Tag: online shopping

  • ಆನ್‍ಲೈನ್ ಪಂಗನಾಮ – ಬುಕ್ ಮಾಡಿದ್ದು ಸ್ಪೀಕರ್, ಕೈಗೆ ಸಿಕ್ಕಿದ್ದು ಟೈಲ್ಸ್ ಕಲ್ಲು

    ಆನ್‍ಲೈನ್ ಪಂಗನಾಮ – ಬುಕ್ ಮಾಡಿದ್ದು ಸ್ಪೀಕರ್, ಕೈಗೆ ಸಿಕ್ಕಿದ್ದು ಟೈಲ್ಸ್ ಕಲ್ಲು

    ಬೆಂಗಳೂರು: ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡೋ ಗ್ರಾಹಕರೇ ಎಚ್ಚರವಾಗಿರಿ. ಯಾಕೆಂದರೆ ಬೆಂಗಳೂರಿನ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದೇ ಒಂದು ಪ್ರಾಡಕ್ಟ್. ಆದರೆ ಅವರ ಕೈಗೆ ಸಿಕ್ಕಿದ್ದೇ ಮತ್ತೊಂದು ಪ್ರಾಡಕ್ಟ್.

    ಹೌದು. ಬೆಂಗಳೂರಿನ ವೈಯಾಲಿಕಾವಲ್ ನಿವಾಸಿ ಮಧುಸೂದನ್ ಅವರು ಆನ್‍ಲೈನ್ ಶಾಪಿಂಗ್ ಮಾಡಿ ಮೋಸ ಹೋಗಿದ್ದಾರೆ. ಡಿಸೆಂಬರ್ 1ರಂದು ಅಮೆಜಾನ್‍ನಲ್ಲಿ ಸ್ಪೀಕರ್ ಬಾಕ್ಸ್ ಒಂದನ್ನು ಮಧುಸೂದನ್ ಆರ್ಡರ್ ಮಾಡಿದ್ದರು. ಆದರೆ ಅವರ ಕೈ ಸೇರಿದ್ದು ಮಾತ್ರ ಟೈಲ್ಸ್ ಕಲ್ಲು. ಸೋಮವಾರ ಈ ಪ್ರಾಡಕ್ಟ್ ಮಧುಸೂದನ್ ಕೈಗೆ ತಲುಪಿದೆ. ಬಾಕ್ಸ್ ಓಪನ್ ಮಾಡಿ ನೋಡಿದಾಗ ಕಲ್ಲು ಇರೋದು ಗೊತ್ತಾಗಿದೆ. ಇದನ್ನು ನೋಡಿದ ಗ್ರಾಹಕ ಕಕ್ಕಾಬಿಕ್ಕಿಯಾಗಿದ್ದು, ನನ್ನಂತೆ ಯಾರಿಗೂ ಮೋಸ ಆಗಬಾರದು. ಇದರಲ್ಲಿ ಯಾರ ನಿರ್ಲಕ್ಷ್ಯವಿದೆ ಗೊತ್ತಾಗಬೇಕು ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ರಾಯಲ್ ಎನ್‍ಫೀಲ್ಡ್ ಖರೀದಿಸಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ಟೆಕ್ಕಿ

    ಆದ್ದರಿಂದ ಮೋಸ ಹೋದ ಮಧುಸೂದನ್ ಅಮೆಜಾನ್ ಕಂಪನಿ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಪಾರ್ಸೆಲ್ ಬಾಕ್ಸ್ ನಲ್ಲಿ ಕಲ್ಲು ಇರೋದು ಗೊತ್ತಾದ ಮೇಲೆ, ಡೆಲಿವರಿ ಬಾಯ್‍ಗೆ ಪ್ರಾಡೆಕ್ಟ್ ವಾಪಸ್ ಮಾಡಿದ್ದಾರೆ. ದೂರು ಕೊಡಲು ಅಮೆಜಾನ್ ಕಂಪನಿಯ ಸಿಬ್ಬಂದಿಗೆ ಫೋನ್ ಮಾಡಿದರೆ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ ಎಂದು ಮಧುಸೂದನ್ ಆರೋಪಿಸಿದ್ದಾರೆ.

