Tag: Online Education

  • ಆನ್‌ಲೈನ್ ಶಿಕ್ಷಣವೇ ವಿದ್ಯಾರ್ಥಿಗಳಿಗೆ ಶಿಕ್ಷೆ – ನ್ಯಾ. ಮಲ್ಲಿಕಾರ್ಜುನ ಗೌಡ

    ಆನ್‌ಲೈನ್ ಶಿಕ್ಷಣವೇ ವಿದ್ಯಾರ್ಥಿಗಳಿಗೆ ಶಿಕ್ಷೆ – ನ್ಯಾ. ಮಲ್ಲಿಕಾರ್ಜುನ ಗೌಡ

    ಶಿವಮೊಗ್ಗ: ಆನಲೈನ್ ತರಗತಿಗಳಿಗಾಗಿ ಮಕ್ಕಳಿಗೆ ಮೊಬೈಲ್ (Mobile) ನೀಡುವುದರಿಂದ ಅವರಲ್ಲಿ ಖಿನ್ನತೆ ಉಂಟಾಗಿ, ಆನ್‌ಲೈನ್‌ ಶಿಕ್ಷಣವೆನ್ನುವುದು (Online Education) ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಆತಂಕಪಟ್ಟಿದ್ದಾರೆ.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್ (Zilla Panchayat), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (Health And Family Wellfare Department) ಇಲಾಖೆ ಸಂಯುಕ್ತಾಶ್ರಯದಲ್ಲಿ ಸಿಮ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಅಮೆರಿಕ, ಭಾರತ, ಇಂಡೊ-ಪೆಸಿಫಿಕ್ ಪ್ರದೇಶಗಳಲ್ಲಿ ವಾಣಿಜ್ಯ ಬಾಹ್ಯಾಕಾಶ ಅವಕಾಶಗಳಿಗೆ ವೇದಿಕೆ ಕಲ್ಪಿಸಿದ ಸ್ಪೇಸ್ ಕಾನ್ಕ್ಲೇವ್

    ಕೋವಿಡ್ (Covid) ಬಂದ ನಂತರ ಮಾನಸಿಕ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದ್ದು, ಆನ್‌ಲೈನ್ ತರಗತಿಗಳಿಗಾಗಿ ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಅವರಲ್ಲಿ ಖಿನ್ನತೆಯುಂಟಾಗಿದೆ. ಶಿಕ್ಷಣ ಅನ್ನೋದು ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ 200 ಕೊಳೆತ ಶವ ಪತ್ತೆ

     ಔಷಧವೆಂದರೆ (Medicines) ಕೇವಲ ಮಾತ್ರೆ ಮತ್ತು ಇಂಜೆಕ್ಷನ್‌ಗಳು ಮಾತ್ರವಲ್ಲ. ಶಿಸ್ತುಬದ್ಧ ಜೀವನಕ್ರಮ, ಉತ್ತಮವಾದ ನಡಿಗೆ, ವ್ಯಾಯಾಮ, ಸೂಕ್ತವಾದ ನಿದ್ರೆ ಮತ್ತು ಆಹಾರಗಳು ಕೂಡ ಔಷಧ. ಗರ್ಭಿಣಿಯರಿಗೆ (Pragnant)  ಒತ್ತಡ ಹೆಚ್ಚಾದರೆ ಅದರ ಪರಿಣಾಮ ಮಕ್ಕಳ ಮೇಲೆ ಬೀಳುತ್ತದೆ. ಆದ್ದರಿಂದ ಮಾನಸಿಕ ಸಂತೋಷ ನೀಡುವಂತ ಪೂರಕ ವಾತವರಣ ಅವರಿಗೆ ನಿರ್ಮಿಸಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣನವರ್, ಸಿಮ್ಸ್ ಪ್ರಾಂಶುಪಾಲರಾದ ಡಾ.ಮಂಜುನಾಥ್ ಎಂ.ಎಲ್, ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ, ವೈದ್ಯಕೀಯ ಅಧೀಕ್ಷಕ ಡಾ.ಎಸ್‌ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಸ್ ರಾಮ್ ಪ್ರಸಾದ್, ಮನೋವೈದ್ಯ ಡಾ.ಎಂ.ಎನ್ ಸಂತೋಷ್ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭೂಕುಸಿತ ಸ್ಥಳದಲ್ಲೇ ಅನ್‍ಲೈನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಂದ ನೆಟ್‍ವರ್ಕ್ ಹುಡುಕಾಟ

    ಭೂಕುಸಿತ ಸ್ಥಳದಲ್ಲೇ ಅನ್‍ಲೈನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಂದ ನೆಟ್‍ವರ್ಕ್ ಹುಡುಕಾಟ

    – ಭಯದಲ್ಲಿ ಪೋಷಕರು

    ಮಡಿಕೇರಿ: 2019ರಲ್ಲಿ ಭೂಕುಸಿರತವಾದ ಸ್ಥಳದಲ್ಲಿ ವಿದ್ಯಾರ್ಥಿಗಳು ನೆಟ್‍ವರ್ಕ್ ಹುಡುಕಾಟ ನಡೆಸುತ್ತಿರೋದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಭೂಮಿ ಶಿಥಿಲವಾಗಿದ್ದು, ಮಕ್ಕಳು ನೆಟ್‍ವರ್ಕ್ ಮರದ ಮೇಲೆ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಗ್ರಾಮೀಣಾ ಭಾಗದಲ್ಲಿ ನೆಟ್‍ವರ್ಕ್ ಮತ್ತು ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಅನ್‍ಲೈನ್ ಕಲಿಕೆಗೆ ತೊಡಕು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಕಷ್ಟವಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರಿಗೂ ನೆಟ್‍ವರ್ಕ್ ಸಮಸ್ಯೆ ಉಂಟಾಗಿದೆ. ಗ್ರಾಮೀಣ ಪ್ರದೇಶವಾಗಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ನೆಟ್‍ವರ್ಕ್ ಗಾಗಿ ಮೂರು ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಬಂದು ನೆಟ್‍ವರ್ಕ್ ಸರ್ಚ್ ಮಾಡಿ ಅನ್‍ಲೈನ್ ಕ್ಲಾಸ್ ಗೆ ಹಾಜರಾಗುವ ಪರಿಸ್ಥಿತಿ ಇದೆ. ಇದನ್ನೂ ಓದಿ: ನೆಟ್‍ವರ್ಕ್ ಗಾಗಿ ಅಟ್ಟಣಿಗೆ ಕ್ಲಾಸ್ ರೂಂ ನಿರ್ಮಿಸಿದ ಪಬ್ಲಿಕ್ ಹೀರೋ ಶಿಕ್ಷಕ ಸತೀಶ್ 

    ಮಳೆಗಾಲ ಅರಂಭವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಬೇರೆ ಕಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಬೆಟ್ಟ ಗುಡ್ಡದ ಮೇಲೆ ನೆಟ್‍ವರ್ಕ್ ಗಾಗಿ ಮರ ಬಂಡೆ ಬೆಟ್ಟದ ತುದಿಯಲ್ಲಿ ಹೋಗಿ ಅನ್‍ಲೈನ್ ಶಿಕ್ಷಣಕ್ಕೆ ಮುಂದಾಗಿದ್ದಾರೆ. ಈ ಗ್ರಾಮದ ಸಮೀಪ ಇರುವ ತೋರಾ ಗ್ರಾಮದಲ್ಲಿ 2019ರಲ್ಲಿ ಭೂಕುಸಿತ ಉಂಟಾಗಿ ಸಾವು ನೋವುಗಳು ಸಂಭವಿಸಿತ್ತು. ಇದೀಗ ಮಕ್ಕಳು ಬೆಟ್ಟದ ಮೇಲೆ ನೆಟ್‍ವರ್ಕ್ ಗಾಗಿ ಅಲೆದಾಟ ನಡೆಸುತ್ತಿದ್ದು. ಪೋಷಕರಲ್ಲಿ ಅತಂಕ ಮನೆ ಮಾಡುತ್ತಿದೆ. ಹೀಗಾಗಿ ಗ್ರಾಮಕ್ಕೆ ನೆಟ್‍ವರ್ಕ್ ಸಮಸ್ಯೆ ಬಗ್ಗೆ ಹರಿಸಿಕೊಂಡುವಂತೆ ಗ್ರಾಮಸ್ಥರು ಜಿಲ್ಲಾಡಳಿತವನ್ನು ಅಗ್ರಹಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್‍ಗಾಗಿ ಮಳೆಯನ್ನೂ ಲೆಕ್ಕಿಸದೆ ಗುಡ್ಡ ಹತ್ತಿ ಕುಳಿತ ವಿದ್ಯಾರ್ಥಿಗಳು

  • ನೆಟ್‍ವರ್ಕ್ ಗಾಗಿ ಅಟ್ಟಣಿಗೆ ಕ್ಲಾಸ್ ರೂಂ ನಿರ್ಮಿಸಿದ ಪಬ್ಲಿಕ್ ಹೀರೋ ಶಿಕ್ಷಕ ಸತೀಶ್

    ನೆಟ್‍ವರ್ಕ್ ಗಾಗಿ ಅಟ್ಟಣಿಗೆ ಕ್ಲಾಸ್ ರೂಂ ನಿರ್ಮಿಸಿದ ಪಬ್ಲಿಕ್ ಹೀರೋ ಶಿಕ್ಷಕ ಸತೀಶ್

    ಮಡಿಕೇರಿ: ಪುಟ್ಟ ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ನಗರ ಪ್ರದೇಶದಿಂದ ಹಿಡಿದು ಗ್ರಾಮೀಣ ಪ್ರದೇಶದ ಎಲ್ಲೆಡೆಯೂ ಇದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ಹೆಚ್ಚಿದೆ. ಇನ್ನು ಮಳೆಗಾಲದಲ್ಲಂತೂ ಸಮಸ್ಯೆ ಮತ್ತಷ್ಟೂ ಹೆಚ್ಚಾಗುತ್ತದೆ. ಏಕೆಂದರೆ ಮಳೆ, ಗಾಳಿಗೆ ವಿದ್ಯುತ್ ಕಡಿತಗೊಂಡಾಗ ಗಂಟೆಗಟ್ಟಲೇ ಮೊಬೈಲ್ ಟವರ್ ಗಳು ಡೀಸೆಲ್‍ನಿಂದ ಓಡಬೇಕಾಗುತ್ತದೆ.

    ಇಂದಿನ ಡೀಸೆಲ್ ದರಕ್ಕೆ ಜೊತೆಗೆ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್‍ನ ಆರ್ಥಿಕ ದುಸ್ಥಿತಿಗೆ ಕೆಲವೊಮ್ಮೆ ದಿನಗಟ್ಟಲೇ ನೆಟ್‍ವರ್ಕ್ ಸಿಗುವುದಿಲ್ಲ. ಆದರೆ ನೆಟ್‍ವರ್ಕ್ ಇದ್ದಾಗಲಾದರೂ ಅನ್‍ಲೈನ್ ಪಾಠಗಳ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲು ಪಬ್ಲಿಕ್ ಹೀರೋ ಸತೀಶ್ ಶಿಕ್ಷಕ ಮುಂದಾಗಿದ್ದಾರೆ. ನೆಟ್‍ವರ್ಕ್ ಸಮಸ್ಯೆ ಇರುವುದರಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್, 20 ಅಡಿ ಎತ್ತರದಲ್ಲಿ ಮರದ ಅಟ್ಟಣಿಗೆ ನಿರ್ಮಿಸಿ ಆನ್‍ಲೈನ್ ಕ್ಲಾಸ್ ಮಾಡಲು ಉಪಾಯ ಕಂಡುಕೊಂಡಿದ್ದಾರೆ.

    ಚಿಕ್ಕಕೊಳತ್ತೂರು ಗ್ರಾಮದ ಮನೆಯ ಆವರಣದಲ್ಲಿ ಬೊಂಬು, ಬೈನೆ ಮರದ ತಡಿಕೆಗಳು, ತಂತಿ, ಬಲೆ ಹಾಗೂ ಹುಲ್ಲು ಬಳಸಿ ‘ಟ್ರೀ ಹೌಸ್’ ಮಾದರಿಯಲ್ಲಿ ತರಗತಿ ಕೋಣೆ ನಿರ್ಮಿಸಿದ್ದಾರೆ. ಮೊಬೈಲ್ ಫೋನ್ ಬಳಸಿ ಅವರು ತರಗತಿ ನಡೆಸುತ್ತಾರೆ. 500 ರೂ. ವೆಚ್ಚದ ಮೊಬೈಲ್ ಸ್ಟ್ಯಾಂಡ್ ಮತ್ತು ರೆಕಾರ್ಡರ್ ಖರೀದಿಸಿ ಬೋಧನೆಗೆ ಬಳಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಆಕರ್ಷಿಸುವಂಥ ಚಟುವಟಿಕೆಗಳನ್ನು ಮಾಡಿಸುತ್ತಾರೆ.

    ಪಾಠ ಮಾಡಲು 3 ಬಗೆಯ ಕಪ್ಪು ಹಲಗೆಗಳು ಹಾಗೂ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸುತ್ತಾರೆ. ಪಠ್ಯದ ಜೊತೆಗೆ ಯೋಗಾಸನ, ಒಳಾಂಗಣ ಆಟಗಳು, ಕಥೆ, ಇಂಗ್ಲಿಷ್, ಸಾಕು ಪ್ರಾಣಿಗಳ ಮಾಹಿತಿ ನೀಡುತ್ತಾರೆ. ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಮಕ್ಕಳ ಕಲಿಕೆಗೆ ನೆರವಾಗುತ್ತಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಕಲಿಕಾ ಸಂಪರ್ಕ ಸಾಧಿಸುವ ಕಾರ್ಯಕ್ರಮ ನಡೆಯುತ್ತಿದೆ. ಸ್ಮಾರ್ಟ್ ಫೋನ್ ಇರುವ ಮಕ್ಕಳಿಗೆ ಆನ್‍ಲೈನ್ ಮೂಲಕ ಬೋಧನೆ, ವಾಟ್ಸಪ್ ಮೂಲಕ ಹೋಮ್‍ವರ್ಕ್ ಮಾಡಿಸುತ್ತಾರೆ. ನೆಟ್‍ವರ್ಕ್ ಸಮಸ್ಯೆ ಇದ್ದರೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಸತೀಶ್ ಅವರು ನೆಟ್‍ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವುದು ವಿಶೇಷವಾಗಿದೆ. ಒಟ್ನಲ್ಲಿ ನೆಟ್‍ವರ್ಕ್ ಸಿಗುವುದಿಲ್ಲ ಎಂಬ ಒಂದೇ ಕಾರಣ ಮುಂದೊಡ್ಡಿ, ದಿನಗಟ್ಟಲೇ ರಜೆ ಮಾಡಿಕೊಳ್ಳುವ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಇರುವಾಗ, ಸ್ವಂತ ಹಣ ವೆಚ್ಚ ಮಾಡಿ ತರಗತಿ ನಡೆಸುತ್ತಿರುವ ಶಿಕ್ಷಕ ಸತೀಶ್‍ರವರ ಸೇವೆಗೆ ಗ್ರಾಮಸ್ಥರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್‍ಗಾಗಿ ಮಳೆಯನ್ನೂ ಲೆಕ್ಕಿಸದೆ ಗುಡ್ಡ ಹತ್ತಿ ಕುಳಿತ ವಿದ್ಯಾರ್ಥಿಗಳು

