Tag: Order

  • ಊಟ ಆರ್ಡರ್ ಮಾಡಿದ ಯುವತಿಗೆ ಬಂದಿದ್ದು ಊಟ ತಿಂದೆ ಎನ್ನುವ ಸಂದೇಶ

    ಊಟ ಆರ್ಡರ್ ಮಾಡಿದ ಯುವತಿಗೆ ಬಂದಿದ್ದು ಊಟ ತಿಂದೆ ಎನ್ನುವ ಸಂದೇಶ

    ಲಂಡನ್: ಹೊಟ್ಟೆ ಹಸಿವು ಎಂದು ಊಟ ಆರ್ಡರ್ ಮಾಡಿದ್ದ ಯುವತಿಗೆ ಸಾರಿ ಲವ್ ನಿನ್ನ ಊಟವನ್ನು ನಾನೆ ತಿಂದು ಬಿಟ್ಟೆ ಎಂದು ಡೆಲಿವರಿ ಬಾಯ್ ಸಂದೇಶ ಕಳುಹಿಸಿರುವ ಘಟನೆ ಲಂಡನ್‍ನಲ್ಲಿ ನಡೆದಿದೆ.


    ಇಲಿಯಾಸ್ (21) ಎಂಬ ಯುವತಿ 2 ಬರ್ಗರ್, ಚಿಕನ್ ಹಾಗೂ ಇನ್ನಿತರ ಖಾದ್ಯಗಳನ್ನು ಆರ್ಡರ್ ಮಾಡಿದ್ದಳು. 1,456 ರೂಪಾಯಿ ಹಣವನ್ನು ಪಾವತಿಸಿದ್ದಳು. ಊಟಕ್ಕಾಗಿ ಕಾಯುತ್ತಾ ಕುಳಿತವಳಿಗೆ ಡೆಲವರಿ ಬಾಯ್‍ನಿಂದ ‘ಸಾರಿ ಲವ್, ನಿನ್ನ ಊಟವನ್ನು ನಾನೇ ತಿಂದು ಮುಗಿಸಿದ್ದೇನೆ” ಎನ್ನುವ ಸಂದೇಶ ಬಂದಿದೆ.

    ಈ ವಿಚಿತ್ರವಾದ ಸಂದೇಶವನ್ನು ನೋಡಿದ ಯುವತಿ ಕೋಪಗೊಂಡು ಸಂದೇಶವನ್ನು ಸ್ಕ್ರೀನ್‍ಶಾರ್ಟ್ ತೆಗೆದು ಟ್ವಿಟ್ಟರ್‍ನಲ್ಲಿ ಹಂಚಿಕೊಂಡು ಡೆಲಿವರಿ ಬಾಯ್ ಆರೋಗ್ಯವಾಗಿದ್ದಾನೆ ತಾನೇ..? ಎಂದು ಬರೆದುಕೊಂಡಿದ್ದಾಳೆ.

    ಸ್ಲಲ್ಪ ಸಮಯದ ಬಳಿಕ ಆನ್‍ಲೈನ್ ಫುಡ್ ಆರ್ಡರ್ ಆ್ಯಪ್ ನಿಂದ ನಿಮ್ಮ ಊಟ ಸುರಕ್ಷಿತವಾಗಿ ತಲುಪಿಸಲಾಗಿದೆ. ಡೆಲಿವರಿಬಾಯ್‍ಗೆ ಬೇಕಿದ್ದರೆ ಟಿಪ್ಸ್ ಕೊಡಿ ಎನ್ನುವ ಸಂದೇಶ ಬಂದಿದೆ ಇದನ್ನು ನೋಡಿದ ಯುವತಿಗೆ ನಗು ಒಟ್ಟಿಗೆ ಕೋಪವು ಬಂದಿದೆ. ನಂತರ ಯುವತಿಗೆ ಉಚಿತವಾಗಿ ಆಕೆ ಆರ್ಡರ್ ಮಾಡಿರುವ ಖಾದ್ಯಗಳು ಮನೆಬಾಗಿಲಿಗೆ ಬಂದು ತಲುಪಿವೆ.

  • 1 ಆರ್ಡರ್ ಗೆ 42 ಫುಡ್ ಡೆಲಿವರಿ – ವಿಡಿಯೋ ವೈರಲ್

    1 ಆರ್ಡರ್ ಗೆ 42 ಫುಡ್ ಡೆಲಿವರಿ – ವಿಡಿಯೋ ವೈರಲ್

    ಮನಿಲಾ: ಒಂದು ಊಟ ಅರ್ಡರ್ ಮಾಡಿದ ಬಾಲಕಿ ಮನೆ ಬಾಗಿಲಿಗೆ ಬರೋಬ್ಬರಿ 42 ಡೆಲಿವರಿ ಬಾಯ್ಸ್ ಸೇಮ್ ಅರ್ಡರ್ ತೆಗೆದುಕೊಂಡು ಬಂದಿರುವ ಘಟನೆ ಫಿಲಿಫೈನ್ಸ್‍ನಲ್ಲಿ ನಡೆದಿದೆ.

