Tag: OPEC

  • ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸಲು ಮುಂದಾದ ಸೌದಿ – ತೈಲ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

    ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸಲು ಮುಂದಾದ ಸೌದಿ – ತೈಲ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

    ರಿಯಾದ್: ಯುರೋಪ್ ರಾಷ್ಟ್ರಗಳು (European Countries) ಆರ್ಥಿಕ ಹಿಂಜರಿತಕ್ಕೆ ತುತ್ತಾಗಬಹುದು ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆ ಸೌದಿ ಅರೇಬಿಯಾ (Saudi Arabia) ಕಚ್ಚಾ ತೈಲ (Crude Oil) ಉತ್ಪಾದನೆಯನ್ನು ಕಡಿತಗೊಳಿಸಲು ಮುಂದಾಗಿದೆ.

    ಜುಲೈನಿಂದ ಪ್ರತಿದಿನ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. ಈ ಹಿಂದೆ ಒಪೆಕ್ (OPEC) ಸದಸ್ಯ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತ ಮಾಡಿ ಬೆಲೆಯನ್ನು ಹೆಚ್ಚಿಸಲು ಪ್ರಯತ್ತಿದ್ದವು. ಆದರೆ ಬೆಲೆ ಹೆಚ್ಚಳ ಸಾಧ್ಯವಾಗದಿರುವ ಕಾರಣ ಉತ್ಪಾದನೆಯನ್ನು ಮತ್ತಷ್ಟು ಕಡಿತಗೊಳಿಸಲು ಸೌದಿ ಅರೇಬಿಯಾ ನಿರ್ಧಾರ ತೆಗೆದುಕೊಂಡಿದೆ.

    ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಒಪೆಕ್ ವಿಯೆನ್ನಾದಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ 7 ಗಂಟೆಗಳ ಕಾಲ ಸಭೆ ನಡೆಸಿ ತೈಲ ಬೆಲೆ ಹೆಚ್ಚಿಸುವ ಸಲುವಾಗಿ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಇದರ ಪ್ರಕಾರ ದಿನಕ್ಕೆ 14 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಯೋಜಿಸಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಭಯೋತ್ಪಾದಕರ ಭೀತಿ- ಭದ್ರತಾ ಪಡೆಗಳೇ ಟಾರ್ಗೆಟ್

    ತೈಲ ಉತ್ಪಾದನೆ ಕಡಿತವನ್ನು ಜುಲೈ ನಂತರ ಪ್ರಾರಂಭಿಸಬಹುದು ಎಂದು ಸೌದಿ ತಿಳಿಸಿದೆ. ಆದರೆ ಇದು ರಷ್ಯಾ, ನೈಜೀರಿಯಾ ಹಾಗೂ ಅಂಗೋಲಾದ ಪ್ರಸ್ತುತ ಉತ್ಪಾದನಾ ಮಟ್ಟಕ್ಕೆ ಅನುಗುಣವಾಗಿ ತರಲು ಸಾಧ್ಯವಿಲ್ಲ.

    ಒಪೆಕ್ ಪ್ರಪಂಚದಲ್ಲಿ 40% ರಷ್ಟು ಕಚ್ಚಾತೈಲ ಉತ್ಪಾದನೆಯ ಪಾಲನ್ನು ಹೊಂದಿದೆ. ಆದರೆ ಅದು ತೆಗೆದುಕೊಳ್ಳುವ ನೀತಿ ನಿರ್ಧಾರಗಳು ಜಾಗತಿಕವಾಗಿ ತೈಲ ಬೆಲೆಗಳ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿದೆ. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ

  • ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಲಂಡನ್‌/ನವದೆಹಲಿ: ಸೌದಿ ಅರೇಬಿಯಾ ಸೇರಿದಂತೆ ತೈಲ ಉತ್ಪಾದನೆ ಮಾಡುವ ಒಪೆಕ್‌(OPEC) ದೇಶಗಳು ಕಚ್ಚಾ ತೈಲ (Crude Oil) ಉತ್ಪಾದನೆಯನ್ನು ಕಡಿಮೆ ಮಾಡುವ ಶಾಕಿಂಗ್‌ ನಿರ್ಧಾರ ಘೋಷಣೆ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ದರ ಭಾರೀ ಏರಿಕೆಯಾಗಿದೆ.

    ಸೋಮವಾರ ಒಂದು ಬ್ಯಾರೆಲ್‌ ಕಚ್ಚಾ ಬ್ರೆಂಟ್‌ ಕಚ್ಚಾ ತೈಲ ದರ ಶೇ.5 ರಷ್ಟು ಏರಿಕೆಯಾಗಿದ್ದು ಈಗ 84 ಡಾಲರ್‌ಗೆ (ಅಂದಾಜು 6,900 ರೂ.) ಏರಿಕೆಯಾಗಿದೆ. 2023ರ ಕೊನೆಗೆ ಇದು 90-95 ಡಾಲರ್‌ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಭಾನುವಾರ ಒಪೆಕ್‌ ದೇಶಗಳು 1.16 ದಶಲಕ್ಷ ಬ್ಯಾರೆಲ್‌ ಪರ್‌ ಡೇ(bpd) ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವು ಶಾಕಿಂಗ್‌ ನಿರ್ಧಾರವನ್ನು ಪ್ರಕಟಿಸಿದ್ದವು.

    ಕೋವಿಡ್‌ ಆರಂಭದಲ್ಲಿ ಭಾರೀ ಇಳಿಕೆ ಕಂಡಿದ್ದ ಕಚ್ಚಾ ತೈಲದ ಬೆಲೆಗಳು ರಷ್ಯಾ-ಉಕ್ರೇನ್‌ (Russia-Ukraine) ಯುದ್ಧ ಆರಂಭದಲ್ಲಿ ಸಮಯದಲ್ಲಿ  ಪ್ರತಿ ಬ್ಯಾರೆಲ್‌ ದರ 130 ಡಾಲರ್‌ಗೆ ಏರಿಕೆಯಾಗಿತ್ತು. ನಂತರ ಸ್ವಲ್ಪ ಇಳಿಕೆಯಾಗಿತ್ತು. ಕಳೆದ ತಿಂಗಳು ಪ್ರತಿ ಬ್ಯಾರೆಲ್‌ ಕಚ್ಚಾ ತೈದ ದರ 70 ಡಾಲರ್‌ಗೆ ಇಳಿಕೆಯಾದ ಬೆನ್ನಲ್ಲೇ ಮಾರುಕಟ್ಟೆಯ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ.  ಇದನ್ನೂ ಓದಿ: ಕ್ರಿಕೆಟ್‌ ಪಂದ್ಯದಲ್ಲಿ ʼನೋಬಾಲ್‌ʼ ನೀಡಿದ್ದಕ್ಕೆ ಅಂಪೈರ್‌ನನ್ನೇ ಇರಿದು ಕೊಂದ ಆಟಗಾರ

    ಕಡಿತ ಯಾವಾಗದಿಂದ?
    ಮೇ ತಿಂಗಳಿನಿಂದ ಆರಂಭವಾಗಿ ಈ ವರ್ಷದ ಕೊನೆಯವರೆಗೂ ಕಡಿತ ಮುಂದುವರಿಯಲಿದೆ. ಸೌದಿ ಅರೇಬಿಯಾ 5 ಲಕ್ಷ ಬಿಪಿಡಿ, ಇರಾಕ್‌ 2 ಲಕ್ಷ ಬಿಪಿಡಿ ಕಚ್ಚಾ ತೈಲ ಉತ್ಪಾದನೆ ಕಡಿತ ಮಾಡಲಿದೆ. ರಷ್ಯಾ ಈಗಾಗಲೇ 5 ಲಕ್ಷ ಬಿಪಿಡಿ ತೈಲ ಉತ್ಪಾದನೆ ಕಡಿತ ಮಾಡುವುದಾಗಿ ತಿಳಿಸಿದೆ.

    ಭಾರತದ ಮೇಲೆ ಪರಿಣಾಮ ಏನು?
    ಭಾರತ ಶೇ.85 ರಷ್ಟು ತೈಲವನ್ನು ಆಮದು ಮಾಡುತ್ತಿದೆ. ಹಣದುಬ್ಬರವನ್ನು (Inflation) ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಭಾರತದ ತೈಲ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ಇತ್ಯಾದಿಗಳ ಬೆಲೆಯನ್ನು ಏರಿಕೆ ಮಾಡದ ಪರಿಣಾಮ ತೈಲ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿದೆ. ದರವನ್ನು ಪರಿಷ್ಕರಣೆ ಮಾಡದೇ ಇದ್ದರೆ ಕಂಪನಿಗಳ ನಷ್ಟ ಮತ್ತಷ್ಟು ಹೆಚ್ಚಾಗಲಿದೆ. ತೈಲ ದರ ಏರಿಕೆ ಮಾಡಿದರೆ ಇತ್ತ ಜನ ಸಾಮಾನ್ಯರ ಮೇಲೆ ಹೊರೆ ಬೀಳಲಿದೆ.  ಇದನ್ನೂ ಓದಿ: ನಷ್ಟ ಸರಿದೂಗಿಸಲು ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ

  • ಭಾರತಕ್ಕೆ ಇಂಧನ ಭದ್ರತೆ ಪೂರೈಸಲು ಸಿದ್ಧ ಎಂದ ಇರಾನ್

    ನವದೆಹಲಿ: ಒಪೆಕ್(ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ) ಸದಸ್ಯರ ವಿರುದ್ಧದ ನಿರ್ಬಂಧಗಳನ್ನು ತೆಗೆದುಹಾಕುವ ಕುರಿತು ಮಾತುಕತೆ ಮುಂದುವರಿಯುತ್ತಿರುವ ಹೊತ್ತಿನಲ್ಲೇ ಇರಾನ್ ಭಾರತದ ಇಂಧನ ಭದ್ರತೆಯ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ ಎಂದು ಅಲ್ಲಿನ ರಾಯಭಾರಿ ಕಚೇರಿ ಶುಕ್ರವಾರ ತಿಳಿಸಿದೆ.

    ಇರಾನ್ ಭಾರತಕ್ಕೆ 2ನೇ ಅತಿದೊಡ್ಡ ತೈಲ ಪೂರೈಕೆದಾರರಾಗಿದೆ. ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನೊಂದಿಗಿನ ಪರಮಾಣು ಒಪ್ಪಂದದಿಂದ ಹಿಂದೆ ಸರಿದಿದ್ದರಿಂದ ಹಾಗೂ ಅದರ ತೈಲ ರಫ್ತಿನ ಮೇಲೆ ನಿರ್ಬಂಧಗಳನ್ನು ಮರುಸ್ಥಾಪಿಸಿದ ನಂತರ ನವದೆಹಲಿ ಟೆಹ್ರಾನ್‌ನಿಂದ ಆಮದು ನಿಲ್ಲಿಸಬೇಕಾಯಿತು. ಇದನ್ನೂ ಓದಿ: ಮಂಗಳೂರಿಗೆ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ

    ಇದೀಗ ಇರಾನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಿಂದ, `ರೂಪಾಯಿ-ರಿಯಾಲ್ ವ್ಯಾಪಾರ ಕಾರ್ಯವಿಧಾನವನ್ನು ಎರಡು ದೇಶಗಳ ಕಂಪನಿಗಳು ಪರಸ್ಪರ ನೇರವಾಗಿ ವ್ಯವಹರಿಸಲು ಸಹಕರಿಸುತ್ತದೆ. ಇದರೊಂದಿಗೆ ಮಧ್ಯವರ್ತಿ ಹಾವಳಿ ತಪ್ಪಿಸಲು ಸಹಾಯ ಮಾಡುತ್ತದೆ’ ಎಂದು ಅಲಿ ಚೆಗೆನಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ

    ವಿಶ್ವದ 3ನೇ ಅತಿ ದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಆಗಿರುವ ಭಾರತ, ತನ್ನ ಕಚ್ಚಾ ತೈಲದ ಶೇ.80 ರಷ್ಟು ಅಗತ್ಯಗಳನ್ನು ಆಮದು ಮಾಡಿಕೊಳ್ಳುತ್ತದೆ. ಈಗಾಗಲೇ ನಿರ್ಬಂಧಗಳಿಂದಾಗಿ ಭಾರತ-ಇರಾನ್ ವ್ಯಾಪಾರವು ಕಳೆದ ವರ್ಷಗಳಲ್ಲಿ 2 ಬಿಲಿಯನ್ ಡಾಲರ್ (ಸುಮಾರು 1ಲಕ್ಷ ಕೋಟಿ) ಗಳಷ್ಟು ನಷ್ಟ ಅನುಭವಿಸಿದೆ. ಎರಡೂ ದೇಶಗಳು ರೂಪಾಯಿ-ರಿಯಾಲ್ ವ್ಯಾಪಾರ ಕಾರ್ಯವಿಧಾನಗಳನ್ನು ಪ್ರಾರಂಭಿಸಿದರೆ, ದ್ವಿಪಕ್ಷೀಯ ವ್ಯಾಪಾರವು 30 ಶತಕೋಟಿ ಡಾಲರ್ (22 ಲಕ್ಷ ಕೋಟಿಗೂ ಅಧಿಕ)ನಷ್ಟು ವಹಿವಾಟು ಬೆಳೆಯಬಹುದು ಎಂದು ಚೆಗೆನಿ ಹೇಳಿದ್ದಾರೆ.

  • ಅಮೆರಿಕ, ಭಾರತದ ತಂತ್ರಕ್ಕೆ ಒಪೆಕ್‌ ಗರಂ – ಮತ್ತೆ ಏರಿಕೆ ಆಗುತ್ತಾ ತೈಲ ಬೆಲೆ?

    ಅಮೆರಿಕ, ಭಾರತದ ತಂತ್ರಕ್ಕೆ ಒಪೆಕ್‌ ಗರಂ – ಮತ್ತೆ ಏರಿಕೆ ಆಗುತ್ತಾ ತೈಲ ಬೆಲೆ?

    – ತೈಲ ಆಮದು ರಾಷ್ಟ್ರಗಳು Vs ಒಪೆಕ್‌ ಮಧ್ಯೆ ತೈಲ ಸಮರ
    – ತಂತ್ರದಿಂದ ಹಿಂದಕ್ಕೆ ಸರಿಯದೇ ಇದ್ದಲ್ಲಿ ಉತ್ಪಾದನೆ ಕಡಿತದ ಬೆದರಿಕೆ

    ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡುವ ರಾಷ್ಟ್ರಗಳು ಮತ್ತು ತೈಲ ಉತ್ಪಾದನೆ ಮಾಡುವ ರಾಷ್ಟ್ರಗಳ ಮಧ್ಯೆ ತೈಲ ಸಮರ ಸೃಷ್ಟಿಯಾಗಿದೆ. ಅಮೆರಿಕ ತಂತ್ರಗಾರಿಕೆ ಈಗ ಉಳಿದ ರಾಷ್ಟ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಏನಿದು ತಿಕ್ಕಾಟ? ತೈಲ ಆಮದು ಮಾಡುವ ರಾಷ್ಟ್ರಗಳ ಪ್ಲ್ಯಾನ್‌ ಏನು? ಒಪೆಕ್‌ ರಾಷ್ಟ್ರಗಳ ತಿರುಗೇಟು ಏನು ಇತ್ಯಾದಿ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

    ತಿಕ್ಕಾಟ ಸೃಷ್ಟಿಯಾಗಿದ್ದು ಯಾಕೆ?
    ಕೋವಿಡ್ 19 ನಿಯಂತ್ರಣಕ್ಕೆ ವಿಶ್ವದ ಹಲವು ರಾಷ್ಟ್ರಗಳು ಲಾಕ್‍ಡೌನ್ ಹೇರಿತ್ತು. ಈ ವೇಳೆ ಬೇಡಿಕೆ ಕಡಿಮೆಯಾಗಿ ಬ್ಯಾರೆಲ್ ತೈಲ ದರ 19 ಡಾಲರ್​ಗೆ ಇಳಿಕೆಯಾಗಿತ್ತು. ಈ ವೇಳೆ ತೈಲ ಉತ್ಪಾದನೆ ಮಾಡುತ್ತಿರುವ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದ್ದವು. 2020ರ ಮಧ್ಯ ಭಾಗದ ಬಳಿಕ ರಾಷ್ಟ್ರಗಳು ಲಾಕ್‍ಡೌನ್ ತೆರವು ಮಾಡಿದ್ದರೂ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಳ ಮಾಡುತ್ತಿಲ್ಲ.

    ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಸೃಷ್ಟಿಯಾದ ಆರ್ಥಿಕ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಒಪೆಕ್‌ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿವೆ. ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಮಾಡದ ಕಾರಣ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ 7 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ.

    ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಆರ್ಥಿಕ ಚಟುವಟಿಕೆಗಳು ಆರಂಭಗೊಂಡರೂ ಒಪೆಕ್‌ ರಾಷ್ಟ್ರಗಳು ಮಾತ್ರ ಉತ್ಪಾದನೆ ಹೆಚ್ಚಿಸುತ್ತಿಲ್ಲ. ಭಾರತ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಮನವಿ ಮಾಡಿದರೂ ಒಪೆಕ್‌ ರಾಷ್ಟ್ರಗಳು ಬಗ್ಗುತ್ತಿಲ್ಲ. ಹೀಗಾಗಿ ಒಪೆಕ್‌ ರಾಷ್ಟ್ರಗಳನ್ನು ಬಗ್ಗು ಬಡಿಯಲು ಅಮೆರಿಕ ಹೂಡಿದ ತಂತ್ರವೇ ಈಗ ತಿಕ್ಕಾಟಕ್ಕೆ ಕಾರಣವಾಗಿದೆ.

    ಅಮೆರಿಕ ತಂತ್ರ ಏನು?
    ತುರ್ತು ಬಳಕೆಗೆಂದು ಸಂಗ್ರಹಿಸಿದ್ದ ಕಚ್ಚಾತೈಲವನ್ನು ಹೊರತೆಗೆಯಲು ಅಮೆರಿಕ ಮುಂದಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಭಾರತ, ಜಪಾನ್‌, ಚೀನಾ, ದಕ್ಷಿಣ ಕೊರಿಯಾ, ಬ್ರಿಟನ್‌ ಸೇರಿದಂತೆ ಅತಿ ಹೆಚ್ಚು ಕಚ್ಚಾತೈಲ ಬಳಸುವ ದೇಶಗಳ ಮನವೊಲಿಸಿದ್ದರು. ಹೀಗಾಗಿ ಅಮೆರಿಕ 5 ಕೋಟಿ ಬ್ಯಾರಲ್‌, ಭಾರತ 50 ಲಕ್ಷ ಬ್ಯಾರಲ್‌ ಕಚ್ಚಾತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿದ್ದವು. 1970ರಲ್ಲಿ ಲಿಬಿಯಾ ಯುದ್ಧದ ಬಳಿಕ ಅಮೆರಿಕ ತನ್ನ ಭೂಗತ ಸಂಗ್ರಹಾಗಾರದಿಂದ ಕಚ್ಚಾತೈಲವನ್ನು ಈ ಪ್ರಮಾಣವನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು ಎನ್ನುವುದು ವಿಶೇಷ. ಇದನ್ನೂ ಓದಿ: ಮಂಗಳೂರು ಸಂಗ್ರಹಗಾರದಿಂದ ಕಚ್ಚಾ ತೈಲ ಮಾರಾಟಕ್ಕೆ ಮುಂದಾದ ಸರ್ಕಾರ

    ಒಪೆಕ್‌ ಪ್ರತಿತಂತ್ರ:
    ತುರ್ತು ಬಳಕೆಗೆ ಸಂಗ್ರಹ ಮಾಡಿದ ತೈಲವನ್ನು ಬಿಡುಗಡೆ ಮಾಡಿದರೆ ಕಚ್ಚಾ ತೈಲದ ಬೇಡಿಕೆ ಇಳಿಯಬಹುದು ಎನ್ನುವುದು ಅಮೆರಿಕದ ಲೆಕ್ಕಾಚಾರವಾಗಿತ್ತು. ಆದರೆ ಈ ತಂತ್ರಕ್ಕೆ ಒಪೆಕ್‌ ರಾಷ್ಟ್ರಗಳು ಸೆಡ್ಡು ಹೊಡೆದಿವೆ. ತೈಲ ಆಮದು ಮಾಡುವ ದೇಶಗಳು ಕೈಗೊಂಡ ನಿರ್ಧರದಿಂದ ಹಿಂದಕ್ಕೆ ಸರಿಯಬೇಕು. ಇಲ್ಲದೇ ಇದ್ದಲ್ಲಿ ಮುಂದಿನ ಜನವರಿ ತಿಂಗಳಿನಿಂದ ಉದ್ದೇಶಿಸಿದ್ದ ಉತ್ಪಾದನೆ ಹೆಚ್ಚಳವನ್ನು 2 ತಿಂಗಳು ಮುಂದೂಡುವುದಾಗಿ ತಿಳಿಸಿವೆ. ಅಷ್ಟೇ ಅಲ್ಲದೇ ಈಗಾಗಲೇ ಮಾಡುತ್ತಿರುವ ಉತ್ಪಾದನೆಯನ್ನೇ ಕಡಿತ ಮಾಡುವ ಬೆದರಿಕೆಯನ್ನು ಹಾಕಿದೆ. ಇದನ್ನೂ ಓದಿ: ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ

    ಮತ್ತೆ ಬೆಲೆ ಏರಿಕೆ?
    ತುರ್ತು ಬಳಕೆಗೆ ಇರಿಸಿದ ತೈಲವನ್ನು ತೆಗೆದರೂ ಮತ್ತೆ ಆಮದು ಮಾಡಲೇಬೇಕು. ಒಂದು ವೇಳೆ ತೈಲ ಉತ್ಪಾದನೆ ಕಡಿಮೆ ಮಾಡಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಒಪೆಕ್‌ ಮತ್ತು ತೈಲ ಆಮದು ಮಾಡುವ ರಾಷ್ಟ್ರಗಳ ನಡುವಿನ ಕಿತ್ತಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುವ ಸಾಧ್ಯತೆಯಿದೆ. ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರೀ ಸಮಸ್ಯೆಗೆ ಕಾರಣವಾಗಬಹುದು.

    ಐಇಎ ಒತ್ತಾಯ:
    ಅಂತಾರಾಷ್ಟ್ರೀಯ ಇಂಧನ ಸಂಸ್ಥೆ(ಐಇಎ) ತೈಲ ಉತ್ಪಾದನೆ ಹೆಚ್ಚು ಮಾಡಲು ಒಪೆಕ್‌ ರಾಷ್ಟ್ರಗಳಿಗೆ ಒತ್ತಾಯ ಮಾಡಿದೆ. 1 ಬ್ಯಾರೆಲ್‌ ತೈಲದ ಬೆಲೆ 80 ಡಾಲರ್‌ ದಾಟಿದೆ. ಕೊರೊನಾದಿಂದ ಆರ್ಥಿಕ ಚಟುವಟಿಕೆಗಳು ಚೇತರಿಸುವ ಸಮಯದಲ್ಲಿ ತೈಲ ಉತ್ಪಾದನೆ ಕಡಿತ ಮಾಡುವುದು ಸರಿಯಲ್ಲ. ಇದರಿಂದ ವಿಶ್ವದ ಆರ್ಥಿಕ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಭಾರತದ ಪ್ಲ್ಯಾನ್‌ ಏನು?
    ಒಪೆಕ್‌ ರಾಷ್ಟ್ರಗಳು ಏಪ್ರಿಲ್‌ ತಿಂಗಳಿನಲ್ಲೂ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸದ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಲು ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು.

    ತೈಲ ಆಮದಿನ ವಿಚಾರದಲ್ಲಿ ಬೇರೆ ಬೇರೆ ಮೂಲಗಳನ್ನು ಹುಡುಕುವಂತೆ ನಾವು ಕಂಪನಿಗಳಿಗೆ ತಿಳಿಸಿದ್ದೇವೆ. ತೈಲ ಉತ್ಪಾದಿಸುತ್ತಿರುವ ಮಧ್ಯಪ್ರಾಚ್ಯದ ದೇಶಗಳು ನಮ್ಮನ್ನು ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡುವುದಿಲ್ಲ. ಒಪೆಕ್‌ ರಾಷ್ಟ್ರಗಳು ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿವಾರಣೆಯಾಬೇಕೆಂದು ಬಯಸಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದರು.

    ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಂಡರೆ ಆರಂಭದಲ್ಲಿ ಹೆಚ್ಚು ಹಣ ಪಾವತಿಸಬೇಕಾದರೂ ಭವಿಷ್ಯದಲ್ಲಿ ಇದರಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಗಯಾನಾದಿಂದ ತೈಲ ಆಮದು ಮಾಡಿಕೊಳ್ಳುವ ಒಂದು ಪ್ಲಾನ್‌ ಇದೆ. ಇದರ ಜೊತೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ ಕಂಪನಿಯು ನವೀಕರಿಸಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದಿಂದ ಮತ್ತೆ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುಬಹುದು ಎಂಬ ಭರವಸೆ ಭಾರತಕ್ಕಿದೆ.

  • ಮಧ್ಯಪ್ರಾಚ್ಯದ ಬದಲಾಗಿ ಬೇರೆ ದೇಶಗಳಿಂದ ತೈಲ ಖರೀದಿಗೆ ಮುಂದಾದ ಭಾರತ

    ಮಧ್ಯಪ್ರಾಚ್ಯದ ಬದಲಾಗಿ ಬೇರೆ ದೇಶಗಳಿಂದ ತೈಲ ಖರೀದಿಗೆ ಮುಂದಾದ ಭಾರತ

    – ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡಲ್ಲ
    – ಕೇಂದ್ರದ ನಿರ್ಧಾರವನ್ನು ಖಚಿತ ಪಡಿಸಿದ 2 ಸಂಸ್ಕರಣಾ ಘಟಕಗಳು

    ನವದೆಹಲಿ: ಕಚ್ಚಾ ತೈಲ ವಿಚಾರದಲ್ಲಿ ಮಧ್ಯಪ್ರಾಚ್ಯ ದೇಶಗಳ ಅವಲಂಬನೆಯನ್ನು ಹಂತ ಹಂತವಾಗಿ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬೇರೆ ದೇಶಗಳಿಂದ ತೈಲ ಖರೀದಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ತೈಲ ಕಂಪನಿಗಳಿಗೆ ಸೂಚಿಸಿದೆ.

    ಒಪೆಕ್‌ ರಾಷ್ಟ್ರಗಳು ಏಪ್ರಿಲ್‌ ತಿಂಗಳಿನಲ್ಲೂ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸದ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಲು ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಈ ರೀತಿಯ ಸೂಚನೆ ಸರ್ಕಾರದಿಂದ ಬಂದಿರುವುದು ಹೌದು ಎಂದು ಎರಡು ತೈಲ ಸಂಸ್ಕರಣಾ ಘಟಕಗಳು ಖಚಿತಪಡಿಸಿವೆ.

    ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿರುವ ಭಾರತ ಶೇ.84ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ.60ರಷ್ಟು ಮಧ್ಯಪ್ರಾಚ್ಯದಿಂದಲೇ ಆಮದಾಗುತ್ತದೆ. ಪಶ್ಚಿಮದ ರಾಷ್ಟ್ರಗಳಿಗೆ ಹೋಲಿಸಿದರೆ ಮಧ್ಯಪ್ರಾಚ್ಯದ ದೇಶಗಳಿಂದ ಬರುವ ತೈಲ ಬಹಳ ಅಗ್ಗ.

    ಭಾರತದ ಮನವಿಯ ಹೊರತಾಗಿಯೂ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಸೌದಿ ಇಂಧನ ಸಚಿವರು ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಬಹಳ ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹಿಸಿದ ಕಚ್ಚಾ ತೈಲವನ್ನು ಬಳಸಿ ಎಂದು ಸೂಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ಬೇರೆ ರಾಷ್ಟ್ರಗಳಿಂದ ತೈಲ ಖರೀದಿಗೆ ಮುಂದಾಗಿದೆ.  ಇದನ್ನೂ ಓದಿ: ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ತೈಲ ಆಮದಿನ ವಿಚಾರದಲ್ಲಿ ಬೇರೆ ಬೇರೆ ಮೂಲಗಳನ್ನು ಹುಡುಕುವಂತೆ ನಾವು ಕಂಪನಿಗಳಿಗೆ ತಿಳಿಸಿದ್ದೇವೆ. ತೈಲ ಉತ್ಪಾದಿಸುತ್ತಿರುವ ಮಧ್ಯಪ್ರಾಚ್ಯದ ದೇಶಗಳು ನಮ್ಮನ್ನು ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡುವುದಿಲ್ಲ. ಒಪೆಕ್‌ ರಾಷ್ಟ್ರಗಳು ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿವಾರಣೆಯಾಬೇಕೆಂದು ಬಯಸಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2020ರಲ್ಲಿ ತೈಲ ಬೇಡಿಕೆ ಕುಸಿತಗೊಂಡರೂ ನಾವು ಅವರ ಜೊತೆ ಮಾಡಿಕೊಂಡಿದ್ದ ತೈಲ ಆಮದನ್ನು ರದ್ದು ಮಾಡಿರಲಿಲ್ಲ. ಹೀಗಾಗಿ ತೈಲ ಆಮದು ವಿಚಾರದಲ್ಲಿ ಕೆಲವೇ ದೇಶಗಳನ್ನು ನೆಚ್ಚಿಕೊಳ್ಳುವುದು ಬೇಡ ಎಂದು ಕೇಂದ್ರ ಸರ್ಕಾರವು ತನ್ನ ಮಾಲೀಕತ್ವದ ತೈಲ ಮಾರಾಟ ಕಂಪನಿಗಳಿಗೆ ಸೂಚಿಸಿದೆ.

    ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಂಡರೆ ಆರಂಭದಲ್ಲಿ ಹೆಚ್ಚು ಹಣ ಪಾವತಿಸಬೇಕಾದರೂ ಭವಿಷ್ಯದಲ್ಲಿ ಇದರಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

    ಗಯಾನಾದಿಂದ ತೈಲ ಆಮದು ಮಾಡಿಕೊಳ್ಳುವ ಒಂದು ಪ್ಲಾನ್‌ ಇದೆ. ಇದರ ಜೊತೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ ಕಂಪನಿಯು ನವೀಕರಿಸಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದಿಂದ ಮತ್ತೆಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುಬಹುದು ಎಂಬ ಭರವಸೆ ಭಾರತಕ್ಕಿದೆ.

    ಇರಾಕ್ ಹಾಗೂ ಸೌದಿ ಅರೇಬಿಯಾದಿಂದ ಭಾರತ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡುತ್ತಿದೆ. ಇರಾಕ್‌ ಈಗಾಗಲೇ ವಾರ್ಷಿಕ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.

    ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುದ್ದಿಸಂಸ್ಥೆ ಕೇಳಿದ್ದ ಪ್ರಶ್ನೆಗೆ ಪೆಟ್ರೋಲಿಯಂ ಸಚಿವಾಲಯ ಹಾಗೂ ಇಂಡಿಯನ್ ಆಯಿಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೋವಿಡ್‌ 19 ಸಾಂಕ್ರಾಮಿಕದ ಸಮಯದಲ್ಲಿ ಜಗತ್ತು ಒಟ್ಟಿಗೆ ಇತ್ತು. ಆದರೆ ಈಗ ಕೆಲ ದೇಶಗಳು ಅವರ ಆರ್ಥಿಕತೆಗಾಗಿ ಕೆಲಸ ಮಾಡುತ್ತಿವೆ ಎಂದು ಅಧಿಕಾರಿ ದೂರಿದ್ದಾರೆ.

  • ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ – ದರ ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು?

    ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ – ದರ ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು?

    ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುತ್ತಿದ್ದು, ಇಂದು ಸಹ ಏರಿಕೆಯಾಗಿದೆ. ಇಂದು ಪೆಟ್ರೋಲ್‌ ಬೆಲೆ 70 ಪೈಸೆ ಏರಿಕೆ ಆಗಿದ್ದರೆ ಡೀಸೆಲ್‌ ಬೆಲೆ 27 ಪೈಸೆ ಏರಿಕೆಯಾಗಿದೆ.

    ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 90.53 ಆಗಿದ್ದರೆ ಡೀಸೆಲ್‌ ಬೆಲೆ 82.40 ರೂ. ಆಗಿದೆ.

    ಒಂದು ಲೀಟರ್‌ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ 87.60 ರೂ. ಇದ್ದರೆ ಡೀಸೆಲ್‌ ಬೆಲೆ 77.73 ರೂ. ಇದೆ. ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 94.12 ರೂ. ಇದ್ದರೆ ಡೀಸೆಲ್‌ ಬೆಲೆ 84.63 ರೂ. ಇದೆ.

    ಸೋಮವಾರ ಬ್ರೆಂಟ್‌ ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ 60 ಡಾಲರ್‌(ಅಂದಾಜು 4,300 ರೂ.) ತಲುಪಿತ್ತು.  ಈ ದರ ಈ ವರ್ಷದ ಗರಿಷ್ಠವಾಗಿದ್ದು, ಬೆಲೆ ಹೆಚ್ಚಳ ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ.

    ಬೆಲೆ ಏರಿಕೆ ಯಾಕೆ?
    ದೇಶದ ಕಚ್ಚಾ ತೈಲ ಬೇಡಿಕೆಯ ಶೇ.84ರಷ್ಟನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ದೇಶದ ತೈಲ ಮಾರುಕಟ್ಟೆ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಕೋವಿಡ್–19 ಲಾಕ್‌ಡೌನ್ ಘೋಷಣೆಯಾದ ಬಳಿಕ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 2 ತಿಂಗಳ ಕಾಲ ದರ ಪರಿಷ್ಕರಣೆ ನಿಲ್ಲಿಸಿತ್ತು.

    ಕೋವಿಡ್‌ ಲಸಿಕೆ ಲಭ್ಯತೆ ಮತ್ತು ಕೋವಿಡ್‌ 19 ಸೋಂಕಿತರ ಸಂಖ್ಯೆ ಇಳಿಕೆ ಆಗುತ್ತಿದ್ದಂತೆ ವಿಶ್ವದೆಲ್ಲೆಡೆ ಆರ್ಥಿಕ ಚಟುವಟಿಕೆಗೆಗಳು ಮತ್ತೆ ಆರಂಭವಾಗಿದೆ. 2019ರ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ 66 ಡಾಲರ್( ಅಂದಾಜು 4,800) ಇದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಲಾಕ್‌ಡೌನ್, ಸಂಚಾರ ನಿರ್ಬಂಧ ಸೇರಿದಂತೆ ಹಲವು ಕಾರಣಗಳಿಂದ 2020ರ ಏಪ್ರಿಲ್‌ ವೇಳೆಗೆ 19 ಡಾಲರ್‌(ಅಂದಾಜು 1,300 ರೂ.)ಗೆ ಇಳಿಕೆ ಕಂಡಿತ್ತು.

    ಕೋವಿಡ್‌ 19 ಹಿನ್ನೆಲೆಯಲ್ಲಿ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್‌) ರಾಷ್ಟ್ರಗಳು 2020ರಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ವಿಶ್ವದ ಆರ್ಥಿಕತೆ ಮರಳುತ್ತಿದ್ದು ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಒಪೆಕ್‌ ರಾಷ್ಟ್ರಗಳು ಈ ಹಿಂದೆ ಮಾಡಿಕೊಂಡ ಮತುಕತೆಯಂತೆಯೇ ಉತ್ಪಾದನೆ ಮಾಡುತ್ತಿದೆ. ಆದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುತ್ತಿರುವ ಸೌದಿ ಅರೆಬಿಯಾ ಪ್ರತಿ ದಿನ 1 ದಶಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಪೂರೈಕೆಯೂ ಕಡಿಮೆ ಆಗುತ್ತಿದೆ. ಆದರೆ ದೇಶಗಳಿಂದ ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಬ್ರೆಂಟ್‌ ಕಚ್ಚಾ ತೈಲದ ದರ ಏರಿಕೆ ಆಗುತ್ತಿದೆ.

    ಅಮೆರಿಕದ ಟ್ರಂಪ್‌ ಆಡಳಿತ ಇರಾನ್ ಮೇಲೆ ತೈಲ ಖರೀದಿ ಮತ್ತು ವ್ಯಾಪಾರ ಸಂಬಂಧ ನಿರ್ಬಂಧ ಹೇರಿತ್ತು. ಆದರೆ ಹೊಸದಾಗಿ ಅಧ್ಯಕ್ಷರಾಗಿರುವ ಜೋ ಬೈಡನ್‌ ಸರ್ಕಾರ ಇರಾನ್‌ ಮೇಲಿನ ನಿರ್ಬಂಧ ತೆಗೆದು ಹಾಕಿದರೆ ತೈಲ ಉತ್ಪಾದನೆ ಹೆಚ್ಚಾಗಿ ದರ ಕಡಿಮೆಯಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಕಚ್ಚಾ ತೈಲ ಬೆಲೆ ಭಾರೀ ಇಳಿಕೆ – ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿಲ್ಲ ಯಾಕೆ?

    ಕಚ್ಚಾ ತೈಲ ಬೆಲೆ ಭಾರೀ ಇಳಿಕೆ – ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿಲ್ಲ ಯಾಕೆ?

    – ಅಮೆರಿಕದಲ್ಲಿ ಶೂನ್ಯಕ್ಕಿಂತ ಕಡಿಮೆ ಬೆಲೆಗೆ ತೈಲ ಕುಸಿತ
    – ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆ

    ಕೊರೊನಾ ವೈರಸ್ ಹಾವಳಿಯಿಂದ ವಿಶ್ವದ ಹಲವೆಡೆ ಲಾಕ್‍ಡೌನ್ ಘೋಷಣೆಯಾಗಿದ್ದು, ಬೇಡಿಕೆ ಇಲ್ಲದೇ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಅಮೆರಿಕದ ಇತಿಹಾಸ ಇದೇ ಮೊದಲ ಬಾರಿಗೆ ಶೂನ್ಯಕ್ಕಿಂತಲೂ ಕಡಿಮೆ ಬೆಲೆಗೆ ಕುಸಿದಿದೆ. ಕಚ್ಚಾ ತೈಲದ ಬೆಲೆ ಕುಸಿದ ಹಿನ್ನೆಲೆಯಲ್ಲಿ ಭಾರತದಲ್ಲೂ ದರ ಇಳಿಕೆಯಾಗಬೇಕಿತ್ತು. ಆದರೆ ದರ ಇಳಿಕೆ ಆಗುತ್ತಿಲ್ಲ. ಹೀಗಾಗಿ ಯಾಕೆ ದರ ಇಳಿಕೆ ಆಗುತ್ತಿಲ್ಲ? ಮುಂದೆ ಇಳಿಕೆ ಆಗುತ್ತಾ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಅಮೆರಿಕದಲ್ಲಿ ಎಷ್ಟು ಇಳಿಕೆಯಾಗಿದೆ?
    ಸೋಮವಾರ ಟೆಕ್ಸಾಸ್ ಫ್ಯೂಚರ್ ಮಾರುಕಟ್ಟೆಯಲ್ಲಿ 1 ಬ್ಯಾರಲ್ (158 ಲೀ) ಕಚ್ಚಾತೈಲದ ಬೆಲೆ 18 ಡಾಲರ್ ನಿಂದ ಆರಂಭಗೊಂಡು ಕೊನೆಗೆ -37.63 ಡಾಲರ್ ಗೆ ಕೊನೆಯಾಗಿದೆ. ಮೇ ತಿಂಗಳ ಪೂರೈಕೆಗಾಗಿ ಸೋಮವಾರ ನಡೆದ ಫ್ಯೂಚರ್ ಟ್ರೇಡಿಂಗ್‍ನಲ್ಲಿ ವೇಳೆ ಈ ಕುಸಿತ ಕಂಡು ಬಂದಿದೆ.

    ಇಳಿಕೆಗೆ ಕಾರಣ ಏನು?
    ಜೂನ್ ತಿಂಗಳವರೆಗೆ ಆರ್ಥಿಕತೆ ಚೇತರಿಕೆ ಕಾಣಲು ಸಾಧ್ಯವಿಲ್ಲ ಎಂಬ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮೇ ತಿಂಗಳ ಖರೀದಿಗೆ ಯಾರೂ ಮುಂದಾಗಲಿಲ್ಲ. ಇದರ ಜೊತೆ ಅಮೆರಿಕದಲ್ಲಿ ಬೇಡಿಕೆಗಿಂತ ತೈಲ ಉತ್ಪಾದನೆ ಜಾಸ್ತಿಯಾಗಿ ಸಂಗ್ರಹ ಮಾಡಲು ಜಾಗ ಇಲ್ಲದ ಕಾರಣ ಬೆಲೆ ಇಳಿಕೆಯಾಗಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ: ಮತ್ತೆ ಮೋದಿ ಕೈ ಹಿಡಿದ ಕಚ್ಚಾ ತೈಲ – ಒಂದೇ ದಿನ ಭಾರೀ ಇಳಿಕೆ, ದರ ಸಮರ ಆರಂಭ

    ಭಾರತ ಯಾಕೆ ಖರೀದಿ ಮಾಡುತ್ತಿಲ್ಲ?
    ಕಡಿಮೆ ಬೆಲೆ ಇರುವ ಹಿನ್ನೆಲೆಯಲ್ಲಿ ಭಾರತ ಯಾಕೆ ಅಮೆರಿಕದಿಂದ ಕಚ್ಚಾ ತೈಲ ಖರೀದಿ ಮಾಡಬಾರದು ಎಂಬ ಪ್ರಶ್ನೆ ಏಳುವುದು ಸಹಜ. ಪ್ರಶ್ನೆ ಬಹಳ ಸುಲಭವಾಗಿ ಕೇಳಬಹುದಾದರೂ ಉತ್ತರ ಮಾತ್ರ ಅಷ್ಟು ಸುಲಭ ಇಲ್ಲ. ಅಮೆರಿಕದ ಜೊತೆ ವಿವಿಧ ವ್ಯವಹಾರ ಮಾಡುತ್ತಿರುವ ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿಲ್ಲ. ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಬೆಲೆ ನಿರ್ಧಾರ ಮಾಡುವ ಬ್ರೆಂಚ್ ಕಚ್ಚಾ ತೈಲವನ್ನು ಭಾರತ ಖರೀದಿಸುತ್ತದೆ. ವೆಸ್ಟ್ ಟೆಕ್ಸಾಸ್ ಇಂಟರ್‍ಮೀಡಿಯೆಟ್(ಡಬ್ಲ್ಯೂಟಿಐ) ಎನ್ನುವುದು ಅಮೆರಿಕದ ಬೆಂಚ್ ಮಾರ್ಕ್ ಆಗಿದೆ.

    ವಿಶ್ವದ ಮೂರನೇ ಎರಡರಷ್ಟು ರಾಷ್ಟ್ರಗಳಿಗೆ ಬ್ರೆಂಟ್ ಕಚ್ಚಾ ತೈಲ ಪೊರೈಕೆ ಆಗುತ್ತಿದೆ. ಯುರೋಪ್, ಏಷ್ಯಾ, ಆಫ್ರಿಕಾ ಸೇರಿದಂತೆ ಹಲವು ಮಧ್ಯ ಪ್ರಾಚ್ಯ ದೇಶಗಳಿಗೆ ಬ್ರೆಂಟ್ ಕಚ್ಚಾ ತೈಲ ಸರಬರಾಜು ಆಗುತ್ತದೆ. ಬ್ರೆಂಟ್ ಕಚ್ಚಾ ತೈಲ ಸಮುದ್ರದಲ್ಲೇ ಉತ್ಪಾದನೆಯಾಗಿ ಸುಲಭವಾಗಿ ಹಡಗುಗಳಿಗೆ ತುಂಬಿಸಿ ಸಾಗಾಟ ಮಾಡಬಹುದು. ಆದರೆ ಡಬ್ಲ್ಯೂಟಿಐ ಅಮೆರಿಕದ ಕುಶಿಂಗ್, ಒಕ್ಲಹೋಮದಲ್ಲಿ ಮಾತ್ರ ಸೀಮಿತವಾಗಿದ್ದು ಸಾಗಾಟ ಮತ್ತು ಸಂಗ್ರಹಣೆ ಕಷ್ಟ. ಅಮೆರಿಕದಿಂದ ಭಾರತಕ್ಕೆ ತೈಲ ಸಾಗಾಟ ಮಾಡುವುದು ಬಹಳ ತ್ರಾಸದಾಯಕ.

    ಖರೀದಿಸಿದ್ರೂ ಸಂಗ್ರಹಿಸಲು ಸಾಧ್ಯವಿಲ್ಲ:
    ಭಾರತ ಕಚ್ಚಾ ತೈಲವನ್ನು ಆಮದು ಮಾಡಿ ಇಲ್ಲಿ ಸಂಸ್ಕರಿಸುತ್ತದೆ. ಭಾರತ ಡಾಲರ್ ಮೂಲಕ ಕಚ್ಚಾ ತೈಲವನ್ನು ಖರೀದಿ ಮಾಡುತ್ತದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕಡಿಮೆಯಾದರೆ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ. ಇದರ ಜೊತೆ ತೈಲ ಖರೀದಿ, ಸಾಗಾಟ, ಸಂಸ್ಕರಣೆ, ಬಳಿಕ ಡೀಲರ್ ಗಳಿಗೆ ಮಾರಾಟ ಇವುಗಳನ್ನು ಗಮನಿಸಿಕೊಂಡು ದೇಶಿಯ ದರ ನಿಗದಿಯಾಗುತ್ತದೆ. ಇದನ್ನೂ ಓದಿ: ಸೌದಿ ಕಂಪನಿ ಜೊತೆ ಡೀಲ್ – ಭಾರತದ ಅತಿ ದೊಡ್ಡ ಎಫ್‍ಡಿಐ ಒಪ್ಪಂದಕ್ಕೆ ರಿಲಯನ್ಸ್ ಸಹಿ

    ಕಚ್ಚಾ ತೈಲ ದರ ಇಳಿಕೆ ಆಗುತ್ತಿದೆ ನಿಜ. ಆದರೆ ಅದನ್ನು ಖರೀದಿಸಿ ಸಂಗ್ರಹಿಸುವ ಸಾಮರ್ಥ್ಯ ಸಹ ದೇಶಕ್ಕೆ ಇರಬೇಕು. ಸದ್ಯ ಭಾರತ ಮೂರು ಭೂಗತ ತೈಲ ಸಂಗ್ರಹಾಗಾರಗಳನ್ನು ಹೊಂದಿದೆ. ಸದ್ಯ ಇಲ್ಲಿ 13 ದಿನಕ್ಕೆ ಆಗುವಷ್ಟು ತೈಲಗಳನ್ನು ಸಂಗ್ರಹ ಮಾಡಬಹುದಾಗಿದೆ. ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಒಟ್ಟು 36.87 ದಶಲಕ್ಷ ಬ್ಯಾರೆಲ್ ತೈಲವನ್ನು ಈ ಸಂಗ್ರಹಾಗಾರಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು.

    ಲಾಕ್‍ಡೌನ್ ಘೋಷಣೆಯಾಗಿರುವ ಕಾರಣ ವಾಹನಗಳ ಸಂಚಾರ ಕಡಿಮೆ ಆಗಿದ್ದರಿಂದ ಪೆಟ್ರೋಲ್, ಡೀಸೆಲ್ ಗಳಿಗೆ ಬೇಡಿಕೆ ಇಲ್ಲ. ಲಾಕ್‍ಡೌನ್ ಘೋಷಣೆಗೂ ಮುನ್ನ ತೈಲ ಬೇಗನೆ ಮಾರಾಟವಾಗುತ್ತಿತ್ತು. ಆದರೆ ಈಗ ಬಂಕ್ ಗಳಲ್ಲಿ ಸಂಗ್ರಹವಾದ ಪೆಟ್ರೋಲ್, ಡೀಸೆಲ್ ಹಲವು ದಿನಗಳವರೆಗೆ ಇರುತ್ತದೆ. ಬೇಡಿಕೆಯೇ ಇಲ್ಲದ ಮೇಲೆ ಸಂಸ್ಕರಿಸಿದ ತೈಲವನ್ನು ವಿತರಣೆ ಮಾಡಲು ಸಾಧ್ಯವಿಲ್ಲ.

    ಎಲ್ಲಿ ತೈಲ ಸಂಗ್ರಹಾಗಾರಗಳಿವೆ?
    ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‍ಪಿಆರ್‍ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ. ಮುಂದೆ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಉಡುಪಿಯಲ್ಲಿ ತೈಲ ಸಂಗ್ರಹಿಸಲಿದೆ ಸೌದಿ ಅರಾಮ್ಕೊ

    ದರ ಇಳಿಕೆಯಾಗುತ್ತಾ?
    ರಷ್ಯಾ ಒಪೆಕ್ ರಾಷ್ಟ್ರಗಳ ಜೊತೆಗಿತ ಒಪ್ಪಂದದಿಂದ ಹಿಂದೆ ಸರಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಸಮರ ಆರಂಭಗೊಂಡಿತ್ತು. ಸೌದಿ ಭಾರೀ ಪ್ರಮಾಣದಲ್ಲಿ ತೈಲ ಉತ್ಪಾದಿಸಲು ಮುಂದಾಗಿದ್ದರಿಂದ ಕಚ್ಚಾ ತೈಲದ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಬೆನ್ನಲ್ಲೇ ಕೊರೊನಾ ಹಾವಳಿಯಿಂದ ರಷ್ಯಾ ಒಪೆಕ್ ರಾಷ್ಟ್ರಗಳ ಜೊತೆ ಒಪ್ಪಂದ ಮುಂದುವರಿಸಿ ತೈಲ ಉತ್ಪಾದನೆ ಕಡಿತಕ್ಕೆ ಒಪ್ಪಿಗೆ ಸೂಚಿಸಿತ್ತು. ಪರಿಣಾಮ ಬೆಲೆ ಸಮರ ಅಂತ್ಯಗೊಂಡಿತ್ತು. ಬೆಲೆ ಸಮರ ಅಂತ್ಯಗೊಂಡರೂ ಬೇಡಿಕೆ ಇಲ್ಲದ ಕಾರಣ ಬ್ರೆಂಟ್ ಕಚ್ಚಾ ತೈಲದ ಬೆಲೆ ಕಡಿಮೆ ಆಗುತ್ತಿದೆ.

    ಭಾರತದಲ್ಲಿ ದರ ಇಳಿಕೆಯಾಗುತ್ತಾ?
    ಸದ್ಯ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಪೆಟ್ರೋಲ್, ಡೀಸೆಲ್ ನಿಂದ ಬರುತ್ತಿದೆ. ಈ ಕಾರಣಕ್ಕೆ ತೈಲವನ್ನು ಜಿಎಸ್‍ಟಿಯಿಂದ ಹೊರಗಿಡಲಾಗಿದೆ. ಈಗಾಗಲೇ ಭಾರತದಲ್ಲಿ ಕಳೆದ ವರ್ಷ ಹತ್ತಿರ ಹತ್ತಿರ 80-90 ರೂ. ವರೆಗೆ ಪೆಟ್ರೋಲ್/ ಡೀಸೆಲ್ ದರ ತಲುಪಿದೆ. ಗ್ರಾಹಕ ಇಷ್ಟು ಬೆಲೆ ನೀಡಿ ಖರೀದಿಸಿದ ಮೇಲೆ ಬೆಲೆ ಕಡಿಮೆ ಆಗುವುದು ಅನುಮಾನ. ಬೆಲೆ ಕಡಿಮೆಯಾದರೂ ಅಬಕಾರಿ ಸುಂಕ ಏರಿಸಿ ಹಳೆಯ ಬೆಲೆಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಸೆಸ್ ಜಾರಿ ಮಾಡಿದರೆ ರಾಜ್ಯ ಸರ್ಕಾರಗಳು ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಿಸುತ್ತಿವೆ. ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಾಗಿ ಆರ್ಥಿಕತೆ ಸರಿಯಾದ ದಾರಿಯಲ್ಲಿ ಸಾಗುವ ಲಕ್ಷಣ ಕಂಡುಬಂದರೆ ಅಬಕಾರಿ ಸುಂಕವನ್ನು ಸರ್ಕಾರ ಇಳಿಸಿದರೆ ದರ ಇಳಿಯಬಹುದು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

  • ಸೌದಿ ಅರೇಬಿಯಾದಿಂದ ತೈಲ ಉತ್ಪಾದನೆ ಕಡಿತ – ಮತ್ತೆ ದರ ಏರಿಕೆ ಸಾಧ್ಯತೆ

    ಸೌದಿ ಅರೇಬಿಯಾದಿಂದ ತೈಲ ಉತ್ಪಾದನೆ ಕಡಿತ – ಮತ್ತೆ ದರ ಏರಿಕೆ ಸಾಧ್ಯತೆ

    ಅಬುಧಾಬಿ: ಸೌದಿ ಅರೇಬಿಯಾ ಡಿಸೆಂಬರ್ ಬಳಿಕ ತೈಲೋತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದು, ತೈಲ ದರ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ.

    ಡಿಸೆಂಬರ್ ನಲ್ಲಿ  ದಿನದ ಸರಾಸರಿ ಉತ್ಪಾದನೆಯಲ್ಲಿ 5 ಲಕ್ಷ ಬ್ಯಾರೆಲ್‍ನಷ್ಟು ಕಡಿತಗೊಳಿಸಲು ಸೌದಿ ಅರೇಬಿಯಾ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಶೇ.2ರಷ್ಟು ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 71.52 ಡಾಲರ್  ತಲುಪಿದೆ.

    ಮಾರುಕಟ್ಟೆಯಲ್ಲಿ ದರವನ್ನು ಸ್ಥಿರಗೊಳಿಸಲು 10 ಲಕ್ಷ ಬ್ಯಾರೆಲ್ ತನಕ ತೈಲ ಉತ್ಪಾದನೆಯನ್ನು ಕಡಿತಗೊಳಿಸಬೇಕಾದ ಅಗತ್ಯವಿದೆ. ಹೀಗಾಗಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದ್ದೇವೆ ಎಂದು ಸೌದಿ ಅರೇಬಿಯಾದ ಇಂಧನ ಸಚಿವ ಖಲೀದ್ ಅಲ್ ಫಾಲಿ ಅಬುಧಾಬಿಯಲ್ಲಿ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದಾರೆ.

    14 ಸದಸ್ಯರನ್ನು ಒಳಗೊಂಡಿರುವ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಸದಸ್ಯ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾ ಒಂದೇ ಜಾಗತಿಕ ಕಚ್ಚಾ ತೈಲದ ಮೂರನೇ ಒಂದರಷ್ಟನ್ನು ಪೂರೈಸುತ್ತದೆ. ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಒಪೆಕ್ ರಾಷ್ಟ್ರಗಳು ಸಹ ತೈಲ ಉತ್ಪಾದನೆಯನ್ನು ಮುಂದಿನ ವರ್ಷ ಕಡಿತಗೊಳಿಸಬೇಕು ಎಂದು ಖಲೀದ್ ಅಲ್ ಫಾಲಿ ಹೇಳಿದ್ದಾರೆ.

    ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಜಾಸ್ತಿ ಪ್ರಮಾಣದಲ್ಲಿ ತೈಲ ಪೊರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 1 ತಿಂಗಳಿನಿಂದ ಕಚ್ಚಾ ತೈಲ ದರ ಐದನೇ ಒಂದರಷ್ಟು ಇಳಿಕೆಯಾಗಿದೆ. ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದರೂ ಮಾರುಕಟ್ಟೆಯ ಮೇಲೆ ಅಷ್ಟೊಂದು ಪರಿಣಾಮ ಬೀರದ ಪರಿಣಾಮ ಬೆಲೆ ಕಡಿಮೆಯಾಗಿತ್ತು.

    ಪ್ರತಿದಿನ ಒಟ್ಟು 10 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಒಪೆಕ್ ರಾಷ್ಟ್ರಗಳು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 6 ರಂದು ವಿಯೆನ್ನಾದಲ್ಲಿ ಒಪೆಕ್ ರಾಷ್ಟ್ರಗಳ ಸಭೆ ನಡೆಯಲಿದ್ದು ಅಲ್ಲಿ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಕಚ್ಚಾ ತೈಲ ದರ ಶುಕ್ರವಾರ ಬ್ಯಾರೆಲ್‍ಗೆ 70 ಡಾಲರ್ ಗೆ  ಇಳಿದಿದ್ದರೆ, ಸೋಮವಾರ 71  ಡಾಲರ್ ಗೆ ಏರಿಕೆಯಾಗಿತ್ತು.

    ಸೌದಿ ಅರೇಬಿಯಾ ತೈಲವೇ ದೊಡ್ಡ ಆರ್ಥಿಕ ಸಂಪನ್ಮೂಲ. ಕೆಲ ದಿನಗಳಿಂದ ತೈಲ ದರ ಇಳಿಕೆಯಾಗುತ್ತಿದೆ. ದರ ಇಳಿಕೆಯಾದರೆ ದೇಶದ ಆದಾಯಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಉತ್ಪಾದನೆಯನ್ನು ಕಡಿತಗೊಳಿಸಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಸಿ ಆದಾಯವನ್ನು ಹೆಚ್ಚಿಸಲು ಈ ತಂತ್ರಕ್ಕೆ  ಸೌದಿ ಅರೇಬಿಯಾ ಮುಂದಾಗಿದೆ.

    ಸೌದಿ ಅರೇಬಿಯಾ ಈ ನಿರ್ಧಾರಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧ ವ್ಯಕ್ತಪಡಿಸಿದ್ದಾರೆ. ಒಪೆಕ್ ಮತ್ತು ಸೌದಿ ಅರೇಬಿಯಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಿಲ್ಲ ಎನ್ನುವ ಆಶಾವಾದವನ್ನು ನಾನು ಇಟ್ಟುಕೊಂಡಿದ್ದೇನೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews