Tag: Opration kamala

  • ಆಪರೇಷನ್ ದಕ್ಷಿಣ್ ಮೂಲಕ ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣವೇ ಬಿಜೆಪಿ ಗುರಿ: HDK

    ಆಪರೇಷನ್ ದಕ್ಷಿಣ್ ಮೂಲಕ ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣವೇ ಬಿಜೆಪಿ ಗುರಿ: HDK

    ಬೆಂಗಳೂರು: ಆಪರೇಷನ್ ದಕ್ಷಿಣ್ ಎಂಬ ಸ್ಲೋಗನ್ ಮೂಲಕ ಬಿಜೆಪಿ ಪಕ್ಷವು ಪ್ರಾದೇಶಿಕ ಪಕ್ಷಗಳನ್ನು ಸಂಪೂರ್ಣವಾಗಿ ಮೂಲೋತ್ಪಾಟನೆ ಮಾಡಿ, ಪ್ರತಿಪಕ್ಷ ಮತ್ತು ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

    ಹೈದರಾಬಾದ್ ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಆಪರೇಷನ್ ದಕ್ಷಿಣ್ ಹೆಸರಿನಲ್ಲಿ ದಕ್ಷಿಣ ಭಾರತದಲ್ಲಿ ತನ್ನ ನೆಲೆಯನ್ನು ವಿಸ್ತರಿಸುವ ಬಿಜೆಪಿ ಆಕ್ರಮಣಶೀಲತೆಯನ್ನು ಮಾಜಿ ಸಿಎಂ ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಮುಖ್ಯವಾಗಿ ಜೆಡಿಎಸ್ ಬಗ್ಗೆ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

    ಜೆಡಿಎಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲವೆಂಬ ಸಿ.ಟಿ.ರವಿ ಅವರ ಹೇಳಿಕೆಗೆ ಸಿಡಿಮಿಡಿಗೊಂಡ ಹೆಚ್‌ಡಿಕೆ, ರವಿ ಅವರೇ, ಆಂತರಿಕ ಪ್ರಜಾಪ್ರಭುತ್ವ ಎಂದರೆ ನರೇಂದ್ರ ಮೋದಿ ಮುಂದೆ ಸತ್ತಸೊಂಟದವರಂತೆ ನಡುಬಗ್ಗಿಸಿ ತಲೆ ಅಲ್ಲಾಡಿಸುವುದಾ? ಜೀ-ಜೀ ಎನ್ನುತ್ತಾ ಜೀ ಹುಜೂರ್ ಎನ್ನುವುದಾ? 25 ಸಂಸದರ ಯೋಗ್ಯತೆ ಏನು? ಅವರಿಗೆಷ್ಟು ಸ್ವಾತಂತ್ರ‍್ಯ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ: ಹರ್ಷನ ತಾಯಿ

    ಆಪರೇಷನ್ ದಕ್ಷಿಣ್ ಬಗ್ಗೆ ಕಿಡಿಕಾರಿರುವ ಅವರು, ಇದು ಬಿಜೆಪಿಯ ಹೊಸ ಸ್ಲೋಗನ್. ಹೈದರಾಬಾದ್ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಭಾವನಾನ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು, ಜನರ ಮನಸ್ಸುಗಳನ್ನು ಒಡೆದು ರಾವಣ ರಾಜಕೀಯದ ವಿನಾಶಕಾರಿ ದಾರಿಗೆ ಹಿಡನ್ ಅಜೆಂಡಾ ಸಿದ್ಧ ಮಾಡಲಾಯಿತಾ? ಹೇಳಿ ಮಾನ್ಯ ಸಿ.ಟಿ.ರವಿ ಯವರೇ? ಎಂದು ವ್ಯಂಗ್ಯವಾಡಿದ್ದಾರೆ.