    ಬಾಲಕಿ ತನ್ನ ಅಜ್ಜಿಯ ಜೊತೆಯಲ್ಲಿ ಫಿಲಿಫೈನ್ಸ್‍ನ ಸೆಬು ನಗರದಲ್ಲಿ ವಾಸವಾಗಿದ್ದಾಳೆ. ಈ ಬಾಲಕಿ ತನಗೆ ಮತ್ತು ಅಜ್ಜಿಗೆ ಎಂದು ಒಂದು ಊಟವನ್ನು ಆರ್ಡರ್ ಮಾಡಿದ್ದಾಳೆ.

    ಊಟ ಆರ್ಡರ್ ಮಾಡಿದ ಬಾಲಕಿಯ ಮನೆಬಾಗಿಲಿಗೆ ಡೆಲಿವರಿ ಬಾಯ್ಸ್‍ಗಳು ಒಬ್ಬರ ನಂತರ ಒಬ್ಬರು ಬರಲು ಆರಂಭಿಸಿದರು. ಕೊನೆಗೆ 42 ಮಂದಿ ಒಂದೇ ಆರ್ಡರ್ ತಂದು ಕೊಟ್ಟು ಹೋಗಿದ್ದಾರೆ. ಒಂದೇ ಮನೆಗೆ ಡೆಲಿವರಿ ಹುಡುಗರು ಬರುತ್ತಿರುವುದನ್ನು ನೋಡಿ ಸ್ಥಳಿಯ ನಿವಾಸಿಗಳು ಬೆರಗಾಗಿದ್ದಾರೆ.

    ಬಾಲಕಿ ಮನೆಗೆ ಆರ್ಡರ್ ತೆಗೆದುಕೊಂಡು ಒಬ್ಬರ ನಂತರ ಒಬ್ಬರಾಗಿ ಡೆಲಿವರಿ ಬಾಯ್ ಬರುತ್ತಿರುವುದನ್ನು ನೆರೆಹೊರೆಯವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

    ಬಾಲಕಿ ಫುಡ್ ಆರ್ಡರ್ ಮಾಡಿರುವ ಆ್ಯಪ್‍ನಲ್ಲಿ ಆಗಿರುವ ತಾಂತ್ರಿಕ ದೋಷವೇ ಇಷ್ಟೊಂದು ಅವಾಂತರಕ್ಕೆ ಕಾರಣವಾಗಿದೆ. ಫುಡ್ ಆರ್ಡರ್ ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಬಾಲಕಿ ಮಾಡಿರುವ ಆರ್ಡರ್ ಸಂದೇಶವು 42 ಫುಡ್ ಡೆಲಿವರಿ ಹುಡುಗರಿಗೆ ಹೋಗಿತ್ತು. ಪರಿಣಾಮ 42 ಮಂದಿಯೂ ಆಹಾರ ತೆಗೆದುಕೊಂಡು ಬಾಲಕಿಯ ಮನೆಗೆ ಬಂದಿದ್ದರು.

  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಆದೇಶ

    ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಆದೇಶ

    ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ.

    ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದ ಯಡಿಯೂರಪ್ಪನವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.

    ರಾಜ್ಯದಲ್ಲೀಗ ಪ್ರಾಧಿಕಾರ ಮತ್ತು ಮೀಸಲು ಪಾಲಿಟಿಕ್ಸ್ ಜೋರಾಗ್ತಿದೆ. ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತಲೇ, ವೀರಶೈವ ಲಿಂಗಾಯತರು ಧ್ವನಿ ಮುನ್ನಲೆಗೆ ಬಂದಿದೆ. ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಸೋಮಣ್ಣ, ಬಿಸಿ ಪಾಟೀಲ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರು ಅವರಿದ್ದ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿದೆ.

    ಜೊತೆಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ ನಂತರ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ರಾಜ್ಯಾಧಕ್ಷರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ನಮ್ಮ ಸಮಾಜದ ಕಡು ಬಡವರು, ಸಮಾಜದ ಹಿಂದುಳಿದ ವರ್ಗಕ್ಕೆ ಮತ್ತು ಯುವಕರಿಗೆ ಸಹಾಯ ಆಗಬೇಕು. ಹೀಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಆಗ್ರಹಿಸಿದ್ದರು.

    ಬೆಳಗಾವಿ ಬಸವ ಕಲ್ಯಾಣ ಉಪ ಚುನಾವಣೆ ಘೋಷಣೆಗೂ ಮುನ್ನವೇ, ಮರಾಠ ಸಮುದಾಯ ಓಲೈಸುವ ಸಲುವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಿಎಂ ಬಿಎಸ್‍ವೈ ಆದೇಶ ಹೊರಡಿಸಿದ್ದರು. ಅಲ್ಲದೇ 50 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್‍ಗೆ ಕರೆಕೊಟ್ಟಿದೆ.

  • ಆಗಸ್ಟ್ 22ರಿಂದ ಮದ್ಯ ಮಾರಾಟ ನಿಷೇಧ: ಡಿಸಿ

    ಆಗಸ್ಟ್ 22ರಿಂದ ಮದ್ಯ ಮಾರಾಟ ನಿಷೇಧ: ಡಿಸಿ

    ಧಾರವಾಡ: ಅಗಸ್ಟ್ 22ರಿಂದ ಸೆಪ್ಟಂಬರ್ 4ರವರೆಗೆ ಗಣೇಶ ಹಬ್ಬದ ಆಚರಣೆ ಪ್ರಯುಕ್ತ ಧಾರವಾಡ ಜಿಲ್ಲೆಯ ನಗರ ಮತ್ತು ಗ್ರಾಮಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನಾ ನಡೆಯುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

    ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1) ಕಾಯ್ದೆಯಡಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಮುಂಜಾಗ್ರತಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ. ಸಮಾರಂಭ, ಸಂಗೀತ, ನೃತ್ಯ, ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.

    ಗಣೇಶ ಮೂರ್ತಿಯನ್ನು ತಮ್ಮ ಮನೆಯ ಆವರಣದಲ್ಲಿ, ನೀರಿನ ಬ್ಯಾರಲ್, ಬಕೆಟ್‍ಗಳಲ್ಲಿ ವಿಸರ್ಜನೆ ಮಾಡಬೇಕು. ಯಾವುದೇ ರೀತಿಯಾಗಿ ಜನ ಸಂದಣಿ ಉಂಟು ಮಾಡಬಾರದು. ಭಕ್ತಾದಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಧರಿಸಲು ಸೂಚಿಸಬೇಕು, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು, ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಶಿವಮೊಗ್ಗದಲ್ಲಿ ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ – ಜಿಲ್ಲಾಡಳಿತ ಆದೇಶ

    ಶಿವಮೊಗ್ಗದಲ್ಲಿ ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ – ಜಿಲ್ಲಾಡಳಿತ ಆದೇಶ

    ಶಿವಮೊಗ್ಗ: ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಈ ಬಾರಿಯ ಗಣಪತಿ ಉತ್ಸವವನ್ನು ರಾಜ್ಯ ಸರ್ಕಾರದ ಆದೇಶದ ಅನ್ವಯ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಬಾರಿಯ ಗಣೇಶೋತ್ಸವವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈಗಾಗಿ ನಾಗರಿಕರು ಮುಂಜಾನೆ ಗಣಪತಿ ಪ್ರತಿಷ್ಠಾಪಿಸಿ ಸಂಜೆ ವಿಸರ್ಜನೆ ಮಾಡುವ ಮೂಲಕ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗಣೇಶೋತ್ಸವವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಗಣಪತಿ ಹಬ್ಬ ಕೇವಲ ಈ ವರ್ಷಕ್ಕೆ ಅಷ್ಟೇ ಸೀಮಿತವಾಗಿಲ್ಲ. ಮುಂದಿನ ಬಾರಿಯೂ ಗಣೇಶ ಹಬ್ಬ ಬರುತ್ತದೆ. ಈಗಾಗಿ ಜೀವ ಉಳಿದರೆ ಮುಂದಿನ ಬಾರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬಹುದು ಎಂದರು.

    ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಗಣಪತಿ ಪ್ರತಿಷ್ಠಾಪನೆ ಮಾಡಿ. ಆದರೆ ಗಣಪತಿ ತರುವ ವೇಳೆಯಲ್ಲಿ ಆಗಲಿ, ವಿಸರ್ಜನೆ ಮಾಡುವ ಸಂದರ್ಭದಲ್ಲಿ ಆಗಲಿ ಮೆರವಣಿಗೆ ಮಾಡುವಂತಿಲ್ಲ. ಮನೆಯಲ್ಲಿ ಕೂರಿಸುವ ಗಣಪತಿ ಮೂರ್ತಿ 2 ಅಡಿ ಮೀರಬಾರದು. ಜೊತೆಗೆ 4 ಜನಕ್ಕಿಂತ ಹೆಚ್ಚಿನ ಮಂದಿ ಭಾಗವಹಿಸಬಾರದು. ಅದೇ ರೀತಿ ಸಾರ್ವಜನಿಕವಾಗಿ ಕೂರಿಸುವ ಗಣಪತಿ 4 ಅಡಿಗಿಂತ ಮೀರಿರಬಾರದು ಹಾಗೂ ಗಣಪತಿ ತರಲು 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ಅಲ್ಲದೇ ಮುಂಜಾನೆ ಗಣಪತಿ ಪ್ರತಿಷ್ಠಾಪಿಸಿದರೆ ಸಂಜೆ ಕತ್ತಲು ಕಳೆಯುವುದರೊಳಗೆ ಗಣಪತಿ ವಿಜರ್ಜನೆ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.

    ರಾಜ್ಯ ಸರ್ಕಾರದ ತೀರ್ಮಾನದಂತೆ ಜಿಲ್ಲಾಡಳಿತ ತೆಗೆದುಕೊಂಡಿರುವ ತೀರ್ಮಾನಕ್ಕೆ ಎಲ್ಲಾ ಗಣಪತಿ ಸಂಘಟನೆಗಳು ಬದ್ಧರಾಗಿರಬೇಕು. ಗಣಪತಿ ಪ್ರತಿಷ್ಠಾಪಿಸಬೇಡಿ ಎಂದು ಜಿಲ್ಲಾಡಳಿತ ಹೇಳುತ್ತಿಲ್ಲ. ಯಾವುದೇ ಸಂಘಟನೆಯವರಾಗಲಿ ಕೂಡ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಪ್ರತಿಷ್ಠೆಯಾಗಿ ತೆಗೆದುಕೊಂಡರೆ ನಮ್ಮ ಜೀವಕ್ಕೆ ಆಪತ್ತು ಉಂಟಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

