Tag: Ooty

  • ಚುನಾವಣಾ ಬಿಸಿಯಿಂದ ರಿಲ್ಯಾಕ್ಸ್ ಮೂಡಿಗೆ ಸಿಎಂ- ಊಟಿಗೆ ಪಯಣ

    ಚುನಾವಣಾ ಬಿಸಿಯಿಂದ ರಿಲ್ಯಾಕ್ಸ್ ಮೂಡಿಗೆ ಸಿಎಂ- ಊಟಿಗೆ ಪಯಣ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಲೋಕಸಭಾ ಚುನಾವಣೆಯ (Lok Sabha Election) ಬಿಸಿಯಿಂದ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಅವರು ಹೆಚ್‍ಎಎಲ್‍ನಿಂದ (HAL) ಮೈಸೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಊಟಿಗೆ (Ooty) ತೆರಳಲಿದ್ದಾರೆ. ಮೂರು ದಿನಗಳ ಕಾಲ ಅವರು ವಿಶ್ರಾಂತಿ ಪಡೆಯಲಿದ್ದಾರೆ.

    ಸಿದ್ದರಾಮಯ್ಯ ತೆರಳುವ ಮುನ್ನ ಸಚಿವರಿಂದ ಸಿಎಂ ಭೇಟಿ ನೀಡಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಮಹದೇವಪ್ಪ, ರಾಜಣ್ಣ ಅವರು ಭೇಟಿಯಾಗಿದ್ದು, ಅನೌಪಚಾರಿಕವಾಗಿ ಸಚಿವರ ಜೊತೆ ಸಿಎಂ ಚರ್ಚೆ ಮಾಡಿದ್ದಾರೆ. ಎರಡನೇ ಹಂತದ ಚುನಾವಣಾ ಮತದಾನ ಮತ್ತು ಪ್ರಸಕ್ತ ರಾಜಕೀಯ ಬೆಳವಣಿಗೆ ಹಾಗೂ ಪೆನ್‍ಡ್ರೈವ್ ಪ್ರಕರಣದ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಇದನ್ನೂ ಓದಿ: ಕುಟುಂಬದೊಂದಿಗೆ ಚಿಕ್ಕಮಗಳೂರಿಗೆ ತೆರಳಿದ ಡಿಕೆ ಶಿವಕುಮಾರ್‌

    ಮನೆಯಿಂದ ಹೊರಟ ಸಿಎಂ ಕಾರ್ ಗ್ಲಾಸ್ ಇಳಿಸದೇ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು. ಊಟಿ ಪ್ರವಾಸದ ವೇಳೆ ಹೆಚ್.ಸಿ ಮಹದೇವಪ್ಪ ಸಿಎಂಗೆ ಸಾಥ್ ನೀಡಲಿದ್ದಾರೆ.

    ಇತ್ತ ಡಿಸಿಎಂ ಡಿಕೆ ಶಿವಕುಮಾರ್ (D.K Shivakumar) ಅವರು ಕುಟುಂಬದ ಸದಸ್ಯರ ಜೊತೆ ಚಿಕ್ಕಮಗಳೂರಿಗೆ ತೆರಳಿದ್ದು, ರೆಸಾರ್ಟ್‍ನಲ್ಲಿ ಕುಟುಂಬದ ಜೊತೆ ಎರಡು ದಿನ ಶಿವಕುಮಾರ್ ವಾಸ್ತವ್ಯ ಹೂಡಲಿದ್ದಾರೆ. ಅವರು ಚಿಕ್ಕಮಗಳೂರಿಗೆ (Chikkamgaluru) ತೆರಳಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸದಾಶಿವನಗರಕ್ಕೆ ವಾಪಸ್ ಆಗಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಡಿಕೆಶಿ ಚಿಕ್ಕಮಗಳೂರಿಗೆ ತೆರಳಲಿದ್ದಾರೆ. ಇದನ್ನೂ ಓದಿ: ಬಂಗಾಳದಲ್ಲಿ ಮತದಾನದ ವೇಳೆ ಬಿಜೆಪಿ ಅಭ್ಯರ್ಥಿಯೊಂದಿಗೆ ಟಿಎಂಸಿ ನಾಯಕರ ಘರ್ಷಣೆ

  • ಪ್ರವಾಸಿಗರೇ ಗಮನಿಸಿ – ಊಟಿ, ಕೊಡೈಕೆನಾಲ್‌ಗೆ ಹೋಗಬೇಕಾದ್ರೆ ಇ-ಪಾಸ್‌ ಕಡ್ಡಾಯ

    ಪ್ರವಾಸಿಗರೇ ಗಮನಿಸಿ – ಊಟಿ, ಕೊಡೈಕೆನಾಲ್‌ಗೆ ಹೋಗಬೇಕಾದ್ರೆ ಇ-ಪಾಸ್‌ ಕಡ್ಡಾಯ

    ಚೆನ್ನೈ: ಮೇ 7 ರಿಂದ ಊಟಿ (Ooty) ಮತ್ತು ಕೊಡೈಕೆನಾಲ್‌ಗೆ (Kodaikanal) ತೆರಳುವ ಪ್ರವಾಸಿ ವಾಹನಗಳು ಇ-ಪಾಸ್‌ (E-Pass) ಕಡ್ಡಾಯವಾಗಿ ಹೊಂದಿರಬೇಕೆಂದು ಮದ್ರಾಸ್‌ ಹೈಕೋರ್ಟ್‌ (Madras High Court) ಆದೇಶ ಪ್ರಕಟಿಸಿದೆ.

    ಮೇ 7 ರಿಂದ ಜೂನ್‌ 30 ರವರೆಗೆ ಇ-ಪಾಸ್‌ ಹೊಂದಿರುವ ಪ್ರವಾಸಿ ವಾಹನಗಳಿಗೆ (Tourist Vehicle) ಮಾತ್ರ ಊಟಿ ಮತ್ತು ಕೊಡೈಕನಲ್‌ ಪ್ರವೇಶಕ್ಕೆ ಅನುಮತಿ ನೀಡುವಂತೆ ನೀಲಗಿರಿ ಮತ್ತು ದಿಂಡಿಗಲ್‌ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.

    ಎಲ್ಲಾ ಮೋಟಾರು ವಾಹನಗಳು ಇ-ಪಾಸ್‌ಗಳನ್ನು ಪಡೆಯಬೇಕು. ಬೇಸಿಗೆಯಲ್ಲಿ ಎರಡು ಗಿರಿಧಾಮಗಳಿಗೆ ಪ್ರವೇಶಿಸುವ ವಾಹನಗಳ ಸಂಖ್ಯೆ ಮತ್ತು ವಿಧಗಳು, ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯ ಡೇಟಾವನ್ನು ಸಂಗ್ರಹಿಸಲು ಜಿಲ್ಲಾಡಳಿತಗಳಿಗೆ ಇದರಿಂದ ಸಹಾಯವಾಗಲಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಬಾಲಾಕೋಟ್ ಏರ್‌ಸ್ಟ್ರೈಕ್‌ ರಹಸ್ಯ ರಿವೀಲ್‌ ಮಾಡಿದ ಮೋದಿ

    ನ್ಯಾಯಮೂರ್ತಿಗಳಾದ ಎನ್.ಸತೀಶ್ ಕುಮಾರ್ ಮತ್ತು ಡಿ.ಭರತ ಚಕ್ರವರ್ತಿ ಅವರಿದ್ದ ವಿಶೇಷ ವಿಭಾಗೀಯ ಪೀಠ ಇ-ಪಾಸ್‌ ವಿತರಣೆಗೆ ನೀಲಗಿರಿ ಮತ್ತು ದಿಂಡಿಗಲ್ ಜಿಲ್ಲಾಡಳಿತಕ್ಕೆ ಯಾವುದೇ ಮಿತಿ ಹೇರಿಲ್ಲ. ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಇ-ಪಾಸ್‌ನಿಂದ ವಿನಾಯಿತಿ ನೀಡಬೇಕು. ಇ-ಪಾಸ್ ವ್ಯವಸ್ಥೆಗೆ ವ್ಯಾಪಕ ಪ್ರಚಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

    ವಾಹನದ ವರ್ಗ, ಪ್ರಯಾಣಿಸುವವರ ಒಟ್ಟು ಸಂಖ್ಯೆ, ಹಗಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರಾ ಅಥವಾ ರಾತ್ರಿಯಲ್ಲಿ ತಂಗಲು ಉದ್ದೇಶಿಸಿದ್ದಾರಾ ಎಂಬಿತ್ಯಾದಿ ಮಾಹಿತಿಗಳನ್ನು ಸಾಧ್ಯವಾದಷ್ಟು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪೀಠ ನಿರ್ದೇಶನ ನೀಡಿದೆ.  ಇದನ್ನೂ ಓದಿ: ಅಮಿತ್‌ ಶಾ ಫೇಕ್‌ ವಿಡಿಯೋ ಕೇಸ್‌ – ರೇವಂತ್‌ ರೆಡ್ಡಿಗೆ ಸಮನ್ಸ್‌, ಓರ್ವ ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌

    ಇಬ್ಬರು ಜಿಲ್ಲಾಧಿಕಾರಿಗಳು ಮಾಹಿತಿ ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಇ-ಪಾಸ್ ವ್ಯವಸ್ಥೆಗೆ ಪಾವತಿ ಗೇಟ್‌ವೇಯನ್ನು ಲಿಂಕ್ ಮಾಡಬೇಕು. ಅರ್ಜಿದಾರರು ಆನ್‌ಲೈನ್‌ನಲ್ಲಿ ಟೋಲ್ ಶುಲ್ಕವನ್ನು ಪಾವತಿಸಬೇಕು. ಇದರಿಂದ ಚೆಕ್ ಪೋಸ್ಟ್‌ಗಳ ಬಳಿ ಗಂಟೆಗಟ್ಟಲೇ ವಾಹನಗಳ ಸರತಿ ಸಾಲು ತಪ್ಪುತ್ತದೆ. ಇಂಧನ ಉಳಿತಾಯವಾಗುತ್ತದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

    ಎಂಟು ಚೆಕ್ ಪೋಸ್ಟ್‌ಗಳ ಮೂಲಕ ಪ್ರತಿದಿನ ಸರಿಸುಮಾರು 20 ಸಾವಿರ ವಾಹನಗಳು (11,500 ಕಾರುಗಳು, 1,300 ವ್ಯಾನ್‌ಗಳು, 600 ಬಸ್‌ಗಳು ಮತ್ತು 6,500 ದ್ವಿಚಕ್ರ ವಾಹನಗಳು) ನೀಲಗಿರಿ ಪ್ರವೇಶಿಸುತ್ತವೆ ಎಂದು ರಾಜ್ಯ ಸರ್ಕಾರ ಸಲ್ಲಿಸಿದ ಸ್ಥಿತಿ ವರದಿಯನ್ನು ಓದಿ ನ್ಯಾಯಾಧೀಶರು ಆತಂಕ ವ್ಯಕ್ತಪಡಿಸಿದರು. ಇಷ್ಟು ವಾಹನ ದಟ್ಟಣೆ ಇರುವಾಗ ಆನೆಗಳು ರಸ್ತೆಗಳನ್ನು ದಾಟಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

    ಈಗ ಊಟಿಯಲ್ಲಿ ಬರಗಾಲ ಬಂದಿದೆ. ಅಲ್ಲಿನ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪ್ರವಾಸಿಗರಿಗೆ ಹೇಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ನ್ಯಾಯಮೂರ್ತಿ ಚಕ್ರವರ್ತಿ ಕಳವಳ ವ್ಯಕ್ತಪಡಿಸಿದರು.

     

  • ಹಿರಿಯ ವಕೀಲ ಸಿ.ವಿ ನಾಗೇಶ್ ಪುತ್ರ ಅರುಣ್ ಹೃದಯಾಘಾತದಿಂದ ನಿಧನ

    ಹಿರಿಯ ವಕೀಲ ಸಿ.ವಿ ನಾಗೇಶ್ ಪುತ್ರ ಅರುಣ್ ಹೃದಯಾಘಾತದಿಂದ ನಿಧನ

    ಬೆಂಗಳೂರು: ಹಿರಿಯ ವಕೀಲ (Lawyer) ಸಿ.ವಿ ನಾಗೇಶ್ ಅವರ ಪುತ್ರ ಅರುಣ್ ನಾಗೇಶ್ (41) ಹೃದಯಾಘಾತದಿಂದ (Heart Attack) ಸೋಮವಾರ ಮೃತಪಟ್ಟಿದ್ದಾರೆ.

