ್ತಿರುವ 4ನೇ ಮದುವೆ ಇದಾಗಿದೆ.

    ಮದುವೆ ಕಾರ್ಯದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಶಿಲ್ಪಾ ಶೆಟ್ಟರ್, ಸಂಘ ಪರಿವಾರದ ಹಿರಿಯರಾದ ಮಂಗೇಶ ಬೆಂಡೆ, ಆರ್‌ಎಸ್‍ಎಸ್‍ ಪ್ರಚಾರಕರಾದ ಸೂ ರಾಮಣ್ಣ, ರಘು ಅಕಮಚ್ಚಿ, ಕೃಷ್ಣಾ ಕುಲಕರ್ಣಿ, ಭಾರತಿ ನಂದಕುಮಾರ ವೀಣಾ ಮಳಿ, ಮಂಜುಳಾ ಕೃಷ್ಣನ್, ಸವಿತಾ ಕರಮರಿ ಸೇರಿದಂತೆ ಹಲವರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನೂತನ ವಧು ವರರಿಗೆ ಹಾರೈಸಿದರು.

  • ಅನಾಥ ಹಿಂದೂ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಬಾಂಧವರು

    ಅನಾಥ ಹಿಂದೂ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಬಾಂಧವರು

    ಮಂಗಳೂರು: ಅನಾಥ ಹಿಂದೂ ವೃದ್ಧ ಮಹಿಳೆಯ ಶವ ಸಂಸ್ಕಾರ ಮಾಡಿ ಸ್ಥಳೀಯ ಮುಸ್ಲಿಂ ಸಮುದಾಯದವರು ಮಾನವೀಯತೆ ಮೆರೆದಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಾಜೆಯ ನಾಗರಿಕರು ಈ ಕಾರ್ಯ ಮಾಡಿದ್ದಾರೆ. ಕೊಡಾಜೆ ಮಸೀದಿಯ ಹತ್ತಿರದ ಒಂದು ಮನೆಯಲ್ಲಿ ಬಡ ವೃದ್ಧ ಮಹಿಳೆಯು ಅಸುನೀಗಿದ್ದರು. ವೃದ್ಧೆಯು ಕೆಲವು ಸಮಯದಿಂದ ಅನಾರೋಗ್ಯದಿಂದಿದ್ದು ಇವರಿಗೆ ಇನ್ನೊಬ್ಬ ಅನಾರೋಗ್ಯ ಪೀಡಿತ ವೃದ್ಧೆ ಅಕ್ಕ ಮಾತ್ರ ಇದ್ದರು. ಹೀಗಾಗಿ ಕುಟುಂಬಸ್ಥರು ಯಾರೂ ಇಲ್ಲ ಎಂದರಿತ ಊರಿನವರು ತಕ್ಷಣ ಕಾರ್ಯ ಪ್ರವೃತ್ತರಾದರು.

    ಕೊಡಾಜೆ ಜುಮ್ಮಾ ಮಸೀದಿಯ ಅಧ್ಯಕ್ಷರು ಸೇರಿದಂತೆ ಊರಿನ ನಾಗರೀಕರು ವೃದ್ಧ ಮಹಿಳೆಯ ಶವ ಸಂಸ್ಕಾರಕ್ಕೆ ಹಣ ಒಟ್ಟುಗೂಡಿಸಿದ್ದಾರೆ. ಸುಮಾರು ಐದು ಸಾವಿರ ರೂಪಾಯಿಯನ್ನು ಸೇರಿಸಿ ಅಂತ್ಯಸಂಸ್ಕಾರಕ್ಕೆ ಬೇಕಾದಂತಹ ವ್ಯವಸ್ಥೆಯನ್ನು ಮಾಡಿದ್ದಾರೆ.

    ಅಂಬುಲೆನ್ಸ್ ಕರೆಸಿ ಪುತ್ತೂರಿನ ವೃದ್ಧೆಯ ಶವವನ್ನು ಶವಾಗಾರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಆ ಬಳಿಕ ಶವ ಸಂಸ್ಕಾರ ಮಾಡಲಾಗಿದೆ. ಈ ಕಾರ್ಯ ಮಾಡುವ ಮೂಲಕ ಧರ್ಮದ ಭೇದಭಾವ ಇಲ್ಲದೆ ಮಾನವೀಯತೆಯ ಕೊಂಡಿ ಈಗಲೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದ್ದಾರೆ.

  • ನವಜಾತ ಗಂಡು ಮಗುವನ್ನು ಬೀದಿಗೆ ಹಾಕಿದ ತಾಯಿ!

    ನವಜಾತ ಗಂಡು ಮಗುವನ್ನು ಬೀದಿಗೆ ಹಾಕಿದ ತಾಯಿ!

    ಹಾಸನ: ಹೆಣ್ಣು ಮಗು ಜನಿಸಿತು ಅಂತಾ ನವಜಾತ ಶಿಶುಗಳನ್ನು ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಹಾಸನ ಜಿಲ್ಲೆಯಲ್ಲಿ ಗಂಡು ಕಂದಮ್ಮನನ್ನು ಬೀದಿ ಪಾಲು ಮಾಡಿದ ಅಮಾನವೀಯ ಘಟನೆ ನಡೆದಿದೆ.

    ಕೆಲ ದುಷ್ಕರ್ಮಿಗಳು ಹಾಸನ ತಾಲೂಕು ಮಾವಿನಹಳ್ಳಿ ಬಳಿ ಇಂದು ಬೆಳಗ್ಗೆ ನವಜಾತ ಗಂಡು ಶಿಶುವನ್ನು ಬಿಟ್ಟು ಹೋಗಿದ್ದಾರೆ. ಮಗುವಿನ ಹೊಕ್ಕಳು ಬಳ್ಳಿಯನ್ನು ಕೂಡ ಕತ್ತರಿಸಿಲ್ಲ. ಆಗತಾನೆ ಜನಿಸಿದ ಕರುಳ ಕುಡಿಯನ್ನು ಅಮ್ಮ ಎಸೆದು ಹೋಗಿದ್ದಾಳೆ. ರಾತ್ರಿ ಮಗು ಚಳಿಯಲ್ಲಿ ನರಳಾಡಿ, ಅಳಲು ಆರಂಭಿಸಿದೆ.  ಇದನ್ನು ಓದಿ:  ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್‍ರೂಂನಲ್ಲೇ ಇಟ್ಟೋದ್ಳು!

    ಅದೃಷ್ಟವಶಾತ್ ಮಗು ನಾಯಿ ಬಾಯಿ ಸಿಕ್ಕಿಕೊಳ್ಳದೇ ಬದುಕುಳಿದಿದೆ. ಇತ್ತ ಮಗು ಅಳುತ್ತಿರುವ ಧ್ವನಿ ಕೇಳಿಸಿಕೊಂಡ ಕೆಲ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ, ಅನಾಥ ಶಿಶುವನ್ನು ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಮಗುವಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

    ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೇ ಇಂತಹ ಹೀನ ಕೃತ್ಯ ಎಸಗಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ. ಮಗುವಿನ ಪರಿಸ್ಥಿತಿ ಕಂಡು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಚರಂಡಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ‘ಸ್ವಾತಂತ್ರ್ಯ’ ಅಂತ ನಾಮಕರಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv