Tag: Online Class

  • ಆನ್‍ಲೈನ್ ತರಗತಿಗೆ ಸರ್ಕಾರದಿಂದ ಮಾರ್ಗಸೂಚಿ- ಯಾವ ಮಕ್ಕಳಿಗೆ ಎಷ್ಟು ಗಂಟೆ, ಎಷ್ಟು ದಿನ ಕ್ಲಾಸ್?

    ಆನ್‍ಲೈನ್ ತರಗತಿಗೆ ಸರ್ಕಾರದಿಂದ ಮಾರ್ಗಸೂಚಿ- ಯಾವ ಮಕ್ಕಳಿಗೆ ಎಷ್ಟು ಗಂಟೆ, ಎಷ್ಟು ದಿನ ಕ್ಲಾಸ್?

    ಬೆಂಗಳೂರು: ಮಕ್ಕಳ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಆನ್‍ಲೈನ್ ತರಗತಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಯಾವ ತರಗತಿಯ ಮಕ್ಕಳು, ಎಷ್ಟು ದಿನ, ಎಷ್ಟು ಗಂಟೆ ಆನ್‍ಲೈನ್ ತರಗತಿಯಲ್ಲಿ ಕೂರಬೇಕು ಎಂಬ ಕುರಿತು ತಿಳಿಸಿದೆ.

    ಆನ್‍ಲೈನ್ ತರಗತಿ ಕುರಿತು ಈಗಾಗಲೇ ದೂರುಗಳು ಬರುತ್ತಿದ್ದು, ಮಕ್ಕಳಿಗೆ ವಿವಿಧ ಸಮಸ್ಯೆಗಳು ಎದುರಾಗುತ್ತಿವೆ ಎಂದು ಪೋಷಕರು ದೂರುತ್ತಿದ್ದಾರೆ. ಶೇ.20 ಮಕ್ಕಳಿಗೆ ಕತ್ತು, ಬೆನ್ನು ನೋವು ಸಮಸ್ಯೆ ಕಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿರಂತರ ಮೊಬೈಲ್ ವೀಕ್ಷಣೆಯಿಂದ ಕಣ್ಣಿಗೆ ತೊಂದರೆಯ ಜೊತೆಗೆ ಈಗ ಕತ್ತು ಹಾಗೂ ಬೆನ್ನು ನೋವಿನಿಂದ ಮಕ್ಕಳು ನರಳುತ್ತಿದ್ದಾರೆ. ಇದರಿಂದಾಗಿ ಪೋಷಕರು ಹೈರಾಣಾಗಿದ್ದಾರೆ. ಹೀಗಾಗಿ ತಜ್ಞರ ವರದಿ ಆಧರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

    ವಯೋಮಾನಕ್ಕನುಗುಣವಾಗಿ ಆನ್‍ಲೈನ್ ಕ್ಲಾಸ್ ನಡೆಸುವಂತೆ ತಿಳಿಸಲಾಗಿದ್ದು, 2ನೇ ತರಗತಿಯವರೆಗೆ ದಿನ ಬಿಟ್ಟು ದಿನ ಹಾಗೂ 3ನೇ ತರಗತಿಯ ನಂತರದ ಮಕ್ಕಳಿಗೆ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ತರಗತಿ ನಡೆಸಬಹದು. ಎರಡು ದಿನ ಕಡ್ಡಾಯವಾಗಿ ರಜೆ ನೀಡಬೇಕು. 2ನೇ ತರಗತಿಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯ ಅಥವಾ ಪೋಷಕರ ಅನುಮತಿಯ ಮೇರೆಗೆ ವಯಸ್ಕರ ಉಪಸ್ಥಿತಿಗೆ ಅವಕಾಶ ಇರಬೇಕು.

    ಸಿಂಕ್ರೊನಸ್ (ನೇರ ಪ್ರಸಾರದ ಅಧಿವೇಶನಗಳು) ಮತ್ತು ಅಸಿಂಕ್ರೊನಸ್ (ಪೂರ್ವ-ಮುದ್ರಿತ ಅಧಿವೇಶನಗಳು) ವಿಧಾನಗಳಿಗೆ ಆದ್ಯತೆ ನೀಡಬೇಕು. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆ 1983(1995) ರ ಸೆಕ್ಷನ್ 124(5) ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

    ಯಾವ ಮಕ್ಕಳಿಗೆ ಎಷ್ಟು ದಿನ ತರಗತಿ?
    3ರಿಂದ 6 ವರ್ಷದ ಮಕ್ಕಳಿಗೆ ಒಂದು ದಿನ ಬಿಟ್ಟು ಒಂದು ದಿನದಂತೆ ವಾರಕ್ಕೆ 3 ದಿನ ತರಗತಿ ನಡೆಸಬೇಕು. ಇದಕ್ಕೆ ಪೋಷಕರ ಹಾಜರಾತಿ ಕಡ್ಡಾಯವಾಗಿದೆ. ಪ್ರತಿ ದಿನ ಕೇವಲ ಗರಿಷ್ಠ 30 ನಿಮಿಷ ಮಾತ್ರ ನಡೆಸಬೇಕು. 1 ರಿಂದ 2ನೇ ತರಗತಿ ಮಕ್ಕಳಿಗೂ ಇದೇ ನಿಯಮ ಅನ್ವಯವಾಗಲಿದೆ. ಆದರೆ ದಿನಕ್ಕೆ 2 ಸೆಷನ್ ಮಾಡಬಹುದಾಗಿದೆ. ಇವರಿಗೂ ತರಗತಿ ಅವಧಿ ಗರಿಷ್ಠ 30 ನಿಮಿಷ ಮಾತ್ರ.

    3ರಿಂದ 5ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಸೆಷನ್ ನಂತೆ ವಾರಕ್ಕೆ 5 ದಿನ ಕ್ಲಾಸ್ ನಡೆಸಬಹುದು. ಇದಕ್ಕೆ ಪೋಷಕರ ಹಾಜರಿ ಕಡ್ಡಾಯವಲ್ಲ. ಇವರಿಗೆ ತರಗತಿ ಅವಧಿ ಗರಿಷ್ಠ 30 ನಿಮಿಷ. 6ರಿಂದ 10ನೇ ತರಗತಿಯವರಿಗೆ ದಿನಕ್ಕೆ 3 ಸೆಷನ್‍ನಂತೆ ವಾರಕ್ಕೆ 5 ದಿನ ತರಗತಿ ನಡೆಸಬಹುದು. ಇವರಿಗೂ ಪೋಷಕರ ಹಾಜರಿ ಕಡ್ಡಾಯವಲ್ಲ. ಒಂದು ಸೆಷನ್ ಅವಧಿ ಗರಿಷ್ಠ 30-45 ನಿಮಿಷವಾಗಿದೆ.

  • ಆನ್‍ಲೈನ್ ಕ್ಲಾಸ್‍ಗಳಿಗೆ ಸರ್ಕಾರದ ಮಾರ್ಗಸೂಚಿ- ಸೋಮವಾರ ಅಧಿಕೃತ ಘೋಷಣೆ ಸಾಧ್ಯತೆ

    ಆನ್‍ಲೈನ್ ಕ್ಲಾಸ್‍ಗಳಿಗೆ ಸರ್ಕಾರದ ಮಾರ್ಗಸೂಚಿ- ಸೋಮವಾರ ಅಧಿಕೃತ ಘೋಷಣೆ ಸಾಧ್ಯತೆ

    ಬೆಂಗಳೂರು: ಆನ್‍ಲೈನ್ ತರಗತಿಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದ್ದು, ಕೆಲ ಮಾರ್ಗಸೂಚಿಗಳನ್ನು ಸಿದ್ಧಪಡಿಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೆಲ ಶಾಲೆಗಳು ಮನಸೋಯಿಚ್ಛೆ ಆನ್‍ಲೈನ್ ತರಗತಿಗಳನ್ನ ನಡೆಸುತ್ತಿರುವ ಬಗ್ಗೆ ದೂರುಗಳ ಕೇಳಿ ಬಂದಿದ್ದವು. ಈ ಹಿನ್ನೆಲೆ ಕೊನೆಗೂ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಆನ್‍ಲೈನ್ ಕ್ಲಾಸ್ ಗಳಿಗಾಗಿ ಮಾರ್ಗಸೂಚಿ ಸಿದ್ಧಪಡಿಸಿದೆ ಎಂದು ತಿಳಿದು ಬಂದಿದೆ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ಮೇರೆಗೆ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಸೋಮವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿವೆ. ಸರ್ಕಾರ ನೀಡುವ ಎಲ್ಲ ಮಾರ್ಗಸೂಚಿಗಳನ್ನ ಖಾಸಗಿ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂಬ ಎಚ್ಚರಿಕೆ ನೀಡಲು ಸುರೇಶ್ ಕುಮಾರ್ ಮುಂದಾಗಿದ್ದಾರೆ.

    ಮಾರ್ಗಸೂಚಿಯಲ್ಲಿ ಏನಿರಬಹುದು?
    * ಆನ್‍ಲೈನ್ ತರಗತಿ ಕಡ್ಡಾಯವಾಗಿ ಪಡೆಯಬೇಕು ಅಂತ ವಿದ್ಯಾರ್ಥಿಗಳು, ಪೋಷಕರಿಗೆ ಒತ್ತಾಯ ಮಾಡುವ ಹಾಗಿಲ್ಲ. ಆನ್‍ಲೈನ್ ತರಗತಿಗೆ ಹೆಚ್ಚುವರಿ ಶುಲ್ಕ ಪಡೆಯವಂತಿಲ್ಲ. ಯಾವುದೇ ವಿದ್ಯಾರ್ಥಿಗಳಿಗೆ ದಿನಪೂರ್ತಿ ಅಥವಾ ಗಂಟೆಗಟ್ಟಲೆ ಆನ್‍ಲೈನ್ ತರಗತಿ ನಡೆಸುವಂತೆ ಇಲ್ಲ.
    * ಪೂರ್ವ ಪ್ರಾಥಮಿಕದಿಂದ 2 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಅವಧಿ 30 ನಿಮಿಷ ಮೀರದಂತೆ ವಾರದಲ್ಲಿ 2 ಅಥವಾ 3 ದಿನಗಳು ಮಾತ್ರ ಆನ್‍ಲೈನ್ ತರಗತಿ ನೀಡಬೇಕು. ದಿನ ಬಿಟ್ಟು ದಿನ ಆನ್‍ಲೈನ್ ತರಗತಿ ನೀಡುವ ಬಗ್ಗೆ ಕ್ರಮವಹಿಸಬೇಕು. ಉಳಿದ ದಿನಗಳು ವಿದ್ಯಾರ್ಥಿಗಳಿಗೆ ಬಿಡುವು ಕೊಡುವುದು ಕಡ್ಡಾಯ.

    * ಪೂರ್ವ ಪ್ರಾಥಮಿಕ ತರಗತಿಗಳಿಗೆ ಆನ್‍ಲೈನ್ ತರಗತಿ ನಡೆಸಲು ಪೋಷಕರು ವಿದ್ಯಾರ್ಥಿ ಜೊತೆ ಇರೋದು ಕಡ್ಡಾಯ. ನೇರ ಪ್ರಸಾದರ ತರಗತಿಗಿಂತ ಪೂರ್ವ ಮುದ್ರಿತ ವಿಡಿಯೋ ತರಗತಿಗಳಿಗೆ ಒತ್ತು ನೀಡಬೇಕು.

    * 3 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಕ್ಕೆ ಗರಿಷ್ಠ 4 ಅವಧಿಯಲ್ಲಿ ಮಾತ್ರ ಆನ್‍ಲೈನ್ ತರಗತಿ ನೀಡಬೇಕು. ಪ್ರತಿ ಅವಧಿಗೆ ಗರಿಷ್ಠ ಸಮಯ 30-45 ನಿಮಿಷ ಮೀರದಂತೆ ಆನ್ ಲೈನ್ ತರಗತಿ ಮಾಡಬೇಕು. ಕಡ್ಡಾಯವಾಗಿ ಬೆಳಗ್ಗೆ ಎರಡು ಅವಧಿ ಮಧ್ಯಾಹ್ನದ ನಂತರ ಎರಡು ಅವಧಿಯಲ್ಲಿ ಆನ್‍ಲೈನ್ ಕ್ಲಾಸ್ ನಡೆಸಬೇಕು. ಪ್ರತಿ ಅವಧಿಯ ಕ್ಲಾಸ್ ಮುಗಿದ ನಂತರ ಕನಿಷ್ಠ 30-45 ನಿಮಿಷ ವಿದ್ಯಾರ್ಥಿಗೆ ಬಿಡುವಿನ ಸಮಯ ನೀಡಬೇಕು. 3 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಗರಿಷ್ಠ 4-5 ದಿನಗಳು ಮಾತ್ರ ಆನ್‍ಲೈನ್ ತರಗತಿ ನಡೆಸಬೇಕು. ಉಳಿದ ಎರಡು-ಮೂರು ದಿನಗಳು ವಿದ್ಯಾರ್ಥಿಗಳಿಗೆ ಬಿಡುವು ಕೊಡಬೇಕು.

    * ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದ ಶಾಲೆ ವಿರುದ್ಧ ಪೋಷಕರು ದೂರು ನೀಡಬಹುದು. ಪೋಷಕರು ದೂರು ನೀಡಲು ಸಹಾಯವಾಣಿ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದೇ ಇದ್ದರೆ ಅಂತಹ ಶಾಲೆಗಳ ವಿರುದ್ಧ ಪೋಷಕರು ಸಹಾಯವಾಣಿಗೆ ದೂರು ನೀಡಬಹುದು.