    ಈ ಎಡವಟ್ಟಿನಲ್ಲಿ ಡೆಲವರಿ ಮಾಡಲು ಹುಡಗನದ್ದು ತಪ್ಪೇ? ಅಥವಾ ಅಮೆಜಾನ್ ಕಂಪನಿಯದ್ದು ತಪ್ಪಾ ಗೊತ್ತಿಲ್ಲ. ಆದರೆ ಮೊಸ ಹೋದ ಗ್ರಾಹಕ ಮಾತ್ರ ನನ್ನ ದುಡ್ಡು ಹೊಯ್ತು, ಪ್ರಾಡಕ್ಟೂ ಹೊಯ್ತು ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಆದಕ್ಕೆ ಯಾವುದಕ್ಕೂ ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡುವಾಗ ನೀವು ಹುಷಾರಾಗಿರಿ.

  • 800 ರೂ. ಕುರ್ತಾ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡ ಮಹಿಳೆ

    800 ರೂ. ಕುರ್ತಾ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡ ಮಹಿಳೆ

    ಬೆಂಗಳೂರು: ಆನ್‍ಲೈನ್ ವಂಚಕರ ಜಾಲದಲ್ಲಿ ಸಿಕ್ಕಿಹಾಕಿಕೊಂಡ ಸಿಲಿಕಾನ್ ಸಿಟಿಯ ಮಹಿಳೆಯೊಬ್ಬರು 800 ರೂ. ಬೆಲೆಯ 1 ಕುರ್ತಾ ಆರ್ಡರ್ ಮಾಡಿ, ಬರೋಬ್ಬರಿ 80 ಸಾವಿರ ರೂ. ಕಳೆದುಕೊಂಡಿದ್ದಾರೆ.

    ಗೊಟ್ಟಿಗೆರೆಯ ನಿವಾಸಿ ಶ್ರವಣಾ ಅವರು ಆನ್‍ಲೈನ್ ವಂಚಕರ ಜಾಲಕ್ಕೆ ಬಿದ್ದು ಮೋಸ ಹೋಗಿದ್ದಾರೆ. ನವೆಂಬರ್ 8ರಂದು ಮಹಿಳೆ ಮೊಬೈಲ್‍ನಲ್ಲಿ ಇ-ಕಾಮರ್ಸ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು, ಅದರಲ್ಲಿ ಸುಮಾರು 800 ರೂ. ಬೆಲೆಯ 1 ಕುರ್ತಾ ಆರ್ಡರ್ ಮಾಡಿದ್ದರು. ಆದರೆ ಆರ್ಡರ್ ಡೆಲಿವರಿ ಸಮಯ ಮುಗಿದ ಮೇಲೂ ಕುರ್ತಾಗಳು ಮಹಿಳೆಗೆ ತಲುಪಿರಲಿಲ್ಲ.

    ಆಗ ಆ್ಯಪ್‍ನಲ್ಲಿ ಇದ್ದ ಕಸ್ಟಮರ್ ಕೇರ್ ನಂಬರ್ ಗೆ ಮಹಿಳೆ ಕರೆ ಮಾಡಿ ವಿಚಾರಿಸಿದರು. ಈ ವೇಳೆ ಕರೆಯಲ್ಲಿ ಮಾತನಾಡಿದ ಸಿಬ್ಬಂದಿ, ಈ ಬಗ್ಗೆ ತಿಳಿದು ಕರೆ ಮಾಡುತ್ತೇವೆ. ಆದಷ್ಟು ಬೇಗ ನಿಮ್ಮ ಆರ್ಡರ್ ಡೆಲಿವರಿಯಾಗುತ್ತೆ ಎಂದು ನಂಬಿಸಿದ್ದಾನೆ. ಬಳಿಕ ನಿಮ್ಮ ಬ್ಯಾಂಕ್ ಆಕೌಂಟ್ ಮಾಹಿತಿ ಕೊಡಿ ಎಂದು ಮಹಿಳೆಗೆ ಹೇಳಿದ್ದಾನೆ. ಬಹುಶಃ ನನಗೆ ಸಹಾಯ ಮಾಡಲು ಸಿಬ್ಬಂದಿ ಕೇಳುತ್ತಿದ್ದಾನೆ ಎಂದು ಮಹಿಳೆ ಕೂಡ ಆತ ಕೇಳಿದ ಎಲ್ಲಾ ಮಾಹಿತಿ ನೀಡಿದ್ದಾರೆ.

