Tag: Online Class

  • ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ಕಿವಿಯೊಲೆಯನ್ನು ಮಾರಿದ ತಾಯಿ

    ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ಕಿವಿಯೊಲೆಯನ್ನು ಮಾರಿದ ತಾಯಿ

    ಬೆಳಗಾವಿ: ತನ್ನ ಮಗಳು ಎಸ್‍ಎಸ್‍ಎಲ್‍ಸಿ ಆನ್‍ಲೈನ್ ಶಿಕ್ಷಣಕ್ಕಾಗಿ ತಾಯಿಯೊಬ್ಬಳು ಕಿವಿಯೊಲೆ ಮಾರಿದ ಕಣ್ಣೀರಿನ ಕಥೆ ಬೆಳಗಾವಿಯಲ್ಲಿ ನಡೆದಿದೆ. ಮಹಾನಗರದ ಕ್ಲಬ್ ರಸ್ತೆಯಲ್ಲಿರುವ ತಗಡಿನ ಶೆಡ್‍ನಲ್ಲಿ ವಾಸವಿರುವ ದೇವದಾಸಿ ಜೋಗಮ್ಮ ಸರೋಜಿನಿ ಬೇವಿನಕಟ್ಟಿ ಮಕ್ಕಳಿಗಾಗಿ ಕಿವಿಯೊಲೆ ಮಾರಿ ಮೊಬೈಲ್ ತಂದುಕೊಟ್ಟಿದ್ದಾರೆ.

    ಜೋಗ ಬೇಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಈ ಜೋಗಮ್ಮನ ಕುಟುಂಬಕ್ಕೆ ಕೊರೊನಾ ಬರಸಿಡಿಲು ಬಡಿದಂತಾಗಿದೆ. ಕಳೆದ ಐದು ತಿಂಗಳಿಂದ ತಾಯಿ ಸರೋಜಾಗೆ ಕೆಲಸ ಕೂಡ ಇಲ್ಲ ಇತ್ತ ಇದ್ದೊಬ್ಬ ಮಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು, ಆತನ ಆರೈಕೆ ಕೂಡ ಸರೋಜಿನಿಯವರೇ ಮಾಡುತ್ತಿದ್ದಾರೆ. ಗಂಡ ಕೂಡ ಮೃತಪಟ್ಟಿದ್ದರಿಂದ ತಾನೊಬ್ಬಳೇ ದುಡಿದು ಮಕ್ಕಳನ್ನು ಸಾಕುತ್ತಿರುವ ಸರೋಜಿನಿ ಈಗ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.

    ಈ ಸಮಯದಲ್ಲಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಗಳು ರೇಣುಕಾಗೆ ಆನ್‍ಲೈನ್ ಕ್ಲಾಸ್ ಶುರುವಾಗಿದ್ದು, ಶಾಲೆಯ ಶಿಕ್ಷಕರು ಕರೆ ಮಾಡಿ ಮೊಬೈಲ್ ಅಥವಾ ಚಂದನ ಟಿವಿಯಲ್ಲಿ ಕ್ಲಾಸ್ ಕೇಳಲು ಹೇಳಿದ್ದಾರೆ. ಆದರೆ ಮನೆಯಲ್ಲಿ ಟಿವಿ ಮತ್ತು ಮೊಬೈಲ್ ಕೂಡ ಇಲ್ಲದನ್ನು ಶಿಕ್ಷಕರ ಮುಂದೆ ರೇಣುಕಾ ಹೇಳಿದ್ದು, ಕಡೆ ಪಕ್ಷ ಮೊಬೈಲ್ ಆದರೂ ಕೊಂಡುಕೊಂಡು ಅದರಲ್ಲಿ ಪಾಠ ಕೇಳುವಂತೆ ಶಿಕ್ಷಕರು ಹೇಳಿದ್ದಾರೆ. ಇದನ್ನು ರೇಣುಕಾ ತಾಯಿ ಸರೋಜಿನಿಗೆ ಹೇಳಿದ್ದಾಳೆ. ಆಗ ಅವರು ತನ್ನ ಚಿನ್ನದ ಕಿವಿ ಓಲೆಯನ್ನ ಹತ್ತು ಸಾವಿರ ರೂಪಾಯಿಗೆ ಮಾರಿ ಅದರಲ್ಲಿ ಮಗಳಿಗೆ ಫೋನ್ ತಂದುಕೊಟ್ಟಿದ್ದಾರೆ.

    ಮನೆ ಕೂಡ ಇಲ್ಲದೇ ತಗಡಿನ ಶೆಡ್‍ವೊಂದರಲ್ಲಿರುವ ಇವರು ಇದೀಗ ಮಳೆಯ ನೀರು ಕೂಡ ಒಳಗೆ ಬರುತ್ತಿದ್ದು ಬದುಕು ಸಾಗಿಸುವುದೇ ದುಸ್ತಾರವಾಗಿ ಬಿಟ್ಟಿದೆ. ಮಗಳು ಕೆಲಸ ಮಾಡುತ್ತೇನೆ ಅಂದರೂ ಅವಳನ್ನ ಕೆಲಸಕ್ಕೆ ಕಳುಹಿಸದೇ ಓದಿ ಅಧಿಕಾರಿ ಆಗುವಂತೆ ಹೇಳಿ ತನ್ನ ಚಿನ್ನದ ಕಿವಿ ಓಲೆ ಮಾರಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯ ತವರು ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಯಾವೊಬ್ಬ ಅಧಿಕಾರಿಗಳು ಕೂಡ ಇವರ ಸಹಾಯಕ್ಕೆ ಬಂದಿಲ್ಲ.