  • ಆನ್‍ಲೈನ್ ತರಗತಿಯಲ್ಲಿ ಪ್ರಶ್ನೆಗೆ ಉತ್ತರಿಸಿಲ್ಲವೆಂದು ಮಗಳಿಗೆ ಪೆನ್ಸಿಲ್‍ನಿಂದ ಇರಿದು ತಾಯಿ ಹಲ್ಲೆ

    ಆನ್‍ಲೈನ್ ತರಗತಿಯಲ್ಲಿ ಪ್ರಶ್ನೆಗೆ ಉತ್ತರಿಸಿಲ್ಲವೆಂದು ಮಗಳಿಗೆ ಪೆನ್ಸಿಲ್‍ನಿಂದ ಇರಿದು ತಾಯಿ ಹಲ್ಲೆ

    – ಪೆನ್ಸಿಲ್‍ನಿಂದ ಇರಿದು, ಕಚ್ಚಿ, ಮನಬಂದಂತೆ ಹಲ್ಲೆ
    – ಬಾಲಕಿಯ ತಂಗಿಯಿಂದ ಮಕ್ಕಳ ಸಹಾಯವಾಣಿಗೆ ದೂರು
    – ತಾಯಿಯ ವಿರುದ್ಧ ಪ್ರಕರಣ ದಾಖಲು

    ಮುಂಬೈ: ಆನ್‍ಲೈನ್ ತರಗತಿ ವೇಳೆ ಸರಿಯಾಗಿ ಗಮನ ಹರಿಸಿಲ್ಲ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ಕೋಪಗೊಂಡ ತಾಯಿ ತನ್ನ ಮಗಳಿಗೆ ಪೆನ್ಸಿಲ್‍ನಿಂದ ಇರಿದು ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಪೆನ್ಸಿಲ್‍ನಿಂದ ತನ್ನ 12 ವರ್ಷದ ಮಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸ್ಯಾಂಟಾಕ್ರಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್‍ಲೈನ್ ತರಗತಿ ವೇಳೆ ಗಮನಹರಿಸಿಲ್ಲ ಹಾಗೂ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂಬ ಉದ್ದೇಶದಿಂದ ತಾಯಿ ಮಗಳ ಮೇಲೆ ಹಲ್ಲೆ ಮಾಡಿದ್ದಾಳೆ.

    ಬುಧವಾರ 6ನೇ ತರಗತಿ ವಿದ್ಯಾರ್ಥಿನಿ ಆನ್‍ಲೈನ್ ತರಗತಿಗೆ ಹಾಜರಾದ ವೇಳೆ ಘಟನೆ ನಡೆದಿದೆ. ಶಿಕ್ಷಕರು ಕೇಳಿದ ಪ್ರಶ್ನೆಗೆ ಮಗಳು ಉತ್ತರಿಸದಿರುವುದನ್ನು ಕಂಡು ತಾಯಿಗೆ ಕೋಪ ಬಂದಿದ್ದು, ಬಳಿಕ ಹರಿತವಾದ ಪೆನ್ಸಿಲ್‍ನಿಂದ ಬಾಲಕಿಯ ಬೆನ್ನಿಗೆ ಬಲವಾಗಿ ಇರಿದಿದ್ದಾಳೆ. ಅಲ್ಲದೆ ಹಲವು ಬಾರಿ ಅವಳನ್ನು ಕಚ್ಚಿ, ಹೊಡೆದು ಹಲ್ಲೆ ಮಾಡಿದ್ದಾಳೆ. ಇಡೀ ಘಟನೆಗೆ ಬಾಲಕಿ ತಂಗಿ ಸಾಕ್ಷಿಯಾಗಿದ್ದು, ಇದರಿಂದ ಬೇಸತ್ತು, ಹೆದರಿ ನಂತರ ಬಾಲಕಿಯ ತಂಗಿಯೇ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ್ದಾಳೆ.

    ದೂರು ಆಧರಿಸಿ ಇಬ್ಬರು ಎನ್‍ಜಿಒ ಪ್ರತಿನಿಧಿಗಳು ಬಾಲಕಿಯ ಮನೆಗೆ ಆಗಮಿಸಿದ್ದು, ಈ ವೇಳೆ ತಾಯಿಗೆ ತಿಳಿ ಹೇಳಲು ಯತ್ನಿಸಿದ್ದಾರೆ. ಆದರೆ ತಾಯಿ ಇದಾವುದನ್ನೂ ಕೇಳಿಲ್ಲ. ಏನೂ ಹೇಳಿದರೂ ಒಪ್ಪಿಲ್ಲ. ಹೀಗಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯನ್ನು ಈ ವರೆಗೆ ಬಂಧಿಸಲಾಗಿಲ್ಲ.

  • ಆನ್‍ಲೈನ್ ಶಿಕ್ಷಣ- ನೆಟ್‍ವರ್ಕ್ ಗಾಗಿ ಅರಣ್ಯದಲ್ಲಿ ಮರವೇರಿ ಕುಳಿತ ವಿದ್ಯಾರ್ಥಿಗಳು

    ಆನ್‍ಲೈನ್ ಶಿಕ್ಷಣ- ನೆಟ್‍ವರ್ಕ್ ಗಾಗಿ ಅರಣ್ಯದಲ್ಲಿ ಮರವೇರಿ ಕುಳಿತ ವಿದ್ಯಾರ್ಥಿಗಳು

    ಮಂಗಳೂರು: ಕೊರೊನಾ ಆತಂಕದ ಮಧ್ಯೆ ಶಾಲೆಗಳನ್ನ ಆರಂಭಿಸೋದು ಸದ್ಯ ಸರ್ಕಾರಕ್ಕೆ ಸವಾಲಾಗಿದೆ. ಹೀಗಾಗಿ ಅನ್‍ಲೈನ್ ತರಗತಿಗಳ ಮೂಲಕವೇ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮದ ಮಕ್ಕಳಿಗೆ ಮಾತ್ರ ಆನ್‍ಲೈನ್ ತರಗತಿಗಳಿಗೆ ಹಾಜರಾಗೋದು ಒಂದು ರೀತಿ ಸವಾಲಿನ ಕೆಲಸ. ಜಿಲ್ಲೆಯ ಸುಳ್ಯ ತಾಲೂಕು ಕೇಂದ್ರದ ಕಟ್ಟ ಕಡೆಯ ಗ್ರಾಮ ಬಾಳುಗೋಡು. ಈ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ವಿಪರೀತವಾಗಿದೆ. ಈ ಭಾಗದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಇದೀಗ ಅನಿವಾರ್ಯವಾಗಿ ಅರಣ್ಯ ಭಾಗದ ಗುಡ್ಡಗಳಿಗೆ ತೆರಳಿ ಮರ ಹತ್ತಿ ನೆಟ್‍ವರ್ಕ್‍ಗಾಗಿ ಹರಸಾಹಸ ಪಡುತ್ತಿದ್ದಾರೆ.

    ಬಾಳುಗೋಡಿನ ಬೆಟ್ಟುಮಕ್ಕಿಯ ವಿದ್ಯಾರ್ಥಿಗಳು ನೆಟ್‍ವರ್ಕ್ ದೊರಕುವ ಎತ್ತರದ ಅರಣ್ಯದಲ್ಲಿ ಟೆಂಟ್ ನಿರ್ಮಿಸಿ ಬೋಧನೆ ಕೇಳುತ್ತಿದ್ದಾರೆ. ಹಾಗಾಗಿ ಮರವೇರಿದರೆ ಮಾತ್ರ ಈ ಭಾಗದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠ. ಅದಕ್ಕಾಗಿ ದಟ್ಟ ಅರಣ್ಯದೊಳಗೆ ನೆಟ್‍ವರ್ಕ್ ಹುಡುಕಾಟ ದಿನನಿತ್ಯ ಗೋಳಾಗಿ ಪರಿಣಮಿಸಿದೆ. ಬಾಳುಗೋಡು ಪ್ರದೇಶದಲ್ಲಿ ಯಾವುದೇ ಸಿಮ್‍ನ ನೆಟ್‍ವರ್ಕ್ ಕೂಡ ಸಿಗುತ್ತಿಲ್ಲ. ಕಾಡಿನೊಳಗೆ ಪ್ರವೇಶ ಪಡೆದು ಮರ ಏರಿ ಮೊಬೈಲ್‍ನಲ್ಲಿ ಪಾಠ ಕೇಳುತ್ತಿದ್ದಾರೆ. ಈ ಭಾಗದ ಇತರ ವಿದ್ಯಾರ್ಥಿಗಳು ಮನೆಯ ಛಾವಣೆ ಏರಿ, ಗುಡ್ಡ ಏರಿ ನೆಟ್‍ವರ್ಕ್ ಹುಡುಕಾಡಿ ಪಾಠ ಕೇಳುತ್ತಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಿಕ್ಷಣ- ನೆಟ್‍ವರ್ಕ್ ಅರಸಿ ಇಂದಿಗೂ ವಿದ್ಯಾರ್ಥಿಗಳ ಅಲೆದಾಟ

    ಬಾಳುಗೋಡು ಸೇರಿ ಸಮೀಪದ ಕೊಲ್ಲಮೊಗ್ರು-ಕಲ್ಮಕಾರು ಗ್ರಾಮೀಣ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾದಾಗ ನೆಟ್‍ವರ್ಕ್ ವ್ಯವಸ್ಥೆ ಸ್ಥಗಿತಗೊಳ್ಳುತ್ತದೆ. ಇಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಸಂಪರ್ಕ ವ್ಯವಸ್ಥೆಗೆ ಅಡ್ಡಿಯಾಗಿದೆ. ಬಿಎಸ್‍ಎನ್‍ಎಲ್ ಟವರ್ ಜನರೇಟರ್ ಗೆ ಈ ಹಿಂದೆ ಗ್ರಾಮಸ್ಥರು ಡೀಸೆಲ್ ಒದಗಿಸುತ್ತಿದ್ದರು. ಆದರೆ ಪ್ರಸ್ತುತ ಬ್ಯಾಟರಿ ಹಾಳಾದ ಕಾರಣ ಜನರೇಟರ್ ವ್ಯವಸ್ಥೆ ಫಲ ನೀಡುತ್ತಿಲ್ಲ ಆದ್ದರಿಂದ ಶೀಘ್ರ ನೂತನ ಬ್ಯಾಟರಿ ಒದಗಿಸಲು ಜನತೆ ವಿನಂತಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಿಕ್ಷಣಕ್ಕೆ ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ- ತರಗತಿಗಳು ವಿದ್ಯಾರ್ಥಿಗಳಿಗೆ ಮರಿಚೀಕೆ

    ಕೊಲ್ಲ ಮೊಗ್ರುವಿನಲ್ಲಿ ಖಾಸಗಿ ಟವರ್ ಚಾಲ್ತಿಯಲ್ಲಿದ್ದರೂ ಅದರ ಸಂಪರ್ಕ ಕೇವಲ ಪೇಟೆಗೆ ಸೀಮಿತವಾಗಿದೆ. ಇತರ ಗ್ರಾಮೀಣ ಜನರು ಸಂಪರ್ಕ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದಾರೆ. ಮಕ್ಕಳಂತೂ ಅಪಾಯಕಾರಿಯಾಗಿ ಮರ ಹತ್ತಿ ಶಿಕ್ಷಣ ಪಡೀತಾ ಇರೋದು ದುರಂತ. ಇದನ್ನೂ ಓದಿ: ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮೊಬೈಲ್ ಕದ್ದು ಸಿಕ್ಕಿಬಿದ್ದ ಬಾಲಕನಿಗೆ ಪೊಲೀಸ್ ಸರ್ಪ್ರೈಸ್ ಶಿಕ್ಷೆ

  • ಪಬ್‍ಜಿ ಆಡ್ಬೇಡವೆಂದು ಫೋನ್ ಕಿತ್ಕೊಂಡ ಪೋಷಕರು – ಯುವಕ ಆತ್ಮಹತ್ಯೆ

    ಪಬ್‍ಜಿ ಆಡ್ಬೇಡವೆಂದು ಫೋನ್ ಕಿತ್ಕೊಂಡ ಪೋಷಕರು – ಯುವಕ ಆತ್ಮಹತ್ಯೆ

    ಗದಗ: ಆನ್‍ಲೈನ್ ಕ್ಲಾಸ್ ನೆಪದಲ್ಲಿ ಪಬ್‍ಜಿ ಆಡುತ್ತಿದ್ದ ಯುವಕನಿಗೆ ಗೇಮ್ ಆಡಬೇಡ ಎಂದು ಬೈದು ಮೊಬೈಲ್ ಕಸಿದುಕೊಂಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಹಿರೆಪೇಟೆ ನಿವಾಸಿ ಕಾರ್ತಿಕ್ ಬಬಲಿ(17) ಮನೆಯಲ್ಲಿ ನೇಣು ಬಿಗಿದುಕೊಂಡು ಆಹತ್ಮಹತ್ಯೆ ಮಾಡಿಕೊಂಡಿದ್ದಾನೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವಕ ಪಬ್‍ಜಿ ಗೇಮ್‍ಗೆ ದಾಸನಾಗಿದ್ದ. ಆನ್‍ಲೈನ್ ಕ್ಲಾಸ್ ನೆಪದಲ್ಲಿ ಯಾವಾಗಲೂ ಗೇಮ್ ಆಡುತ್ತಿದ್ದ. ಇದನ್ನು ಗಮನಿಸಿದ ಪಾಲಕರು ಬರೀ ಗೇಮ್ ಆಡುತ್ತೀಯಾ, ಓದು ಎಂದು ಬೈದು ಮೊಬೈಲ್ ಕಸಿದುಕೊಂಡಿದ್ದಾರೆ.

    ಸಾಕಷ್ಟು ಬಾರಿ ಕೇಳಿದರೂ ಪೋಷಕರು ಆತನಿಗೆ ಮೊಬೈಲ್ ಕೊಡದ ಹಿನ್ನೆಲೆಯಲ್ಲಿ ಮನನೊಂದು ಯುವಕ ನೇಣಿಗೆ ಶರಣಾಗಿದ್ದಾನೆ. ಇದನ್ನು ನೋಡಿದ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ. ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮೊಬೈಲ್ ಕದ್ದು ಸಿಕ್ಕಿಬಿದ್ದ ಬಾಲಕನಿಗೆ ಪೊಲೀಸ್ ಸರ್ಪ್ರೈಸ್ ಶಿಕ್ಷೆ

    ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮೊಬೈಲ್ ಕದ್ದು ಸಿಕ್ಕಿಬಿದ್ದ ಬಾಲಕನಿಗೆ ಪೊಲೀಸ್ ಸರ್ಪ್ರೈಸ್ ಶಿಕ್ಷೆ

    ಚೆನ್ನೈ: ಕೊರೊನಾ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮಾರ್ಚ್ ತಿಂಗಳಿನಿಂದ ಕೊರೊನಾ ಭೀತಿಯಿಂದ ಲಾಕ್‍ಡೌನ್ ಹೇರಲಾದ ಬಳಿಕ ಶಾಲಾ- ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಇನ್ನೂ ಕೆಲವೆಡೆ ಶಾಲೆಗಳನ್ನು ತೆರೆಯಲು ಮುಂದಾಗಿಲ್ಲ. ಹೀಗಾಗಿ ಶಿಕ್ಷಕರು ಆನ್‍ಲೈನ್ ಕ್ಲಾಸಿನತ್ತ ಮುಖ ಮಾಡಿದ್ದಾರೆ. ಆದರೆ ಈ ಆನ್‍ಲೈನ್ ಕ್ಲಾಸ್ ಬಡ ಮಕ್ಕಳಿಗೆ ಹೊರೆಯಾಗಿದೆ.

    ಅಂತೆಯೇ ಚೆನ್ನೈ ಮೂಲದ ಬಡ ಬಾಲಕನಿಗೆ ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮೊಬೈಲ್ ಖರೀದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆತ ಕಳ್ತನ ಮೊರೆ ಹೋಗಿದ್ದು, ಮೊಬೈಲ್ ಒಂದನ್ನು ಕದ್ದಿದ್ದಾನೆ. ಹೌದು. 13 ವರ್ಷದ ಕಾರ್ಪೋರೇಶನ್ ಶಾಲೆಯ ಬಾಲಕನ ತಂದೆ ಬಿಸ್ಕೆಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ತಾಯಿ, ಬೇರೆಯವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಈ ಮೂಲಕ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಈ ಮಧ್ಯೆ ಶಿಕ್ಷಕರು ಆನ್‍ಲೈನ್ ಕ್ಲಾಸಿಗೆ ಹಾಜರಾಗುವಂತೆ ಒತ್ತಡ ಹೇರುತ್ತಿದ್ದರು. ಬಾಲಕ ಬಡ ಕುಟುಂಬದವನಾಗಿದ್ದರಿಂದ ಮಗನಿಗೆ ಮೊಬೈಲ್ ಕೊಡಿಸಲು ಪೋಷಕರಿಗೆ ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊಬೈಲ್ ತೆಗೆದುಕೊಳ್ಳಲು ಸಾಧ್ಯವಾಗದಿದ್ದರಿಂದ ಅಕ್ಕ-ಪಕ್ಕ ಮನೆಯ ಇಬ್ಬರು ತಮ್ಮ ಜೊತೆ ಕಳ್ಳತನಕ್ಕೆ ಬಂದರೆ ನಿನಗೆ ಮೊಬೈಲ್ ಕೊಡಿಸುವುದಾಗಿ ಬಾಲಕನಿಗೆ ಆಮಿಷವೊಡ್ಡಿದ್ದಾರೆ. ಇತ್ತ ಒಂದು ವೇಳೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದರೆ ಬಾಲಕನನ್ನೇ ಬಲಿವಶು ಮಾಡುವ ಹುನ್ನಾರ ಆ ಇಬ್ಬರು ವ್ಯಕ್ತಿಗಳದ್ದಾಗಿತ್ತು. ಇಬ್ಬರು ವ್ಯಕ್ತಿಗಳ ಮಾತು ನಂಬಿ, ತನಗೆ ಮೊಬೈಲ್ ಸಿಗುತ್ತೆ ಎಂಬ ಆಸೆಯಿಂದ ಬಾಲಕ ಅವರ ಜೊತೆ ಕಳ್ಳತನಕ್ಕೆ ಇಳಿದು, ಎಲ್ಲರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಿಕ್ಷಣ- ನೆಟ್‍ವರ್ಕ್ ಅರಸಿ ಇಂದಿಗೂ ವಿದ್ಯಾರ್ಥಿಗಳ ಅಲೆದಾಟ

    ಬಂಧಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಾಲಕ ತನ್ನ ಪರಿಸ್ಥಿತಿಯ ಬಗ್ಗೆ ಪೊಲೀಸರಿಗೆ ಮನಮುಟ್ಟುವಂತೆ ಹೇಳಿದ್ದಾನೆ. ಇದರಿಂದ ಬೇಸರಗೊಂಡ ಪೊಲೀಸರು, ಆತನಿಗೆ ತಾವೇ ಖುದ್ದಾಗಿ ಹೊಸ ಮೊಬೈಲ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಫಿಡ್ಜ್ ಟ್ರೇ ಬಳಸಿ ಆನ್‍ಲೈನ್ ಕ್ಲಾಸ್- ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ

  • ರಾಜ್ಯದಲ್ಲಿ ಹೊಸ ಟ್ರೆಂಡ್ ಶುರು – ಸರ್ಕಾರಿ ಶಾಲೆಗಳಿಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡ್

    ರಾಜ್ಯದಲ್ಲಿ ಹೊಸ ಟ್ರೆಂಡ್ ಶುರು – ಸರ್ಕಾರಿ ಶಾಲೆಗಳಿಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡ್