  • ಹಣ ತರಲು ರೂಮಿಗೆ ಹೋದ ಯುವತಿ- ಹಿಂದಿನಿಂದ ತಬ್ಬಿಕೊಂಡ ಡೆಲಿವರಿ ಬಾಯ್

    ಹಣ ತರಲು ರೂಮಿಗೆ ಹೋದ ಯುವತಿ- ಹಿಂದಿನಿಂದ ತಬ್ಬಿಕೊಂಡ ಡೆಲಿವರಿ ಬಾಯ್

    – ಬೆಂಗಳೂರಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ

    ಬೆಂಗಳೂರು: ಆರ್ಡರ್ ಮಾಡಿದ್ದ ವಸ್ತುವನ್ನು ನೀಡಲು ಬಂದಿದ್ದ ಡೆಲಿವರಿ ಬಾಯ್ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಗರುಡಾಚಾರ್ ಪಾಳ್ಯದಲ್ಲಿ ನಡೆದಿದೆ.

    ಆರೋಪಿ ಡೆಲಿವರಿ ಹುಡುಗನನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಆರ್ಡರ್ ಮಾಡಿದ್ದ ವಸ್ತು ನೀಡಲು ಬಂದಾಗ 25 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದೀಗ ಯುವತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ಡೆಲಿವರಿ ಹುಡುಗ ಅರುಣ್ ಕುಮಾರ್ ಸೋಮವಾರ ಬೆಳಗ್ಗೆ 10 ಗಂಟೆಗೆ ನಾನು ಆರ್ಡರ್ ಮಾಡಿದ್ದ ವಸ್ತುವನ್ನು ಕೊಡಲು ಬಂದಿದ್ದನು. ಕ್ಯಾಶ್ ಅನ್ ಡೆಲಿವರಿ ಆಗಿದ್ದರಿಂದ ನಾನು ಆನ್‍ಲೈನ್‍ನಲ್ಲಿ ಪಾವತಿಸಲು ಪ್ರಯತ್ನಿಸಿದೆ. ಆದರೆ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಆನ್‍ಲೈನ್ ಮೂಲಕ ಹಣ ಪಾವತಿಸಲು ಸಾಧ್ಯವಾಗಿಲ್ಲ. ಆಗ ಡೆಲಿವರಿ ಬಾಯ್ ಶೌಚಾಲಯ ಬಳಸಬಹುದೇ ಎಂದು ಕೇಳಿದ. ನಾನು ಮಾನವೀಯ ದೃಷ್ಟಿಯಿಂದ ಶೌಚಾಲಯಕ್ಕೆ ಹೋಗಲು ಅನುಮತಿ ನೀಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಆತ ಶೌಚಾಲಯದಿಂದ ಹೊರಗೆ ಬಂದಾಗ ಅಸಭ್ಯವಾಗಿ ವರ್ತಿಸಲು ಶುರು ಮಾಡಿದೆ. ಅನುಮತಿ ಇಲ್ಲದೆ ಸೋಫಾದ ಮೇಲೆ ಕುಳಿತ. ನಾನು ಇದಕ್ಕೆ ವಿರೋಧಿಸಿದೆ, ಕೊನೆಗೆ ನಾನು ಆರ್ಡರ್ ಮಾಡಿದ್ದ ವಸ್ತುವನ್ನು ಕ್ಯಾನ್ಸಲ್ ಮಾಡುತ್ತೇನೆ ಎಂದು ಹೇಳಿದೆ. ಆಗ ಡೆಲಿವರಿ ಬಾಯ್ ಹಣ ಪಾವತಿಸಲು ಒತ್ತಾಯಿಸಿದನು.

    ಕೊನೆಗೆ ನಾನು ಹಣ ತರಲು ನನ್ನ ರೂಮಿಗೆ ಹೋದೆ. ಈ ವೇಳೆ ಡೆಲಿವರಿ ಬಾಯ್ ಹಿಂದಿನಿಂದ ಬಂದು ನನ್ನನ್ನು ಬಲವಂತವಾಗಿ ತಬ್ಬಿಕೊಂಡನು. ಅಲ್ಲದೇ ಆತನ ಕಡೆಗೆ ಎಳೆದುಕೊಳ್ಳಲು ಪ್ರಯತ್ನಿಸಿದನು. ಇದರಿಂದ ಗಾಬರಿಗೊಂಡ ನಾನು ಆತನಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿಹೋದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಐಪಿಸಿಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಅರುಣ್ ಕುಮಾರ್ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ. ಆರೋಪಿಯ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ. ಶೀಘ್ರದಲ್ಲೇ ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಇಂದು ಸಂಜೆಯಿಂದ ಸೋಮವಾರದ ಬೆಳಗ್ಗೆವರೆಗೆ ಕೊಡಗು ಸಂಪೂರ್ಣ ಲಾಕ್‍ಡೌನ್

    ಇಂದು ಸಂಜೆಯಿಂದ ಸೋಮವಾರದ ಬೆಳಗ್ಗೆವರೆಗೆ ಕೊಡಗು ಸಂಪೂರ್ಣ ಲಾಕ್‍ಡೌನ್

    ಮಡಿಕೇರಿ: ಇಂದು ಸಂಜೆಯಿಂದ ಸೋಮವಾರದ ಬೆಳಗ್ಗೆವರೆಗೆ ಕೊಡಗಿನಲ್ಲಿ ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವುದಾಗಿ ಕೊಡಗಿನ ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.