    ಕುಟುಂಬದ ಜೊತೆಗೆ ಊಟಿಗೆ (Ooty) ತೆರಳಿದ್ದ ಅವರು, ಹೋಟೆಲ್ ಒಂದರಲ್ಲಿ ಇಂದು ಬೆಳಗ್ಗೆ ಲೋ ಬಿಪಿಯಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು. ಆದರೆ ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದ್ದಕ್ಕೆ ಕಲ್ಲು ಎಸೆದು ಶಕ್ತಿ ಪ್ರದರ್ಶಿಸಿದ ಮಹಿಳೆ – 5 ಸಾವಿರ ದಂಡ ಕಟ್ಟಿ ಅದೇ ಬಸ್‍ನಲ್ಲಿ ಪ್ರಯಾಣ

    ಮೃತ ದೇಹವನ್ನು ಬೆಂಗಳೂರಿಗೆ ತರಲಾಗುತ್ತಿದ್ದು, ಮಂಗಳವಾರ ಮಧ್ಯಾಹ್ನ ಅಂತಿಮ ಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ರಸ್ತೆಯ ಮೇಲಲ್ಲ, ಕೋರ್ಟ್‍ನಲ್ಲಿ ಹೋರಾಟ ಮುಂದುವರೆಯಲಿದೆ – ಸಿಂಗ್‍ಗೆ ಕುಸ್ತಿಪಟುಗಳ ಎಚ್ಚರಿಕೆ

  • ಅಂದು ಬ್ರಿಟಿಷರ ತರಕಾರಿ ತೋಟ, ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ಗಾರ್ಡನ್‌

    ಅಂದು ಬ್ರಿಟಿಷರ ತರಕಾರಿ ತೋಟ, ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ಗಾರ್ಡನ್‌

    ತ್ರಿಕೆಗಳಲ್ಲಿ ಮತ್ತು ಮ್ಯಾಗಜಿನ್‌ಗಳಲ್ಲಿ ಊಟಿ(Ooty) ಪ್ರವಾಸದ ಪ್ಯಾಕೇಜ್‌ ಬಂದಾಗ ಊಟಿಯಲ್ಲಿ ನೋಡುವಂಥದ್ದು ಏನಿದೆ ಎಂಬ ಪ್ರಶ್ನೆ ಹುಟ್ಟುವುದು ಸಹಜ. ಅದು ಮದುವೆಯಾದವರಿಂದ ಹಿಡಿದು ಸಣ್ಣ ಮಕ್ಕಳು ಸಹ ಪ್ರವಾಸಕ್ಕೆ ಊಟಿಗೆ ಹೋಗೋಣ ಎನ್ನುತ್ತಿರುತ್ತಾರೆ. ಊಟಿಯಲ್ಲಿ ನೋಡುವಂತಹ ಜಾಗ ಬಹಳ ಇದೆ. ಆದರೆ ಊಟಿ ಯಾಕೆ ಫೇಮಸ್‌ ಅಂತ ತಿಳಿದುಕೊಂಡಾಗ ಇಲ್ಲಿನ ಜಾಗಗಳಿಗೆ ಜನ ಯಾಕೆ ಬರುತ್ತಾರೆ ಎನ್ನುವುದು ಗೊತ್ತಾಗುತ್ತದೆ.

    ಸಮುದ್ರಮಟ್ಟದಿಂದ 7,350 ಅಡಿ ಎತ್ತರದಲ್ಲಿರುವುದರಿಂದ ಚಳಿ ಸ್ವಲ್ಪ ಜಾಸ್ತಿ. ಊಟಿಗೆ ಮಳೆಗಾಲ ಹೊರತುಪಡಿಸಿ ಚಳಿಗಾಲ, ಬೇಸಿಗೆ ಕಾಲದಲ್ಲಿ ಪ್ರವಾಸ ಮಾಡಬಹುದು. ನೀಲಗಿರಿ(Nilgiri) ಜಿಲ್ಲೆಯಲ್ಲಿರುವ ಊಟಿಯ ಮೊದಲ ಹೆಸರು ʼಒಟ್ಟಕಲ್ ಮಂಡುʼ. ಬ್ರಿಟಿಷರ(British) ಆಳ್ವಿಕೆಯಲ್ಲಿ ಈ ಹೆಸರು ಬಹುಶಃ ಉದಕಮಂಡಲದಿಂದ ʼಊಟಕಮಂಡ್ʼ ಎಂದು ಬದಲಾಗಿ ನಂತರ ʼಊಟಿʼಯಾಗಿ ಬದಲಾಯಿತು ಎಂಬ ಮಾಹಿತಿ ಸಿಗುತ್ತದೆ. ಬ್ರಿಟಿಷರಿಗೆ ಭಾರತದ ಪ್ರದೇಶಗಳನ್ನು ಸ್ಪಷ್ಟವಾಗಿ ಉಚ್ಛಾರ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಹಲವು ಪ್ರದೇಶಗಳನ್ನು ತಮಗೆ ಅನುಕೂಲವಾಗುವಂತೆ ಬದಲಾಯಿಸಿದ್ದಾರೆ. ʼಮಡಿಕೇರಿʼಯನ್ನು ʼಮರ್ಕೆರಾʼವನ್ನಾಗಿ ಬದಲಾಯಿಸಿದಂತೆ ದೇಶದ ಹಲವು ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿದ್ದಾರೆ.  ಇದನ್ನೂ ಓದಿ: ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್‌!

    ಬ್ರಿಟಿಷರು ಭಾರತವನ್ನು ಕೊಳ್ಳೆ ಹೊಡೆದಿದ್ದಾರೆ ಎಲ್ಲವೂ ಸರಿ. ಆದರೆ ಸ್ಥಳಗಳನ್ನು ಪ್ರವಾಸಿ ಸ್ಥಳಗಳನ್ನಾಗಿ ಮಾಡಿ ಪ್ರವಾಸೋದ್ಯಮ(Tourism) ಅಭಿವೃದ್ಧಿ ಮಾಡುವುದು ಹೇಗೆ ಎಂಬುದನ್ನು ಅವರನ್ನು ನೋಡಿ ನಾವು ಕಲಿಯಬೇಕು. ಬೇಕಾದರೆ ಗಮನಿಸಿ ನೋಡಿ ಭಾರತದಲ್ಲಿ ಎಲ್ಲೆಲ್ಲಿ ಎತ್ತರದ ಪ್ರದೇಶಗಳು ಇದೆಯೋ ಅಲ್ಲಲ್ಲಿ ಪ್ರವಾಸಿ ಸ್ಥಳವನ್ನುನಿರ್ಮಿಸಿದ್ದಾರೆ. ಪ್ರವಾಸಿ ಸ್ಥಳ ಅಭಿವೃದ್ಧಿ, ಜನರಿಗೆ ಉದ್ಯೋಗ ಒಟ್ಟಿನಲ್ಲಿ ಆರ್ಥಿಕಾಭಿವೃದ್ಧಿ. ಈ ಪ್ರವಾಸೋದ್ಯಮ ಪಾಶ್ಚಿಮಾತ್ಯರ ಜೀನ್‌ನಲ್ಲೇ ಬಂದಿದೆ. ಭಾರತೀಯರು ಸೇರಿದಂತೆ ವಿಶ್ವದ ಮಂದಿ ಯುರೋಪ್‌ ಪ್ರವಾಸಕ್ಕೆ ಜೈ ಅನ್ನುತ್ತಿರುವುದು ಈ ಕಾರಣಕ್ಕಾಗಿಯೇ ಅಲ್ಲವೇ!

    ಪ್ರವಾಸದ ವಿಚಾರದಲ್ಲಿ ಬ್ರಿಟಿಷರಿಗೆ ಇಷ್ಟೊಂದು ಬಿಲ್ಡಪ್‌ ಕೊಟ್ಟದ್ದು ಯಾಕೆ ಅಂದರೆ ಅದಕ್ಕೂ ಕಾರಣವಿದೆ. ಊಟಿಯ ಬಹಳ ಫೇಮಸ್‌ ಸ್ಥಳ ಯಾವುದು ಅಂದರೆ ಅದು ಬೊಟಾನಿಕಲ್‌ ಗಾರ್ಡನ್‌(Botanical Garden). 55 ಎಕ್ರೆ ಜಾಗದಲ್ಲಿ ತಲೆ ಎತ್ತಿರುವ ಗಾರ್ಡನ್‌ 1848ರಲ್ಲಿ ಆರಂಭಗೊಂಡಿತ್ತು. ಯುರೋಪ್‌(Europe) ಜನರಿಗೆ ಕಡಿಮೆ ಬೆಲೆಯಲ್ಲಿ ತರಕಾರಿಗಳನ್ನು ಕಳುಹಿಸಲು ಸೃಷ್ಟಿಯಾದ ಜಾಗವೇ ಈ ಗಾರ್ಡನ್‌.  ಇದನ್ನೂ ಓದಿ: ಅಲ್ಲಿ ನಿಂತರೆ ಕರ್ನಾಟಕ, ಇಲ್ಲಿ ನಿಂತರೆ ತಮಿಳುನಾಡು!

    ಪ್ರಸ್ತುತ ಬೊಟಾನಿಕಲ್ ಗಾರ್ಡನ್‌ಗಳನ್ನು ಲೋವರ್ ಗಾರ್ಡನ್, ನ್ಯೂ ಗಾರ್ಡನ್, ಇಟಾಲಿಯನ್ ಗಾರ್ಡನ್, ಕನ್ಸರ್ವೇಟರಿ, ಫೌಂಟೇನ್ ಟೆರೇಸ್ ಮತ್ತು ನರ್ಸರಿಗಳು ಎಂದು 6 ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಸ್ಯಗಳು, ಮರಗಳು, ಗಿಡಮೂಲಿಕೆಗಳು ಮತ್ತು ಬೋನ್ಸಾಯ್‌ ಸಸ್ಯಗಳು ಈ ಗಾರ್ಡನ್‌ನಲ್ಲಿದೆ.

    ಹಚ್ಚ ಹಸಿರಿನ, ಉತ್ತಮವಾಗಿ ನಿರ್ವಹಿಸಲಾದ ಹುಲ್ಲುಹಾಸುಗಳು, ಅಪರೂಪದ ಮರಗಳ ಜಾತಿಗಳು 2 ಕೋಟಿ ವರ್ಷಗಳಷ್ಟು ಹಳೆಯದಾದ ಪಳೆಯುಳಿಕೆ ಮರವನ್ನು ಇಲ್ಲಿ ನೋಡಬಹುದು. ಪ್ರತಿ ವರ್ಷ ಮೇ ತಿಂಗಳಲ್ಲಿ ಅಪರೂಪದ ಸಸ್ಯ ಪ್ರಭೇದಗಳ ಪ್ರದರ್ಶನದೊಂದಿಗೆ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ.

    ವಿಶಾಲವಾದ ಜಾಗದಲ್ಲಿ ಫೋಟೋಗ್ರಫಿ ಮಾಡಬಹುದು. ನವ ಜೋಡಿಗಳು ಮಾತನಾಡುತ್ತಾ ಮರಗಳನ್ನು ಸುತ್ತಬಹುದು. ಸಣ್ಣ ಮಕ್ಕಳು ಹುಲ್ಲು ಹಾಸಿನ ಮೇಲೆ ಪಲ್ಟಿ ಮಾಡಬಹುದು. ಒಟ್ಟಿನಲ್ಲಿ ನಡೆಯಲು ಸಮರ್ಥರಾದವರು ಈ ಗಾರ್ಡನ್‌ಗೆ ಭೇಟಿ ನೀಡಬಹುದು.

    – ಅಶ್ವಥ್‌ ಸಂಪಾಜೆ

    Live Tv
    [brid partner=56869869 player=32851 video=960834 autoplay=true]

  • ಅಲ್ಲಿ ನಿಂತರೆ ಕರ್ನಾಟಕ, ಇಲ್ಲಿ ನಿಂತರೆ ತಮಿಳುನಾಡು!

    ಅಲ್ಲಿ ನಿಂತರೆ ಕರ್ನಾಟಕ, ಇಲ್ಲಿ ನಿಂತರೆ ತಮಿಳುನಾಡು!

    ಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ಅರಣ್ಯಗಳು ದಕ್ಷಿಣ ಭಾರತದಲ್ಲಿ ‘V’ ಆಕಾರದಲ್ಲಿ ಹರಡಿರುವುದು ನಿಮಗೆ ಗೊತ್ತೇ ಇದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ,ಕೇರಳ, ಗೋವಾದಲ್ಲಿ ಪಶ್ಚಿಮ ಘಟ್ಟ ಇದ್ದರೆ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪೂರ್ವ ಘಟ್ಟವಿದೆ. ಈ ಎರಡು ಪ್ರದೇಶಗಳು ಸಂದಿಸುವ ಜಾಗ ಯಾವುದು ಎಂದರೆ ಅದು ದೊಡ್ಡ ಬೆಟ್ಟ.

