Tag: organ donate

  • ಎಂಟು ಜನರಿಗೆ ಅಂಗಾಂಗ ದಾನ ಮಾಡಿ ಉಸಿರು ಬಿಟ್ಟ ಸಿದ್ದಾಪುರದ ಆಟೋ ಚಾಲಕ

    ಎಂಟು ಜನರಿಗೆ ಅಂಗಾಂಗ ದಾನ ಮಾಡಿ ಉಸಿರು ಬಿಟ್ಟ ಸಿದ್ದಾಪುರದ ಆಟೋ ಚಾಲಕ

    ಕಾರವಾರ: ತನ್ನ ಸಾವಿನಲ್ಲೂ ಎಂಟು ಜನರಿಗೆ ಅಂಗಾಂಗ ದಾನ ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ‌ ಆಟೋ ಚಾಲಕ ಸಾರ್ಥಕತೆ ಮೆರೆದಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿರಳಗಿ ಮೂಲದ ವಿನಾಯಕ ವೆಂಕಟೇಶ ನಾಯ್ಕ ಅವರು ಜುಲೈ 27 ರಂದು ಬೆಂಗಳೂರಿನಲ್ಲಿ ಆಟೋ ಚಲಾಯಿಸುತ್ತಿದ್ದಾಗ ಬೆಂಗಳೂರಿನ ಸೀತಾ ಸರ್ಕಲ್ ಬಳಿ ಬಿಎಂಟಿಸಿ ಬಸ್ ಹಿಂಭಾಗದಿಂದ ರಿಕ್ಷಕ್ಕೆ ಗುದ್ದಿತ್ತು‌. ಆಟೋದಲ್ಲಿ ಇದ್ದ ಪ್ರಯಾಣಿಕರು ಸಾವು ಕಂಡಿದ್ದರೆ, ವಿನಾಯಕ್ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.

    ಅಪಘಾತದಿಂದ ವಿನಾಯಕ ವೆಂಕಟೇಶ್ ನಾಯ್ಕ ಕೋಮಾಕ್ಕೆ ಜಾರಿದ್ದರು. ಆದರೆ, ಬದುಕಿಗಾಗಿ 13 ದಿನಗಳ ಹೋರಾಟ ನಡೆಸಿದರೂ ಮಿದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ, ಅವರ ಆಸೆಯಂತೆ ಅಂಗಾಂಗವನ್ನು ದಾನ ಮಾಡಲಾಗಿದ್ದು, ಎಂಟು ಜನರಿಗೆ ಅವರ ಅಂಗಗಳನ್ನು ನೀಡಲಾಗಿದೆ.

    ಈ ಮೂಲಕ ತನ್ನ ಸಾವಿನಲ್ಲೂ ಇನ್ನೊಬ್ಬರ ಜೀವನಕ್ಕೆ ಬೆಳಕಾಗಿದ್ದು, ಸಾರ್ಥಕತೆ ಮೆರೆದಿದ್ದಾರೆ. ಭಾನುವಾರ ಅವರ ಮೃತದೇಹವನ್ನು ಸಿದ್ದಾಪುರದ ಶಿರಳಿಗೆ ತರಲಾಗಿದ್ದು, ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

  • ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ – ಮೂವರ ಬಾಳಿಗೆ ಬೆಳಕು

    ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ – ಮೂವರ ಬಾಳಿಗೆ ಬೆಳಕು

    * 176 ವರ್ಷಗಳ ಹಳೆಯ ಸರ್ಕಾರಿ ಆಸ್ಪತ್ರೆಯಿಂದ ಇದೇ ಮೊದಲ ಬಾರಿಗೆ ಅಂಗಾಂಗ ರವಾನೆ

    ಮಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ ಮಾಡಲಾಗಿದ್ದು, ಮೂವರ ಬಾಳಿಗೆ ಬೆಳಕು ಸಿಕ್ಕಿದೆ.