    ಜಿಲ್ಲೆಗೆ ವಾರಾಂತ್ಯದಲ್ಲಿ ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಜನರು ಬರುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಸಂಜೆಯಿಂದ ಸೋಮವಾರದವರೆಗೆ ಜಿಲ್ಲಾ ಮಟ್ಟದಲ್ಲಿ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ.

    ತರಕಾರಿ, ಮೆಡಿಕಲ್ ಶಾಪ್‍ಗಳು, ಪೆಟ್ರೋಲ್ ಬಂಕ್‍ಗಳು ಸೇರಿದಂತೆ ಕಾರ್ಮಿಕರ ಅನುಕೂಲ ನೋಡಿಕೊಂಡು ಸರ್ಕಾರಿ ಆಹಾರ ಮಳಿಗೆಗಳಿಗೆ ಮಾತ್ರ ವಿನಾಯಿತಿ ಕೊಡಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಸ್ತಬ್ಧವಾಗಲಿದ್ದು, ಮೆಡಿಕಲ್, ಆಸ್ಪತ್ರೆ ಒಳಗೊಂಡಂತೆ ತುರ್ತು ಸೇವೆಗಳಿಗೆ ಮಾತ್ರ ಆಟೋ ಇತ್ಯಾದಿ ವಾಹನಗಳನ್ನು ಬಳಸಬಹುದು ಎಂದು ಅನೀಸ್ ಕೆ.ಜಾಯ್ ಅವರು ತಿಳಿಸಿದ್ದಾರೆ.

    ಈಗಾಗಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿದ್ದು, ಇಲ್ಲಿಗೆ ಹಾಜರಾಗುವ ಶಿಕ್ಷಕರಿಗೆ ಸ್ವಂತ ವಾಹನ ಅಥವಾ ನಿಗದಿಪಡಿಸಿರುವ ಬಸ್‍ಗಳಲ್ಲಿ ಬರುವಂತೆ ಸೂಚಿಸಿದ್ದೇವೆ. ಕರ್ತವ್ಯಕ್ಕೆ ಹಾಜರಾಗುವಾಗ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಇದೇ ನಿಯಮಗಳನ್ನು ಜುಲೈ 31ರವಗೆ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಸಿನಿಮಾ, ಟಿವಿ ಚಿತ್ರೀಕರಣಕ್ಕೆ ಅವಕಾಶ

    ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಸಿನಿಮಾ, ಟಿವಿ ಚಿತ್ರೀಕರಣಕ್ಕೆ ಅವಕಾಶ

    – ಫೋಸ್ಟ್ ಪ್ರೊಡಕ್ಷನ್‍ಗೂ ಅವಕಾಶ ನೀಡಿದ ಸರ್ಕಾರ

    ಬೆಂಗಳೂರು: ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಸಿನಿಮಾ ಶೂಟಿಂಗ್ ಮತ್ತು ಟಿವಿ ಕಾರ್ಯಕ್ರಮ ಹಾಗೂ ಧಾರವಾಹಿ ಶೂಟಿಂಗ್ ಮಾಡಲು ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

    ಈ ಹಿಂದೆ ದೇಶದಲ್ಲಿ ಕೊರೊನಾ ವೈರಸ್ ಭೀತಿ ಜಾಸ್ತಿಯಾದ ಕಾರಣ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು. ಹೀಗಾಗಿ ಶೂಟಿಂಗ್ ಕೆಸಲವೆಲ್ಲ ನಿಂತು ಹೋಗಿ ನಟ-ನಟಿಯರು ಮನೆಯಲ್ಲೇ ಇದ್ದರು. ನಂತರ ಲಾಕ್‍ಡೌನ್ ಸಡಿಲಿಕೆ ಮಾಡಿದರೂ ಚಿತ್ರೀಕರಣ ಮಾಡಲು ಅನುಮತಿ ನೀಡಿರಲಿಲ್ಲ. ಸ್ವಲ್ಪ ದಿನ ಬಿಟ್ಟು ಒಳಾಂಗಣ ಶೂಟಿಂಗ್‍ಗೆ ಅನುಮತಿ ನೀಡಲಾಗಿತ್ತು.

    ಈಗ ಸಂಪೂರ್ಣವಾಗಿ ಶೂಟಿಂಗ್ ಮಾಡಲು ಅನುಮತಿ ನೀಡಿರುವ ಸರ್ಕಾರ, ಫೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ಅವಕಾಶ ನೀಡಿ ಆದೇಶ ಹೊರಡಿಸಿದೆ. ಲಾಕ್‍ಡೌನ್ ಕಾರಣದಿಂದ ಈಗಾಗಲೇ ಅರ್ಧದಲ್ಲಿಯೇ ಸ್ಥಗಿತಗೊಂಡ ಎಲ್ಲ ಚಲನಚಿತ್ರ ಹಾಗೂ ಟಿವಿ ಕೆಲಸಗಳು ಮುಂದುವರಿಸಲು ಅನುಮತಿ ನೀಡಿದೆ. ಜೊತೆಗೆ ಚಿತ್ರೀಕರಣ ಪೂರ್ಣಗೊಳಿಸಿದ ನಂತರ ಫೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳಲು ತಿಳಿಸಿದೆ.

    ಸಿಸಿಮಾ ಚಿತ್ರೀರಕಣವಾಗಲಿ ಹಾಗೂ ಟಿವಿ ಕಾರ್ಯಕ್ರಮದ ಶೂಟಿಂಗ್ ಆಗಲಿ, ಅಲ್ಲಿ ಕೋವಿಡ್-19 ಸಂಬಂಧ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿರುವ ಪ್ರಮಾಣಿಕ ಕಾರ್ಯವಿಧಾನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಈ ಷರತ್ತುಗಳನ್ನು ಗಮನದಲ್ಲಿ ಇಟ್ಟುಕೊಂಡು ಶೂಟಿಂಗ್ ಆರಂಭ ಮಾಡಲು ಸರ್ಕಾರ ತಿಳಿಸಿದೆ.

    ಶೂಟಿಂಗ್ ಕಾರ್ಯಕ್ರಮಗಳು ನಿಂತು ಹೋದ ಬಳಿಕ ಅಲ್ಲಿ ಕೆಲಸ ಮಾಡುವ ನೌಕರರ ವರ್ಗ ಸಖತ್ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕೆಲ ನಟ-ನಟಿಯರು ಅವರಿಗೆ ಸಹಾಯ ಮಾಡಿದ್ದರು. ಜೊತೆಗೆ ಹಲವು ಬಾರಿ ಶೂಟಿಂಗ್ ಆರಂಭಿಸುವಂತೆ ಕಾರ್ಮಿಕರು ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದರು. ಈಗ ಮತ್ತೆ ಶೂಟಿಂಗ್ ಆರಂಭವಾಗಿರುವುದಕ್ಕೆ ಕಾರ್ಮಿಕ ವರ್ಗ ಸಂತಸ ವ್ಯಕ್ತಪಡಿಸಿದೆ.

  • ಕೊರೊನಾ ಎಫೆಕ್ಟ್- ತಿರುಪತಿ ಲಡ್ಡಿನ ಬೆಲೆ ಇಳಿಕೆ

    ಕೊರೊನಾ ಎಫೆಕ್ಟ್- ತಿರುಪತಿ ಲಡ್ಡಿನ ಬೆಲೆ ಇಳಿಕೆ

    ಬೆಂಗಳೂರು: ಕೊರೊನಾ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಲಾಕ್‍ಡೌನ್‍ನಿಂದ ತಿಮ್ಮಪ್ಪನ ಲಡ್ಡು ಪ್ರಸಾದದ ಬೆಲೆ ಕಡಿಮೆಯಾಗಿದೆ.

    ಲಾಕ್‍ಡೌನ್ ಇದ್ದರೂ ಗ್ರೀನ್ ಝೋನ್ ವಾರ್ಡ್ ಗಳಲ್ಲಿ ರಿಯಾಯಿತಿ ಸಿಕ್ಕಿದೆ. ಆದರೂ ದೇವಾಲಯಗಳಲ್ಲಿ ಜನ ಸಮೂಹ ಸೇರಲು ಅವಕಾಶ ಇಲ್ಲ. ಹೀಗಾಗಿ ದೇವಾಲಯಗಳಲ್ಲಿ ಈಗ ಪ್ರಸಾದ ದರ ಕಡಿಮೆ ದರಕ್ಕೆ ಸಿಗುತ್ತಿದೆ. ಅದರಲ್ಲೂ ತಿರುಪತಿ ಲಡ್ಡು ಪ್ರಸಾದ ಯಾರಿಗೆ ಇಷ್ಟ ಇಲ್ಲ ಹೇಳಿ ಈ ಲಡ್ಡು ಎಲ್ಲರ ಅಚ್ಚುಮೆಚ್ಚು. ಈಗ ಈ ಲಡ್ಡುವಿನ ಬೆಲೆ ಕಡಿಮೆಯಾಗಿದೆ.

    ಈ ಬಗ್ಗೆ ಅಧಿಕೃತವಾಗಿ ಟಿಟಿಡಿ ಮೂಲಗಳೇ ಮಾಹಿತಿಯನ್ನು ಹೊರಹಾಕಿವೆ. ಈ ಪ್ರಕಾರ ಬೆಂಗಳೂರಿನಲ್ಲೇ 50 ರೂ. ಇದ್ದ ಒಂದು ಲಡ್ಡು, ಈಗ 25 ರೂ. ಗೆ ಸಿಗುತ್ತದೆ. ಇದು ಲಾಕ್‍ಡೌನ್ ಸಡಿಲಿಕೆಯ ಎಫೆಕ್ಟ್ ಆಗಿದ್ದು, ಲಾಕ್‍ಡೌನ್ ಮುನ್ನ ಲಡ್ಡು ಪ್ರಸಾದಕ್ಕಾಗಿ ಬೇಕಾದ ಎಲ್ಲ ಸಾಮಗ್ರಿಗಳ ಸಂಗ್ರಹವಾಗಿದೆ. ಈಗ ಕಾಲಕ್ರಮೇಣ ವಸ್ತುಗಳು ಕೆಡುತ್ತಿದೆ. ಜನರು ದೇವಾಲಯಕ್ಕೆ ಕಡಿಮೆಯಾಗಿದ್ದಾರೆ. ಹೀಗಾಗಿ ನಷ್ಟ ತಪ್ಪಿಸಲು ಈ ಪ್ಲಾನ್ ನಡೆದಿದೆ. ಈ ಪ್ರಕಾರ ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಲಡ್ಡು ಕಡಿಮೆ ದರಕ್ಕೆ ಸಿಗಲಿದೆ.

    ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ವೈ.ವಿ ಸುಬ್ಬಾ ರೆಡ್ಡಿ, ಈ ಕೊರೊನಾ ಲಾಕ್‍ಡೌನ್‍ನಿಂದ ನಾವು ಯಾವಾಗ ಭಕ್ತರಿಗೆ ದೇವಸ್ಥಾನದಲ್ಲಿ ದರ್ಶನ ಕಲ್ಪಿಸಿಕೊಡುತ್ತೇವೆ ಎಂದು ನಮಗೇ ತಿಳಿದಿಲ್ಲ. ಹೀಗಾಗಿ ಮನವಿ ಮಾಡಿಕೊಂಡ ಭಕ್ತರಿಗಾಗಿ ದೇವರ ಪ್ರಸಾದವನ್ನು ತಲುಪಿಸುವ ಕೆಲಸ ಮಾಡಬೇಕಿದೆ. ಆದ್ದರಿಂದ ಈ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದ್ದಾರೆ.

    ಇಂಡಿಯಾ ಪೋಸ್ಟ್ ಮತ್ತು ಕೊರಿಯರ್ ಸೇವೆಗಳು ಇನ್ನೂ ಆರಂಭವಾಗಿಲ್ಲ. ಈ ಕಾರಣದಿಂದ ನಾವು ಕೊರಿಯರ್ ಮಾಡಲು ಆಗುವುದಿಲ್ಲ. ಹೀಗಾಗಿ ನಮ್ಮ ತಿರುಮಲ ಅಡುಗೆ ಮನೆಯಲ್ಲಿ ತಯಾರದ ಲಡ್ಡುವನ್ನು ವಿವಿಧ ನಗರಗಳಲ್ಲಿ ಇರುವ ನಮ್ಮ ಟ್ರಸ್ಟಿನ ಕೇಂದ್ರಗಳಿಗೆ ಕಳುಹಿಸಿರುತ್ತೇವೆ. ಪ್ರಸಾದ ಬೇಕಾದ ಭಕ್ತರು ಅಲ್ಲಿಗೆ ಬಂದು ತೆಗೆದುಕೊಂಡು ಹೋಗಬೇಕು ಎಂದು ಸುಬ್ಬಾ ರೆಡ್ಡಿ ಮಾಹಿತಿ ನೀಡಿದ್ದಾರೆ.

    ಲಡ್ಡುವನ್ನು ಆರ್ಡರ್ ಮಾಡಲು ಭಕ್ತರು ತಿರುಮಲ ದೇವಸ್ಥಾನದ ಉಪ ಕಾರ್ಯನಿರ್ವಾಹಕ ಅಧಿಕಾರಿ ಹರಿಂದ್ರ ನಾಥ್ ಅವರಿಗೆ (9849575952) ಮತ್ತು ಪೊಟು ಪೀಷ್ಕರ್ ಶ್ರೀನಿವಾಸನ್ ಅವರಿಗೆ (9701092777) ಕರೆ ಮಾಡಬಹುದು ಎಂದು ತಿರುಮಲದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮರೆಡ್ಡಿ ತಿಳಿಸಿದ್ದಾರೆ. ಜೊತೆಗೆ ನಾವು ಪ್ರತಿದಿನ 3-4 ಲಕ್ಷ ಲಾಡುಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದ್ದೇವೆ. ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ಹೊರತುಪಡಿಸಿ ಆಂಧ್ರಪ್ರದೇಶದ 13 ಜಿಲ್ಲೆಯಲ್ಲಿರುವ ಕೇಂದ್ರಗಳಿಗೆ ಲಡ್ಡುವನ್ನು ಕಳುಹಿಸಲಾಗುವುದು ಎಂದರು.

  • ಡೆಲಿವರಿ ಬಾಯ್ ಮುಸ್ಲಿಂ ಎಂದು ದಿನಸಿ ಸಾಮಗ್ರಿ ನಿರಾಕರಿಸಿದ ವ್ಯಕ್ತಿ ಜೈಲು ಸೇರಿದ

    ಡೆಲಿವರಿ ಬಾಯ್ ಮುಸ್ಲಿಂ ಎಂದು ದಿನಸಿ ಸಾಮಗ್ರಿ ನಿರಾಕರಿಸಿದ ವ್ಯಕ್ತಿ ಜೈಲು ಸೇರಿದ

    – ಪತ್ನಿ ಪಡೆದಿದ್ದ ಡೆಲಿವರಿ ವಾಪಸ್ ಕೊಡು ಎಂದ
    – ವಿಡಿಯೋ ಎಲ್ಲೆಡೆ ವೈರಲ್

    ಮುಂಬೈ: ಕೊರೊನಾದ ಹಾವಳಿಗೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ಸಂದರ್ಭದಲ್ಲಿ ಊಟ ಸಿಗದೇ ಹಲವಾರು ಮಂದಿ ಕಷ್ಟಪಡುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮುಂಬೈನಲ್ಲಿ 51 ವರ್ಷದ ವ್ಯಕ್ತಿಯೋರ್ವ ಆನ್‍ಲೈನ್ ಅಲ್ಲಿ ಆರ್ಡರ್ ಮಾಡಿದ್ದ ದಿನಸಿ ಸಾಮಗ್ರಿಗಳನ್ನು ಮನೆಗೆ ಡೆಲಿವರಿ ಮಾಡಿದ ಸಿಬ್ಬಂದಿ ಮುಸ್ಲಿಂ ಎಂಬ ಕಾರಣಕ್ಕೆ ಅದನ್ನು ನಿರಾಕರಿಸಿ, ಈಗ ಜೈಲು ಪಾಲಾಗಿದ್ದಾನೆ.

    ಮುಂಬೈನ ಮೀರಾ ರಸ್ತೆಯಲ್ಲಿರುವ ಸೃಷ್ಟಿ ಕಾಂಪ್ಲೆಕ್ಸ್ ನ ನಿವಾಸಿ ಆನ್‍ಲೈನ್‍ನಲ್ಲಿ ಮಂಗಳವಾರ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದನು. ಹೀಗಾಗಿ ಅದನ್ನು 32 ವರ್ಷದ ಡೆಲಿವರಿ ಬಾಯ್ ಮನೆಗೆ ತಂದು ತಲುಪಿಸಿದ್ದನು. ಈ ವೇಳೆ ಆರೋಪಿಯ ಪತ್ನಿ ಸಾಮಗ್ರಿಗಳನ್ನು ಪಡೆದುಕೊಂಡು ವಾಪಸ್ ಹೋಗುವಾದ ಆರೋಪಿ ಡೆಲಿವರಿ ಬಾಯ್ ಹೆಸರನ್ನು ಕೇಳಿದ್ದಾನೆ. ಆಗ ಆತ ಮುಸ್ಲಿಂ ಎಂದು ಗೊತ್ತಾದ ತಕ್ಷಣ ಡೆಲಿವರಿ ನೀಡಿದ್ದ ಸಾಮಗ್ರಿಗಳನ್ನು ವಾಪಸ್ ಆತನಿಗೆ ಕೊಡು ನಮಗೆ ಇದು ಬೇಡ ಎಂದು ಆರೋಪಿ ಪತ್ನಿಗೆ ಹೇಳಿದ್ದಾನೆ.

    ಈ ದೃಶ್ಯವನ್ನು ಡೆಲಿವರಿ ಬಾಯ್ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಆರೋಪಿ ಹೇಗೆ ಡೆಲಿವರಿ ಬಾಯ್ ಜೊತೆ ಅಮಾನವೀಯವಾಗಿ ವರ್ತಿಸಿದ್ದಾನೆ ಎಂಬುದು ಸೆರೆಯಾಗಿದೆ. ನಾವು ಅಲ್ಪಸಂಖ್ಯಾತ ಸಮುದಾಯದವರಿಂದ ಡೆಲಿವರಿ ಪಡೆಯಲ್ಲ ಎಂದು ಆರೋಪಿ ಅವಮಾನಿಸಿದ್ದಾನೆ.

    ದೇಶ ಇಂತಹ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲೂ ಜನರು ಜಾತಿ, ಧರ್ಮ ಎನ್ನುತ್ತಿರೋದು ನಿಜಕ್ಕೂ ಶಾಕ್ ಆಗುತ್ತೆ. ನಾನು ನನ್ನ ಜೀವವನ್ನು ಪಣಕ್ಕಿಟ್ಟು ದಿನಸಿ ಸಾಮಗ್ರಿಗಳನ್ನು, ಆಹಾರಗಳನ್ನು ಡೆಲಿವರಿ ಮಾಡುತ್ತಿದ್ದೇನೆ. ಆದರೂ ಜನರು ಯಾಕೆ ಹೀಗೆ ಮಾಡುತ್ತಿದ್ದಾರೆ? ನಾನು ನಡೆದ ಘಟನೆ ಬಗ್ಗೆ ಮನೆಮಂದಿ ಬಳಿ ಹೇಳಿದೆ. ನಿನ್ನ ಜೊತೆ ನಡೆದಿದ್ದು ತಪ್ಪು, ಪೊಲೀಸರಿಗೆ ದೂರು ನೀಡು ಎಂದು ಅವರು ಹೇಳಿದರು ಅದಕ್ಕೆ ದೂರು ನೀಡಿದೆ ಎಂದು ಡೆಲಿವರಿ ಬಾಯ್ ಅಳಲನ್ನು ತೋಡಿಕೊಂಡಿದ್ದಾನೆ.

    ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಡೆಲಿವರಿ ಬಾಯ್ ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎಲ್ಲಾ ನಿಯಮಗಳನ್ನು ಪಾಲಿಸಿಯೇ ಡೆಲಿವರಿ ನೀಡಿದ್ದನು. ಆದರೂ ಜಾತಿ, ಧರ್ಮದ ಆಧಾರದ ಮೇಲೆ ಆತ ನೀಡಿದ್ದ ಡೆಲಿವರಿಯನ್ನು ನಿರಾಕರಿಸಲಾಗಿದೆ. ಹೀಗಾಗಿ ಆರೋಪಿಯನ್ನು ನಾವು ಬಂಧಿಸಿದ್ದೇವೆ. ಧಾರ್ಮಿಕ ಭಾವನೆ ಹಾಗೂ ನಂಬಿಕೆಗಳಿಗೆ ಧಕ್ಕೆ ಬರುವಂತೆ ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾನೆ ಎಂದು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.