    ಮಹಿಳೆಯಿಂದ ಬ್ಯಾಂಕ್ ಆಕೌಂಟ್ ಮಾಹಿತಿ ಪಡೆದ ಬಳಿಕ ಅವರ ಫೋನಿಗೆ ಒಂದು ಓಟಿಪಿ ಬಂದಿತ್ತು. ಅದನ್ನೂ ಕೂಡ ಹೇಳಿ ಎಂದು ಸಿಬ್ಬಂದಿ ಕರೆ ಮಾಡಿ ಕೇಳಿದಾಗ ಓಟಿಪಿಯನ್ನು ಮಹಿಳೆ ಹೇಳಿದ್ದರು. ನಂತರ ನಿಮ್ಮ ಕುರ್ತಾ ನಿಮಗೆ ಬಂದು ಸೇರುತ್ತದೆ ಎಂದು ಸಿಬ್ಬಂದಿ ಹೇಳಿ ಕರೆ ಕಟ್ ಮಾಡಿದ್ದಾನೆ.

    ಮಹಿಳೆ ಕೂಡ ಸಿಬ್ಬಂದಿ ಮಾತನ್ನು ನಂಬಿ ಕುರ್ತಾ ಕೆಲ ದಿನಗಳಲ್ಲಿ ಡೆಲಿವರಿಯಾಗುತ್ತದೆ ಎಂದುಕೊಂಡಿದ್ದರು. ಆದರೆ ಓಟಿಪಿ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ಮಹಿಳೆ ಅಕೌಂಟ್‍ನಲ್ಲಿದ್ದ 79,600 ರೂ. ಹಣ 4 ಕಂತಿನಲ್ಲಿ ಕಡಿತಗೊಂಡಿದೆ.

    ಹಣ ಕಳೆದುಕೊಂಡ ಬಳಿಕ ತನಗೆ ಮೋಸ ಮಾಡಲಾಗಿದೆ ಎನ್ನುವುದು ಮಹಿಳೆಗೆ ಗೊತ್ತಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆನ್‍ಲೈನ್ ಶಾಪಿಂಗ್ ಮೋಹಕ್ಕೆ ಮಹಿಳೆ ಹಣವನ್ನು ಕಳೆದುಕೊಂಡು ಮೋಸಹೋಗಿದ್ದಾರೆ. ಕುರ್ತಾದ ಆಸೆ ತೋರಿಸಿ ಮಹಿಳೆಗೆ ವಂಚಕರು ಪಂಗನಾಮ ಹಾಕಿದ್ದಾರೆ.

    ಈ ಬಗ್ಗೆ ಸೈಬರ್ ಪೀಸ್ ಫೌಂಡೇಷನ್ ಅಧ್ಯಕ್ಷ ವಿನೀತ್ ಕುಮಾರ್ ಮಾತನಾಡಿ, ಯಾವಾಗಲೂ ಗೂಗಲ್ ಪ್ಲೇ ಅಥವಾ ಐಓಎಸ್‍ನಲ್ಲಿ ಇರುವ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡುವುದು ಒಳ್ಳೆಯದು. ಕೆಲವೊಮ್ಮೆ ಅದರಲ್ಲೂ ಫೇಕ್ ಆ್ಯಪ್‍ಗಳು ಇರುತ್ತವೆ. ಅದರ ಬಗ್ಗೆ ಎಚ್ಚರವಹಿಸಿ. ನಿಮ್ಮ ಮೊಬೈಲ್‍ನಲ್ಲಿ ಪ್ಲೇ ಪ್ರೊಟೆಕ್ಟ್ ಫೀಚರ್ ಆನ್ ಮಾಡಿದರೆ ಅದು ನಿಮಗೆ ಡೌನ್‍ಲೋಡ್ ಮಾಡುವ ಆ್ಯಪ್‍ಗಳ ಸೆಕ್ಯೂರಿಟಿ ಸ್ಟೇಟಸ್ ಏನು ಎನ್ನುವುದನ್ನು ತೋರಿಸುತ್ತದೆ ಎಂದು ತಿಳಿಸಿದರು.

  • ಕೇಂದ್ರದ ನಿರ್ಧಾರ ಸ್ವಾಗತಿಸಿದ ಆಪಲ್ ಕಂಪನಿ

    ಕೇಂದ್ರದ ನಿರ್ಧಾರ ಸ್ವಾಗತಿಸಿದ ಆಪಲ್ ಕಂಪನಿ

    ನವದೆಹಲಿ: ಐಫೋನ್ ತಯಾರಕಾ ಕಂಪನಿ ಆಪಲ್ ವಿದೇಶಿ ನೇರ ಹೂಡಿಕೆ(ಎಫ್‍ಡಿಐ) ನಿಯಮ ಸಡಿಲಿಸಿದ ಭಾರತ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.

    ಪ್ರಧಾನಿ ಮೋದಿ ಮತ್ತು ಅವರ ತಂಡದ ಕೆಲಸವನ್ನು ನಾವು ಶ್ಲಾಘಿಸುತ್ತೇವೆ. ಭಾರತದಲ್ಲಿನ ನಮ್ಮ ರಿಟೇಲ್ ಸ್ಟೋರ್ ಗೆ ಗ್ರಾಹಕರನ್ನು ಸ್ವಾಗತಿಸುತ್ತೇವೆ. ನಮ್ಮ ಯೋಜನೆಗಳು ಕಾರ್ಯಗತವಾಗಲು ಕೆಲ ಸಮಯ ಬೇಕಾಗಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನು ಪ್ರಕಟಿಸುತ್ತೇವೆ ಎಂದು ಆಪಲ್ ಹೇಳಿದೆ.

    ನಾವು ಭಾರತೀಯ ಗ್ರಾಹಕರನ್ನು ಪ್ರೀತಿಸುತ್ತೇವೆ ಮತ್ತು ಭಾರ5ತೀಯರಿಗೆ ವಿಶ್ವದಲ್ಲಿರುವ ಆಪಲ್ ಗ್ರಾಹಕರು ಪಡೆಯುತ್ತಿರುವ ಸೇವೆ ನೀಡಲು ಉತ್ಸಾಹಗೊಂಡಿದ್ದೇವೆ ಎಂದು ತಿಳಿಸಿದೆ.

    ಬುಧವಾರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕಲ್ಲಿದ್ದಲು, ಚಿಲ್ಲರೆ ಮಾರಾಟ ಮತ್ತು ಡಿಜಿಟಲ್ ಮಾಧ್ಯಮಗಳ ಮೇಲಿನ ವಿದೇಶಿ ನೇರ ಹೂಡಿಕೆ ಸಂಬಂಧ ನಿಯಮಗಳನ್ನು ಸಡಿಲಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು, ಒಂದೇ ಬ್ರಾಂಡ್ ಚಿಲ್ಲರೆ ಮಾರಾಟ ಕಂಪನಿಗಳು ಮಳಿಗೆ ಆರಂಭಿಸುವ ಮುನ್ನವೇ ಆನ್‍ಲೈನ್ ಮೂಲಕ ಮಾರಾಟಕ್ಕೆ ಅವಕಾಶಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಈ ಕಾರಣಕ್ಕೆ ಆಪಲ್ ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸಿದೆ.

    ಮಾಧ್ಯಮಗಳಲ್ಲಿ ಪ್ರಕಟವಾದಂತೆ ಮುಂದಿನ 4-5 ತಿಂಗಳಿನಲ್ಲಿ ಮುಂಬೈನಲ್ಲಿ ಆಪಲ್ ತನ್ನ ರಿಟೇಲ್ ಸ್ಟೋರ್ ತೆರೆಯಲು ಸಿದ್ಧತೆ ಮಾಡುತ್ತಿದೆ. ಸದ್ಯಕ್ಕೆ ಆಪಲ್ ಆನ್‍ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್, ಫ್ಲಿಪ್‍ಕಾರ್ಟ್, ಪೇಟಿಎಂ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

    ಇಲ್ಲಿಯವರೆಗೆ ಒಂದೇ ಬ್ರ್ಯಾಂಡ್ ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಪ್ರತಿ ವರ್ಷ ಶೇ.30 ರಷ್ಟು ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ ಈಗ 5 ವರ್ಷದ ವ್ಯಾಪಾರದ ಅವಧಿಯಲ್ಲಿ ಸರಾಸರಿ ಶೇ.30 ರಷ್ಟು ದೇಶಿಯ ಉತ್ಪನ್ನ ಮಾರಾಟವಾದರೆ ಸಾಕು ಎನ್ನುವ ನಿಯಮವನ್ನು ಸರಳಗೊಳಿಸಲಾಗಿದೆ.

  • ಗ್ರಾಹಕನಿಗೆ ಮೂತ್ರ ತುಂಬಿದ ಬಾಟಲ್ ಕಳುಹಿಸಿದ ಅಮೆಜಾನ್

    ಗ್ರಾಹಕನಿಗೆ ಮೂತ್ರ ತುಂಬಿದ ಬಾಟಲ್ ಕಳುಹಿಸಿದ ಅಮೆಜಾನ್

    ಲಂಡನ್: ಆನ್‍ಲೈನ್ ಮಾರುಕಟ್ಟೆಯಲ್ಲಿ ಅಮೆಜಾನ್ ತನ್ನದೇ ಆದ ಚಾಪನ್ನು ವಿಶ್ವದಾದ್ಯಂತ ಮೂಡಿಸಿದೆ. ಆದ್ರೂ ಕೆಲವೊಂದು ಬಾರಿ ಎಡವಟ್ಟುಗಳು ಆಗುತ್ತಿರುತ್ತವೆ. ಇತ್ತೀಚೆಗೆ ಗ್ರಾಹಕರೊಬ್ಬರಿಗೆ ಅಮೇಜಾನ್ ಮೂತ್ರ ತುಂಬಿದ ಬಾಟಲ್ ಕಳುಹಿಸಿದೆ.

    30 ವರ್ಷದ ಗ್ರಾಹಕರೊಬ್ಬರು ಅಮೇಜಾನ್ ನಲ್ಲಿ 65 ಪೌಂಡ್ (5,875 ರೂ.ಬೆಲೆಯ) ವಸ್ತುವೊಂದನ್ನು ಆನ್‍ಲೈನ್ ನಲ್ಲಿ ಬುಕ್ ಮಾಡಿದ್ರು. ಆದ್ರೆ ಮನೆಗೆ ಡ್ಯಾಮೇಜ್ ಆಗಿರುವ ಬಾಕ್ಸ್ ನಲ್ಲಿ ಮೂತ್ರ ತುಂಬಿದ ಬಾಟಲ್ ಕಳುಹಿಸಲಾಗಿದೆ. ನನಗೆ ಬಂದ ಬಾಕ್ಸ್ ತೆರೆದು ನೋಡಿದಾಗ ಬಾಟಲ್ ಇತ್ತು. ಬಾಟಲ್ ನಲ್ಲಿ ಏನಿದೆ ನೋಡಿದಾಗ ಅದರಲ್ಲಿ ಮೂತ್ರವನ್ನು ತುಂಬಲಾಗಿತ್ತು. ತುಂಬಾ ಕೆಟ್ಟ ವಾಸನೆಯನ್ನು ಹೊಂದಿದ್ದು, ನಾನು ಪದೇ ಪದೇ ನನ್ನ ಕೈಗೊಳನ್ನು ಶುಚಿ ಮಾಡಿಕೊಂಡಿದ್ದೇನೆ ಎಂದು ಗ್ರಾಹಕ ಹೇಳುತ್ತಾರೆ.

    ಈ ಬಗ್ಗೆ ಗ್ರಾಹಕ ಅಮೆಜಾನ್ ಗೆ ಫೇಸ್‍ಬುಕ್ ನಲ್ಲಿ ದೂರು ಸಲ್ಲಿಸಿದ್ದಾರೆ. ಗ್ರಾಹಕರಿಗೆ ವಸ್ತು ಖರೀದಿಸಿದ ಹಣದ ಜೊತೆಗೆ 150 ಪೌಂಡ್ (13,600 ರೂ.) ಬೆಲೆಯ ವೋಚರ್ ಸಹ ನೀಡಲಾಗಿದೆ. ಈ ವಿಚಾರ ಗಂಭೀರವಾದದ್ದು, ಇದರ ಕುರಿತು ತನಿಖೆ ನಡೆಸಲಾಗುವುದು. ದೂರು ನೀಡುವ ಮೂಲಕ ನಮ್ಮನ್ನು ಎಚ್ಚರಿಸಿದಕ್ಕೆ ಧನ್ಯವಾದಗಳು ಎಂದು ಅಮೆಜಾನ್ ತಿಳಿಸಿದೆ.

    ಡಿಸೆಂಬರ್ ನಲ್ಲಿ ಅಮೆಜಾನ್ ನಲ್ಲಿ ಕಾರ್ಯ ನಿರ್ವಹಿಸುವ ಚಾಲಕರು ಸಮಯದ ಅಭಾವದಿಂದಾಗಿ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ವಿಸರ್ಜನೆ ಮಾಡ್ತಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಇಂಗ್ಲೆಂಡ್ ನಲ್ಲಿ ವಾಹನ ಚಾಲಕರು 11 ಗಂಟೆಗಿಂತಲೂ ಹೆಚ್ಚಿಗೆ ಕೆಲಸ ಮಾಡಬಾರದು ಎಂಬ ಕಾನೂನು ಇದ್ರೂ ಅಮೆಜಾನ್ ನೌಕರರು ಹೆಚ್ಚು ಅವಧಿ ಕೆಲಸ ಮಾಡ್ತಾರೆ ಎಂದು ವರದಿಯಾಗಿದೆ.

  • ಆನ್‍ಲೈನ್ ಶಾಪಿಂಗ್ ತಾಣ ತೆರೆದ ಕಾಂಗ್ರೆಸ್ ನಾಯಕಿ ರಮ್ಯಾ!

    ಆನ್‍ಲೈನ್ ಶಾಪಿಂಗ್ ತಾಣ ತೆರೆದ ಕಾಂಗ್ರೆಸ್ ನಾಯಕಿ ರಮ್ಯಾ!

    ಬೆಂಗಳೂರು: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಇಂದು ‘ಫೇಕುಕಾರ್ಟ್’ ಹೆಸರಿನಲ್ಲಿ ಆನ್‍ಲೈನ್ ಮಳಿಗೆಯನ್ನು ತೆರೆದಿದ್ದಾರೆ.

    ಅರೇ ಇದೇನಿದು ರಮ್ಯಾ ಆನ್ ಲೈನ್ ಮಳಿಗೆ ಓಪನ್ ಮಾಡಿದ್ರಾ ಎಂದು ಕನ್‍ಫ್ಯೂಸ್ ಆಗಬೇಡಿ. ರಮ್ಯಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಆನ್‍ಲೈನ್ ಶಾಪಿಂಗ್ ತಾಣ ಫೋಟೋ ಹಾಕಿ ಟ್ರೋಲ್ ಮಾಡಿದ್ದಾರೆ.