    ಶಿವಮೊಗ್ಗ ರಾಗಿಗುಡ್ಡ ನಿವಾಸಿ ರೇಖಾ (41) ಅವರ ಅಂಗಾಂಗ ದಾನ ಮಾಡಲಾಯಿತು. ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಿಂದ ಅಂಗಾಂಗ ರವಾನೆ ಮಾಡಲಾಯಿತು. ಸರ್ಕಾರಿ ಆಸ್ಪತ್ರೆಯಿಂದ ಇದೇ ಮೊದಲ ಬಾರಿಗೆ ಅಂಗಾಂಗ ರವಾನೆಯಾಗಿದೆ.

    ಮೆದುಳು ರಕ್ತಸ್ರಾವದಿಂದ ಆಸ್ಪತ್ರೆಗೆ ನಾಲ್ಕು ದಿನಗಳ ಹಿಂದೆ ರೇಖಾ ದಾಖಲಾಗಿದ್ದರು. ಆದರೆ, ಅವರ ಮೆದುಳು ನಿಷ್ಕ್ರಿಯಗೊಂಡಿತು. ಅವರನ್ನು ಬದುಕಿಸಲು ಸಾಧ್ಯವಿಲ್ಲ ಎಂದಾದ ಬಳಿಕ, ರೇಖಾ ಕುಟುಂಬಸ್ಥರು ಅಂಗಾಂಗ ದಾನದ ನಿರ್ಧಾರ ಮಾಡಿದರು.

    ಮೈಸೂರಿನ ಅಪೋಲೋ ಆಸ್ಪತ್ರೆಗೆ ರೇಖಾ ಅವರ ಲಿವರ್ ದಾನ ಮಾಡಲಾಯಿತು. ಎರಡು ಕಣ್ಣುಗಳ ಕಾರ್ನಿಯಾ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ನೀಡಲಾಯಿತು. ಅಂಗಾಂಗ ರವಾನೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಯಿತು.

    ಇಬ್ಬರು ರೋಗಿಗಳಿಗೆ ಎರಡು ಕಣ್ಣಿನ ಕಾರ್ನಿಯಾ ಹಾಗೂ ಓರ್ವ ರೋಗಿಗೆ ಲಿವರ್ ದಾನ ಮಾಡಲಾಯಿತು. ಇದರಿಂದ ಮೂವರ ಬಾಳಿಗೆ ಮೃತ ರೇಖಾ ಅವರು ಬೆಳಕಾಗಿದ್ದಾರೆ.

  • ಮೈಸೂರಿನಿಂದ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯ ರವಾನೆ

    ಮೈಸೂರಿನಿಂದ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯ ರವಾನೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ಜೀವಂತ ಹೃದಯ ರವಾನೆಯಾಗಿದೆ. ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಇಂದು ಹೃದಯ ರವಾನೆಯಾಯಿತು.

    ಮದನ್ ರಾಜ್(22) ಅಂಗಾಂಗವನ್ನು ಪೋಷಕರು ದಾನ ಮಾಡಿದ್ದಾರೆ. ಕಳೆದ ತಿಂಗಳು 9ರಂದು ಪಿರಿಯಾಪಟ್ಟಣದ ಕೊಪ್ಪ ಬಳಿ ಮದನ್‍ಗೆ ಅಪಘಾತವಾಗಿತ್ತು. ಈ ಅಪಘಾತದ ಬಳಿಕ ಮದನ್ ಮೆದಳು ನಿಷ್ಕ್ರಿಯಗೊಂಡಿತ್ತು.

    ಇಂದು ಕುಟುಂಬಸ್ಥರ ಒಪ್ಪಿಗೆ ಮೆರೆಗೆ ಹೃದಯ ಸೇರಿ ಹಲವು ಅಂಗಾಂಗಗಳ ದಾನ ಮಾಡಲಾಗಿದೆ. ಗ್ರೀನ್ ಕಾರಿಡಾರ್ ಮೂಲಕ ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಯಿತು.

    ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಗ್ರೀನ್ ಕಾರಿಡಾರ್ ಮಾಡಲಾಗಿತ್ತು. ಪೊಲೀಸ್ ಭದ್ರತೆಯೊಂದಿಗೆ ಝೀರೋ ಟ್ರಾಫಿಕ್ ಮೂಲಕ ಹೃದಯವನ್ನು ರವಾನಿಸಲಾಯಿತು.

  • 3 ವರ್ಷದಲ್ಲಿ 32 ಕುಟುಂಬದಿಂದ ಅಂಗಾಂಗ ದಾನ – ಬೇರೆ ವ್ಯಕ್ತಿಗಳಲ್ಲಿ ಮಗಳನ್ನು ಕಾಣುತ್ತಿದ್ದಾರೆ ತಾಯಿ

    3 ವರ್ಷದಲ್ಲಿ 32 ಕುಟುಂಬದಿಂದ ಅಂಗಾಂಗ ದಾನ – ಬೇರೆ ವ್ಯಕ್ತಿಗಳಲ್ಲಿ ಮಗಳನ್ನು ಕಾಣುತ್ತಿದ್ದಾರೆ ತಾಯಿ

    – ಹಲವು ಜನರ ದೇಹದಲ್ಲಿ ಜೀವಂತವಾಗಿದೆ ಮಗಳ ಅಂಗಗಳು
    – ಈ ಕೆಲಸದಿಂದ ನೆಮ್ಮದಿ – ಭಾವನಾ

    ಗಾಂಧಿನಗರ: 2016ರಲ್ಲಿ ಬ್ರೈನ್ ಡೆಡ್ ಆಗಿದ್ದ 16 ವರ್ಷದ ಮಗಳ ಅಂಗಾಂಗವನ್ನು ಪೋಷಕರು ದಾನ ಮಾಡಿದ್ದರು. ಇದಾದ ಬಳಿಕ ಮೂರು ವರ್ಷದಲ್ಲಿ 32 ಕುಟುಂಬದಿಂದ ಅಂಗಾಂಗ ದಾನ ಮಾಡಲು ಬಾಲಕಿಯ ತಾಯಿ ಪ್ರೇರಣೆ ನೀಡಿದ್ದಾರೆ.

    2016ರಂದು ಭಾವನಾ ಬೇನ್ ಅವರ 16 ವರ್ಷದ ಮಗಳು ರಾಧಿಕಾ ಅನಾರೋಗ್ಯದಿಂದ ಬಳಲುತ್ತಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ರಾಧಿಕಾಳನ್ನು ಪರೀಕ್ಷಿಸಿದಾಗ ಆಕೆಯ ಮೆದುಳಿನಲ್ಲಿ ಉಂಡೆಯಂತೆ ಇರುವುದು ತಿಳಿದು ಬಂದಿತ್ತು. ಆಗ ವೈದ್ಯರು ರಾಧಿಕಾಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆ ಮಾಡಿದ ಕೆಲವು ಗಂಟೆಗಳ ನಂತರ ಆ ಉಂಡೆ ಒಡೆದು ಹೋಗಿದ್ದು, ರಾಧಿಕಾಳ ಬ್ರೈನ್ ಡೆಡ್ ಆಗಿತ್ತು.

    ಈ ದುಃಖದ ಸಮಯದಲ್ಲಿ ವೈದ್ಯರಾದ ವಿರೋಜಾ, ಕರಾಮಟ್ ಹಾಗೂ ವಂಜಾರ ಅವರು ಭಾವನಾ ಬಳಿ ಹೋಗಿ ರಾಧಿಕಾಳ ಅಂಗಾಂಗ ದಾನ ಮಾಡುವಂತೆ ಸಲಹೆ ನೀಡಿದ್ದರು. ಭಾವನಾ ವೈದ್ಯರ ಸಲಹೆಯನ್ನು ಕೇಳಿ ರಾಧಿಕಾಳ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಆಗ ವೈದ್ಯರು ರಾಧಿಕಾಳ ಹೃದಯ, ಕಿಡ್ನಿ, ಕಣ್ಣು ಹಾಗೂ ಲಿವರ್ ಅನ್ನು ಅವಶ್ಯಕತೆ ಇರುವ ಜನರಿಗೆ ನೀಡಲು ಸುರಕ್ಷಿತವಾಗಿ ಇಟ್ಟುಕೊಂಡಿದ್ದರು.

    ರಾಧಿಕಾ ಈಗ ಬದುಕಿಲ್ಲ. ಆದರೆ ಇಂದಿಗೂ ಆಕೆಯ ಅಂಗಗಳು ಹಲವು ಜನರ ದೇಹದಲ್ಲಿ ಜೀವಂತವಾಗಿದೆ. ರಾಧಿಕಾಳ ಅಂಗಾಂಗ ದಾನ ಮಾಡಿದ ನಂತರ ವೈದ್ಯರು ಭಾವನಾ ಬಳಿ ಹೋಗಿ, ಅಂಗಾಂಗ ದಾನ ಮಾಡಲು ಜನರಿಗೆ ಪ್ರೇರಣೆ ನೀಡಿ. ಇದರಿಂದ ಹಲವು ಜನರ ಜೀವ ಉಳಿಯುತ್ತದೆ ಎಂದು ಹೇಳಿದ್ದರು. ವೈದ್ಯರ ಮಾತು ಕೇಳಿ ಭಾವನಾ ಹಲವು ಜನರಿಗೆ ಅಂಗಾಂಗ ದಾನದ ಬಗ್ಗೆ ಪ್ರೇರಣೆ ನೀಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಭಾವನಾ ಬೇನ್, ಯಾವುದೇ ರೋಗಿಯ ಬ್ರೈನ್ ಡೆಡ್ ಆಗಿದೆ ಎಂಬ ವಿಷಯ ನನಗೆ ತಿಳಿದ ತಕ್ಷಣ ನಾನು ಆಸ್ಪತ್ರೆಗೆ ಹೋಗುತ್ತೇನೆ. ಬಳಿಕ ರೋಗಿಯ ಕುಟುಂಬಸ್ಥರ ಜೊತೆ ಮಾತನಾಡಿ, ಅಂಗಾಂಗ ದಾನ ಮಾಡುವಂತೆ ಪೇರಣೆ ನೀಡುತ್ತೇನೆ. ನಾನು ಹಾಗೂ ನನ್ನ ಪತಿ ಮನ್‍ಸುಖ್ ಇಬ್ಬರು ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತೇವೆ. ನನ್ನ ಈ ಕೆಲಸಕ್ಕೆ ನನ್ನ ಪತಿ ಮಾತ್ರವಲ್ಲದೆ ನನ್ನ ಮಗ ಕೂಡ ಸಹಕರಿಸುತ್ತಾನೆ ಎಂದರು.

    ಇದೇ ವೇಳೆ 3 ವರ್ಷಗಳಲ್ಲಿ 32 ಮಂದಿಗೆ ಅಂಗಾಂಗ ದಾನ ಮಾಡಲು ಪ್ರೇರಣೆ ನೀಡಿದ್ದೇನೆ. ಈಗಲೂ ನಾವು ಈ ಕೆಲಸವನ್ನು ಮುಂದುವರಿಸುತ್ತಿದ್ದೇವೆ. ಈ ಕೆಲಸದಿಂದ ನೆಮ್ಮದಿ ಸಿಗುತ್ತದೆ. ಅದನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ನನ್ನ ಮಗಳು ರಾಧಿಕಾ ನಮ್ಮ ಜೊತೆಯಿಲ್ಲ. ಆದರೆ ಇಂದಿಗೂ ಆಕೆ ಹಲವು ಜನರ ದೇಹದಲ್ಲಿ ಜೀವಂತವಾಗಿದ್ದಾಳೆ ಎಂದು ಹೇಳುವ ಮೂಲಕ ಭಾವನಾ ಬೇನ್ ಭಾವುಕರಾದರು.

