Tag: Operation Audio

  • ಆಪರೇಷನ್ ಆಡಿಯೋ ಪ್ರಕರಣ – ಬಿಎಸ್‍ವೈಗೆ ಬಿಗ್ ರಿಲೀಫ್

    ಆಪರೇಷನ್ ಆಡಿಯೋ ಪ್ರಕರಣ – ಬಿಎಸ್‍ವೈಗೆ ಬಿಗ್ ರಿಲೀಫ್

    ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ನಗರದ ಸಿಟಿ ಸಿವಿಲ್ ಕೋರ್ಟಿನ 82 ನೇ ವಿಶೇಷ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಬಿಎಸ್‍ವೈ ಸೇರಿದಂತೆ ಇತರ ನಾಲ್ವರಿಗೂ ಮಧ್ಯಂತರ ಜಾಮೀನು ಮಂಜೂರು ಆಗಿದೆ.

    ಏನಿದು ಪ್ರಕರಣ:
    ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿದಂತೆ ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರು ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶರಣಗೌಡ ಅವರ ದೂರು ಆಧಾರಿಸಿ ಬಿಎಸ್ ಯಡಿಯೂರಪ್ಪ ಸೇರಿದಂತೆ ನಾಲ್ವರ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಸ್‍ವೈ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪ ಅವರು ಎ-1 ಆರೋಪಿ ಆಗಿದ್ದರೆ, ಶಾಸಕರಾದ ಶಿವನಗೌಡ ನಾಯಕ್, ಪ್ರೀತಂ ಗೌಡ, ಪತ್ರಕರ್ತ ಮರಂಕಲ್ ಅವರ ವಿರುದ್ಧ ದೂರು ದಾಖಲಾಗಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ 19/2019 ಕಲಂ 8 ಮತ್ತು 12. ಭ್ರಷ್ಟಾಚಾರ ತಡೆಗಟ್ಟುವ ತಿದ್ದುಪಡಿ ಅಧಿನಿಯಮ 2018 ಮತ್ತು 120(ಬಿ), ಐಪಿಸಿ 506 ಕಾಯ್ದೆ ಅಡಿ ಎಫ್‍ಐಆರ್ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿಯವರ ನೇತೃತ್ವದಲ್ಲೇ ತನಿಖೆ ಮಾಡಿಸೋಣ: ಬಿಎಸ್‍ವೈಗೆ ಎಚ್‍ಡಿಕೆ ಟಾಂಗ್

    ಬಿಜೆಪಿಯವರ ನೇತೃತ್ವದಲ್ಲೇ ತನಿಖೆ ಮಾಡಿಸೋಣ: ಬಿಎಸ್‍ವೈಗೆ ಎಚ್‍ಡಿಕೆ ಟಾಂಗ್

    ಬೆಂಗಳೂರು: ಆಪರೇಷನ್ ಆಡಿಯೋ ತನಿಖೆಯನ್ನು ಬಿಜೆಪಿಯವರ ನೇತೃತ್ವದಲ್ಲೇ ಮಾಡಿಸೋಣ ಎಂದು ಸಿಎಂ ಕುಮಾರಸ್ವಾಮಿ ಅವರು, ನಗುತ್ತಲೇ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಭೋಜನ ವಿರಾಮ ಮುಗಿಸಿಕೊಂಡು ಕಲಾಪಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ಎಸ್‍ಐಟಿಯಿಂದ ಆಪರೇಷನ್ ಆಡಿಯೋ ವಿಚಾರಣೆ ಬೇಡವೆಂದು ಬಿಜೆಪಿಯವರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸೂಕ್ತ ರೀತಿಯ ತನಿಖೆ ಮಾಡಿಸೋಣ ಬಿಡಿ ಎಂದು ವ್ಯಂಗ್ಯವಾಡಿದರು. ಇದನ್ನು ಓದು: ಆಪರೇಷನ್ ಆಡಿಯೋ ಪ್ರಕರಣ – ಎಸ್‍ಐಟಿ ತನಿಖೆ ವಹಿಸಿಕೊಂಡರೆ ತನಿಖೆ ಹೇಗೆ ನಡೆಯುತ್ತೆ?

    ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಖೆಡ್ಡಾ ತೋಡಲು ಸಿಎಂ ಕುಮಾರಸ್ವಾಮಿ ಭಾರೀ ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕದಂತೆ ಕಟ್ಟಿ ಹಾಕಲು ಇದೇ ಸರಿಯಾದ ಸಮಯ ಎಂದು ಮೈತ್ರಿ ನಾಯಕರು ಪ್ಲಾನ್ ಮಾಡಿದ್ದಾರೆ. ಹೀಗಾಗಿ ಆಪರೇಷನ್ ಆಡಿಯೋ ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಲು ದೋಸ್ತಿ ಸರ್ಕಾರ ಮುಂದಾಗಿದೆ ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಡಳಿತ ಪಕ್ಷವನ್ನೇ ಶೇಮ್.. ಶೇಮ್… ಎಂದು ಟೀಕಿಸಿದ ಬಿಜೆಪಿ

    ಆಡಳಿತ ಪಕ್ಷವನ್ನೇ ಶೇಮ್.. ಶೇಮ್… ಎಂದು ಟೀಕಿಸಿದ ಬಿಜೆಪಿ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಆಡಳಿತ ಪಕ್ಷದ ಸದಸ್ಯರಿಗೆ ಬಿಜೆಪಿ ನಾಯಕರು ಶೇಮ್ ಶೇಮ್ ಎಂದು ವ್ಯಂಗ್ಯವಾಡಿದ ಪ್ರಸಂಗ ವಿಧಾನ ಪರಿಷತ್ ಕಲಾದಪಲ್ಲಿ ನಡೆಯಿತು.

    ಆಪರೇಷನ್ ಆಡಿಯೋ ಪ್ರಕರಣ ವಿಧಾನ ಪರಿಷತ್ ಕಲಾಪದಲ್ಲಿಯೂ ಭಾರೀ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಯಿತು. ಇಂದು ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಭಿತ್ತಿ ಪತ್ರ ಪ್ರದರ್ಶನ ಮಾಡಿದರು. ಇದನ್ನು ಖಂಡಿಸಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಆಡಳಿತ ಪಕ್ಷಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದರು.

    ವಿಧಾನ ಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅವರು ಆಪರೇಷನ್ ಆಡಿಯೋ ವಿಚಾರ ಹಾಗೂ ಪ್ರತಿಭಟನೆಯನ್ನು ಕೈಬಿಡುವಂತೆ ತಿಳಿ ಹೇಳಿದರು. ಆದರೂ ಬಿಜೆಪಿ ಹಾಗೂ ಮೈತ್ರಿ ಸರ್ಕಾರದ ಮಧ್ಯೆ ವಾಗ್ದಾಳಿ ನಡೆದೇ ಇತ್ತು. ಹೀಗಾಗಿ 5 ನಿಮಿಷಗಳಂತೆ ಎರಡು ಬಾರಿ ಅಧಿವೇಶನ ಮುಂದಕ್ಕೂಡಿದರೂ ಸದಸ್ಯರು ಪರಸ್ಪರ ವಾಗ್ದಾಳಿ ಮುಂದುವರಿಸಿದ್ದರು.

    ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದರೆ ಎಲ್ಲವೂ ಸರಿ ಹೋಗುತ್ತೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿಗಳು, ಆಪರೇಷನ್ ಆಡಿಯೋ ಬಗ್ಗೆ ನೀವು ನೊಟೀಸ್ ಕೊಟ್ಟಿಲ್ಲ. ಹೀಗಾಗಿ ಚರ್ಚೆಗೆ ಅವಕಾಶ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯರಿಗೆ ಜೋರು ಧ್ವನಿಯಲ್ಲಿ ಗದರಿದರು.

    ಸಭಾಪತಿ ಗದರಿಸುತ್ತಿದ್ದಂತೆ ಕೆಲ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡರು. ಆದರೆ ಸಭಾಪತಿಗಳು ಮನವಿಯನ್ನು ತಳ್ಳಿ ಹಾಕಿದರು. ಇದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಧರಣಿ ಆರಂಭಿಸಿದರು. ಈ ವೇಳೆ ಬಿಜೆಪಿ ನಾಯಕರು ಶೇಮ್ ಶೇಮ್ ಎಂದು ವ್ಯಂಗ್ಯವಾಡಿದರು.

    ಆಡಳಿತ ಪಕ್ಷದ ಧರಣಿ ಹಾಗೂ ಬಿಜೆಪಿಯ ವಾಗ್ದಾಳಿಯಿಂದಾಗಿ ಸಭಾಪತಿಗಳು ಒಂದು ಗಂಟೆ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾಗಿದ್ದರೂ ಆಡಳಿತ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು. ಇದರಿಂದಾಗಿ ಬಿಜೆಪಿಯ ಸದಸ್ಯರು ಸಭಾತ್ಯಾಗ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆಯಲ್ಲೂ ಆಪರೇಷನ್ ಆಡಿಯೋ ಬಿಸಿಬಿಸಿ ಚರ್ಚೆ