  • ಆನ್‍ಲೈನ್ ಕ್ಲಾಸ್ ಪ್ರಾಬ್ಲಂ- ಕುಗ್ರಾಮಗಳಿಗೆ ಸುರೇಶ್ ಕುಮಾರ್ ಭೇಟಿ

    ಆನ್‍ಲೈನ್ ಕ್ಲಾಸ್ ಪ್ರಾಬ್ಲಂ- ಕುಗ್ರಾಮಗಳಿಗೆ ಸುರೇಶ್ ಕುಮಾರ್ ಭೇಟಿ

    ಚಿಕ್ಕಮಗಳೂರು: ಕೊರೊನಾ ಆತಂಕದಿಂದ ಶಾಲೆಗಳು ಆರಂಭಗೊಳ್ಳದ ಹಿನ್ನೆಲೆಯಲ್ಲಿ ಆನ್‍ಲೈನ್ ತರಗತಿ ಆರಂಭಗೊಂಡಿವೆ. ಆದರೆ ಜಿಲ್ಲೆಯ ಮಲೆನಾಡು ಭಾಗ ಹಾಗೂ ಕುಗ್ರಾಮದಲ್ಲಿ ಆನ್‍ಲೈನ್ ಕ್ಲಾಸ್ ಅಸಾಧ್ಯವೇ ಸರಿ. ಈ ಹಿನ್ನೆಲೆ ಮಕ್ಕಳ ಸಮಸ್ಯೆ ಆಲಿಸಲು ಸಚಿವ ಸುರೇಶ್ ಕುಮಾರ್ ಇಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

    10ನೇ ತರಗತಿ ಓದುತ್ತಿರುವ ಮಕ್ಕಳ ಸಮಸ್ಯೆ ಆಲಿಸಲು ಸಚಿವ ಸುರೇಶ್ ಕುಮಾರ್ ಜಿಲ್ಲೆಯ ಕೊಪ್ಪ ತಾಲೂಕಿನ ಹೊರ್ಲೆ, ಮೆಣಸಿನ ಕೊಡಿಗೆ, ಕಿತ್ತಳೆಗೂಳಿ, ಅಮ್ಮಡ್ಲು ಹಾಗೂ ಹುಲುತಾಳು ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ಹೊರ್ಲೆ ಗ್ರಾಮದ 10ನೇ ತರಗತಿ ವಿದ್ಯಾರ್ಥಿ ಆದರ್ಶ್ ಆನ್‍ಲೈನ್ ಶಿಕ್ಷಣದ ಬಗ್ಗೆ ತಮಗಿರುವ ಸಮಸ್ಯೆಗಳನ್ನ ಸರ್ಕಾರಕ್ಕೆ ತಲುಪಿಸಲು ಯತ್ನಿಸಿದ್ದ. ಆತನ ನೋವಿನ ನುಡಿಯ ಆಡಿಯೋ ತುಣುಕುಗಳು ಸಚಿವರ ಗಮನಕ್ಕೆ ಬಂದಿತ್ತು.

    ಕೂಡಲೇ ಸಚಿವರು ಆತನ ಜೊತೆ ಮಾತನಾಡಲು ಯತ್ನಿಸಿದ್ದಾರೆ. ಆದರೆ ಕೊಪ್ಪ ನಗರದಿಂದ ಸುಮಾರು 60 ಕಿ.ಮೀ.ದೂರದ ಕುಗ್ರಾಮದಲ್ಲಿರುವ ಬಾಲಕ ಆದರ್ಶ್ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ಅಲ್ಲಿ ಕರೆಂಟ್ ಇಲ್ಲ. ಮೊಬೈಲ್ ನೆಟ್ವರ್ಕ್ ಕೂಡ ಇಲ್ಲ. ಫೋನ್ ಬಂದಾಗ ನೆಟ್‍ವರ್ಕ್ ಇರುವ ಜಾಗಕ್ಕೆ ಹೋಗಿ ಮಾತನಾಡಬೇಕು. ನೆಟ್‍ವರ್ಕ್ ಸಿಕ್ಕರೆ ಸಿಗಬಹುದು, ಇಲ್ಲವಾದರೆ ಇಲ್ಲ. ಕೂಡಲೇ ಸಚಿವರು ಬಿಇಓ ಜೊತೆ ಕೂಡ ಮಾತನಾಡಿದ್ದಾರೆ. ಹಾಗಾಗಿ ಸಚಿವರು ಇಂದು ಮಲೆನಾಡ ಕುಗ್ರಾಮಗಳಿಗೆ ಭೇಟಿ ನೀಡಿ, ಮಕ್ಕಳ ನೋವನ್ನ ಆಲಿಸಲು ಮುಂದಾಗಿದ್ದಾರೆ.

    10ನೇ ತರಗತಿ ವಿದ್ಯಾರ್ಥಿ ಆದರ್ಶ್‍ಗೆ ಇರುವಂತೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಸಾಕಷ್ಟು ಕುಗ್ರಾಮಗಳಲ್ಲಿ ನಾನಾ ರೀತಿಯ ಸಮಸ್ಯೆಗಳಿವೆ. ಈ ಭಾಗದಲ್ಲಿ ಆನ್‍ಲೈನ್ ಶಿಕ್ಷಣ ಅಸಾಧ್ಯವೇ ಸರಿ. ಎಷ್ಟೋ ಕುಗ್ರಾಮಗಳ ಜನ ಕೀ ಪ್ಯಾಡ್ ಮೊಬೈಲ್ ಇಟ್ಟುಕೊಂಡಿದ್ದಾರೆ. ಹಾಗಾಗಿ ಜಿಲ್ಲೆಗೆ ಸಚಿವರು ಬರುವುದರಿಂದ ಕುಗ್ರಾಮದ ಜನ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂದು ಆಶಾಭಾವನೆಯಲ್ಲಿದ್ದಾರೆ.

  • ಪುತ್ರಿಯ ಅನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿದ್ದು ಸುಳ್ಳು

    ಪುತ್ರಿಯ ಅನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿದ್ದು ಸುಳ್ಳು

    ಶಿಮ್ಲಾ: ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿರುವ ಸುದ್ದಿ ಸುಳ್ಳು ಎಂದು ಖಚಿತವಾಗಿದೆ. ಎರಡ್ಮೂರು ದಿನಗಳ ಹಿಂದೆ ರೈತ ಕುಟುಂಬದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಾಲಿವುಡ್ ನಟ ಸೋನು ಸೂದ್ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗಿದ್ದರು.

    ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ರೈತ ಕುಲದೀಪ್ ಕುಮಾರ್ ತಮ್ಮ ಹಸುವನ್ನು 6 ಸಾವಿರ ರೂ.ಗೆ ಮಾರಾಟ ಮಾಡಿ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದಾರೆ ಎಂದ ಸುದ್ದಿಗಳು ಪ್ರಕಟವಾಗಿತ್ತು. ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಕಾಂಗ್ರಾ ಜಿಲ್ಲಾಧಿಕಾರಿಗಳು ಪರಿಶೀಲನೆಗೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ನೈಜ ಚಿತ್ರಣ ಬಯಲಾಗಿದೆ. ಇದನ್ನೂ ಓದಿ: ಅನ್‍ಲೈನ್ ಶಿಕ್ಷಣಕ್ಕೆ ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ- ತರಗತಿಗಳು ವಿದ್ಯಾರ್ಥಿಗಳಿಗೆ ಮರಿಚೀಕೆ

    ರೈತ ಕುಲದೀಪ್ ಕೊಟ್ಟಿಗೆಯಲ್ಲಿ ಜಾಗವಿಲ್ಲದ ಕಾರಣ ತನ್ನ ಹಸುವನ್ನು ಜುಲೈ 10ರಂದು ಪರಿಚಯಸ್ಥರಿಗೆ ಮಾರಿದ್ದನು. ಕುಲದೀಪ್ ಬಳಿ ಏಳು ಹಸುಗಳಿರೋದರಿಂದ ಕೊಟ್ಟಿಗೆಯಲ್ಲಿ ಜಾಗವಿರಲಿಲ್ಲ. ಇನ್ನು ಮೂರು ತಿಂಗಳ ಹಿಂದೆಯೇ ಕುಲದೀಪ್ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದನು. ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿದ್ದರೂ ತನ್ನ ಮಕ್ಕಳು ದುಬಾರಿ ಶುಲ್ಕದ ಖಾಸಗಿ ಶಾಲೆಗಳಿಗೆ ಸೇರಿಸಿದ್ದನು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

  • ಅನ್‍ಲೈನ್ ಶಿಕ್ಷಣಕ್ಕೆ ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ- ತರಗತಿಗಳು ವಿದ್ಯಾರ್ಥಿಗಳಿಗೆ ಮರಿಚೀಕೆ

    ಮಡಿಕೇರಿ: ಕೊರೊನಾ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಶಿಕ್ಷಣ ಕ್ಷೇತ್ರದ ಮೇಲೆ ತುಸು ಹೆಚ್ಚಾಗೆ ಬೀರಿದ್ದು, ಶಾಲೆಗೂ ಹೋಗಲಾಗದೆ ಮನೆಯಲ್ಲಿಯೂ ಸೂಕ್ತ ಪಾಠ ಕೇಳದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಆನ್‍ಲೈನ್ ತರಗತಿಗಳಿಗೆ ಸಹ ನೆಟ್‍ವರ್ಕ್ ಸಮಸ್ಯೆ ಕಾಡುತ್ತಿದೆ.

    ಶಾಲಾ- ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಕಾಲಮಿತಿಯಲ್ಲಿ ಪ್ರಾರಂಭವಾಗದೆ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಚಿಂತಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸುವಂತೆ ಹೇಳಿದೆ. ಆದರೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಆನ್‍ಲೈನ್ ತರಗತಿಗಳಿಗೆ ವಿಘ್ನಗಳು ಎದುರಾಗಿವೆ.

    ಸರ್ಕಾರ ಮನೆಯಿಂದಲೇ ವಿದ್ಯಾರ್ಥಿಗಳಿಗೆ ಯೂಟ್ಯೂಬ್, ವಾಟ್ಸಪ್ ಹಾಗೂ ಜೂಮ್ ಆ್ಯಪ್ ಹೀಗೆ ತಂತ್ರಜ್ಞಾನ ಬಳಸಿಕೊಂಡು ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸುವಂತೆ ಹೇಳಿದೆ. ಆದರೆ ಕೊಡಗು ಭೌಗೋಳಿಕವಾಗಿ ಬೆಟ್ಟ, ಗುಡ್ಡಗಳಿಂದ ಕೂಡಿರುವುದರಿಂದ ನೆಟ್‍ವರ್ಕ್ ಸಮಸ್ಯೆ, ಸ್ಮಾರ್ಟ್‍ಪೋನ್‍ಗಳ ಕೊರತೆ ಮತ್ತು ಸಾಕಷ್ಟು ಭಾಗಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯೇ ಇಲ್ಲವಾಗಿದೆ. ಜಿಲ್ಲೆಯ ಹಲವೆಡೆ ನೆಟ್‍ವರ್ಕ್ ಟವರ್‍ಗಳು ಕೆಟ್ಟುನಿಂತಿದ್ದು, ಹಲವರಿಗೆ ಆನ್‍ಲೈನ್ ತರಗತಿಗಳು ಮರಿಚೀಕೆಯಾಗಿವೆ.

    ಶಿಕ್ಷಕರು ಆನ್‍ಲೈನ್ ತರಗತಿಗಳಿಗೆ ಸೇರಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ನಮ್ಮ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿದೆ. ನಗರ ವ್ಯಾಪ್ತಿಯಿಂದ ಸ್ವಲ್ಪ ದೂರದಲ್ಲಿರುವ ನಮಗೆ ಸರಿಯಾಗಿ ವೇಗದ ನೆಟ್‍ವರ್ಕ್ ಸಿಗುತ್ತಿಲ್ಲ. ಅವರು ಕಳುಹಿಸುವ ಪಾಠಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ನಿರ್ದಿಷ್ಟವಾದ ಸ್ಥಳದಲ್ಲಿ ನಿಲ್ಲಬೇಕಿದೆ. ಇದರಿಂದ ಮಕ್ಕಳಿಗೆ ತುಂಬಾ ಕಷ್ಟವಾಗುತ್ತಿದೆ. ನಗರ ವಾಸಿಗಳಿಗೆ ಇಷ್ಟೆಲ್ಲ ಸಮಸ್ಯೆಗಳಿವೆ.

    ಹೀಗಿರುವಾಗ ಹಳ್ಳಿಯಲ್ಲಿ ಓದುತ್ತಿರುವವರಿಗೆ ಆನ್‍ಲೈನ್ ತರಗತಿಗಳ ಮೂಲಕ ಕಲಿಸಲು ಸಾಧ್ಯವೇ, ಕೂಲಿ ಮಾಡಿಕೊಂಡು ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಕೂಲಿ ಕಾರ್ಮಿಕರ ಮಕ್ಕಳಿಗೆ ಪೋಷಕರು ದುಬಾರಿ ಬೆಲೆಯ ಸ್ಮಾರ್ಟ್‍ಪೋನ್‍ಗಳನ್ನು ಕೊಡಿಸಲು ಸಾಧ್ಯವೇ, ಸೀಮೆ ಎಣ್ಣೆ ದೀಪ ಹಚ್ಚಿಕೊಳ್ಳುತ್ತಿರುವ ಕುಟುಂಬಗಳು ಹೇಗೆ ಆನ್‍ಲೈನ್ ಪಾಠಗಳನ್ನು ಕೇಳುತ್ತಾರೆ ಎಂಬುದು ಪೋಷಕರ ಅಳಲು.

  • ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ವಾಪಸ್ ಕೊಡಿಸುವೆ: ಸೋನು ಸೂದ್

    ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ವಾಪಸ್ ಕೊಡಿಸುವೆ: ಸೋನು ಸೂದ್

    ಶಿಮ್ಲಾ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ತಾನು ಸಾಕಿದ ಹಸುವನ್ನೇ ಮಾರಿ ಆನ್‍ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಕೊಡಿಸಿದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಸದಾ ಮಾನವೀಯತೆಯ ಮೂಲಕ ರಿಯಲ್ ಲೈಫ್‍ನಲ್ಲಿ ಹೀರೋ ಆಗಿರೋ ಬಾಲಿವುಡ್ ನಟ ಸೋನು ಸೂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಹೌದು. ಹಸು ಮಾರಿದ ತಂದೆಯ ಸುದ್ದಿಗೆ ಟ್ವೀಟ್ ಮಾಡಿರುವ ಸೋನು ಸೂದ್, ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ಮಕ್ಕಳ ತಂದೆಗೆ ವಾಪಸ್ ಕೊಡಿಸುತ್ತೇನೆ. ಸದ್ಯ ನಂಗೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಯಾರಾದರೂ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ನಟ ಈ ರೀತಿ ಮನವಿ ಮಾಡಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೊದಲು ಅಂದರೆ ಲಾಕ್‍ಡೌನ್ ಸಮಯದಲ್ಲಿ ಹಲವಾರು ಪ್ರವಾಸಿ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಕಾರ್ಯ ಮಾಡಿದ್ದರು. ಅಲ್ಲದೆ 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದರು. ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್ ಶೀಲ್ಡ್ ನೀಡುವ ಮೂಲಕ ಅನೇಕ ಮಾನವೀಯ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ಇದೀಗ ಹಸು ವಾಪಸ್ ಮಾಡುತ್ತೇನೆ ಎಂದು ಬಡ ಕುಟುಂಬದ ಬೆನ್ನಿಗೆ ನಿಂತಿರುವ ನಟನ ಪೋಸ್ಟ್ ಗೆ ಹಲವಾರು ಕಮೆಂಟ್ ಗಳು ಬಂದಿವೆ. ಒಬ್ಬ ನಟ ಏಕಾಂಗಿಯಾಗಿ ನಮ್ಮ ದೇಶದ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಅಂತೆಯೇ ದೇಶದಲ್ಲಿರುವ ಎಲ್ಲಾ ರಾಜಕೀಯ ವ್ಯಕ್ತಿಗಳಿಂದ ಎಷ್ಟು ಇಂತಹ ಮಾನವೀಯ ಕೆಲಸಗಳು ಆಗಬಹುದು ಎಂದು ನೀವೇ ಊಹಿಸಿಕೊಳ್ಳಿ. ಸೋನು ಸೂದ್ ಅವರು ಮಾಡುತ್ತಿರುವ ಕೆಲಸಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಇಷ್ಟಪಡುತ್ತೇನೆ. ದೇವರು ನಿಮಗೆ ಹೆಚ್ಚಿನ ಆರೋಗ್ಯ ಹಾಗೂ ಸಂಪತ್ತನ್ನು ಕರುಣಿಸಲಿ. ನಿಮ್ಮಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳು ಆಗಲಿ. ಜೈ ಹಿಂದ್ ಸರ್ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಈ ಕಾರಣಕ್ಕಾಗಿಯೇ ನಾನು ಈ ವ್ಯಕ್ತಿಯನ್ನು ತುಂಬಾ ಇಷ್ಟಪಡುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

    ಏನಿದು ಘಟನೆ:
    ಕೋವಿಡ್ 19 ಲಾಕ್‍ಡೌನ್ ಪರಿಣಾಮ ಶಾಲೆಯ ಮಕ್ಕಳಿಗೆ ಆನ್‍ಕ್ಲಾಸ್ ಆರಂಭಿಸಲಾಗುತ್ತಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಕಡು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಮಕ್ಕಳು ಇತರರಂತೆ ಓದಬೇಕು ಎಂದು ತಾನು ಸಾಕಿದ್ದ ಹಸುವನ್ನೇ ಮಾರಿ 6 ಸಾವಿರ ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಕುಲ್ದೀಪ್, ನನ್ನ ಮಕ್ಕಳು ಆನ್‍ಲೈನ್ ತರಗತಿಗೆ ಹಾಜರಾಗಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಸಾಕಿದ್ದ ಹಸುವನ್ನು ಮಾರಲು ನಿರ್ಧರಿಸಿದೆ. ಅಲ್ಲದೆ 6 ಸಾವಿರ ರೂಪಾಯಿಗೆ ಹಸುವನ್ನು ಮಾರಿಬಿಟ್ಟೆ ಎಂದು ಕುಮಾರ್ ಗದ್ಗದಿತರಾಗಿದ್ದರು. ಇದನ್ನೂ ಓದಿ: ‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    – ಬಿಜೆಪಿ ಆಡಳಿತವಿರೋ ರಾಜ್ಯದಲ್ಲೇ ಘಟನೆ