    ಟ್ರೋಲ್ ಹೀಗಿದೆ ನೋಡಿ:
    ದೇಶದಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಜೋರಾಗಿದೆ. ಹಾಗಾಗಿ ಹಬ್ಬದ ವಿಶೇಷವಾಗಿ ಉತ್ಪನ್ನಗಳನ್ನು ಖರೀದಿ ಮಾಡೋ ಮಂದಿ ಸಾಕಷ್ಟು ಆಫರ್ ಗಳನ್ನು ತಾಣಗಳು ನೀಡುತ್ತದೆ. ಈ ಆಫರ್ ಮೂಲಕವೇ ರಮ್ಯಾ ಬಿಜೆಪಿ ಕಾಲನ್ನು ಎಳೆದಿದ್ದಾರೆ.

    ಮೊದಲನೆಯದಾಗಿ ಪೆಟ್ರೋಲ್ ಮಾರಾಟಕ್ಕಿಟ್ಟಿದ್ದಾರೆ. 60 ರೂ.ಯಂತೆ ಪ್ರತಿ ಲೀಟರ್ (ಯಾವುದೇ ಟ್ಯಾಕ್ಸ್ ಇಲ್ಲದೇ) ಹಾಕಲಾಗಿದೆ. ಎರಡನೆಯದಾಗಿ ಅರ್ಥಶಾಸ್ತ್ರ-ಜಿಡಿಪಿ ಮಾರ್ಗದರ್ಶಿ (ಅರುಣ್ ಜೇಟ್ಲಿ ಅವರಿಗೆ ಉಚಿತ), ಮೂರನೇಯದಾಗಿ ರೈಲ್ವೆ ಸುರಕ್ಷಾ ಮಾರ್ಗದರ್ಶಿ (ರೈಲ್ವೆ ಸಚಿವರಿಗೆ ಉಚಿತ) ಕೊನೆಯದಾಗಿ ಅಚ್ಚೇ ದಿನ್ ಅಂತಾ ಖಾಲಿ ಜಾಗ ನೀಡಿದ್ದು, ಸದ್ಯಕ್ಕೆ ಲಭ್ಯವಿರುವದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬರಲಿದೆ

    ಪ್ರತಿಯೊಂದು ವಸ್ತುವಿನ ಮೂಲಕ ಪರೋಕ್ಷವಾಗಿ ಮೋದಿ ಸರ್ಕಾರವನ್ನು ತರಾಟೆಗೆ ತೆಗದದುಕೊಂಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಏರುತ್ತಿರುವದನ್ನು ಟೀಕಿಸಿದ್ದು, ನೋಟ್ ಬ್ಯಾನ್ ನಿಂದಾಗಿ ದೇಶದ ಜಿಡಿಪಿ ಕಡಿಮೆಯಾಗಿದೆ ಎಂದು ನೇರವಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.

    ಇನ್ನೂ ಮೂರನೇಯದಾಗಿ ರೈಲ್ವೆ ಸುರಕ್ಷಾ ಬಗ್ಗೆ ಪುಸ್ತಕವನ್ನಿಟ್ಟು ರೈಲುಗಳು ಅಪಘಾತದ ಬಗ್ಗೆ ಹೇಳಿದ್ದಾರೆ. ಕೊನೆಯದಾಗಿ ಅಚ್ಛೆ ದಿನ್ (ಒಳ್ಳೆಯ ದಿನಗಳು) ಸದ್ಯ ಇಲ್ಲ. ಎಲ್ಲವೂ ಮಗಿದು ಹೋಗಿದ್ದು, ಮುಂದಿನ ದಿನಗಳಲ್ಲಿ ಬರಲಿವೆ ಅಂತಾ ಹೇಳಿದ್ದಾರೆ.