    ನೆಮ್ಮದಿಯ ಸಮಾಜಕ್ಕೆ ಕೋಮುವಿಷ ಪ್ರಾಶಣ ಮಾಡುವ ಇಂಜೆಕ್ಷನ್. ಧರ್ಮ, ದೇವರು, ಜಾತಿ, ಭಾಷೆ, ಆಚಾರ, ಆಹಾರ, ವ್ಯಾಪಾರಗಳನ್ನು ಎಳೆತಂದು, ಅಸಹಿಷ್ಣುತೆ ಸೃಷ್ಟಿಸಿ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆದು ಹಾಕುವುದಾ? ಕರ್ನಾಟಕದ ನಂತರ ನಿಮ್ಮ ಮುಂದಿನ ಗುರಿ ದಕ್ಷಿಣ ಭಾರತ. ಹೌದಲ್ಲವೇ ಸಿ.ಟಿ.ರವಿಯವರೇ? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಫೇಕ್ ವೀಡಿಯೋ ವೈರಲ್ – ಬಿಜೆಪಿ ಶಾಸಕರ ವಿರುದ್ಧ ಎಫ್‍ಐಆರ್

    ಆಪರೇಷನ್ ದಕ್ಷಿಣ್ ಅಂದರೆ, ಆಪರೇಷನ್ ಕಮಲದ ರಾಷ್ಟ್ರೀಕರಣ ಮತ್ತು ತುಷ್ಠೀಕರಣ. ಶಾಸಕರ ಖರೀದಿ, ಕುದುರೆ ವ್ಯಾಪಾರ, ಕರ್ನಾಟಕದ ನಂತರ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೂ ವಿಸ್ತರಿಸುವ ಡೋಂಗಿ ರಾಷ್ಟ್ರಪ್ರೇಮಿಗಳ ರಾಜಕಾರಣ. ದಕ್ಷಿಣದ ಮೇಲೆ ಆಪರೇಷನ್ ಕಮಲದ ದುರಾಕ್ರಮಣ ಹೌದಲ್ಲವೇ ಸಿ.ಟಿ.ರವಿಯವರೇ? ಎಂದು ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    HDK

    ಆಪರೇಷನ್ ಕಮಲಕ್ಕೆ ಬ್ರ‍್ಯಾಂಡ್ ಅಂಬಾಸಿಡರ್ ಒಬ್ಬರು ಬೇಕಲ್ಲವೇ? ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರನ್ನೇ ಬ್ರ‍್ಯಾಂಡ್ ರಾಯಭಾರಿ ಮಾಡುತ್ತೀರಾ? ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಇದೂ ಚರ್ಚೆಗೆ ಬಂತಾ? ಮೋದಿ ಸಾಹೇಬರು ಒಪ್ಪಿದರಾ? ಎಷ್ಟಾದರೂ ನಿಮ್ಮ ಅಮಿತೋತ್ಸಾಹಕ್ಕೆ ಆಪರೇಷನ್ ಕಮಲವೇ ಕಾರಣ ಅಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮುಂಚೆನೇ ಹೇಳಿದ್ದೆ, ಯಾರು ಎಷ್ಟೇ ದೊಡ್ಡವರಿದ್ರೂ ಕ್ರಮ ತಗೋತೀವಿ ಅಂತ: ಸಿಎಂ

    ಆಪರೇಷನ್ ದಕ್ಷಿಣ್ ಅಂದರೆ, ಬಿಜೆಪಿ ಪರಿವಾರ ರಾಜಕಾರಣವನ್ನು ಮತ್ತಷ್ಟು ಬಲಪಡಿಸುವುದಾ? ಆಗ ಕಾಂಗ್ರೆಸ್ ಮುಕ್ತ ಭಾರತ ಈಗ ಪರಿವಾರಮುಕ್ತ ಭಾರತ ನಂತರ ಪ್ರತಿಪಕ್ಷ ಮುಕ್ತ ಭಾರತ ಮುಂದೆ ಸಂಪೂರ್ಣ ಪ್ರಜಾಪ್ರಭುತ್ವ ಮುಕ್ತ ಭಾರತ್ ನಿರ್ಮಾಣ ಇದಲ್ಲವೇ ನಿಮ್ಮ ಬಿಜೆಪಿಯ ಭವ್ಯಗುರಿ? ಉತ್ತರಿಸಿ ಎಂದು ಕುಮಾರಸ್ವಾಮಿ ಕಾಲೆಳೆದಿದ್ದಾರೆ.

    ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಶಕ್ತಿ. ಇಲ್ಲಿ ಹೆಜ್ಜೆ ಇಡಲು ಬಿಜೆಪಿಗೆ ಆಗುತ್ತಿಲ್ಲ. ಆಪರೇಷನ್ ಕಮಲದಿಂದ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರಿ. ಒಡಿಶಾ, ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳದಲ್ಲಿ ನಿಮ್ಮ ಬೇಳೆ ಬೇಯಲಿಲ್ಲ. ಅದಕ್ಕೀಗ `ಪರಿವಾರ ಮುಕ್ತ ರಾಜಕೀಯ’ ಎಂದು ರಾಗ ತೆಗೆಯುತ್ತಿದ್ದೀರಿ. ಸತ್ಯ ಹೇಳಿ ಸಿ.ಟಿ.ರವಿಯವರೇ ಎಂದು ಕಿಡಿಕಾರಿದ್ದಾರೆ.

    ಪ್ರಾದೇಶಿಕ ಪಕ್ಷಗಳನ್ನು ಎದುರಿಸಲಾಗದ ಬಿಜೆಪಿ, ಈಗ ಪರಿವಾರ ಜಪ ಮಾಡುತ್ತಿದೆ. ಅಯ್ಯೋ ಪಾಪ ಮಹಾರಾಷ್ಟçದಲ್ಲಿ ಆಪರೇಷನ್ ಕಮಲ ಮಾಡಿ ನೀವು ಮುಖ್ಯಮಂತ್ರಿ ಮಾಡಿದ ಏಕನಾಥ್ ಶಿಂಧೆ ಅವರ `ಏಕಪರಿವಾರ ಪಾಲಿಟಿಕ್ಸ್’ ಗೊತ್ತಿರಲಿಲ್ಲವೇ? ಬೋಧನೆ ಒಂದು ಬೋಜನ ಇನ್ನೊಂದು ಛೇ, ಹೇಸಿಗೆ. ಯಡಿಯೂರಪ್ಪ ಮತ್ತು ಸನ್ಸ್, ರವಿ ಸುಬ್ರಹ್ಮಣ್ಯ-ತೇಜಸ್ವಿಸೂರ್ಯ, ಅಶೋಕ್-ರವಿ, ಸೋಮಣ್ಣ-ಅರುಣ್ ಸೋಮಣ್ಣ, ಲಿಂಬಾಳಿ-ರಘು, ವಿಶ್ವನಾಥ್-ವಾಣಿ ವಿಶ್ವನಾಥ್, ಶೆಟ್ಟರ್-ಪ್ರದೀಪ್ ಶೆಟ್ಟರ್, ನಿರಾಣಿ-ಹನುಮಂತ ನಿರಾಣಿ, ಜಿ.ಎಸ್.ಬಸವರಾಜು-ಜ್ಯೋತಿ ಗಣೇಶ್ ಮತ್ತು ಜಾರಕಿಹೊಳಿ, ಕತ್ತಿ, ಅಂಗಡಿ, ಉದಾಸಿ ಕುಟುಂಬಗಳು.. ಇದೆಲ್ಲಾ ಏನು? ಎಂದು ಅವರು ಕೇಳಿದ್ದಾರೆ.

    ಪರಿವಾರ ರಾಜಕಾರಣಕ್ಕೆ ಬಿಜೆಪಿ ಅತೀತವಲ್ಲ. ರಾಜ್ಯದ ಲೆಕ್ಕ ಕೊಟ್ಟಿದ್ದೇನೆ. ಭಾರತದ ಪಟ್ಟಿ ಕೊಡಲೇ? ಅಬ್ಬರ ಜಾಸ್ತಿ, ಅಭಿವೃದ್ಧಿ ನಾಸ್ತಿ. ಇದು ಬಿಜೆಪಿ ನೀತಿ. ಬಿಜೆಪಿ ಪಕ್ಷದ್ದು ಆಪರೇಷನ್ ದಕ್ಷಿಣ್ ಅಲ್ಲ, ಆ ಬಿಜೆಪಿ ಅಸ್ತಿತ್ವಕ್ಕೇ ಆಪರೇಷನ್ ಆಗುವ ಕಾಲ ಹತ್ತಿರದಲ್ಲೇ ಇದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಪರೇಷನ್ ಕಮಲ ಅಂದ್ರೆ ಕುರಿ, ದನಗಳನ್ನು ಖರೀದಿಸಿದಂತೆ: ಬಿಎಸ್‍ವೈಗೆ ಸಿದ್ದರಾಮಯ್ಯ ಟಾಂಗ್

    ಆಪರೇಷನ್ ಕಮಲ ಅಂದ್ರೆ ಕುರಿ, ದನಗಳನ್ನು ಖರೀದಿಸಿದಂತೆ: ಬಿಎಸ್‍ವೈಗೆ ಸಿದ್ದರಾಮಯ್ಯ ಟಾಂಗ್

    -ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಬರೋದು ಬೇಡ

    ವಿಜಯಪುರ: ಆಪರೇಷನ್ ಕಮಲ ಅಂದರೆ ಕುರಿ, ದನ, ಎಮ್ಮೆಗಳನ್ನು ದುಡ್ಡು ಕೊಟ್ಟು ಖರೀದಿಸಿದಂತೆ. ಯಾವ ಶಾಸಕರು ಮಾರಾಟಕ್ಕೆ ಇರುತ್ತಾರೆ ಅವರನ್ನು ಖರೀದಿಸಿ ಮುಂದಿನ ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಗೆಲ್ಲಿಸುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕಾಲೆಳೆದ್ದಿದ್ದಾರೆ.

    ಆಲಮಟ್ಟಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ಬಿ.ಎಸ್.ಯಡಿಯೂರಪ್ಪ 20 ರಿಂದ 25 ಕೋಟಿ ರೂ. ನೀಡಿ ಶಾಸಕರನ್ನು ಖರೀದಿಸಿ, ಸರ್ಕಾರ ರಚಿಸಲು ಮುಂದಾಗಿದ್ದರು. ಹೀಗಾಗಿ ಮೊದಲ ಅನೈತಿಕ ರಾಜಕಾರಣ ಮಾಡಿದ್ದು ಅವರೇ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ಅನೇಕ ಮುಖಂಡರು ಕಾಂಗ್ರೆಸ್ಸಿಗೆ ಬರುವುತ್ತೇವೆ ಎಂದು ಕೇಳುತ್ತಿದ್ದಾರೆ. ಆದರೆ ಅವರು ಬರುವುದು ಬೇಡ ಅಂತಾ ಅವರಿಗೆ ಅಲ್ಲೆ ಇರುವಂತೆ ನಾವೇ ಹೇಳಿದ್ದೇವೆ ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದ ಅವರು, ರಾಜ್ಯದ ಜನರು ಸಮ್ಮಿಶ್ರ ಸರ್ಕಾರ ರಚನೆಯಾಗಲಿ ಅಂತಾ ಜನರು ಮತ ಹಾಕಿದ್ದಾರೆ. ಅದರಂತೆ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ ಎಂದರು.

    ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಪ್ರತ್ಯೇಕ ಮಾಡುವುದು ಸರಿಯಲ್ಲ. ರಾಜ್ಯವನ್ನು ನಾನು ಅಖಂಡ ಕರ್ನಾಟಕವಾಗಿ ನೋಡಲು ಬಯಸುತ್ತೇನೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತಾಯಿಸಿ ನಡೆಸುವ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ಆದರೆ ಪ್ರತ್ಯೇಕ ರಾಜ್ಯ ಬೇಡಿಕೆಗೆ ನನ್ನ ವಿರೋಧವಿದೆ ಎಂದು ಹೇಳಿದರು.