    ಊಟಿ ರೈಲ್ವೇ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿರುವ ದೊಡ್ಡ ಬೆಟ್ಟ ಸಮುದ್ರ ಮಟ್ಟದಿಂದ 8,640 ಅಡಿ ಎತ್ತರದಲ್ಲಿದ್ದು, ದಕ್ಷಿಣ ಭಾರತದ ಎರಡನೇ ಅತಿ ಎತ್ತರವಾದ ಬೆಟ್ಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪ್ರದೇಶದಲ್ಲಿ ನಿಂತು ನೋಡಿದರೆ ಬಂಡೀಪುರ ನ್ಯಾಷನಲ್‌ ಪಾರ್ಕ್‌ ಸೇರಿದಂತೆ ಕರ್ನಾಟಕವನ್ನು ನೋಡಬಹುದು. ಇದನ್ನೂ: ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್‌!

    ಇಲ್ಲಿ ಒಂದು ಟೆಲಿಸ್ಕೋಪ್‌ ಹೌಸ್‌ ಇದ್ದು ದೂರದ ಪ್ರದೇಶಗಳನ್ನು‌ ವೀಕ್ಷಿಸಬಹುದು. ಟೆಲಿಸ್ಕೋಪ್‌ ದರ್ಶನ ಎಷ್ಟು ನಿಖರವಾಗಿರುತ್ತದೆ ಅಂದರೆ 9 ಕಿ.ಮೀ ದೂರದಲ್ಲಿರುವ ಊಟಿ ರೈಲು ನಿಲ್ದಾಣದ ಬಳಿ ವ್ಯಕ್ತಿಗಳು ನಡೆದುಕೊಂಡು ಹೋಗುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಭಾನುವಾರ ಅಥವಾ ರಜಾ ದಿನ ದೊಡ್ಡ ಬೆಟ್ಟಕ್ಕೆ ಬಹಳ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಕೆಳಗಡೆಯ ಸಾಲಿನಿಂದ ಮೇಲುಗಡೆ ಟೆಲಿಸ್ಕೋಪ್ ಇರುವ ಜಾಗಕ್ಕೆ ಹೋಗಬೇಕಾದರೆ ಕನಿಷ್ಟ 30-45 ನಿಮಿಷ ಬೇಕಾಗಬಹುದು.

    1983ರ ಜೂನ್ 18 ರಂದು ಟೆಲಿಸ್ಕೋಪ್‌ ಹೌಸ್‌ ಆರಂಭಗೊಂಡಿದ್ದು ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಟಿಟಿಡಿಸಿ) ನಡೆಸುತ್ತಿದೆ. ಬಸ್‌ ಸೇರಿದಂತೆ ಎಲ್ಲ ವಾಹನಗಳು ಬೆಟ್ಟದ ತುದಿಯವರೆಗೂ ಹೋಗುತ್ತದೆ. ರಸ್ತೆ ಮಾರ್ಗ ಉತ್ತಮವಾಗಿದೆ ಆದರೆ ಬಹಳಷ್ಟು ತಿರುವುಗಳಿವೆ. ಪಾರ್ಕಿಂಗ್‌ ಜಾಗದಿಂದ ಟೆಲಿಸ್ಕೋಪ್‌ ಹೌಸ್‌ 500 ಮೀಟರ್‌ ದೂರದಲ್ಲಿದೆ.

    ಸುತ್ತಲೂ ಅರಣ್ಯ ಇರುವ ಕಾರಣ ಫೋಟೋಗ್ರಫಿ ಮಾಡುವವರಿಗೆ ಇಂದು ಸುಂದರ ಜಾಗ. ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಟೀ ಎಸ್ಟೇಟ್‌ಗಳು ಸಿಗುತ್ತವೆ. ಶುಲ್ಕ ಪಾವತಿಸಿ ಎಸ್ಟೇಟ್‌ ಒಳಗಡೆ ಹೋಗಿ ಫೋಟೋ ಕ್ಲಿಕ್ಕಿಸಬಹುದು.

    – ಅಶ್ವಥ್‌ ಸಂಪಾಜೆ

    Live Tv
    [brid partner=56869869 player=32851 video=960834 autoplay=true]

  • ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್‌!

    ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್‌!

    ಬುಲೆಟ್‌ ರೈಲು ಬಗ್ಗೆ ನೀವು ಕೇಳಿರಬಹುದು. ಸೆಮಿ-ಹೈ-ಸ್ಪೀಡ್‌ ರೈಲಿನಲ್ಲಿ ನೀವು ಸಂಚರಿಸಿರಬಹುದು. ಆದರೆ ಮೀಟರ್‌ ಗೇಜ್‌ ರೈಲಿನಲ್ಲಿ ಸಂಚರಿಸಬೇಕಿದ್ದಲ್ಲಿ ನೀವು ಊಟಿಗೆ ಬರಬೇಕು. ಮೀಟರ್‌ ಗೇಜ್‌ ರೈಲಿನಲ್ಲಿ ಪ್ರಯಾಣಿಸಿದರೆ ಮಾತ್ರ ಊಟಿ ಪ್ರವಾಸ ಕಂಪ್ಲೀಟ್‌ ಆಗಿದೆ ಅಂತ ಹೇಳಬಹುದು.

    ಈಗ ನಾವೆಲ್ಲ ಸಂಚರಿಸುತ್ತಿರುವುದು ಬ್ರಾಡ್‌ ಗೇಜ್‌ ರೈಲಿನಲ್ಲಿ. ಈ ರೈಲಿನ ಹಳಿಯ ಅಗಲ1.676 ಮೀಟರ್‌(5.4 ಅಡಿ). ಆದರೆ ಮೀಟರ್‌ ಗೇಜ್‌ ಹಳಿಯ ಅಗಲ ಕೇವಲ 1 ಮೀಟರ್‌(3.2 ಅಡಿ) ಮಾತ್ರ. ಊಟಿಯಿಂದ ಮೆಟ್ಟುಪಾಳ್ಯಂವರೆಗೆ ಈ ಮೀಟರ್‌ ಗೇಜ್‌ ರೈಲು ಸಂಚರಿಸುತ್ತದೆ. ಕೂನೂರಿನಲ್ಲಿರುವ ಪ್ರವಾಸಿ ತಾಣಕ್ಕೆ ತೆರಳಲು ವಾಹನದ ಮೂಲಕ ಹೋಗಬಹುದಾದರೂ ಈ ರೈಲಿನಲ್ಲಿ ಸಂಚರಿಸಿದರೆ ಸಿಗುವ ಮಜಾವೇ ಬೇರೆ.

