Tag: Onion Growers

  • ಈರುಳ್ಳಿ ಬೆಳೆಗಾರರ ಕಣ್ಣೀರು ಒರೆಸಲು ಹೊಸ ತಂತ್ರಜ್ಞಾನ : ರಾಯಚೂರು ಕೃಷಿ ವಿಜ್ಞಾನಗಳ ವಿವಿ ಸಾಧನೆ

    ಈರುಳ್ಳಿ ಬೆಳೆಗಾರರ ಕಣ್ಣೀರು ಒರೆಸಲು ಹೊಸ ತಂತ್ರಜ್ಞಾನ : ರಾಯಚೂರು ಕೃಷಿ ವಿಜ್ಞಾನಗಳ ವಿವಿ ಸಾಧನೆ

    – ವಿವಿಯ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗದಿಂದ ಸಾಧನ ಅಭಿವೃದ್ಧಿ
    – ನಗರ ಪ್ರದೇಶದಲ್ಲಿ ಒಣಗಿದ ಈರುಳ್ಳಿಗೆ ಫುಲ್ ಡಿಮ್ಯಾಂಡ್

    ರಾಯಚೂರು: ಈರುಳ್ಳಿ ಬೆಲೆ ಯಾವಾಗ ಗಗನಕ್ಕೇರುತ್ತೋ ಅದ್ಯಾವಾಗ ಪಾತಾಳಕ್ಕೆ ಇಳಿಯುತ್ತೋ ಗೊತ್ತಿಲ್ಲ. ಬೆಲೆ ಹೆಚ್ಚಾದಾಗ ರೈತರಿಗಿಂತ ದಲ್ಲಾಳಿಗಳೇ ಹೆಚ್ಚು ಲಾಭ ಪಡಿತಾರೆ. ಆದ್ರೆ ಬೆಲೆ ಇಳಿಕೆಯಾದಾಗ ರೈತರ ಪರಸ್ಥಿತಿ ಮಾತ್ರ ಹೇಳತೀರದು. ಲಾಕ್‍ಡೌನ್ ಸಮಯದಲ್ಲಂತೂ ರೈತರು ತೀವ್ರ ಸಂಕಷ್ಟ ಎದುರಿಸಿದರು. ಹೀಗಾಗೆ ಈರುಳ್ಳಿ ಬೆಳೆಗಾರರಿಗಾಗಿ ರಾಯಚೂರು ಕೃಷಿ ವಿಜ್ಞಾನಗಳ ವಿವಿ ಹೊಸ ತಂತ್ರಜ್ಞಾನವನ್ನ ಅಭಿವೃದ್ಧಿ ಪಡಿಸಿದೆ.

    ವಿಶ್ವ ವಿದ್ಯಾಲಯದ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗ ಈರುಳ್ಳಿ ಕತ್ತರಿಸಿ ಒಣಗಿಸುವ ತಂತ್ರಜ್ಞಾನವನ್ನ ರೈತರಿಗೆ ಪರಿಚಯಿಸುತ್ತಿದೆ. ಈ ಹೊಸ ಸಾಧನದಿಂದ ಈರುಳ್ಳಿ ಬೆಲೆ ಕುಸಿತವಾದಾಗ ಕೆಡದಂತೆ ಒಣಗಿಸಿ 9 ತಿಂಗಳ ಕಾಲ ಇಡಬಹುದು. ಯಾವಾಗ ಬೇಕು ಆಗ ಒಣಗಿದ ಈರುಳ್ಳಿಯನ್ನ ಪುನಃ ಬಳಸಿಕೊಳ್ಳಬಹುದು. ಯಾವ ಕಾಲದಲ್ಲಾದರೂ ಈ ತಂತ್ರಜ್ಞಾನ ಬಳಸಿ ಈರುಳ್ಳಿ ಸಂಗ್ರಹಿಡಬಹುದಾಗಿದೆ. ನೇರವಾಗಿ ಸೂರ್ಯನ ಬಿಸಿಲಿಗೆ ಒಣಗಿಸುವ ಸಮಯದ ಅರ್ಧ ಸಮಯದಲ್ಲೇ ಒಣಗಿಸಿ, ಬಣ್ಣ ಹಾಗೂ ಪೋಷಕಾಂಶಗಳು ಹಾಗೇ ಉಳಿಯುವಂತೆ ಮಾಡಬಹುದು.

    ರೈತರು ಗ್ರಾಮೀಣ ಭಾಗದಲ್ಲೇ ಈ ಸಾಧನ ಬಳಸಿ ಈರುಳ್ಳಿಯನ್ನ ಸಂಗ್ರಹಿಸಿಡಬಹುದಾಗಿದೆ. ಪ್ಯಾಕೆಟ್ ಗಳನ್ನ ಮಾಡಿ ನಗರ, ಮಹಾನಗರ ಪ್ರದೇಶಗಳಲ್ಲಿ ಒಣಗಿದ ಈರುಳ್ಳಿ ಮಾರಾಟ ಮಾಡಬಹುದು. ಫಾಸ್ಟ್ ಪುಡ್ ಸೆಂಟರ್, ರೆಸ್ಟೋರೆಂಟ್, ಮನೆಗಳಲ್ಲೂ ಸಹ ಇದನ್ನ ಬಳಸಬಹುದಾಗಿದೆ. 100 ಕೆ.ಜಿ ಹಾಗೂ 1000 ಕೆ.ಜಿ ಈರುಳ್ಳಿ ಕತ್ತರಿಸುವ ಸಾಮರ್ಥ್ಯದ ಎರಡು ಯಂತ್ರಗಳನ್ನ ಸದ್ಯ ಅಭಿವೃದ್ಧಿ ಪಡಿಸಲಾಗಿದೆ. ಎರಡೂ ಯಂತ್ರಗಳಿಗೂ 50% ಸಬ್ಸಿಡಿ ಇದೆ. 100 ಕೆ.ಜಿ ಯ ಯಂತ್ರದ ಬೆಲೆ 55 ಸಾವಿರ ರೂಪಾಯಿ ಇದ್ದು 27 ಸಾವಿರ ರೂಪಾಯಿವರೆಗೆ ಸಬ್ಸಿಡಿ ಸಿಗುತ್ತೆ. 1000 ಕೆ.ಜಿ ಯಂತ್ರದ ಬೆಲೆ 5 ವರೆಗೆ ಲಕ್ಷ ರೂಪಾಯಿ ಇದ್ದು 2 ಲಕ್ಷ 70 ಸಾವಿರ ರೂಪಾಯಿವರೆಗೆ ಸಬ್ಸಿಡಿ ಸಿಗುತ್ತದೆ. ಹೀಗಾಗಿ ಈರುಳ್ಳಿ ಬೆಳೆಗಾರರಿಗೆ ಇದು ಉಪಯುಕ್ತವಾಗಲಿದೆ ಅಂತ ಕೃಷಿ ವಿಜ್ಞಾನಗಳ ವಿವಿಯ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಉದಯಕುಮಾರ್ ನಿಡೋಣಿ ಹೇಳಿದ್ದಾರೆ.

    ಈರುಳ್ಳಿ ಕತ್ತರಿಸುವ ಯಂತ್ರದಲ್ಲಿ 5 ರಿಂದ 6 ಎಂಎಂ ಗಾತ್ರದಲ್ಲಿ ಕತ್ತರಿಸಿ, ಮೆಕ್ಯಾನಿಕಲ್ ಅಥವಾ ಸೋಲಾರ್ ಒಣಗಿಸುವ ತಂತ್ರದಿಂದ ಒಣಗಿಸಬೇಕು. ಒಂದು ಕೆ.ಜಿ ಒಣಗಿದ ಈರುಳ್ಳಿ ತಯಾರಿಕೆಗೆ 8 ರಿಂದ 10 ಕೆ.ಜಿ. ಈರುಳ್ಳಿ ಕತ್ತರಿಸಬೇಕಾಗುತ್ತದೆ. ಒಂದು ಕೆ.ಜಿಗೆ 150 ರಿಂದ 180 ರೂಪಾಯಿವರೆಗೆ ಮಾರಾಟ ಮಾಡಬಹುದು. ಬೆಲೆ ಏರಿಕೆಗೆ ಅನುಗುಣವಾಗಿ ಒಣಗಿದ ಈರುಳ್ಳಿ ಬೆಲೆಯಲ್ಲೂ ವ್ಯತ್ಯಾಸವಾಗುತ್ತದೆ. ಆದ್ರೆ ರೈತರು ತಮಗಾಗುವ ನಷ್ಟವನ್ನ ಮಾತ್ರ ತಪ್ಪಿಸಿಕೊಳ್ಳಬಹುದಾಗಿದೆ.

    ಈರುಳ್ಳಿ ಬೆಲೆ ಪಾತಾಳಕ್ಕೆ ಇಳಿದಾಗಲೆಲ್ಲಾ ಬೆಳೆಗಾರರು ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಹೋರಾಟ ಮಾಡುತ್ತಲೇ ಇರುತ್ತಾರೆ. ಆದ್ರೆ ಸರ್ಕಾರ ರೈತರ ಸಹಾಯಕ್ಕೆ ಬರುವ ವೇಳೆಗೆ ಸಾಕಷ್ಟು ರೈತರು ನಷ್ಟ ಅನುಭವಿಸಿರುತ್ತಾರೆ. ಆದ್ರೆ ಈರುಳ್ಳಿಯನ್ನ ಸಂಗ್ರಹಿಸಿಟ್ಟು ಮಾರಾಟ ಮಾಡುವ ಈ ಹೊಸ ತಂತ್ರಜ್ಞಾನ ಎಲ್ಲಾ ರೈತರ ಕೈಗೆಟುಕಿದರೆ ನಷ್ಟವನ್ನ ತಪ್ಪಿಸಬಹುದು.

  • ನಾಲ್ಕೇ ದಿನದಲ್ಲಿ ಕರಗಿ ಹರಿದುಹೋದ ರಾಯಚೂರಿನ ಈರುಳ್ಳಿ ಬೆಳೆಗಾರರ ಖುಷಿ

    ನಾಲ್ಕೇ ದಿನದಲ್ಲಿ ಕರಗಿ ಹರಿದುಹೋದ ರಾಯಚೂರಿನ ಈರುಳ್ಳಿ ಬೆಳೆಗಾರರ ಖುಷಿ

    ರಾಯಚೂರು: ಕಳೆದ ಹದಿನೈದು ದಿನಗಳ ಹಿಂದಷ್ಟೆ ಈರುಳ್ಳಿ ಬೆಲೆ ಏರಿಕೆಯಾಗಿದ್ದರಿಂದ ಈರುಳ್ಳಿ ಬೆಳೆಗಾರರು ಖುಷಿ ಪಟ್ಟಿದ್ದರು. ಆದರೆ ಈಗ ಬೆಲೆ ಪಾತಾಳ ಕಂಡಿದೆ. ಜೊತೆಗೆ ರಾಯಚೂರಿನಲ್ಲಿ ಸುರಿದ ಮಳೆ ಇಲ್ಲಿನ ಈರುಳ್ಳಿ ಬೆಳೆಗಾರರನ್ನ ಬೀದಿಪಾಲು ಮಾಡಿದೆ.

    6 ರಿಂದ 7 ಸಾವಿರ ರೂಪಾಯಿಗೆ ಕ್ವಿಂಟಾಲ್ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಏಕಾಏಕಿ ಪಾತಾಳಕ್ಕೆ ಕುಸಿದಿದೆ. 1 ಸಾವಿರದಿಂದ 1,500 ರೂಪಾಯಿಗೆ ಕ್ವಿಂಟಾಲ್ ಈರುಳ್ಳಿ ಹೋಗುತ್ತಿದೆ. ಇದರಿಂದ ಅತಿವೃಷ್ಠಿ, ಅನಾವೃಷ್ಠಿ ಮಧ್ಯೆಯೂ ಎಷ್ಟೋ ಖುಷಿಖುಷಿಯಾಗಿದ್ದ ರಾಯಚೂರಿನ ಈರುಳ್ಳಿ ಬೆಳೆಗಾರರ ಖುಷಿ ಕರಗಿಹೋಗಿದೆ. ಅಲ್ಲದೆ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೀರು ನುಗ್ಗಿ ರೈತರ ಈರುಳ್ಳಿ ಹಾಳಾಗಿ ಹೋಗಿದೆ.

    ಮಾರುಕಟ್ಟೆಯಲ್ಲಿನ ಕೆಟ್ಟ ಚರಂಡಿ ವ್ಯವಸ್ಥೆಯಿಂದಾಗಿ ಮಳೆ ಹಾಗೂ ಚರಂಡಿ ನೀರು ಈರುಳ್ಳಿಯನ್ನ ಹಾಳು ಮಾಡಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಹಾಳಾಗಿ ಹೋಗಿದೆ. ಇನ್ನೊಂದೆಡೆ ಬೆಲೆ ಕುಸಿದಿರುವುದು ಬೆಳೆಗಾರರ ಬದುಕನ್ನ ಬೀದಿಗೆ ತಂದಿದೆ. ನಾಲ್ಕು ದಿನಗಳಿಂದ ಈರುಳ್ಳಿ ಮಾರಲು ಮಾರುಕಟ್ಟೆಯಲ್ಲೇ ಉಳಿದಿದ್ದ ಲಿಂಗಸುಗೂರಿನ ಈರುಳ್ಳಿ ಬೆಳೆಗಾರ ನದೀಮ್‍ಖಾನ್ ನಮ್ಮ ಕಷ್ಟ ಯಾರಿಗೂ ಬೇಡ ಅಂತ ಅಳಲು ತೋಡಿಕೊಂಡಿದ್ದಾರೆ.

    ಆಂಧ್ರಪ್ರದೇಶ ,ತೆಲಂಗಾಣ ಗಡಿ ಭಾಗದಲ್ಲೇ ರಾಯಚೂರು ಮಾರುಕಟ್ಟೆ ದೊಡ್ಡದಾಗಿರುವುದರಿಂದ ರಾಯಚೂರು ರಾಜೇಂದ್ರ ಗಂಜ್ ಗೆ ನಾನಾ ಕಡೆಯಿಂದ ಬಂದ ರೈತರು ತಮ್ಮ ಈರುಳ್ಳಿ ಮಾರಾಟ ಮಾಡಲು ನಾಲ್ಕೈದು ದಿನಗಳಿಂದ ಇಲ್ಲೇ ಉಳಿದುಕೊಂಡಿದ್ದರು. ಒಂದೆಡೆ ಬೆಲೆ ಕುಸಿಯಿತು, ಇನ್ನೊಂದೆಡೆ ಮಳೆ ಬಂದು ಕೊಚ್ಚಿಕೊಂಡು ಹೋಯಿತು. ಈ ಎಪಿಎಂಸಿ ಆವರಣದಲ್ಲಿನ ತಗಡಿನ ಶೀಟ್ ಗಳಲ್ಲಿನ ರಂಧ್ರಗಳಿಂದ ನೀರು ಸುರಿದು ಈರುಳ್ಳಿ ಹಾಳಾಗಿದೆ. ರೈತರ ಗೋಳು ಮಾತ್ರ ಕೇಳುವವರು ಯಾರೂ ಇಲ್ಲದಂತಾಗಿದೆ.

    ಒಟ್ಟಿನಲ್ಲಿ ಗಾಯದ ಮೇಲೆ ಬರೆ ಎಳೆದ ಹಾಗೇ ಆಗಿದೆ ಈರುಳ್ಳಿ ಬೆಳೆಗಾರರ ಕತೆ. ಮಳೆಯಿಂದ ಹಾಳಾದ ಬೆಳೆಗೆ ಪರಿಹಾರ ನೀಡಬೇಕಿದೆ. ಜೊತೆಗೆ ವೈಜ್ಞಾನಿಕ ಬೆಲೆ ಮೂಲಕ ರೈತರ ಈರುಳ್ಳಿಯನ್ನ ಖರೀದಿಸಲು ಸರ್ಕಾರ ಮುಂದಾಗಬೇಕಿದೆ.