    – ಖಾಸಗಿ ಶಾಲೆಗೆ ಟಾಟಾ, ಸರ್ಕಾರಿ ಸ್ಕೂಲಲ್ಲಿ ಪಾಠ

    ಬೆಂಗಳೂರು: ರಾಜ್ಯದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಇದು ಹೊಸ ಫ್ಯಾಷನ್, ಹೊಸ ಟೆಕ್ನಾಲಜಿ ಟ್ರೆಂಡ್ ಅಲ್ಲ. ನೂತನ ಎಜುಕೇಷನ್ ಟ್ರೆಂಡ್ ಆರಂಭವಾಗಿದೆ. ಇದೇ ಮೊದಲಿಗೆ ಖಾಸಗಿ ಶಾಲೆಗಳು ಡಿಮ್ಯಾಂಡ್ ಇಳಿಸಿಕೊಂಡಿದ್ದು, ಸರ್ಕಾರಿ ಶಾಲೆಗಳಿಗೆ ಸಖತ್ ಬೇಡಿಕೆ ಶುರುವಾಗಿದೆ.

    ಹೌದು..ಗ್ರಾಮೀಣ ಅಲ್ಲ ಬೆಂಗಳೂರಲ್ಲೂ ಖಾಸಗಿ ಶಾಲೆಗಳಿಗೆ ಡಿಮ್ಯಾಂಡ್ ಕುಗ್ಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ಶಾಲೆಗೆ ಹೆಚ್ಚಾಗಿ ಮಕ್ಕಳು ಆಗಮಿಸುತ್ತಿದ್ದಾರೆ. ತಾಲೂಕು, ಹೋಬಳಿ, ಗ್ರಾಮೀಣ ಭಾಗದಲ್ಲಿಯೂ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗೆ ಸೇರಿಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆ ಅಂದರೆ ಸಾಕು ಮೂಗು ಮುರಿಯುತ್ತಿದ್ದವರೇ ಹೆಚ್ಚು. ಅಲ್ಲದೇ ಸರ್ಕಾರಿ ಶಾಲೆಗಂತೂ ನಮ್ಮ ಮಕ್ಕಳನ್ನು ಕಳಿಸಲ್ಲ ಎನ್ನುತ್ತಿದ್ದರು. ಆದರೆ ಈಗ ಪೋಷಕರು ತಮ್ಮ ಅಭಿಪ್ರಾಯವನ್ನೇ ಬದಲಾಯಿಸಿಕೊಂಡಿದ್ದಾರೆ.

    ಮಹಾಮಾರಿ ಕೊರೊನಾ ಪರಿಣಾಮದಿಂದ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಾಗಿದೆ. ಇದರಿಂದ ಖಾಸಗಿ ಶಾಲೆಯ ಫೀಸ್ ಕಟ್ಟಲಾಗದೇ ಪೋಷಕರ ಪರದಾಡುತ್ತಿದ್ದಾರೆ. ಜೊತೆಗೆ ಅನ್‍ಲೈನ್ ಕ್ಲಾಸ್ ಫೀ ಕಟ್ಟಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ದೂರದೂರಿಗೆ ಮಕ್ಕಳನ್ನು ಬಸ್ಸಿನಲ್ಲಿ ಕಳಿಸಲು ಪೋಷಕರು ಭಯ ಪಡುತ್ತಿದ್ದಾರೆ. ಇದರಿಂದ ಪೋಷಕರು ಸರ್ಕಾರಿ ಶಾಲೆಗಳ ಕಡೆ ಮುಖ ಮಾಡುತ್ತಿದ್ದು, ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 914 ಸರ್ಕಾರಿ ಶಾಲೆ ಇವೆ. 914 ಸರ್ಕಾರಿ ಶಾಲೆ ಪೈಕಿ 350 ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಿದೆ. ಖಾಸಗಿ ಶಾಲೆ ಬಿಡಿಸಿ ಸರ್ಕಾರಿ ಶಾಲೆಗಳಿಗೆ ಪೋಷಕರು ಮೊರೆ ಹೋಗುತ್ತಿದ್ದಾರೆ. ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಅಡ್ಮಿಷನ್ ಹೆಚ್ಚಳವಾಗುವ ಮೂಲಕ ಸರ್ಕಾರಿ ಶಾಲೆಗಳಿಗೆ ಈಗ ಡಿಮ್ಯಾಂಡ ಶುರುವಾಗಿದೆ. ಜೊತೆಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಟಿಸಿಗಳಿಗೆ ಡಿಮ್ಯಾಂಡ್ ಶುರುವಾಗಿದೆ.

    ಹಾವೇರಿ ಜಿಲ್ಲೆಯಲ್ಲೂ ಸರ್ಕಾರಿ ಶಾಲೆಗಳಿಗೆ ಡಿಮ್ಯಾಂಡ್ ಶುರುವಾಗಿದೆ. ಸಾವಿರಾರು ಮಕ್ಕಳು ಖಾಸಗಿ ಶಾಲೆ ತೊರೆದಿದ್ದು, ಸರ್ಕಾರಿ ಶಾಲೆಗೆ ಸೇರಿಕೊಂಡಿದ್ದಾರೆ. 1ರಿಂದ 7ನೇ ಕ್ಲಾಸ್ ತರಗತಿಗಳಿಗೆ ದಾಖಲಾತಿ ಹೆಚ್ಚಳವಾಗಿದೆ. ನಮ್ಮ ಕೈಯಲ್ಲಿ ಖಾಸಗಿ ಶಾಲೆಗೆ ಶುಲ್ಕ ಕಟ್ಟಲು ಹಣ ಇಲ್ಲ. ಸಣ್ಣ ಮಕ್ಕಳನ್ನ ವಾಹನದಲ್ಲಿ ಕಳಿಸಲು ಭಯ ಆಗುತ್ತಿದೆ. ಸರ್ಕಾರಿ ಶಾಲಾ ಶಿಕ್ಷಕರಿಂದ ಉಚಿತ ಮತ್ತು ಮನೆ ಪಾಠ ಇದೆ. ಹೀಗಾಗಿ ನಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಕಳುಹಿಸುತ್ತೀವಿ ಎಂದು ಪೋಷಕರ ಹೇಳುತ್ತಿದ್ದಾರೆ.