    ಊಟಿ ಪ್ರವಾಸ ಯಶಸ್ವಿಯಾಗಬೇಕಾದರೆ ಮೊದಲೇ ನೀವು ಬಹಳ ಮುಖ್ಯವಾದ ಕೆಲಸ ಮಾಡಬೇಕು. ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಹೋಗಿ 15-20 ದಿನದ ಮೊದಲೇ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕಾಗುತ್ತದೆ. ಊಟಿ-ಕೂನೂರು-ಊಟಿಗೆ ಒಬ್ಬರಿಗೆ 325 ರೂ. ಟಿಕೆಟ್‌ ದರವಿದೆ.

    ಊಟಿಯಿಂದ ಕುನೂರಿಗೆ 21 ಕಿ.ಮೀ ದೂರವಿದೆ. ಒಟ್ಟು 1:15 ನಿಮಿಷ ಪ್ರಯಾಣ. ರೈಲಿನಲ್ಲಿ ಎದುರು ಬದುರು ಕುಳಿತುಕೊಳ್ಳಬೇಕು. ಒಂದು ಸೀಟ್‌ನ ಸಾಲಿನಲ್ಲಿ 4 ಜನ ಮಾತ್ರ ಕುಳಿತುಕೊಳ್ಳಬಹುದು. ಸಣ್ಣದಾಗಿರುವ 3 ಸುರಂಗದಲ್ಲಿ ಸಾಗುವ ಈ ರೈಲಿನಲ್ಲಿ ಟೀ ಎಸ್ಟೇಟ್‌ಗಳನ್ನು ನೋಡಬಹುದು. ನೇರವಾಗಿ ಬೆಳೆದಿರುವ ನೀಲಗಿರಿ ಮರಗಳಿರುವ ಕಾಡನ್ನು ವೀಕ್ಷಿಸುವುದು ಕಣ್ಣಿಗೆ ಹಬ್ಬ. ಪ್ರಕೃತಿ ಸೌಂದರ್ಯವನ್ನು ಅನುಭವಿಸುವವರ ನೆನಪಿನಲ್ಲಿ ಉಳಿಯುವ ರೈಲು ಪ್ರಯಾಣ ಇದು ಆಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

    ಕೂನೂರು ರೈಲ್ವೇ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಬಾಡಿಗೆ ಕಾರು ಚಾಲಕರು ಬರುತ್ತಾರೆ. ಇಂಟರ್‌ನೆಟ್‌ನಲ್ಲಿ ಚೆಕ್‌ ಮಾಡಿದರೆ ಕೂನೂರು ಸಮೀಪವೇ ಬಹಳಷ್ಟು ಪ್ರವಾಸಿ ತಾಣಗಳಿವೆ. ಇವುಗಳನ್ನು ನೋಡಲು ಒಂದು ದಿನ ಪೂರ್ತಿ ಬೇಕಾದಿತು. ಹೆಚ್ಚಿನ ಜನರು ʼಡಾಲ್ಫಿನ್‌ ನೋಸ್‌ʼ ನೋಡಲು ತೆರಳುತ್ತಾರೆ. ಎತ್ತರದ ಘಾಟಿ ರಸ್ತೆಗಳಲ್ಲಿ ನಿಂತು ನೋಡಿದಾಗ ಹೇಗೆ ಪರಿಸರ ಕಾಣುತ್ತದೆ ಆ ರೀತಿ ವ್ಯೂ ನಿಮಗೆ ಇಲ್ಲೂ ಕಾಣುತ್ತದೆ. ಈ ಜಾಗ ವೀಕ್ಷಣೆ ಮಾಡಿದ ಟೀ ಫ್ಯಾಕ್ಟರಿಗೆ ಹೋಗಬಹುದು.

    ದೇಶದ ಮೊದಲ ಸೇನಾ ಪಡೆಗಳ ಮುಖ್ಯಸ್ಥ(ಸಿಡಿಎಸ್‌) ಬಿಪಿನ್‌ ರಾವತ್‌ರಿಂದಾಗಿ ಕೂನೂರು ಸುದ್ದಿಯಲ್ಲಿತ್ತು. ರಾವತ್‌ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡ ಜಾಗ ಈ ಕೂನೂರು ತಾಲೂಕಿನಲ್ಲೇ ಬರುತ್ತದೆ. ರಾವತ್‌ ಅವರಿಂದ ಹೆಲಿಕಾಪ್ಟರ್‌ ಪತನಕ್ಕೆ ತಾಂತ್ರಿಕ ದೋಷ ಕಾರಣವಲ್ಲ. ಹವಾಮಾನ ವೈಪರೀತ್ಯದಿಂದ ದುರಂತ ಸಂಭವಿಸಿದೆ ಎಂದು ಸೇನೆಯ ತನಿಖಾ ತಂಡ ವರದಿ ನೀಡಿತ್ತು. ಈ ವರದಿ ನಿಜವೂ ಹೌದು. ಇಲ್ಲಿನ ಹವಾಮಾನ ಹೇಗೆ ದಿಢೀರ್‌ ಬದಲಾಗುತ್ತದೆ ಅಂದರೆ ಒಮ್ಮೆ ಬೆಟ್ಟ ದೂರದಿಂದ ಕಾಣುತ್ತಿರುತ್ತದೆ. ಕೆಲ ನಿಮಿಷದಲ್ಲಿ ಆ ಬೆಟ್ಟ ನಿಮ್ಮ ಕಣ್ಣಿನಿಂದ ಮರೆ ಆಗಿರುತ್ತದೆ. ಅಷ್ಟೊಂದು ಮಂಜು ಆವರಿಸಿರುತ್ತದೆ. ಇದನ್ನೂ ಓದಿ: ರಾವತ್ ಹೆಲಿಕಾಪ್ಟರ್ ಪತನಕ್ಕೆ ಮೋಡ ಕಾರಣ: ಭಾರತೀಯ ವಾಯುಪಡೆ

    ಮುಗಿಸುವ ಮುನ್ನ ಈ ಮೀಟರ್‌ ಗೇಜ್‌ ರೈಲನ್ನು ಆರಂಭಿಸಿದವರು ಬ್ರಿಟಿಷರು. 1854ರಿಂದ ಕಾಮಗಾರಿ ಆರಂಭವಾದರೂ ಪೂರ್ಣಗೊಂಡದ್ದು 1899ಕ್ಕೆ. 2005ರಲ್ಲಿ ಯುನೆಸ್ಕೋ ನೀಲಗಿರಿ ರೈಲ್ವೇಯನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿದೆ. ಮೀಟರ್‌ ಗೇಜ್‌ ರೈಲು ಊಟಿಯಲ್ಲಿ ಮಾತ್ರ ಇಲ್ಲ. ಭಾರತದ ಹಲವು ಕಡೆ ಸೇವೆಯಲ್ಲಿದೆ.

    – ಅಶ್ವಥ್‌ ಸಂಪಾಜೆ

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ಶೂಟಿಂಗ್ ಕಷ್ಟ ಕಷ್ಟ: ಶಾರುಖ್ ಖಾನ್ ಪುತ್ರಿ ಹೇಳಿದ್ದೇನು?

    ಸಿನಿಮಾ ಶೂಟಿಂಗ್ ಕಷ್ಟ ಕಷ್ಟ: ಶಾರುಖ್ ಖಾನ್ ಪುತ್ರಿ ಹೇಳಿದ್ದೇನು?

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇದೀಗ ತಂದೆಯಂತೆಯೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಅವರು ವೆಬ್ ಸೀರಿಸ್ ಒಂದಕ್ಕೆ ಬಣ್ಣ ಹಚ್ಚಿದ್ದು, ಈಗ ಈ ವೆಬ್ ಸೀರಿಸ್ ಶೂಟಿಂಗ್ ಊಟಿಯ ವಿವಿಧ ಸ್ಥಳಗಳಲ್ಲಿ ನಡೆಯುತ್ತಿದೆ. ತಮಗೆ ಬೋರು ಆಗಬಾರದು ಎಂದೇ ಫ್ರೆಂಡ್ಸ್ ಅನ್ನೂ ಜೊತೆಗೆ ಅವರು ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ದಿ ಆರ್ಚೀಸ್ ಹೆಸರಿನಲ್ಲಿ ತಯಾರಾಗುತ್ತಿರುವ ಈ ವೆಬ್ ಸೀರಿಸ್ ನಲ್ಲಿ ಸುಹಾನಾ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಹುತೇಕ ದೃಶ್ಯಗಳಲ್ಲಿ ಇವರೇ ಇರುವುದರಿಂದ ಕಷ್ಟವಾದರೂ ಇಷ್ಟಪಟ್ಟು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರಂತೆ. ಶೂಟಿಂಗ್ ವೇಳೆಯಲ್ಲಿ ಪದೇ ಪದೇ ಅವರು ತಂದೆಯನ್ನು ನೆನಪಿಸಿಕೊಳ್ಳುತ್ತಿದ್ದಾರಂತೆ. ಇದನ್ನೂ ಓದಿ : ಕೆಜಿಎಫ್ 2 ಐವತ್ತು ದಿನ ಪೂರೈಸಿದ ಬೆನ್ನಲ್ಲೆ ಮತ್ತೊಂದು ಹೊಸ ಸಿನಿಮಾ ರಿಲೀಸ್ ಘೋಷಣೆ

    ಶೂಟಿಂಗ್ ಅಂದರೆ, ಅಲ್ಲಿ ಬಿಂದಾಸ್ ಆಗಿ ಇರಬಹುದು ಎನ್ನುವ ಕಲ್ಪನೆ ನನ್ನಲ್ಲಿತ್ತು. ಈಗ ಅದರ ಕಷ್ಟ ಗೊತ್ತಾಗುತ್ತಿದೆ. ಅಪ್ಪಾಜಿ ಅಷ್ಟೊಂದು ವರ್ಷ ಅದು ಹೇಗೆ ಸಹಿಸಿಕೊಂಡು ಬಂದಿದ್ದಾರೋ ಎಂದು ನಿರ್ದೇಶಕರ ಮುಂದೆ ತಂದೆಯನ್ನು ಹಾಡಿ ಹೊಗಳಿದ್ದಾರಂತೆ. ಅಲ್ಲದೇ ತಮ್ಮೊಂದಿಗೆ ಕೆಲಸ ಮಾಡುತ್ತಿರುವ ಖುಷಿ ಕಪೂರ್ ಮತ್ತು ಜೋಯಾ ಅಖ್ತರ್ ಬಳಿಯೂ ತಮ್ಮ ತಂದೆಯನ್ನು ಗುಣಗಾನ ಮಾಡಿದ್ದಾರಂತೆ ಸುಹಾನಾ.

  • ದಾಖಲೆ ಸೃಷ್ಟಿಸಿದ ಬೆಂಗಳೂರು ವೆದರ್ – 54 ವರ್ಷದ ಬಳಿಕ ಕೂಲೆಸ್ಟ್ ಡೇ ರಿಪೀಟ್

    ದಾಖಲೆ ಸೃಷ್ಟಿಸಿದ ಬೆಂಗಳೂರು ವೆದರ್ – 54 ವರ್ಷದ ಬಳಿಕ ಕೂಲೆಸ್ಟ್ ಡೇ ರಿಪೀಟ್

    ಬೆಂಗಳೂರು: ಮೇ ತಿಂಗಳಿನಲ್ಲಿ ನಿಗಿ, ನಿಗಿ ಕೆಂಡದಂತೆ ಸೂರ್ಯನ ಬಿಸಿಲು ಇರುವುದು ಕಾಮನ್. ಆದರೆ ಈ ಬಾರಿ ಅಸಾನಿ ಚಂಡಮಾರುತದ ಪರಿಣಾಮ ವರುಣನ ಆರ್ಭಟ ತಂಪು ಗಾಳಿ, ಚುಮು, ಚುಮು ಚಳಿಯಿಂದಾಗಿ ಬೆಂಗಳೂರಿನ ವಾತಾವರಣ ಕಳೆದ ಮೂರು ದಿನದಿಂದ ಊಟಿಯನ್ನು ಮೀರಿಸುತ್ತಿದೆ.

    bengaluru weather

    ಬೆಂಗಳೂರಿನ ಈ ವಾತಾವರಣ ದಾಖಲೆಯನ್ನು ಸೃಷ್ಟಿಸಿದೆ. ಅಸಾನಿ ಚಂಡಮಾರುತ ಬೆಂಗಳೂರಿನಲ್ಲಿ 54 ವರ್ಷದ ಹಿಂದಿನ ದಾಖಲೆ ರಿಪೀಟ್ ಮಾಡಿದೆ. 54 ವರ್ಷದ ಬಳಿಕ ಗುರುವಾರ ಬೆಂಗಳೂರಿನ ವೆದರ್ ಸೆಕೆಂಡ್ ಕೂಲೆಸ್ಟ್ ಡೇ ದಾಖಲೆ ಸೃಷ್ಟಿಯಾಗಿದೆ. ಇದನ್ನೂ ಓದಿ: ದೇಶದಲ್ಲಿ ಬಿಜೆಪಿ ತಾಲಿಬಾನ್ ವ್ಯವಸ್ಥೆ ರಚಿಸಲು ಬಯಸುತ್ತಿದೆ: ಶೀವಸೇನೆ