    ಶಿಮ್ಲಾ: ಕೊರೊನಾ ವೈರಸ್ ಭೀತಿಯಿಂದ ಮಕ್ಕಳಿಗೆ ಶಾಲೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಶಾಲೆಯ ಶಿಕ್ಷಕರು ಆನ್‍ಲೈನ್ ತರಗತಿಗಳನ್ನು ಆರಂಭಿಸಿದ್ದಾರೆ. ಈ ಆನ್‍ಲೈನ್ ಕ್ಲಾಸಿಗೆ ಮೊಬೈಲ್ ಬಹುಮುಖ್ಯವಾಗಿದೆ. ಹೀಗಾಗಿ ಬಡ ತಂದೆಯೊಬ್ಬ ತನ್ನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಹಸುವನ್ನೇ ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದಾರೆ. ಈ ಮೂಲಕ ತನ್ನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ.

    ಹೌದು. ಈ ಘಟನೆ ನಡೆದಿರುವುದು ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ. ಕೋವಿಡ್ 19 ಲಾಕ್‍ಡೌನ್ ಪರಿಣಾಮ ಶಾಲೆಯ ಮಕ್ಕಳಿಗೆ ಆನ್‍ಕ್ಲಾಸ್ ಆರಂಭಿಸಿದ್ದಾರೆ. ಆದರೆ ಕಡು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಮಕ್ಕಳು ಇತರರಂತೆ ಓದಬೇಕು ಎಂದು ತಾನು ಸಾಕಿದ್ದ ಹಸುವನ್ನೇ ಮಾರಿ 6 ಸಾವಿರ ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾರೆ.

    ಹಸುವನ್ನು ಪುಣ್ಯಕೋಟಿ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ತಾಯಿಯಂತೆ ಹಸುವನ್ನು ಪೂಜಿಸಲಾಗುತ್ತಿದೆ. ಈ ಮಧ್ಯೆ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಸುವನ್ನೇ ಮಾರಿರುವುದು ನಿಜಕ್ಕೂ ಬೇಸರದ ಸಂಗತಿ. ಪರಿಶಿಷ್ಠ ಜಾತಿಗೆ ಸೇರಿರುವ ಕುಲ್ದೀಪ್, ಕಾಂಗ್ರಾ ಜಿಲ್ಲೆಯ ತಹಸಿಲ್ ನ ಗುಮ್ಮರ್ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಮಗಳು ಅನು ಹಾಗೂ ಮಗ ವಾನ್ಶ್ ಸರ್ಕಾರಿ ಶಾಲೆಯಲ್ಲಿ 4 ಮತ್ತು 2ನೇ ತರಗತಿಯಲ್ಲಿ ಓದುತ್ತಿದ್ದಾರೆ.

    ಕೊರೊನಾ ಎಂಬ ಮಹಾಮಾರಿ ವೈರಸ್ ಭೀತಿಯಿಂದ ರಾಜ್ಯದಲ್ಲಿ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಗಳನ್ನು ಆರಂಭಿಸಲಾಯಿತು. ಆದರೆ ಕುಲ್ದೀಪ್ ಮಕ್ಕಳಿಗೆ ತರಗತಿಗೆ ಹಾಜರಾಗಲು ಮೊಬೈಲ್ ಫೋನ್ ಹಾಗೂ ನೆಟ್ ಕನೆಕ್ಷನ್ ಇರಲಿಲ್ಲ. ಇದರಿಂದ ಬೇಸರಗೊಂಡು ತನ್ನ ಮಕ್ಕಳ ಓದು ಅರ್ಧಕ್ಕೆ ನಿಲ್ಲಬಾರದೆಂದು ಮೊಬೈಲ್ ಖರೀದಿ ಮಾಡಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ.

    ನನ್ನ ಮಕ್ಕಳು ಆನ್‍ಲೈನ್ ತರಗತಿಗೆ ಹಾಜರಾಗಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಸಾಕಿದ್ದ ಹಸುವನ್ನು ಮಾರಲು ನಿರ್ಧರಿಸಿದೆ. ಅಲ್ಲದೆ 6 ಸಾವಿರ ರೂಪಾಯಿಗೆ ಹಸುವನ್ನು ಮಾರಿಬಿಟ್ಟೆ ಎಂದು ಕುಮಾರ್ ಗದ್ಗದಿತರಾದರು. ಕುಮಾರ್ ಹಾಲು ಮಾರಾಟ ಮಾಡುತ್ತಿದ್ದರೆ, ಪತ್ನಿ ಕೂಲಿ ಕೆಸ ಮಾಡುತ್ತಿದ್ದರು. ಈ ಮೂಲಕ ಇಬ್ಬರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದರು.

    ಹಸು ಮಾರುವ ಮೊದಲು ಕುಮಾರ್ ಕುಟುಂಬ, ಬ್ಯಾಂಕ್ ಬಾಗಿಲು ತಟ್ಟಿದೆ. ಅಲ್ಲದೆ ಖಾಸಗಿ ಸಾಲಗಾರರ ಮೊರೆಯೂ ಹೋಗಿದ್ದಾರೆ. ಆದರೆ ಎಲ್ಲಿಯೂ ಕುಮಾರ್ ಗೆ ಸಾಲ ದೊರಕಿರಲಿಲ್ಲ. ಇತ್ತ ಅದಾಗಲೇ ಆನ್‍ಕ್ಲಾಸ್ ಆರಂಭಿಸಿರುವ ಶಿಕ್ಷಕರು, ನಿಮ್ಮ ಮಕ್ಕಳ ಓದು ಮುಂದುವರಿಯಬೇಕಾದರೆ ಅವರಿಗೆ ಮೊಬೈಲ್ ಕೊಡಿಸಿ ತರಗತಿಗೆ ಹಾಜರುಪಡಿಸಿ ಎಂದು ಒತ್ತಡ ಹಾಕಲು ಆರಂಭಿಸಿದ್ದಾರೆ. ಪರಿಣಾಮ ಬೇರೆ ದಾರಿ ಇಲ್ಲದೆ ಹಸುವನ್ನು ಮಾರಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಕುಮಾರ್ ಬೇಸರ ವ್ಯಕ್ತಪಡಿಸಿದರು.

    ಸದ್ಯ ಅವರಲ್ಲಿ ಉಳಿದ ಇನ್ನೊಂದು ಹಸುವೇ ಜೀವನಾಧಾರವಾಗಿದೆ. ಇಷ್ಟು ಮಾತ್ರವಲ್ಲದೆ ಇದೀಗ ಕುಟುಂಬ ಮತ್ತೊಂದು ಕಷ್ಟವನ್ನು ಅನುಭವಿಸುತ್ತಿದೆ. ಅದೇನೆಂದರೆ, ಒಂದೇ ಫೋನಿನಲ್ಲಿ ಇಬ್ಬರು ಮಕ್ಕಳು ಏಕಕಾಲದಲ್ಲಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ತರಗತಿಗೆ ಹಾಜರಾಗಲು ಇಬ್ಬರು ಮಕ್ಕಳು ಬೆಳಗೆದ್ದು ಜಗಳವಾಡುತ್ತಿರುವುದನ್ನು ನೋಡಲು ಕುಮಾರ್ ಕೈಯಲ್ಲಿ ಆಗುತ್ತಿಲ್ಲ.

    ಬಡವರಿಗೆ ನೀಡುವ ಸೌಲಭ್ಯಗಳನ್ನು ಪಡೆಯುವಲ್ಲಿ ಕುಮಾರ್ ವಂಚಿತರಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯುವ ಅರ್ಹತೆ ಕುಮಾರ್ ಕುಟುಂಬಕ್ಕಿದೆ. ಕುಮಾರ್ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಧವಾಲಾಗೆ ತಿಳಿಸಿದಾಗ, ಸರ್ಕಾರದಿಂದ ಕುಮಾರ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನಿಡಿದ್ದಾರೆ.

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಮಂಗಳೂರು: ಸರ್ಕಾರ ಆನ್‍ಲೈನ್ ಕ್ಲಾಸ್ ಮಾಡಲು ತಯಾರಿ ನಡೆಸುತ್ತಿದ್ದರೆ ಇತ್ತ ಆನ್‍ಲೈನ್ ಕ್ಲಾಸ್‍ಗೆ ಪೋಷಕರು ಸಾಲಕ್ಕಾಗಿ ಬ್ಯಾಂಕಿನ ಮೊರೆ ಹೋಗಿದ್ದಾರೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸಹಕಾರಿ ಬ್ಯಾಂಕುಗಳಿಗೆ ಪೋಷಕರು ಸಾಲಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆನ್‍ಲೈನ್ ಕ್ಲಾಸಿಗಾಗಿ ಮೊಬೈಲ್, ಲ್ಯಾಪ್ ಟಾಪ್ ಹಾಗೂ ಟಿವಿ ಖರೀದಿಗಾಗಿ ಅನ್ನೋ ಮಾಹಿತಿ ಹೊರ ಬಿದ್ದಿದೆ.

    ಗ್ರಾಮೀಣ ಪ್ರದೇಶದ ಹೆಚ್ಚಿನ ಜನರಲ್ಲಿ ಆನ್‍ಲೈನ್ ಕ್ಲಾಸ್ ಗಾಗಿ ಬೇಕಾದ ಆಧುನಿಕ ತಂತ್ರಜ್ಞಾನ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಟಿವಿ ಇಲ್ಲ. ಆದರೆ ಆನ್‍ಲೈನ್ ಕ್ಲಾಸ್‍ಗೆ ಇವೆಲ್ಲದರ ಅಗತ್ಯ ಮಕ್ಕಳಿಗೆ ಇದೆ. ಹೀಗಾಗಿ ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ಹೆಚ್ಚಿನ ಬಡ್ಡಿಗೆ ವೈಯಕ್ತಿಕ ಸಾಲ ಪಡೆಯಲು ಪೋಷಕರು ಮುಂದಾಗಿದ್ದಾರೆ.

    ಈ ವಿಚಾರನ್ನು ಪೋಷಕರು ಬ್ಯಾಂಕಿನಲ್ಲಿ ಹೇಳಿಕೊಂಡು ಸಾಲ ಕೇಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಇಂತಹ ಅಗತ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಚಿತ್ತರಂಜನ್ ಬೋಳಾರ್ ಒತ್ತಾಯಿಸಿದ್ದಾರೆ.

  • ಹೈಕೋರ್ಟ್ ನಿರ್ದೇಶನ-ಆನ್‍ಲೈನ್ ಕ್ಲಾಸ್‍ಗಳಿಗೆ ರಾಜ್ಯ ಸರ್ಕಾರ ಅನುಮತಿ

    ಹೈಕೋರ್ಟ್ ನಿರ್ದೇಶನ-ಆನ್‍ಲೈನ್ ಕ್ಲಾಸ್‍ಗಳಿಗೆ ರಾಜ್ಯ ಸರ್ಕಾರ ಅನುಮತಿ

    ಬೆಂಗಳೂರು: ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಮತ್ತೆ ಆನ್‍ಲೈನ್ ಕ್ಲಾಸ್‍ಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇನ್ಮುಂದೆ ಎಲ್‍ಕೆಜಿಯಿಂದ ಹಿಡಿದು ಎಸ್‍ಎಸ್‍ಎಲ್‍ಸಿವರೆಗೆ ಆನ್‍ಲೈನ್ ತರಗತಿಗಳನ್ನು ಮಾಡಬಹುದಾಗಿದೆ. ಆದರೆ ಕೆಲವು ನಿಯಮಗಳನ್ನ ಈ ವೇಳೆ ಪಾಲಿಸಬೇಕಿದೆ.

    ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ವರದಿ ಬರುವವರೆಗೂ ಈ ನಿಯಮಗಳ ಅನುಸಾರವೇ ಆನ್‍ಲೈನ್ ತರಗತಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಬೇಕಾಗುತ್ತದೆ. ಆನ್‍ಲೈನ್ ತರಗತಿಗೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವಂತೆ ಇಲ್ಲ. ಇದಕ್ಕೆ ತಗುಲುವ ವೆಚ್ಚವನ್ನು ನಿಯಮಿತವಾಗಿ ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕು ಎಂದು ಸರ್ಕಾರ ಅಧಿಕೃತ ಆದೇಶ ನೀಡಿದೆ.

    ಆನ್‍ಲೈನ್ ಕ್ಲಾಸ್‍ಗೆ ನಿಯಮಗಳು
    * ಪೂರ್ವ ಪ್ರಾಥಮಿಕ- 30 ನಿಮಿಷಗಳಿಗೆ ಮೀರದಂತೆ ವಾರಕ್ಕೆ ಒಂದು ದಿನ ಆನ್‍ಲೈನ್ ಕ್ಲಾಸ್ (ಪಾಲಕರು ಜೊತೆಯಲ್ಲಿ ಇರುವುದು ಕಡ್ಡಾಯ)
    * 1-5 ನೇ ತರಗತಿ- 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ದಿನ ಬಿಟ್ಟು ದಿನ ಆನ್‍ಲೈನ್ ಕ್ಲಾಸ್
    * 6-8 ನೇ ತರಗತಿ – 30-40 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್‍ಲೈನ್ ಶಿಕ್ಷಣ
    * 9-10 ನೇ ತರಗತಿ – 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್‍ಲೈನ್ ಕ್ಲಾಸ್

  • ಆನ್‍ಲೈನ್ ಕ್ಲಾಸ್ ಮಿಸ್ – ವಿದ್ಯಾರ್ಥಿನಿ ಆತ್ಮಹತ್ಯೆ

    ಆನ್‍ಲೈನ್ ಕ್ಲಾಸ್ ಮಿಸ್ – ವಿದ್ಯಾರ್ಥಿನಿ ಆತ್ಮಹತ್ಯೆ

    ಕೋಲ್ಕತ್ತಾ: ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಇಲ್ಲ, ಹೀಗಾಗಿ ಆನ್‍ಲೈನ್ ಕ್ಲಾಸ್ ಅಟೆಂಡ್ ಮಾಡಲು ಆಗುತ್ತಿಲ್ಲ ಎಂದು ಮನನೊಂದು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯ ನಿಸ್ಚಿಂಡಾದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡು ವಿದ್ಯಾರ್ಥಿನಿಯನ್ನು ಶಬಿನಿ ಕುಮಾರಿ ಸೌ ಎಂದು ಗುರುತಿಸಲಾಗಿದೆ. ಶಬಿನಿ ಬ್ಯಾಲಿ ಪ್ರದೇಶದಲ್ಲಿರುವ ಇಂಗ್ಲಿಷ್ ಮಾಧ್ಯಮದ ಶಾಲೆಯೊಂದರಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದಳು. ಈಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‍ನೋಟ್ ಅನ್ನು ಬರೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಶಬಿನಿ ತಂದೆ ಸಂತೂ, ಶಬಿನಿ ನನ್ನ ಚಿಕ್ಕಮಗಳು, ಲಾಕ್‍ಡೌನ್ ವೇಳೆ ನಾನು, ನನ್ನ ಪತ್ನಿ ಮತ್ತು ಹಿರಿಯ ಮಗ ನಮ್ಮ ಹೋಮ್‍ಟೌನ್‍ಗೆ ಹೋಗಿದ್ದವು. ಈ ವೇಳೆ ಶಬಿನಿ ಮತ್ತು ಆಕೆಯ ಮತ್ತೋರ್ವ ಅಣ್ಣ ಮನೆಯಲ್ಲೇ ಇದ್ದರು. ಅವರ ಬಳಿ ಮೊಬೈಲ್ ಇತ್ತು. ಆದರೆ ಅದನ್ನು ಬೀಳಿಸಿ ಒಡೆದು ಹಾಕಿದ್ದಾರೆ. ಲಾಕ್‍ಡೌನ್ ಅಲ್ಲಿ ಮೊಬೈಲ್ ಅಂಗಡಿ ಓಪನ್ ಇಲ್ಲದ ಕಾರಣ ಸರಿಮಾಡಿಸಲು ಆಗಿಲ್ಲ ಎಂದು ಹೇಳಿದ್ದಾರೆ.

    ಆನ್‍ಲೈನ್ ಕ್ಲಾಸ್ ಅಟೆಂಡ್ ಮಾಡದೆ ಇದ್ದರೆ, ನಾನು ಫೈಲ್ ಆಗುತ್ತೇನೆ ಎಂದು ಶಬಿನಿ ಭಯಪಟ್ಟಿದ್ದಾಳೆ. ಆಕೆ ಖಿನ್ನತೆಗೆ ಒಳಗಾಗಿ ನನಗೆ ಕರೆ ಮಾಡಿ ಮಾತನಾಡಿದಳು. ಆಗ ನಾನು ಮನೆಗೆ ಬಂದು ಹೊಸ ಫೋನ್ ತರುವುದಾಗಿ ಅಲ್ಲಿಯವರೆಗೂ ಸ್ನೇಹಿತರ ಬಳಿ ನೋಟ್ಸ್ ಪಡೆದು ಓದು ಎಂದು ಹೇಳಿದ್ದೆ. ಆದರೆ ಗುರುವಾರ ಸಂಜೆ ಅವರ ಅಣ್ಣ ಕ್ರಿಕೆಟ್ ಅಭ್ಯಾಸಕ್ಕೆ ಹೋದಾಗ ಶಬಿನಿ ನೇಣು ಹಾಕಿಕೊಂಡಿದ್ದಾಳೆ ಎಂದು ಶಬಿನಿ ತಂದೆ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆಕೆಯ ಅಣ್ಣ ಹೊರಗೆ ಹೋದಾಗ, ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವರ ಅಣ್ಣ ಬಂದು ಬಾಗಿಲು ಬಡೆದಾಗ ತೆಗೆದಿಲ್ಲ. ಆಗ ಆಕೆಯ ಅಣ್ಣ ಕಿಟಿಕಿಯಿಂದ ಒಳ ಹೋಗಿ ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

  • ಮಾಧುಸ್ವಾಮಿ ಮತ್ತೆ ಎಡವಟ್ಟು – 6, 7ನೇ ತರಗತಿಗೆ ಆನ್‌ಲೈನ್‌ ಶಿಕ್ಷಣ ಇದೆ

    ಮಾಧುಸ್ವಾಮಿ ಮತ್ತೆ ಎಡವಟ್ಟು – 6, 7ನೇ ತರಗತಿಗೆ ಆನ್‌ಲೈನ್‌ ಶಿಕ್ಷಣ ಇದೆ

    ಬೆಂಗಳೂರು: ಸುದ್ದಿಗೋಷ್ಠಿ ವೇಳೆ ಮಾಧುಸ್ವಾಮಿ ಮತ್ತೆ ಎಡವಟ್ಟು ಮಾಡಿಕೊಂಡಿದ್ದು, ಈಗ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ ನೀಡಿ 6 ಮತ್ತು 7ನೇ ತರಗತಿಗೆ ಆನ್‌ಲೈನ್‌ ಶಿಕ್ಷಣ ರದ್ದು ಸಂಬಂಧ ಸರ್ಕಾರ ನಿರ್ಧಾರ ಪ್ರಕಟಿಸಿಲ್ಲ ಎಂದು ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಸುರೇಶ್‌ ಕುಮಾರ್‌, ಕರ್ನಾಟಕ ಸರ್ಕಾರ ಎಲ್‌ಕೆಜಿ, ಯುಕೆಜಿ, 1 ರಿಂದ 5ನೇ ತರಗತಿಯವರೆಗಿನ ಆನ್‌ಲೈನ್‌ ಶಿಕ್ಷಣವನ್ನು ರದ್ಧು ಮಾಡಿದೆ. 6 ಮತ್ತು 7ನೇ ತರಗತಿಯವರೆಗಿನ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡಬೇಕು ಎಂದು ಕೆಲ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸರ್ಕಾರ ರದ್ದು ಪಡಿಸುವ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಮಾಧುಸ್ವಾಮಿ ಹೇಳಿದ್ದು ಏನು?
    ಇಂದು ಕ್ಯಾಬಿನೆಟ್‌ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಸಂಪುಟದಲ್ಲಿ ಆನ್‌ಲೈನ್‌ ತರಗತಿಯ ಬಗ್ಗೆ ಚರ್ಚೆ ನಡೆಯಿತು. 7ನೇ ತರಗತಿಯವರೆಗಿನ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡುವಂತೆ ಸಚಿವರು ಒತ್ತಾಯಿಸಿದರು. ಹೀಗಾಗಿ ಎಲ್ಲ ಮಾದರಿಯ ಪಠ್ಯ ಬೋಧಿಸುತ್ತಿರುವ ಶಾಲೆಗಳಲ್ಲಿ ನಡೆಯುತ್ತಿರುವ 7ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಸಚಿವ ಮಾಧುಸ್ವಾಮಿ ಎಡವಟ್ಟು, ಸರ್ಕಾರಕ್ಕೆ ಇಕ್ಕಟ್ಟು- ಸಿಎಂ ಸ್ಪಷ್ಟನೆ

    ಸಾಕಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನಾನುಕೂಲವಾಗುವ ಕಾರಣಕ್ಕೆ 6 ಮತ್ತು 7 ತರಗತಿಗಳಿಗೆ ಆನ್ ಲೈನ್ ಶಿಕ್ಷಣ ಬೇಡ ಎಂದು ಸಂಪುಟ ಒಮ್ಮತದ ತೀರ್ಮಾನ ಮಾಡಿತು. ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 8ನೇ ತರಗತಿ ಹಾಗೂ 9ನೇ ತರಗತಿ ಆನ್ ಲೈನ್ ಕ್ಲಾಸ್ ನಡೆಯುತ್ತಿದೆ. ಇದನ್ನೂ ನಿಲ್ಲಿಸಬೇಕೇ ಅಥವಾ ಬೇಡವೇ ಎನ್ನುವುದರ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದರು.

    ‘ಪಬ್ಲಿಕ್ ಟಿವಿ’ ಕಳೆದ ಒಂದು ವಾರದಿಂದ ಆಲ್‍ಲೈನ್ ಕ್ಲಾಸ್ ಸಮಸ್ಯೆಯ ಕುರಿತು ವಿಸ್ತೃತ ವರದಿ ಮಾಡಿತ್ತು. ಪೋಷಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆನ್‌ಲೈನ್‌ ಕ್ಲಾಸ್‌ ವಿರುದ್ಧ ಅಭಿಯಾನ ಆರಂಭಿಸಿತ್ತು.

    ಬುಧವಾರ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಮಗ್ರ ಶಿಕ್ಷಣ ಇಲಾಖೆ ನಿರ್ದೇಶಕ ರಿಜು, ಶಿಕ್ಷಣ ತಜ್ಞರು, ಚಿಂತಕ ಗುರುರಾಜ ಕರ್ಜಗಿ, ಶಿಕ್ಷಣ ತಜ್ಞರು ನಿರಂಜನ ಆರಾಧ್ಯ, ನಿಮ್ಹಾನ್ಸ್ ತಜ್ಞ ವೈದ್ಯರು ಹಾಗೂ ಖಾಸಗಿ ಶಾಲೆಗಳ ಸಂಘಟನೆ ಒಕ್ಕೂಟ (ಕ್ಯಾಮ್ಸ್) ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಭಾಗವಹಿಸಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ 1 ರಿಂದ 5ನೇ ತರಗತಿಯವರೆಗಿನ ಮಕ್ಕಳ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು.