Tag: opening match

  • ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಐಪಿಎಲ್

    ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಐಪಿಎಲ್

    ನವದೆಹಲಿ: ಸೆಪ್ಟೆಂಬರ್ 19ರಿಂದ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ ಆರಂಭಿಕ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದೆ.

    ಕಳೆದ ಮಾರ್ಚ್ ತಿಂಗಳಿನಲ್ಲೇ ನಡೆಯಬೇಕಿದ್ದ ಐಪಿಎಲ್, ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿತ್ತು. ಈ ನಡುವೆ ಐಪಿಎಲ್ ಅನ್ನು ಈ ಬಾರೀ ರದ್ದು ಮಾಡಲಾಗುತ್ತದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಬಿಸಿಸಿಐ ಈ ಬಾರಿಯ ಐಪಿಎಲ್ ಅನ್ನು ನಡೆಸಲೇಬೇಕು ಎಂದು ಪಣತೊಟ್ಟು ಯುಎಇಯಲ್ಲಿ ಟೂರ್ನಿಯನ್ನು ಯಶಸ್ವಿಯಾಗಿ ಆರಂಭ ಮಾಡಿತ್ತು. ಅದರ ಪ್ರತಿಫಲ ಎಂಬಂತೆ ಐಪಿಎಲ್ ತನ್ನ ಆರಂಭಿಕ ಪಂದ್ಯದಲ್ಲೇ ಬಹು ದೊಡ್ಡ ದಾಖಲೆ ಬರೆದಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರು, ಡ್ರೀಮ್ 11 ಐಪಿಎಲ್ ಮೊದಲ ಪಂದ್ಯದಲ್ಲೇ ದಾಖಲೆ ಬರೆದಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ, ಐಪಿಎಲ್ ಆರಂಭಿಕ ಪಂದ್ಯವನ್ನು ಸುಮಾರು 20 ಕೋಟಿ ಜನರು ಆನ್‍ಲೈನ್ ಮತ್ತು ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಕ್ರೀಡಾ ಟೂರ್ನಿಯ ಮೊದಲ ಪಂದ್ಯವನ್ನು ಇಷ್ಟೊಂದು ಜನರು ವೀಕ್ಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಟ್ವೀಟ್ ಮಾಡಿದ್ದು, ಧನ್ಯವಾದಗಳು ಇಂಡಿಯಾ ಇದು ಡ್ರೀಮ್ 11 ಐಪಿಎಲ್‍ನಲ್ಲಿ ಡ್ರೀಮ್ ಆರಂಭವಾಗಿದೆ. ಇಡೀ ಐಪಿಎಲ್ ಇತಿಹಾಸದಲ್ಲೇ ಟಿವಿ ಮತ್ತು ಡಿಜಿಟೆಲ್ ಮಾಧ್ಯಮದಲ್ಲಿ ಅತೀ ಹೆಚ್ಚು ಜನರು ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಮುಂಬೈ ಮತ್ತು ಚೆನ್ನೈ ನಡುವಿನ ಮೊದಲ ಪಂದ್ಯವನ್ನು 200 ದಶಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದೆ.

    ಐಪಿಎಲ್ ಆರಂಭಿಕ ಪಂದ್ಯದಲ್ಲಿ ಐಪಿಎಲ್‍ನ ಜನಪ್ರಿಯ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಕೊರೊನಾ ಸಮಯದಲ್ಲಿ ಯಾವುದೇ ಮನರಂಜನೆ ಇಲ್ಲದೇ ಬೇಸತ್ತಿದ್ದ ಜನರು, ಆರಂಭಿಕ ಪಂದ್ಯವನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಐಪಿಎಲ್ ಹೊಸ ದಾಖಲೆ ಬರೆಯಲು ದಾರಿ ಮಾಡಿಕೊಟ್ಟಿದ್ದಾರೆ.

    ಸೆಪ್ಟಂಬರ್ 19ರಂದು ಅಬುಧಾಬಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಜಯಭೇರಿ ಭಾರಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಮುಂಬೈ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು. ಅದರಂತೆ ನಿಗದಿತ 20 ಓವರ್ ಗಳಲ್ಲಿ ಮುಂಬೈ ಕೇವಲ 162 ರನ್ ಗಳಿಸಿತ್ತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಅಂಬಾಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿಸ್ ಅವರ ಅಮೋಘ ಅರ್ಧ ಶತಕದಿಂದ 5 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು.

  • ಸಿಎಸ್‍ಕೆ ಬದಲು ಐಪಿಎಲ್ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯಲಿದ್ಯಾ ಆರ್‌ಸಿಬಿ?

    ಸಿಎಸ್‍ಕೆ ಬದಲು ಐಪಿಎಲ್ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯಲಿದ್ಯಾ ಆರ್‌ಸಿಬಿ?

    ಅಬುಧಾಬಿ: ಐಪಿಎಲ್ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬದಲು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಲಿದೆ ಎಂದು ಹೇಳಲಾಗಿದೆ.

    ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ. ವಾಡಿಕೆಯಂತೆ ಕಳೆದ ಐಪಿಎಲ್‍ನ ಫೈನಲ್‍ನಲ್ಲಿ ಮುಖಾಮುಖಿಯಾಗಿದ್ದ ಸಿಎಸ್‍ಕೆ ಮತ್ತು ಮುಂಬೈ ತಂಡದ ಈ ಟೂರ್ನಿಯ ಮೊದಲ ಪಂದ್ಯವನ್ನು ಆಡಬೇಕಿತ್ತು. ಆದರೆ ಸಿಎಸ್‍ಕೆ ತಂಡದ ಕೆಲ ಸಹಾಯಕ ಸಿಬ್ಬಂದಿ ಮತ್ತು ಇಬ್ಬರು ಆಟಗಾರರಿಗೆ ಕೊರೊನಾ ಬಂದ ಕಾರಣ ಚೆನ್ನೈ ತಂಡ ಮೊದಲ ಪಂದ್ಯವನ್ನು ಆಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

    ಐಪಿಎಲ್‍ನ ಆರಂಭಿಕ ಪಂದ್ಯದಲ್ಲಿ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ತಂಡ ಮತ್ತು ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ತಂಡವನ್ನು ಆಡಿಸಲು ಬಿಸಿಸಿಐ ತೀರ್ಮಾನ ಮಾಡಿತ್ತು. ಆದರೆ ಈ ನಡುವೆ ಈ ಪಂದ್ಯಕ್ಕೆ ಕೊರೊನಾ ಅಡ್ಡಗಾಲು ಹಾಕಿದ್ದು, ಸೆಪ್ಟೆಂಬರ್ 19ರೊಳಗೆ ಸಿಎಸ್‍ಕೆ ತಂಡದ ಆಟಗಾರರು ಸೋಂಕಿನಿಂದ ಹೊರಬರುವುದು ಡೌಟು ಎನ್ನಲಾಗಿದೆ. ಈ ಕಾರಣಕ್ಕೆ ಐಪಿಎಲ್‍ನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡ ಆರಂಭಿಕ ಪಂದ್ಯವನ್ನು ಆಡಲಿದೆ ಎನ್ನಲಾಗಿದೆ.

    ಈ ವಿಚಾರವಾಗಿ ಬಿಸಿಸಿಐ ಉನ್ನತ ಮೂಲಗಳಿಂದ ಮಾಹಿತಿ ಹೊರಬಿದ್ದಿದ್ದು, ಈ ಬಾರಿ ಐಪಿಎಲ್ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ. ಮೊದಲ ಪಂದ್ಯದಲ್ಲಿ ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿದರೆ, ಆಟದ ಕ್ರೇಜ್ ಜಾಸ್ತಿಯಾಗುತ್ತದೆ. ಒಂದು ಕಡೆ ರೋಹಿತ್ ಸಿದ್ಧವಾಗಿದ್ದಾರೆ. ಆದರೆ ಧೋನಿಯವರ ತಂಡ ಆಡುವುದು ಅನುಮಾನವಾಗಿದೆ. ಹೀಗಾಗಿ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವನ್ನು ಆಡಿಸಲು ತಯಾರಿ ನಡೆದಿದೆ ಎಂದು ತಿಳಿದು ಬಂದಿದೆ.

    ಸೆ.19ರ ವೇಳೆಗೆ ಚೆನ್ನೈ ತಂಡ ಪೂರ್ಣ ಪ್ರಮಾಣದಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಟೂರ್ನಿಯ ಶೆಡ್ಯೂಲ್‍ನಲ್ಲಿ ಸಣ್ಣ ಬದಲಾವಣೆ ಮಾಡಿ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಲಾಗಿದೆ. ಇತ್ತ ಎರಡು ದಿನಗಳ ಅವಧಿಯಲ್ಲಿ ಚೆನ್ನೈ ತಂಡದಲ್ಲಿ 12 ಕೊರೊನಾ ಪ್ರಕರಣಗಳು ಪತ್ತೆಯಾಗಿವುದರಿಂದ ಮತ್ತಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗುವ ನಿರೀಕ್ಷೆ ಇದೆ.