    1972ರಲ್ಲಿ ಮೇ 14 ರಂದು 22.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಆದರೆ ಗುರುವಾರ ಬೆಂಗಳೂರಿನಲ್ಲಿ 23.00 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಲ್ಲದೇ ಇದು ಎರಡನೇ ಅತ್ಯಂತ ಕೂಲೆಸ್ಟ್ ಡೇ ಅಂತ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಬೇಲ್‌ನಲ್ಲಿರುವ ಶಾಸಕರ ಪುತ್ರ ನನ್ನ ಪ್ರಾಮಾಣಿಕತೆ ಪ್ರಶ್ನಿಸುತ್ತಿದ್ದಾರೆ: ನಲಪಾಡ್‌ಗೆ ರಮ್ಯಾ ತಿರುಗೇಟು

  • ಟೈಯರ್‌ಗೆ ಬೆಂಕಿ ಹಚ್ಚಿ ಆನೆ ಮೇಲೆ ಎಸೆತ – ಸಲಗ ಕೊಂದ ಇಬ್ಬರ ಬಂಧನ

    ಟೈಯರ್‌ಗೆ ಬೆಂಕಿ ಹಚ್ಚಿ ಆನೆ ಮೇಲೆ ಎಸೆತ – ಸಲಗ ಕೊಂದ ಇಬ್ಬರ ಬಂಧನ

    ಚೆನ್ನೈ: ಕೇರಳದಲ್ಲಿ ಗರ್ಭಿಣಿ ಆನೆಗೆ ಪೈನಾಪಲ್‍ನಲ್ಲಿ ಸಿಡಿಮದ್ದು ಇಟ್ಟು ಕೊಂದ ಹೃದಯ ವಿದ್ರಾವಕ ಘಟನೆ ನೆನಪಿಸುವಂತ ಘಟನೆ ಊಟಿ ಬಳಿ ನಡೆದಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆ ಊಟಿ ಬಳಿ ಸಲಗಕ್ಕೆ ಬೆಂಕಿ ಹಚ್ಚಿ ಕೊಂದಿರೋ ದಾರುಣ ಘಟನೆ ನಡೆದಿದೆ.

    ಜನವರಿ 19ರಂದು ಆನೆಯೊಂದು ರೆಸಾರ್ಟ್‍ವೊಂದರ ಒಳಗೆ ಬರಲು ಪ್ರಯತ್ನಿಸಿದೆ. ಈ ವೇಳೆ ಎಸ್ಟೇಸ್ ಕಾಯುತ್ತಿದ್ದ ರೈಮಾನ್ ಹಾಗೂ ಪ್ರಶಾಂತ್ ದುಷ್ಕೃತ್ಯ ಮೆರೆದಿದ್ದಾರೆ. ಟೈಯರ್ ಗೆ ಬೆಂಕಿ ಹಚ್ಚಿ ಅದನ್ನು ಆನೆಯ ಮೇಲೆ ಎಸೆದಿದ್ದಾರೆ. ಪರಿಣಾಮ ಬೆಂಕಿ ಇದ್ದ ಟೈಯರ್ ಹೊತ್ತುಕೊಂಡು ನೋವಿನಿಂದ ಆನೆ ಘೀಳಿಟ್ಟುಕೊಂಡು ಓಡಿದೆ. ಆನೆಯ ಕಿವಿ ಹಾಗೂ ಹಿಂಭಾಗದಲ್ಲಿ ಸುಟ್ಟ ಗಾಯಗಳಾಗಿವೆ.

    ಘಟನೆಯಿಂದ ಗಂಭೀರ ಗಾಯಗೊಂಡ ಆನೆ ತೀವ್ರವಾಗಿ ಅಸ್ವಸ್ಥಗೊಂಡು ಬಿದ್ದಿದೆ. ಈ ವಿಚಾರ ಅರಣ್ಯ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಕೂಡಲೇ ಅವರು ವೈದ್ಯಕೀಯ ಚಿಕಿತ್ಸೆಗೆಂದು ಆನೆಯನ್ನು ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಆನೆ ಸುಟ್ಟ ಗಾಯಗಳಿಂದ ಸಾಕಷ್ಟು ನೋವು ಕಂಡು ಕೊನೆಯುಸಿರೆಳೆದಿತ್ತು.

    ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ದುಷ್ಟರ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

  • ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತ

    ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತ

    ಮೈಸೂರು: ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತವಾಗಿದೆ.

    ನಂಜನಗೂಡಿನಲ್ಲಿ ಕಪಿಲಾ ಅಬ್ಬರ ಕಡಿಮೆಯಾಗಿದ್ದು, ಬ್ಯಾರಿಕೇಡ್‍ಗಳನ್ನ ತೆಗೆದು ಹಾಕುವ ಮೂಲಕ ಪೊಲೀಸರು ಮೈಸೂರು-ಊಟಿ ಸಂಚಾರ ಮುಕ್ತ ಮಾಡಿದ್ದಾರೆ. ಕಪಿಲಾ ನದಿಯ ನೀರು ರಾಷ್ಟ್ರೀಯ ಹೆದ್ದಾರಿಯ ಮಲ್ಲನಮೂಲೆ ಮಠದ ಬಳಿ ರಸ್ತೆವರೆಗೂ ಹರಿದು ಬಂದಿತ್ತು. ಹೀಗಾಗಿ ಕಳೆದ ಮೂರು ದಿನಗಳಿಂದ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.

    ಶನಿವಾರ ಮೈಸೂರು-ಊಟಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ಇದರಿಂದ ಮೈಸೂರು ಊಟಿ ರಸ್ತೆಯಲ್ಲಿ ಸಂಚಾರಕ್ಕೆ ಬ್ರೇಕ್ ಬಿದ್ದಿತು. ಮೈಸೂರು-ಊಟಿ ರಸ್ತೆಯಲ್ಲಿದ್ದ ನೀರು ಖಾಲಿಯಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ಕೂಡ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು.

    ಇದೀಗ ಕಬಿನಿ ಡ್ಯಾಂನಿಂದ ಕಡಿಮೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತವಾಗಿದೆ. ಕಪಿಲೆಯ ಅಬ್ಬರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಂಜನಗೂಡಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ನಂಜನಗೂಡಿನಲ್ಲಿ ಪ್ರವಾಹದ ಆತಂಕ ದೂರವಾಗುತ್ತಿದೆ.