  • ಆನ್‍ಲೈನ್ ಶಿಕ್ಷಣದ ದುರುಪಯೋಗ- ವಿದ್ಯಾರ್ಥಿನಿಯರ ಭಾವಚಿತ್ರ ವೈರಲ್

    ಆನ್‍ಲೈನ್ ಶಿಕ್ಷಣದ ದುರುಪಯೋಗ- ವಿದ್ಯಾರ್ಥಿನಿಯರ ಭಾವಚಿತ್ರ ವೈರಲ್

    – ಮಡಿಕೇರಿಯಲ್ಲಿ ಓರ್ವನ ಬಂಧನ

    ಮಡಿಕೇರಿ: ಆನ್‍ಲೈನ್ ಶಿಕ್ಷಣವನ್ನು ದುರುಪಯೋಗಪಡಿಸಿಕೊಂಡು ಹೆಣ್ಣುಮಕ್ಕಳ ವಿವಿಧ ಭಂಗಿಯ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಂಬಂಧ ಈಗಾಗಲೇ ಮಡಿಕೇರಿಯ ಕೊಡಗು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

    ಮಕ್ಕಳು ಆನ್‍ಲೈನ್ ಸಂಬಂಧ ಮೊಬೈಲ್ ಬಳಕೆ ಮಾಡುತ್ತಿದ್ದು, ಇದನ್ನು ಕೆಲವು ದುರುಳರು ದುರುಪಯೋಗ ಮಾಡಿಕೊಂಡು ಮಕ್ಕಳನ್ನು ಮೊಬೈಲ್ ಮೂಲಕ ಕರೆ ಮಾಡಿ ಮಾತನಾಡಿಸುತ್ತಿದ್ದಾರೆ. ಅವರನ್ನು ನಂಬಿಸುವುದರೊಂದಿಗೆ ಹೆಣ್ಣು ಮಕ್ಕಳ ಫೋಟೋಗಳನ್ನು ವಿವಿಧ ಭಂಗಿಯಲ್ಲಿ ವಿನಿಮಯ ಮಾಡಿಕೊಂಡು ನಂತರ ಮಕ್ಕಳನ್ನು ಬ್ಲಾಕ್‍ಮೇಲ್ (ಬೆದರಿಸಿ) ಮಾಡಿ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದಾಗಿ ಹೇಳಲಾಗಿದೆ.

    ಮಕ್ಕಳು ಇವರ ಆಮಿಷಗಳಿಗೆ ಒಪ್ಪದಿದ್ದಾಗ ಮಕ್ಕಳ ವಿವಿಧ ಭಂಗಿಯ ಫೋಟೋವನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತಿದ್ದು ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಈ ಸಂಬಂಧ ಈಗಾಗಲೇ ಎರಡು ದಿನಗಳ ಹಿಂದೆ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಸರ್ಕಾರಿ ಶಾಲೆ, ಮದರಸಾದ ಮಕ್ಕಳ ಖಾತೆಗೆ 10 ಸಾವಿರ ರೂಪಾಯಿ: ಮಮತಾ ಬ್ಯಾನರ್ಜಿ

    ಸರ್ಕಾರಿ ಶಾಲೆ, ಮದರಸಾದ ಮಕ್ಕಳ ಖಾತೆಗೆ 10 ಸಾವಿರ ರೂಪಾಯಿ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಸರ್ಕಾರಿ ಶಾಲೆ ಮತ್ತು ಮದರಸಾದಲ್ಲಿ ಓದುತ್ತಿರುವ 12ನೇ ತರಗತಿಯಲ್ಲಿ ಓದುತ್ತಿರುವ ಪ್ರತಿ ಮಕ್ಕಳ ಖಾತೆಗೆ 10 ಸಾವಿರ ರೂ. ಜಮೆ ಮಾಡಲಾಗುವುದು. ಮಕ್ಕಳು ಈ ಹಣದಿಂದ ಸ್ಮಾರ್ಟ್ ಫೋನ್ ಅಥ್ವಾ ಟ್ಯಾಬ್ಲೆಟ್ ಖರೀದಿಸಬಹುದು ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 9.5 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

    ಇಂದು ನಡೆದ ಸುದ್ದಿಗೋಷ್ಠಿಯಲ್ಲಿ 10 ಸಾವಿರ ರೂ. ನಗದು ನೀಡುವ ಯೋಜನೆ ಕುರಿತು ಮಮತಾ ಬ್ಯಾನರ್ಜಿ ಮಾಹಿತಿ ನೀಡಿದರು. ಈ ಮೊದಲು ರಾಜ್ಯ ಸರ್ಕಾರದಿಂದ 10ನೇ ತರಗತಿಯ ಮಕ್ಕಳಿಗೆ ಟ್ಯಾಬ್ಲೇಟ್ ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಈ ಸಂಬಂಧ ಟೆಂಡರ್ ಸಹ ಅಂತಿಮ ಹಂತದಲ್ಲಿತ್ತು. ಆದ್ರೆ ಕೇಂದ್ರ ಸರ್ಕಾರ ಚೀನಾ ವಸ್ತುಗಳ ಮೇಲೆ ನಿಷೇಧ ವಿಧಿಸಿದ್ದರಿಂದ ನಗದು ವರ್ಗಾಯಿಸುವ ಬಗ್ಗೆ ನಿರ್ಧರಿಸಲಾಯ್ತು. ಮುಂದಿನ ಮೂರು ವಾರಗಳಲ್ಲಿ ನೇರವಾಗಿ ಸರ್ಕಾರಿ ಶಾಲೆ ಮತ್ತು ಮದರಸಾಗಳ ಮಕ್ಕಳ ಖಾತೆಗೆ ಹಣ ಜಮೆಯಾಗಲಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

    ಟ್ಯಾಬ್ಲೆಟ್ ಉತ್ಪಾದನೆಯ ಹಲವು ಕಂಪನಿಗಳ ಜೊತೆ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆ ಮಾತುಕತೆ ನಡೆಸಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಟ್ಯಾಬ್ಲೆಟ್ ಪೂರೈಸಲು ಬಹುತೇಕ ಕಂಪನಿಗಳು ಸಮಯ ಕೇಳಿದ್ದವು. ಈ ನಡುವೆ ಕೇಂದ್ರ ಸರ್ಕಾರದ ಹೊಸ ಅದೇಶಗಳಿಂದ ಟ್ಯಾಬ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆದ್ದರಿಂದ ವಿದ್ಯಾರ್ಥಿಗಳ ಹಿತಕ್ಕಾಗಿ ಸರ್ಕಾರ ಹಣ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ. ಕೊರೊನಾ ಹಿನ್ನೆಲೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ದೀದಿ ಸರ್ಕಾರ ಟ್ಯಾಬ್ ನೀಡಲು ಮುಂದಾಗಿದೆ.

    ಅತಿ ಹೆಚ್ಚು ಮೆಡಿಕಲ್ ಕಾಲೇಜ್: ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಬಡತನ ನಿರ್ಮೂಲನೆಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶಿಶು ಮೃತ್ಯು ದರ ಸಹ ಕಡಿಮೆ ಇದೆ. ರೇಪ್, ಕೊಲೆ, ನಕ್ಸಲ್ ಚಟುವಟಿಕೆಗಳ ಸಂಖ್ಯೆಯೂ ಇಳಿಮುಖವಾಗಿದೆ. ರಾಜಕೀಯ ಗಲಾಟೆಗಳಿಂದ ಹಿಂಸೆ ಪ್ರಕರಣಗಳು ಇಳಿಕೆಯಾಗಿವೆ. ಟಿಎಂಸಿ ಸರ್ಕಾರ ರಾಜ್ಯದಲ್ಲಿ ಅತಿಹೆಚ್ಚು ಮೆಡಿಕಲ್ ಕಾಲೇಜುಗಳನ್ನ ಆರಂಭಿಸಿದೆ. ಬಂಗಾಳದಲ್ಲಿ 272 ಐಟಿಐಗಳಿವೆ. ಪಶ್ಚಿಮ ಬಂಗಾಳದ ಸಾಕ್ಷರತೆತಯೂ ಪ್ರಮಾಣವೂ ಹೆಚ್ಚಿದ್ದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವನ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು.

  • ಆನ್‌ಲೈನ್ ಶಿಕ್ಷಣದಿಂದ ಅಪ್ಪನ ರಾಸಲೀಲೆ ಕಳಚಿದ ಮಗಳು

    ಆನ್‌ಲೈನ್ ಶಿಕ್ಷಣದಿಂದ ಅಪ್ಪನ ರಾಸಲೀಲೆ ಕಳಚಿದ ಮಗಳು

    – ವಿಡಿಯೋದಿಂದ ಸಂಸಾರದಲ್ಲಿ ಬಿರುಗಾಳಿ
    – ಪತ್ನಿಯನ್ನು ಬಿಟ್ಟು ಹೋದ ಪತಿ

    ಮಂಡ್ಯ: ಕೊರೊನಾ ಅಟ್ಟಹಾಸದಿಂದ 8 ತಿಂಗಳಿನಿಂದ ಶಾಲಾ, ಕಾಲೇಜುಗಳು ಬಾಗಿಲು ತೆರದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳು ಈಗ ಆನ್‌ಲೈನ್‌ ಮೂಲಕ ಪಾಠ ಕಲಿಯುತ್ತಿದ್ದಾರೆ. ಈಗ ಆನ್‌ಲೈನ್ ಶಿಕ್ಷಣದಿಂದ ಮಗಳು ಅಪ್ಪನ ಮುಖವಾಡ ಕಳಚಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

    ನಾಗಮಂಗಲ ತಾಲ್ಲೂಕಿನ ಗ್ರಾಮವೊಂದರ ಕುಮಾರ್ ಎಂಬಾತ ಪರಸ್ತ್ರೀ ಜೊತೆ ನಡೆಸಿರುವ ರಾಸಲೀಲೆಯನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಇಟ್ಟುಕೊಂಡಿದ್ದ. ಇದಾದ ಬಳಿಕ ಮನೆಗೆ ಹೋದ ವೇಳೆ ಆನ್‌ಲೈನ್‌ ಮೂಲಕ ದ್ವಿತೀಯ ಪಿಯುಸಿ ಓದುತ್ತಿದ್ದ ಮಗಳಿಗೆ ಮೊಬೈಲ್ ನೀಡಿದ್ದಾನೆ. ಆನ್‌ಲೈನ್ ಶಿಕ್ಷಣ ಆರಂಭಕ್ಕೆ ಸ್ವಲ್ಪ ಸಮಯ ಇದ್ದ ಕಾರಣ ಮಗಳು ಮನರಂಜನೆಗೆ ವಿಡಿಯೋಗಳನ್ನು ನೋಡಿದ್ದಾಳೆ.

    ಮೊಬೈಲ್‌ನಲ್ಲಿ ಇದ್ದ ವಿಡಿಯೋಗಳನ್ನು ಮಗಳು ನೋಡುತ್ತಿದ್ದಾಗ ತನ್ನ ತಂದೆ ಪರಸ್ತ್ರೀಯ ಜೊತೆ ನಡೆಸಿದ್ದ ರಾಸಲೀಲೆಯನ್ನು ನೋಡಿದ್ದಾಳೆ. ಇದನ್ನು ನೋಡಿ ಹೌಹಾರಿದ ಮಗಳು ಅಪ್ಪನ ರಾಸಲೀಲೆ ವಿಡಿಯೋವನ್ನು ತನ್ನ ತಾಯಿಗೆ ತೋರಿಸಿದ್ದಾಳೆ. ಇದಾದ ಬಳಿಕ ತನ್ನ ಗಂಡನನ್ನು ಹೆಂಡತಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ಬಳಿಕ ಮನೆಯಲ್ಲಿ ಗಲಾಟೆ ನಡೆದಿದೆ.

    ಮೊದಲಿನಿಂದಲೇ ಪತಿಯ ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ಶಂಕೆ ಇತ್ತು. ಈ ವಿಚಾರಕ್ಕೆ ಮನೆಯಲ್ಲಿ ಈ ಹಿಂದೆ ಜಗಳ ಸಹ ನಡೆದಿತ್ತು. ಈಗ ಅಧಿಕೃತವಾಗಿ ವಿಡಿಯೋ ಸಿಕ್ಕ ಮೇಲೆ ಗಂಡ ಹೆಂಡತಿಯ ನಡುವೆ ಜೋರು ಜಗಳವಾಗಿದೆ.

    ವಿಕೋಪಕ್ಕೆ ಹೋದ ಬಳಿಕ  ಗಂಡ, ಹೆಂಡತಿಯನ್ನು ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ಪತ್ನಿ ತನ್ನ ಗಂಡನ ವಿರುದ್ಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ನನ್ನ ಗಂಡನಿಗೆ ಪಾಠ ಕಲಿಸಿ ಸರಿಯಾಗಿ ಸಂಸಾರ ಮಾಡುವಂತೆ ಹೇಳಿ ಎಂದು ಪೊಲೀಸರ ಮೊರೆ ಹೋಗಿದ್ದಾಳೆ. ಅಲ್ಲದೇ ನಾಗಮಂಗಲದ ಮಹಿಳಾ ಸಾಂತ್ವಾನ ಕೇಂದ್ರ ಮೊರೆ ಹೋಗಿ ನೋವು ತೋಡಿಕೊಂಡಿದ್ದಾಳೆ.

  • ಆನ್‍ಲೈನ್ ಶಿಕ್ಷಣ ಗುಣಮಟ್ಟ ಅರಿಯುವ ಅಭಿಯಾನಕ್ಕೆ ಶಿಕ್ಷಣ ಸಚಿವರಿಂದ ಚಾಲನೆ

    ಆನ್‍ಲೈನ್ ಶಿಕ್ಷಣ ಗುಣಮಟ್ಟ ಅರಿಯುವ ಅಭಿಯಾನಕ್ಕೆ ಶಿಕ್ಷಣ ಸಚಿವರಿಂದ ಚಾಲನೆ

    ಬೆಂಗಳೂರು: ಈಗ ಆರಂಭವಾಗಿರುವ ಆನ್‍ಲೈನ್ ಶಿಕ್ಷಣದ ಕಲಿಕಾ ಗುಣಮಟ್ಟ ಅರಿಯುವ ಕುರಿತು ವಿದ್ಯಾವಿನ್-ಶೈಕ್ಷಣಿಕ ಆ್ಯಪ್ ವಿದ್ಯಾಸಂಸ್ಥೆ ಕೈಗೆತ್ತಿಕೊಂಡಿರುವ ಅಭಿಯಾನಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿದರು.

    ಕೋವಿಡ್‍ನಿಂದಾಗಿ ಸಾಂಪ್ರದಾಯಿಕ ತರಗತಿಗಳು ಆರಂಭವಾಗದೇ ಕೇವಲ ಆನ್‍ಲೈನ್ ತರಗತಿಗಳು ನಡೆಯುತ್ತಿರುವ ಈ ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ಮತ್ತು ಅದರಲ್ಲಿರುವ ಸಾಧ್ಯತೆಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾವಿನ್ ಸಂಸ್ಥೆ ರಾಜ್ಯಾದ್ಯಂತ ಆನ್‍ಲೈನ್ ಶಿಕ್ಷಣ ಕೈಗೊಂಡಿರುವ ಅಭಿಯಾನ ಉತ್ತಮವಾಗಿದೆ ಎಂದು ಸಚಿವರು ಹೇಳಿದರು.

    ಮಕ್ಕಳಿಗೆ ಮಿಸ್ಡ್‍ಕಾಲ್ ನೀಡಿದ ತಕ್ಷಣವೇ ಪ್ರಶ್ನಾವಳಿ ಡೌನ್‍ಲೋಡ್ ಮಾಡುವ ವ್ಯವಸ್ಥೆ ಇದ್ದು, ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟ ತಿಳಿಯುತ್ತದೆ. ಇದರ ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಹೆಚ್ಚು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಪ್ರತಿಭಾಶಾಲಿ ವಿದ್ಯಾರ್ಥಿಗೆ ಟ್ಯಾಬ್ ಮತ್ತು ಪ್ರತಿ ಜಿಲ್ಲೆಯಲ್ಲಿ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಆ್ಯಪ್ ಆಧಾರಿತ ಶಿಕ್ಷಣ ನೀಡುತ್ತಿರುವದು ಅಭಿಯಾನದಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಲು ಪ್ರೇರಣೆಯಾಗಿದೆ ಎಂದು ಹೇಳಿದರು.

    ಸಂಸ್ಥೆಯ ಅಧ್ಯಕ್ಷ ಕೆ.ಆರ್. ಪ್ರಕಾಶ್ ಮಾತನಾಡಿ, ಈ ಅಭಿಯಾನ ಎರಡು ತಿಂಗಳು ನಡೆಯಲಿದೆ. ಗುಣಮಟ್ಟದ ಪೂರಕ ಶಿಕ್ಷಣ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಿಕೊಡಲಿದೆ. ವಿದ್ಯುನ್ಮಾನ ಆ್ಯಪ್ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ಅಂತರ ನಿವಾರಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.

    ಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಲತಾ ಅಭಿಯಾನದಲ್ಲಿ ಭಾಗವಹಿಸುವ ಮಕ್ಕಳಿಗೆ ಡಿಜಿಟಲ್ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಜೊತೆಗೆ ಸಂಸ್ಥೆಯ ಉದ್ದೇಶಗಳನ್ನು ವಿವರಿಸಿದರು. ಪತ್ರಕರ್ತರಾದ ಬಾಲಕೃಷ್ಣ ಬಳ್ಳಕ್ಕ ಮತ್ತು ರವಿಶಂಕರ ಬೆಟ್ಟಂಪಾಡಿ ಮತ್ತಿತರರು ಭಾಗವಹಿಸಿದ್ದರು.

  • ಪಠ್ಯಕ್ರಮ ಕಡಿಮೆ ಮಾಡಿ ಮಕ್ಕಳನ್ನು ಪಾಸ್ ಮಾಡಿ- ಪಬ್ಲಿಕ್ ಟಿವಿ ಅಭಿಯಾನಕ್ಕೆ ಶೋಭಾ ಕರಂದ್ಲಾಜೆ ಮೆಚ್ಚುಗೆ

    ಪಠ್ಯಕ್ರಮ ಕಡಿಮೆ ಮಾಡಿ ಮಕ್ಕಳನ್ನು ಪಾಸ್ ಮಾಡಿ- ಪಬ್ಲಿಕ್ ಟಿವಿ ಅಭಿಯಾನಕ್ಕೆ ಶೋಭಾ ಕರಂದ್ಲಾಜೆ ಮೆಚ್ಚುಗೆ

    ಉಡುಪಿ: ವಿದ್ಯಾಗಮ ಸತತ ವರದಿ ಮಾಡಿದ್ದ ಪಬ್ಲಿಕ್ ಟಿವಿಗೆ ಗೆಲುವಾಗಿದ್ದು, ರಾಜ್ಯ ಸರ್ಕಾರ ಯೋಜನೆಯನ್ನು ತಾತ್ಕಾಲಿಕ ಸ್ಥಗಿತ ಮಾಡಿದೆ. ಇದು ಪಬ್ಲಿಕ್ ಟಿವಿ ಅಭಿಯಾನದ ಗೆಲುವು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿನಂದನೆ ಸಲ್ಲಿಸಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಇದು ಪಬ್ಲಿಕ್ ಟಿವಿ ಸಂಪಾದಕರ ದನಿಗೆ ಗೆಲುವು ಎಂದರು.

    ವಿದ್ಯಾಗಮ ಯಾವುದೇ ಕಾರಣಕ್ಕೂ ಮುಂದುವರಿಯಬಾರದು. ಯೋಜನೆ ಶಿಕ್ಷಕರಿಗೂ ಮತ್ತು ಮಕ್ಕಳಿಗೂ ಮಾರಕ. ಈ ವರ್ಷ ಶಾಲೆ ಬೇಡವೇ ಬೇಡ. ಎಸ್‍ಎಸ್‍ಎಕ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶಿಕ್ಷಣ ಬಹಳ ಮುಖ್ಯ. ಅವರಿಗೆ ಬೇರೆಯದೇ ಆದ ವಿಶೇಷವಾದ ಯೋಜನೆಯನ್ನು ಮಾಡಿ ಎಂದು ರಾಜ್ಯ ಸರಕಾರಕ್ಕೆ ಸಲಹೆ ಕೊಟ್ಟರು.

    ಉಳಿದ ಎಲ್ಲಾ ತರಗತಿಯ ಮಕ್ಕಳನ್ನು ಆನ್‍ಲೈನ್ ಶಿಕ್ಷಣದ ಮೂಲಕ ಕಡಿಮೆ ಪಾಠ ಮಾಡಿ ಪಾಸ್ ಮಾಡಿ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕರೆಯನ್ನು ಕೊಟ್ಟಿದ್ದಾರೆ. ಮೊದಲು ಜೀವ ಉಳಿಸಬೇಕು. ಆನಂತರ ಜೀವನವನ್ನು ರೂಪಿಸಬೇಕು. ರಾಜ್ಯ ಸರ್ಕಾರ ಇದನ್ನು ಪಾಲಿಸಬೇಕು ಎಂದು ಸಲಹೆ ಕೊಟ್ಟರು. 2020ರಲ್ಲಿ ಜೀವ ಉಳಿಸಿಕೊಳ್ಳಬೇಕು. 2021ರಲ್ಲಿ ಜೀವನವನ್ನು ಆರಂಭಿಸೋಣ ಎಂದರು.

    ಕೆಲವು ಜಿಲ್ಲೆಗಳು ನಮಗೆ ಶಿಕ್ಷಣ ಮುಖ್ಯ ಎಂದು ಹೇಳುತ್ತವೆ. ಅಂತಹವರಿಗೆ ಆನ್‍ಲೈನ್ ಶಿಕ್ಷಣದ ಮೂಲಕ ಪಾಠ ಮಾಡಬಹುದು. ಮನೆಗಳಲ್ಲಿ ಪೋಷಕರು ಕೂಡ ಮಕ್ಕಳಿಗೆ ಪಾಠ ಮಾಡಬೇಕು. ಈಗಿನ ಕಾಲದಲ್ಲಿ ಮನೆಯಲ್ಲಿ ಒಂದು ಎರಡು ಮಕ್ಕಳಿರುತ್ತಾರೆ. ಅವರಿಗೂ ಕೂಡ ಸೋಂಕು ಆವರಿಸಿದರೆ ಬಹಳಷ್ಟು ಕಷ್ಟ ಆಗುತ್ತದೆ.

    ಶಾಲೆ ಆರಂಭ ಮಾಡಿ ಎಂಬ ಒತ್ತಡದ ಮೇಲೆ ಒತ್ತಡ ಬಂದದ್ದಕ್ಕೆ ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ಯೋಜನೆ ಮಾಡಿತ್ತು. ರಾಜ್ಯ ಸರ್ಕಾರಕ್ಕೆ ಈಗ ಅನುಭವಕ್ಕೆ ಬಂದಿದೆ, ಶಾಲೆಗಳು ಬೇಡ ಅಂತ ಹೇಳಿ ಆದೇಶ ಮಾಡಿದೆ ಶಾಲೆ ಬೇಡ ಅನ್ನುವ ಮಾಧ್ಯಮಗಳ ಅಭಿಯಾನಕ್ಕೆ ನಾನು ಕೈ ಜೋಡಿಸಿದ್ದೇನೆ. ಡಿಸೆಂಬರ್ ತನಕ ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವುದು ಬೇಡ. ಜನವರಿ ತಿಂಗಳಲ್ಲಿ ಮತ್ತೆ ಪ್ರತಿ ಜಿಲ್ಲೆಯಿಂದ ವರದಿಗಳನ್ನು ತರಿಸಿಕೊಳ್ಳಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.

    ಕೊರೊನಾದ ವ್ಯಾಪಕತೆ ಕಡಿಮೆಯಾದರೆ, ಲಸಿಕೆ ಬಂದರೆ ಮತ್ತೆ ವಿದ್ಯಾಗಮ ಶಾಲೆ ಆರಂಭಿಸಿ. ಶಾಲೆ ಬೇಡ ಅನ್ನುವುದಕ್ಕೆ ಒಂದು ನಿರ್ದಿಷ್ಟವಾದ ಕಾರಣ ಇದೆ. ಹಾಗಾಗಿ ನಾವು ಬೇಡ ಅನ್ನುತ್ತಿದ್ದೇನೆ. ಪಠ್ಯಕ್ರಮವನ್ನು ಕಡಿಮೆ ಮಾಡಿ ಮಕ್ಕಳನ್ನು ಪಾಸ್ ಮಾಡಿ. ಅವರ ಒಂದು ವರ್ಷವನ್ನು ಲಾಸ್ ಮಾಡಬೇಡಿ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಈ ಎರಡು ತರಗತಿಗಳ ವಿದ್ಯಾರ್ಥಿಗಳ ಪರವಾಗಿ ರಾಜ್ಯ ಸರ್ಕಾರ ಶಿಕ್ಷಣ ತಜ್ಞರು ಏನಾದರೂ ವಿಶೇಷವಾದ ಯೋಜನೆಯನ್ನು ಜಾರಿಗೆ ತರಬೇಕು. ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ದೊಡ್ಡ ಮಕ್ಕಳು ಸುಲಭವಾಗಿ ಪಾಲಿಸಬಹುದು ಎಂದು ಅಭಿಪ್ರಾಯಪಟ್ಟರು.

  • ಆನ್‍ಲೈನ್ ಶಿಕ್ಷಣ- ನೆಟ್‍ವರ್ಕ್ ಅರಸಿ ಇಂದಿಗೂ ವಿದ್ಯಾರ್ಥಿಗಳ ಅಲೆದಾಟ

    ಆನ್‍ಲೈನ್ ಶಿಕ್ಷಣ- ನೆಟ್‍ವರ್ಕ್ ಅರಸಿ ಇಂದಿಗೂ ವಿದ್ಯಾರ್ಥಿಗಳ ಅಲೆದಾಟ

    ಮಡಿಕೇರಿ: ಕೊರೊನಾ ಮಹಾಮಾರಿಯಿಂದ ಲಾಕ್‍ಡೌನ್ ಆದ ಪರಿಣಾಮ ಶಾಲಾ ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಆದರೆ ವಿದ್ಯಾರ್ಥಿಗಳ ಕಲಿಕೆ ಹಿಂದೆ ಉಳಿಯದಂತೆ ಸರ್ಕಾರವೇನೋ ಆನ್ ಲೈನ್ ತರಗತಿಗಳನ್ನು ನಡೆಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ನೆಟ್‍ವರ್ಕ್ ಸಮಸ್ಯೆ ಹೇಳತೀರದಾಗಿದ್ದು, ವಿದ್ಯಾರ್ಥಿಗಳು ನೆಟ್‍ವರ್ಕ್ ಅರಸಿ ಕಾಡು ಮೇಡು ಅಲೆಯುವಂತಾಗಿದೆ.

    ಮಲೆನಾಡು ಹಾಗೂ ಸಂಪೂರ್ಣ ಬೆಟ್ಟಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ನೆಟ್‍ವರ್ಕ್ ಸಮಸ್ಯೆ ವಿದ್ಯಾರ್ಥಿಗಳ ಆನ್‍ಲೈನ್ ತರಗತಿಗಳನ್ನು ನರಕ ಸದೃಶ್ಯವಾಗಿಸಿದೆ. ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ಆನ್‍ಲೈನ್ ತರಗತಿ ಪಡೆಯಲು ನೆಟ್‍ವರ್ಕ್ ಹುಡುಕಿ ಮನೆಯಿಂದ ಎರಡು ಮೂರು ಕಿಲೋ ಮೀಟರ್ ದೂರ ಹೋಗಬೇಕಾಗಿದೆ. ದೂರದ ಎಲ್ಲೋ ಒಂದು ಬಸ್ ನಿಲ್ದಾಣದಲ್ಲಿ ನೆಟ್‍ವರ್ಕ್ ದೊರೆತರೆ ಅಲ್ಲಿಗೆ ಹೋಗಿ ಕುಳಿತು ಆನ್‍ಲೈನ್ ತರಗತಿ ವೀಕ್ಷಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗುತ್ತಿವೆ.

    ಸೋಮವಾರಪೇಟೆ ತಾಲ್ಲೂಕಿನ ಕೂತಿ ಎನ್ನೋ ಗ್ರಾಮದಲ್ಲಿ ನೆಟ್‍ವರ್ಕ್ ಸಮಸ್ಯೆ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ. ಈ ಗ್ರಾಮದ ಸುತ್ತಮುತ್ತ ಇರುವ ಕೆರೆಕೊಪ್ಪ, ನಗರಳ್ಳಿ, ಕಾರೆಕೊಪ್ಪ ಮತ್ತು ಶಾಂತಳ್ಳಿ ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ನೂರಾರು ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಎಷ್ಟೋ ವಿದ್ಯಾರ್ಥಿಗಳು ಯಾವುದೋ ತೋಟದ ಮಧ್ಯದಲ್ಲಿ, ಕಾಡಿನ ಮಧ್ಯದಲ್ಲಿ ನೆಟ್‍ವರ್ಕ್ ಸಿಗುತ್ತಿದ್ದರೆ ಅಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಆದರೆ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಮಳೆಯಲ್ಲೇ ನೆನೆದುಕೊಂಡು ಬಸ್ ನಿಲ್ದಾಣಗಳಿಗೆ ಹೋಗಿ ಕುಳಿತು ಪಾಠ ಕೇಳಬೇಕಾಗಿದೆ.

    ಇನ್ನು ಎಷ್ಟೋ ಗ್ರಾಮಗಳಲ್ಲಿ ತೋಟ, ಕಾಡಿನ ಮಧ್ಯೆ ನೆಟ್‍ವರ್ಕ್ ಸಿಗುತ್ತಿದ್ದರಿಂದ ಅಲ್ಲಿ ಕುಳಿತು ಆನ್‍ಲೈನ್ ಪಾಠ ಕೇಳುತ್ತಿದ್ದ ಹತ್ತಾರು ವಿದ್ಯಾರ್ಥಿಗಳು ಮಳೆಯಿಂದಾಗಿ ಆನ್ ಲೈನ್ ತರಗತಿಯಿಂದಲೂ ವಂಚಿತರಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೆಟ್ ವರ್ಕ್ ಸಮಸ್ಯೆ ಬಗೆಹರಿಸಿ ಎನ್ನೋದು ವಿದ್ಯಾರ್ಥಿಗಳ ಒತ್ತಾಯವಾಗಿದೆ.

  • ನೋ ಟವರ್, ನೋ ಪವರ್-ಆನ್‍ಲೈನ್ ಶಿಕ್ಷಣಕ್ಕಾಗಿ ಮಕ್ಕಳು, ಪೋಷಕರ ಪರದಾಟ

    ನೋ ಟವರ್, ನೋ ಪವರ್-ಆನ್‍ಲೈನ್ ಶಿಕ್ಷಣಕ್ಕಾಗಿ ಮಕ್ಕಳು, ಪೋಷಕರ ಪರದಾಟ

    -ಮಲೆನಾಡಿನ ಗ್ರಾಮೀಣ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ

    ಶಿವಮೊಗ್ಗ : ಆನ್‍ಲೈನ್ ಶಿಕ್ಷಣಕ್ಕೆ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಎದುರಾಗಿದೆ. ಆನ್‍ಲೈನ್ ಶಿಕ್ಷಣಕ್ಕೆ ಪವರ್ ಹಾಗೂ ಟವರ್ ಈ ಎರಡೂ ಅತೀ ಮುಖ್ಯವಾಗಿದೆ. ಆದ್ರೆ ಮಲೆನಾಡಿನಲ್ಲಿ ಪವರ್ ಹಾಗೂ ಟವರ್ ಎರಡರದ್ದು ಸಮಸ್ಯೆ ಇದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್ ಬಗ್ಗೆ ಒಲವು ತೋರುತ್ತಿಲ್ಲ. ನೆಟ್ ವರ್ಕ್ ಸಿಗಬೇಕು ಅಂದ್ರೆ ಊರಿಂದ ಆಚೆ ಹೋಗಬೇಕಿದೆ.

    ದೇಶದೆಲ್ಲೆಡೆ ಕೊರೊನಾ ಮಹಾಮಾರಿ ಎಲ್ಲಾ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಈ ಮಹಾಮಾರಿಯಿಂದ ಮಕ್ಕಳ ಶೈಕ್ಷಣಿಕ ಕಲಿಕೆಯ ಮೇಲೆಯೂ ಪರಿಣಾಮ ಬೀರಿದೆ. ಕೊರೊನಾ ಭಯದಿಂದಾಗಿ ಇದುವರೆಗೂ ಶಾಲಾ ಕಾಲೇಜುಗಳು ಆರಂಭವಾಗಿಲ್ಲ. ಆದರೆ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸಕಾರ ಇತ್ತೀಚಿಗೆ ಆನ್‍ಲೈನ್ ಕ್ಲಾಸ್ ನ ಮೊರೆ ಹೋಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಈ ವ್ಯವಸ್ಥೆ ವರ್ಕ್ ಔಟ್ ಆಗುತ್ತಿಲ್ಲ ಎಂಬ ಮಾತಿಗೆ ಸಾಕ್ಷಿ ದೊರೆತಿದ್ದು, ಅದೆಷ್ಟೋ ಗ್ರಾಮಗಳಲ್ಲಿ ಮಳೆಗಾಲ ಆಗಿರುವುದರಿಂದಾಗಿ 2 ದಿನಕ್ಕೊಮ್ಮೆ ಕರೆಂಟ್ ಬರುತ್ತಿದ್ದು, ಇದು ಕೂಡ ಸಮಸ್ಯೆಯಲ್ಲೊಂದಾಗಿದೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಸರ್ಕಾರ, ಸದ್ಯ ಆನ್‍ಲೈನ್ ಶಿಕ್ಷಣಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಈ ಆನ್‍ಲೈನ್ ಶಿಕ್ಷಣ ನಗರ ಪ್ರದೇಶದ ಮಕ್ಕಳಿಗೆ ಮಾತ್ರ ಅನುಕೂಲಕರವಾಗುತ್ತದೆಯೇ ಹೊರತು ಗ್ರಾಮೀಣ ಭಾಗದ ಮಕ್ಕಳಿಗಲ್ಲ. ಇದನ್ನೂ ಓದಿ:  ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾಂಗಲ್ಯ ಅಡವಿಟ್ಟ ತಾಯಿ- ಗದಗ ಜಿಲ್ಲೆಯಲ್ಲಿ ಮನಕಲಕುವ ಘಟನೆ

    ಇಂತಹ ಸ್ಥಿತಿಯಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೆಂದಾಳುಬೈಲು ಹೊರತಾಗಿಲ್ಲ. ಕುಂದಾದ್ರಿ ಬೆಟ್ಟದ ಬುಡದಲ್ಲಿ ಇರುವ ಪುಟ್ಟ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದೆ. ಇಲ್ಲಿನ ಬಹುತೇಕ ಮಂದಿ ಕೂಲಿ ಮಾಡಿ ಜೀವನ ನಡೆಸುವವರು. ಇವರು ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ಹಿಂದೆ ಮುಂದೆ ನೋಡ್ತಾರೆ. ಅದರಲ್ಲೂ ಮಕ್ಕಳಿಗೆ ಮೊಬೈಲ್ ಕೊಡಿಸುವುದು ಆಗದ ಮಾತು. ಮೊಬೈಲ್ ಇದ್ದರೂ ನೆಟ್‍ವರ್ಕ್ ಇಲ್ಲ. ಮೊಬೈಲ್ ಚಾರ್ಜ್ ಮಾಡಲು ಪವರ್ ಇರುವುದಿಲ್ಲ. ಇದು ಇಲ್ಲಿನ ಸಮಸ್ಯೆ. ನಗರ ಭಾಗದ ಬಹುತೇಕ ಪೋಷಕರಿಗೆ ಆನ್‍ಲೈನ್ ಶಿಕ್ಷಣ ಮಾಡಿರುವುದು ಸಂತಸ ತಂದಿದೆ. ಮಕ್ಕಳಿಗೆ ಶಿಕ್ಷಣ ಸಿಗುತ್ತದೆ ಅನ್ನುವುದಕ್ಕಿಂತ, ಮಕ್ಕಳು ಮನೆಯಲ್ಲಿ ನೀಡುತ್ತಿದ್ದ ಕಾಟದಿಂದ ಬೇಸತ್ತು ಪೋಷಕರು ಒಪ್ಪಿಕೊಂಡಿದ್ದಾರೆ. ಆದರೆ ಶಿಕ್ಷಣದಿಂದ ವಂಚಿತರಾಗುವ ಭಯದಲ್ಲಿ ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪೋಷಕರು ಇದ್ದಾರೆ. ಇದನ್ನೂ ಓದಿ: ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ಕಿವಿಯೊಲೆ ಮಾರಿದ ತಾಯಿ

    ಅಷ್ಟಕ್ಕೂ ಆನ್‍ಲೈನ್ ಶಿಕ್ಷಣಕ್ಕೆ ಪವರ್ ಹಾಗೂ ಟವರ್ ಅತೀ ಮುಖ್ಯವಾಗಿದೆ. ಆದರೆ, ಮಲೆನಾಡಿನಲ್ಲಿ ಪವರ್ ಹಾಗೂ ಟವರ್ ಎರಡೂ ಇಲ್ಲ. ವಿದ್ಯುತ್ ಸಮಸ್ಯೆಯಿಂದಾಗಿ, ವಿದ್ಯಾರ್ಥಿಗಳು ಹೇಗೆ ಆನ್‍ಲೈನ್ ಕ್ಲಾಸ್ ನೋಡಲು ಸಾಧ್ಯವಾಗುತ್ತದೆ ಎಂದು ಪೋಷಕರು ಪ್ರಶ್ನಿಸುವಂತಾಗಿದೆ. ಮಲೆನಾಡಿನ ಭಾಗದಲ್ಲಿ ಮೊಬೈಲ್ ಟವರ್ ಗಳ ಸಮಸ್ಯೆ ವಿಪರೀತವಿದೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್‍ಗಾಗಿ ದಟ್ಟಾರಣ್ಯದಲ್ಲಿ ಟೆಂಟ್ ಹಾಕಿ ಕುಳಿತ ವಿದ್ಯಾರ್ಥಿಗಳು

    ಇಲ್ಲಿ ಸಾಮಾನ್ಯವಾಗಿ ಫೋನ್ ನಲ್ಲಿ ಮಾತನಾಡಬೇಕಾದರೆ ಮನೆ ಮೇಲೆ ಹತ್ತಬೇಕು, ಮರ ಏರಬೇಕು ಇಲ್ಲವೇ ಸಮೀಪದ ಬೆಟ್ಟ ಹತ್ತುವ ಸ್ಥಿತಿ ಇದೆ. ಹೀಗಿರುವಾಗ ಶಿಕ್ಷಣದಿಂದ ವಂಚಿತರಾಗುವ ಭಯದಲ್ಲಿ ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂತಹ ಸ್ಥಿತಿಯಲ್ಲಿ ಮೊಬೈಲ್ ಇಂಟರ್ ನೆಟ್ ನೆಟ್‍ವರ್ಕ್ ದೊರೆಯುವುದು ಸಾಹಸವೇ ಸರಿ. ವಿದ್ಯಾಭ್ಯಾಸದ ಬಗ್ಗೆ ಅರಿವು ಇರುವುದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ ಅವರಿಗೆ ಮೊಬೈಲ್ ನೀಡುವ ಶಕ್ತಿ ಇರುವುದಿಲ್ಲ. ಅದಕ್ಕೆ ಪ್ರತಿ ತಿಂಗಳು ರೀಚಾರ್ಜ್ ಮಾಡಿಸಲು ಸಹ ಆಗುವುದಿಲ್ಲ. ಇಂತಹ ಸ್ಥಿತಿ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಇದೆ. ಅದರಲ್ಲೂ ಆನ್‍ಲೈನ್ ಕ್ಲಾಸ್ ಗಳು ಸಾಮಾನ್ಯ ತರಗತಿಗಿಂತ ಭಿನ್ನವಾಗಿರುತ್ತವೆ. ಸಾಮಾನ್ಯ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡಿದ ಮೇಲೆ ಅಲ್ಲಿಯೇ ಚರ್ಚೆ ನಡೆಸಬಹುದು. ಆನ್‍ಲೈನ್ ಕ್ಲಾಸ್ ನಲ್ಲಿ ಅವರು ಹೇಳಿದ್ದು, ಬೇಗ ಅರ್ಥವಾಗುವುದಿಲ್ಲ. ಪ್ರಶ್ನೆ ಕೇಳಲು ಸಹ ಆಗುವುದಿಲ್ಲ. ಇದರಿಂದ ಆನ್‍ಲೈನ್ ಕ್ಲಾಸ್ ಗಳನ್ನು ಮಲೆನಾಡಿನ ವಿದ್ಯಾರ್ಥಿಗಳು ಮತ್ತು ಪೋಷಕರು ಅಷ್ಟಾಗಿ ಇಷ್ಟಪಡುತ್ತಿಲ್ಲ.

    ಒಟ್ಟಾರೆ ಆನ್‍ಲೈನ್ ಶಿಕ್ಷಣ ಎಂಬುದು ಎಲ್ಲರಿಗೂ ಅಲ್ಲ ಎಂಬುದು ಕೆಲವೇ ದಿನಗಳಲ್ಲಿಯೇ ತಿಳಿದು ಬಂದಿದ್ದು, ಮಲೆನಾಡು ಸೇರಿದಂತೆ, ಅದೆಷ್ಟೋ ಗ್ರಾಮಗಳ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