    https://twitter.com/KannikaUrs/status/910806525458898944

    https://twitter.com/Publicvoice8/status/910769773151170560

  • ಆನ್‍ಲೈನ್ ಮೂಲಕ ಶಾಪಿಂಗ್ ಮಾಡೋ ಮಂದಿಗೆ ಗುಡ್‍ನ್ಯೂಸ್

    ಆನ್‍ಲೈನ್ ಮೂಲಕ ಶಾಪಿಂಗ್ ಮಾಡೋ ಮಂದಿಗೆ ಗುಡ್‍ನ್ಯೂಸ್

    ನವದೆಹಲಿ: ಆನ್‍ಲೈನ್ ಶಾಪಿಂಗ್ ತಾಣಗಳು ಇನ್ನು ಮುಂದೆ ಉತ್ಪನ್ನಗಳ ಎಂಆರ್‍ಪಿ ಮಾತ್ರ ಅಲ್ಲ ಅವುಗಳ ಎಕ್ಸ್​ಪೈರಿ ದಿನಾಂಕ ಮತ್ತು ಗ್ರಾಹಕ ಸೇವೆಗಳ ಮಾಹಿತಿಯನ್ನು ನೀಡಬೇಕು.

    ಹೌದು. ಆನ್‍ಲೈನ್ ತಾಣಗಳಲ್ಲಿ ಇಲ್ಲಿಯವರೆಗೆ ಉತ್ಪನ್ನಗಳ ಎಂಆರ್‍ಪಿ ಮಾತ್ರ ಹಾಕಲಾಗುತಿತ್ತು. ಗ್ರಾಹಕರಿಗೆ ವಂಚನೆ ಆಗುತ್ತಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜನವರಿ 2018ರ ನಂತರ ಕಡ್ಡಾಯವಾಗಿ ಎಂಆರ್‍ಪಿ ಜೊತೆ ಎಕ್ಸ್​ಪೈರಿ ದಿನಾಂಕವನ್ನು ಪ್ರಕಟಿಸಬೇಕೆಂದು ಆನ್‍ಲೈನ್ ಶಾಪಿಂಗ್ ಕಂಪೆನಿಗಳಿಗೆ ಸೂಚಿಸಿದೆ.

    ಆನ್‍ಲೈನ್ ತಾಣಗಳು ಎಂಆರ್‍ಪಿ ಜೊತೆಗೆ, ಉತ್ಪಾದನಾ ದಿನಾಂಕ, ಎಕ್ಸ್​ಪೈರಿ ದಿನಾಂಕ, ಪ್ರಮಾಣದ ಮಾಹಿತಿ, ಯಾವ ದೇಶದಲ್ಲಿ ತಯಾರಾಗಿದೆ, ಗ್ರಾಹಕ ಸೇವೆಯ ಮಾಹಿತಿಯನ್ನು ತೋರಿಸಬೇಕಾಗುತ್ತದೆ.

    ಲೀಗಲ್ ಮೆಟ್ರೊಲಜಿ ಕಾಯ್ದೆ(ಪ್ಯಾಕ್ ಮಾಡಿದ ಸರಕು) ಪ್ರಕಾರ ಈ ಎಲ್ಲ ಮಾಹಿತಿಗಳನ್ನು ತೋರಿಸುವಂತೆ ಕೇಂದ್ರ ಸರ್ಕಾರ ಕಂಪೆನಿಗಳಿಗೆ 6 ತಿಂಗಳ ಡೆಡ್‍ಲೈನ್ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಜನವರಿ 1ರಿಂದ ಆನ್‍ಲೈನ್ ತಾಣಗಳು ಸರ್ಕಾರ ಕೇಳಿರುವ ಮಾಹಿತಿಗಳನ್ನು ದಪ್ಪ ಅಕ್ಷರದಲ್ಲಿ ನಲ್ಲಿ ತೋರಿಸಬೇಕು. ಒಂದು ವೇಳೆ ಉಲ್ಲಂಘನೆ ಎಸಗಿದ್ದು ಕಂಡು ಬಂದಲ್ಲಿ ಆ ಕಂಪೆನಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

    ಆನ್‍ಲೈನ್ ಶಾಪಿಂಗ್ ತಾಣಗಳಿಂದ ಆಗುತ್ತಿರುವ ವಂಚನೆಯ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾಯ್ದೆ ತಿದ್ದುಪಡಿ ಮಾಡಿ ಈ ಕಾನೂನು ತಂದಿದೆ.

    ಇದನ್ನೂ ಓದಿ: ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್