Tag: Order

  • ಆರೋಪಿತರಿಗೆ ಸಹಕಾರ ಆರೋಪ- ಪಿಎಸ್‍ಐ, ಇಬ್ಬರು ಪೊಲೀಸ್ ಪೇದೆಗಳು ಅಮಾನತು

    ಆರೋಪಿತರಿಗೆ ಸಹಕಾರ ಆರೋಪ- ಪಿಎಸ್‍ಐ, ಇಬ್ಬರು ಪೊಲೀಸ್ ಪೇದೆಗಳು ಅಮಾನತು

    ಚಿಕ್ಕಬಳ್ಳಾಪುರ: ಕರ್ತವ್ಯ ಲೋಪ ಹಾಗೂ ಆರೋಪಿಗಳಿಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆಯ ಪಿಎಸ್‍ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಎಸ್‍ಪಿ ಕಾರ್ತಿಕ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

    ಗುಡಿಬಂಡೆ ಪೊಲೀಸ್ ಠಾಣೆಯ ಪಿಎಸ್‍ಐ ಪಾಪಣ್ಣ ಹಾಗೂ ಪೇದೆಗಳಾದ ಸುನಿಲ್ ಹಾಗೂ ಮುನಿರಾಜು ಅಮಾನತದವರು. ಅಕ್ರಮ ಕಾರ್ಯಾಚರಣೆ ಹಿನ್ನಲೆಯಲ್ಲಿ ಜಪ್ತಿ ಮಾಡಿದ್ದ ವಿನಾಯಕ ಸ್ಟೋನ್ ಕ್ರಷರ್ ಗೆ ಸೂಕ್ತ ಭದ್ರತೆ ನೀಡದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಅಲ್ಲಿನ ಎಂ ಸ್ಯಾಂಡ್‍ನ ಕ್ರಷರ್ ಮಾಲೀಕ ಭೈರೇಗೌಡ ಅಕ್ರಮವಾಗಿ ಸಾಗಾಟ ಮಾಡಿದ್ದರು. ನಂತರ ಎಸ್‍ಪಿ ಸೂಚನೆ ಮೇರೆಗೆ ಭೈರೇಗೌಡ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಲಾಗಿತ್ತು.

    ಆದರೆ ನ್ಯಾಯಾಂಗ ಬಂಧನ ಆದೇಶದ ತರುವಾಯ ಆರೋಪಿಯನ್ನ ಜೈಲಿನ ಅಧಿಕಾರಿಗಳ ಸುಪರ್ದಿಗೆ ನೀಡುವ ಬದಲು ಗುಡಿಬಂಡೆ ಪಿಎಸ್‍ಐ ಪಾಪಣ್ಣ ಹಾಗೂ ಪೇದೆಗಳು ಆತನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬಗ್ಗೆ ಜೈಲ್ ಸೂಪರಿಂಟೆಂಡೆಂಟ್ ರಿಂದ ವರದಿ ಪಡೆದ ಎಸ್‍ಪಿ ಕಾರ್ತಿಕ್ ರೆಡ್ಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

  • ನವರಾತ್ರಿ, ಮೊಹರಂ ಆಚರಣೆಗೆ ಷರತ್ತುಗಳನ್ನು ಹಾಕಿದ ಉತ್ತರಪ್ರದೇಶ ಸಿಎಂ

    ನವರಾತ್ರಿ, ಮೊಹರಂ ಆಚರಣೆಗೆ ಷರತ್ತುಗಳನ್ನು ಹಾಕಿದ ಉತ್ತರಪ್ರದೇಶ ಸಿಎಂ

    ಲಕ್ನೌ: ಸೆಪ್ಟೆಂಬರ್ 21 ಇದೇ ಗುರುವಾರದಿಂದ ನವರಾತ್ರಿ ಹಬ್ಬ ಆರಂಭವಾಗಲಿದೆ. ಇದೇ ಹೊತ್ತಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ದುರ್ಗಾ ಪೂಜೆ, ದಸರಾ ಹಾಗೂ ಮೊಹರಂ ಆಚರಣೆಗೆ ಹಲವು ಷರತ್ತುಗಳನ್ನ ವಿಧಿಸಿದೆ.

    ದುರ್ಗಾ ಪೂಜೆ ಮೆರವಣಿಗೆ ವೇಳೆ ದುರ್ಗಾ ಮಾತೆಯ ಮೂರ್ತಿ ಹಾಗೂ ಮೊಹರಂನ ಮೆರವಣಿಗೆ ವೇಳೆ ಹೊತ್ತೊಯ್ಯಲಾಗುವ ತಝಿಯಾಗಳು ಇಷ್ಟೇ ಎತ್ತರ ಇರಬೇಕೆಂದು ನಿರ್ಬಂಧ ಹೇರಲಾಗಿದೆ. ಹಾಗೂ ಡಿಜೆ(ಹಾಡು-ನೃತ್ಯಕ್ಕೂ) ನಿಷೇಧ ಹೇರಿದ್ದಾರೆ. ಧ್ವನಿವರ್ಧಕಗಳ ಬಳಕೆಗೆ ಸರ್ಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಮೊದಲೇ ನಿಗದಿಪಡಿಸಿದ ಮಾರ್ಗ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಮೆರವಣಿಗೆ ಸಾಗುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

    ಸೆಪ್ಟೆಂಬರ್ 26 ರಂದು 4 ದಿನಗಳ ಕಾಲ ದುರ್ಗಾ ಪೂಜೆ ನಡೆಯಲಿದೆ. ಸೆಪ್ಟೆಂಬರ್ 30 ರಂದು ವಿಜಯದಶಮಿ ಆಚರಿಸಲಾಗುತ್ತದೆ. ಹಾಗೇ ಆಕ್ಟೋಬರ್ 1ರಂದು ಮೊಹರಂ ಇದೆ. ಧ್ವನಿ ವರ್ಧಕಗಳ ಬಳಕೆ ಹಾಗೂ ಮೆರವಣಿಗೆ ಹೋಗುವ ಮಾರ್ಗದ ವಿಚಾರವಾಗಿ ಈ ಹಿಂದೆ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಾಟೆ ಆದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ದುರ್ಗಾ ಮಾತೆಯ ಮೆರವಣಿಗೆ ಹಾಗೂ ಮೊಹರಂ ಮೆರವಣಿಗೆ ಸಾಗುವ ಮಾರ್ಗವನ್ನು ರಾಜ್ಯ ಸರ್ಕಾರವೇ ನಿರ್ಧರಿಸಲಿದೆ.

    ದಸರಾ ಹಬ್ಬ ಕೊನೆಯಾದ ಮಾರನೇ ದಿನವೇ ಮೊಹರಂ ಇರೋದು ವಿಶೇಷ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡೋ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.