    ‘ಸರ್ಕಾರಿ’ ಶಾಲೆಗಳ ಒಲವಿಗೆ ಕಾರಣಗಳು
    * ಡೊನೇಷನ್ ಹಾವಳಿ ತಪ್ಪಿಸಿಕೊಳ್ಳಲು ಪರ್ಯಾಯ ಮಾರ್ಗ
    * ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಬಿಸಿಯೂಟ ಸೇರಿ ಹಲವು ಸೌಲಭ್ಯ
    * ಕೊರೊನಾ ಭೀತಿ ದೂರಾಗಿಸಲು ಹತ್ತಿರದ ಸರ್ಕಾರಿ ಶಾಲೆಗೆ ಆದ್ಯತೆ
    * ಖಾಸಗಿ ಶಾಲಾ ವಾಹನ ಸೌಕರ್ಯಕ್ಕೆ ಹೆಚ್ಚುವರಿ ಶುಲ್ಕ ತೆರಬೇಕು
    * ಕೊರೊನಾದಿಂದಾಗಿ ಹಳ್ಳಿಗಳಿಗೆ ವಲಸೆ ಹೋದವರಿಂದ ಸರ್ಕಾರಿ ಶಾಲೆಗಳ ಮೊರೆ
    * ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುವ ಬಗ್ಗೆ ಮನವರಿಕೆ
    * ಆನ್‍ಲೈನ್ ಶಿಕ್ಷಣದ ಬಗ್ಗೆ ನಿರಾಸಕ್ತಿ, ವಿದ್ಯಾಗಮ ಯೋಜನೆ ಬಗ್ಗೆ ಕುತೂಹಲ

  • ಆನ್‍ಲೈನ್ ಕ್ಲಾಸ್ ವೇಳೆ ಜೋಗುಳದ ಉರುಳಿಗೆ ಸಿಲುಕಿ ಬಾಲಕ ಸಾವು

    ಆನ್‍ಲೈನ್ ಕ್ಲಾಸ್ ವೇಳೆ ಜೋಗುಳದ ಉರುಳಿಗೆ ಸಿಲುಕಿ ಬಾಲಕ ಸಾವು

    ಬೆಂಗಳೂರು: ಆನ್‍ಲೈನ್ ಕ್ಲಾಸಿನಲ್ಲಿ ಪಾಠ ಕೇಳುತ್ತಿದ್ದ ಬಾಲಕ ನಿಗೂಢ ರೀತಿಯಲ್ಲಿ ಜೋಗುಳದ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೂರವಲಯ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ.

    ಮಂಜುನಾಥ್ ಎಂಬವರ ಮಗ ವಿಶ್ವಾಸ್ (10) ಸಂಶಯಸ್ಪದವಾಗಿ ಸಾವನ್ನಪ್ಪಿದ್ದಾನೆ. ಈತ ಜ್ಞಾನಗಂಗಾ ವಿದ್ಯಾಸಂಸ್ಥೆಯ 5ನೇ ತರಗತಿಯ ವಿದ್ಯಾರ್ಥಿ. ಕೊರೊನಾ ಹಿನ್ನೆಲೆಯಲ್ಲಿ ಆನ್‍ಲೈನ್ ಕ್ಲಾಸ್ ಮೂಲಕ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಆನ್‍ಲೈನ್ ಕ್ಲಾಸ್ ಇದ್ದ ಕಾರಣಕ್ಕೆ ಆತನ ಪೋಷಕರು ರೂಮ್ ಒಳಗೆ ಕಳುಹಿಸಿದ್ದಾರೆ. ಮನೆಯಲ್ಲಿ ಸಣ್ಣ ಮಗುವಿದ್ದ ಕಾರಣಕ್ಕೆ ರೂಮ್ ನಲ್ಲಿ ಜೋಕಾಲಿ ಕಟ್ಟಲಾಗಿತ್ತು.

    ಆನ್‍ಲೈನ್ ಕ್ಲಾಸಿಗಾಗಿ ಕೋಣೆಗೊಳಗಡೆ ಹೋದ ಹೋದ ವಿಶ್ವಾಸ್ ಜೋಕಾಲಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಕೆಲ ಗಂಟೆ ಕಳೆದರೂ ವಿಶ್ವಾಸ್ ಕೋಣೆಯಿಂದ ಹೊರಗೆ ಬರದಿದ್ದರಿಂದ ಪೋಷಕರು ರೂಮ್ ಒಳ ಹೋಗಿ ನೋಡಿದ್ದಾರೆ. ಆಗ ಅವರ ಕಣ್ಣಿಗೆ ಕಂಡಿದ್ದು ಜೋಕಾಲಿ ಹುರುಳಿಗೆ ಸಿಲುಕಿ ಸಾವನ್ನಪ್ಪಿದ್ದ ವಿಶ್ವಾಸ್ ಮೃತದೇಹ. ಸದ್ಯ ವಿಶ್ವಾಸ್ ಸಾವಿನ ಬಗ್ಗೆ ಸಂಶಯವಿದ್ದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮಕ್ಕಳಿಗೆ ಮೊಬೈಲ್ ಕಳುಹಿಸಿದ ಸೋನು ಸೂದ್

    ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮಕ್ಕಳಿಗೆ ಮೊಬೈಲ್ ಕಳುಹಿಸಿದ ಸೋನು ಸೂದ್

    ಚಂಡೀಗಢ: ಕೊರೊನಾ ವೈರಸ್ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಬಳಿಕ ಬಾಲಿವುಡ್ ನಟ ಸೋನು ಸೂದ್ ಅನೇಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಲೇ ಬಂದಿದ್ದಾರೆ. ಇದೀಗ ನಟ ಮತ್ತೊಂದು ಮಾನವೀಯ ಕಾರ್ಯ ಮಾಡುವ ಮೂಲಕ ವಿದ್ಯಾರ್ಥಿಗಳ ಮನ ಗೆದ್ದಿದ್ದಾರೆ.

    ಹೌದು. ಹರಿಯಾಣದ ಮೊರ್ನಿ ಎಂಬ ಪುಟ್ಟ ಹಳ್ಳಿಯ ಮಕ್ಕಳು ಮೊಬೈಲ್ ಇಲ್ಲದೆ ಆನ್ ಲೈನ್ ಕ್ಲಾಸಿಗೆ ಹಾಜರಾಗಲು ಅಸಾಧ್ಯವಾಗಿತ್ತು. ಬಡುಕುಟುಂಬದ ಮಕ್ಕಳಾಗಿದ್ದರಿಂದ ಮೊಬೈಲ್ ಖರೀದಿಸಿ ಕೊಡಲು ಹೆತ್ತವರಿಗೆ ಕಷ್ಟ ಸಾಧ್ಯವಾಗಿತ್ತು. ಈ ವಿಚಾರವನ್ನು ಪತ್ರಕರ್ತರೊಬ್ಬರು ಸುದ್ದಿ ಮಾಡಿದ್ದರು. ಅಲ್ಲದೆ ನಟ ಸೋನು ಸೂದ್ ಬಳಿ ಮಕ್ಕಳಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಟ ಸೋನು ಸೂದ್, ಈ ಮಕ್ಕಳು ನಾಳೆಯೊಳಗೆ ಅವರು ತಮ್ಮ ಸ್ಮಾರ್ಟ್ ಫೋನ್ ಗಳನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

    ಜುಲೈ 26 ರಂದು ಪತ್ರಕರ್ತರು ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊರತೆ ಎಂಬ ವಿಚಾರವನ್ನು ಇಟ್ಟುಕೊಂಡು ಒಂದು ಸುದ್ದಿ ಬರೆದಿದ್ದರು. ಈ ಸುದ್ದಿಯ ತುಣುಕನ್ನು ನಟನಿಗೆ ಕಳುಹಿಸಿದ್ದರು. ಸುದ್ದಿಯ ಪ್ರತಿ ಪ್ರಕಾರ ಹಿರಿಯ ಮಾಧ್ಯಮಿಕ ಶಾಲೆಯ ಶೇ 20ರಷ್ಟು ಮಕ್ಕಳು ಮೊಬೈಲ್ ಹೊಂದಿಲ್ಲ. ಹೀಗಾಗಿ ಅವರಿಗೆ ಆನ್‍ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದರು.

    ಸದ್ಯ ನಟ ಮಕ್ಕಳಿಗೆ ಸ್ಮಾರ್ಟ್ ಪೂನ್ ಗಳನ್ನು ಕಳುಹಿಸಿದ್ದಾರೆ. ಮಕ್ಕಳಿಗೆ ಇದು ತಲುಪಿದ ಬಳಿಕ ಸಂತಸ ವ್ಯಕ್ತಪಡಿಸಿದ ಸೋನು ಸೂದ್, ತಮ್ಮ ಸ್ಮಾರ್ಟ್ ಫೋನ್ ಗಳ ಮೂಲಕ ಇಂದು ಎಲ್ಲಾ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದನ್ನು ನೋಡುವ ಅದ್ಭುತ ದಿನ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಸಂಕಷ್ಟವನ್ನು ತನ್ನ ಗಮನಕ್ಕೆ ತಂದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಸೋನು ಸೂದ್ ಅವರು ಈ ಹಿಂದೆ ಅಂದರೆ ಕೊರೊನಾ ಲಾಕ್‍ಡೌನ್ ಆದ ಬಳಿಕ ವಲಸೆ ಕಾರ್ಮಿಕರು, ವಿದೇಶದಲ್ಲಿದ್ದವರನ್ನು ತಾಯ್ನಾಡಿಗೆ ಕರೆತರುವ ಮೂಲಕ ಅನೇಕ ಮಾನವೀಯ ಕಾರ್ಯಗಳನ್ನು ಮಾಡುತ್ತಿದ್ದು, ದೇಶದ ಜನರ ಹೃದ ಗೆದ್ದಿದ್ದಾರೆ. ಇದನ್ನೂ ಓದಿ: ಬಿಗ್ ಇಂಪ್ಯಾಕ್ಟ್ – ತ್ರಿವಳಿ ಮಕ್ಕಳ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ

  • ಫಿಡ್ಜ್ ಟ್ರೇ ಬಳಸಿ ಆನ್‍ಲೈನ್ ಕ್ಲಾಸ್- ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ

    ಫಿಡ್ಜ್ ಟ್ರೇ ಬಳಸಿ ಆನ್‍ಲೈನ್ ಕ್ಲಾಸ್- ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ

    ನವದೆಹಲಿ: ಕೊರೊನಾ ವೈರಸ್ ಎಂಬ ಚೀನಿ ಮಾಹಾಮಾರಿ ದೇಶಕ್ಕೆ ಕಾಲಿಟ್ಟ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಹೇರಲಾಗಿತ್ತು. ಇತ್ತ ಶಾಲಾ-ಕಾಲೇಜು ಹಾಗೂ ಕಚೇರಿಗಳನ್ನು ಕೂಡ ಬಂದ್ ಮಾಡಲಾಗಿದ್ದು, ಇನ್ನೂ ತೆರೆಯಲು ಅನುಮತಿ ಸಿಕ್ಕಿಲ್ಲ. ಸದ್ಯ ಆನ್‍ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ.

    ಈ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗಲು ಅನೇಕ ಮಕ್ಕಳು ಒದ್ದಾಡುತ್ತಿದ್ದಾರೆ. ಇತ್ತ ಶಿಕ್ಷಕರು ಕೂಡ ಮಕ್ಕಳಿಗೆ ಪಾಠ ಹೇಳಿಕೊಡಲು ಹರಸಾಹಸ ಪಡುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬ ಶಿಕ್ಷಕಿ ಆನ್‍ಲೈನ್ ಕ್ಲಾಸ್ ನಡೆಸಲು ಹೂಡಿರುವ ಐಡಿಯಾವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

    ಟ್ವಿಟ್ಟರ್ ಬಳಕೆದಾರೆ ಮೋನಿಕಾ ಯಾದವ್, ಇತ್ತೀಚೆಗೆ ರೆಫ್ರಿಜರೇಟರ್ ಟ್ರೇ ಬಳಸಿ ಶಿಕ್ಷಕಿಯೊಬ್ಬರು ಆನ್ ಲೈನ್ ತರಗತಿ ನಡೆಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆನ್‍ಲೈನ್ ನಲ್ಲಿ ಪಾಠ ಮಾಡಲು ಶಿಕ್ಷಕಿ ಫ್ರಿಡ್ಜ್ ಟ್ರೇ ಬಳಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮನೆಯ ಹಂಚು ಏರಿದ ಬಿಎ ವಿದ್ಯಾರ್ಥಿನಿ

    ಫೋಟೋದಲ್ಲಿ ಶಿಕ್ಷಕಿ ಪಾರದರ್ಶಕತೆಯಿಂದ ಕೂಡಿರುವ ಫ್ರಿಡ್ಜ್ ಟ್ರೇ ಬಳಸಿಕೊಂಡಿದ್ದಾರೆ. ಎರಡು ಡಬ್ಬಗಳನ್ನು ಇಟ್ಟು ಅದರ ಮೇಲೆ ಟ್ರೇ ಇಟ್ಟಿದ್ದಾರೆ. ಟ್ರೇ ಮೇಲೆ ಮೊಬೈಲ್ ಇಟ್ಟು ಕೆಳಗಡೆ ಇರುವ ಪೇಪರ್ ಗಳನ್ನು ತೋರಿಸಿ ಪಾಠ ಹೇಳಿಕೊಡುತ್ತಿರುವುದನ್ನು ಕಾಣಬಹುದಾಗಿದೆ.

    ತನಗೆ ಕಷ್ಟ ಆದರೂ ಪರವಾಗಿಲ್ಲ, ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪಾಠ ಹೇಳಿಕೊಡಬೇಕೆಂಬ ಶಿಕ್ಷಕಿಯ ಈ ಪ್ರಯತ್ನಕ್ಕೆ ನೆಟ್ಟಿಗರು ಶಹಬ್ಬಾಸ್ ಅಂದಿದ್ದಾರೆ.