ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಕುರಿತು ಕೆಲವು ವಿರೋಧ ಪಕ್ಷಗಳು ಪಾಕಿಸ್ತಾನದ ರೀತಿಯಲ್ಲೇ ಮಾತನಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಪೌರತ್ವ ತಿದ್ದುಪಡಿ ಮಸೂದೆ ಕುರಿತು ಕೆಲವು ವಿರೋಧ ಪಕ್ಷಗಳು ಪಾಕಿಸ್ತಾನದ ರೀತಿಯಲ್ಲೇ ಮಾತನಾಡುತ್ತಿವೆ. ಆದರೆ ಇದು ಐತಿಹಾಸಿಕ ನಿರ್ಧಾರವಾಗಿದ್ದು, ಪೌರತ್ವ ತಿದ್ದುಪಡಿ ಮಸೂದೆ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ನಿರ್ಧಾರವಾಗಿದೆ ಎಂದು ಬಣ್ಣಿಸಿದ್ದಾರೆ.
ಧಾರ್ಮಿಕ ಕಿರುಕುಳ ಅನುಭವಿಸುತ್ತಿರುವವರಿಗೆ ಈ ಮಸೂದೆಯಿಂದ ಶಾಶ್ವತ ಪರಿಹಾರ ಸಿಗಲಿದೆ. ಆದರೆ ಈ ವಿಚಾರವಾಗಿ ಕೆಲ ವಿರೋಧ ಪಕ್ಷಗಳು ಸುಖಾಸುಮ್ಮನೆ ಗದ್ದಲ ಎಬ್ಬಿಸುವ ಮೂಲಕ ಪಾಕಿಸ್ತಾನ ರೀತಿಯಲ್ಲಿ ಮಾತನಾಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಯನ್ನು ಡಿಸೆಂಬರ್ 9 ರಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದು, 311 ಮತಗಳಿಂದ ಪಾಸ್ ಸಹ ಆಗಿದೆ. ಆದರೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಭಾರೀ ಗದ್ದಲ ಎಬ್ಬಿಸಿದ್ದವು. ಈ ವೇಳೆ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದಿನ್ ಓವೈಸಿ ಮಸೂದೆಯ ಪ್ರತಿಯನ್ನೇ ಹರಿದು ಹಾಕುವ ಮೂಲಕ ತೀವ್ರ ಚರ್ಚೆಗೆ ಕಾರಣರಾಗಿದ್ದರು.
ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ, ಇದು ಅಲ್ಪಸಂಖ್ಯಾತ ವಿರೋಧಿ ಎಂದು ಕರೆದರು. ಆರೋಪವನ್ನು ತಳ್ಳಿ ಹಾಕಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಮಸೂದೆಯು ಶೇ.0.001 ರಷ್ಟು ಕೂಡ ದೇಶದ ಅಲ್ಪಸಂಖ್ಯಾತ ಸಮುದಾಯದ ವಿರುದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಆರು ದಶಕಗಳ ಹಳೆಯ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವುದು ತಿದ್ದುಪಡಿಯ ಉದ್ದೇಶವಾಗಿದೆ.

ವಿಪಕ್ಷಗಳಿಗೆ ಶಾ ಸುದೀರ್ಘ ಉತ್ತರ:
ವಿಪಕ್ಷಗಳ ಆರೋಪಗಳಿಗೆ ಅಮಿತ್ ಶಾ ಉತ್ತರಿಸಲು ಆರಂಭಿಸಿ, ಈ ಮಸೂದೆ ಯಾವುದೇ ರೀತಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧವಲ್ಲ. ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸದಿದ್ದರೆ, ಪೌರತ್ವ ಮಸೂದೆಯನ್ನು ತರುವ ಅಗತ್ಯವೇ ಇರಲಿಲ್ಲ. ಸಮಾನತೆಯ ಕಾನೂನು ಇದ್ದರೆ ಅಲ್ಪಸಂಖ್ಯಾತರಿಗೆ ಹೇಗೆ ಸವಲತ್ತುಗಳು ಸಿಗುತ್ತವೆ? ಸಂವಿಧಾನದ 14ನೇ ವಿಧಿ ಶಿಕ್ಷಣ ಮತ್ತು ಇತರ ವಿಷಯಗಳಲ್ಲಿ ಉಲ್ಲಂಘನೆಯಾಗಿಲ್ಲವೇ? ಎಲ್ಲ ಉಲ್ಲಂಘನೆಗಳನ್ನು ಗಣನೆಗೆ ತೆಗೆದುಕೊಂಡ ನಂತರವೇ ಮಸೂದೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಅಫ್ಘಾನಿಸ್ತಾನದ ಸಂವಿಧಾನದ 2ನೇ ವಿಧಿ ಪ್ರಕಾರ, ಆ ದೇಶ ಇಸ್ಲಾಮಿಕ್ ಆಗಿದೆ. ಪಾಕಿಸ್ತಾನ ಕೂಡ ಇಸ್ಲಾಮಿಕ್ ಆಗಿದೆ. ಬಾಂಗ್ಲಾದೇಶದ ಸಂವಿಧಾನದಲ್ಲಿ ಇಸ್ಲಾಂ ಧರ್ಮ ಎಂದು ತಿಳಿಸಲಾಗಿದೆ. ನಾನು ಇದನ್ನು ಉಲ್ಲೇಖಿಸುತ್ತಿದ್ದೇನೆ. ಏಕೆಂದರೆ ಈ ಮೂರು ದೇಶಗಳ ಸಂವಿಧಾನವು ಧರ್ಮವನ್ನು ಉಲ್ಲೇಖಿಸುತ್ತದೆ. ಆದರೂ ಈ ಮೂರು ದೇಶಗಳಿಂದ ನಿರಾಶ್ರಿತರು ಇಲ್ಲಿಗೆ ಬರುತ್ತಿದ್ದಾರೆ ಎಂದು ಹೇಳಿದರು.

ತುಳಿತಕ್ಕೊಳಗಾದ ಮುಸ್ಲಿಮರಿಗೆ ಆಶ್ರಯ ನೀಡುವ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ, ಮೂರು ನೆರೆಹೊರೆಯ ದೇಶಗಳ ಯಾವುದೇ ಮುಸ್ಲಿಂ ಧಾರ್ಮಿಕ ಕಿರುಕುಳದ ಆಧಾರದ ಮೇಲೆ ಪೌರತ್ವವನ್ನು ಕೋರಿದರೆ, ನಾವು ಮುಕ್ತ ಮನಸ್ಸಿನಿಂದ ಪರಿಗಣಿಸುತ್ತೇವೆ. ಪ್ರಧಾನಿ ಮೋದಿ ಸರ್ಕಾರದ ಹಿಂದಿನ ಅವಧಿಯಲ್ಲಿ ಪೌರತ್ವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದರೂ ರಾಜ್ಯಸಭೆಯಲ್ಲಿ ಸಿಲುಕಿಕೊಂಡಿತ್ತು. ಈ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಡಿಸೆಂಬರ್ 4ರಂದು ಅಂಗೀಕರಿಸಿತ್ತು. ಈ ಮಸೂದೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಮುಸ್ಲಿಮೇತರರಿಗೆ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು) ಭಾರತೀಯ ಪೌರತ್ವ ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.