  • ಮೃತಪಟ್ಟ ನಂತ್ರ ಐದು ಜನರಿಗೆ ಜೀವನ ನೀಡಿದ ಯುವಕ

    ಮೃತಪಟ್ಟ ನಂತ್ರ ಐದು ಜನರಿಗೆ ಜೀವನ ನೀಡಿದ ಯುವಕ

    ಬೆಂಗಳೂರು: 21 ವರ್ಷದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಐದು ಜನರಿಗೆ ಜೀವನವನ್ನು ನೀಡಿದ್ದಾನೆ. ಯುವಕನ ಪೋಷಕರು ಆತನ ಮೂತ್ರಪಿಂಡ, ಯಕೃತ್ ಮತ್ತು ಕಾರ್ನಿಯಾವನ್ನು ದಾನ ಮಾಡಿದ್ದಾರೆ.

    ಶ್ರೀ ಸುಜನ್ ಅಂಗಾಂಗ ದಾನ ಮಾಡಿದ ವಿದ್ಯಾರ್ಥಿ. 21 ವರ್ಷದ ಶ್ರೀ ಸುಜನ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಜನವರಿ 17ರಂದು ದೊಡ್ಡಬಳ್ಳಾಪುರದ ಬಳಿ ಅಪಘಾತಕ್ಕೆ ಒಳಗಾಗಿದ್ದ. ತಕ್ಷಣ ಆತನನ್ನು ಕೊಲಂಬಿಯಾ ಏಷ್ಯಾ ದೊಡ್ಡಬಳ್ಳಾಪುರದಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಆತನನ್ನು ಅಲ್ಲಿಂದ ನರಚಿಕಿತ್ಸೆಯ ಆರೈಕೆಗಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹೆಬ್ಬಾಳಕ್ಕೆ ಕರೆತರಲಾಗಿತ್ತು.

    ಅಪಘಾತದಿಂದ ಶ್ರೀ ಸುಜನ್ ಮೆದುಳಿಗೆ ತೀವ್ರ ಆಘಾತಕಾರಿ ಗಾಯವಾಗಿದೆ ಎಂದು ಸಿಟಿ ಸ್ಕ್ಯಾನ್‍ನ ಮೂಲಕ ತಿಳಿದು ಬಂದಿದೆ. ಈ ವಿಷಯ ತಿಳಿದ ನಂತರ ಗಾಯಾಳುವಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಮತ್ತು ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಆದರೆ ಗಾಯದ ಸ್ವರೂಪ ತೀವ್ರವಾಗಿದ್ದರಿಂದ ಯಾವುದೇ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗಲಿಲ್ಲ, ಮೆದುಳಿನ ಚಟುವಟಿಕೆ ಮತ್ತು ರೋಗಿಯ ಜೀವವನ್ನು ಕಾಪಾಡಲು ವೈದ್ಯರ ಗರಿಷ್ಠ ಪ್ರಯತ್ನ ಮುಂದುವರಿಸಿದರು. ಆತನನ್ನು ಸೂಕ್ಷ್ಮ ಘಟಕದಲ್ಲಿ ಇರಿಸಿ ಔಷಧಿ ನೀಡುವಂತೆ ಮಾಡಲಾಯಿತು. ಇದೆಲ್ಲದರ ಹೊರತಾಗಿಯೂ ಆತನ ಮೆದುಳಿನ ಗಾಯದ ಸ್ಥಿತಿ ಹದಗೆಟ್ಟಿತ್ತು ಮತ್ತು ಜನವರಿ 21ರಂದು ಆಳವಾದ ಕೋಮಾಗೆ ಜಾರಿದ್ದ.

    ವಿವರವಾದ ಕ್ಲಿನಿಕಲ್ ಮತ್ತು ವಿಕಿರಣ ಪರೀಕ್ಷೆಯಿಂದ ಮೆದುಳಿಗಾದ ಗಾಯದ ಬಗ್ಗೆ ಯಾವುದೇ ಚೇತರಿಕೆಯ ಅಂಶವನ್ನು ತೋರಿಸಿರಲಿಲ್ಲ. ಇದರ ತರುವಾಯ ಅವರ ಮೆದುಳು 22ರಂದು ನಿಷ್ಕ್ರಿಯಗೊಂಡಿದೆ ಎಂದು ಘೋಷೊಸಲಾಯಿತು. ರೋಗಿಯ ತಂದೆ, ತಾಯಿ, ಸಹೋದರ ಮತ್ತು ಚಿಕ್ಕಪ್ಪ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಂಗಗಳ ದಾನವನ್ನು ಮಾಡಲು ಮುಂದಾದರು. ಅಂಗಾಂಗ ದಾನ ಮತ್ತು ಇತರರಿಗೆ ಒಳ್ಳೆಯದನ್ನು ಮಾಡುವ ಬಗ್ಗೆ ಇದ್ದ ಅವರ ಮನವಿ ಮತ್ತು ತಿಳುವಳಿಕೆಯನ್ನು ಆಸ್ಪತ್ರೆ ಗೌರವಿಸಿತು.

    ಅಂಗಾಗಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯೂ 22ರಂದು ಬೆಳಗ್ಗೆ ಕರ್ನಾಟಕದ ಕಸಿ ಪ್ರಧಿಕಾರ ಜೀವನ ಸಾರ್ಥಕತೆಯ ಮೂಲಕ ಪ್ರಾರಂಭವಾಯಿತು. ಮರುಪಡೆಯಲಾದ ಅಂಗಂಗಾಗಳಲ್ಲಿ ಒಂದು ಮೂತ್ರಪಿಂಡವನ್ನು ಕೊಲಂಬಿಯಾ ಏಷ್ಯಾ ಹೆಬ್ಬಾಳ ಆಸ್ಪತ್ರೆಯಲ್ಲಿದ್ದ ರೋಗಿಗೆ ನೀಡಲಾಯಿತು. ಇತರ ಮೂತ್ರಪಿಂಡ ಮತ್ತು ಯಕೃತ್ತನ್ನು ಸಕ್ರಾ ವಲ್ರ್ಡ್ ಆಸ್ಪತ್ರೆಯಲ್ಲಿ ಸೂಕ್ತರಿಗೆ ನೀಡಲು ಸ್ಥಳಾಂತರಿಸಲಾಯಿತು. ಎರಡು ಕಾರ್ನಿಯಾಗಳನ್ನು ಮಿಂಟೋ ಕಣ್ಣಿನ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

  • ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದ ರೈತ – ಯುವಕನ ಆಸೆಯಂತೆ ಅಂಗಾಂಗ ದಾನ

    ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದ ರೈತ – ಯುವಕನ ಆಸೆಯಂತೆ ಅಂಗಾಂಗ ದಾನ

    ಬೆಂಗಳೂರು: ರಕ್ತ ಹೆಪ್ಪುಗಟ್ಟಿ ಯುವ ರೈತ ಮೃತಪಟ್ಟಿದ್ದು, ಅವರ ಆಸೆಯಂತೆ ಅಂಗಾಂಗ ದಾನ ಮಾಡಲಾಗಿದೆ.

    ವಿಕಾಶ್ ಎಚ್.ಪಿ ಸಕಲೇಶಪುರದ ಹೆತ್ತೂರು ಹೋಬಳಿಯ ಹೊಸಹಳ್ಳಿಯವರಾಗಿದ್ದು, ಪದವಿ ಮುಗಿಸಿ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಪುಟ್ಟಸ್ವಾಮಿ ಗೌಡ ಹಾಗೂ ದಿ.ಶಶಿಕಲಾ ಅವರ ಮೂವರ ಮಕ್ಕಳಲ್ಲಿ ವಿಕಾಸ್ ಮೊದಲನೇ ಮಗ. ಬದುಕು ಕಟ್ಟಿಕೊಳ್ಳಲು ಹಳ್ಳಿಗಳಿಂದ ಪಟ್ಟಣಕ್ಕೆ ಹೋಗುವ ಯುವಕರೇ ಹೆಚ್ಚಿರುವಾಗ ವಿಕಾಸ್ ಹಳ್ಳಿಯಲ್ಲೇ ಉಳಿದುಕೊಂಡು ಕೃಷಿ ಮಾಡುತ್ತಿದ್ದರು. ಇದನ್ನೂ ಓದಿ:  ತರಗತಿಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು – ಪೋಷಕರಿಂದ ಅಂಗಾಂಗ ದಾನ

    ಆಗಾಗ ತಲೆ ನೋವು ಎನ್ನುತ್ತಿದ್ದ ರೈತ ವಿಕಾಸ್ ಕಳೆದ ಶುಕ್ರವಾರ ವಿಪರೀತ ತಲೆ ನೋವು ಬಂದಿತ್ತು. ಸಕಲೇಶಪುರ ಹಾಗೂ ಮಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬ್ಲಡ್ ಕ್ಲಾಟ್ ಆಗಿರುವುದು ತಿಳಿಯಿತು. ಚಿಕಿತ್ಸೆಯಲ್ಲಿರುವಾಗ್ಲೇ ಕೋಮಾಗೆ ಜಾರಿದ ವಿಕಾಸ್ ಮೆದುಳು ನಿಷ್ಕ್ರಿಯವಾಗಿತ್ತು. ಶುಕ್ರವಾರ ಬೆಂಗಳೂರಿನ ಗೊರಗುಂಟೆಪಾಳ್ಯ ಬಳಿಯ ಸ್ಪರ್ಶ ಆಸ್ಪತ್ರೆಯಲ್ಲಿ ಯುವಕ ವಿಕಾಸ್ ಮೃತಪಟ್ಟಿದ್ದಾರೆ. ಆದರೆ ಸಾವಿನ ನಂತರವೂ ವಿಕಾಸ್ ಹಲವರ ಬಾಳಿಗೆ ಬೆಳಕಾಗಿದ್ದಾರೆ.

    ಬದುಕಿದ್ದಾಗ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ ರೈತ ವಿಕಾಸ್ ಗೆಳೆಯರ ಬಳಿ ಅಂಗಾಂಗ ದಾನದ ಬಗ್ಗೆ ಮಾತನಾಡುತ್ತಿದ್ದರು. ಈ ವಿಷಯವನ್ನು ಅವರ ಸ್ನೇಹಿತರು ವಿಕಾಸ್ ಪೋಷಕರಿಗೆ ತಿಳಿಸಿದರು. ಮಗನ ಸಾವಿನ ನಂತರ ವಿಕಾಸ್ ಕುಟುಂಬ ಸಾರ್ಥಕತೆ ಮೆರೆದಿದೆ. ರೈತ ವಿಕಾಸ್ ಸಾವಿನ ನಂತರವೂ ಎಂಟು ಮಂದಿಗೆ ಬದುಕಿದ್ದಾರೆ. ವಿಕಾಸ್ ಅಂಗಾಂಗಗಳನ್ನು ಬಿಜಿಎಸ್ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ.

    ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ‘ಜೀವ ಸಾರ್ಥಕತೆ’ ಅಡಿಯಲ್ಲಿ ಅಂಗಾಂಗ ದಾನ ಮಾಡಲಾಗಿದೆ. ಇಂದು ವಿಕಾಸ್ ಅವರ ಅಂತ್ಯಕ್ರಿಯೆ ಹುಟ್ಟೂರಲ್ಲಿ ನೆರವೇರಲಿದೆ. ರೈತ ಯುವಕ ವಿಕಾಸ್ ನಮ್ಮೊಂದಿಗೆ ಇಲ್ಲ ಎಂದರು ಅವನ ಜೀವನ ಸಾರ್ಥಕವಾಗಿದೆ ಎನ್ನುವ ಮನೋಭಾವದಲ್ಲಿ ಅವರ ಕುಟುಂಬವಿದೆ.