    ಲೋಕಸಭೆಯಲ್ಲೂ ಆಪರೇಷನ್ ಆಡಿಯೋ ಬಿಸಿಬಿಸಿ ಚರ್ಚೆ

    – ಬಿಜೆಪಿ ವಿರುದ್ಧ ಚಾಟಿ ಬೀಸಿದ ಮಲ್ಲಿಕಾರ್ಜುನ ಖರ್ಗೆ, ಎಚ್‍ಡಿಡಿ

    ನವದೆಹಲಿ: ಆಪರೇಷನ್ ಆಡಿಯೋ ವಿಚಾರ ಲೋಕಸಭಾ ಕಲಾಪದಲ್ಲಿಯೂ ಭಾರೀ ಚರ್ಚೆಯಾಗಿದ್ದು, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಾಸಕರನ್ನು ಖರೀದಿ ಮಾಡಲು ಯತ್ನಿಸಿದ ಆಡಿಯೋ ಬಿಡುಗಡೆಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಆಮಿಷ ಒಡ್ಡಿ ರಾಜೀನಾಮೆ ಕೊಡಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನನ್ನದೇ ಲೋಕಸಭೆ ಕ್ಷೇತ್ರದ ಗುರುಮಿಠಕಲ್ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಅಧಿವೇಶನಲ್ಲಿ ಆರೋಪಿಸಿದರು.

    ಶಾಸಕ ನಾಗನಗೌಡ ಅವರ ಮಗ ಶರಣಗೌಡ ಮೂಲಕ ಕುದುರೆ ವ್ಯಾಪಾರಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಪೂರಕ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಡಿಯೋದಲ್ಲಿ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾಗಿಯೂ ಹೇಳಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರಿಗೆ 50 ಕೋಟಿ ರೂ. ನೀಡುವ ಬಗ್ಗೆ ಆಡಿಯೋದಲ್ಲಿ ಉಲ್ಲೇಖವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.

    ಕಾನೂನು ತೊಡಕು ಉಂಟಾದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನಿಭಾಯಿಸುತ್ತಾರೆ. ಪಕ್ಷಕ್ಕೆ ಬಂದಲ್ಲಿ ಸಚಿವ ಸ್ಥಾನ ಮತ್ತು ಹಣ ನೀಡುತ್ತೇವೆ ಎನ್ನುವ ಅಂಶಗಳು ಆಡಿಯೋದಲ್ಲಿದೆ ಎಂದು ಕಿಡಿಕಾರಿದರು.

    ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಆಪರೇಷನ್ ಮಾಡುವುದನ್ನು ಮೊದಲು ಶುರು ಮಾಡಿದ್ದೆ ಬಿಜೆಪಿಯವರು. 2009ರಲ್ಲಿ ಬಿಜೆಪಿಯವರು ಶಾಸಕರನ್ನು ಖರೀದಿ ಮಾಡಿದರು. ಮತ್ತೆ ಆ ಕೆಲಸವನ್ನು ಆರಂಭಿಸಿದ್ದಾರೆ. ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷ ಒಡಲಾಗುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

    ಕಲಾಪಕ್ಕೂ ಮುನ್ನ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಅನೇಕ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಆಪರೇಷನ್ ಕಮಲ ಸಂವಿಧಾನದ ಸಾವು, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಮಾರಾಟವಾಗುತ್ತಿದೆ. ಶಾಸಕರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಘೋಷಣೆ ಕೂಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಆಡಿಯೋ: ಸದನದಲ್ಲಿ ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್

    ಆಪರೇಷನ್ ಆಡಿಯೋ: ಸದನದಲ್ಲಿ ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್

    ಬೆಂಗಳೂರು: ಆಪರೇಷನ್ ಆಡಿಯೋ ಕುರಿತು ವಿಧಾನಸಭಾ ಕಲಾಪದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

    ಆಪರೇಷನ್ ಆಡಿಯೋವನ್ನು ನನ್ನ ಗಮನಕ್ಕೆ ತಂದ ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು. ಸದನದ ಎಲ್ಲ ಸದಸ್ಯರಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಗೌರವ ಪೂರಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಅಪಚಾರವಾಗುವಂತೆ ನೀವು ನಡೆದುಕೊಳ್ಳಬಾರದು.

    ದೌರ್ಭಾಗ್ಯಕ್ಕೆ ಆಪರೇಷನ್ ಡೀಲ್‍ನಲ್ಲಿ ಮಾತನಾಡಿರುವವರು ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಶಾಸಕರು ರಾಜೀನಾಮೆ ನೀಡಿದರೆ ತಕ್ಷಣವೇ ಒಪ್ಪಿಕೊಳ್ಳಲು ಸ್ಪೀಕರ್ ಗೆ 50 ಕೋಟಿ ನೀಡಿ ಸರಿಮಾಡಿಕೊಂಡಿದ್ದೇವೆ ಎಂದು ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಒಂದು ವೇಳೆ ಸ್ಪೀಕರ್ ಒಪ್ಪಿಕೊಳ್ಳದಿದ್ದರೆ ಕೊರ್ಟ್ ಗೆ ಹೋಗುತ್ತೇವೆ ಎಂದು ಮಾತನಾಡಿದ್ದಾರೆ. ಇದು ಸ್ಪೀಕರ್ ಸ್ಥಾನಕ್ಕೆ ಮಾಡಿದ ಅವಮಾನ ಎಂದು ಬೇಸರ ವ್ಯಕ್ತಪಡಿಸಿದರು.

    ಮತ್ತೊಂದು ದುಃಖದ ಸಂಗತಿಯೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಅವರನ್ನು ಇಂತಹ ಕೆಲಸಕ್ಕೆ ಎಳೆದುಬಿಟ್ಟಿದ್ದಾರೆ. ಇದು ದೇಶಕ್ಕೆ, ಸಂಸತ್ತು ಹಾಗೂ ಶಾಸನ ಸಭೆಗೆ ಗೌರವ ತರುವುದಿಲ್ಲ, ಒಳ್ಳೆಯದಲ್ಲ ಎಂದು ಅಸಮಾಧಾನ ಹೊರಹಾಕಿದರು.

    ಸ್ಪೀಕರ್ ಆಗಿರುವವರು ಸದನದ ಮೌಲ್ಯವಾಗಿ ಹಾಗೂ ಎಲ್ಲ ಸದಸ್ಯರ ಪ್ರತೀಕವಾಗಿರುತ್ತಾರೆ. ಹೊರಗಿನ ಜನರು ನಮ್ಮನ್ನು ನೋಡುತ್ತಾರೆ. ಇದು ಒಂದು ಪಕ್ಷಕ್ಕೆ, ವ್ಯಕ್ತಿಗೆ ಸೀಮಿತವಾದ ವಿಚಾರವಲ್ಲ. ಸಿಎಂ ಕುಮಾರಸ್ವಾಮಿ ಅವರ ಕಚೇರಿಯಿಂದ ಫೆಬ್ರವರಿ 8 ರಂದು ಸಂಜೆ ನನಗೆ ಪತ್ರ ಕಳುಹಿಸಿದ್ದಾರೆ. ಸಂಪ್ರದಾಯವನ್ನು ಮರೆತು ಬಜೆಟ್ ಅಧಿವೇಶವನ್ನು ಮುಂದೆ ಹಾಕುವಂತಿರಲಿಲ್ಲ. ಶನಿವಾರ ಹಾಗೂ ಭಾನುವಾರ ರಜೆ ಕಳೆದಿದ್ದೇವೆ. ಹೀಗಾಗಿ ನಾನು ಇಂದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿರುವೆ ಎಂದು ತಿಳಿಸಿ ಶಾಸಕರಿಗೆ ಚಾಟಿ ಬೀಸಿದರು.

    ಕಳೆದ ಎರಡು ದಿನಗಳಿಂದ ಇಂತಹ ಆರೋಪವನ್ನು ಹೊತ್ತು ನಾನು ಏನೆಲ್ಲ ನೋವು ಅನುಭವಿಸಿರಬಹುದು. ಈ ಹಿಂದೆ ಸ್ಪೀಕರ್ ಆಗಿದ್ದಾಗ ವೃದ್ಧೆಯೊಬ್ಬಳು ನನ್ನ ಬಳಿಗೆ ಬಂದು, ಮೃತ ಪತಿಯ ಕೆಲಸವನ್ನು ಆಕೆಯ ವಿವಾಹಿತ ಮಗಳಿಗೆ ಕೊಡಿಸುವಂತೆ ಕೇಳಿಕೊಂಡಿದ್ದಳು. ಆಕೆಯ ಸಮಸ್ಯೆ ಅರಿತು ಕೆಲಸವನ್ನು ಕೊಡಿಸಿದೆ. ನನ್ನ ಬದುಕು, ಮನಸ್ಸು ಅಂತವರ ಜೊತೆಗೆ ಇರುತ್ತದೆಯೇ ಹೊರತು ಅವ್ಯವಹಾರದ ಕಡೆಗೆ ಗಮನ ನೀಡುವುದಿಲ್ಲ ಎಂದರು.

    ಅಭಿಮಾನದಿಂದ, ಗೌರವದಿಂದ ನನ್ನನ್ನು ಆಯ್ಕೆ ಮಾಡಿದ್ದೀರಿ. ಆದರೆ ಈಗ ದೊಡ್ಡ ಆಪಾದನೆಯನ್ನೇ ನಾನು ಹೊರಬೇಕಾಗಿ ಬಂದಿದೆ. ನಾನು ಎಂದೂ ಹೀಗೆ ನಡೆದುಕೊಂಡ ವ್ಯಕ್ತಿಯಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv